Mar 19, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 22ಡಾ ಅಶೋಕ್ ಕೆ ಆರ್

ಆದರ್ಶವೇ ಬೆನ್ನು ಹತ್ತಿ ಭಾಗ 21 ಓದಲು ಇಲ್ಲಿ ಕ್ಲಿಕ್ಕಿಸಿ
ಮೈಸೂರಿಗೆ ಬರುತ್ತಿದ್ದಂತಯೇ ಲೋಕಿ ಮನೆಗೂ ಹೋಗದೆ ನೇರ ಗೃಂಥಾಲಯಕ್ಕೆ ಹೋದ. ‘ಹಳೆ ಪತ್ರಿಕೆಗಳು ಎಲ್ಲಿವೆ’ ಎಂದು ಗೃಂಥಪಾಲಕರನ್ನು ಕೇಳಿ, ಪತ್ರಿಕೆಗಳಿದ್ದ ಜಾಗಕ್ಕೆ ಹೋಗಿ ‘ಬಾಂಬ್ ಎಸ್.ಐ’ ಮತ್ತು ISRAದ ಬಗ್ಗೆ ಬಂದಿದ್ದ ಪ್ರತಿಯೊಂದು ಮಾಹಿತಿಯನ್ನು ಓದಲಾರಂಭಿಸಿದ.
ಎಲ್ಲಾ ಪತ್ರಿಕೆಗಳನ್ನು ಓದಿ ಮುಗಿಸುವಷ್ಟರಲ್ಲಿ ಮಧ್ಯಾಹ್ನವಾಗಿತ್ತು. ‘ಕಾ.ಪಾಟೀಲರ ಅಭಿಪ್ರಾಯ – ಗಣೇಶ್ ಮಾಡಿರುವುದು ಬರೀ ಪ್ರಚಾರಕ್ಕೋಸ್ಕರ – ಸರಿ. ಆದರೆ ಕೇವಲ ಪ್ರಚಾರ ಪಡೆಯುವದಕ್ಕೋಸ್ಕರವಾಗಿ ಇರೋ ಎಸ್.ಐ ಕೆಲಸ ಬಿಟ್ಟು ಜೈಲಿಗೆ ಹೋಗುವಂಥಹ ಕೆಲಸ ಮಾಡುವುದು ಸಾಧ್ಯವಾ? ಮೊದಲೆರಡು ದಿನ ಎಲ್ಲಾ ಪತ್ರಿಕೆಗಳವರು ಎಸ್.ಐ ಅನ್ನು ಹೊಗಳಿ ಬರೆದಿದ್ದರು. ನಂತರದ ದಿನಗಳಲ್ಲಿ ಆತನೂ ಭ್ರಷ್ಟನೇ. ಜನರಿಗೆ ಬಹಳಷ್ಟು ತೊಂದರೆ ಕೊಟ್ಟಿದ್ದಾನೆ ಎಂದು ಬರೆದಿದ್ದಾರೆ. ಇದೆಲ್ಲಾ ಪೋಲೀಸರೇ ಸೃಷ್ಟಿಸಿರುವ ಕಟ್ಟುಕತೆಯಾ? ಗಣೇಶ್ ನಿಜಜೀವನದ ಹೀರೋ ಆಗಿಬಿಡುತ್ತಿದ್ದಾನೆ ಎಂದು ಹೆದರಿ ರಾಜಕಾರಣಿಗಳು ಕತೆ ಹೊಸೆಯುತ್ತಿದ್ದಾರಾ? ಅಥವಾ ನಿಜಕ್ಕೂ ಆತ ಅಪ್ರಾಮಾಣಿಕನಾ?’ ಮನಸ್ಸಿನಲ್ಲಿ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾ ತನ್ನವರಿಗೆ ದಕ್ಕಷ್ಟು ಉತ್ತರ ಸೃಷ್ಟಿಸಿಕೊಳ್ಳುತ್ತಾ ಮನೆಯೆಡೆಗೆ ಹೊರಟ ಲೋಕಿ. ನಂತರದ ಎರಡು ದಿನಗಳು ಲೋಕಿಗೆ ಕಾಲೇಜಿನ ಕಡೆ ಹೋಗಲಾಗಲಿಲ್ಲ. ದೂರಪ್ರಯಾಣ ಮಾಡಿದ ಆಯಾಸದ ಜೊತೆಗೆ ISRA ಸ್ಥಾಪನೆಯಾಗದ ಬೇಸರದಿಂದಾಗಿ ಎಲ್ಲಿಗೂ ಹೋಗುವುದಕ್ಕೆ ಮನಸ್ಸಾಗಲಿಲ್ಲ. ಎರಡು ದಿನಗಳ ನಂತರ ಕಾಲೇಜಿನೆಡೆಗೆ ಹೋದ. ತರಗತಿಗೆ ಹೋಗುವುದಕ್ಕೆ ಮುಂಚೆ ಸಿಂಚನಾ ಸಿಕ್ಕಿದ್ದಳು. “ಇವತ್ತು ವಿವೇಕ್ ಮೈಸೂರಿಗೆ ಬರುತ್ತಿದ್ದಾನೆ. ಸಂಜೆ ನಾವೆಲ್ಲಾ ಕೆ.ಆರ್.ಎಸ್ಸಿಗೆ ಹೋಗೋಣ” ಎಂದಳು. ‘ಒಬ್ಬನೇ ಕೂತು ಯೋಚಿಸೋದಕ್ಕಿಂತ ಗೆಳೆಯರ ಜೊತೆ ಇದ್ದರೆ ಮನದಲ್ಲಿ ಸುಳಿಯೋ ಯೋಚನೆಗಳಾದರೂ ಕಡಿಮೆಯಾಗುತ್ತವೆ’ ಎಂದುಕೊಂಡು “ಸರಿ ಸಿಂಚನಾ ಬರ್ತೀನಿ” ಎಂದ.

