Aug 22, 2014

ಸತ್ಯ ಕೂಡ ಚಲನಶೀಲ ಎಂದರಿವು ಮೂಡಿಸಿದ ಅನಂತಮೂರ್ತಿ



ಡಾ ಅಶೋಕ್ ಕೆ ಆರ್. 
ಜಾತ್ಯತೀತವಾಗಿಯೇ ಬದುಕಿ ಬರೆದು ಬೆಳೆದ ಅವರು ಕುಮಾರಸ್ವಾಮಿ, ದೇವೇಗೌಡರನ್ನು ಇದ್ದಕ್ಕಿದ್ದಂತೆ ಬೆಂಬಲಿಸಿಬಿಡುತ್ತಾರೆ, ಕೆಲವೇ ವರುಷಗಳಲ್ಲಿ ಜೀವನಪರ್ಯಂತ ವಿರೋಧಿಸಿಕೊಂಡೇ ಬಂದಿದ್ದ ಕಾಂಗ್ರೆಸ್ಸನ್ನು ಸಿದ್ಧರಾಮಯ್ಯನವರ ಮೇಲಿನ ನಂಬುಗೆಯಿಂದ ಗೆಲ್ಲಿಸಿ ಎಂದು ಪತ್ರಿಕಾ ಹೇಳಿಕೆ ಕೊಡುತ್ತಾರೆ. ಮೋದಿಯನ್ನು ವಿರೋಧಿಸುವ ಏಕೈಕ ಕಾರಣಕ್ಕೆ ಅದರಷ್ಟೇ ಅಪಾಯಕಾರಿ ಎಂಬ ಅರಿವಿದ್ದೂ ಕಾಂಗ್ರೆಸ್ಸಿಗೆ ಮತಹಾಕಿ ಎಂದು ಹೇಳಿಬಿಡುತ್ತಾರೆ. ಇನ್ನೊಂದೈದು ವರುಷಗಳು ಅವರು ಬದುಕಿದ್ದರೆ ಮೋದಿ ಸಂಪೂರ್ಣ ಸರಿಯಿಲ್ಲದಿದ್ದರೂ ಪರ್ಯಾಯಗಳಿಲ್ಲದ ಕಾರಣ, ಇರುವ ಪರ್ಯಾಯಗಳು ಮೋದಿಗಿಂತ ಅಪಾಯಕಾರಿಯಾಗಿರುವ ಕಾರಣ ಮೋದಿಯನ್ನೇ ಗೆಲ್ಲಿಸಿದರೆ ಒಳ್ಳೆಯದೇನೋ ಎಂದು ಹೇಳಿಕೆ ನೀಡಿದ್ದರೂ ಅನಂತಮೂರ್ತಿಯವರ ಬಗೆಗೆ ಅಚ್ಚರಿಯಾಗುತ್ತಿರಲಿಲ್ಲ. ಇದು ಅವಕಾಶವಾದಿತನ, ಸ್ವಾರ್ಥಕ್ಕಾಗಿ ಕ್ಷಣಕ್ಕೊಂದು ಬಣ್ಣ ಬದಲಿಸುವ ನೀಚತನ – ಇನ್ನು ಅನೇಕಾನೇಕ ರೀತಿಯಲ್ಲಿ ಅವರನ್ನು ಟೀಕಿಸಿದ್ದರೂ ಅವರದಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳುತಿರಲಿಲ್ಲವೇನೋ. ಯಾಕೆಂದರೆ ಅನಂತಮೂರ್ತಿ (ನಾನವರನ್ನು ಅವರ ಬರಹಗಳ ಮೂಲಕ ತಿಳಿದುಕೊಂಡಂತೆ) ಇದ್ದಿದ್ದೇ ಹಾಗೆ. ಸತ್ಯವೆಂಬುದು ಅವತ್ತಿನ ಆ ಮಟ್ಟಿಗಿನ ವಾಸ್ತವವೇ ಹೊರತು ಅದು ಸರ್ವಕಾಲಿಕ ಸತ್ಯವಾಗಲು ಸಾಧ್ಯವೇ ಇಲ್ಲ ಎಂಬುದು ಅವರ ಲೇಖನಗಳನ್ನು ಓದಿದಾಗ ಅರಿವಾಗುತ್ತದೆ.


ಉಂಡವರ ತೇಗು ಉಳಿದವರ ಕೊರಳ ಉರುಲಾಗದಿರಲಿ – ಯು.ಆರ್.ಎ

ಅನಂತಮೂರ್ತಿ ಕೆಲವರಿಗೆ ಮೇಷ್ಟ್ರಾಗಿ, ಕೆಲವರಿಗೆ ರಾಜಕೀಯ ಅಭಿಪ್ರಾಯ ವ್ಯಕ್ತಪಡಿಸುವ ವ್ಯಕ್ತಿಯಾಗಿ, ಇನ್ನು ಹಲವರಿಗೆ ಚಳುವಳಿಕಾರನಾಗಿ ದಕ್ಕಿದರೆ ಬಹುತೇಕರಿಗೆ ಅವರು ದಕ್ಕಿದ್ದು ಅವರ ಬರಹಗಳ ಮೂಲಕ ಲೇಖಕರಾಗಿ. ಅವರ ಕೆಲವು ಇತ್ತೀಚಿನ ಲೇಖನಗಳನ್ನು ಓದುತ್ತಿದ್ದಾಗ ಅವರ ಹಳೆಯ ಲೇಖನಗಳಲ್ಲಿ ಇದಕ್ಕೆ ತದ್ವಿರುದ್ದವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಂತಿತ್ತಲ್ಲ ಎಂಬ ಆಲೋಚನೆ ಮೂಡಿದರೆ ಅದು ಸಮಾಜದ ಚಲನಶೀಲತೆಯ ಬಗೆಗಿನ ನಂಬುಗೆಯನ್ನು ಧೃಡಪಡಿಸುತ್ತಿತ್ತೇ ಹೊರತು ಅನಂತಮೂರ್ತಿಯವರ ಅನುಕೂಲ ಸಿದ್ಧಾಂತವನ್ನಲ್ಲ. ಒಂದು ಇಸಂಅನ್ನು ಒಪ್ಪಿಕೊಂಡವರು ಆ ಇಸಂನಲ್ಲಿ ತಪ್ಪುಗಳಿದ್ದಾಗ್ಯೂ ಅದನ್ನೇ ಅಪ್ಪಿ ಒಪ್ಪಬೇಕೆನ್ನುವವರಿಗೆ ಅನಂತಮೂರ್ತಿ ದ್ವಂದ್ವದ ಮೂರ್ತಿಯಾಗಿ ಕಂಡಿದ್ದರೆ ಅಚ್ಚರಿಪಡಬೇಕಿಲ್ಲ. ಹಳೆಯ ಅಭಿಪ್ರಾಯ ತಪ್ಪಾಗಿದ್ದರೆ ಅದನ್ನು ಒಪ್ಪುವ ಗುಣ ಎಲ್ಲರಲ್ಲೂ ಕಾಣುವುದು ಕಷ್ಟಸಾಧ್ಯ.
ಅನಂತಮೂರ್ತಿ ಎಂದ ಕೂಡಲೇ ನೆನಪಾಗುವುದು ಅವರ ಸಂಸ್ಕಾರ, ಭಾರತೀಪುರ, ಭವ ಕಾದಂಬರಿಗಳು, ಕಥೆಗಳು ಮತ್ತು ಓದಿ ಅರ್ಥೈಸಿಕೊಂಡವರಿಗೆ ಕವಿತೆಗಳು (ಕವಿತೆಗೂ ನನಗೂ ದೂರ, ಅವರ ಇಲ್ಲಿಯವರೆಗಿನ ಕವಿತೆಗಳನ್ನು ಕಷ್ಟಪಟ್ಟು ಓದಿದ್ದೆ). ಭವ ಏನೂ ಅರ್ಥವಾಗದೆ ಬೋರು ಹೊಡೆಸಿದರೆ ಸಂಸ್ಕಾರ ಬೆಚ್ಚಿ ಬೀಳಿಸಿತ್ತು, ಪ್ರತಿ ಓದಿನಲ್ಲೂ ಹೊಸತೇನನ್ನಾದರೂ ಸೂಚಿಸುತ್ತಿತ್ತು. ಭಾರತೀಪುರದ ಜಗನ್ನಾಥ ಜಾತಿಯಿಂದ ಮೇಲ್ಮೆ ಪಡೆದಿದ್ದೇವೆಂದು ನಂಬುವ ಪ್ರತಿ ಮನೆಯಲ್ಲೂ ಹುಟ್ಟಬಾರದೇ ಎಂದೆನ್ನಿಸಿತ್ತು. ಬ್ರಾಹ್ಮಣ ಸಮುದಾಯದಲ್ಲಿ ಹುಟ್ಟಿದ್ದ ಕಾರಣಕ್ಕೋ ಏನೋ ಅವರ ಕಾದಂಬರಿಗಳಲ್ಲಿ ಜಾತೀಯತೆ ಅಳಿಯಲು ಉಚ್ಛ ಸಮುದಾಯಗಳೆನ್ನಿಸಿಕೊಂಡವರಿಂದಲೇ ಬದಲಾವಣೆ ಬರಬೇಕು ಎನ್ನುವ ಚಿತ್ರಣವಿರುತ್ತಿತ್ತು. ಅವರ ಕಥೆ, ಕಾದಂಬರಿ, ಕವಿತೆಗಳಿಗಿಂತ ಹೆಚ್ಚು ಶ್ರೇಷ್ಟವಾದದ್ದೆಂದರೆ ವಿವಿಧ ಕಾಲಘಟ್ಟದಲ್ಲಿ ಅವರು ಬರೆದ ಸಮಕಾಲೀನ ಸಂದರ್ಭಕ್ಕನುಗುಣವಾದ ಲೇಖನಗಳು. ಅವರ ದೂರದರ್ಶಿತ್ವಕ್ಕೆ ಕನ್ನಡ ಮತ್ತು ಇಂಗ್ಲೀಷ್ ಎರಡೂ ಶಾಲೆಗಳಲ್ಲಿರಬೇಕು, ಸಮಾಜ ವಿಜ್ಞಾನವನ್ನು ಕನ್ನಡದಲ್ಲೂ, ಗಣಿತ ಮತ್ತು ವಿಜ್ಞಾನವನ್ನು ಇಂಗ್ಲೀಷಿನಲ್ಲೂ ಪಠ್ಯವಾಗಿಸಬೇಕು ಎಂಬವರ ವಿಚಾರವೇ ಸಾಕು. ಅಂದೇ ಅದು ಅನುಷ್ಠಾನಗೊಂಡಿದ್ದರೆ ಇವತ್ತಿನ ಮಕ್ಕಳಲ್ಲಿ ಕನ್ನಡ ಅಧೋಗತಿಗಿಳಿಯುತ್ತಿರಲಿಲ್ಲ, ಕನ್ನಡದ ಬಗ್ಗೆ ಅಸಡ್ಡೆಯೂ ಬೆಳೆಯುತ್ತಿರಲಿಲ್ಲ.
 ಲೇಖಕನಾದವನು ಮನೆಯಲ್ಲಿ ನಾಲ್ಕು ಗೋಡೆಯ ಮಧ್ಯೆ ಕುಳಿತು ಕಾಫಿ ಹೀರುತ್ತ, ಅಭ್ಯಾಸವಿದ್ದರೆ ಸಿಗರೇಟು ಸೇದುತ್ತಾ ಬರೆಯುತ್ತಾ ಕುಳಿತರೆ ಸಾಕು ಎಂಬ ಮನಸ್ಥಿತಿಯಲ್ಲಿ ನಾವಿದ್ದೇವೆ. ನಮ್ಮಲ್ಲನೇಕರು ಮಾಡುತ್ತಿರುವುದೇ ಅಷ್ಟನ್ನು. ಲೇಖಕನ ಕೆಲಸ ಬರೆಯುವುದು ಉಳಿದಿದ್ದರ ಉಸಾಬರಿ ಯಾಕೆಂದು ಕೇಳುವುದು ಒಂದು ಕೋನದಲ್ಲಿ ಸರಿಯೆಂದೇ ತೋರುತ್ತದಾದರೂ ರಹಮತ್ ತರೀಕೆರೆಯವರು ಒಂದೆಡೆ ಬರೆದಿರುವಂತೆ “ಕನ್ನಡದ ಮಟ್ಟಿಗೆ ಸಾಹಿತ್ಯದ ವಿದ್ಯಾರ್ಥಿ ಆಗುವುದು ಎಂದರೇನೇ ರಾಜಕೀಯ ಪ್ರಜ್ಞೆ ಪಡೆಯುವುದು” ಎಂದು ಹೇಳಿರುವುದರ ಅರ್ಥ ಅನಂತಮೂರ್ತಿಯವರನ್ನು ನೋಡಿದರೆ ತಿಳಿಯುತ್ತದೆ. ಸಮಾಜದಲ್ಲಿ ಇಂತಹದೊಂದು ಘಟನೆ ನಡೆದಿದೆ, ಅದರ ಬಗ್ಗೆ ನನ್ನ ಅಭಿಪ್ರಾಯ ಈ ರೀತಿಯದ್ದಾಗಿದೆ, ಅದು ತಪ್ಪೋ ಸರಿಯೋ ಎಂಬುದನ್ನು ಕಾಲ ನಿರ್ಧರಿಸುತ್ತದೆ ಎಂಬ ಮನೋಭಾವ ಅನಂತಮೂರ್ತಿಯವರದು.
