May 20, 2014

ನಿರೀಕ್ಷೆಗಳನ್ನು ಮೀರಿಸಿದ ಮತದಾರ “ಪ್ರಭು”



ಡಾ ಅಶೋಕ್ ಕೆ ಆರ್
ಭಾರತದ ಬಹುದೊಡ್ಡ ಐಂದ್ರಜಾಲ ಮತದಾನ ಮತ್ತು ಬಹುದೊಡ್ಡ ಐಂದ್ರಜಾಲಿಕ ಮತದಾರ! 2004ರ ಲೋಕಸಭಾ ಚುನಾವಣೆಗಳಿಂದಲೂ ಇದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಭಾರತೀಯ ಲೋಕಸಭಾ ಚುನಾವಣೆ ಬಲವಂತವಾಗಿ ಅಮೆರಿಕಾದ ಅಧ್ಯಕ್ಷೀಯ ಮಾದರಿಯ ಚುನಾವಣೆಯ ರೂಪದಲ್ಲಿ ನಡೆದು ಬಿಜೆಪಿ ಮತ್ತು ನರೇಂದ್ರ ಮೋದಿಯ ವಿರೋಧಿಗಳಿಗಿರಲಿ ಸ್ವತಃ ಬಿಜೆಪಿ ಮತ್ತು ನರೇಂದ್ರ ಮೋದಿಗೇ ಅಚ್ಚರಿಯೆನ್ನಿಸುವ ಫಲಿತಾಂಶ ನೀಡಿದ್ದಾನೆ ಭಾರತದ ಮತದಾರ. ಕಳೆದ ಇಪ್ಪತ್ತೈದು ಮೂವತ್ತು ವರುಷಗಳಿಂದ ಸಾಧ್ಯವಾಗದಿದ್ದ ಇನ್ನು ಮುಂದೆಯೂ ಅಸಾಧ್ಯವೆಂದೇ ತೋರಿದ್ದ ಏಕಪಕ್ಷದ ಬಹುಮತದ ಸಾಧನೆ 2014ರ ಚುನಾವಣೆಯಲ್ಲಿ ಸಾಧ್ಯವಾಗಿದೆ. ಮೊಟ್ಟ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರಕಾರವೊಂದು ಸರಳ ಬಹುಮತದೊಂದಿಗೆ ಸರಕಾರ ರಚಿಸುವಂತಾಗಿದೆ, ಎಲ್ಲರ ನಿರೀಕ್ಷೆಗಳನ್ನೂ ಮೀರಿ. ಚುನಾವಣ ಪೂರ್ವ ಹೊಂದಾಣಿಕೆಗಳನ್ನು ಮಾಡಿಕೊಂಡು ಎನ್.ಡಿ.ಎ ಹೆಸರಿನಡಿಯಲ್ಲಿ ಚುನಾವಣಾ ಆಖಾಡಕ್ಕೆ ಇಳಿದಿದ್ದ ಬಿಜೆಪಿ ತಂಡ ಮುನ್ನೂರಕ್ಕೂ ಅಧಿಕ ಸ್ಥಾನಗಳನ್ನು ಗೆದ್ದುಕೊಂಡಿದೆ. ಮತ್ತೊಂದೆಡೆ ಸ್ವಾತಂತ್ರೋತ್ತರ ಭಾರತದಲ್ಲಿ ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷವಾದ ಕಾಂಗ್ರೆಸ್ ಹಿಂದೆಂದೂ ಕಾಣದ ಸೋಲನ್ನನುಭವಿಸಿದೆ. ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಅರವತ್ತು ಚಿಲ್ಲರೆ ಸ್ಥಾನಗಳಿಗೆ ಸೀಮಿತಗೊಂಡಿದ್ದರೆ ಕಾಂಗ್ರೆಸ್ ಐವತ್ತರ ಗಡಿಯನ್ನೂ ದಾಟಲಾಗಲಿಲ್ಲ. ನರೇಂದ್ರ ಮೋದಿ ಮತ್ತಾತನ ಥಿಂಕ್ ಟ್ಯಾಂಕಿನ ಚಾಣಾಕ್ಷತನ, ಜಾಗರೂಕ ರಾಜಕೀಯ ನಡೆಗಳು ನಿರೀಕ್ಷೆಗೂ ಮೀರಿದ ಫಲಿತಾಂಶವನ್ನು ನೀಡಿದೆ ಎಂಬುದರಲ್ಲಿ ಸಂದೇಹವಿಲ್ಲ.

ಭಾರತದ ಪ್ರಜಾಪ್ರಭುತ್ವದ ಮೂಲತತ್ವಗಳಿಗೆ ವಿರುದ್ಧವಾಗಿ ಬಿಜೆಪಿ ನರೇಂದ್ರ ಮೋದಿಯನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿದ ದಿನದಿಂದಲೇ ಈ ಚುನಾವಣೆ ಕಳೆದ ಅನೇಕ ಚುನಾವಣೆಗಳಿಗಿಂತ ವಿಭಿನ್ನವಾಗುವುದನ್ನು ಒತ್ತಿ ಹೇಳಿತ್ತು. ‘ಅಭಿವೃದ್ಧಿ’ ಪರ ಘೋಷಣೆಗಳಿಂದ ಪ್ರಾರಂಭವಾದ ಚುನಾವಣಾ ಪ್ರಚಾರ ನಂತರದ ದಿನಗಳಲ್ಲಿ ವೈಯಕ್ತಿಕ ಟೀಕೆಗಳು, ಅಸಂಬದ್ಧ ಮಾತುಗಳು, ಅವಹೇಳನಕಾರಿ - ಪ್ರಚೋದನಕಾರಿ ಹೇಳಿಕೆಗಳು ವಿಚಾರಯುಕ್ತ ಚರ್ಚೆಗಳಿಂದ ಚುನಾವಣೆಯನ್ನು ದೂರಸರಿಸಿತು. ಮೋದಿಯ ಪ್ರಭಾವವನ್ನು ನಿರ್ಲ್ಯಕ್ಷಿಸಿದವರು, ಅಲಕ್ಷಿಸಿದವರು ಕೂಡ ಒಪ್ಪಬೇಕಾದ ಸಂಗತಿಯೆಂದರೆ ಈ ಇಡೀ ಚುನಾವಣೆ ಏಕವ್ಯಕ್ತಿಯ ಸುತ್ತ ಪರಿಭ್ರಮಿಸುತ್ತಿತ್ತು. ಮೋದಿ ಪರವಾಗಿರುವವರು ನಮೋ ನಮೋ ಮೋದಿ ಸರ್ಕಾರ್ ಎಂದು ಭಾವೋದ್ವೇಗಕ್ಕೆ ಒಳಗಾದರೆ ಮೋದಿ ವಿರೋಧಿಗಳು ಮೋದಿಯ ಬಗೆಗಲ್ಲದೆ ಬೇರಾವುದರ ಬಗ್ಗೆಯೂ ಮಾತನಾಡಲಾಗದ ಪರಿಸ್ಥಿತಿಗೆ ಬಂದು ನಿಂತರು. ಒಟ್ಟಿನಲ್ಲಿ ವಿಚಾರಗಳ ಚರ್ಚೆ ಹಿನ್ನೆಲೆಗೆ ಹೋಗಿ ಭಾವನಾತ್ಮಕ ವಿಷಯಗಳು ಮುನ್ನೆಲೆಗೆ ಬಂದು ಬಿಟ್ಟವು. ನಾವು ಮೋದಿಯನ್ನು ಬೆಂಬಲಿಸಿದೆವೋ ಮೋದಿಯನ್ನು ವಿರೋಧಿಸಿದೆವೋ ಒಟ್ಟಿನಲ್ಲಿ ದೇಶದ ಮೂವತ್ತೊಂದು ಪ್ರತಿಶತಃ ಮತದಾರರು ಮೋದಿಯನ್ನು ಪ್ರಧಾನಿಯನ್ನಾಗಿಸುವ ಉದ್ದಿಶ್ಯದಿಂದ ಬಿಜೆಪಿ ಮತ್ತದರ ಮಿತ್ರಪಕ್ಷಗಳನ್ನು ಗೆಲ್ಲಿಸಿದ್ದಾರೆ. ಅಷ್ಟರಮಟ್ಟಿಗೆ ಮತದಾರನ ನಿರ್ಧಾರವನ್ನು ತತ್ವ ಸಿದ್ಧಾಂತಗಳನ್ನು ಮೀರಿ ಪಕ್ಷಾತೀತವಾಗಿ ಗೌರವಿಸಲೇಬೇಕು. ಅಗೌರವ ತೋರಿದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆಯೆಡೆಗೆ ತೋರುವ ನಿರ್ಲಕ್ಷ್ಯವಾಗುತ್ತದೆ.