ತಂದೆಯ ಬಳಿ ಸ್ಕೂಟರ್ ತೆಗೆದುಕೊಂಡ ಲೋಕಿ. ಪ್ರಥಮ ಬಾರಿಗೆ ಪೂರ್ಣಿಮಾಳನ್ನು ಕೂರಿಸಿಕೊಂಡು ಹೋದ. ಇವನ ಹೆಗಲ ಮೇಲೆ ಕೈಯಿಟ್ಟಾಗಲೂ ಮನದಲ್ಲಿ ಯಾವುದೇ ಭಾವನೆ ಮೂಡಲಿಲ್ಲ. ಸಿಂಚನಾ ವಿವೇಕನ ಬೈಕಿನಲ್ಲಿ ಕುಳಿತಿದ್ದಳು. ಗೌತಮ್ ಒಬ್ಬನೇ ಬರುತ್ತಿದ್ದ. ಎರಡು ಜೋಡಿಗಳನ್ನು ನೋಡಿ ಮನದಲ್ಲಿ ಈರ್ಷ್ಯೆ ಮೂಡಿದರೂ ತೋರ್ಪಡಿಸಿಕೊಳ್ಳದೆ ಎಲ್ಲರನ್ನೂ ನಗಿಸುತ್ತಾ ಮಾತನಾಡುತ್ತಿದ್ದ. ಯಾಂತ್ರಿಕವಾಗಿ ಅವರೊಡನೆ ಬೆರೆತಿದ್ದ ಲೋಕಿ.

ಸಂಗೀತ ಕಾರಂಜಿ ನೋಡಿಕೊಂಡು ಕೆ.ಆರ್.ಎಸ್ಸಿನಿಂದ ಎಲ್ಲರೂ ಹೊರಟರು. ರಾತ್ರಿ ವೇಳೆ ಬೈಕ್ ಓಡಿಸಿ ಅಭ್ಯಾಸವಿಲ್ಲದ ಕಾರಣ ಲೋಕಿ ನಿಧಾನವಾಗಿ ಬರುತ್ತಿದ್ದ. ಪೂರ್ಣಿಮಾ “ಆ ಹೆಂಗಸು ಯಾರು ಲೋಕಿ?” ಎಂದಳು.

ಕಾರ್ಗತ್ತಲಲ್ಲಿ ಪೂರ್ಣಿಮಾ ಕೇಳಿದ ಪ್ರಶ್ನೆ ಲೋಕಿಯನ್ನು ದಿಗ್ಭ್ರಮೆಗೊಳಪಡಿಸಿತು. ಯಾವುದರ ವಿಚಾರವಾಗಿ ಯಾರ ಬಳಿಯೂ ಚರ್ಚಿಸಬಾರದು ಎಂದುಕೊಳ್ಳುತ್ತಿದ್ದನೋ ಅದರ ಬಗ್ಗೆಯೇ ಕೇಳುತ್ತಿದ್ದಾಳೆ ಪೂರ್ಣಿಮಾ.

“ಯಾರು....?”

“ಕೊಡೈಕೆನಾಲಿನಲ್ಲಿ ಸೈಬರ್ ಕೆಫೆ ಬಳಿ ನೀನು ಮಾತನಾಡ್ತ ಇದ್ದೆಯಲ್ಲ ಅವಳು”

ಏನುತ್ತರ ನೀಡಬೇಕೆಂದು ತಿಳಿಯದೆ ಮೌನದಿಂದಿದ್ದ ಲೋಕಿ.

“ನಕ್ಸಲೈಟಾ?” ತಣ್ಣಗಿನ ದನಿಯಲ್ಲಿ ಕೇಳಿದಳು ಪೂರ್ಣಿಮಾ. ಆಕೆ ಪ್ರಶ್ನೆ ಕೇಳಿದಳಾ? ಅಥವಾ ಉತ್ತರ ಹೇಳಿದಳಾ? ತಿಳಿಯಲಿಲ್ಲ. ಬೈಕನ್ನು ಪಕ್ಕದಲ್ಲಿದ್ದ ಮಣ್ಣಿನ ರಸ್ತೆಗೆ ತಿರುಗಿಸಿ ಗಾಡಿ ನಿಲ್ಲಿಸಿದ. ಪೂರ್ಣಿಮಾ ಗಾಡಿಯಿಂದಿಳಿದು ಲೋಕಿಯ ಮುಂದೆ ಬಂದು “ಹೇಳು ಲೋಕಿ ನಕ್ಸಲೈಟಾ ಅವಳು?”

“ನಿನಗ್ಯಾಕೆ ಆ ಅನುಮಾನ ಬಂತು?”
“ನನ್ನ ಪ್ರಶ್ನೆಗೆ ಇದಲ್ಲ ಉತ್ತರ”
“ಅವಳು ನಕ್ಸಲೈಟಲ್ಲ”
“ಮತ್ತೆ”
“ಹೇಳಲೇಬೇಕಾ”
“ನನ್ನ ಬಳಿಯೂ ಹೇಳಲಾಗದಷ್ಟು ರಹಸ್ಯವಾದ ವಿಷಯವಾ?”

“ನಿನ್ಹತ್ರ ಹೇಳಬಾರದು ಅಂತಲ್ಲ. ಆದರೆ ಆ ವಿಷಯ ಎಲ್ಲಾದ್ರೂ ಸ್ವಲ್ಪೇ ಸ್ವಲ್ಪ ಬೇರೆಯವರಿಗೆ ತಿಳಿದು ಹೋದರೂ ನನಗೆ ಅಪಾಯವಾಗುತ್ತೆ”

“ಯಾರಿಗೂ ಹೇಳೋದಿಲ್ಲ ಹೇಳು”
“ಸಿಂಚನಾಗೂ ಹೇಳಬಾರದು”
“ಇಲ್ಲಾ ಹೇಳೋ” ಗೋಗರೆದಳು.

ಜೇಬಿನಿಂದ ಒಂದು ಸಿಗರೇಟು ತೆಗೆದು ಹಚ್ಚಿದ. ಅರ್ಧ ಸಿಗರೇಟು ಸೇದುವವರೆಗೆ ಒಂದು ಮಾತನ್ನೂ ಆಡಲಿಲ್ಲ. ದೀರ್ಘವಾಗಿ ಒಂದು ಜುರಿಕೆ ಎಳೆದುಕೊಂಡು “ಆಕೆ ISRA ಸಂಘಟನೆಯವಳು” ಸಿಗರೇಟಿನ ಹೊಗೆಯ ಜೊತೆಗೆ ಕಷ್ಟಪಟ್ಟು ಪದಗಳನ್ನೂ ಹೊರಹಾಕಿದ.

