Oct 3, 2014

ಕಮರಿದ ಕನಸುಗಳ ಕಲ್ಲೂರಿ

Kalloori movie review
ಕಲ್ಲೂರಿ
ಡಾ ಅಶೋಕ್ ಕೆ ಆರ್.
ದೊಡ್ಡ ಮರವೊಂದು ಬಿದ್ದಾಗ ಇಂತಹ ಚಿಕ್ಕ ಪುಟ್ಟ ಘಟನೆಗಳು ಸಹಜ ಎಂದು ಇಂದಿರಾ ಗಾಂಧಿಯ ಹತ್ಯೆಯ ನಂತರ ನಡೆದ ಸಿಖ್ ಹತ್ಯಾಕಾಂಡದ ಬಗ್ಗೆ ಹೇಳಿದ್ದು ರಾಜೀವ್ ಗಾಂಧಿ. ಕ್ರಿಯೆಗೊಂದು ಪ್ರತಿಕ್ರಿಯೆ ಸಹಜ ಎಂಬಭಿಪ್ರಾಯ ಕೇಳಿಬಂದಿದ್ದು ಗೋದ್ರೋತ್ತರದ ದಿನಗಳಲ್ಲಿ ನಡೆದ ಮುಸ್ಲಿಮರನ್ನು ಗುರಿಮಾಡಿಕೊಂಡ ಗಲಭೆಗಳಲ್ಲಿ. ಪ್ರತಿಯೊಂದು ಧಾರ್ಮಿಕ ಅಥವಾ ರಾಜಕೀಯ ಕಾರಣದ ಗಲಭೆಗಳಲ್ಲಿ ‘ಗಲಭೆ ಶುರು ಮಾಡಿದ್ದು ನಾವಲ್ಲ, ನಮ್ಮದೇನಿದ್ದರೂ ಅವರ ಕ್ರಿಯೆಗೆ ಪ್ರತಿಕ್ರಿಯೆ ಅಷ್ಟೇ’ ಎಂಬರ್ಥದ ಸಮರ್ಥನೆಗಳಿರುತ್ತವೆ. ಆದರೆ ಗಲಭೆಯ ಕಾವಿನಿಂದ ಸಾಯುವವರು ಬಹಳಷ್ಟು ಪ್ರಕರಣಗಳಲ್ಲಿ ಗಲಭೆಗೆ ಸಂಬಂಧಪಡದವರಾಗಿರುತ್ತಾರೆ. ವಿನಾಕಾರಣವಾಗಿ ತಮ್ಮದೇನೂ ತಪ್ಪಿಲ್ಲದೆ ಸತ್ತೇ ಹೋದ ಮುಗ್ದರ, ಅಮಾಯಕರ ಕಮರಿದ ಕನಸುಗಳ ಬಗೆಗಿನ ಚಿತ್ರ ಬಾಲಾಜಿ ಶಕ್ತಿವೇಲನ್ ನಿರ್ದೇಶನದ “ಕಲ್ಲೂರಿ”.
