Jul 17, 2014

ಆದರ್ಶವೇ ಬೆನ್ನು ಹತ್ತಿ.... ಭಾಗ 32

 
ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 31 ಓದಲು ಇಲ್ಲಿ ಕ್ಲಿಕ್ಕಿಸಿ
ಒಮ್ಮೆಯೂ ನೋಡದಿರೋ ಅಗಾಧ ಕಾಡಿನಲ್ಲಿ ನಕ್ಸಲರ ಸಂಪರ್ಕ ಸಾಧಿಸುವುದು ಹೇಗೆ? ರಸ್ತೆಯ ಯಾವುದಾದರೂ ಭಾಗದಿಂದ ಕಾಡಿನೊಳಗೇನೋ ಪ್ರವೇಶಿಸಬಹುದು. ಪರಿಚಯವೇ ಇರದ ದಟ್ಟ ಅರಣ್ಯದಲ್ಲಿ ಕಣ್ಣಿದ್ದೂ ಕುರುಡರಂತಾಗುತ್ತೇವೆಯೇ ಹೊರತು ನಕ್ಸಲರ ಸಂಪರ್ಕ ಸಾಧಿಸುವುದು ದೂರದ ಮಾತು. ಏನು ಮಾಡೋದು ಈಗ? ಕೀರ್ತನಾಳೊಡನೆ ಮಾತನಾಡಿದ ನಂತರದ ಮೂರನೇ ದಿನ ಲೋಕಿ ಕಾಲೇಜಿನ ಕ್ಯಾಂಟೀನಿನ ಬಳಿ ಪೂರ್ಣಿಮಾಳನ್ನು ಭೇಟಿಯಾದ. ಇದೇ ಅವಳೊಂದಿಗಿನ ಕೊನೆಯ ಭೇಟೆ ಎಂದು ನಿರ್ಧಾರ ಮಾಡಿದ್ದ. ಓದಿನ ವಿಷಯವಾಗಿ ಸ್ವಲ್ಪ ಹೊತ್ತು ಮಾತನಾಡಿದಳು ಪೂರ್ಣಿಮಾ. ಲೋಕಿಯ ಮಾತುಗಳಲ್ಲಿ ಉತ್ಸಾಹದ ಕೊರತೆ ಎದ್ದು ಕಾಣುತ್ತಿತ್ತು. “ಯಾಕೆ ಲೋಕಿ? ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚು ಅಂತರ್ಮುಖಿಯಾಗ್ತಾ ಇದ್ದೀಯಾ? ನನ್ನಿರುವಿಕೆಯಿಂದ ನಿನಗೆ ಬೇಸರವಾಗುತ್ತಿದೆಯಾ?”
“ನಿನ್ನಿಂದ ನನಗೆ ಬೇಸರವಾಗೋದಾ? ಸಾಧ್ಯವೇ ಇಲ್ಲ. ನಿನ್ನ ಜೊತೆ ಮಾತನಾಡಿದಷ್ಟೂ ಮನದ ಬೇಗುದಿ ಕಡಿಮೆಯಾಗುತ್ತೆ”
“ಅಷ್ಟೊಂದು ಬೇಗುದಿ ಯಾಕೆ?”
“ಯಾಕೆ ಅಂತ ವಿವರಿಸಿ ಹೇಳೋದು ಕಷ್ಟ ಪೂರ್ಣಿ. ನಂಬಿದ ಆದರ್ಶಗಳಿಗೂ ವಾಸ್ತವ ಪ್ರಪಂಚಕ್ಕೂ ಮುಖಾಮುಖಿಯಾದಾಗ ಮನದಲ್ಲಿ ಏಳೋ ಬೇಸರದ ಕ್ರೋಧದ ಅಲೆಗಳೇ ಬಹುಶಃ ಬೇಗುದಿಗೆ ಕಾರಣ ಅನ್ನಿಸುತ್ತೆ”
“ಏನೋಪ್ಪ, ಕೆಲವೊಮ್ಮೆ ನಿನ್ನ ಮಾತುಗಳೇ ಸರಿಯಾಗಿ ಅರ್ಥವಾಗೊಲ್ಲ”
“ನನಗೇ ಅರ್ಥವಾಗಲ್ಲ. ಇನ್ನು ಬೇರೆಯವರಿಗೆ ಹೇಗೆ ಅರ್ಥವಾಗಬೇಕು ಹೇಳು” ನಗುತ್ತಾ ಹೇಳಿದ.
“ಸರಿ ಲೋಕಿ. ನಾನಿನ್ನು ಬರ್ತೀನಿ. ಮುಂದಿನ ವಾರ ಭೇಟಿಯಾಗೋಣ” ಎಂದ್ಹೇಳಿ ಪೂರ್ಣಿಮಾ ಹೊರಡಲು ಸಿದ್ಧವಾದಳು. ಅವಳೊಡನೆ ಕಾಲೇಜಿನ ಗೇಟಿನವರೆಗೆ ಹೆಜ್ಜೆ ಹಾಕಿದ. ಎಂದೂ ಆ ರೀತಿ ಮಾಡದಿದ್ದವನು ಅವಳ ಕೈ ಹಿಡಿದು “ನಿನ್ನನ್ನು ತುಂಬಾ ಮಿಸ್ ಮಾಡ್ಕೋತೀನಿ ಕಣೇ ಪೂರ್ಣಿ”
“ನಾನೂ ಅಷ್ಟೇ ಕಣೋ” ಅವನ ಹಸ್ತವನ್ನದುಮುತ್ತಾ ಹೇಳಿದಳು. ಮನೆಯ ಕಡೆ ಹೊರಟ ಲೋಕಿಯ ಕಣ್ಣಿನಲ್ಲಿ ಮನದಲ್ಲಿನ ದುಃಖದ ಅಣೆಕಟ್ಟು ಒಡೆದ ಕುರುಹಿತ್ತು.
* * *
ಅಡುಗೆಮನೆಗೆ ಹೋಗಿ ಸ್ನೇಹಾ ಮಾಡಿಟ್ಟಿದ್ದ ಕಾಫಿಯನ್ನು ಫ್ಲಾಸ್ಕಿನಿಂದ ಬಗ್ಗಿಸಿಕೊಂಡು ಪೇಪರ್ ಓದಲು ಹಾಲಿಗೆ ಬಂದ ಲೋಕಿ. ಪೂರ್ಣಿಮಾಳ ಪ್ರೇಮದ ಬಂಧನದಲ್ಲಿ ಹೊಯ್ದಾಡುತ್ತಿದ್ದವನಿಗೆ ರಾತ್ರಿ ನಿದ್ರೆ ತಡವಾಗಿ ಬಂತು. ಬೆಳಿಗ್ಗೆ ಆತ ಏಳುವಷ್ಟರಲ್ಲಿ ಸ್ನೇಹಾ ಮತ್ತು ತಂದೆ ಹೊರಟುಹೋಗಿದ್ದರು. ಹಾಲಿಗೆ ಬಂದು ಪತ್ರಿಕೆಯನ್ನು ತೆರೆದ. ಮುಖಪುಟದಲ್ಲಿ ಮುಖ್ಯಮಂತ್ರಿಯ ಹೇಳಿಕೆಯನ್ನು ಪ್ರಕಟಿಸಿದ್ದರು – “ಇನ್ನೆರಡು ದಿನಗಳಲ್ಲಿ ಪಶ್ಚಿಮಘಟ್ಟಕ್ಕೆ ಎಸ್.ಟಿ.ಎಫ್” ನಕ್ಸಲೀಯರ ವಿರುದ್ಧದ ಕಾರ್ಯಾಚರಣೆಗೆ ಇನ್ನೆರಡು ದಿನಗಳಲ್ಲಿ ಎಸ್.ಟಿ.ಎಫ್ ಪಡೆ ಪಶ್ಚಿಮಘಟ್ಟವನ್ನು ಸೇರಲಿತ್ತು. ಮಿಂಚೊಂದು ಹರಿಯಿತು ಲೋಕಿಯ ಮನದಲ್ಲಿ. ಎಸ್.ಟಿ.