Feb 4, 2015

ಆಮ್ ಆದ್ಮಿ ಮತ್ತು ‘ಅಭಿವೃದ್ಧಿಯ’ ನಡುವೆ ಗೆಲುವು ಯಾರಿಗೆ?

delhi elections 2015
Dr Ashok K R
ಅರವಿಂದ್ ಕೇಜ್ರಿವಾಲ್ ಎಂಬ ವ್ಯಕ್ತಿ ಅರಾಜಕತೆ ಸೃಷ್ಟಿಸಲಿಕ್ಕಷ್ಟೇ ಲಾಯಕ್ಕು. ಅರಾಜಕತೆ ಸೃಷ್ಟಿಸುವ ಕೇಜ್ರಿವಾಲ್ ಕಾಡಿಗೆ ಹೋಗಿ  ನಕ್ಸಲರ ಜೊತೆ ಸೇರಲಿ ಎಂದು ನರೇಂದ್ರ ಮೋದಿ ಹೇಳುವುದರೊಂದಿಗೆ ದೆಹಲಿಯ ವಿಧಾನಸಭಾ ಚುನಾವಣೆ ರಂಗೇರಿತು. ಕಳೆದ ಬಾರಿಯ ಚುನಾವಣೆಯಲ್ಲಿ ವಿಶ್ಲೇಷಕರು ಮತ್ತು ರಾಜಕಾರಣಿಗಳೆಲ್ಲ ಅಚ್ಚರಿ ಪಡುವಂತಹ ಗೆಲುವು ಕಂಡಿತ್ತು ಆಮ್ ಆದ್ಮಿ ಪಕ್ಷ. ಯು.ಪಿ.ಎ ಸರಕಾರದ ಭ್ರಷ್ಟಾಚಾರದ ವಿರುದ್ಧ ರಾಷ್ಟ್ರಮಟ್ಟದಲ್ಲಿ ಹೋರಾಟ ಕಟ್ಟಿದ ಅಣ್ಣಾ ಹಜಾರೆ ನೇತೃತ್ವದ ತಂಡದ ಸದಸ್ಯರಲ್ಲೊಬ್ಬರಾದ ಅರವಿಂದ್ ಕೇಜ್ರಿವಾಲ್ ಆಮ್ ಆದ್ಮಿ ಪಕ್ಷ ಕಟ್ಟಿ ರಾಜಕೀಯ ಆಖಾಡಕ್ಕಿಳಿದಾಗ ಸ್ವತಃ ಅಣ್ಣಾ ಹಜಾರೆ ಬೆಂಬಲ ನೀಡಲಿಲ್ಲ. ಭ್ರಷ್ಟಾಚಾರಿ ವಿರೋಧಿ ಆಂದೋಲನದ ಅನೇಕರು ಬೆಂಬಲಿಸದಿದ್ದರೂ ಅರವಿಂದ್ ಕೇಜ್ರಿವಾಲ್ ರಾಜಕಾರಣಕ್ಕೆ ಧುಮುಕಿದಾಗ ನಕ್ಕವರೇ ಹೆಚ್ಚು. ದೆಹಲಿಯನ್ನು ವಿಶೇಷ ಗಮನದಲ್ಲಿರಿಸಿಕೊಂಡು ಚುನಾವಣೆಗೆ ನಿಂತಾಗ ಬಿಜೆಪಿಗೆ ಒಂದೆಡೆ ಖುಷಿಯೇ ಆಗಿತ್ತು. ಹತ್ತು ವರುಷದ ಕಾಂಗ್ರೆಸ್ಸಿನ ದುರಾಡಳಿತದಿಂದ ಬೇಸತ್ತಿದ್ದ ಮತದಾರ ಬಿಜೆಪಿಗೆ ಬಹುಮತ ಕೊಡುತ್ತಾನೆ ಎಂಬ ನಂಬಿಕೆಯಿತ್ತು. ಬಿಜೆಪಿಯನ್ನು ವಿರೋಧಿಸುವ ಮತದಾರರ ಓಟು ಕಾಂಗ್ರೆಸ್ಸಿಗೂ ಹೋಗದೆ ಆಮ್ ಆದ್ಮಿ ಪಕ್ಷಕ್ಕೆ ಬೀಳುತ್ತದೆ. ಎದುರಾಳಿಯ ಮತಗಳು ವಿಭಜನೆಯಾದರೆ ಅದರಿಂದ ತನಗೇ ಗೆಲುವು ಖಂಡಿತ ಎಂಬ ಭಾವನೆಯಿತ್ತು. ಅವರ ನಂಬುಗೆ ಪೂರ್ಣ ನಿಜವಾಗಲಿಲ್ಲ. ಕಾಂಗ್ರೆಸ್ಸಿನ ಓಟು ಕಿತ್ತುಕೊಳ್ಳುವಲ್ಲಿ ಯಶಸ್ವಿಯಾದ ಆಮ್ ಆದ್ಮಿ ಪಕ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವನ್ನು ಎಂಟು ಸ್ಥಾನಕ್ಕೆ ಮಾತ್ರ ಸೀಮಿತಗೊಳಿಸಿತು. ಆದರೆ ಬಿಜೆಪಿಗೂ ಬಹುಮತ ದೊರಕಲಿಲ್ಲ. ಮೂವತ್ತೆರಡು ಸ್ಥಾನಗಳನ್ನು ಗಳಿಸಲು ಯಶಸ್ವಿಯಾದ ಬಿಜೆಪಿ ಸರಳ ಬಹುಮತಕ್ಕೆ ನಾಲ್ಕು