Also readಮರೀನಾ ಎಂಬ ದೃಶ್ಯಕಾವ್ಯ

ಚಿಕ್ಕ ಊರಿನ ಒಂದು ಪುಟ್ಟ ಸರಕಾರಿ ಕಲಾ ಕಾಲೇಜು. ಶಾಲೆಯನ್ನು ಜೊತೆಯಲ್ಲೇ ಮುಗಿಸಿದ ಒಂದು ಗುಂಪು ಕಾಲೇಜಿಗೂ ಜೊತೆಯಾಗೇ ಸೇರುತ್ತದೆ. ಸೀರಿಯಸ್ ಬರಹಗಾರ್ತಿ, ಕಾಮಿಡಿಗೊಬ್ಬ, ನರಪೇತಲಳಂತೆ ಕಂಡರೂ ತಿನ್ನುತ್ತಲೇ ನಗಿಸುವವಳೊಬ್ಬಳು, ಮತ್ತೆ ಚಿತ್ರದ ನಾಯಕನ ಸ್ಥಾನದಲ್ಲೊಬ್ಬ ಅಥ್ಲೀಟ್ ಮುತ್ತು (ಅಖಿಲ್), ಇವರೊಡನೆ ಇನ್ನೊಂದು ನಾಲ್ಕು ಜನ. ಮೇಕಪ್ಪಿಲ್ಲ, ‘ನಟನೆ’ಯಿಲ್ಲ, ಅತಿ ಎನ್ನಿಸುವಷ್ಟು ಹೀರೋಯಿಸಮ್ಮೂ ಇಲ್ಲ. ಮೊದಮೊದಲು ಈ ಗುಂಪಿನ ತಿರಸ್ಕಾರಕ್ಕೀಡಾಗಿ, ಅಸೂಯೆಗೀಡಾಗುವ ತಮನ್ನಾ ಚಿತ್ರದ ನಾಯಕಿ. ಬೆಂಗಳೂರಿನಿಂದ ಈ ಪುಟ್ಟ ಊರಿನ ಕಾಲೇಜಿಗೆ ಕೆಲವು ದಿನಗಳ ಮಟ್ಟಿಗೆಂದು ಬಂದಿರುತ್ತಾಳೆ ತಮನ್ನಾ. ದೆಹಲಿಯ ಬಿರ್ಲಾ ಕಾಲೇಜಿನಲ್ಲಿ ಸೀಟು ಸಿಕ್ಕಿದ ನಂತರ ಈ ಸರ್ಕಾರಿ ಕಾಲೇಜನ್ನು ತೊರೆದು ಪ್ರತಿಷ್ಟಿತ ಬಿರ್ಲಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ ತದನಂತರ ಐಎಎಸ್ ಮಾಡಬೇಕೆಂಬುದು ಅವಳ ಕನಸ್ಸು. ಯಾರೊಡನೆಯೂ ಮಾತನಾಡದ ಕೊನೆಗೆ ಒಂದು ನಗುವನ್ನೂ ಹೊರಸೂಸದ ಆಕೆಗೆ ಕೊಬ್ಬು ಹೆಚ್ಚಾಗಿದೆಯೇ ಹೊರತು ಮತ್ತೇನಲ್ಲ ಎಂಬುದು ಗೆಳೆಯರ ಬಳಗದ ತೀರ್ಮಾನ.
ಕೊನೆಗೊಂದು ದಿನ ಈ ಗೆಳೆಯರ ಬಳಗ ಸೀನಿಯರ್ಸಿನ ಕಪಿಮುಷ್ಟಿಯಿಂದ ತಮನ್ನಾಳನ್ನು ಕಾಪಾಡುವುದರೊಂದಿಗೆ ಗೆಳೆಯರ ಬಳಗಕ್ಕೆ ಅವಳೂ ಸೇರ್ಪಡೆಯಾಗುತ್ತಾಳೆ. ಅವಳ ಸಪ್ಪೆ ವರ್ತನೆಗೆ ಕಾಲೇಜು ಸೇರುವ ಕೆಲವು ದಿನಗಳ ಮೊದಲಷ್ಟೇ ಅವಳ ತಾಯಿ ಅಪಘಾತವೊಂದರಲ್ಲಿ ಮರಣಹೊಂದಿದ್ದು ಕಾರಣ ಎಂಬುದು ತಿಳಿದ ನಂತರ ಗೆಳೆಯರ ಬಳಗಕ್ಕೆ ಅವಳ ಮೇಲಿನ ಪ್ರೀತಿ ಮತ್ತಷ್ಟು ಹೆಚ್ಚುತ್ತದೆ. ಇವೆಲ್ಲದರ ಮಧ್ಯೆ ಮುತ್ತುಗೆ ನಾಯಕಿಯ ಮೇಲೆ ಪ್ರೇಮವುಂಟಾಗುತ್ತದೆ. ಹೇಳಿಕೊಳ್ಳಲು ಭಯ, ಜೊತೆಗೆ ಬರಹಗಾರ್ತಿ ಗೆಳತಿ ಸ್ನೇಹದ ಮಧ್ಯೆ ಲವ್ವೂ ಗಿವ್ವೂ ಎಲ್ಲಾ ಬರಬಾರದು ಎಂದು ಆಗಾಗ್ಗೆ ಹೇಳುತ್ತಿರುತ್ತಾಳೆ. ಅದೆಲ್ಲವೂ ನೆನಪಾಗಿ ಪ್ರೇಮ ನಿವೇದನೆ ತಡವಾಗುತ್ತಲೇ ಸಾಗುತ್ತದೆ. ಮುತ್ತುವಿನ ಮನೆಯ ಸಂಕಷ್ಟ, ಅಣ್ಣ ಓದಲಿ ಎಂದು ಪುಟ್ಟ ತಂಗಿಯೂ ಜಲ್ಲಿ ಒಡೆಯುವ ಕೆಲಸಕ್ಕೆ ಹೋಗುವುದು ನಾಯಕಿಯ ಮನಕಲಕುತ್ತದೆ. ಗೆಳೆಯನಿಗಾಗಿ ಒಂದು ಹೊಸ ಶೂ ಕೊಂಡುತಂದು ನಿನ್ನ ಮನೆಯವರು ಪಡುತ್ತಿರುವ ಕಷ್ಟಕ್ಕಾದರೂ ನೀನು ಅಥ್ಲೆಟಿಕ್ಸಿನಲ್ಲಿ ಗೆಲುವು ಕಾಣುತ್ತಾ ಒಳ್ಳೆಯ ಹೆಸರು ಪಡೆಯಬೇಕೆಂದು ತಿಳಿಸುತ್ತಾಳೆ. ಇಬ್ಬರ ನಡುವೆಯೂ ಪ್ರೇಮಾಂಕುರವಾಗುತ್ತಲೇ ಸಾಗಿದರೂ ಅವರದನ್ನು ಒಬ್ಬರಿಗೊಬ್ಬರು ಹೇಳಿಕೊಳ್ಳುವುದೇ ಇಲ್ಲ. ಬಹುಶಃ ಈ ಕಾರಣಕ್ಕಾಗಿಯೇ ಇಡೀ ಚಿತ್ರ ಗೆಳೆತನದ ಚಿತ್ರವಾಗಿ ಮೂಡಿಬಂದಿದೆ.
Related Articleಮಣ್ಣಿನ ಸಿನಿಮಾ ಮತ್ತು ಕಂಪ್ಯೂಟರ್ ಪ್ರಿಂಟ್ ಔಟ್
ಕಾಲೇಜು ಸಿನಿಮಾ ಎಂದರೆ ಒಂದು ಅತ್ಯಾಧುನಿಕ ಪಾಶ್ ಕಾಲೇಜು, ಬಣ್ಣಬಣ್ಣದ ದುಬಾರಿ ಉಡುಪುಗಳು, ಹೊಚ್ಚ ಹೊಸ ಬೈಕುಗಳು ಎಂಬ ಮಾಮೂಲತೆಯನ್ನು ಮೀರಿದ ಸಿನಿಮಾ ಇದು. ಓದುವುದನ್ನು ಬಿಟ್ಟು ಮತ್ತೆಲ್ಲವನ್ನೂ ತೋರಿಸುವ, ಅದೇ ಮನೋರಂಜನೆಯೆಂದು ಬಿಂಬಿಸುವ ಸಿನಿಮಾಗಳ ನಡುವೆ ಓದು – ಬರಹ – ಓಟಗಳ ನಡುವೆ ನಿಜವಾದ ಮನೋರಂಜನೆಯಿದೆಯೆಂದು ತಿಳಿಸಿಕೊಡುವ “ಕಲ್ಲೂರಿ” ಅತ್ಯುತ್ತಮ ಕಾಲೇಜು ಸಿನಿಮಾಗಳಲ್ಲಿ ಒಂದು. ಚಿತ್ರದ ಮೊದಲ ಭಾಗದಲ್ಲೇ ರಾಜಕೀಯ ಪ್ರೇರಿತ ಬಂದ್‍ನ ಬಗೆಗಗೊಂದು ದೃಶ್ಯವಿದೆ. ನಾಯಕಿಗೆ ಈ ಗೆಳೆಯರ ಬಳಗದ ಮೇಲಿನ ನಂಬುಗೆ, ಪ್ರೀತಿ ಮತ್ತಷ್ಟು ಹೆಚ್ಚಿಸುವಂತಹ ಘಟನೆಯಿರುವ ದೃಶ್ಯವದು.

