Aug 21, 2011

ಮಣ್ಣಿನ ಸಿನಿಮಾ ಮತ್ತು ಕಂಪ್ಯೂಟರ್ ಪ್ರಿಂಟ್ ಔಟ್.


-->
ಮಾನ್ಯ ಮುನಿರತ್ನರವರಿಗೆ,
ಶುಭಾಷಯಗಳು, karnataka film producers associationನ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಕ್ಕೆ. ಅಧ್ಯಕ್ಷರಾದ ಸಂತಸದಲ್ಲಿ ನೀವು ಉದುರಿಸಿದ ಅಣಿಮುತ್ತುಗಳನ್ನು ಪ್ರಜಾವಾಣಿಯ ಸಿನಿಮಾ ಪುರವಣಿಯಲ್ಲಿ ಕಂಡು ಯಾವ ಭಾವನೆಯನ್ನು ವ್ಯಕ್ತಪಡಿಸಬೇಕೆಂಬುದು ತಿಳಿಯದೆ ಗೊಂದಲವೇರ್ಪಟ್ಟಿದೆ! ‘ಮೂರು ಕೋಟಿಯವರೆಗಷ್ಟೇ ಮಾರ್ಕೆಟ್ ಇರುವ ಗಣೇಶನಂತಹ ನಟ ಎರಡು ಕೋಟಿ ಸಂಭಾವನೆ ಕೇಳುತ್ತಾನೆ, ಅವನೆಗಿಂತ ಹೆಚ್ಚು ಮಾರ್ಕೆಟ್ ಇರುವ ಪುನೀತ್ ನಷ್ಟೇ ದುಡ್ಡು ಕೇಳುತ್ತಾನೆ, ಇದು ತಪ್ಪು. ಇಂಥದು ನಡೆಯಬಾರದು; ಮೊದಲಿವನ್ನು ಸರಿಪಡಿಸಬೇಕು’ ಎಂದು ಆದೇಶ ನೀಡಿದ್ದೀರಿ. ಯಾರು ಸರಿಪಡಿಸಬೇಕೆಂಬುದನ್ನೂ ತಿಳಿಸಿದ್ದರೆ ಅನುಕೂಲವಾಗುತ್ತಿತ್ತು, ಇರಲಿ.
          ಸ್ಟಾರ್ ಗಳನ್ನೇ ಹಾಕಿಕೊಂಡು ಚಿತ್ರ ತೆಗೆಯುವ ಹಪಾಹಪಿ ಯಾಕೆ? ಮುಂಗಾರು ಮಳೆ ಚಿತ್ರ ಬಂದಾಗ ಗಣೇಶ್ ಇನ್ನೂ ಸ್ಟಾರ್ ಆಗಿರಲಿಲ್ಲ, ಕೋಟಿ ಸಂಭಾವನೆಯೂ ಇರಲಿಲ್ಲ. ಆ ಚಿತ್ರದ ದಿಗ್ದರ್ಶಕ ಯೋಗರಾಜ್ ಭಟ್ ತನ್ನ ಮುಂದಿನ ಚಿತ್ರದಲ್ಲೂ ಗಣೇಶನನ್ನೇ ಹಾಕಿಕೊಂಡರಾದರೂ ನಂತರ ಮತ್ತೆ ಸ್ಟಾರ್ ಗಳಲ್ಲದವರ ಜೊತೆ ಚಿತ್ರ ಮಾಡಿ ಗೆದ್ದರು. ಸ್ಟಾರ್ ಗಣೇಶನ ಚಿತ್ರಗಳೊಂದಷ್ಟು ಸೋತಿದ್ದೂ ಆಯಿತು. ಚಿತ್ರದ ಸೋಲು ಗೆಲುವಿನ ಮಾರ್ಕೆಟ್ಟಿನ ಬಗ್ಗೆ ನಿಮ್ಮ ಅಭಿಪ್ರಾಯವೇ ತಪ್ಪಾಗಿದೆ. ಸಿನಿಮಾ ನಿರ್ದೇಶಕನ ಮಾಧ್ಯಮ ಎಂಬುದನ್ನು ನೀವು ಉದ್ದಿಶ್ಯಪೂರ್ವಕವಾಗಿ ಮರೆಯುತ್ತೀರಾ?
