Oct 18, 2014

ನಂ 1 ಸ್ಥಾನ ಸುಲಭವಾಗಿ ದಕ್ಕುವುದಿಲ್ಲ!

vijayavani kannada daily
ನಂ.1 ಆಗಲು ಹೀಗೆಲ್ಲ ಮಾಡಬೇಕೆ
Dr Ashok K R
ಕಳೆದ ಶುಕ್ರವಾರದ ವಿಜಯವಾಣಿಯ ಮುಖಪುಟದಲ್ಲಿ 'ವಿಜಯವಾಣಿ' ಪತ್ರಿಕೆ ಮೊದಲೆರಡು ಸ್ಥಾನಗಳಲ್ಲಿದ್ದ 'ವಿಜಯ ಕರ್ನಾಟಕ' ಮತ್ತು 'ಪ್ರಜಾವಾಣಿ' ಪತ್ರಿಕೆಗಳನ್ನು ಹಿಂದಿಕ್ಕಿ ಮೊದಲ ಸ್ಥಾನ ತಲುಪಿದೆ ಎಂಬ ಸುದ್ದಿ ಭರ್ತಿ ಎರಡು ಪುಟಗಳ ತುಂಬ ಪ್ರಕಟವಾಗಿದೆ. ಜನವರಿಯಿಂದ ಜೂನ್ ವರೆಗಿನ ಆಡಿಟ್ ಬ್ಯೂರೋ ಆಫ್ ಸರ್ಕುಲೇಷನ್ ಪ್ರಕಾರ ವಿಜಯವಾಣಿ ದಿನಂಪ್ರತಿ 6, 67, 879 ಪ್ರತಿಗಳನ್ನು ಮಾರಾಟ ಮಾಡುತ್ತಿದೆ. ಅಲ್ಪ ಕಾಲಾವಧಿಯಲ್ಲಿಯೇ ವಿಜಯವಾಣಿ ಇಷ್ಟರಮಟ್ಟಿಗೆ ಯಶ ಸಾಧಿಸಿರುವುದು ಪ್ರಶಂಸಾರ್ಹವೇನೋ ಹೌದು. ಆದರೆ ನೈತಿಕತೆಯ ಬಗ್ಗೆ ಪುಂಖಾನುಪುಂಖವಾಗಿ ಬರೆಯುವ ಪತ್ರಿಕೆಗಳು ಮಾರಾಟ ಸಂಖೈ ಹೆಚ್ಚಿಸಲು ಹಿಡಿದಿರುವ ಮಾರ್ಗಗಳನ್ನು ನೋಡಿದರೆ ಬೇಸರವುಂಟಾಗುತ್ತದೆ.
Also Read
ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಭವನ್ನು ಪ್ರಶ್ನಿಸುವರಾರು?
ವಿಜಯ ಸಂಕೇಶ್ವರರದು ವ್ಯಾಪಾರ ವ್ಯವಹಾರದ ಮಟ್ಟಿಗೆ ಕರ್ನಾಟಕದಲ್ಲಿ ದೊಡ್ಡ ಹೆಸರು. ಒಂದು ಲಾರಿಯಿಂದಲೋ ಬಸ್ಸಿನಿಂದಲೋ ಪ್ರಾರಂಭವಾದ ಅವರ ವ್ಯವಹಾರ ಕೊನೆಗೆ ಇಡೀ ಕರ್ನಾಟಕದಲ್ಲಿ ಅದರಲ್ಲೂ ಉತ್ತರಕರ್ನಾಟಕದಲ್ಲಿ ವಿ.ಆರ್.ಎಲ್ ಎಂಬುದು ಮನೆಮಾತಾಗುವಷ್ಟರ ಮಟ್ಟಿಗೆ ಬೆಳೆದಿದೆ. ರಾಜಕಾರಣಿಯೂ ಆದ ವಿಜಯ ಸಂಕೇಶ್ವರರು 'ವಿಜಯ ಕರ್ನಾಟಕ'ವೆಂಬ ಹೊಸ ಪತ್ರಿಕೆ ಶುರು ಮಾಡಿದಾಗ ಇಷ್ಟೊಂದು ಪತ್ರಿಕೆಗಳ ನಡುವೆ ಇದೆಲ್ಲಿ ಬೆಳೆಯುತ್ತೆ ಬಿಡ್ರೀ ಎಂದವರೇ ಅಧಿಕ. ನೋಡನೋಡುತ್ತಲೇ ವಿಜಯ ಕರ್ನಾಟಕ ಅಲ್ಲಿಯವರೆಗೆ ಒಂದನೆಯ ಸ್ಥಾನದಲ್ಲಿದ್ದ ಪ್ರಜಾವಾಣಿಯನ್ನು ಹಿಂದಿಕ್ಕಿ ಸಂಯುಕ್ತ ಕರ್ನಾಟಕ, ಕನ್ನಡ ಪ್ರಭ ಮತ್ತು ಉದಯವಾಣಿಯ ಸರ್ಕುಲೇಷನ್ನನ್ನು ಪಾತಾಳಕ್ಕಿಳಿಸಿತು. ಎಲ್ಲದ್ದಕ್ಕಿಂತ ದೊಡ್ಡ ಹೊಡೆತ ಬಿದ್ದಿದ್ದು ಸ್ಥಳೀಯ ಪತ್ರಿಕೆಗಳಿಗೆ. ರಾಜ್ಯದ ಸುದ್ದಿ ಓದಲೊಂದು, ತಮ್ಮ ಊರಿನ ಸುದ್ದಿ ಓದಲೊಂದು ಪತ್ರಿಕೆ ತರಿಸುತ್ತಿದ್ದವರೆಲ್ಲ ವಿಜಯ ಕರ್ನಾಟಕಕ್ಕೆ ಅಂಟಿಕೊಂಡರು, ಕಾರಣ ಸ್ಥಳೀಯ ಸುದ್ದಿಗಳಿಗೆಂದೇ ವಿಶೇಷವಾಗಿ ಎರಡು ಮೂರು ಕೆಲವೆಡೆ ನಾಲ್ಕು ಪುಟಗಳನ್ನು ಮೀಸಲಿಡುತ್ತಿದ್ದುದು. ಬಹುತೇಕ ಎಲ್ಲಾ ಹೊಸ ಪತ್ರಿಕೆಯವರೂ ಮಾಡುವಂತೆ ಉಚಿತವಾಗಿ ಪ್ರತಿಗಳನ್ನು ಹಂಚಿದರು. ಪೆಟ್ರೋಲ್ ಹಾಕಿಸಿಕೊಳ್ಳಿ, ರೇಷನ್ ತೆಗೆದುಕೊಳ್ಳಿ ಒಂದು ವಿಜಯ ಕರ್ನಾಟಕ ಖಾಯಂ ಆಗಿ ಸಿಗುತ್ತಿತ್ತು! ಇವೆಲ್ಲದರ ಜೊತೆಗೆ ಗೇಮ್ ಚೇಂಜರ್ ಆಗಿದ್ದು ವಿಜಯ ಕರ್ನಾಟಕ ಪ್ರಾರಂಭಿಸಿದ ದರ ಸಮರ. ಪತ್ರಿಕೆಯ ದರಗಳನ್ನು ಏಕಾಏಕಿ ಇಳಿಸಿಬಿಟ್ಟರು. ಉಳಿದ ಪತ್ರಿಕೆಗಳು ಏನಾಗುತ್ತಿದೆ ಎಂದು ಯೋಚಿಸುವಷ್ಟರಲ್ಲಿ ಬಹುತೇಕ ಜನರು ವಿಜಯ ಕರ್ನಾಟಕಕ್ಕೆ ಬದಲಿಸಿಕೊಂಡುಬಿಟ್ಟಿದ್ದರು (ನಮ್ಮ ಮನೆಯಲ್ಲೂ ವಿಜಯ ಕರ್ನಾಟಕವನ್ನು ತರಿಸಲು ಪ್ರಾರಂಭಿಸಿದ್ದರಾದರೂ ಪ್ರಜಾವಾಣಿಯಲ್ಲಿ ಬರುತ್ತಿದ್ದ ಅತ್ಯುತ್ತಮವೆನ್ನಿಸುವ ಅಂಕಣಗಳು ಮತ್ತು ಚಿಕ್ಕಂದಿನಿಂದ ಓದುವ ಅಭ್ಯಾಸ ಬೆಳೆಸಿದ ಅದರ ಶೈಲಿಯಿಂದಾಗಿ ಒಂದಷ್ಟು ಜಗಳವಾಡಿ ಮತ್ತೆ ಪ್ರಜಾವಾಣಿ ತರಿಸುವಂತೆ ಮಾಡಿದ್ದೆ!). ಉಳಿದ ಪತ್ರಿಕೆಗಳೂ ನಂತರದ ದಿನಗಳಲ್ಲಿ ದರ ಇಳಿಸಿ ಸ್ಥಳೀಯ ವಿಷಯಗಳಿಗೆ ಆದ್ಯತೆ ನೀಡಲಾರಂಭಿಸಿದವು. ಒಂದಷ್ಟು ಚೇತರಿಸಿಕೊಂಡಿದ್ದೆಂದರೆ ಪ್ರಜಾವಾಣಿ ಮಾತ್ರ.