ಎಲ್ಲವೂ ನವಿರಾಗಿ ಸಾಗುತ್ತ ಇನ್ನೇನು ನಮ್ಮ ನಾಯಕ ನಾಯಕಿ ಒಬ್ಬರಿಗೊಬ್ಬರು ಪ್ರೇಮ ನಿವೇದನೆ ಮಾಡಿಕೊಂಡೇ ಬಿಡುತ್ತಾರೆ ಎಂದು ಪ್ರೇಕ್ಷಕರು ಕಾಯುತ್ತಾ ಕುಳಿತಾಗ ಬೆಚ್ಚಿ ಬೀಳಿಸುತ್ತಾರೆ ನಿರ್ದೇಶಕರು. ಸ್ಟಡಿ ಟೂರಿಗೆ ಆಂಧ್ರಕ್ಕೆ ಹೋಗಿರುತ್ತಾರೆ. ವಾಪಸ್ಸಾಗುವಾಗ ಅಲ್ಲಿನ ರಾಜಕೀಯ ಪರಿಸ್ಥಿತಿ ವಿಷಮವಾಗಿ ರಾಜಕೀಯ ಪಕ್ಷವೊಂದರ ದೊಡ್ಡ ಗುಂಪು ಇವರ ಬಸ್ಸನ್ನು ಅಡ್ಡಗಟ್ಟಿ ಹೊಡೆದು ಬಡಿದು ಬಸ್ಸಿಗೆ ಬೆಂಕಿ ಇಡುತ್ತಾರೆ, ಎಲ್ಲರೂ ತಪ್ಪಿಸಿಕೊಳ್ಳುವಲ್ಲಿ ಯಶ ಕಾಣುತ್ತಾರಾದರೂ ನಾಯಕಿ, ಬರಹಗಾರ್ತಿ ಮತ್ತು ತಿಂಡಿಪೋತಿ ಸುಟ್ಟು ಕರಕಲಾಗುತ್ತಾರೆ. ಈ ಕೊನೆಯ ಬಸ್ ಸುಟ್ಟ ಘಟನೆ ನೈಜವಾಗಿಯೂ ನಡೆದಿದ್ದು ಧರ್ಮಪುರಿಯಲ್ಲಿ. ಮೂರು ಜನ ವಿದ್ಯಾರ್ಥಿನಿಯರು ಮೃತಪಟ್ಟಿದ್ದ ಆ ಪ್ರಕರಣ ನಡೆದಿದ್ದು ಜಯಲಲಿತಾಗೆ ಪ್ರಕರಣವೊಂದರಲ್ಲಿ ಒಂದು ವರುಷದ ಜೈಲು ಶಿಕ್ಷೆಯಾದಾಗ. ಕ್ರಿಯೆಗೊಂದು ಪ್ರತಿಕ್ರಿಯೆ ಸಹಜ ಬಿಡ್ರಿ ಎಂದು ರಾಜಕೀಯ ಪ್ರೇರಿತ ಹತ್ಯೆಗಳ ಬಗ್ಗೆ ಉಡಾಫೆಯಿಂದ ಮಾತನಾಡುವವರೆಲ್ಲರೂ ಒಮ್ಮೆ ‘ಕಲ್ಲೂರಿ’ ಚಿತ್ರವನ್ನು ನೋಡಬೇಕು. ಚಿತ್ರ ನೋಡಿದ ನಂತರವೂ ಕ್ರಿಯೆಗೆ ಪ್ರತಿಕ್ರಿಯೆ ಸಹಜ ಎಂಬ ನ್ಯೂಟನ್ ನಿಯಮವನ್ನು ಹತ್ಯೆಗಳಿಗೂ ಅನ್ವಯಿಸುವುದನ್ನು ಬಿಡದಿದ್ದರೆ ಅಂತವರ ಮನದಲ್ಲಿ ಬೃಹತ್ ಕಲ್ಲೇ ತಳವೂರಿದೆ ಎಂಬ ನಿರ್ಧಾರಕ್ಕೆ ಬರಬಹುದು!
(ಚಿತ್ರ ಯೂಟ್ಯೂಬಿನಲ್ಲಿ ಲಭ್ಯವಿದೆ)
(ಚಿತ್ರದ ಬಗ್ಗೆ ತಿಳಿಸಿದ ದಯಾನಂದ ಟಿ.ಕೆರವರಿಗೆ ಧನ್ಯವಾದ)

No comments:

Post a Comment