ಕಾಂಗ್ರೆಸ್ಸಿನ ಸೋಲು ಅಚ್ಚರಿಯಾಗೂ ಕಾಣಬೇಕಿಲ್ಲ, ಕಾಂಗ್ರೆಸ್ಸಿನೆಡೆಗೆ ಅನುಕಂಪವನ್ನು ತೋರುವ ಅವಶ್ಯಕತೆಯೂ ಇಲ್ಲ. ಕುಟುಂಬ ರಾಜಕಾರಣ, ಪ್ರಧಾನ ಮಂತ್ರಿ ಅಭ್ರಷ್ಟನಾಗಿದ್ದಾಗ್ಯೂ ಯುಪಿಎ ಸರಕಾರ ತನ್ನ ಎರಡನೇ ಆಡಳಿತಾವಧಿಯಲ್ಲಿ ನಡೆಸಿದ ಪ್ರಖಂಡ ಭ್ರಷ್ಟಾಚಾರಗಳಷ್ಟೇ ಸಾಕು ಕಾಂಗ್ರೆಸ್ ಮೊದಲು ತೊಲಗಲಿ ಎಂದು ಶಾಪ ಹಾಕಲು. ದೇಶಾದ್ಯಂತ ಜನರ ಶಾಪ ಕೆಲಸ ಮಾಡಿದ ಕಾರಣದಿಂದಾಗಿ ಅನೇಕ ರಾಜ್ಯಗಳಲ್ಲಿ ಕಾಂಗ್ರೆಸ್ ತನ್ನ ಖಾತೆಯನ್ನೇ ತೆರೆಯಲು ಸಾಧ್ಯವಾಗಿಲ್ಲ. ಯಾವ ರಾಜ್ಯದಲ್ಲೂ ಎರಡಂಕಿಯ ಸಂಖೈಯನ್ನೂ ಮುಟ್ಟಲಾಗಿಲ್ಲ. ತಾನು ಮುಳುಗುವುದರ ಜೊತೆಜೊತೆಗೆ ತನ್ನ ಪಾಪಕೃತ್ಯಗಳಲ್ಲಿ ಭಾಗಿಯಾಗಿದ್ದ ಮಿತ್ರ ಪಕ್ಷಗಳನ್ನೂ ಜೊತೆಯಾಗಿಯೇ ಮುಳುಗಿಸಿದೆ. ಕಾಂಗ್ರೆಸ್ ನೇತೃತ್ವದ ಯು.ಪಿ.ಎ ತನ್ನ ಎರಡನೆಯ ಆಡಳಿತಾವಧಿಯಲ್ಲಿ ನೀಡಿದ ದುರಾಡಳಿತ ನೋಡಿದವರ್ಯಾರೂ ಕಾಂಗ್ರೆಸ್ ಮರಳಿ ಬರಬೇಕೆಂದು ಬಯಸಿರಲಿಲ್ಲ. ಕಾಂಗ್ರೆಸ್ಸೇ ಮತ್ತೆ ಮರಳಿ ಬರಬೇಕು ಎಂದುಕೊಂಡಿದ್ದವರು ಒಂದೋ ಬಿಜೆಪಿ ಮತ್ತು ನರೇಂದ್ರ ಮೋದಿಯ ಅಂಧದ್ವೇಷಿಗಳು ಅಥವಾ ಕಾಂಗ್ರೆಸ್ಸಿನ ಕೋಮುವಾದತನವನ್ನು ಗುರುತಿಸಲಾಗದ ಸ್ವಘೋಷಿತ ಮುಗ್ಧರು. ದುರಾಡಳಿತಕ್ಕೆ ಕೊನೆಯಿರಲೇಬೇಕು, ಅದು ಕೊನೆಯಾಗಿದೆ. ಪಟ್ಟಿ ಮಾಡುತ್ತಾ ಹೋದರೆ ಕಾಂಗ್ರೆಸ್ಸಿನ ಸೋಲಿಗೆ ಅನೇಕಾನೇಕ ಕಾರಣಗಳಿವೆ. ಸೋಲಿಗೆ ಕಾರಣ ಹುಡುಕುವುದಕ್ಕಿಂತ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಏನು ಮಾಡಬಹುದು ಎಂಬುದರ ಮೇಲೆ ಅದರ ಭವಿಷ್ಯ ನಿಂತಿದೆ. ಇತಿಹಾಸವನ್ನು ಗಮನಿಸಿದರೆ -ಲೋಕಸಭೆಯಲ್ಲಿರಬಹುದು, ವಿಧಾನಸಭೆಗಳಲ್ಲಿರಬಹುದು- ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತಾಗಲೆಲ್ಲ ಕಾಂಗ್ರೆಸ್ ಏನನ್ನೂ ಮಾಡುವುದಿಲ್ಲ ಕಾಯುವುದರ ಹೊರತಾಗಿ! ಆಡಳಿತ ಪಕ್ಷದವರೇ ತಪ್ಪಿನ ಮೇಲೆ ತಪ್ಪು ಮಾಡಿ ಸೋಲುತ್ತಾರೆ ಬಿಡಿ ಎಂಬ ನಿರಾಸಕ್ತಿಯಿಂದಿರುತ್ತಾರೆಯೇ ಹೊರತು ಕಾಂಗ್ರೆಸ್ ಯಶಸ್ವಿ ವಿರೋಧ ಪಕ್ಷವಾಗಿ ಕೆಲಸ ಮಾಡಿದ್ದು ಇಲ್ಲವೇ ಇಲ್ಲ. ಅಚ್ಚರಿಯೆಂಬಂತೆ ದೇಶದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ಸೇತರ ಪಕ್ಷಗಳು ಕಾಂಗ್ರೆಸ್ಸಿಗಿಂತಲೂ ದುರಾಡಳಿತ ನೀಡಿ ಜನರು ಮತ್ತೆ ಕಾಂಗ್ರೆಸ್ಸನ್ನೇ ಅಧಿಕಾರಕ್ಕೆ ತಂದುಬಿಡುವಂತೆ ಮಾಡಿವೆ. ಕರ್ನಾಟಕದಲ್ಲಿ ಕಳೆದ ವರುಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ಆಡಳಿತ ಚುಕ್ಕಾಣಿ ಹಿಡಿದಿದ್ದು ಇತ್ತೀಚಿನ ಉದಾಹರಣೆ. ಕಾಲಕ್ರಮೇಣ ಈ ಉದಾಹರಣೆಗಳ ಸಂಖೈ ಕಡಿಮೆಯಾಗುತ್ತಿರುವುದರ ಸಾಕ್ಷಿಯಾಗಿ ಗುಜರಾತ್, ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಗಳನ್ನು ಗಮನಿಸಬಹುದು. ಅಲ್ಲಿನ ಆಡಳಿತ ಪಕ್ಷಗಳು (ಬಿಜೆಪಿ) ಸತತವಾಗಿ ಗೆಲ್ಲುತ್ತಿರುವುದಕ್ಕೆ ಕಾಂಗ್ರೆಸ್ಸಿನ ನಿರಾಸಕ್ತ ವಿರೋಧವೂ ಕಾರಣವೆಂದರೆ ತಪ್ಪಾಗಲಾರದು. ನನಗೆ ಅಯ್ಯೋ ಅನ್ನಿಸುವುದು ಕಾಂಗ್ರೆಸ್ಸಿನ ‘ಯುವರಾಜ’ ಎಂಬ ಪಟ್ಟ ಹೊರಿಸಿಕೊಂಡಿರುವ ರಾಹುಲ್ ಗಾಂಧಿಯ ಬಗ್ಗೆ! ಆತನನ್ನು ನೋಡಿದಾಗಲೆಲ್ಲ ಕಳೆದೇಳು ವರುಷಗಳ ಪ್ರಾಧ್ಯಾಪಕ ವೃತ್ತಿಯಲ್ಲಿ ನೋಡಿರುವ ಅನೇಕ ವಿದ್ಯಾರ್ಥಿಗಳು ನೆನಪಾಗುತ್ತಾರೆ! ಅನೇಕ ವಿದ್ಯಾರ್ಥಿಗಳಿಗೆ ವೈದ್ಯಕೀಯ, ದಂತ ವೈದ್ಯಕೀಯ ವೃತ್ತಿಯನ್ನು ಸೇರಲೇ ಇಷ್ಟವಿರುವುದಿಲ್ಲ, ಅವರ ತಂದೆ ತಾಯಿಗಳು ಇರುವ ಅಪಾರ ಪ್ರಮಾಣದ ಹಣವನ್ನು ವೆಚ್ಚ ಮಾಡುವ ಸಲುವಾಗಿಯೋ, ಪ್ರತಿಷ್ಟೆಗಾಗಿಯೋ, ತಾವು ಕಟ್ಟಿಸಿರುವ ಆಸ್ಪತ್ರೆಗಳನ್ನು ನಡೆಸಿಕೊಂಡು ಹೋಗಲು ಒಬ್ಬರು ಬೇಕಲ್ಲ ಎಂಬ ವಂಶ ಪಾರಂಪರ್ಯ ಮುಂದುವರೆಸುವ ಆಸೆಯಿಂದಲೋ ವೈದ್ಯ ಕೋರ್ಸಿಗೆ ಮಕ್ಕಳನ್ನು ದೂಡಿಬಿಡುತ್ತಾರೆ. ಓದುವುದು ತಲೆಗೆ ಹತ್ತದೆ, ಓದುವ ಆಸಕ್ತಿ ಇಲ್ಲದೆ ತಮ್ಮ ಜೀವನದ ಅಮೂಲ್ಯ ಕ್ಷಣಗಳನ್ನು ನಾಶಪಡಿಸಿಕೊಂಡುಬಿಡುತ್ತಾರೆ ಆ ಮಕ್ಕಳು. ರಾಹುಲ್ ಗಾಂಧಿಯ ನಡವಳಿಕೆ, ದೇಹ ಪರಿಭಾಷೆ ನನಗೆ ಪದೇ ಪದೇ ನನ್ನ ನಿರಾಸಕ್ತ ವಿದ್ಯಾರ್ಥಿಗಳನ್ನು ನೆನಪಿಸುತ್ತದೆ. ಏನೋ ತಿರುಗಾಡಿಕೊಂಡು ಇರೋಣವೆಂದು ಅಂದುಕೊಂಡಿದ್ದವನಿಗೆ ನೆಹರೂ ಕುಟುಂಬಸ್ಥನೆಂಬ ಕಾರಣಕ್ಕೆ ರಾಜಕೀಯಕ್ಕೆ ದೂಡಿದವರ ಬಗ್ಗೆ ಕೋಪವಿದೆ. ಕಾಂಗ್ರೆಸ್ಸಿನ ಸೋಲು ಗೆಲುವನ್ನು ಕಂಡವರಿಗೆ ನೆಹರೂ ಕುಟುಂಬಸ್ಥರಿಲ್ಲದೇ ಹೋದರೆ ಕಾಂಗ್ರೆಸ್ ಗೆಲುವು ಕಾಣುವುದು ಕಷ್ಟ ಎಂಬ ಭಾವನೆ ಬರುವುದು ಸಹಜ. ನೆಹರೂ ಕುಟುಂಬದ ಮೇಲೆ ಕಾಂಗ್ರೆಸ್ ಅತಿಯಾಗಿ ಅವಲಂಬಿತವಾಗುವುದಕ್ಕೆ ನೈಜ ಕಾರಣ ಕಾಂಗ್ರೆಸ್ಸಿನ ನೆಹರೂ ಕುಟುಂಬ ಮತ್ತಾ ಕುಟುಂಬದ ಅಂಧ ಭಕ್ತರು ಎರಡನೇ ಹಂತದ ನಾಯಕರನ್ನು ಬೆಳೆಯಲು ಅವಕಾಶವೇ ನೀಡದಿರುವುದು. ಇನ್ನಾದರೂ ಕಾಂಗ್ರೆಸ್ ತಿದ್ದಿ ನಡೆಯುತ್ತಾ? ಎರಡನೇ ಹಂತದ ನಾಯಕರನ್ನು ಬೆಳೆಸುವುದಕ್ಕಿಂತಾ ಪ್ರಿಯಾಂಕಾ ಗಾಂಧಿಯನ್ನು ಮುಂಚೂಣಿಗೆ ತಂದರೆ ಹೇಗೆ ಎಂದವರ ಆಲೋಚನೆ ಸಾಗುತ್ತಿರುತ್ತದೆಯಷ್ಟೇ!

ಕಾಂಗ್ರೆಸ್ಸಿನ ದುರಾಡಳಿತದ ಫಲ ಮತ್ತು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿಯ ಅವಿರತ ಪ್ರಯತ್ನದಿಂದ ಬಿಜೆಪಿ ಅಭೂತಪೂರ್ವವೆನ್ನಿಸುವ ಗೆಲುವು ಕಂಡಿದೆ. ಬಿಜೆಪಿಯ ಪ್ರಯತ್ನದಲ್ಲಿ ‘ಅಭಿವೃದ್ಧಿ’ ಮಂತ್ರವೆಂಬುದು ಪ್ರಾರಂಭದಲ್ಲಿ (ಮತ್ತೀಗ ಗೆಲುವು ಕಂಡ ನಂತರ) ಹೆಚ್ಚು ಕೇಳಿಬಂತಾದರೂ ರಾಜಕೀಯ ಚಾಣಾಕ್ಷತನವನ್ನು ಪ್ರದರ್ಶಿಸಿದ ರೀತಿಯನ್ನು ವೈರಿಗಳೂ ಮೆಚ್ಚಬೇಕು. ವಿರೋಧಿಗಳ ಅಸಂಬದ್ಧ ಮಾತುಗಳನ್ನೂ ತನ್ನ ಅನುಕೂಲಕ್ಕೆ ತಕ್ಕಂತೆ ಮಾರ್ಪಡಿಸಿಕೊಂಡ ರೀತಿ, ಹಿಂದುತ್ವದ ತಳಪಾಯವನ್ನು ಮುಚ್ಚಿ ಅಭಿವೃದ್ಧಿಗಷ್ಟೇ ಆದ್ಯತೆ ಎಂಬಂತೆ ತೋರ್ಪಡಿಸಿಕೊಂಡದ್ದೂ ಹಿಂದೂವಾದದಿಂದ ದೂರ ಉಳಿದಿರುವ ಜನರ ಮತಗಳನ್ನೂ ಆಕರ್ಷಿಸಿತು. ದೇಶ ದುಸ್ಥಿತಿಯಲ್ಲಿದೆ, ಇದನ್ನು ಉಳಿಸಲು ಮೋದಿಯೇ ಬರಬೇಕು ಎಂಬುದು ಅತಿಯಾಗಿ ಕಂಡಿತಾದರೂ ಭಾವನಾತ್ಮಕವಾಗಿ ಜನರನ್ನು ತಲುಪಲು (ಹೆಚ್ಚಾಗಿ ಉತ್ತರದ ರಾಜ್ಯಗಳಲ್ಲಿ) ಸಹಾಯಕವಾಯಿತು. ಇದು ಅಭಿವೃದ್ಧಿ ಮತ್ತು ಭ್ರಷ್ಟಾಚಾರದ ನಡುವಿನ ಯುದ್ಧ, ದೇಶಪ್ರೇಮಿ ಮತ್ತು ದೇಶದ್ರೋಹಿಗಳ ನಡುವಿನ ಯುದ್ಧ ಎಂಬಂತೆ ಬಿಂಬಿಸಿದ್ದೂ ನಡೆಯಿತು. ಪತ್ರಿಕಾ ಮತ್ತು ದೃಶ್ಯ ಮಾಧ್ಯಮಗಳ ಪಾತ್ರ ನವ ಭಾರತದ ಚುನಾವಣೆಯಲ್ಲಿ ಅತಿ ಹೆಚ್ಚು ಎಂಬುದು ಸಾಬೀತಾಗಿದ್ದೂ ಈ ಚುನಾವಣೆಯಲ್ಲಿಯೇ. ಮತ್ತು ನವ ಮಾಧ್ಯಮವಾದ ಅಂತರ್ಜಾಲ ಕೂಡ ಜನಾಭಿಪ್ರಾಯ ರೂಪಿಸಲು ಮಹತ್ತರವಾದದ್ದು ಎಂಬುದನ್ನೂ ಈ ಚುನಾವಣೆ ಸಾಬೀತುಮಾಡಿದೆ. ಮತ್ತಿವೆಲ್ಲ ಮಾಧ್ಯಮಗಳನ್ನೂ ಅತಿ ಹೆಚ್ಚು ಪ್ರಖರವಾಗಿ ಉಪಯೋಗಿಸಿಕೊಂಡಿದ್ದು ಬಿಜೆಪಿ. ಬಂಡವಾಳಶಾಹಿಗಳ ಹಿಡಿತಕ್ಕೊಳಪಟ್ಟಿರುವ ಮಾಧ್ಯಮಗಳು ಮೋದಿ ಪರವಾಗಿ ರೂಪಿಸಿದ ಜನಾಭಿಪ್ರಾಯ, ಮೋದಿ ಹೆಸರು ಪರ – ವಿರೋಧಿಗಳ ಮಾತಿನಲ್ಲೂ ನಲಿಯುವಂತೆ ಮಾಡಿದ್ದಕ್ಕೆ ಅನೇಕಾನೇಕ ಸ್ವಾರ್ಥ ಕಾರಣಗಳು ಇರುವುದನ್ನು ತಳ್ಳಿಹಾಕಲಾಗದು. ಜನಸಾಮಾನ್ಯರು ಮೋದಿಯನ್ನು ಆಯ್ಕೆ ಮಾಡಿದ್ದಕ್ಕೆ ಕಾಂಗ್ರೆಸ್ಸಿನ ದುರಾಡಳಿತ, ಸಮರ್ಥ ನಾಯಕತ್ವದ ನಿರೀಕ್ಷೆ, ದೇಶದ ಬಹುತೇಕರು ಕಣ್ಣಾರೆ ಕಂಡಿರದ ‘ಗುಜರಾತ್ ಮಾದರಿಯ ಅಭಿವೃದ್ಧಿ’ ಕಾರಣವಾದರೆ ಉದ್ಯಮಪತಿಗಳು ಮೋದಿಗೆ ಅಪಾರ ಪ್ರಮಾಣದ ಬೆಂಬಲ ನೀಡಲಾರಂಭಿಸಿದ್ದು ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಕೆಲವೊಮ್ಮೆ ಉದ್ಯಮಪತಿಗಳಿಗೆ ನೆರವಾಗುವಂತಹ ನಿರ್ಣಯಗಳನ್ನು ತೆಗೆದುಕೊಳ್ಳದೇ ಹೋದಾಗ. ಪರಿಸರ ಖಾತೆಯ ಸಚಿವರು ಪದೇ ಪದೇ ಬದಲಾದದ್ದಕ್ಕೂ ಅನೇಕ ಉದ್ಯಮಗಳಿಗೆ ಸೂಕ್ಷ್ಮ ಪರಿಸರದ ಪ್ರದೇಶದಲ್ಲಿ ಅನುಮತಿ ನೀಡದಿದ್ದುದಕ್ಕೂ ನೇರಾನೇರ ಸಂಬಂಧವಿದೆ (ಕೊನೆಯ ದಿನಗಳಲ್ಲಿ ಪರಿಸರ ಖಾತೆ ವಹಿಸಿಕೊಂಡ ಇಂಧನ ಖಾತೆಯನ್ನೂ ಹೊಂದಿದ್ದ ಮೊಯಿಲಿ ಅನೇಕ ಉದ್ಯಮಗಳಿಗೆ ಅನುಮತಿ ನೀಡಿಬಿಟ್ಟಿದ್ದಾರೆಂಬ ಆರೋಪವಿದೆ). ಇನ್ನು ಸಂಘ ಪರಿವಾರ ನರೇಂದ್ರ ಮೋದಿಯನ್ನು ಬೆಂಬಲಿಸಿದ್ದಕ್ಕೆ ಆತ ಕಟ್ಟರ್ ಹಿಂದುತ್ವವಾದಿ ಎಂಬುದೇ ಪ್ರಮುಖ ಕಾರಣ. ತನ್ನ ಮೂಗಿನ ನೇರಕ್ಕೆ ‘ಹಿಂದುತ್ವದ’ ರೂಪುರೇಷೆಗಳನ್ನು ನಿರ್ಧರಿಸುವ ಸಂಘ ಪರಿವಾರದವರು ಈಗ ಬಿಜೆಪಿಗೇ ಬಹುಮತ ಬಂದಿರುವ ಕಾರಣದಿಂದ ಸಂಘದ ‘ಹಿಂದುತ್ವ’ವನ್ನು ದೇಶದೆಲ್ಲೆಡೆ ಪ್ರಸರಿಸುವುದಕ್ಕೆ ಪ್ರಯತ್ನಪಡುವುದರಲ್ಲಿ ಹಿಂದೆ ಬೀಳುವುದಿಲ್ಲ. ಅಭಿವೃದ್ಧಿಯ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದಿರುವ ಬಿಜೆಪಿ ಅಭಿವೃದ್ಧಿಗೆ ಎಷ್ಟು ಪ್ರಾಶಸ್ತ್ಯ ನೀಡುತ್ತದೆ, ಧರ್ಮಾಧಾರಿತ ರಾಜಕಾರಣಕ್ಕೆ ಎಷ್ಟು ಪ್ರಾತಿನಿಧ್ಯ ನೀಡುತ್ತದೆ ಎಂಬುದರ ಮೇಲೆ ಅದರ ಮುಂದಿನ ಭವಿಷ್ಯ ರೂಪಿತವಾಗುತ್ತದೆ. ಬಹುಶಃ ಕರ್ನಾಟಕದ ಮೊದಲ ಬಿಜೆಪಿ ಸರಕಾರದ ಆಡಳಿತ ನರೇಂದ್ರ ಮೋದಿಗೆ ಉದಾಹರಣೆಯಾಗಬೇಕು – ಆಡಳಿತ ಯಾವ ರೀತಿಯಾಗಿ ಇರಬಾರದು ಎಂದು!