“ISRA?!!......Indian Secret Revolutionary Agency??”
“ಹೌದು”
“ಎಸ್.ಐ ಗಣೇಶ್ ಅರೆಸ್ಟಾಗಿದ್ದಾರಲ್ಲ ಅವರು ಶುರುಮಾಡಬೇಕೆಂದುಕೊಂಡಿದ್ದ ಸಂಘಟನೆ?”
“ಹ್ಞೂ” ಕೊನೆಯ ಜುರಿಕೆ ಎಳೆದು ಸಿಗರೇಟೆಸೆದ.
ಪೂರ್ಣಿಮಾ ಅಳಲು ಶುರುಮಾಡಿದಳು.

“ಯಾಕೆ ಪೂರ್ಣಿ ಅಳ್ತಾ ಇದ್ದೀಯ? ಪ್ಲೀಸ್ ಅಳಬೇಡ ಪೂರ್ಣಿ” ಎಂದು ಲೋಕಿ ಎಷ್ಟು ಕೇಳಿಕೊಂಡರೂ ಆಕೆ ಅಳುವುದನ್ನು ನಿಲ್ಲಿಸಲಿಲ್ಲ. ಐದಾರು ನಿಮಿಷದ ನಂತರ ಅಳು ಕೊಂಚ ತಹಬದಿಗೆ ಬಂತು.
“ನೀನು ಯಾಕೆ ಲೋಕಿ ಆ ಸಂಘಟನೆ ಸೇರಬೇಕೆಂದಿದ್ದೆ?”
ಆ ವಿಷಯವಾಗಿ ಚರ್ಚಿಸಲು ಮಾತನಾಡಲು ಇಷ್ಟವಾಗದೆ ಮತ್ತೊಂದು ಸಿಗರೇಟು ಹಚ್ಚಿದ.

“ನಮ್ಮಂಥವರಿಗೆಲ್ಲಾ ಯಾಕೋ ಲೋಕಿ ಈ ಕ್ರಾಂತಿಯ ಹುಚ್ಚು. ಚೆನ್ನಾಗಿ ಓದ್ತೀಯ, ಎಲ್ಲರೂ ಮುಗಿಬಿದ್ದು ಓದೋವಷ್ಟು ಚೆಂದವಾಗಿ ಬರೆಯುತ್ತೀಯಾ. ನಿನ್ನ ಮನಸ್ಸಿಗ್ಯಾಕೆ ಬಂತು ಈ ಕ್ರಾಂತಿಯ ಯೋಚನೆ. ನಕ್ಸಲೀಯರೂ ಕೂಡ ಕ್ರಾಂತಿ ಮಾಡಬೇಕು ಅಂತ ಬಂದೂಕಿಡಿದರು. ಬಂದೂಕಿನಿಂದ ಗುಂಡುಗಳು ಸಿಡಿದಿದ್ದಷ್ಟೇ ಭಾಗ್ಯ. ಇಬ್ಬರು ನಕ್ಸಲರನ್ನು ಆಗಲೇ ಸಾಯಿಸಿದ್ದಾರೆ. ನೀನವತ್ತು ಪೋಲೀಸ್ ಠಾಣೆಯಲ್ಲಿ ಅವರೀರ್ವರ ಸಾವಿನ ಬಗ್ಗೆ ಆಸಕ್ತಿಯಿಂದ ಓದುತ್ತಿದ್ದಾಗಲೇ ನನಗನಿಸಿತ್ತು ಈತನಿಗೂ ಸಶಸ್ತ್ರ ಕ್ರಾಂತಿಯ ಬಗ್ಗೆ ನಂಬಿಕೆಯುಂಟೆಂದು. ಅಂದ್ಹಾಗೆ ನಕ್ಸಲರ ಜೊತೆಗೂ ನಿನಗೆ ಸಂಬಂಧವುಂಟಾ?” ಕೊನೆಯಲ್ಲಿ ಪ್ರಶ್ನೆ ಕೇಳಿದವಳ ಮುಖದಲ್ಲಿ ಗಾಬರಿಯಿತ್ತು.