ಎಫ್ ನವರು ಪಶ್ಚಿಮಘಟ್ಟವನ್ನು ಪ್ರವೇಶಿಸಿದ ತಕ್ಷಣ ಬಹುಶಃ ಪ್ರತಿಯೊಂದು ಊರಿನಲ್ಲೂ ಬೇಹುಗಾರರನ್ನು ನೇಮಿಸುತ್ತಾರೆ. ಹೊರಗಿನಿಂದ ಬರುವ ವ್ಯಕ್ತಿಗಳ ಮೇಲೆ ನಿಗಾ ಇಡುತ್ತಾರೆ. ಪೋಲೀಸರ ಸಂಖೈ ಹೆಚ್ಚಾದಷ್ಟೂ ನಾವು ನಕ್ಸಲರನ್ನು ತಲುಪಲು ತೊಂದರೆಯಾಗುತ್ತೆ. ಮತ್ತೇ ನನ್ನ ಕನಸು ಒಡೆದ ಕನ್ನಡಿಯಂತಾಗುತ್ತೆ. ಇಲ್ಲಾ...ಈ ಬಾರಿ ಹಾಗಾಗಲಿಕ್ಕೆ ಬಿಡಬಾರದು. ಹೇಗಾದರೂ ಮಾಡಿ ಸಂಘಟನೆ ಸೇರಲೇಬೇಕು. ಎಸ್.ಟಿ.ಎಫ್ ನವರು ಘಟ್ಟ ತಲುಪಿ ಕಾಡಿನೊಳಗೆ ಪ್ರವೇಶಿಸುವ ಮೊದಲೇ ನಾನು ಮತ್ತು ಕೀರ್ತನಾ ನಕ್ಸಲರ ಕ್ಯಾಂಪನ್ನು ಸೇರಬೇಕು. ಆದರೆ ಹೇಗೆ? ಗೊತ್ತಿಲ್ಲದಿರೋ ಒಮ್ಮೆಯೂ ನೋಡದಿರೋ ಅಗಾಧ ಕಾಡಿನಲ್ಲಿ ನಕ್ಸಲರ ಸಂಪರ್ಕ ಸಾಧಿಸುವುದು ಹೇಗೆ? ರಸ್ತೆಯ ಯಾವುದಾದರೂ ಭಾಗದಿಂದ ಕಾಡಿನೊಳಗೇನೋ ಪ್ರವೇಶಿಸಬಹುದು. ಪರಿಚಯವೇ ಇರದ ದಟ್ಟ ಅರಣ್ಯದಲ್ಲಿ ಕಣ್ಣಿದ್ದೂ ಕುರುಡರಂತಾಗುತ್ತೇವೆಯೇ ಹೊರತು ನಕ್ಸಲರ ಸಂಪರ್ಕ ಸಾಧಿಸುವುದು ದೂರದ ಮಾತು. ಏನು ಮಾಡೋದು ಈಗ? ಎಂದು ಯೋಚಿಸುತ್ತಿದ್ದವನಿಗೆ ಸಯ್ಯದನ ಶೃಂಗೇರಿಯ ಅನುಭವ ನೆನಪಿಗೆ ಬಂತು. ಯಾವುದದು ಸರ್ಕಲ್? ಹ್ಞಾ ನೆನಪಾಯ್ತು  ಚಿನ್ನಪ್ಪಣ್ಣನ ಅಂಗಡಿ ಸರ್ಕಲ್. ಕಿಗ್ಗಾ ಎಂಬ ಊರಿನ ಬಳಿ ಇದೆ. ಹೌದು ನಾವೇನಾದ್ರೂ ನಕ್ಸಲರ ಸಂಪರ್ಕ ಸಾಧಿಸಬೇಕೆಂದರೆ ಅದಿಕ್ಕೆ ಚಿನ್ನಪ್ಪಣ್ಣನೇ ಸಹಾಯ ಮಾಡಬೇಕು. ಇವತ್ತೇ ಹೊರಡಬೇಕು. ಆದರೆ ಕೀರ್ತನಾಳಿಗೆ ವಿಷಯ ಹೇಗೆ ತಿಳಿಸುವುದು? ಬೆಳಗಿನ ಹೊತ್ತು ಕಾಲೇಜಿನಲ್ಲಿರುತ್ತಾಳೆ. ಮಧ್ಯಾಹ್ನ ಅವಳ ಹಾಸ್ಟೆಲ್ಲಿನ ಬಳಿ ಹೋಗಿ ಅವಳಿಗೆ ವಿಷಯ ತಿಳಿಸಿ ಹೊರಡಲುನು ಮಾಡಿಸಬೇಕು.