          ಮೊದಲ ಗೆಲುವು ಸಿಗುವವರೆಗೆ ಯಾರೂ ಸ್ಟಾರ್ ಗಳಾಗಿರುವುದಿಲ್ಲ. ನೀವು ಪ್ರಸ್ತಾಪಿಸಿದ ಪುನೀತ್, ಗಣೇಶ್ ಇರಬಹುದು, ಅಥವಾ ನಿಮ್ಮ ರೀಮೇಕ್ ಚಿತ್ತಗಳಲ್ಲಿ ನಟಿಸುವ ಕನ್ನಡದ ಡೈನಮಿಕ್ ನಿರ್ದೇಶಕ [ಸುನಿಲ್ ಕುಮಾರ್ ದೇಸಾಯಿಯವರು ಸಂದರ್ಶನವೊಂದರಲ್ಲಿ ಹೇಳಿದಂತೆ] ಮತ್ತು ಸಾಧಾರಣ ನಟ ಉಪೇಂದ್ರ ಇರಬಹುದು – ಮೊದಲ ಗೆಲುವಿಗೆ ಮುಂಚೆ ನಟರಷ್ಟೇ ಹೊರತು ಸ್ಟಾರ್ ಗಳಲ್ಲ. ಅವರ ಮೊದಲ ಗೆಲುವು ಬಂದಿದ್ದು ಕಥೆಗಳಿಂದ, ಉತ್ತಮ ನಿರ್ದೇಶನದ ಚಿತ್ರಗಳಿಂದ. ತಮಿಳಿನಲ್ಲಿ ಇತ್ತೀಚೆಗೆ ಒಂದು ಸಿನಿಮಾ ಬಂದಿದೆ ‘ಅಳಗರಿಸಾಮಿಯನ್ ಕುದುರೈ’ ಅಂತ. ಸಾಧ್ಯವಾದರೆ ಗಮನಿಸಿ; ರೀಮೇಕ್ ಮಾಡುವ ಆಸೆಯಿಂದಲ್ಲ!. ಅಲ್ಲಿ ಸ್ಟಾರ್ ಗಳಿಲ್ಲ, ಹೆಸರು ಗೊತ್ತಿರುವ ನಟರೂ ಇಲ್ಲ. ಇರುವ ನಟ ನಟಿಯರು ಬೆಳ್ಳಗೆ ತೆಳ್ಳಗೆ ಇಲ್ಲ. ಅವರೆಲ್ಲ ಕೇವಲ ಪಾತ್ರಗಳಷ್ಟೇ. ಕನ್ನಡದ ಸಿನಿಮಾಗಳಲ್ಲಿ ನೀವು ಫ್ರೇಮಿನೊಳಗೂ ಸೇರಿಸಿಕೊಳ್ಳಬಯಸದ ಜನರೇ ಆ ಚಿತ್ರದ ನಾಯಕ ನಾಯಕಿಯರು. ಅವರೆಲ್ಲ ಕಥೆಗೆ ಪೂರಕವಾಗಿದ್ದಾರೆಯೇ ಹೊರತು ಕಥೆಯನ್ನು ಅವರಿಗೆ ಪೂರಕವಾಗುವಂತೆ ಹೆಣೆಯಲಾಗಿಲ್ಲ. ತಮಿಳು ಮಣ್ಣಿಗೆ ಕಿವಿಕೊಟ್ಟ ನಿರ್ದೇಶಕನಿಗೆ ಆ ಮಣ್ಣು ಹೇಳಿದ ಕಥೆ ಸಿನಿಮಾವಾಗಿ ಮಾರ್ಪಟ್ಟಿದೆ.
          ಈ ಚಿತ್ರವನ್ನೂ ನೀವು ರೀಮೇಕ್ ಮಾಡಿಬಿಡುತ್ತೀರೋ ಏನೋ ಎಂದು ಭಯವಾಗಿದೆ. ಇಬ್ಬರು ಮೂವರು ಸ್ಟಾರ್ ಗಳನ್ನು ಹಾಕಿಕೊಂಡು ಮಕ್ಕಿಕಾಮಕ್ಕಿ ಭಟ್ಟಿ ಇಳಿಸಿ ಚಿತ್ರ ಸೋತಾಗ ಸ್ಟಾರ್ ಗಳ ಸಂಭಾವನೆಯ ಬಗ್ಗೆ ದೂರು ನೀಡಿ ಮತ್ತೊಂದು ಚಿತ್ರದ ರೀಮೇಕ್ ಹಕ್ಕಿಗಾಗಿ ಚೆನ್ನೈನ ಫ್ಲೈಟು ಹತ್ತುತ್ತೀರೇನೋ!! ಹೊಸಬರ ಹೊಸತನದಿಂದಾಗಿಯೇ ಚೆಂದವೆನಿಸಿದ ‘ನಾಡೋಡಿಗಳ್’ ಚಿತ್ರವನ್ನು ಸ್ಟಾರ್ ಗಳನ್ನಾಕಿಕೊಂಡು ‘ಹುಡುಗರನ್ನಾಗಿ’ ಮಾಡಿ ‘ಸುಮಾರಾಗಿದೆ ಕಥೆ’ ಎಂದೆನ್ನುವಂತೆ ಮಾಡಿಬಿಡುತ್ತೀರಿ.
