Feb 27, 2012

“ಮರೀನಾ” ಎಂಬ ದೃಶ್ಯಕಾವ್ಯ

ಡಾ. ಅಶೋಕ್. ಕೆ. ಆರ್.
 ಅದು ಕಡಲಕಿನಾರೆಯ ಕಥೆ. ಮನೆಬಿಟ್ಟು ಓಡಿಬಂದವರ, ಮನೆಯಿಲ್ಲದೆ ಬಂದವರ, ಮನೆಯಿಂದ ಓಡಿಸಿಕೊಂಡವರ ಮನಮುಟ್ಟುವ ಕಥೆ. ಪಾಂಡಿರಾಜ್ ಎಂಬ ನಿರ್ದೇಶಕನ ಮನದ ಪಟದಲ್ಲಿ ಮೂಡಿದ ಕಥೆಯ ಯಶಸ್ಸು ಚಿತ್ರ ನೋಡುವಾಗ ನಮ್ಮ ಕಣ್ಣಂಚಿನಲ್ಲಿ ಮೂಡುವ ಹನಿಗಳಲ್ಲಿದೆ. ಧಾರಾಕಾರವಾಗಿ ಗೊಳೋ ಎಂದಳುತ್ತಾ ಕುಳಿತರೆ ನಿರ್ದೇಶಕ ಜವಾಬ್ದಾರನಲ್ಲ!
ಸಮುದ್ರವೆಂದರೆ ಅಲೆಗಳಬ್ಬರ, ಸೂರ್ಯೋದಯ – ಸೂರ್ಯಾಸ್ತಮಾನಗಳನ್ನು ವೀಕ್ಷಿಸಲೋಗ್ಯವಾದ ಸ್ಥಳ, ಪ್ರೇಮಿಗಳಿಗೆ ಕೈ-ಕೈಹಿಡಿದು ಅಡ್ಡಾಡಲು, ಮರಳಿಗೆ ಬೆನ್ನು ಚೆಲ್ಲಿ ಕುಡಿದು, ಸೇದಲು ಪ್ರಶಸ್ತವಾದ ಸ್ಥಳ. ನಮಗದು ಮೋಜು – ಮಸ್ತಿಯ ತಾಣ ಅಷ್ಟೇ. ಕಡಲ ತಡಿಯಲ್ಲಿ ಬದುಕು ಕಟ್ಟಿಕೊಂಡವರ ಕನಸು, ದುಃಖ ದುಮ್ಮಾನಗಳು ಸೂಕ್ಷ್ಮಜ್ಞನಿಗಷ್ಟೇ ತಿಳಿದೀತು. ಸೂಕ್ಷ ಸಂಗತಿಗಳನ್ನು ಅತ್ಯದ್ಭುತವಾಗಿ ಗ್ರಹಿಸಿ ಅದನ್ನು ಅಷ್ಟೇ ಭಾವತೀವ್ರತೆಯೊಂದಿಗೆ ಪ್ರೇಕ್ಷಕನಿಗೆ ದಾಟಿಸುವಲ್ಲಿ ನಿರ್ದೇಶಕ ಯಶಸ್ವಿಯಾಗಿದ್ದಾನೆ.
ಹೊಟ್ಟೆಪಾಡಿಗೆ ನೀರಿನ ಪ್ಯಾಕೆಟ್ ಮಾರುತ್ತ, ನೀರು ಮಾರಾಟ ನಿಷೇಧವಾದ ಬಳಿಕ ತಿಂಡಿ ಮಾರುತ್ತ ಓದಲವಣಿಸುವ ಹುಡುಗರ ಕಥೆಯಿದು. ಸಿನಿಮಾದಲ್ಲಿ ಹಾಡುವ ಕನಸಿರುವ ಹುಡುಗಿಯೊಬ್ಬಳಿದ್ದಾಳೆ; ಸದ್ಯಕ್ಕವಳು ತನ್ನ ತಂದೆ ನುಡಿಸುವ ವಾದ್ಯಕ್ಕೆ, ತಂದೆಯ ಹಾಡಿಗೆ ನರ್ತಿಸುತ್ತಾಳೆ, ದುಡಿಯುತ್ತಾಳೆ. ಪೆಟ್ರೋಲ್ ಕದ್ದು ಮಾರುವ ಹುಡುಗನೂ ಇದ್ದಾನೆ – ದುಬಾರಿ ಅರಿವೆ ಧರಿಸಿ, ಕಣ್ಣಿಗೊಂದು ಕೂಲಿಂಗ್ ಗ್ಲಾಸ್ ಏರಿಸಿಕೊಂಡವನಿಗೆ ಸಹ ಹುಡುಗರಿಂದ ದೊರಕುವುದು ತುಚ್ಛೀಕರಣದ ನೋಟವಷ್ಟೇ. ಜೀವನೋತ್ಸಾಹದ ಹುಡುಗರ ನಡುವೆ ಸಮುದ್ರವನ್ನೇ ಬಾಡಿಗೆಗೆ ನೀಡಿದ ‘ಹುಚ್ಚ’ನೊಬ್ಬನಿದ್ದಾನೆ. ಆತನ ವರ್ತನೆ ನಡವಳಿಕೆಗಳು ಹುಚ್ಚೆನ್ನಿಸುವುದಿಲ್ಲ ಎಂಬುದು ವಿಪರ್ಯಾಸವೋ ಹಾಸ್ಯವೋ ಅರಿಯುವುದು ಕಷ್ಟ. ರೇಗಿಸಿಕೊಳ್ಳುತ್ತಲೇ ಹುಡುಗರಿಗೆ ಹತ್ತಿರವಾಗುವ, ಅವರ ಜವಾಬ್ದಾರಿಯನ್ನೊರುವ ಪೋಸ್ಟ್ ಮಾಸ್ಟರ್ ಇದ್ದಾನೆ. ಹುಡುಗರ ಪಾಲಿಗೆ ಅವನೇ ವಿ.ಐ.ಪಿ! ಹೆಚ್ಚಾಗಿ ಕಣ್ಣಲ್ಲೇ ಮಾತನಾಡುವ ಕುದುರೆ ಸವಾರನಿದ್ದಾನೆ. ಎಲ್ಲರಿಗೂ ಮುಕುಟಪ್ರಾಯದಂತಿರುವುದು ‘ಭಿಕ್ಷುಕ’ ತಾತ! ಮಕ್ಕಳಿಂದ ಹೊರದಬ್ಬಿಸಿಕೊಂಡು ಕಡಲ್ತಾಯಿಯ ಮಡಿಲು ಸೇರಿ ಭಿಕ್ಷುಕನಾದ ತಾತನಿಗಿದ್ದಿದ್ದು ಒಂದೇ ಆಸೆ. ತನ್ನ ಮಗನ ಪರಿಚಯದವರು ನಾನಿಲ್ಲಿ ಭಿಕ್ಷೆ ಬೇಡುವುದನ್ನು ಕಂಡು ಮಗನಿಗೆ ವಿಷಯ ತಿಳಿಸಿದರೆ ಅವನು ಪಶ್ಚಾತಾಪ ಪಡಬಹುದು, ಇಲ್ಲ ಕೊನೇ ಪಕ್ಷ ಅವಮಾನದ ನೋವನ್ನಾದರೂ ಅನುಭವಿಸುತ್ತಾನೆಂಬ ಭರವಸೆ! ‘ಭಿಕ್ಷೆ ಬೇಡೋದು ಬಿಟ್ಬಿಡಿ ತಾತ. ನಾನು ಸಾಕ್ತೀನಿ ನಿಮ್ಮನ್ನ’ ಎಲ್ಲರನ್ನೂ ಸಾಕಿ ಸಲಹಿದ ತನ್ನನ್ನೇ ಸಾಕುತ್ತೇನೆಂದು ಹುಡುಗನೊಬ್ಬ ಹೇಳಿದಾಗ ತಾತನ ಜಡಾತ್ಮ ಎಚ್ಚರಗೊಂಡು ಭಿಕ್ಷಾಟನೆಗೆ ತಿಲಾಂಜಲಿಯಿತ್ತು ಕೊಳಲು ಮಾರಲಾರಂಭಿಸುತ್ತಾನೆ.
ತಮ್ಮತಮ್ಮಲ್ಲೇ ಚಿಕ್ಕಪುಟ್ಟ ಸ್ಪರ್ಧೆಗಳನ್ನೇರ್ಪಡಿಸಿಕೊಂಡು ಕೂಡಿಹಾಕಿದ ದುಡ್ಡಿನಿಂದ ಒಂದು ಪ್ರಶಸ್ತಿಯನ್ನೂ ಕೊಡುವುದು ಹುಡುಗರವ್ಯಾಸ. ವಿ.ಐ.ಪಿ ಯಿಂದ ಪ್ರಶಸ್ತಿ ಸ್ವೀಕರಿಸುವುದರಲ್ಲಿ ಖುಷಿ. ಮೊದಲ ವಿ.ಐ.ಪಿ ಪೋಸ್ಟ್ ಮ್ಯಾನ್. ಓಟದ ಸ್ಪರ್ಧೆಯ ನಂತರ ವಿ.ಐ.ಪಿಯನ್ನು ಹುಡುಕುತ್ತಿದ್ದಾಗ ತಾತ, ಕುದುರೆ ಸವಾರ, ನೃತ್ಯಗಾತಿಯ ಅಪ್ಪ ತಮ್ಮ ತಮ್ಮ ಅಂಗಿ ತೀಡಿಕೊಂಡು ಸಿದ್ಧರಾದರು. ಆದರೆ ಹುಡುಗರು ಹೋಗಿದ್ದು ಇಬ್ಬರು ವಿದೇಶಿಯರ ಬಳಿಗೆ! ಅವರೇ ಅವತ್ತಿನ ವಿ.ಐ.ಪಿ. ಇವತ್ತಿನ ವಿ.ಐ.ಪಿ ನಾನಾಗಬಹುದೆಂಬ ನಿರೀಕ್ಷೆಯಲ್ಲಿದ್ದ ಮೂವರಿಗೆ ಅಗಾಧ ಬೇಸರ. ಮೂವರಲ್ಲಿ ಛಲ ಹುಟ್ಟಿದ್ದು ತಾತನಲ್ಲಿ ಮಾತ್ರ. ಅತಿದೊಡ್ಡ ಟ್ರೋಫಿ ಖರೀದಿಸಿ ಸ್ಪರ್ಧೆ ಏರ್ಪಡಿಸುತ್ತಾನೆ. ತಮಿಳರಿಗಿಂತ, ನಿಮ್ಮ ಜೊತೆ ಇರುವವರಿಗಿಂತ ವಿದೇಶಿಯರೇ ಮುಖ್ಯವಾಗಿಹೋದರಾ ನಿಮಗೆ ಎಂದು ಹೇಳುತ್ತಾ ಸಮುದ್ರದಂಚಿನಲ್ಲಿ ಕುದುರೆ ರೇಸ್ ಏರ್ಪಡಿಸುತ್ತಾನೆ. ಮಾರನೇ ದಿನ ಊರಿಗೆ ಹೋಗಿಬಿಡುತ್ತೇನೆಂದು ಹೇಳಿದವನು ಪಯಣ ಬೆಳೆಸಿದ್ದು ಮಸಣದೆಡೆಗೆ. ಒಂಟಿಯಾಗಿ ಅನಾಥವಾಗಿ ಕಡಲತಡಿಗೆ ಬಂದವನು ಮಸಣದೆಡೆಗೆ ಹೆಜ್ಜೆಹಾಕಿದ್ದು ರಾಜನಂತೆ ಕುದುರೆಯ ಮೇಲೆ; ಹಿಂದೆ ಅವನ ಸಮುದ್ರ ಪರಿವಾರ. ಹುಡುಗರನ್ನು ಓದಿಗೆ ತೊಡಗಿಸಲು ಪರದೆಯ ಹಿಂದೆಯೇ ಕಾರ್ಯನಿರ್ವಹಿಸಿದ್ದು ಇದೇ ತಾತ.
ಇದೇನಪ್ಪಾ ಹೀರೋ ಹೀರೋಯಿನ್ನಿಲ್ಲ, ಲವ್ವಿಲ್ಲ, ಡ್ಯೂಯೆಟ್ಟಿಲ್ಲ ಅಂದುಕೊಳ್ತಿದ್ದೀರಾ?! ನಿಲ್ಲಿ ನಿಲ್ಲಿ! ಅದೂ ಇದೆ. ಉಳಿದ ಸಿನಿಮಾಗಳಂತೆ ಅವರೇ ಮುಖ್ಯವಾಗಿಲ್ಲ ಅಷ್ಟೇ. ಹುಡುಗರ ಭಾವಪ್ರಪಂಚದಿಂದ ಕೊಂಚ ವಿಮುಖವಾಗಲು ಮಧ್ಯೆ ಮಧ್ಯೆ ಮುಖ ತೋರಿಸುತ್ತಾರೆ! ಅವರ ಕಥೆಯೂ ಚೆನ್ನಾಗಿಯೇ ಇದೆ. ತೊಂದರೆಯೆಂದರೆ ಚಿತ್ರ ನೋಡಿ ಮುಗಿಸಿದಾಗ ಮನದಲ್ಲುಳಿಯುವುದು ಕಡಲತಡಿಯ ಮಕ್ಕಳೇ ಹೊರತು ಪೋಸ್ಟರ್, ಸ್ಟಾರ್ ಕ್ಯಾಸ್ಟ್ ನಲ್ಲಿ ಕಾಣುವ ಹೆಸರುಗಳಲ್ಲ!

No comments:

Post a Comment