Nov 18, 2014

ಪ್ರಹಸನವಾಗದ ವಿಸ್ತರಣೆಯಲ್ಲಿ ಅನ್ಯಾಯವಾಗಿದ್ದು ಕರ್ನಾಟಕಕ್ಕೆ .... ಭಾಗ 1


modi cabinet
Dr Ashok K R
ಸಂಪುಟ ವಿಸ್ತರಣೆಯೆಂಬುದು ಪ್ರಹಸನದಂತೆ ನಡೆಯುವ ಸಂದರ್ಭಗಳೇ ಹೆಚ್ಚಾಗುತ್ತಿರುವ ದಿನಗಳಲ್ಲಿ ನರೇಂದ್ರ ಮೋದಿಯವರ ಸಂಪುಟ ವಿಸ್ತರಣೆಯ ಕಾರ್ಯ ಸುಸೂತ್ರವಾಗಿ ನಡೆದಿದೆ ಎಂದೇ ಹೇಳಬಹುದು. ಅನೇಕ ವರುಷಗಳಿಂದ ಸಮ್ಮಿಶ್ರ ಸರ್ಕಾರಗಳೇ ಅಸ್ತಿತ್ವದಲ್ಲಿದ್ದ ಕಾರಣ ಬಹುಮತ ಪಡೆಯಲಾಗದ ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳ ಕೋರಿಕೆ – ಅಣತಿಯ ಮೇರೆಗೆ ಸಂಪುಟ ವಿಸ್ತರಣೆ ನಡೆಸಬೇಕಾಗುತ್ತಿತ್ತು. ಒಂದು ಪಕ್ಷಕ್ಕೆ ಕೊಟ್ಟರೆ ಮತ್ತೊಂದು ಪಕ್ಷಕ್ಕೆ ಮುನಿಸು. ಅವರ ಮುನಿಸು ತಣಿಸುವಷ್ಟರಲ್ಲಿ ಮಗದೊಬ್ಬರ ಕೋಪ; ಇವೆಲ್ಲ ಘಟನೆಗಳೂ ಸೇರಿ ಸಂಪುಟ ವಿಸ್ತರಣೆಯೆಂದರೆ ಅಧಿಕಾರದಲ್ಲಿರುವ ಮುಖ್ಯಸ್ಥನಿಗೆ ತಲೆನೋವಿನ ಸಂಗತಿಗಳನ್ನಾಗಿ ಮಾಡಿತ್ತು. ದಶಕಗಳ ನಂತರ ಕೇಂದ್ರದಲ್ಲಿ ಏಕಪಕ್ಷ ಬಹುಮತ ಪಡೆದಿದೆ, ಚುನಾವಣಾ ಪೂರ್ವದಿಂದ ಜೊತೆಗಿದ್ದ ಮಿತ್ರಪಕ್ಷಗಳಿಗೆ ಸಚಿವ ಸ್ಥಾನ ನೀಡಿದ್ದ ಬಿಜೆಪಿಯ ಮೇಲೆ ‘ನಮಗೆ ಇಂತಹ ಸ್ಥಾನ ಬೇಕು’ ಎಂದು ಒತ್ತಾಯಿಸುವಂತಿಲ್ಲ, ಒತ್ತಾಯಿಸಿದರೆ ಎನ್ ಡಿ ಎ ತೊರೆದು ಹೋಗಲು ಸಿದ್ಧರಾಗಬೇಕಾಗುತ್ತದೆ. ಅದರಲ್ಲೂ ಏಕಪಕ್ಷಕ್ಕಿಂತ ಏಕವ್ಯಕ್ತಿ ಆಡಳಿತದಂತಿರುವ ಈಗಿನ ಕೇಂದ್ರ ಸರ್ಕಾರದಲ್ಲಿ ಬಿಜೆಪಿಯವರೇ ಮೇಲಿನವರ ಮಾತುಗಳನ್ನು ಪ್ರಶ್ನಿಸುವಂತಿಲ್ಲ, ಇನ್ನು ಉಳಿದ ಪಕ್ಷಗಳು ಪ್ರಶ್ನಿಸಲು ಹೇಗೆ ಸಾಧ್ಯ?! ಕಾಂಗ್ರೆಸ್ಸಿನ ಹೈಕಮಾಂಡಿನ ಕಾರ್ಯವೈಖರಿಯನ್ನು ಟೀಕಿಸುತ್ತಿದ್ದ ಬಿಜೆಪಿಯಲ್ಲೂ ಹೈಕಮಾಂಡ್ ಸಂಸ್ಕೃತಿ ಬಹುವೇಗವಾಗಿ ಬೆಳೆಯುತ್ತಿದೆ! ಅಲ್ಲಿಗೆ ಬಿಜೆಪಿ ಕಾಂಗ್ರೆಸ್ ಆಗುವ ಪ್ರಯತ್ನದಲ್ಲಿ ವೇಗದಿಂದಲೇ ಮುಂದುವರೆಯುತ್ತಿದೆ!


