Nov 19, 2014

ಪ್ರಹಸನವಾಗದ ವಿಸ್ತರಣೆಯಲ್ಲಿ ಅನ್ಯಾಯವಾಗಿದ್ದು ಕರ್ನಾಟಕಕ್ಕೆ .... ಭಾಗ 2

modi cabinetDr Ashok K R
ಕೇಂದ್ರ ಸರ್ಕಾರವನ್ನು ರೂಪಿಸುವಲ್ಲಿ ಉತ್ತರ ಪ್ರದೇಶದ ಪ್ರಭಾವ ಹೆಚ್ಚು. ದೊಡ್ಡ ರಾಜ್ಯ, ವಿಪರೀತ ಜನಸಂಖೈಯಿರುವ ಉತ್ತರಪ್ರದೇಶದಿಂದ ಎಂಭತ್ತು ಜನ ಸಂಸದರು ಲೋಕಸಭೆ ಪ್ರವೇಶಿಸುತ್ತಾರೆ. ಸಂಸದರ ಸಂಖೈಯ ಆಧಾರದಲ್ಲಿ ನಂತರದ ಸ್ಥಾನದಲ್ಲಿರುವ ಮಹಾರಾಷ್ಟ್ರದಿಂದ ಆಯ್ಕೆಯಾಗುವವರ ಸಂಖೈ ನಲವತ್ತೆಂಟು! ಉತ್ತರ ಪ್ರದೇಶ ಗೆದ್ದರೆ ಅಧಿಕಾರದ ಗದ್ದುಗೆ ಏರಿದಂತೆಯೇ ಎಂಬ ಮಾತು ಅದಕ್ಕಾಗೇ ಹುಟ್ಟಿರಬೇಕು. ಎಂಭತ್ತು ಸ್ಥಾನದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎಪ್ಪತ್ತೊಂದು ಸ್ಥಾನದಲ್ಲಿ ಜಯಗಳಿಸಿತ್ತು. ಸಹಜವಾಗಿ ಅಲ್ಲಿನವರಿಗೆ ಸಚಿವ ಸಂಪುಟದಲ್ಲೂ ಪ್ರಾಮುಖ್ಯತೆ ದೊರೆಯಬೇಕು. ಮೊದಲ ಸಂಪುಟದಲ್ಲಿ ಉತ್ತರಪ್ರದೇಶದ ಎಂಟು ಮಂದಿಯಿದ್ದರೆ ಈ ಬಾರಿ ಮತ್ತೆ ನಾಲ್ವರನ್ನು ಆಯ್ಕೆ ಮಾಡಲಾಗಿದೆ. ವಿಧಾನಸಭಾ ಚುನಾವಣೆಯನ್ನು ಗುರಿಯಾಗಿರಿಸಿಕೊಂಡು ದಲಿತ ನಾಯಕರಿಗೆ, ನಿಶಾದರಿಗೆ ಸಚಿವ ಸ್ಥಾನ ನೀಡಲಾಗಿದೆ. ದಲಿತ ಆರೆಸ್ಸೆಸ್ ನಾಯಕ ರಾಮ್ ಶಂಕರ್ ಕಥಾರಿಯಾ, ನಿಶಾದರ ಮತಗಳನ್ನು ಬಿಜೆಪಿಗೆ ತಂದುಕೊಟ್ಟ ಸಾಧ್ವಿ ನಿರಂಜನ್ ಜ್ಯೋತಿಯವರಿಗೆ ಸಚಿವ ಸ್ಥಾನ ದಕ್ಕಿದೆ. 