ಶೃಂಗೇರಿಗೆ ಹೊರಡಲು ಸಿದ್ಧತೆಗಳನ್ನು ಮಾಡಿಕೊಂಡ ಲೋಕಿ. ಕಾಲೇಜ್ ಬ್ಯಾಗಿಗೆ ಎರಡು ಜೊತೆ ಬಟ್ಟೆ; ಭಗತ್ ಸಿಂಗನ ಪುಸ್ತಕ, ಗಾಂಧೀಜಿಯ ಆತ್ಮಕಥೆಯನ್ನಿಟ್ಟ. ಕಾಡಿನೊಳಗೆ ಹೋಗ್ತಾ ಇದ್ದೀನಿ, ಯಾವುದಕ್ಕೂ ಇರಲಿ ಎಂದುಕೊಂಡು ಒಂದು ಪುಟ್ಟ ಚಾಕುವನ್ನಿಟ್ಟುಕೊಂಡ. ಬ್ಯಾಗನ್ನು ರೂಮಿನ ಕಪಾಟಿನಲ್ಲಿರಿಸಿ ಮನೆಯಿಂದ ಹೊರಟು ಬಸ್ ನಿಲ್ದಾಣ ತಲುಪಿದ. ಶೃಂಗೇರಿಗೆ ಬಸ್ ಎಷ್ಟೊತ್ತಿಗಿದೆ ಎಂದು ವಿಚಾರಿಸಿದ.
“ಮಧ್ಯಾಹ್ನ ಒಂದೂವರೆಗಿದೆ”
ಮಧ್ಯಾಹ್ನದ ಬಸ್ಸಿಗಂತೂ ಹೋಗಲು ಸಾಧ್ಯವಿಲ್ಲ.
“ಅದು ಬಿಟ್ಟರೆ”
“ಇನ್ನೊಂದು ಬಸ್ ರಾತ್ರಿ ಒಂಬತ್ತೂವರೆಗೆ”
“ಶೃಂಗೇರಿಗೆ ಎಷ್ಟೊತ್ತಿಗೆ ತಲುಪುತ್ತೆ”
“ಬೆಳಿಗ್ಗೆ ಐದೂ ಐದೂವರೆಗೆ”
“ಥ್ಯಾಂಕ್ ಯೂ ಸರ್” ಎಂದ್ಹೇಳಿ ಬಸ್ ನಿಲ್ದಾಣದಿಂದ ಹೊರಬಂದ. ಸಮಯ ಇನ್ನೂ ಹತ್ತೂವರೆಯಾಗಿತ್ತು. ಮಧ್ಯಾಹ್ನದವರೆಗೆ ಏನು ಮಾಡೋದು? ಎಂದು ಯೋಚಿಸಿದ. ಕೊನೆಯ ಬಾರಿ ಕಾಂತರಾಜ್ ಸರ್ ಮತ್ತು ಸಯ್ಯದನನ್ನು ಭೇಟಿಯಾಗಿ ಬರಲಾ ಎನ್ನಿಸಿತು. ಬೇಡ ಎಂದಿತವನ ಒಳಮನಸ್ಸು. ಹತ್ತಿರದವರ ಬಳಿ ಇದ್ದಷ್ಟೂ ಮನ ಮಾಡಬೇಕಿರುವ ಕೆಲಸದಿಂದ ಹಿಂದೆ ಸರಿಯುತ್ತದೆ ಎಂದು ಹೆದರಿಕೆಯಾಯಿತು. ಪೂರ್ಣಿಮಾಳ ನೆನಪು ಕಾಡಹತ್ತಿತು. ಅವಳು ನೆನಪಿನ ಪಟಲದಲ್ಲಿ ಮುಂದೆ ಸಾಗುತ್ತಿದ್ದಂತೆಯೇ ಸ್ನೇಹಾ, ವಿಜಿ, ಅಪ್ಪನ ಚಿತ್ರಗಳು ಸುಳಿಯಲಾರಂಭಿಸಿದವು. ಇವರೆಲ್ಲರೂ ಸೃಷ್ಟಿಸಿದ ಭಾವನೆಗಳ ಸುಳಿಯಿಂದ ತಪ್ಪಿಸಿಕೊಳ್ಳಲು ಹತ್ತಿರದಲ್ಲೇ ಇದ್ದ ಚಿತ್ರಮಂದಿರವೊಂದಕ್ಕೆ ಹೋದ. ಅಲ್ಲಿ ನಡೆಯುತ್ತಿದ್ದ ಹಾಸ್ಯ ಚಿತ್ರ ಮೂರು ಘಂಟೆ ಲೋಕಿ ಸುಳಿಯೊಳಗೆ ಸಿಲುಕದಂತೆ ತಡೆಹಾಕಿತ್ತು.
ಚಿತ್ರ ನೋಡಿ ಮುಗಿಸಿದ ನಂತರ ಕೀರ್ತನಾಳ ಹಾಸ್ಟೆಲ್ಲಿಗೆ ಹೋದ. ಗೇಟ್ ಕೀಪರ್ ಬಳಿ ಹೋಗಿ
“ಕೀರ್ತನಾ ಅಂತ ಫೈನಲ್ ಎಂಬಿಬಿಎಸ್ ವಿದ್ಯಾರ್ಥಿನಾ ಕರೆಯುತ್ತೀರಾ?”
“ರೂಮ್ ನಂಬರ್ ಎಷ್ಟು ಸರ್”
“ರೂಮ್ ನಂಬರ್ ಗೊತ್ತಿಲ್ವಲ್ಲಾ”
“ಒಂದ್ನಿಮಿಷ ಇಲ್ಲೇ ನಿಂತಿರಿ” ಎಂದ್ಹೇಳಿ ಅಲ್ಲೇ ಹೋಗುತ್ತಿದ್ದ ಹುಡುಗಿಯೊಬ್ಬಳ ಮುಖಾಂತರ ಕೀರ್ತನಾಳನ್ನು ಕರೆಯಲು ಹೇಳಿಕಳುಹಿಸಿದ. ಐದು ನಿಮಿಷದ ನಂತರ ಕೀರ್ತನಾ ಬಂದಳು.
“ಏನು ಲೋಕಿ. ಇದ್ದಕ್ಕಿದ್ದಂತೆ ಬಂದುಬಿಟ್ಟಿದ್ದೀಯಾ? ಏನ್ಸಮಾಚಾರ?” ಎಂದಿನ ಮಂದಹಾಸವನ್ನು ಬೀರುತ್ತಾ ಕೇಳಿದಳು. ಇಬ್ಬರೂ ಮೊದಲ ದಿನ ಕುಳಿತು ಮಾತನಾಡಿದ್ದ ಮರದ ಕಡೆ ಹೆಜ್ಜೆ ಹಾಕಿದರು.
“ಇನ್ನೆರಡು ದಿನದಲ್ಲಿ ಘಟ್ಟಕ್ಕೆ ಎಸ್.ಟಿ.ಎಫ್ ನವರು ಬರುತ್ತಾರಂತೆ ಕೀರ್ತನಾ. ಅದಿಕ್ಕೆ ಇವತ್ತೇ ಇಲ್ಲಿಂದ ಹೊರಡಬೇಕು. ಪೋಲೀಸಿನವರ ಸಂಖೈ ಜಾಸ್ತಿಯಾದಷ್ಟೂ ನಮ್ಮ ಸದ್ಯದ ನಕ್ಸರಲ್ಲೊಬ್ಬರಾಗಬೇಕೆಂಬ ಗುರಿ ತಲುಪಲು ಕಷ್ಟಸಾಧ್ಯವಾಗುತ್ತದೆ”
“ಇವತ್ತೇ ಹೊರಡೋಣ ಅಂತೀಯಾ?”
“ಹೌದು ಕೀರ್ತನಾ. ಭಯವಾಗ್ತಿದೆಯಾ?”
          “ಭಯವೇನಿಲ್ಲ. ಮನೆಯವರನ್ನು ನೋಡಿ ಹದಿನೈದು ದಿನಗಳ ಮೇಲಾಗಿತ್ತು. ...ಇರ್ಲಿ ಬಿಡು. ಯಾವತ್ತಿದ್ದರೂ ದೂರವಾಗಲೇಬೇಕಲ್ಲ......ಬಸ್ ಎಷ್ಟೊತ್ತಿಗಿದೆ”
“ರಾತ್ರಿ ಒಂಭತ್ತೂವರೆಗೆ. ಇಲ್ಲಿಂದ ನೇರ ಬಸ್ ನಿಲ್ದಾಣಕ್ಕೆ ಹೋಗಿ ಎರಡು ಸೀಟನ್ನು ರಿಸರ್ವ್ ಮಾಡಿಸಿ ಮನೆಗ್ಹೋಗಿ ಬ್ಯಾಗ್ ತೆಗೆದುಕೊಂಡು ಹೊರಟುಬಿಡೋಣ. ನೀನು ಈಗಲೇ ಬಂದುಬಿಡು”
“ಈಗಲೇ ಅಲ್ಲಿಗೆ ಬಂದು ಏನು ಮಾಡೋದು?”
“ಪ್ಲೀಸ್ ಕೀರ್ತನಾ. ನಾನೊಬ್ಬನೇ ಇರೋದಿಕ್ಕಾಗೋದಿಲ್ಲ. ನನ್ನ ಸುತ್ತಲಿದ್ದವರೆಲ್ಲ ಭಾವನೆಗಳ ಈಟಿಯಿಂದ ತಿವಿದೂ ತಿವಿದೂ ಸಾಯಿಸುತ್ತಾರೇನೋ ಎಂದು ಭಯವಾಗ್ತಿದೆ. ‘ಲೋಕಿ ನನ್ನನ್ನು ಬಿಟ್ಟು ಹೊರಟುಹೋಗ್ತಿಯೇನೋ’ ಎಂದು ಪ್ರತಿಯೊಬ್ಬರೂ ಕೂಗಿ ಕೂಗಿ ಕೇಳುತ್ತಿದ್ದಾರೇನೋ ಎಂಬ ಭ್ರಮೆ. ನೀನು ಜೊತೆಯಲ್ಲಿದ್ದರೆ ಒಂದಷ್ಟು ಧೈರ್ಯ. ಪ್ಲೀಸ್ ಬಾ”
“ಆಯ್ತು ಲೋಕಿ. ನನಗೂ ಒಬ್ಬಳೇ ಇರೋದಿಕ್ಕೆ ಭಯವಾಗುತ್ತೆ. ಐದು ನಿಮಿಷ ಕುಳಿತಿರು. ಒಂದೆರಡು ಜೊತೆ ಬಟ್ಟೆ ತುರುಕಿಕೊಂಡು ಬರ್ತೀನಿ” ಎಂದ್ಹೇಳಿ ಹಾಸ್ಟೆಲ್ಲಿಗೆ ಹೋದಳು.
ಹಾಸ್ಟೆಲ್ಲಿನಿಂದ ಕೀರ್ತನಾಳನ್ನು ಕರೆದುಕೊಂಡು ಮನೆಗೆ ಬಂದ. ಸ್ನೇಹಾಳಿಗಂದು ಲ್ಯಾಬ್ ಇದ್ದುದರಿಂದ ಇನ್ನೂ ಬಂದಿರಲಿಲ್ಲ. ಮನೆಯಿಂದ ತಂದೆಯ ಅಂಗಡಿಗೆ ಫೋನ್ ಮಾಡಿ “ಇವತ್ತು ಸ್ನೇಹಿತನ ರೂಮಿನಲ್ಲಿ ಓದಿಕೊಳ್ಳುವುದಿಕ್ಕೆ ಹೋಗ್ತಾ ಇದ್ದೀನಿ. ನಾಳೆ ಮಧ್ಯಾಹ್ನ ಮನೆಗೆ ಬರ್ತೀನಿ” ಎಂದ್ಹೇಳಿದ.