“ಇಲ್ಲಿಯವರೆಗಂತೂ ಯಾರ ಪರಿಚಯವೂ ಇಲ್ಲ”
“ಅಂದ್ರೆ? ಮುಂದಿನ  ದಿನಗಳಲ್ಲಿ ಪರಿಚಯ ಮಾಡಿಕೊಳ್ಳಬೇಕು ಎಂಬ ಇರಾದೆಯಿದೆಯಾ?”
ಕೈಯಲ್ಲಿದ್ದ ಸಿಗರೇಟನ್ನು ಬಿಸುಟಿ “ಹೊರಡೋಣ” ಎಂದ ಲೋಕಿ ಬೈಕೇರಿ ಸ್ಟಾರ್ಟ್ ಮಾಡಿದ. ಪೂರ್ಣಿಮಾ ಬೈಕೇರಿದಳು. ಐದಾರು ನಿಮಿಷದ ನಂತರ ಪೂರ್ಣಿಮಾ “ನನ್ನ ಪ್ರಶ್ನೆಗೆ ಉತ್ತರ ಹೇಳು ಲೋಕಿ. ನೀನೂ ನಕ್ಸಲನಾಗ್ತೀಯ?” ಎಂದು ಮೂರ್ನಾಲ್ಕು ಬಾರಿ ಕೇಳಿದಳು.
“ನೀನಿಷ್ಟೊಂದು ಕೇಳುತ್ತಿದ್ದೀಯಾ. ಏನು ತೀರ್ಮಾನ ಮಾಡಿಲ್ಲ ನಾನು. ನಾಳೆ ತಿಳಿಸಲಾ?”
“ಸರಿ. ನಿನ್ನಿಷ್ಟ. ನಿನ್ನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸ್ತಿರೋ ಒಂದು ಜೀವವಿಲ್ಲಿದೆ ಅನ್ನೋದನ್ನು ನೆನಪಿನಲ್ಲಿಟ್ಟುಕೋ ತೀರ್ಮಾನ ಮಾಡುವಾಗ”
‘ನಾನು ನಂಬಿರೋ ಆದರ್ಶಗಳಿಗಿಂತ ಈ ದೇಶಕ್ಕಿಂತ ನಿನ್ನ ಪ್ರಾಣ ಹೆಚ್ಚೆಂದೆನ್ನಿಸುವುದಿಲ್ಲ ಪೂರ್ಣಿ’ ಎಂದು ಹೇಳಲಾಗಲಿಲ್ಲ ಲೋಕಿಗೆ.
* * *
ರಾತ್ರಿ ಲೋಕಿಗೆ ಬಹಳ ಸಮಯದವರೆಗೂ ನಿದ್ರೆ ಬರಲಿಲ್ಲ. ಮಲಗಿದಲ್ಲೇ ಹೊರಳಾಡುತ್ತಿದ್ದ. “ಯಾಕೋ ಲೋಕೇಶಣ್ಣಾ ಇನ್ನೂ ನಿದ್ರೆ ಮಾಡಿಲ್ಲ. ಏನಾಯ್ತು?” ಕೇಳಿದಳು ಸ್ನೇಹಾ.
“ಅಂಥದ್ದೇನಿಲ್ಲಾ”
“ನಿನ್ನ ವಯಸ್ಸಿನಲ್ಲಿ ರಾತ್ರಿ ನಿದ್ರೆ ಬರಲಿಲ್ಲ ಅಂದ್ರೆ ಯಾವುದೋ ಹುಡುಗಿ ಮನಸ್ಸನ್ನು ಕೊರೆಯುತ್ತಾ ಇರಬೇಕು”