ಪ್ರಹಸನವಾಗದ ವಿಸ್ತರಣೆಯಲ್ಲಿ ಅನ್ಯಾಯವಾಗಿದ್ದು ಕರ್ನಾಟಕಕ್ಕೆ ಭಾಗ 1


ಇನ್ನು ಮೋಸಕ್ಕೊಳಗಾಗಿದ್ದು ಶಿವಸೇನೆ ಮತ್ತು ಹೆಚ್ಚು ಕಡಿಮೆ ಅದಕ್ಕವರು ಅರ್ಹರೂ ಹೌದು. ರಾಜಕೀಯದಲ್ಲಿ ಶಾಶ್ವತ ಸ್ನೇಹಿತರೂ ಇಲ್ಲ, ಶಾಶ್ವತ ವೈರಿಗಳೂ ಇಲ್ಲ ಎಂಬುದಕ್ಕೆ ಬಿಜೆಪಿ ಮತ್ತು ಶಿವಸೇನೆಯ ನಡುವಿನ ಒಡಕೇ ಉದಾಹರಣೆ. ಭಾರತದ ಮೈತ್ರಿ ರಾಜಕಾರಣದಲ್ಲಿ ಮಿತ್ರ ಪಕ್ಷಗಳೆಂದರೆ ರಾಷ್ಟ್ರೀಯ ಪಕ್ಷಗಳು ಗೆದ್ದಾಗ ಜೊತೆಗಿದ್ದು ಸೋತಾಗ ಅವುಗಳಿಂದ ದೂರಾಗಿ ಕೆಲವೊಮ್ಮೆ ಗೆದ್ದ ವಿರೋಧಿ ಪಕ್ಷದೊಂದಿಗೆ ಗುರುತಿಸಿಕೊಂಡು ಅಧಿಕಾರವನ್ನು ಅನುಭವಿಸುವುದೇ ಹೆಚ್ಚು. ಇದಕ್ಕೆ ಅಪವಾದದಂತಿದ್ದ ಕೆಲವೇ ಪಕ್ಷಗಳಲ್ಲಿ ಶಿವಸೇನೆಯೂ ಒಂದು. ಮುಂಚಿನಿಂದಲೂ ಬಿಜೆಪಿಯ ಜೊತೆಗೇ ಗುರುತಿಸಿಕೊಂಡಿದ್ದ ಶಿವಸೇನೆ ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಒಂದು ಕಾಲನ್ನು ಹೊರಗಿಟ್ಟಿತು. ಕಾರಣ ಅದರ ಅಧ್ಯಕ್ಷ ಉದ್ಧವ್ ಠಾಕ್ರೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುವ ಆಸೆ. ಸೀಟು ಹಂಚಿಕೆಯ ವಿಷಯವಾಗಿ ಬಿಜೆಪಿ ಮತ್ತು ಶಿವಸೇನೆಯ ಮಧ್ಯೆ ನಡೆದ ಯಾವೊಂದು ಮಾತುಕತೆಯೂ ಯಶಸ್ವಿಯಾಗಲಿಲ್ಲ. ಕೊನೆಗೆ ಎರಡೂ ಪಕ್ಷಗಳೂ ಸ್ವತಂತ್ರವಾಗಿ ಸ್ಪರ್ಧಿಸುವ ನಿರ್ಧಾರ ತೆಗೆದುಕೊಂಡಿತು. ಶಿವಸೇನೆಯ ಬೆಂಬಲವಿಲ್ಲದೆ ಬಿಜೆಪಿ ಸರಕಾರ ರಚಿಸಲು ಹೇಗೆ ಸಾಧ್ಯ ಎಂಬ ವಿಶ್ವಾಸದಲ್ಲಿದ್ದ ಉದ್ಧವ್ ಠಾಕ್ರೆ (ಕರ್ನಾಟಕದಲ್ಲಿ ಈ ರೀತಿಯ ಮನಸ್ಥಿತಿಯನ್ನು ಜೆ.ಡಿ.ಎಸ್ ಪಕ್ಷದಲ್ಲಿ ಕಳೆದ ಚುನಾವಣೆಯವರೆಗೂ ಕಾಣಬಹುದಿತ್ತು, ಕಾಂಗ್ರೆಸ್ಸಿನ ಬಹುಮತದ ನಂತರ ಈಗ ಜೆ.ಡಿ.