‘ಅನಂತಮೂರ್ತಿಯವರು ಈ ರೀತಿಯಾಗಿ ಹೇಳಿದರು, ಈ ರೀತಿಯಾಗಿ ಬರೆದರು’ ಎಂದು ಒಬ್ಬರ್ಯಾರೋ ಹೇಳಿದ್ದನ್ನು ಮತ್ತೊಬ್ಬರು ಮತ್ತೊಂದು ರೀತಿಯಲ್ಲಿ ಹೇಳಿ ಕೊನೆಗೆ ಅನಂತಮೂರ್ತಿಯವರು ನಿಜವಾಗಿಯೂ ಹೇಳಿದ್ದೇನು, ಬರೆದಿದ್ದೇನು ಎಂಬುದೇ ತಿಳಿಯದಾದ ಪರಿಸ್ಥಿತಿ ನಿರ್ಮಾಣವಾಗಿದ್ದೇ ಅಧಿಕ. ಇತ್ತೀಚಿನ ‘ದೇವರ ಮೂರ್ತಿ ಮೇಲೆ ಉಚ್ಛೆ ಉಯ್ಯುವಂತೆ ಅನಂತಮೂರ್ತಿ ಹೇಳಿದ್ದರು’ ಎಂದು ಕಲುಬುರ್ಗಿಯವರು ಹೇಳಿ ವಿವಾದವಾಗಿತ್ತು. ಎಲ್ಲರೂ ಅನಂತಮೂರ್ತಿಯವರ ಮೇಲೆ ಮುಗಿಬಿದ್ದರು. ಅವರು ಬರೆದಿದ್ದೇ ಬೇರೆ, ಕಲುಬುರ್ಗಿಯವರು ಹೇಳಿದ್ದೇ ಬೇರೆ ಎಂಬುದರಿವಾದ ನಂತರವೂ ಅನೇಕರು ಇನ್ನೂ ಅವರ ಮೇಲೆ ಕಿಡಿಕಾರುತ್ತಾರೆ! ಅನಂತಮೂರ್ತಿಯವರನ್ನು ಜನರು ಅರ್ಥ ಮಾಡಿಕೊಂಡದ್ದಕ್ಕಿಂತ ಓದಿದವರು ತಿರುಚಿದ ಸಂಗತಿಗೆ, ಓದದೇ ವ್ಯಕ್ತಪಡಿಸಿದವರ ಅಭಿಪ್ರಾಯಕ್ಕೆ ಕೊಟ್ಟ ಮಹತ್ವದ ಕಾರಣಕ್ಕೆ ಅವರನ್ನು ಅಪಾರ್ಥ ಮಾಡಿಕೊಂಡವರೇ ಹೆಚ್ಚು. ವಿಚಾರಾತ್ಮಕ ನಿಂದನೆ ಮಾಡದೆ ವೈಯಕ್ತಿಕ ಕುಟಿಲತೆಯಿಂದ ಅನಂತಮೂರ್ತಿಯವರನ್ನು ಟೀಕಿಸಿದವರು ಅವರ ಪುಸ್ತಕಗಳನ್ನೊಮ್ಮೆ ಈಗಲಾದರೂ ಓದಿಕೊಳ್ಳಬೇಕು. ಯಾಕೆಂದರೆ ಇನ್ನವರ ಪುಸ್ತಕ ಮತ್ತು ವಿಚಾರಗಳಷ್ಟೇ ನಮ್ಮ ಬಳಿ ಉಳಿದಿವೆ.

No comments:

Post a Comment