ಅದು ಕಾಂಗ್ರೆಸ್ ಇರಬಹುದು ಬಿಜೆಪಿ ಇರಬಹುದು, ಎರಡೂ ರಾಷ್ಟ್ರೀಯ ಪಕ್ಷಗಳೂ ಪ್ರಾದೇಶಿಕ ಪಕ್ಷಗಳ ಅಸ್ತಿತ್ವವನ್ನು ಮುಕ್ತಮನಸ್ಸಿನಿಂದ ಒಪ್ಪಲಾರದು. ಸಮ್ಮಿಶ್ರ ಸರ್ಕಾರಗಳ ಯುಗ ಪ್ರಾರಂಭವಾದಾಗ ಅನಿವಾರ್ಯವಾಗಿ ಬೇರೆ ನಿರ್ವಾಹವಿಲ್ಲದೆ ಪ್ರಾದೇಶಿಕ ಪಕ್ಷಗಳಿಗೆ ಮನ್ನಣೆ ನೀಡಲಾರಂಭಿಸಿದವಾದರೂ ಇವತ್ತಿಗೂ ರಾಷ್ಟ್ರೀಯ ಪಕ್ಷಗಳೆರಡಕ್ಕೂ ದೇಶದಲ್ಲಿ ಎರಡೇ ಬೃಹತ್ ಪಕ್ಷಗಳಿರಬೇಕೆಂಬ ಅಭಿಲಾಷೆಯಿದೆ. ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆ.ಡಿ.ಯು ಪಕ್ಷದ ಸೋಲು ಮತ್ತು ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಹೀನ ರಾಜಕಾರಣಕ್ಕೆ ಸಿಕ್ಕ ಸೋಲು ಪ್ರಾದೇಶಿಕ ಪಕ್ಷಗಳು ಮುಂದೆಯೂ ಅಸ್ತಿತ್ವದಲ್ಲಿರುತ್ತದೆಯೇ ಎಂಬುದರ ಬಗೆಗೆ ಅನುಮಾನಗಳನ್ನು ಹುಟ್ಟಿಹಾಕುತ್ತಾದರೂ ತಮಿಳುನಾಡು, ಒರಿಸ್ಸಾ, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಲ್ಲಿ ಯಾವ ಅಲೆಯ ಪ್ರವಾಹಕ್ಕೂ ಸಿಲುಕದೆ ಅಭೂತಪೂರ್ವ ಗೆಲುವು ದಕ್ಕಿಸಿಕೊಂಡ ಪಕ್ಷಗಳು, ಪ್ರಾದೇಶಿಕ ಪಕ್ಷಗಳು ಅವಶ್ಯಕ ಮತ್ತು ಅನಿವಾರ್ಯ ಎಂಬುದನ್ನು ಸಾರಿ ಹೇಳಿದೆ. ಪಶ್ಚಿಮ ಬಂಗಾಳದಲ್ಲಿ ಕಡೇ ಪಕ್ಷ ನರೇಂದ್ರ ಮೋದಿಯ ಪ್ರಭಾವದಿಂದಾಗಿ ಮತ ಗಳಿಕೆಯಲ್ಲಿ ಎರಡಂಕಿ ದಾಟಿದ ಬಿಜೆಪಿಯ ಸಾಧನೆ ಗಮನಾರ್ಹವಾದರೂ ಅನೇಕ ಚುನಾವಣಾಪೂರ್ವ ಹೊಂದಾಣಿಕೆಗಳ ನಂತರವೂ ತಮಿಳುನಾಡಿನಲ್ಲಿ ‘ಅಮ್ಮ’ ಜಯಲಲಿತಾ ನೇತೃತ್ವದ ಪಕ್ಷವನ್ನು ಅಲುಗಾಡಿಸಲೂ ಸಾಧ್ಯವಾಗಿಲ್ಲ. ತಮಿಳುನಾಡಿನ ಜನರು ದೇಶೀಯ ಭಾವನೆಗಳಿಗಿಂತ ಹೆಚ್ಚಾಗಿ ಸ್ಥಳೀಯ ಅಭಿವೃದ್ಧಿಯ ಆದ್ಯತೆಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ ಎಂಬುದು ಮತ್ತೊಮ್ಮೆ ರುಜುವಾತಾಗಿದೆ. ಒಂದು ವಿಶೇಷವಾದ ಸಂಗತಿಯೆಂದರೆ ಮುಂಚಿನ ದಿನಮಾನದಲ್ಲಿ ಹೆಚ್ಚಿನ ಮತದಾನವಾದರೆ ಅದು ಬಿಜೆಪಿ ಗೆಲುವಿಗೆ ಅನುಕೂಲಕರ, ಕಡಿಮೆ ಮತದಾನವಾದರೆ ಕಾಂಗ್ರೆಸ್ ಗೆಲುವು ಕಾಣುತ್ತೆ ಎಂಬ ಭಾವನೆಯಿತ್ತು. ಈ ಬಾರಿಯ ಚುನಾವಣೆಯಲ್ಲಿ ಅತಿ ಹೆಚ್ಚು ಮತದಾನವಾಗಿರುವ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಗೆಲುವು ಕಂಡಿದೆ ಎಂದು ಹೇಳುವ ಅಂಕಿ ಅಂಶ ಭವಿಷ್ಯತ್ತಿನ ರಾಜಕೀಯ ನಡೆಗಳನ್ನು ನಿರ್ಣಯಿಸಬಹುದು. ಉತ್ತರಪ್ರದೇಶದಲ್ಲಿ ನರೇಂದ್ರ ಮೋದಿಯ ಪ್ರಭಾವ ಮತ್ತದಕ್ಕಿಂತ ಹೆಚ್ಚಾಗಿ ನರೇಂದ್ರ ಮೋದಿಯ ಪರಮಾಪ್ತ ಅಮಿತ್ ಶಾ ನಡೆಸಿದ ಚಾಣಾಕ್ಷ ರಾಜನೀತಿಯ ಪ್ರಭಾವದಿಂದ ನಿರೀಕ್ಷಿತ ಐವತ್ತೂ ಚಿಲ್ಲರೆ ಸ್ಥಾನಗಳಿಗಿಂತ ಇಪ್ಪತ್ತು ಸ್ಥಾನಗಳನ್ನು ಹೆಚ್ಚಾಗಿ ಗೆದ್ದುಕೊಂಡಿದೆ ಬಿಜೆಪಿ. ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಕಡಿಮೆ ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದ್ದರೆ ಮಾಯಾವತಿ ನೇತೃತ್ವದ ಬಿಎಸ್ಪಿ ಒಂದೂ ಸ್ಥಾನ ಗಳಿಸಲಾಗಿಲ್ಲ. ಬಿಎಸ್ಪಿಯ ರಾಜಕೀಯಗಾಥೆ ಮುಗಿದೇ ಹೋಯಿತು ಎಂದು ಸ್ಥಾನಹೀನತೆಯ ಆಧಾರದ ಮೇಲೆ ನಿರ್ಧರಿಸುವಿರಾದರೆ ನಿಮಗೊಂದು ಅಚ್ಚರಿ ಕಾದಿದೆ! ದೇಶಾದ್ಯಂತ ಬಿಜೆಪಿ ಮೂವತ್ತೊಂದು ಪ್ರತಿಶತಃ ಮತಗಳಿಕೆ ಪಡೆದಿದ್ದರೆ, ಕಾಂಗ್ರೆಸ್ ಹತ್ತಿರತ್ತಿರ ಇಪ್ಪತ್ತು ಪ್ರತಿಶತಃ ಮತ ಗಳಿಸಿಕೊಂಡಿದೆ. ಮತಗಳಿಕೆಯಲ್ಲಿ ಮೂರನೇ ಸ್ಥಾನದಲ್ಲಿರುವುದು ನಾಲ್ಕರಷ್ಟು ಮತಗಳಿಸಿರುವ ಬಿಎಸ್ಪಿ! ಮತಗಳಿಕೆಯಲ್ಲಿ ಇನ್ನಿತರೆ ಪಕ್ಷಗಳಿಗಿಂತ ಮುಂದಿದ್ದರೂ ಸ್ಥಾನಗಳಿಸಲಾಗಿಲ್ಲವಷ್ಟೇ. ಇನ್ನು