ಸ್ಥಾನಗಳಷ್ಟು ಕೊರತೆಯನ್ನಭುವಿಸಿತು. ಎಲ್ಲರ ನಿರೀಕ್ಷೆಯನ್ನೂ ಮೀರಿ ಆಮ್ ಆದ್ಮಿ ಪಕ್ಷ 28 ಸ್ಥಾನಗಳಲ್ಲಿ ಗೆಲುವು ಸಾಧಿಸಿತು. ಯಾರಿಗೂ ಬಹುಮತ ಸಿಗದ ಕಾರಣ ಸರಕಾರ ರಚನೆಗೊಂದಷ್ಟು ಕಸರತ್ತು ನಡೆದು ಅಲ್ಲಿಯವರೆಗೂ ವಿರೋಧಿಸಿಕೊಂಡು ಬಂದಿದ್ದ ಕಾಂಗ್ರೆಸ್ಸಿನ ‘ಬಾ-ಹ್ಯ ಬೆಂಬಲ’ದೊಡನೆ ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿಯಾದರು. ಜನಲೋಕಪಾಲ್ ಮಸೂದೆಯ ನೆಪದಿಂದ ಅರವಿಂದ್ ಕೇಜ್ರಿವಾಲ್ ನಲವತ್ತೊಂಬತ್ತು ದಿನಕ್ಕೆ ರಾಜೀನಾಮೆಯನ್ನೂ ನೀಡಿಬಿಟ್ಟರು! ರಾಜಕಾರಣದಲ್ಲಿ ಅದವರ ಮೊದಲ ತಪ್ಪಾಯಿತು. ನಂತರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅಭೂತಪೂರ್ವ ಗೆಲುವು ಕಂಡಿತು. ಅನೇಕ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲೂ ಯಶಸ್ಸು ಗಳಿಸಿತು. ಆದರೂ ದೆಹಲಿಯ ಚುನಾವಣೆಯ ಬಗ್ಗೆ ಆತುರ ತೋರಲಿಲ್ಲ ಬಿಜೆಪಿ. ಆತುರ ತೋರದೆ ತಪ್ಪು ಮಾಡಿತಾ? ದೆಹಲಿ ಚುನಾವಣೆಯ ಸುತ್ತಮುತ್ತಲಿನ ಬೆಳವಣಿಗೆಗಳು ತಪ್ಪು ಮಾಡಿತೆಂದೇ ಹೇಳುತ್ತಿವೆ. ಚುನಾವಣಾ ಫಲಿತಾಂಶ ಏನೇ ಆಗಬಹುದು, ಸದ್ಯದ ಮಟ್ಟಿಗಂತೂ ಬಿಜೆಪಿಯ ಘಟಾನುಘಟಿ ರಾಜಕಾರಣಿಗಳ ವಿರುದ್ಧ ರಾಜಕೀಯವಲ್ಲದ ರಾಜಕಾರಣ ಮಾಡುತ್ತಿರುವ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಗೆದ್ದುಬಿಟ್ಟಿದ್ದಾರೆ!

ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ನೇತೃತ್ವ ವಹಿಸಿದ್ದು ಡಾ. ಹರ್ಷವರ್ಧನ್. ಬಿಜೆಪಿ ಮೂವತ್ತಕ್ಕೂ ಅಧಿಕ ಸಂಖೈಯ ಸೀಟುಗಳನ್ನು ಪಡೆಯುವಲ್ಲಿ ಕಾಂಗ್ರೆಸ್ಸಿನ ಪರಿಶ್ರಮ ಎಷ್ಟಿತ್ತೋ ಡಾ. ಹರ್ಷವರ್ಧನರ ಪರಿಶ್ರಮವೂ ಅಷ್ಟೇ ಇತ್ತು. ಪೋಲಿಯೋ ಲಸಿಕೆ ಕಾರ್ಯಕ್ರಮದ ಮುಖಾಂತರ ಪ್ರಸಿದ್ಧಿಯಾಗಿದ್ದ ಡಾ.ಹರ್ಷವರ್ಧನ್ ದೆಹಲಿಯ ಮುಖ್ಯಮಂತ್ರಿ ಆಗಿಯೇ ಬಿಡುತ್ತಿದ್ದರೋ ಏನೋ, ಆಮ್ ಆದ್ಮಿ ಪಕ್ಷ ಕಟ್ಟುವ ಮೂಲಕ ಅರವಿಂದ್ ಕೇಜ್ರಿವಾಲ್ ಅದಕ್ಕೆ ತೊಡರುಗಾಲಾದರು. ನಂತರ ಲೋಕಸಭಾ ಚುನಾವಣೆಯ ನಂತರ ಡಾ.