ನರೇಂದ್ರ ಮೋದಿಯ ಮೊದಲ ಸಂಪುಟದಲ್ಲಿ ನಲವತ್ತ ನಾಲ್ಕು ಮಂದಿ ಸಚಿವರಾಗಿ ಸೇರ್ಪಡೆಗೊಂಡಿದ್ದರು. ಅನೇಕ ಸಚಿವರು ಎರಡು ಮೂರು ಖಾತೆಗಳನ್ನು ನಿರ್ವಹಿಸಬೇಕಿತ್ತು. ಸ್ವತಃ ಪ್ರಧಾನಿ ಮೋದಿಯವರ ಬಳಿಯೇ ವಿವಿಧ ಖಾತೆಗಳಿದ್ದವು. ಚಿಕ್ಕ ಸರ್ಕಾರ ಹೆಚ್ಚು ಆಡಳಿತದ ಮೊರೆ ಹೋಗಿದ್ದ ಮೋದಿಯವರಿಗೆ ಬಹುಶಃ ನಂತರದ ದಿನಗಳಲ್ಲಿ ಅನೇಕ ಖಾತೆಗಳನ್ನು ಒಬ್ಬರೇ ನಿರ್ವಹಿಸುವುದು ಉತ್ತಮ ಆಡಳಿತಕ್ಕೆ ಅನುಕೂಲಕರವಲ್ಲ ಎಂದನ್ನಿಸಿರಬೇಕು. ಇನ್ನು ಇಪ್ಪತ್ತೆರಡು ಜನರನ್ನು ಆಯ್ದ ನಂತರ ಈಗ ಸಂಪುಟದ ಗಾತ್ರ ಅರವತ್ತಾರಕ್ಕೆ ಏರಿದೆ. ಹಾಗಿದ್ದೂ ಇದು ಎಪ್ಪತ್ತೆಂಟು ಸಚಿವರಿದ್ದ ಹಿಂದಿನ ಯುಪಿಎ ಸರಕಾರ ಮತ್ತು ಎಂಭತ್ತೆಂಟರ ಸಂಖೈಯಲ್ಲಿದ್ದ ಅಟಲ್ ನೇತೃತ್ವದ ಎನ್ ಡಿ ಎ ಸರಕಾರಕ್ಕಿಂತ ಕಿರಿದು, ಸದ್ಯಕ್ಕೆ. ಅನಗತ್ಯ ಸಚಿವರ ನೇಮಕ ಹೊರೆಯಾಗುತ್ತದೆಯಾದರೂ ಭಾರತದಂತಹ ದೊಡ್ಡ ದೇಶದಲ್ಲಿ ಇರುವ ಅಷ್ಟೊಂದು ಸಚಿವಾಲಯಗಳನ್ನು ಕೆಲವೇ ಮಂದಿ ನಿರ್ವಹಿಸಲು ನಿಂತರೆ ಕೆಲಸ ಕಾರ್ಯಗಳು ಕುಂಠಿತಗೊಳ್ಳುವ ಸಾಧ್ಯತೆಗಳೇ ಅಧಿಕ. ಹೊಸಬರನ್ನು ನೇಮಕ ಮಾಡಿಕೊಳ್ಳುವಾಗ ಒಂದಷ್ಟು ಖಾತೆಗಳಲ್ಲಿ ನಿಜಕ್ಕೂ ಕೆಲಸ ಮಾಡಬಲ್ಲ ಯೋಗ್ಯತೆಯಿರುವವರಿಗೆ ಸಚಿವ ಸ್ಥಾನ ಸಿಕ್ಕಿದೆ ಎಂಬ ಭಾವ ಮೂಡಿದರೆ ಬಹಳಷ್ಟು ಖಾತೆಗಳ ಹಂಚಿಕೆ ಹತ್ತಿರದಲ್ಲಿರುವ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ನಡೆಯುತ್ತಿರುವ ತಯಾರಿಯಂತೆ ಕಾಣುತ್ತಿದೆ. ಮಾತೃಸಂಸ್ಥೆಯಾದ ಆರೆಸ್ಸೆಸ್ಸನ್ನು ಸಂಪ್ರೀತಗೊಳಿಸಲು ಒಂದಷ್ಟು ಹಂಚಿಕೆ ನಡೆದಿದೆ. ಎಂದಿನಂತೆ ದಕ್ಷಿಣ ಭಾರತಕ್ಕೆ ಅನ್ಯಾಯವಾಗಿದೆ, ಬಹುಮತಕ್ಕೆ ಕೊರತೆಯಿದ್ದಾಗ ಪ್ರಾದೇಶಿಕ ಪಕ್ಷಗಳೊಂದಿಗೆ ರಾಷ್ಟ್ರೀಯ ಪಕ್ಷಗಳು ಹೇಗೆ ವರ್ತಿಸುತ್ತವೆ, ಸಂಪೂರ್ಣ ಬಹುಮತವಿದ್ದಾಗ ಅವುಗಳ ವರಸೆ ಹೇಗಿರುತ್ತದೆ ಎಂಬುದರ ಉದಾಹರಣೆಯೂ ಈಗಿನ ಸಂಪುಟ ವಿಸ್ತರಣೆಯಿಂದ ಅರಿವಾಗಿದೆ.
ಗೋವಾದ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪಾರಿಕ್ಕರ್ ರಕ್ಷಣಾ ಖಾತೆಯ ಸಚಿವರಾಗಿದ್ದಾರೆ. ಗೋವಾದಲ್ಲಿ ತಮ್ಮ ಆಡಳಿತದ ವೈಖರಿಯಿಂದ ಒಳ್ಳೆಯ ಹೆಸರು ಪಡೆದಿರುವ ಪಾರಿಕ್ಕರ್ ರಕ್ಷಣಾ ಖಾತೆಗೆ ಸೂಕ್ತವಾದ ವ್ಯಕ್ತಿ ಎಂದೇ ಹೇಳಲಾಗುತ್ತಿದೆ. ಸದಾನಂದ ಗೌಡರ ಬಳಿಯಿದ್ದ ರೈಲ್ವೆ ಖಾತೆಯನ್ನು ಸುರೇಶ್ ಪ್ರಭುರವರಿಗೆ ನೀಡಲಾಗಿದೆ. ಅಟಲ್ ಬಿಹಾರಿ ವಾಜಪೇಯಿಯವರ ಕಾಲದಲ್ಲಿಯೂ ಪ್ರಭಾವಶಾಲಿಯಾಗಿದ್ದ ಸುರೇಶ್ ಪ್ರಭು ಮೂಲತಃ ಶಿವಸೇನಾ ಪಕ್ಷಕ್ಕೆ ಸೇರಿದವರು. ಆಗ ದೇಶದ ನದಿಗಳ ಜೋಡಣೆಯ ಬಗ್ಗೆ ಯೋಜನೆ ರೂಪಿಸಿದ್ದ ಸುರೇಶ್ ಪ್ರಭು ನಂತರದ ದಿನಗಳಲ್ಲಿ ನರೇಂದ್ರ ಮೋದಿಯವರ ಕಟ್ಟಾ ಬೆಂಬಲಿಗರಾಗಿ ಗುರುತಿಸಿಕೊಂಡರು. ಅಮೆರಿಕಾದ ಯುನಿವರ್ಸಿಟಿಯೊಂದು ನರೇಂದ್ರ ಮೋದಿಯವರ ಭಾಷಣಕ್ಕೆ ಅನುವು ಮಾಡಿಕೊಡದಿದ್ದಾಗ ಪ್ರತಿಭಟನೆಯ ರೂಪದಲ್ಲಿ ತಮ್ಮ ಭಾಷಣವನ್ನು