ವಿಜಯ ಕರ್ನಾಟಕ ಉತ್ತುಂಗದಲ್ಲಿದ್ದಾಗ ಅದನ್ನು ಟೈಮ್ಸ್ ಗ್ರೂಪಿಗೆ ಮಾರಾಟಮಾಡುವ ನಿರ್ಧಾರ ಮಾಡಿಬಿಡುತ್ತಾರೆ ವಿಜಯ ಸಂಕೇಶ್ವರರು! ವಿಶ್ವೇಶ್ವರ ಭಟ್ಟರು ಮತ್ತವರ ಟೀಮನ್ನು ಪತ್ರಿಕೆಯಿಂದ ಹೊರಕಳುಹಿಸಿದ ನಂತರ ಪತ್ರಿಕೆಯ ಅಂಕಣಗಳು ಒಂದಷ್ಟು ಓದುವಂತಿವೆ. ಆದರೆ ಇದೇ ಮಾತನ್ನು ವಿಜಯ ಕರ್ನಾಟಕದ ಪುರವಣಿಗಳ ವಿಷಯಗಳಿಗೆ ಸಂಬಂಧಪಟ್ಟಂತೆ ಹೇಳಲಾಗುವುದಿಲ್ಲ. ಪ್ರಜಾವಾಣಿಯ ಪುರವಣಿಗಳಲ್ಲಿ ಕಾಣಸಿಗುವ ವೈವಿಧ್ಯತೆ, ಅಗಾಧತೆ ವಿಜಯ ಕರ್ನಾಟಕದಲ್ಲಿಲ್ಲ. ಟೈಮ್ಸ್ ಗ್ರೂಪಿನ ಪ್ರಭಾವದಿಂದಲೋ ಏನೋ ವಾರದ ಎಲ್ಲಾ ದಿನಗಳ ಲವಲವಿಕೆಯಲ್ಲೂ ಮಸಾಲೆ ಭರಿತ ಸಿನಿಮಾ ಸುದ್ದಿಗಳೇ ಹೆಚ್ಚು ಸದ್ದು ಮಾಡುತ್ತದೆ. ವಿಜಯ ಕರ್ನಾಟಕ ನಂ1 ಸ್ಥಾನಕ್ಕೇರುವಲ್ಲಿ ವಿಶ್ವೇಶ್ವರ ಭಟ್ಟರ ಪಾತ್ರ ಅಧಿಕ ಎಂಬುದನ್ನು ಮರೆಯುವಂತಿಲ್ಲ. ಮಾರುವ ಸಮಯದಲ್ಲಿ ನಡೆದ ಒಪ್ಪಂದದ ಪ್ರಕಾರ ವಿಜಯ ಸಂಕೇಶ್ವರರು ಒಂದಷ್ಟು ವರುಷಗಳ ಕಾಲ ಹೊಸ ಪತ್ರಿಕೆ ಸ್ಥಾಪಿಸುವ ಹಾಗಿರಲಿಲ್ಲವಂತೆ. ಒಪ್ಪಂದದ ಅವಧಿ ಮುಗಿಯುತ್ತಿದ್ದಂತೆ 'ವಿಜಯವಾಣಿ' ಪ್ರಾರಂಭಿಸಲು ನಿರ್ಧರಿಸಿದರು. ವಿಜಯ ಕರ್ನಾಟಕವನ್ನು ಅವರು ಬೆಳೆಸಿದ್ದ ರೀತಿಯನ್ನು ಗಮನಿಸಿದ್ದವರು ಈಗವರನ್ನು ಕಡೆಗಣಿಸಲು ಸಾಧ್ಯವಿರಲಿಲ್ಲ. ಕೆಲವೇ ವರುಷಗಳಲ್ಲಿ ವಿಜಯವಾಣಿಯೂ ನಂ 1 ಸ್ಥಾನಕ್ಕೇರಿದೆ. ಆದರೆ?