ಈ ಬಾರಿ ‘ಯಾರಿಗೂ ಮತವಿಲ್ಲ’(None of the Above – NOTA) ಎಂಬ ಆಯ್ಕೆಯನ್ನು ಶೇಕಡಾ ಒಂದರಷ್ಟು ಮಂದಿ ಅನುಮೋದಿಸಿದ್ದಾರೆ! ಯಾವ ಅಭ್ಯರ್ಥಿಯೂ ಅರ್ಹನಲ್ಲ ಎಂಬ ಈ ಆಯ್ಕೆ ಭವಿಷ್ಯತ್ತಿನಲ್ಲಿ ದೇಶದ ಪ್ರಜಾಪ್ರಭುತ್ವದ ಮಾದರಿಯನ್ನೇ ಬದಲಿಸಿದರೆ ಅಚ್ಚರಿಪಡಬೇಕಿಲ್ಲ. ಬದಲಾವಣೆಯ ಹರಿಕಾರನಂತೆ ಬಿಂಬಿಸಿಕೊಂಡು ಪ್ರಚಾರ ಕಾರ್ಯ ಪ್ರಾರಂಭಿಸಿದ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಬೆರಳಣಿಕೆಯ ಸ್ಥಾನಗಳನ್ನಷ್ಟೇ ಪಡೆದಿದೆ. ದೆಹಲಿಯಲ್ಲಿ ಒಂದೂ ಸ್ಥಾನ ಪಡೆಯಲೂ ಸಾಧ್ಯವಾಗಿಲ್ಲ. ವಾರಣಾಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧಿಸಿದ ಕೇಜ್ರಿವಾಲ್ ಗೆಲುವು ಸಾಧಿಸಿಲ್ಲವಾದರೂ ಮೋದಿಯ ಗೆಲುವಿನ ಅಂತರವನ್ನು ಕಡಿಮೆಮಾಡುವುದರಲ್ಲಿ ಯಶ ಕಂಡಿದ್ದಾರೆ. ಆಮ್ ಆದ್ಮಿ ಗಳಿಸಿರುವ ಮತ ಮತ್ತು ಸ್ಥಾನದ ಆಧಾರದಲ್ಲಿ ಅದರ ಅಸ್ತಿತ್ವ ಮುಗಿಯುತು ಎಂದು ಶರಾ ಬರೆದಿರಾದರೆ ತನ್ನ ಮೊದಲ ಚುನಾವಣೆಯಲ್ಲಿ ಬಿಜೆಪಿಯಂತಹ ಒಂದು ಸೈದ್ಧಾಂತಿಕ ತಳಹದಿಯ ಪಕ್ಷ ತನ್ನ ಮೊದಲ ಚುನಾವಣೆಯಲ್ಲಿ ಗೆದ್ದ ಸ್ಥಾನಗಳ ಸಂಖೈಯನ್ನು ಗಮನಿಸಬೇಕು. ಆಮ್ ಆದ್ಮಿ ಪಕ್ಷಕ್ಕೆ ಒಂದು ಸೈದ್ಧಾಂತಿಕ ಚೌಕಟ್ಟಿಲ್ಲವೆನ್ನುವುದು ಅದರ ಸಬಲತೆಯೂ ಹೌದು ದೌರ್ಬಲ್ಯವೂ ಹೌದು. ರಾಜಕೀಯದಿಂದ ವಿಮುಖರಾದವರಲ್ಲೂ ರಾಜಕೀಯ ಪ್ರಜ್ಞೆ ಮೂಡಿಸಿದ್ದು ಆಮ್ ಆದ್ಮಿ ಪಕ್ಷದ ಸದ್ಯದ ಸಾಧನೆ. ಮುಂದೆ ಯಾವ ರೀತಿಯಾಗಿ ಎಷ್ಟು ಸಮರ್ಥವಾಗಿ ವಿರೋಧ ಪಕ್ಷವಾಗಿ ಜನರ ಪರವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಕಾದು ನೋಡಬೇಕಷ್ಟೇ. ಇನ್ನು ದೇಶದಲ್ಲಿ ನಿಧಾನವಾಗಿ ಅಪ್ರಾಮುಖ್ಯವಾಗುತ್ತಿರುವುದು ಎಡಪಂಥೀಯ ಪಕ್ಷಗಳು. ಬಂಡವಾಳಶಾಹಿತನದ ಜಾಗತೀಕರಣದ ದಿನಗಳಲ್ಲಿ ಎಡಪಂಥೀಯತೆ ಹಳೆಯ ವಿಚಾರ, ಅನಗತ್ಯ ವಿಚಾರವೆಂಬಂತೆ ಕಾಣಲಾರಂಭಿಸಿದೆ. ಪಶ್ಚಿಮ ಬಂಗಾಳದಲ್ಲೂ ತಮ್ಮ ಅಸ್ತಿತ್ವ ಕಂಡುಕೊಳ್ಳಲು ಎಡಪಂಥೀಯ ಪಕ್ಷಗಳು ಹೆಣಗುತ್ತಿವೆ. ತ್ರಿಪುರಾ ಮತ್ತು ಕೇರಳದಲ್ಲಿ ತಮ್ಮ ಅಸ್ತಿತ್ವ ಕೊಂಚ ಮಟ್ಟಿಗೆ ಉಳಿಸಿಕೊಂಡಿವೆ. ಎಡಪಂಥೀಯ ಪಕ್ಷಗಳು ಇಂದಿನ ಕಾಲಕ್ಕೆ ಅಪ್ರಸ್ತುತವೆಂದು ಹೇಳಿಬಿಡುವುದು ಸುಲಭವಾದರೂ ಯು.ಪಿ.ಎಯಿಂದ ಎಡಪಕ್ಷಗಳು ತೊರೆದ ನಂತರ ಯು.ಪಿ.ಎ ಪ್ರಚಂಡ ಭ್ರಷ್ಟಾಚಾರದಲ್ಲಿ ಮುಳುಗಿತು ಎಂಬ ಅಂಶ ಅಧ್ಯಯನಾರ್ಹ. ಬದಲಾದ ಕಾಲಘಟ್ಟದಲ್ಲಿ ಮಾರ್ಕ್ಸ್ ಲೆನಿನ್ ಮಾವೋನ ವಿಚಾರಧಾರೆಗಳೊಡನೆ ಹೊಸ ವಿಚಾರಗಳನ್ನು ರೂಪಿಸುವಲ್ಲಿ ಜಾಗತೀಕರಣ ಹುಟ್ಟುಹಾಕುವ ನವೀನ ಮಾದರಿಯ ಉಪದ್ಯಾಪಗಳಿಗೆ ಹೊಸ ಬಗೆಯ ಹೋರಾಟಗಳನ್ನು ಚಳುವಳಿಗಳನ್ನು ಕಟ್ಟದಿದ್ದರೆ ಅನುಮಾನವೇ ಬೇಡ ಹೆಸರಿಗೂ ಎಡಪಂಥೀಯ ಪಕ್ಷಗಳು ಉಳಿಯುವುದಿಲ್ಲ. ಪ್ರತ್ಯೇಕ ತೆಲಂಗಾಣ ರಾಜ್ಯವೆಂಬುದು ಅಲ್ಲಿನ ಜನರ ಬಹುದಿನದ ಬೇಡಿಕೆಯಾಗಿತ್ತಾದರೂ ಆ ಬೇಡಿಕೆಯನ್ನು ಈಡೇರಿಸಲು ಅನಗತ್ಯ ಲಂಬಿಸುತ್ತಿದ್ದ ಕಾಂಗ್ರೆಸ್ ಚುನಾವಣಾ ಲಾಭಕ್ಕಾಗಿಯೇ ಆಂಧ್ರಪ್ರದೇಶವನ್ನು ವಿಭಜಿಸಿತೆ ಹೊರತು ತೆಲಂಗಾಣದ ಜನರ ಆಶೋತ್ತರಗಳನ್ನು ಈಡೇರಿಸಲಲ್ಲ. ಕಾಂಗ್ರೆಸ್ಸಿನ ಲಾಭ ತಿರುಮಂತ್ರವಾಗಿ ಸೀಮಾಂದ್ರ ಮತ್ತು ತೆಲಂಗಾಣಗಳೆರಡರಲ್ಲಿಯೂ ಪ್ರಾದೇಶಿಕ ಪಕ್ಷಗಳಾದ ಟಿ.ಆರ್.ಎಸ್ ಮತ್ತು ತೆಲುಗುದೇಶಂ ಜಯಭೇರಿ ಬಾರಿಸಿದವು. ಕಾಂಗ್ರೆಸ್ಸಿನಿಂದ ಸಿಡಿದು ನಿಂತು ಹೊಸ ಪಕ್ಷ ಕಟ್ಟಿದ ಜಗನ್ ರೆಡ್ಡಿ ಕೂಡ ಆಂಧ್ರ ವಿಭಜನೆಯ ಲಾಭ ಪಡೆದುಕೊಳ್ಳುವಲ್ಲಿ ಯಶಸ್ವಿಯಾದ.