ರದ್ದು ಪಡಿಸಿ ಬಂದಿದ್ದರು ಸುರೇಶ್ ಪ್ರಭು. ಶಿವಸೇನೆ ಪಕ್ಷ ತೊರೆದು ಬಿಜೆಪಿ ಸೇರಿರುವ ಸುರೇಶ್ ಪ್ರಭುರವರಿಗೆ ಈಗ ರೈಲು ಜೋಡಿಸುವ ಕಾರ್ಯ. ಬಿಜೆಪಿಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಯಾಗಿದ್ದ ಜೆ.ಪಿ.ನಡ್ಡಾರವರು ಆರೋಗ್ಯ ಇಲಾಖೆಯ ಮುಖ್ಯಸ್ಥರಾಗಿದ್ದಾರೆ. ಆರೋಗ್ಯ ಇಲಾಖೆಯ ಸಚಿವರಾಗಿದ್ದ ಡಾ.ಹರ್ಷವರ್ಧನರನ್ನು ಅಷ್ಟೇನೂ ಪ್ರಾಮುಖ್ಯತೆಯಿಲ್ಲದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ವರ್ಗ ಮಾಡಲಾಗಿದೆ. ದೆಹಲಿಯ ಚುನಾವಣೆ ಹತ್ತಿರದಲ್ಲಿರುವಾಗ ಡಾ.ಹರ್ಷವರ್ಧನರನ್ನು ಅಲ್ಲಿಗೆ ನಿಯೋಜಿಸುವ ಉದ್ದೇಶದಿಂದ ಕಡಿಮೆ ಕೆಲಸದ ಖಾತೆ ವಹಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೂ ಪಲ್ಸ್ ಪೋಲೀಯೋದಂತಹ ಕಾರ್ಯಕ್ರಮದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹರ್ಷವರ್ಧನರನ್ನು ಆರೋಗ್ಯ ಇಲಾಖೆಯಲ್ಲೇ ಉಳಿಸಿಕೊಂಡಿದ್ದರೆ ಒಳಿತಿತ್ತೇನೋ. ಚುನಾವಣೆಗೆ ಮುಂಚೆ ಕಾಂಗ್ರೆಸ್ಸಿನಿಂದ ಬಿಜೆಪಿಗೆ ಹಾರಿದ್ದ ಹರಿಯಾಣದ ಬಿರೇಂದರ್ ಸಿಂಗ್ ರವರಿಗೆ ಗ್ರಾಮೀಣ ಅಭಿವೃದ್ಧಿ, ಪಂಚಾಯತ್ ರಾಜ್ ಸಚಿವಾಲಯಕ್ಕೆ ಬಂದಿದ್ದಾರೆ. ಹರಿಯಾಣಾದ ಸಿ.ಎಂ ಸ್ಥಾನದಲ್ಲಿ ಜಾಟರನ್ನು ಕೂರಿಸಲಾಗದಿದ್ದುದನ್ನು ಬಿರೇಂದರ್ ಸಿಂಗರ ನೇಮಕದ ಮುಖಾಂತರ ಸರಿಪಡಿಸುವ ಯತ್ನವೆಂದು ಭಾವಿಸಬಹುದು.