ಹರ್ಷವರ್ಧನ್ ಆರೋಗ್ಯ ಖಾತೆಯ ಸಚಿವರಾದರು. ಕೆಲವೇ ತಿಂಗಳುಗಳ ನಂತರ ಸಂಪುಟ ವಿಸ್ತರಣೆಯ ಸಮಯದಲ್ಲಿ ಆರೋಗ್ಯ ಖಾತೆಯಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಅವರನ್ನು ನೇಮಿಸಲಾಯಿತು. ಡಾ.ಹರ್ಷವರ್ಧನರನ್ನು ದೆಹಲಿಯ ವಿಧಾನಸಭಾ ಚುನಾವಣೆಯ ನೇತೃತ್ವಕ್ಕೆ ಕಳುಹಿಸಲಾಗುತ್ತದೆ, ಮುಂದಿನ ದೆಹಲಿ ಮುಖ್ಯಮಂತ್ರಿ ಅವರೇ ತಾನೇ ಎಂಬ ಮಾತುಗಳು ಕೇಳಿಬಂದಿತ್ತು. ಆದರೆ ಈಗ ನೋಡಿದರೆ ದೆಹಲಿಯ ಚುನಾವಣೆಯ ಸಂದರ್ಭದಲ್ಲಿ ಡಾ.ಹರ್ಷವರ್ಧನರ ಸುಳಿವೇ ಕಾಣುತ್ತಿಲ್ಲ. ದೇಶದ ವಿವಿಧ ರಾಜ್ಯಗಳ ಚುನಾವಣೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ ಗೆಲುವೂ ಕಂಡಿದ್ದ ಬಿಜೆಪಿಗೆ ದೆಹಲಿಯ ವಿಚಾರದಲ್ಲಿ ಭಯ ಮೂಡಿಸಿತೇ ಆಮ್ ಆದ್ಮಿ ಪಕ್ಷ? ಬಿಜೆಪಿಯ ನಡೆನುಡಿಗಳು ಹೌದೆಂದು ಹೇಳುತ್ತಿವೆ. ಕಳೆದ ಚುನಾವಣಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಡಾ.ಹರ್ಷವರ್ಧನ್ ಸದ್ಯಕ್ಕೆ ಕೇಂದ್ರದ ಮಂತ್ರಿಯಾಗಿರುವುದರಿಂದ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಹೊರಗಿಟ್ಟಿದ್ದು ಅರ್ಥವಾಗುವಂತಹುದು. ದೆಹಲಿಯ ಬಿಜೆಪಿಯ ಮುಖ್ಯಸ್ಥರಾದ ಸತೀಶ್ ಉಪಾಧ್ಯಾಯ ನಂತರದ ಸ್ಥಾನದಲ್ಲಿದ್ದರು. ಅವರೇ ಮುಖ್ಯಮಂತ್ರಿ ಅಭ್ಯರ್ಥಿಯಾಗುತ್ತಾರೆ ಎಂದೇ ಬಿಜೆಪಿಯವರು ನಂಬಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ, ಆಮ್ ಆದ್ಮಿ ಪಕ್ಷ ಸ್ಥಾಪನೆಯನ್ನು ಕಡುವಾಗಿ ವಿರೋಧಿಸಿದ್ದ, ಒಟ್ಟಾರೆಯಾಗಿ ಆಂದೋಲನದ ಬಲದೊಂದಿಗೆ ರಾಜಕೀಯ ಪ್ರವೇಶಿಸುವುದನ್ನೇ ವಿರೋಧಿಸಿದ್ದ ಕಿರಣ್ ಬೇಡಿಯನ್ನು ಬಿಜೆಪಿ ಪಕ್ಷ ಬರಮಾಡಿಕೊಂಡಿತು. ಬರಮಾಡಿಕೊಂಡ ತಕ್ಷಣವೇ ಕಿರಣ್ ಬೇಡಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿತು. ನರೇಂದ್ರ ಮೋದಿಯ ಭಾಷಣಕ್ಕೂ ನಿರೀಕ್ಷೆಯ ಮಟ್ಟದಲ್ಲಿ ಜನರು ಸೇರಲಿಲ್ಲ ಎಂಬುದೇ ನೆಪವಾಗಿ ಕಿರಣ್ ಬೇಡಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡಲಾಯಿತಾ?

ನರೇಂದ್ರ ಮೋದಿಯವರ ವಿರುದ್ಧ ಮಾತನಾಡುತ್ತಿದ್ದ ಕಿರಣ್ ಬೇಡಿಯವರನ್ನು ಬಿಜೆಪಿ ಸ್ವಾಗತಿಸಿದ್ದಾದರೂ ಯಾಕೆ? ಮೊದಲನೆಯದಾಗಿ ಕಿರಣ್ ಬೇಡಿ ಮತ್ತು ಅರವಿಂದ್ ಕೇಜ್ರಿವಾಲರಿಬ್ಬರೂ ಒಂದೇ ಹೋರಾಟದಲ್ಲಿ ಭಾಗಿಯಾಗಿದ್ದವರು. ಅರವಿಂದ್ ಕೇಜ್ರಿವಾಲರ ಹೆಸರು ಜನರ ಬಾಯಲ್ಲಿ ನಲಿದಾಡಲಾರಂಭಿಸಿದ್ದೇ ಭ್ರಷ್ಟಾಚಾರ ವಿರೋಧಿ ಆಂದೋಲನದ ನಂತರ. ಆದರೆ ಕಿರಣ್ ಬೇಡಿಯವರ ಹೆಸರು ದಶಕಗಳಿಂದ ಜನತೆಗೆ ಪರಿಚಯವಿತ್ತು. ಮೊದಲ ಐಪಿಎಸ್ ಅಧಿಕಾರಿ, ಇಂದಿರಾ ಗಾಂಧಿಯ ಕಾರಿಗೇ ಫೈನು ಹಾಕಿದ ಖಡಕ್ಕು ಆಫೀಸರ್ ಎಂದು ಹೆಸರು ವಾಸಿಯಾಗಿದ್ದರು (ಅವೆರಡೂ ಸತ್ಯವಲ್ಲ ಎಂಬ ಸುದ್ದಿಗಳು, ಈಗ ಕಿರಣ್ ಬೇಡಿ ಮುಖ್ಯಮಂತ್ರಿ ಅಭ್ಯರ್ಥಿಯಾದ ನಂತರ ಕೇಳಿಬರುತ್ತಿದೆ! ಯಾವ ಸುದ್ದಿಯನ್ನು ನಂಬಬೇಕೋ ಯಾವುದನ್ನು ಬಿಡಬೇಕೋ!). ಅರವಿಂದ್ ಕೇಜ್ರಿವಾಲರ ಬೆಂಬಲಿಗರು ಮತ್ತವರ ರಾಜಕೀಯ ನಡೆನುಡಿಗಳನ್ನು ಬೆಂಬಲಿಸದವರು ಕಿರಣ್ ಬೇಡಿಯವರ ಬಗ್ಗೆ ಒಂದು ಗೌರವ ಇಟ್ಟುಕೊಂಡಿದ್ದರು. ಅಂಥವರ ಮತಗಳನ್ನು ಸೆಳೆದುಕೊಳ್ಳುವಲ್ಲಿ ಯಶಸ್ವಿಯಾದರೆ ಬಿಜೆಪಿ ಪಕ್ಷ ಮತ್ತು ನರೇಂದ್ರ ಮೋದಿಯವರ ಹೆಸರಿನ ಮೇಲೆ ಬೀಳುವ ಮತಗಳ ಜೊತೆ ಈ ಹೊಸ ಮತಗಳೂ ಸೇರಿ ಬಿಜೆಪಿಗೆ ಅದ್ಭುತ ಬಹುಮತ ದೊರೆಯುವುದರಲ್ಲಿ ಅನುಮಾನವಿಲ್ಲ. ಆದರದು ಅಷ್ಟು ಸುಲಭವಲ್ಲ. ಕಾರಣ ಬಿಜೆಪಿಯ ಒಳಗೇ ನಡೆಯುತ್ತಿರುವ ಆಂತರಿಕ ಕಲಹ. ಅಭ್ಯರ್ಥಿಗಳ ಪಟ್ಟಿಯನ್ನು ಹೊರಹಾಕುತ್ತಿದ್ದಂತೆ ಒಂದು ಸುತ್ತಿನ ಕಲಹ ನಡೆಯಿತು. ಎಲ್ಲಾ ಪಕ್ಷಗಳಲ್ಲೂ ಇದು ಮಾಮೂಲು ಸಂಗತಿಯೇ. ಕಿರಣ್ ಬೇಡಿಯವರ ಕಾರ್ಯಕ್ರಮವೊಂದರಲ್ಲಿ ಬಹಿರಂಗವಾಗಿ ಬಿಜೆಪಿಯ ಕಾರ್ಯಕರ್ತರು ಡಾ.ಹರ್ಷವರ್ಧನರ ಪರವಾಗಿ ಘೋಷಣೆ ಕೂಗಿದರು. ಸತೀಶ್ ಉಪಾಧ್ಯಾಯರ ಪರವಾಗಿ ಘೋಷಣೆ ಕೂಗಿದರು. ಹೈಕಮಾಂಡಿನ ಒತ್ತಡಕ್ಕೆ ಈ ಆಂತರಿಕ ಕಲಹಗಳೆಲ್ಲ ಶಮನಗೊಂಡಂತೆ, ಬಿಜೆಪಿಯ ಕಾರ್ಯಕರ್ತರೆಲ್ಲರೂ ಕಿರಣ್ ಬೇಡಿಯವರ ಗೆಲುವಿಗೆ ಕೆಲಸ ಮಾಡುತ್ತಾರೆ ಎಂಬ ಹೇಳಿಕೆಗಳು ಬಂದವು. ಎಷ್ಟರ ಮಟ್ಟಿಗೆ ಗೆಲುವಿಗೆ ಕೆಲಸ ಮಾಡುತ್ತಿದ್ದಾರೆ ಎಂಬುದು ಇನ್ನೊಂದು ವಾರದಲ್ಲಿ ತಿಳಿಯುತ್ತದೆ. ಕಿರಣ್ ಬೇಡಿಯವರು ಮುಖ್ಯಮಂತ್ರಿಯಾಗುವುದನ್ನು ನೋಡಲು ಬಯಸದ ಬಿಜೆಪಿಯ ಕಾರ್ಯಕರ್ತ ಕೂಡ ನರೇಂದ್ರ ಮೋದಿ ಅಲೆ ಇಷ್ಟು ಬೇಗ ಮಂಕಾಗುವುದನ್ನು ನೋಡಲು ಇಚ್ಛಿಸಲಾರ. ಅಷ್ಟರಮಟ್ಟಿಗೆ ಕಾರ್ಯಕರ್ತ ಪಡೆ ಬಿಜೆಪಿಗೇ ನಿಷ್ಟವಾಗಿ ಕೆಲಸ ಮಾಡುತ್ತದೆ. ಬಿಜೆಪಿ ಸೋತರೆ ಅದು ಕಿರಣ್ ಬೇಡಿಯವರ ತಲೆಗೆ ಕಟ್ಟುವ ಉದ್ದೇಶದಿಂದ ಕಿರಣ್ ಬೇಡಿಯವರನ್ನು ಕರೆತರಲಾಯಿತಾ? ಸೋಲಿನ ಭಯವೇನಾದರೂ ಬಿಜೆಪಿಗೆ ಕಾಡುತ್ತಿದೆಯಾ? ನರೇಂದ್ರ ಮೋದಿ ಮತ್ತವರ ಸಚಿವ ಸಂಪುಟ ದೆಹಲಿ ಚುನಾವಣೆಗೆ ವಿಪರೀತವೆನ್ನಿಸುವಷ್ಟು ಮಹತ್ವ ಕೊಡುತ್ತಿರುವುದಾದರೂ ಯಾಕೆ?