“ಹಾಗೇನಿಲ್ಲಾ; ಸುಮ್ನೆ ಮಲಗೇ ಕತ್ತೇ” ಎಂದ್ಹೇಳಿ ಲೋಕಿ ಟೆರೇಸಿನ ಮೇಲೆ ಹೋದನು. ಹುಣ್ಣಿಮೆಯ ಚಂದ್ರ ದಾರಿದೀಪಗಳ ಬೆಳಕನ್ನು ಮಂಕಾಗಿಸಿದ್ದ. ಆಕಾಶವನ್ನೇ ದಿಟ್ಟಿಸುತ್ತಾ ಕುಳಿತ ಲೋಕಿ. ಚಂದ್ರನ ಜೊತೆ ಕಣ್ಣಾಮುಚ್ಚಾಲೆಯಾಡುತ್ತಿದ್ದ ಮೋಡಗಳು, ಒಂದೇ ವೇಗದಲ್ಲಿ ಚಲಿಸುತ್ತಿದ್ದ ಕೃತಕ ಉಪಗ್ರಹಗಳು, ಎಷ್ಟೋ ವರ್ಷಗಳಿಂದ ಗೂಟ ಬಡಿದುಕೊಂಡು ನಿಂತಂತಿದ್ದ ನಕ್ಷತ್ರಗಳು.....ಲೋಕಿಯ ಮನದಲ್ಲಿ ಸಾವಿರಾರು ಯೋಚನೆಗಳು...... ಕ್ರಾಂತಿ ಅನ್ನೋದು ಕೂಡ ಈ ಚಂದ್ರನಿದ್ದಾಗೆ, ಕಣ್ಣಿಗೆ ಕಾಣಿಸುವಷ್ಟು ಹತ್ತಿರವಿದ್ದರೂ ಅದರೆಡೆಗೆ ಸಾಗಿ ಹೋಗುವಾಗ ಸಿಗಲಾರದಷ್ಟು ದೂರವೆನ್ನಿಸುತ್ತೆ. ಆದರೂ ತಲುಪಬಹುದು. ಈ ಪ್ರೀತಿ ಪ್ರೇಮ ಮನದಲ್ಲಿನ ಕ್ರಾಂತಿಯ ಯೋಚನೆಗಳನ್ನು ಮರೆಮಾಚಿಸಿಬಿಡುತ್ತದೆ. ಆದರ್ಶಗಳಲ್ಲಿ ಅಪ್ರಾಮಾಣಿಕತೆ ತೋರದಿದ್ದಲ್ಲಿ ಕ್ರಾಂತಿ ಸ್ಥಿರವಾಗಿ ನಿಂತೇ ನಿಲ್ಲುತ್ತದೆ. ನಾಳೆ ಪೂರ್ಣಿಗೆ ಏನು ಹೇಳೋದು? ನನ್ನನ್ನು ಮರೆತುಬಿಡು ಅಂತ ಹೇಳಿಬಿಡ್ಲಾ? ಉಹ್ಞೂ ಯಾಕೋ ಆ ರೀತಿ ಹೇಳೋದಿಕ್ಕೆ ಮನಸ್ಸು ಒಪ್ತಾ ಇಲ್ಲ. ISRAಗೆ ಸೇರೋದಿಕ್ಕೆ ನಾನು ಬಹಳ ಆತುರಪಟ್ಟೆ ಅಂತ ಕಾಣುತ್ತೆ. ಒಂದು ಡಿಗ್ರಿಯನ್ನೂ ಮಾಡದೇ ಸಂಘಟನೆಗೆ ಆತುರಾತುರವಾಗಿ ಸೇರೋ ಜರೂರತ್ತಾದರೂ ಏನಿದೆ? ಮೊದಲು ಬಿ.ಎ ಓದಿ ಮುಗಿಸೋಣ. ಮನದಲ್ಲಿರೋ ಆದರ್ಶಗಳಿಗೆ ಇನ್ನೊಂದೂವರೆ ವರ್ಷದಲ್ಲಿ ಒಂದು ಮೂರ್ತರೂಪ ಕೊಡೋಣ. ನಂತರ ಏನು ಮಾಡಬೇಕು ಅಂತ ನಿರ್ಧರಿಸೋಣ. ನನಗೆ ನಂಬಿಕೆ ಇರೋದು ಬಂದೂಕಿನ ತುದಿಯಿಂದ ಆಗೋ ಕ್ರಾಂತಿಯಿಂದ. ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿದ್ದುಕೊಂಡು ಹೋರಾಡೋದು ಬಹುಶಃ ನನ್ನ ಮನಸ್ಸಿಗೆ ಒಪ್ಪದ ಸಂಗತಿ. ಈ ವಿಷಯವನ್ನೆಲ್ಲಾ ಪೂರ್ಣಿಗೆ ಈಗಲೇ ಹೇಳಿಬಿಡಲಾ? ಯಾವತ್ತೂ ಹೇಳಿದರೂ ಆಕೆಯ ಮನಕ್ಕೆ ಘಾಸಿಯಾಗೇ ಆಗುತ್ತೆ. ಇಷ್ಟು ಬೇಗ ಅವಳಿಗ್ಯಾಕೆ ನೋವು ಕೊಡಬೇಕು. ಅವಳಿಂದ ವಿಷಯ ಮುಚ್ಚಿಡುವುದು ಇರುವಷ್ಟು ದಿನ ಅವಳ ಸಾಂಗತ್ಯದಲ್ಲಿ ಖುಷಿಯಾಗಿರಲು ಬಯಸುವ ನನ್ನ ಸ್ವಾರ್ಥವಲ್ಲವೇ? ಸ್ವಾರ್ಥವಾದರೂ ಸರಿ, ಸದ್ಯಕ್ಕೆ ಏನೂ ತಿಳಿಸುವುದು ಬೇಡ. ಇನ್ನೊಂದು ವರ್ಷದ ನಂತರ ಬಿ.ಎ ಮುಗಿದ ಮೇಲೆ ಅವಳಿಗೆ ವಿಷಯ ತಿಳಿಸಿ ಹೋಗಿಬಿಡೋಣ. ಯಾವೊಬ್ಬ ನಕ್ಸಲನ ಪರಿಚಯವೂ ಇಲ್ಲದೆ ಎಲ್ಲಿಗೆ ಹೋಗೋದು?
* * *
ಮಾರನೆಯ ದಿನ ಪೂರ್ಣಿಮಾ ಕಾಲೇಜಿನ ಗೇಟಿನ ಬಳಿಯೇ ಲೋಕಿಗೋಸ್ಕರ ಕಾಯುತ್ತಾ ನಿಂತಿದ್ದಳು. ಲೋಕಿ ಕೂಡ ಪೂರ್ಣಿಮಾಳನ್ನು ಭೆಟ್ಟಿಯಾಗುವುದಕ್ಕೋಸ್ಕರ ಎಂದಿಗಿಂತ ಕೊಂಚ ಮುಂಚಿತವಾಗಿಯೇ ಬಂದ. ಗೇಟಿನ ಬಳಿಯೇ ಕಾಯುತ್ತಿದ್ದ ಪೂರ್ಣಿಮಾಳನ್ನು ನೋಡಿ ಮುಗುಳ್ನಕ್ಕ. ಇಬ್ಬರೂ ಏನೊಂದೂ ಮಾತನಾಡದೆ ಕ್ಯಾಂಟೀನಿನ ಬಳಿ ಹೋಗಿ ಮರದ ಕೆಳಗೆ ಕುಳಿತುಕೊಂಡರು.
“ಏನು ತೀರ್ಮಾನ ಮಾಡಿದೆ ಲೋಕಿ?” ಕಾತರದಿಂದ ಕೇಳಿದಳು.
“ನಿನ್ನನ್ನು ನೆನಪಿನಲ್ಲಿಟ್ಟುಕೊಂಡೇ ತೀರ್ಮಾನ ತೆಗೆದುಕೊಂಡೆ ಪೂರ್ಣಿ” ನಗುತ್ತಾ ಉತ್ತರಿಸಿದ ಲೋಕಿ.
ಪೂರ್ಣಿಮಾ ಸಮಾಧಾನದಿಂದ ನಿಡುಸುಯ್ದಳು.
“ಥ್ಯಾಂಕ್ಸ್ ಲೋಕಿ” ಎಂದ್ಹೇಳಿ ಆತನ ಅಂಗೈಯನ್ನು ತನ್ನ ಕೈಯೊಳಗಿಟ್ಟುಕೊಂಡು ಕಕ್ಕುಲತೆಯಿಂದ ನೇವರಿಸಿದಳು. ಮನದ ಮೂಲೆಯಲ್ಲಿ ಲೋಕಿಯ ಆತ್ಮಸಾಕ್ಷಿ ಮೂದಲಿಸುತ್ತಿತ್ತು.

No comments:

Post a Comment