ಇನ್ನು ಕರ್ನಾಟಕದ ಮಟ್ಟಿಗೆ ಈ ಸಲದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿರುವ ಮೂರು ಪ್ರಮುಖ ಪಕ್ಷಗಳೂ ಸೋತು ಗೆದ್ದಿದ್ದಾರೆ, ಗೆದ್ದರೂ ಸೋತಿದ್ದಾರೆ! ಅಂಕಿ ಸಂಖೈಗಳ ಆಧಾರದಲ್ಲಿ ಕಳೆದ ಚುನಾವಣೆಯಲ್ಲಿ 19 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ 17 ಸ್ಥಾನ ಗೆದ್ದಿದೆ, ಕಾಂಗ್ರೆಸ್ 6 ರಿಂದ 9ಕ್ಕೆ ಏರಿಕೆ ಕಂಡಿದ್ದರೆ ಜೆಡಿಎಸ್ 3ರಿಂದ 2ಕ್ಕೆ ಇಳಿದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಆಡಳಿತದಲ್ಲಿದ್ದ ಕಾರಣ ಕಾಂಗ್ರೆಸ್ ಅಂಕಿ ಸಂಖೈಯಲ್ಲಿ ಏರಿಕೆ ಕಂಡಿದ್ದರೂ ಸೋತಿದೆ. ಮೋದಿ ಅಲೆಯಿಲ್ಲ ಎಂದೇ ಹೇಳುತ್ತಿದ್ದ ರಾಜ್ಯದ ಕಾಂಗ್ರೆಸ್ ನಾಯಕರು ಎಂದಿನಂತೆ ನಮ್ಮ ಆಡಳಿತಕ್ಕೂ ಲೋಕಸಭಾ ಚುನಾವಣೆಗೂ ಸಂಬಂಧವಿಲ್ಲವೆಂದು ಹೇಳಲಾರಂಭಿಸಿದ್ದಾರೆ. ಅವರ ಮಾತಿನಲ್ಲಿ ಅಲ್ಪ ಸ್ವಲ್ಪ ಸತ್ಯಾಂಶವಿರುವುದು ಹೌದಾದರೂ ಆಡಳಿತಾರೂಢ ಪಕ್ಷ ಅದೂ ಆಡಳಿತ ವಿರೋಧಿ ಅಲೆ ಇನ್ನೂ ಮೂಡಿರದ ಸಂದರ್ಭದಲ್ಲಿ ಇನ್ನೊಂದಷ್ಟು ಸ್ಥಾನಗಳನ್ನು ಗೆದ್ದು ತನ್ನ ಸಾಮರ್ಥ್ಯ ತೋರಬೇಕಿತ್ತು. ಇನ್ನು ಜೆಡಿಎಸ್ ತನ್ನ ‘ಕುಟುಂಬಸ್ಥರನ್ನೆ’ ಗೆಲ್ಲಿಸಿಕೊಳ್ಳಲಾಗಿಲ್ಲ. ಜೊತೆಗೆ ಮೈಸೂರು ಮತ್ತು ಚಾಮರಾಜನಗರದಲ್ಲಿ ಸಿದ್ಧರಾಮಯ್ಯನವರ ಪ್ರಭಾವ ಕಡಿಮೆ ಮಾಡಿಸಲೆಂದೇ ಕಡೆಯ ದಿನಗಳಲ್ಲಿ ತನ್ನ ಕಾರ್ಯಕರ್ತರ ಮುಖಾಂತರ ಬಿಜೆಪಿಗೆ ಮತ ಹಾಕುವಂತೆ ಪ್ರಚಾರ ಮಾಡಿಸುತ್ತಿರಲಿಲ್ಲ. ಮೈಸೂರಿನಲ್ಲಿ ತನ್ನ ಕಡುವೈರಿ ವಿಶ್ವನಾಥರನ್ನು ಸೋಲಿಸಲು ಜೆಡಿಎಸ್ಸಿನ ಈ ತಂತ್ರ ಯಶ ಕಂಡಿತು. ಇಲ್ಲವಾದಲ್ಲಿ ವಿಷವನ್ನಷ್ಟೇ ಕಾರಿಬಲ್ಲ ಪ್ರತಾಪ ಸಿಂಹ ಗೆಲುವು ಕಾಣುವುದು ಸಾಧ್ಯವರಲಿಲ್ಲ (ಜೆಡಿಎಸ್ಸಿನ ಬೆಂಬಲದ ಜೊತೆಜೊತೆಗೆ ‘ಹಿಂದೂ ಒಂದು’ ಎಂದೇ ಅರಚುತ್ತಿದ್ದ ಸಿಂಹ ಚುನಾವಣೆಗೆ ನಿಂತ ತಕ್ಷಣ ಜಾತಿಪ್ರಜ್ಞನಾಗಿ ಪ್ರತಾಪ ಸಿಂಹ ಗೌಡನಾಗಿದ್ದೂ ಗೆಲುವಿಗೆ ಸಹಾಯಕವಾಯಿತು). ಮತದಾರನ ಮನಸ್ಸನ್ನು, ಆತನ ಆದ್ಯತೆಗಳನ್ನು ತಿಳಿಯುವುದು ಕಷ್ಟವೆನ್ನುವುದಕ್ಕೂ ಕರ್ನಾಟಕದ ಫಲಿತಾಂಶ ನಿದರ್ಶನ. ದೇಶಾದ್ಯಂತ ಮೋದಿ ಮತ್ತು ಬಿಜೆಪಿ ಕಾಂಗ್ರೆಸ್ಸಿನ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದಂತೆ ವರ್ತಿಸಿದರೂ ಕರ್ನಾಟಕದಲ್ಲಿ ಬಿಜೆಪಿಯಿಂದ ತೊರೆದು ಹೋಗಿದ್ದ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ ಎಂಬ ಆರೋಪ ಹೊತ್ತಿದ್ದ ಕಾರಾಗೃಹವಾಸವನ್ನೂ ಅನುಭವಿಸಿದ್ದ ಯಡಿಯೂರಪ್ಪ ಮತ್ತು ಇನ್ನೂ ಕಾರಾಗೃಹದಲ್ಲಿರುವ ಜನಾರ್ಧನ ರೆಡ್ಡಿಯ ಆಪ್ತ ಶ್ರೀರಾಮುಲುರನ್ನು ಮರಳಿ ಪಕ್ಷಕ್ಕೆ ಕರೆತಂದರು. ಇಬ್ಬರ ಸೇರ್ಪಡೆಯೂ ಪಕ್ಷಕ್ಕೆ ಲಾಭಮಾಡಿಕೊಟ್ಟಿರುವುದನ್ನು ಫಲಿತಾಂಶ ತೋರ್ಪಡಿಸುತ್ತಾದರೂ ಅಷ್ಟರಮಟ್ಟಿಗೆ ಭ್ರಷ್ಟಾಚಾರದ ವಿರುದ್ಧದ ಬಿಜೆಪಿಯ ಹೋರಾಟವು ಚುನಾವಣಾ ಮತಗಳಿಗಾಗಿ ಮಾತ್ರ ಎಂಬುದಾಗಿ ತೋರುತ್ತದೆ. ಮೋದಿಯ ಗೆಲುವಿಗಾಗಿ ನಮ್ಮನ್ನು ಗೆಲ್ಲಿಸಿ ಎಂದು ಜನರನ್ನು ಬೇಡಿಕೊಂಡವರೇ ಕರ್ನಾಟಕದಲ್ಲಿ ಹೆಚ್ಚಿದ್ದರೆ ಹೊರತು ತಮ್ಮ ಸ್ವಸಾಧನೆಗಳ ಆಧಾರದಲ್ಲಿ ಅಲ್ಲ. ಮೊದಲ ಬಾರಿ ಚುನಾವಣೆಗೆ ನಿಂತ ಪ್ರತಾಪಸಿಂಹನೂ ಸಂಸದರಾಗಿ ಸಚಿವರಾಗಿ ಕೆಲಸ ಮಾಡಿದ ಅನಂತಕುಮಾರರೂ ಮೋದಿ ಜಪವಷ್ಟೇ ಮಾಡಿದ್ದು ತಮ್ಮ ಸ್ವಸಾಮರ್ಥ್ಯದಲ್ಲಿ ಅಪನಂಬುಗೆ ಹೊಂದಿದ ಕಾರಣದಿಂದಲೇ. ಭ್ರಷ್ಟಾಚಾರದ ವಿರುದ್ಧ ಈ ಬಾರಿಯ ಮತ ಎಂದು ಎಷ್ಟೇ ಸಾರಿದರೂ ಯಡಿಯೂರಪ್ಪ ಅಭೂತಪೂರ್ವ ಅಂತರದಿಂದ ಗೆಲುವು ಸಾಧಿಸಿರುವುದು ಚುನಾವಣೆಯ ಗೆಲುವಿಗೆ ಅಲೆಗಳನ್ನೂ ಹೊರತುಪಡಿಸಿಯೂ ಇನ್ನೂ ಅನೇಕಾನೇಕ ಸಂಗತಿಗಳು ಸಹಾಯಕವಾಗುವುದನ್ನು ತೋರ್ಪಡಿಸುತ್ತದೆ. ಮೋದಿಯನ್ನು ಪ್ರಧಾನಮಂತ್ರಿಯಾಗಿಸುವ ಭರದಲ್ಲಿ ಕರ್ನಾಟಕದ ಜನತೆ ಅನೇಕ ಕಡೆ ಅಸಮರ್ಪಕ ವ್ಯಕ್ತಿಗಳನ್ನು ಆರಿಸಿಬಿಟ್ಟಿದ್ದಾರೇನೋ ಎನ್ನಿಸುತ್ತದೆ. ಒಟ್ಟಿನಲ್ಲಿ ಈ ಬಾರಿಯೂ ಕೇಂದ್ರದಲ್ಲಿ ಒಂದು ಸರ್ಕಾರ ರಾಜ್ಯದಲ್ಲಿ ಮತ್ತೊಂದು ಪಕ್ಷದ ಸರ್ಕಾರ. ಬಹುಶಃ ಕರ್ನಾಟಕಕ್ಕೆ ಒಂದು ಪ್ರತ್ಯೇಕ ಪ್ರಾದೇಶಿಕ ಪಕ್ಷದ ಅವಶ್ಯಕತೆ ಹಿಂದೆಂದಿಗಿಂತಲೂ ಹೆಚ್ಚಿದೆ.