ಅನೇಕ ಸಮೀಕ್ಷೆಗಳು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಸರಳ ಬಹುಮತ ಗಳಿಸುತ್ತದೆ ಎಂದೇ ಹೇಳಿವೆ. ಕೇಂದ್ರದಲ್ಲಿ ಆಡಳಿತಕ್ಕೆ ಬಂದ ಪಕ್ಷದ ಪರವಾಗಿ ಅನೇಕ ರಾಜ್ಯಗಳು ಮತ ಚಲಾಯಿಸುವುದು ಅಚ್ಚರಿಯೇನಲ್ಲ. ಸಮೀಕ್ಷೆಗಳು ಬಿಜೆಪಿಗೆ ಸರಳ ಬಹುಮತ ಸಿಗಬಹುದೆಂದು ಹೇಳುವುದರ ಜೊತೆಗೆ ಆಮ್ ಆದ್ಮಿ ಪಕ್ಷ ಕಳೆದ ಬಾರಿಯಷ್ಟೇ (ಇಪ್ಪತ್ತೆಂಟು) ಸ್ಥಾನಗಳನ್ನು ಗಳಿಸುತ್ತದೆ, ಒಂದೆರಡು ಹೆಚ್ಚಿನ ಸ್ಥಾನಗಳನ್ನೂ ಗಳಿಸಬಹುದು ಎಂದು ಹೇಳಿರುವುದು ಬಿಜೆಪಿಯ ನಿದ್ದೆಗೆಡಿಸಿದೆ. ಕಳೆದ ಸಲದಂತೆಯೇ ಯಾರಿಗೂ ಬಹುಮತ ಬಾರದ ಸ್ಥಿತಿಯುಂಟಾಗಬಹುದು ಎಂದೂ ಕೆಲವು ಸಮೀಕ್ಷೆಗಳು ಹೇಳಿವೆ. ಮೋದಿಯ ಅಲೆಯಲ್ಲಿ ಇಡೀ ದೇಶದಲ್ಲಿ ಗೆಲುವು ಸಾಧಿಸುವ ಗುರಿ ಇಟ್ಟುಕೊಂಡಿರುವ ಬಿಜೆಪಿಗೆ ದೇಶದ ರಾಜಧಾನಿಯಲ್ಲೇ ಬಹುಮತ ಬಾರದಂತಾಗುವುದು ಭಯ ಮೂಡಿಸುವುದು ಸಹಜವೇ ತಾನೇ. ಆ ಕಾರಣದಿಂದ ಬಿಜೆಪಿಯ ಘಟಾನುಘಟಿಗಳೆಲ್ಲ ದೆಹಲಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಆಮ್ ಆದ್ಮಿ ಪಕ್ಷದ ಸಭೆಗಳಿಗೆ ಹೆಚ್ಚಿನ ಸಂಖೈಯಲ್ಲೇ ಜನರು ಸೇರುತ್ತಿರುವುದು ಬಿಜೆಪಿಗೆ ಮತ್ತಷ್ಟು ಗಾಬರಿ ಮೂಡಿಸುತ್ತಿದೆ! ಆ ಸಂಖೈ ಮತವಾಗಿ ಪರಿವರ್ತನೆಯಾಗುತ್ತಾ ಎಂಬುದು ನಂತರದ ಪ್ರಶ್ನೆ. ದೆಹಲಿಯ ಸೋಲು ತನ್ನ ಇಷ್ಟು ದಿನದ ಆಡಳಿತ ಜನರ ನಿರೀಕ್ಷೆಗೆ ತಕ್ಕುದಾಗಿ ಇರಲಿಲ್ಲ ಎಂಬುದನ್ನು ಸೂಚಿಸುತ್ತದೆ ಮತ್ತು ಆ ಭಾವ ದೇಶದ ಇತರೆಡೆಗೂ ಹರಡುತ್ತದೆ ಎಂಬ ಅರಿವಿದೆ ಬಿಜೆಪಿಯ ನಾಯಕರಿಗೆ. ಆ ಕಾರಣಕ್ಕಾಗಿಯೇ ಎಲ್ಲಾ ರೀತಿಯ ಪಟ್ಟುಗಳನ್ನೂ ಹಾಕುತ್ತಿದೆ, ಒಂದು ಸರಳ ಬಹುಮತಕ್ಕಾಗಿ. ಇಂದಿರಾ ಗಾಂಧಿಯನ್ನು ಕೊಂದ ನಂತರ ನಡೆದ ಸಿಖ್ ಹತ್ಯಾಕಾಂಡದ ಬಗ್ಗೆ ಮತ್ತೊಮ್ಮೆ ತನಿಖೆ ನಡೆಸುವ ಸುದ್ದಿಯನ್ನು ತೇಲಿಬಿಟ್ಟಿದ್ದು ಕೂಡ ದೆಹಲಿಯ ಸಿಖ್ಖರ ಮತಗಳನ್ನು ಸೆಳೆಯುವ ಉದ್ದೇಶದಿಂದ. ಇಷ್ಟೆಲ್ಲ ಹರಸಾಹಸ ಮಾಡುತ್ತಿರುವ ಬಿಜೆಪಿ ದೆಹಲಿಗೊಂದು ಪ್ರಣಾಳಿಕೆಯನ್ನು ಬಿಡುಗಡೆ ಮಾಡದೆ ನಗೆಪಾಟಲಿಗೀಡಾಗಿದೆ. Kiran’s Blue Print ಹೆಸರಿನಲ್ಲಿ ಕಿರಣ್ ಬೇಡಿ ಇಪ್ಪತ್ತು ಅಂಶಗಳುಳ್ಳ ಪಟ್ಟಿಯನ್ನು ಟ್ವಿಟರಿನಲ್ಲಿ ಹಾಕಿಕೊಂಡಿದ್ದಾರಾದರೂ ಬಿಜೆಪಿಯ ಪ್ರಣಾಳಿಕೆಯಾಗಲಿಲ್ಲ ಅದು.

ಇನ್ನು ಆಮ್ ಆದ್ಮಿ ಪಕ್ಷದವರಿಗೆ ಗೆಲುವು ಕಾಣುವ ವಿಶ್ವಾಸವಿದೆ, ವಿಶ್ವಾಸ ಹೆಚ್ಚಾಗಿಯೇ ಇದೆ. ಬಿಜೆಪಿಗೆ ಮತ ಹಾಕುವ ಮಧ್ಯಮ ವರ್ಗದವ ಮತಗಳು ಕೂಡ ನಮಗೆ ಈ ಬಾರಿ ದಕ್ಕುತ್ತವೆ ಎಂದು ನಂಬಿದ್ದಾರೆ. ರಾಜಕಾರಣವನ್ನು ವಿರೋಧಿಸಿದ ಕಿರಣ್ ಬೇಡಿ ಬಿಜೆಪಿ ತೆಕ್ಕೆಗೆ ಬಂದ ನಂತರ ಆಮ್ ಆದ್ಮಿಯ ಗೆಲುವಿನ ವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ. ನಲವತ್ತೊಂಬತ್ತು ದಿನಕ್ಕೇ ಅಧಿಕಾರ ತ್ಯಜಿಸಿ ‘ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲಾಗದ ಹೇಡಿಗಳು’ ಎಂದು ಟೀಕೆಗೆ ಒಳಗಾಗಿದ್ದ ಆಮ್ ಆದ್ಮಿ ಪಕ್ಷಕ್ಕೆ ನಿಧಾನಕ್ಕಾದರೂ ಅದು ತಪ್ಪೆಂದು ಅರಿವಾಗಿದೆ. ಸ್ವತಃ ಅರವಿಂದ್ ಕೇಜ್ರಿವಾಲ್ ಬಹಿರಂಗವಾಗಿ ತಪ್ಪೊಪ್ಪಿಕೊಂಡು ಕ್ಷಮೆಯಾಚಿಸಿದ್ದು ನಡೆದಿದೆ. ನಲವತ್ತೊಂಬತ್ತು ದಿನದಲ್ಲೇ ಉತ್ತಮ ಆಡಳಿತ ನೀಡಿದ್ದರು ಎಂಬ ಭಾವನೆಯನ್ನು ಕೆಲವರು ಹೇಳುತ್ತಾರಾದರೂ ಒಂದು ಸರಕಾರದ ಕಾರ್ಯವೈಖರಿಯ ಬಗ್ಗೆ ಅಷ್ಟು ಕಡಿಮೆ ಕಾಲಾವಧಿಯಲ್ಲಿ ನಿಶ್ಚಯಿಸುವುದು ಸರಿಯಲ್ಲ. ಅರಾಜಕ ಮುಖ್ಯಮಂತ್ರಿ ಎಂಬ ಪಟ್ಟ ಗಳಿಸಿದ ಅರವಿಂದ್ ಕೇಜ್ರಿವಾಲ್ ಮತ್ತೊಮ್ಮೆ ಮುಖ್ಯಮಂತ್ರಿಯಾಗುವುದರ ಬಗ್ಗೆ ನಡೆದ ಅನೇಕ ಸಮೀಕ್ಷೆಗಳಲ್ಲಿ ಗೆದ್ದಿದ್ದಾರೆ. ಅವರ ಪಕ್ಷ ಗೆಲುವು ಕಾಣುತ್ತೋ ಬಿಡುತ್ತದೋ ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿಯಾಗಬೇಕು ಎಂಬ ಅಭಿಪ್ರಾಯವಂತೂ ಇದೆ. ಕಿರಣ್ ಬೇಡಿಯವರು ಬಿಜೆಪಿಗೆ ಸೇರುವುದಕ್ಕೆ ಮುಂಚೆ ಅವರ ಪರವಾಗಿಯೂ ಸಮೀಕ್ಷೆಗಳು ಇದ್ದುವಾದರೂ ಈಗ ಒಂದಷ್ಟು ಕಡಿಮೆಯಾಗಿದೆ. ಒಂದು ನಿರ್ದಿಷ್ಟ ಹಾದಿಯ ರಾಜಕಾರಣವನ್ನಷ್ಟೇ ನೋಡಿದ ನಮಗೆ ತಾಳಮೇಳವಿಲ್ಲದಂತೆ ಕಾಣುವ ಅರವಿಂದ್ ಕೇಜ್ರಿವಾಲರ ಪಕ್ಷದ ರಾಜಕೀಯ ವಿಚಿತ್ರದಂತೆ ಕಾಣಿಸುತ್ತಿರುವುದು ಸತ್ಯ. ಆಮ್ ಆದ್ಮಿ ಪಕ್ಷ ಬಿಡುಗಡೆಗೊಳಿಸಿರುವ ಪ್ರಣಾಳಿಕೆ ಕೂಡ ಹೀಗೆಯೇ ವಿಚಿತ್ರವಾಗಿದೆ; ಕುಡಿಯುವ ನೀರಿನಿಂದ ಹಿಡಿದು ಜನಲೋಕಪಾಲ್ ಬಿಲ್ಲಿನವರೆಗೆ, ವಿದ್ಯುತ್ತಿನಿಂದ ಹಿಡಿದು ಕಾರ್ಪೋರೇಟ್ ಕಂಪನಿಗಳ ನಿಯಂತ್ರಣದವರೆಗೆ ಎಲ್ಲ ವಿಷಯಗಳು ಎಪ್ಪತ್ತು ಅಂಶಗಳ ಪ್ರಣಾಳಿಕೆಯಲ್ಲಿದೆ. ಅವುಗಳಲ್ಲಿ ಬಹಳಷ್ಟು ಕಲ್ಪನಾತ್ಮಕ ಭ್ರಮೆಗಳಂತೆ ಕಾಣುತ್ತವೆ. ಅಧಿಕಾರಕ್ಕೆ ಬಂದರೆ ಆ ಎಪ್ಪತ್ತರಲ್ಲಿ ಇಪ್ಪತ್ತನ್ನಾದರೂ ಜಾರಿಗೆ  ತಂದರೆ ದೇಶದ ವಿವಿಧೆಡೆಗೂ ಆಮ್ ಆದ್ಮಿ ಪಕ್ಷ ಪಯಣ ಬೆಳೆಸಿ ಎದ್ದು ನಿಲ್ಲಲಾಗದಂತೆ ಸೋತಿರುವ ಕಾಂಗ್ರೆಸ್ಸಿಗೆ ಪರ್ಯಾಯವಾಗಿ ಬೆಳೆಯುವುದರಲ್ಲಿ ಅನುಮಾನವಿಲ್ಲ. ಕಿರಣ್ ಬೇಡಿ ಬಿಜೆಪಿ ಸೇರಿದ ನಂತರ ನಡೆದ ಇತ್ತೀಚಿನ ಎಬಿಪಿ – ನೀಲ್ ಸನ್ ಸಮೀಕ್ಷೆಯಲ್ಲಿ ಆಮ್ ಆದ್ಮಿ ಪಕ್ಷ 50 ಪ್ರತಿಶತಃ ಮತಗಳನ್ನು ಪಡೆದು ಬಹುಮತ ಪಡೆಯುತ್ತದೆ ಎಂದು ತಿಳಿಸಿದೆ. ಕಿರಣ್ ಬೇಡಿಯ ಸೇರ್ಪಡೆಯ ನಂತರ ಬಿಜೆಪಿಯ ಮತಗಳಿಕೆಯಲ್ಲಿ ನಾಲ್ಕರಷ್ಟು ನಷ್ಟವಾಗಿದೆ ಎಂದು ತಿಳಿಸುತ್ತದೆ ಸಮೀಕ್ಷೆ. ಸಮೀಕ್ಷೆಗಳನ್ನು ಪೂರ್ಣವಾಗಿ ಒಪ್ಪಲಾಗುವುದಿಲ್ಲವಾದರೂ ಒಂದು ಹಂತದವರೆಗೆ ಅವು ಸತ್ಯವಾಗಿವೆ.