Related Article
ಪ್ರಜಾಪ್ರಭುತ್ವದ ಆರೋಗ್ಯದ ಮಾಪಕ ಪತ್ರಿಕೋದ್ಯಮ
ಈ ಬಾರಿಯೂ ಉಚಿತ ಪ್ರತಿ ಹಂಚಿಕೆ ನಡೆಯಿತು, ದರ ಸಮರ ಹಿಂದಿನಷ್ಟು ತೀವ್ರವಾಗಿ ನಡೆಯಲಿಲ್ಲ. ಅಬ್ಬಬ್ಬಾ ಎಂದರೆ ಉಳಿದ ಪತ್ರಿಕೆಗಳಿಂತ ಐವತ್ತು ಪೈಸೆ ಒಂದು ರುಪಾಯಿ ಕಡಿಮೆಯಿರುತ್ತಿತ್ತು. ದರ ಕಡಿತದ ಲಾಭ ಓದುಗನಿಗೆ ನೇರವಾಗಿ ಲಭ್ಯವಾಗುತ್ತದೆ, ಉಚಿತ ಪ್ರತಿ ಹಂಚದಿದ್ದರೆ ಹೊಸ ಓದುಗರಿಗೆ ಪತ್ರಿಕೆ ಯಾವ ರೀತಿ ಇದೆ ಎಂಬುದೂ ತಿಳಿಯುವುದಿಲ್ಲ. ಇವೆಲ್ಲವೂ ಸಕರಾತ್ಮಕವಾದ ಹೆಜ್ಜೆಗಳೆಂದೇ ಪರಿಗಣಿಸಬಹುದು. ಅವಿಷ್ಟೇ ಮಾಡಿ ವಿಜಯವಾಣಿ ನಂ 1 ಸ್ಥಾನ ಪಡೆದುಕೊಂಡಿದ್ದರೆ ಈ ಲೇಖನದ ಅವಶ್ಯಕತೆಯೇ ಇರುತ್ತಿರಲಿಲ್ಲ. ಬಂಡಲುಗಟ್ಟಲೇ ಪ್ರತಿಗಳು ಪ್ರೆಸ್ಸಿನಲ್ಲಿ ಪ್ರಕಟವಾಗಿ ಹೆಸರಿಗೆ ಮಾರಟವಾದ ಲೆಕ್ಕಕ್ಕೆ ಸೇರಿ ನೇರವಾಗಿ ರದ್ದಿ ಅಂಗಡಿಗೆ ಹೋಗುತ್ತದೆ ಎಂಬುದೊಂದು ಆರೋಪವಿದೆ ವಿಜಯವಾಣಿಯ ಮೇಲೆ. ಅಬ್ಬಬ್ಬಾ ಎಂದರೆ ಐವತ್ತು ಸಾವಿರದಿಂದ ಒಂದು ಲಕ್ಷದವರೆಗಿನ ಪ್ರತಿಗಳನ್ನು ಈ ರೀತಿ ಸಾಗಿಸಿರಬಹುದು ಎಂದು ಸುಮ್ಮನಾಗಬಹುದು. ಪತ್ರಿಕೆ ಹಾಕುವ ಹುಡುಗರನ್ನು ಬುಕ್ ಮಾಡಿ (ಹೆಚ್ಚು ಕಮಿಷನ್ ಕೊಡುವುದು ನ್ಯಾಯಯುತವಾದದ್ದು, ಆದರೆ ಬುಕ್ ಮಾಡುವುದಲ್ಲ) ಬೇರೆ ಪತ್ರಿಕೆಗಳನ್ನು ತರಿಸಿಕೊಳ್ಳುತ್ತಿದ್ದ ಮನೆಗಳಿಗೆ ಒಂದಷ್ಟು ದಿನಗಳವರೆಗೆ ವಿಜಯವಾಣಿಯನ್ನು ಹಾಕುವಂತೆ ಮಾಡುವುದು, ಮನೆಯವರು ಕೇಳಿದರೆ ಆ ಪತ್ರಿಕೆ ಸರಿಯಾಗಿ ಬರುತ್ತಿಲ್ಲ ಎಂದು ಉತ್ತರ ಕೊಡಿಸುವುದು. ಓದುಗರಿಗೇನು ಗೊತ್ತಿರುತ್ತೆ. ನೆಟ್ಟಗೆ ಬರುವ ಪೇಪರ್ ಹಾಕಪ್ಪ ಎಂದೇ ಹೇಳುತ್ತಾರೆ. ಇವೆಲ್ಲಕ್ಕಿಂತಲೂ ಅನೈತಿಕ ಮಾರ್ಗವೆಂದರೆ ಮುಂಜಾನೆಯೇ ಅಂಗಡಿಗಳಿಗೆ ವಿಜಯವಾಣಿಯ ಬಳಗದವರು ಹೋಗಿ ಅಂಗಡಿಯಲ್ಲಿರುವ ಅಷ್ಟೂ ದಿನಪತ್ರಿಕೆಗಳನ್ನು (ಹೆಚ್ಚಾಗಿ ವಿಜಯ ಕರ್ನಾಟಕ ಮತ್ತು ಪ್ರಜಾವಾಣಿ) ಖರೀದಿಸಿಬಿಡುವುದು. ಪತ್ರಿಕೆ ಕೊಳ್ಳಲು ಬರುವವರಿಗೆ ಕಾಣಿಸುವುದೊಂದೇ ವಿಜಯವಾಣಿ! ವಿಧಿಇಲ್ಲದೇ ತೆಗೆದುಕೊಳ್ಳಲೇಬೇಕು! ಒಂದು ವಾರ ಹತ್ತು ದಿನಗಳವರೆಗೆ ಈ 'ಸಗಟು ಖರೀದಿ' ನಡೆಯುತ್ತದೆ. ಖರೀದಿ ನಿಂತ ನಂತರ ಹತ್ತರಲ್ಲಿ ಮೂರು - ನಾಲ್ಕು ಜನ ಇತರೆ ಪತ್ರಿಕೆಗಳಿಂದ ವಿಜಯವಾಣಿಗೆ ಶಿಫ್ಟ್ ಆದರೆ ನಂ.1 ಆಗುವುದು ಸಾಧ್ಯವಾಗದೇ ಇರುತ್ತದೆಯೇ!
ವಿಜಯಸಂಕೇಶ್ವರರಿಗೆ ಮತ್ತವರ ಬಳಗಕ್ಕೆ ಪತ್ರಿಕೆಯೊಂದನ್ನು ಗೆಲ್ಲಿಸುವುದಕ್ಕೆ ಇಂತಹ ಮಾರ್ಗಗಳ ಅವಶ್ಯಕತೆಯಿತ್ತೆ? ವಿ.ಆರ್.ಎಲ್ ಸಮೂಹದ ಬೆಂಬಲದೊಂದಿಗೆ ದೂರದೂರದ ಹಳ್ಳಿಗಳನ್ನೂ ಶೀಘ್ರವಾಗಿ ತಲುಪಿದ್ದರೆ ಸಾಕಿತ್ತು ಪತ್ರಿಕೆ ನಂ.1 ಸ್ಥಾನಕ್ಕೇರುವುದಕ್ಕೆ. ವಿಜಯವಾಣಿ ಬಳಗದ ನೈತಿಕ ಶ್ರಮವೆಲ್ಲ ಈ ಅನೈತಿಕ ಮಾರ್ಗಗಳ ಮುಂದೆ ಮಸುಕಾಗಿಹೋಗಬೇಕಿತ್ತೇ?
ಹಿಂಗ್ಯಾಕೆ?: ಮತ್ತೊಂದು ವಿಷಯ, ಆರು ಕೋಟಿ ಜನಸಂಖೈಯ ಕರ್ನಾಟಕದಲ್ಲಿ ವಿಜಯವಾಣಿಯಲ್ಲಿ ಪ್ರಕಟವಾಗಿರುವ ಆಡಿಟ್ ಬ್ಯರೂ ಆಫ್ ಸರ್ಕುಲೇಷನ್ ಪ್ರಕಾರ ಪ್ರಮುಖ ಆರು ಪತ್ರಿಕೆಗಳನ್ನೆಲ್ಲಾ ಒಟ್ಟಾಗಿ ಸೇರಿಸಿದರೂ ಕನ್ನಡ ಪತ್ರಿಕೆಗಳನ್ನು ಖರೀದಿಸುವವರ ಸಂಖೈ 25 ಲಕ್ಷಕ್ಕಿಂತ ಕಡಿಮೆ! ಒಂದು ಪತ್ರಿಕೆಯನ್ನು ನಾಲ್ಕು ಜನರು ಓದುತ್ತಾರೆ ಎಂಬಂತೆ ಲೆಕ್ಕ ಹಾಕಿದರೂ ಕನ್ನಡ ಪತ್ರಿಕೆಗಳನ್ನು ಓದುವವರ ಸಂಖೈ ಒಂದು ಕೋಟಿ ದಾಟಲು ಏದುಸಿರುಬಿಡುತ್ತದೆ!

No comments:

Post a Comment