ಕಾಂಗ್ರೆಸ್ಸನ್ನು, ಅದರ ಕಾರ್ಯವೈಖರಿಯನ್ನು, ಅದರ ನೀತಿಗಳನ್ನು ವಿರೋಧಿಸಿ ಗೆದ್ದವರೆಲ್ಲ ಕಾಲ ಸವೆದ ಹಾಗೆಲ್ಲ ಕಾಂಗ್ರೆಸ್ಸಿಗರಂತೆಯೇ ಆಗಿ ಹೋಗಿದ್ದು, ಕೆಲವೊಮ್ಮೆ ಕಾಂಗ್ರೆಸ್ಸನ್ನೂ ಮೀರಿ ಹೋಗಿದ್ದು ಈ ದೇಶದ ದುರಂತ. ಕಾಂಗ್ರೆಸ್ಸಿನ ವಂಶಾಡಳಿತವನ್ನು ವಿರೋಧಿಸುತ್ತಲೇ ಬೆಳೆದ ಜನತಾ ಪರಿವಾರದ ಬಹಳಷ್ಟು ಪಕ್ಷಗಳಲ್ಲಿ ಇವತ್ತು ವಂಶಾಡಳಿತದ್ದೇ ಕಾರುಬಾರು. ಕಾಂಗ್ರೆಸ್ಸಿನ ಹೈಕಮಾಂಡ್ ಸಂಸ್ಕೃತಿ, ಏಕ ವ್ಯಕ್ತಿ ಪ್ರದರ್ಶನವನ್ನು ವಿರೋಧಿಸಿದ ಪಕ್ಷಗಳಲ್ಲೂ ಅದೇ ಸಂಸ್ಕೃತಿ ನೆಲೆಯೂರಿತು, ಬಿಜೆಪಿಯಲ್ಲಿ ಈ ಬಾರಿ ನೆಲೆಯೂರಲಾರಂಭಿಸಿರುವಂತೆ, ಹೊಸ ಪಕ್ಷ ಎಎಪಿಯಲ್ಲೂ ಕಾಣಲಾರಂಭಿಸಿರುವಂತೆ. ಕಾಂಗ್ರೆಸ್ ಮುಸ್ಲಿಮರನ್ನು ಓಲೈಸುತ್ತದೆ ಎಂದಬ್ಬರಿಸುವ ಬಿಜೆಪಿ ಹಿಂದೂ ಓಲೈಕೆಗೆ ತೊಡಗಿದ್ದು ಮತಬ್ಯಾಂಕಿನ ಮೇಲೆ ಕಣ್ಣಿಡುವ ಪಕ್ಷಗಳು ಕಾರ್ಯನಿರ್ವಹಿಸುವ ರೀತಿಯನ್ನು ತಿಳಿಸಿತು. ಇನ್ನು ಭ್ರಷ್ಟಾಚಾರದ ಬಗೆಗಿನ ಮಾತು. ಭ್ರಷ್ಟಾಚಾರವೆಂಬುದು ಕಾಂಗ್ರೆಸ್ಸಷ್ಟೇ ಅಲ್ಲದೆ ಎಲ್ಲ ಪಕ್ಷಗಳ ಸದಸ್ಯರೂ ಮಾಡುತ್ತಿರುವ ಅನಾಚಾರ. ಭ್ರಷ್ಟಾಚಾರ ಹಣದ ಮೌಲ್ಯದಿಂದ ದೊಡ್ಡದು ಚಿಕ್ಕದು ಎಂದೆನ್ನಿಸಬಹುದೇ ಹೊರತು ಬಹುತೇಕರು ಭ್ರಷ್ಟರೇ. ಮತ್ತೀ ಭ್ರಷ್ಟತೆ ರಾಜಕಾರಣಿಗಳಿಗೆ ಮಾತ್ರ ಸೀಮಿತವಾಗದೆ ಜನರಲ್ಲೂ ಹಬ್ಬಿ ಬಿಟ್ಟಿದೆ. ಸರಕಾರೀ ಕೆಲಸದಲ್ಲಿರುವವರಿಗೆ ‘Income ಚೆನ್ನಾಗಿರಬೇಕು?’ ಎಂದು ಕೇಳುವುದು ಇಂದು ಅವಮಾನದ ವಿಷಯವಾಗಿಲ್ಲ. ಇವತ್ತಿನ ಮಟ್ಟಿಗೆ ನಮಗೆ ಕಾಂಗ್ರೆಸ್ ನೇತೃತ್ವದ ಯು.ಪಿ.ಎ ತನ್ನ ಹತ್ತು ವರುಷದ ಆಡಳಿತಾವಧಿಯಲ್ಲಿ ನಡೆಸಿದ ಹಗರಣಗಳು ಎದ್ದು ಕಾಣುತ್ತಿವೆಯಷ್ಟೇ. ವಾಜಪೇಯಿ ಸರಕಾರದ ಕಾಲದಲ್ಲೂ ನಡೆದ ಶವಪೆಟ್ಟಿಗೆ ಹಗರಣ, ಹುಡ್ಕೋ ಹಗರಣಗಳು ಸದ್ಯಕ್ಕೆ ಮರೆಯಾಗಿಹೋಗಿವೆ. ಬಂಗಾರು ಲಕ್ಷಣ್ ಹಣ ಪಡೆದಿದ್ದೂ ಮರೆತುಹೋಗಿದೆ. ಮೋದಿ ಸರಕಾರದಲ್ಲಿ ಮತ್ತೊಂದು ದೊಡ್ಡ ಹಗರಣ ನಡೆದುಬಿಟ್ಟರೆ ಯು.ಪಿ.ಎ ನಡೆಸಿದ ಹಗರಣಗಳೂ ಮರೆತುಹೋಗುವಷ್ಟು ನಾವು ಮತ್ತು ನಮ್ಮ ವ್ಯವಸ್ಥೆ ಜಡಗಟ್ಟಿದೆ. ಮುಂದಿನ ಸರಕಾರ ಮತ್ತಷ್ಟು ದುರಾಚಾರ ಅನಾಚಾರ ನಡೆಸಿ ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿಬಿಟ್ಟು ಮನಮೋಹನ್ ಸಿಂಗ್ ನೇತೃತ್ವದ ಯು.ಪಿ.ಎ ಸರಕಾರವೇ ವಾಸಿಯಿತ್ತು ಎಂಬ ಅಭಿಪ್ರಾಯ ಮೂಡಿದರೂ ಅಚ್ಚರಿಪಡಬೇಕಿಲ್ಲ. ಅಂತಹ ಅಭಿಪ್ರಾಯ ಮೂಡದಿರಲಿ ಎಂಬುದಷ್ಟೇ ಸದ್ಯದ ನಮ್ಮ ಆಶಯ.


ಪ್ರಜಾಸಮರ ಪಾಕ್ಷಿಕಕ್ಕೆ ಬರೆದ ಲೇಖನ

image source - cloudfront

1 comment:

  1. ಸಮಯೋಚಿತ ಬರಹ ತುಂಬಾ ಚೆನ್ನಾಗಿದೆ ,ಜನರು ಮೋದಿಯವರ ಮೇಲೆ ಇಟ್ಟ ಭರವಸೆಗಳು ಸಾಕಾರಗೊಳ್ಳಲಿ ಎಂಬುದೇ ಎಲ್ಲರ ಹಾರೈಕೆ, ನಿರೀಕ್ಷೆ ಕೂಡಾ

    ReplyDelete