          ನಿಜ ಹೇಳಿ ಮುನಿರತ್ನರವರೇ ನಿಮ್ಮ ಎಷ್ಟು ಜನ ಸ್ಟಾರ್ ಗಳು ರೀಮೇಕ್ ಚಿತ್ರವಾದರೂ ನಿರ್ದೇಶಕನ ಮಾತೇ ಅಂತಿಮ ಎಂಬಂತೆ ನಡೆದುಕೊಳ್ಳುತ್ತಾರೆ? ನಿರ್ದೇಶಕನಿಗೆ ಒಂದಷ್ಟು ಸ್ವಾತಂತ್ರ್ಯ ಸಿಕ್ಕರೂ ನೋಡಲು ಸಹ್ಯವಾಗುವಂಥ ರೀಮೇಕ್ ಸಿನಿಮಾ ಬರಬಹುದು, ಕೆಲವೊಮ್ಮೆ ಮೂಲ ಚಿತ್ರಕ್ಕಿಂತಾ ಅದ್ಭುತವಾಗಿ ಮೂಡಿಬರುತ್ತವೆ. ಆದರೆ ನಮ್ಮ ಸ್ಟಾರ್ ಗಳು ಲ್ಯಾಪ್ ಟಾಪ್ ನಲ್ಲಿ ಮೂಲ ಚಿತ್ತವನ್ನು ಸೆಟ್ಟಿನಲ್ಲೇ ನೋಡುತ್ತಾ ನಿರ್ದೇಶಕನ ತಲೆಯ ಮೇಲೊಂದು ಟೋಪಿ ಹಾಕಿ ತಾವೇ ನಟಿಸುತ್ತಾರೆ, ಕ್ಷಮಿಸಿ ನಟನೆಯ ಅನುಕರಣೆ ಮಾಡುತ್ತಾರೆ.
          ಈ ಸ್ಟಾರ್ ಗಳಿಂದ ತಪ್ಪಿಸಿಕೊಳ್ಳಲು ಒಂದು ಉಪಾಯ ಕೊಡಬಯಸುತ್ತೇನೆ. ಹೇಗೂ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ದೈತ್ಯರು ಅನೇಕರಿದ್ದಾರೆ. ಅವರಿಗೆ ದುಂಬಾಲು ಬಿದ್ದು ಒಂದು ತಂತ್ರಾಂಶ ತಯಾರು ಮಾಡಿಸಿ. ಆ ತಂತ್ರಾಂಶ ಹೇಗಿರಬೇಕೆಂದರೆ ಒಂದು ಕಡೆ ಮೂಲ ಚಿತ್ರದ ಸಿ.ಡಿ ಹಾಕಿದರೆ ಮತ್ತೊಂದು ಕಡೆ ರೀಮೇಕ್ ಚಿತ್ರದ ಸಿ.ಡಿ ಹೊರಬರಬೇಕು. ಯಾರ ಯಾರ ಮುಖಕ್ಕೆ ಯಾರ ಮುಖವನ್ನು ಅಳವಡಿಸಬೇಕೆಂಬುದನ್ನು ಒಂದು ಸಣ್ಣ ಇಶಾರೆಯ ಮೂಲಕ ತಿಳಿಸುವಂತಾದರೆ ಸಾಕು. ನಿಮ್ಮ ಸಮಯ, ಸ್ಟಾರ್ ಗಳಿಗೆ ಮಾಡುವ ಖರ್ಚು ಎಲ್ಲವೂ ಉಳಿಯುತ್ತದೆ. ಇದು ಕೆಲವು ನಿಮಿಷಗಳ ಕೆಲಸವಾದ್ದರಿಂದ ನಮ್ಮ ಕನ್ನಡದ ಜನ ‘ಪ್ರಿಂಟ್ ಔಟ್’ ಚಿತ್ರಗಳನ್ನು ಮೂಲ ಚಿತ್ರಗಳೊಂದಿಗೆ ಹೋಲಿಸಿ ಈ ರೀತಿಯ ಲೇಖನಗಳನ್ನು ಬರೆದು ನಿಮ್ಮ ಮನಸ್ಸಿಗೆ ಬೇಸರ ಮೂಡಿಸುವುದನ್ನು ತಪ್ಪಿಸಬಹುದು.
ಇಂತಿ,
ಕನ್ನಡ ಚಿತ್ರಗಳ ಅಂದಕಾಲತ್ತಿಲ್ ಅಭಿಮಾನಿ.

No comments:

Post a Comment