ಎಸ್. ದಿಕ್ಕು ತಪ್ಪಿದ ಪಕ್ಷವಾಗಿದೆ) ಚುನಾವಣೆಯ ಫಲಿತಾಂಶದ ನಂತರ ನಡೆದ ಎನ್.ಸಿ.ಪಿ ಬಿ.ಜೆಪಿ ಮೈತ್ರಿಯಿಂದ ದಿಕ್ಕೆಟ್ಟು ಕೂತಿದೆ. ಹತ್ತು ವರುಷಗಳಿಂದ ಆಡಳಿತದಲ್ಲಿದ್ದ ಕಾಂಗ್ರೆಸ್ – ಎನ್.ಸಿ.ಪಿ ಮೈತ್ರಿಯ ಸರಕಾರದ ವಿರುದ್ಧ ಪುಂಖಾನುಪುಂಖವಾಗಿ ಮಾತನಾಡಿ ಅಧಿಕಾರಕ್ಕೆ ಬಂದ ಬಿ.ಜೆ.ಪಿಗೆ ಇದ್ದಕ್ಕಿದ್ದಂತೆ ಶಿವಸೇನೆಗಿಂತ ಎನ್.ಸಿ.ಪಿ ಪ್ರಿಯವಾಗಿಬಿಡುತ್ತದೆ! ಶರದ್ ಪವಾರ್ ಯಾವೊಂದೂ ಭ್ರಷ್ಟಾಚಾರದ ಕಳಂಕವಿಲ್ಲದ ಶುದ್ಧಹಸ್ತರಾಗಿ ಗೋಚರಿಸಿಬಿಡುತ್ತಾರೆ! ಅಲ್ಲಿಗೆ ಕಾಂಗ್ರೆಸ್ಸಿಗೂ – ಬಿಜೆಪಿಗೂ ಯಾವ ವ್ಯತ್ಯಾಸ ಉಳಿಯಿತು ಎಂದು ತಿಳಿದವರು ಹೇಳಬೇಕು! ಶಿವಸೇನೆಯ ಅನಿಲ್ ದೇಸಾಯಿಯವರಿಗೆ ರಾಜ್ಯಮಟ್ಟದ ಸಚಿವ ಸ್ಥಾನ ನೀಡುವ ಸಂಭವಿತ್ತಾದರೂ ಕ್ಯಾಬಿನೆಟ್ ದರ್ಜೆ ನೀಡದಿದ್ದರೆ ಯಾವುದೂ ಬೇಡವೆಂಬ ಶಿವಸೇನೆಯ ನೀತಿಯಿಂದಾಗಿ ಅದೂ ಕೈತಪ್ಪಿತು. ಸದ್ಯದ ಪರಿಸ್ಥಿತಿಯಲ್ಲಿ ಶಿವಸೇನೆ – ಬಿಜೆಪಿಯ ಮೈತ್ರಿ ಹೆಚ್ಚು ಕಾಲ ಉಳಿಯುವಂತೆ ತೋರುತ್ತಿಲ್ಲ.
ಎಲ್ಲಕ್ಕಿಂತ ಹೆಚ್ಚು ಅನ್ಯಾಯವಾಗಿದ್ದು ಕರ್ನಾಟಕಕ್ಕೆ ಎಂದರೆ ವಿಶಾಲ ಹೃದಯದ ಕನ್ನಡಿಗರು ‘ಸುಮ್ನಿರ್ರೀ ದೇಶ ಮೊದಲು ನಮಗೆ. ಕನ್ನಡ ಕರ್ನಾಟಕ ಅಂತ ಬಡ್ಕೋತೀರಲ್ಲ’ ಎಂದು ಅನ್ಯಾಯದ ಮಾತನಾಡಿದವರನ್ನೇ ಬಯ್ಯುತ್ತಾರೇನೋ! ಆಂಧ್ರ, ತೆಲಂಗಾಣ, ತಮಿಳುನಾಡು, ಕರ್ನಾಟಕ ಮತ್ತು ಕೇರಳದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರ ಸಂಖೈ ಇಪ್ಪತ್ತೊಂದು. ಈ ರಾಜ್ಯಗಳಿಂದ ಒಟ್ಟು ಆಯ್ಕೆಯಾಗುವವರ ಸಂಖೈ ನೂರಾ ಇಪ್ಪತ್ತೊಂಭತ್ತು. ಆಂಧ್ರದಿಂದ ಇಬ್ಬರು, ತಮಿಳುನಾಡು ತೆಲಂಗಾಣದಿಂದ ಒಬ್ಬರು ಆಯ್ಕೆಯಾಗಿದ್ದರೆ ಕೇರಳದಿಂದ ಒರ್ವ ಬಿಜೆಪಿ ಅಭ್ಯರ್ಥಿಯೂ ಲೋಕಸಭಾ ಚುನಾವಣೆಯಲ್ಲಿ ಜಯ ಗಳಿಸಿಲ್ಲ. ಹೆಚ್ಚು ಸಂಖೈಯ ಸಂಸದರು ಆಯ್ಕೆಯಾಗಿರುವುದು ಕರ್ನಾಟಕದಿಂದ – ಒಟ್ಟು ಹದಿನೇಳು ಮಂದಿ. ಲೋಕಸಭೆಗೆ ಆಯ್ಕೆಯಾದ ಹದಿನೇಳು ಜನರಲ್ಲಿ ಸದಾನಂದ ಗೌಡ, ಅನಂತ ಕುಮಾರ್ ಮತ್ತು ಸಿದ್ಧೇಶ್ವರರಿಗೆ ಸಂಪುಟದಲ್ಲಿ ಮೊದಲ ಸುತ್ತಿನಲ್ಲಿ ಸ್ಥಾನ ಸಿಕ್ಕಿತು. ಹೆಸರಿಗೆ ವೆಂಕಯ್ಯನಾಯ್ಡುರವರು ಕರ್ನಾಟಕದ ಕೋಟಾದಿಂದ ಮಂತ್ರಿಯಾಗಿರುವವರು. ದಕ್ಷಿಣ ಭಾರತದಲ್ಲಿ ಬಿಜೆಪಿಗೆ ನೆಲೆಯಿದೆಯೆಂದಾದರೆ ಅದು ಸದ್ಯಕ್ಕೆ ಕರ್ನಾಟಕದಲ್ಲಿ ಮಾತ್ರ. ಮೋದಿ ಅಲೆಯ ಏಕೈಕ ಕಾರಣದಿಂದ ಇಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಿಲ್ಲ. 2004ರ ಚುನಾವಣೆಯಿಂದಲೂ (ಆಗ ಇಂಡಿಯಾ ಶೈನಿಂಗ್ ಕಾಲ) ಲೋಕಸಭೆಯ ವಿಷಯಕ್ಕೆ ಬಂದರೆ ಬಿಜೆಪಿಯ ಕಡೆಗೇ ಒಲವು ತೋರಿಸಿದ್ದಾನೆ ಕರ್ನಾಟಕದ ಮತದಾರ. ಆದರೆ ಬಿಜೆಪಿ ಅದಕ್ಕೆ ತಕ್ಕನಾಗಿ ಕರ್ನಾಟಕಕ್ಕೆ ಬೆಲೆ ನೀಡಿದೆಯಾ ಎಂದು ನೋಡಿದಾಗ ನೀಡಿದ್ದನ್ನೂ ಇಲ್ಲಸಲ್ಲದ ಕಾರಣಗಳಿಗಾಗಿ ಕಿತ್ತುಕೊಂಡಿದ್ದು ಕಾಣಿಸುತ್ತದೆ. ಕೇಂದ್ರ ಸರ್ಕಾರದ ಎಲ್ಲಾ ಸಚಿವಾಲಯದ್ದೂ ಒಂದು ತೂಕವಾದರೆ ರೈಲ್ವೆ ಇಲಾಖೆದೇ ಒಂದು ತೂಕ. ಪ್ರತ್ಯೇಕ ಬಜೆಟ್ ಇರುವ ಏಕೈಕ ಸಚಿವಾಲಯವಿದು. ಇಂತಹ ಪ್ರಮುಖ ಸ್ಥಾನಕ್ಕೆ ನೇಮಕವಾಗಿದ್ದು ಕರ್ನಾಟಕದ ಸದಾನಂದ ಗೌಡರು. ಯಡಿಯೂರಪ್ಪನವರ ಕೃಪೆಯಿಂದಾಗಿ ಒಂದಷ್ಟು ದಿನ ಕರ್ನಾಟಕದ ಮುಖ್ಯಮಂತ್ರಿಯೂ ಆಗಿದ್ದ ಗೌಡರು ಅತ್ಯುತ್ತಮ ಆಡಳಿತಗಾರರೆಂಬ ಹೆಸರು ಪಡೆಯದಿದ್ದರೂ ‘ಇರೋದ್ರಲ್ಲಿ ವಾಸಿ’ ಎಂಬಂತಿದ್ದರು. ಸಕಾಲದಂತಹ ಯೋಜನೆಯ ಯಶಸ್ಸಿನಲ್ಲಿ ಸದಾನಂದಗೌಡರ ಪಾತ್ರವಿತ್ತು. ರೈಲ್ವೇ ಇಲಾಖೆಯ ಒಳಹೊರಗನ್ನು ಅರಿಯುವ ಮುನ್ನವೇ ಅವರ ಖಾತೆಯನ್ನು ಬದಲಿಸಲಾಗಿದೆ. ಕಾನೂನು ಇಲಾಖೆಗೆ ನೇಮಿಸಲಾಗಿದೆ. ಸುರೇಶ್ ಪ್ರಭು ಇವರ ಸ್ಥಾನವನ್ನು ಅಲಂಕರಿಸಿದ್ದಾರೆ. ಒಂದು ರೀತಿಯಲ್ಲಿ ಡಿಮೋಷನ್ ಎಂದೇ ಕರೆಯಬಹುದಾದ ಈ ರೀತಿಯ ಖಾತೆ ಬದಲಾವಣೆ ಆಗಿರುವುದು ಸದಾನಂದ ಗೌಡರಿಗೆ ಮತ್ತು ಡಾ.ಹರ್ಷವರ್ಧನರಿಗೆ. ಹರ್ಷವರ್ಧನರ ವಿಷಯದಲ್ಲಿ ದೆಹಲಿಯ ಚುನಾವಣೆಯನ್ನು ನೆಪವಾಗಿಸಬಹುದಾದರೂ ಸದಾನಂದ ಗೌಡರ ವಿಷಯದಲ್ಲಿ? Ofcourse ಕ್ಲೀನ್ ಹ್ಯಾಂಡ್ ಎಂದೇ ಹೆಸರು ಗಳಿಸಿದ್ದ ಸದಾನಂದ ಗೌಡರ ಮೇಲೆ ಇತ್ತೀಚಿನ ದಿನಗಳಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು. ಚುನಾವಣೆಗೂ ಮುಂಚೆ ಮತ್ತು ಈಗಿನ ಅವರ ಘೋಷಿತ ಆಸ್ತಿಯಲ್ಲಿ ಬಹಳಷ್ಟು ವ್ಯತ್ಯಾಸವಿತ್ತು. ಅದಕ್ಕವರು ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದರಾದರೂ ಕ್ಲೀನ್ ಹ್ಯಾಂಡ್ ಎಂಬ ಪದ ಅರ್ಥ ಕಳೆದುಕೊಳ್ಳಲಾರಂಭಿಸಿತ್ತು. ಭ್ರಷ್ಟಾಚಾರದ ಆರೋಪ ಅವರ ಖಾತೆಯನ್ನು ಕಿತ್ತುಕೊಳ್ಳಲು ಕಾರಣವೆಂದಾದರೆ ಕಾನೂನು ಸಚಿವರನ್ನಾಗಿಯೂ ಮಾಡಬಾರದಿತ್ತಲ್ಲವೇ? ಭ್ರಷ್ಟರಿಗೆ ಮೇಯಲು ಯಾವ ಸಚಿವಾಲಯವಾದರೆ ಏನು? ಅವರ ಮಗನ ವಿಷಯವಾಗಿ ನಡೆದ ಘಟನಾವಳಿಗಳು ಕೂಡ ಸದಾನಂದ ಗೌಡರ ಹೆಸರನ್ನು ಕೆಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವು. ಇವೆಲ್ಲಕ್ಕಿಂತ ಮುಖ್ಯವಾಗಿ ಮಾಧ್ಯಮಗಳಲ್ಲಿ (ಅದರಲ್ಲೂ ರಾಷ್ಟ್ರೀಯ ಮಾಧ್ಯಮಗಳೆನ್ನಿಸಿಕೊಂಡ ಆಂಗ್ಲ ಮಾಧ್ಯಮಗಳಲ್ಲಿ) ಸದಾನಂದಗೌಡರು ನರೇಂದ್ರ ಮೋದಿಯವರ ವೇಗಕ್ಕೆ ತಕ್ಕಂತೆ ಕೆಲಸ ಮಾಡುತ್ತಿಲ್ಲ, ಹಾಗಾಗಿ ಅವರನ್ನು