ಸಂಜೆ ನಾಲ್ಕರ ಸಮಯಕ್ಕೆ ಬಸ್ ನಿಲ್ದಾಣಕ್ಕೆ ಬಂದು ಸೀಟ್ ರಿಸರ್ವ್ ಮಾಡಿಸಿ ಹೊರನಡೆದರು. ಶೃಂಗೇರಿಗೆ ಬಸ್ ಹೊರಡಲು ಇನ್ನೂ ಐದೂವರೆ ಘಂಟೆಯಿತ್ತು.
“ಲೋಕಿ. ಹೀಗೆ ಇದ್ದಕ್ಕಿದ್ದ ಹಾಗೆ ನಾಪತ್ತೆಯಾಗಿಬಿಟ್ಟರೆ ಮನೆಯವರು ಪೋಲೀಸರಿಗೆ ಕಂಪ್ಲೇಂಟ್ ಕೊಡುತ್ತಾರೆ. ಅದರಿಂದ ನಮಗೇ ತೊಂದರೆ. ಆದಕಾರಣ ನಾವೇ ಪತ್ರ ಬರೆದು ಸೂಕ್ಷ್ಮವಾಗಿ ಮನೆಯವರಿಗೆ ವಿಷಯ ತಿಳಿಸುವುದು ಒಳ್ಳೆಯದಲ್ವಾ?”
ಕೀರ್ತನಾ ಹೇಳಿದ್ದು ಸರಿಯೆನ್ನಿಸಿತು. ಇಬ್ಬರೂ ಬಸ್ ನಿಲ್ದಾಣದಿಂದ ಕೊಂಚ ದೂರದಲ್ಲಿ ಜನತಾ ಬಜಾರಿನ ಬಳಿ ಇದ್ದ ಮೈಸೂರಿನ ಮುಖ್ಯ ಅಂಚೆ ಕಛೇರಿಗೆ ಹೋದರು. ಲೋಕಿ ಮೂರು ಪತ್ರಗಳನ್ನು ತೆಗೆದುಕೊಂಡ.
“ಮೂರು ಪತ್ರ ಯಾರಿಗೆ ಲೋಕಿ?” ಅಂಚೆ ಕಛೇರಿಯಿಂದ ಹೊರಬರುತ್ತಿದ್ದಾಗ ಕೇಳಿದ ಕೀರ್ತನಾ ಮುಂದುವರೆಸುತ್ತಾ “ಒಂದು ನನ್ನ, ಇನ್ನೊಂದು ನಿನ್ನ ಮನೆಯವರಿಗೆ; ಮೂರನೆಯದು ಪೂರ್ಣಿಮಾಗಾ?”
“ಹ್ಞೂ” ನೋವಿನಲ್ಲದ್ದಿದ್ದ ಮನದಿಂದ ಹೇಳಿದ ಲೋಕಿ.
ಪಾರ್ಕೊಂದಕ್ಕೆ ಹೋಗಿ ಪತ್ರಗಳನ್ನು ಬರೆದು ಮುಗಿಸಿ ಅಂಚೆ ಪೆಟ್ಟಿಗೆಗೆ ಹಾಕಿದರು.
ಇನ್ನುಳಿದ ನಾಲ್ಕು ಘಂಟೆಯ ಅವಧಿಯಲ್ಲಿ ಇಬ್ಬರೂ ಮೌನದ ಸೆರಗಿನಲ್ಲಿ ದುಃಖ ತುಂಬಿದ ಮನವನ್ನಿಟ್ಟರು. ಸಮಯ ಒಂಭತ್ತಾದಾಗ ನಿಲ್ದಾಣಕ್ಕೆ ಬಂದು ಬಸ್ ಹತ್ತಿ ಕುಳಿತರು; ಹಸಿವು ಮಾಯವಾಗಿತ್ತು.

No comments:

Post a Comment