ಬಿಜೆಪಿ ಗೆದ್ದರೆ ಮತ್ತಷ್ಟು ದಿನ ನರೇಂದ್ರ ಮೋದಿ ಅಲೆಯ – ನರೇಂದ್ರ ಮೋದಿ ಅಭಿವೃದ್ಧಿಯ ಯಶಸ್ಸಿನ ಬಗೆಗೆ ಚರ್ಚೆಗಳಾಗುತ್ತವೆ, ಬಿಜೆಪಿ ಸೋತರೆ ಕಿರಣ್ ಬೇಡಿಯ ಸೋಲಾಗುತ್ತದೆ; ನರೇಂದ್ರ ಮೋದಿ ಮತ್ತು ಅಮಿತ್ ಶಾ ಸೋಲಿನ ಜವಾಬ್ದಾರಿಯಿಂದ ನಾಜೂಕಾಗಿ ಜಾರಿಕೊಳ್ಳುತ್ತಾರೆ! ಆಮ್ ಆದ್ಮಿ ಪಕ್ಷದ ಸೋಲು ಗೆಲುವುಗಳೆರಡಕ್ಕೂ ಅರವಿಂದ್ ಕೇಜ್ರಿವಾಲರೇ ಜವಾಬ್ದಾರಿ. ಆಮ್ ಆದ್ಮಿ ಪಕ್ಷ ಸೋತರೂ ಪಕ್ಷದ ದೃಷ್ಟಿಯಿಂದ ಮತ್ತಷ್ಟು ಪಕ್ವತೆ ಪಡೆದುಕೊಳ್ಳಲು ಸಮಯ ಸಿಕ್ಕಂತಾಗುತ್ತದೆ. ಆಮ್ ಆದ್ಮಿ ಪಕ್ಷ ರಾಜಕಾರಣದಲ್ಲಿ ಹಸುಗೂಸು ಎಂಬುದನ್ನು ಮರೆಯಬಾರದು. ಇವೆಲ್ಲ ಚರ್ಚೆಗಳ ಮಧ್ಯೆ ಹತ್ತು ವರುಷಗಳಿಂದ ಆಡಳಿತ ನಡೆಸಿದ್ದ ಕಾಂಗ್ರೆಸ್ಸಿನ ಬಗೆಗಿನ ಮಾತೇ ಬರದಿರುವುದು ಕಾಂಗ್ರೆಸ್ ಪಕ್ಷ ನಡೆಸಿದ ದುರಾಡಳಿತವನ್ನು ನೆನಪಿಸುತ್ತದೆ. ಜನರು ಕಾಂಗ್ರೆಸ್ಸನ್ನು ಮರೆತೇಬಿಡುವಷ್ಟು ಕೆಟ್ಟ ಆಡಳಿತ ನೀಡಿದ್ದರಾ? ರಾಹುಲ್ ಬೆನ್ನಿಗೇ ಜೋತು ಬೀಳುವ ಗುಣದ ಕಾಂಗ್ರೆಸ್ ಸದ್ಯದ ಮಟ್ಟಿಗಂತೂ ಚೇತರಿಸಿಕೊಳ್ಳುವ ಪರಿಸ್ಥಿತಿಯಲ್ಲಿಲ್ಲ. ಕೆಲವಾದರೂ ಸೀಟುಗಳನ್ನು ಉಳಿಸಿಕೊಳ್ಳುವುದಷ್ಟೇ ಅದರ ಮುಂದಿರುವ ಗುರಿ.


ಅರವಿಂದ್ ಕೇಜ್ರಿವಾಲರ ಅರಾಜಕತೆ ಕಿರಣ್ ಬೇಡಿಯವರ ಅನುಕೂಲಸಿಂಧುತ್ವಗಳೇನೇ ಇದ್ದರೂ ಪ್ರಾಮಾಣಿಕತೆಯ ವಿಷಯದಲ್ಲಿ ಸದ್ಯದ ಮಟ್ಟಿಗೆ ಇಬ್ಬರಲ್ಲೂ ತುಂಬ ವ್ಯತ್ಯಾಸಗಳನ್ನುಡುಕುವುದು ಕಷ್ಟ. ಕಿರಣ್ ಬೇಡಿಯವರು ಮುಖ್ಯಮಂತ್ರಿ ಹುದ್ದೆಗೆ ಸ್ಪರ್ಧಿ ಎಂಬ ಕಾರಣಕ್ಕಾಗಿ ಆಮ್ ಆದ್ಮಿ ಪಕ್ಷಕ್ಕೆ ಬದಲಾಗಿ ಬಿಜೆಪಿಗೆ ಮತ ಚಲಾಯಿಸುವವರು ಇರುವ ಹಾಗೆಯೇ ಬಿಜೆಪಿಯ ಅವಕಾಶವಾದಿತನದ ರಾಜಕಾರಣದಿಂದ ಬೇಸತ್ತು ಆಮ್ ಆದ್ಮಿ ಪಕ್ಷಕ್ಕೆ ಮತ ಚಲಾಯಿಸುವವರೂ ಇರುತ್ತಾರೆ. ಒಟ್ಟಿನಲ್ಲಿ ದೇಶದ ರಾಜಧಾನಿಯ ಚುನಾವಣೆ ಹತ್ತಲವು ಕಾರಣಗಳಿಂದ ಗಮನ ಸೆಳೆಯುತ್ತಿದೆ. ಕೊನೆಗೆ ಪ್ರಜಾಪ್ರಭುತ್ವ ಗೆಲ್ಲಲಿ ಎಂಬುದಷ್ಟೇ ಆಶಯ.

1 comment:

  1. What will be more interesting to watch is how the opposition BJP, lead by Kiran Bedi, will react to AAPs policies on the floor of the house. Ofcourse I know I am jumping the gun by imagining that AAP will get a majority. But lets give it the benefit of the doubt and for a second predict a AAP victory.

    That victory alone will not be a trendsetter. What instead should happen is both AK and KB should set a new precedent for ruling party-opposition party symbiosis on the floor of the house. More constructive debates should happen. Legislative assembly should become the center of power(which is the idea behind the parliamentary form of democracy).

    But even a mildly cynic mind can guess what will happen if BJP loses. Kiran Bedi will be shown the door.

    But lets hope not.

    ReplyDelete