ರೈಲೈ ಖಾತೆಯಿಂದ ತೆಗೆಯಲಾಗಿದೆ ಎಂಬ ಅಭಿಪ್ರಾಯ ರೂಪಿಸುವಲ್ಲಿ ಯಶಸ್ವಿಯಾಗಿವೆ. ಕನ್ನಡಿಗರನೇಕರು ಅಹುದಹುದು ಎಂದು ತಲೆಯಾಡಿಸುತ್ತಿದ್ದಾರೆ! ಮೋದಿ ಬಂದು ಆರು ತಿಂಗಳಾಗಿದೆ ಅಷ್ಟೇ, ಇನ್ನು ಟೈಮ್ ಕೊಡ್ರೀ ಎಂದು ಹೇಳುವವರೇ ಸದಾನಂದ ಗೌಡರು inefficient ಎಂದು ಹೇಳುತ್ತಾರೆ! ಇವರು ಬಂದು ಕೂಡ ಆರು ತಿಂಗಳಾಗಿದೆ ಅಷ್ಟೇ ಅಲ್ಲವೇ? ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕದಲ್ಲಿ ನೂರಾರು ಕೋಟಿ ಮರ ನೆಡಿಸುತ್ತೀನಿ ಎಂದು ಹೇಳಿದ ಗಡ್ಕರಿ ಎಷ್ಟು ಮರ ನೆಡಿಸಿದ್ದಾರೆ? ಉಳಿದ ಸಚಿವರೆಲ್ಲ ಅಮೋಘವೆನ್ನಿಸುವ ಸಾಧನೆಗಳನ್ನು ಮಾಡಿಬಿಟ್ಟಿದ್ದಾರ ಈ ಆರು ತಿಂಗಳಲ್ಲಿ? ಯಾರಿಗೂ ಇಲ್ಲದ ಸಾಧನದ ಮಾಪಕ ಸದಾನಂದ ಗೌಡರಿಗೆ ಮಾತ್ರ ಯಾಕೆ? ಅವರು ಭ್ರಷ್ಟರಾಗಿದ್ದರೆ ಮುಲಾಜೇ ಬೇಡ ಅವರಿಗೆ ಯಾವ ಖಾತೆಯನ್ನೂ ನೀಡದ ಬದ್ಧತೆ ತೋರಿಸಬೇಕು. ಅವರ ಮಗನಿಂದ ಹೆಸರು ಕೆಡಿಸಿಕೊಂಡಿದ್ದೇ ಕಾರಣವಾಗಿದ್ದರೆ ರಾಜನಾಥ ಸಿಂಗರೂ ಡಿಮೋಟ್ ಆಗಬೇಕಿತ್ತಲ್ಲ? ಉತ್ತರ ಭಾರತದವರಿಗೇ ಒಂದು ತಕ್ಕಡಿ ದಕ್ಷಿಣ ಭಾರತದವರಿಗೇ ಒಂದು ತಕ್ಕಡಿ ಇದ್ದರೆ ಹೇಗೆ? ಸದಾನಂದ ಗೌಡ inefficient ಎಂಬುದಕ್ಕಿಂತ ಎಫ್.ಡಿ.ಐ ಆಕರ್ಷಿಸಿ ರೈಲೈಯನ್ನು ಖಾಸಗಿಗೆ ಮಾರಿಬಿಡುವ ‘ಅಭಿವೃದ್ಧಿಯ’ ಮಾದರಿಗೆ ಸದಾನಂದ ಗೌಡರ ಆಡಳಿತದ ವೈಖರಿ ಹೆಚ್ಚು ಸಹಕಾರಿಯಾಗಿರಲಿಲ್ಲವೆಂಬುದು ಅವರ ಡಿಮೋಷನ್ನಿಗೆ ಸೂಕ್ತ ಕಾರಣವಿರಬೇಕು. ಇರಲಿ ಬಿಡಿ, ಕನ್ನಡಿಗರಿಗೆ ದೇಶ ಮೊದಲು, ನಮ್ಮ ಸಂಸದರಿಗೆ ಯಾರು ಅವಮಾನ ಮಾಡಿದರೆ ನಮಗೇನು ಕರ್ನಾಟಕ ಹಿಂದಾದರೂ ದೇಶ ಮುಂದಾಗಬೇಕು!

No comments:

Post a Comment