ಅರುಣ್ ಜೇಟ್ಲಿಯವರಿಗೆ ಸಹಾಯಕವಾಗಿ ಯಶವಂತ್ ಸಿನ್ಹಾರ ಪುತ್ರ ಜಯಂತ್ ಸಿನ್ಹಾರನ್ನು ಆಯ್ಕೆ ಮಾಡಲಾಗಿದೆ. ಐಐಟಿ ಡೆಲ್ಲಿ, ಹಾರ್ವರ್ಡ್ ಯುನಿವರ್ಸಿಟಿಯಲ್ಲಿ ಓದಿಕೊಂಡಿರುವ ಜಯಂತ್ ಸಿನ್ಹಾ ಕಾರ್ಪೋರೇಟ್ ಜಗತ್ತಿನ ಒಳಹೊರಗನ್ನು ಚೆನ್ನಾಗಿ ಅರಿತವರು. ಕಾರ್ಪೋರೇಟ್ ಭಾರತ ರೂಪಿಸಬಯಸಿರುವ ಮೋದಿಯವರ ಉದ್ದೇಶಗಳಿಗೆ ಹೊಂದಿಕೆಯಾಗುವವರು. ಮನೋಹರ್ ಪಾರಿಕ್ಕರ್ ಕೂಡ ಐಐಟಿಯಲ್ಲಿ ಓದಿದವರು. ದೊಡ್ಡ ದೊಡ್ಡ ಯುನಿವರ್ಸಿಟಿಯ ಹೆಸರು ಕೇಳಿದಾಕ್ಷಣ ಉತ್ತಮ ಆಡಳಿತದ ನಿರೀಕ್ಷೆ ಮೂಡುತ್ತದೆ. ನಮ್ಮ ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಕೂಡ ಒಳ್ಳೊಳ್ಳೆ ಯುನಿವರ್ಸಿಟಿಗಳಲ್ಲಿ ಓದಿದ ಪ್ರಚಂಡ ಬುದ್ಧಿವಂತರು ಎಂಬುದನ್ನು ನೆನಪಿಸಿಕೊಂಡಾಗ ಭಯವೂ ಆಗುತ್ತದೆ! ಇವಿಷ್ಟು ನೇಮಕಗಳು ಒಂದಷ್ಟು ಉಪಯೋಗವಾಗುವ ಸಂಪುಟ ವಿಸ್ತರಣೆ ಎಂಬ ಭಾವ ಮೂಡಿಸಿದ್ದರೆ ಉಳಿದ ನೇಮಕಗಳೆಲ್ಲ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆ ಮತ್ತು ಆರ್ ಎಸ್ ಎಸ್ಸಿನ ಸಮಾಧಾನಕ್ಕೆ ನಡೆದಿರುವ ನೇಮಕಗಳು.
ಕಾಂಗ್ರೆಸ್ಸನ್ನು ಅದರ ಓಟ್ ಬ್ಯಾಂಕ್ ರಾಜಕೀಯಕ್ಕೆ ಬಹಳವಾಗಿ ಟೀಕಿಸುತ್ತಿದ್ದ ಬಿಜೆಪಿ ಸಂಪುಟ ವಿಸ್ತರಣೆಗೆ ಅನುಸರಿಸುವ ಮಾರ್ಗಸೂಚಿಗಳನ್ನು ಗಮನಿಸಿದರೆ ಓಟ್ ಬ್ಯಾಂಕ್ ರಾಜಕೀಯದಲ್ಲಿ ಬಿಜೆಪಿ ಹಿಂದಿಲ್ಲ ಎಂಬುದು ಖಚಿತವಾಗುತ್ತದೆ. ಬಿಹಾರದ ಸಂದರ್ಭದಲ್ಲಿ ಇದು ಸ್ಪಷ್ಟವಾಗುತ್ತದೆ. ಲೋಕಸಭಾ ಚುನಾವಣೆಯಲ್ಲಿ ಅತ್ಯುತ್ತಮ ಗೆಲುವು ಕಂಡ ಬಿಜೆಪಿ ನಂತರ ವಿಧಾನಸಭೆಗೆ ನಡೆದ ಉಪಚುನಾವಣೆಗಳಲ್ಲಿ ನಿರೀಕ್ಷಿತ ಯಶ ಗಳಿಸಲಿಲ್ಲ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಗೆಲುವು ಸಿಗುವುದರ ಆಧಾರಗಳು ಬೇರೆ ಬೇರೆ ಎಂಬುದು ನಿಜವಾದರೂ ಬಿಜೆಪಿಯ ಹಿನ್ನಡೆಗೆ ಲಾಲೂ ಪ್ರಸಾದರ ಆರ್.ಜೆ.ಡಿ, ನಿತೀಶರ ಜೆ.ಡಿ.ಯು ಮತ್ತು ಬಿಹಾರದಲ್ಲಿ ತನ್ನ ಅಸ್ತಿತ್ವವನ್ನು ಹೆಚ್ಚು ಕಡಿಮೆ ಕಳೆದುಕೊಂಡಿರುವ ಕಾಂಗ್ರೆಸ್ ಜೊತೆಯಾಗಿ ಚುನಾವಣೆ ಎದುರಿಸಿದ್ದೂ ಒಂದು ಕಾರಣ. ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಆರೆ.ಜೆ.ಡಿ – ಜೆ.ಡಿ.ಯು – ಕಾಂಗ್ರೆಸ್ ಮೈತ್ರಿ ಕೆಲಸ ಮಾಡಿಬಿಟ್ಟರೆ ಬಿಜೆಪಿಗೆ ಗೆಲುವು ಕಷ್ಟವಾಗಬಹುದು. ಬಿಹಾರದ ಓಟ್ ಬ್ಯಾಂಕಾದ ಯಾದವರು, ಭೂಮಿಹಾರ್ ಮತ್ತು ರಾಜಪೂತರನ್ನು ಓಲೈಸುವ ಪ್ರಯತ್ನವನ್ನು ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಕಾಣಬಹುದು. ರಾಮ್ ಕೃಪಾಲ್ ಯಾದವ್, ರಾಜಪೂತರಾದ ರಾಜೀವ್ ಪ್ರತಾಪ್ ರೂಡಿ ಮತ್ತು ಭೂಮಿಹಾರ್ ಪಂಗಡಕ್ಕೆ ಸೇರಿದ ಗಿರಿರಾಜ್ ಸಿಂಗರ ನೇಮಕ ಮುಂದಿನ ಅವರ ಕೆಲಸದ ಮೇಲಿನ ನಂಬುಗೆಯಿಂದಾಗಿದೆ ಎಂದರೆ ನಂಬಲಾದೀತೆ? ಓಟ್ ಬ್ಯಾಂಕ್ ರಾಜಕೀಯ ಅನಿವಾರ್ಯವೆಂದು ಎಲ್ಲವನ್ನೂ ಬದಲಿಸುವ ಮಾತನಾಡುವ ಪಕ್ಷ ಮತ್ತು ಇಡೀ ಭಾರತದ ದಿಕ್ಕನ್ನೇ ಬದಲಾಯಿಸ್ತೀನಿ ಎಂದು ಹೇಳುತ್ತಲೇ ಇರುವ ನಾಯಕರೂ ಕೂಡ ಈ ಮೂಲಕ ಒಪ್ಪಿಕೊಂಡಂತಾಯಿತು. ‘ಮೋದಿ ವಿರೋಧಿಗಳೆಲ್ಲ ಪಾಕಿಸ್ತಾನಕ್ಕೆ ಹೋಗಿ’ ಎಂದಬ್ಬರಿಸಿದ್ದ ಗಿರಿರಾಜ್ ಸಿಂಗರ ನೇಮಕಕ್ಕೆ ಅವರ ಮೋದಿ ಪ್ರೀತಿಯೇ ಪ್ರಮುಖ ಕಾರಣವಿರಬೇಕು! ಗಿರಿರಾಜ್ ಸಿಂಗರು ಮೋದಿ ವಿರೋದಿಗಳಿಗೆಲ್ಲ ಪಾಸ್ ಪೋರ್ಟ್ ಹಂಚುತ್ತಾರೋ ಏನೋ ಇನ್ನೂ ವರದಿಯಾಗಿಲ್ಲ!
ಎರಡನೇ ಭಾಗ
image source: rajyasabha tv

No comments:

Post a Comment