Jul 9, 2013

ಪತ್ರಿಕೋದ್ಯಮದ ಸಾಕ್ಷಿಪ್ರಜ್ಞೆ ದಿನೇಶ್ ಅಮೀನ್ ಮಟ್ಟು.



ಪತ್ರಿಕೋದ್ಯಮ ಮತ್ತು ಪತ್ರಕರ್ತ ತನ್ನ ನೈತಿಕತೆಯನ್ನು ಕಳೆದುಕೊಳ್ಳುತ್ತಾ ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಭವಾಗಿರುವುದನ್ನೇ ಮರೆಯುತ್ತಿರುವ ವಿಷಮ ದಿನಗಳಿವು. ಪತ್ರಿಕೆ ಪ್ರಕಟಿಸುವ ವರದಿಗಳೇ ಹೋರಾಟ – ಚಳುವಳಿಗಳಿಗೆ ಮುನ್ನುಡಿಯಾಗುತ್ತಿದ್ದ ದಿನಗಳು ಶರವೇಗದಲ್ಲಿ ಮಾಯವಾಗುತ್ತಿದೆ. ದೃಶ್ಯ ಮಾಧ್ಯಮ ಮಾಹಿನಿಗಳ ಭರಾಟೆ ಹೆಚ್ಚುತ್ತಿದ್ದ ಹಾಗೆ ಪತ್ರಿಕೋದ್ಯಮದ ಬೆಲೆಯೂ ಇಳಿಯುತ್ತಿರುವುದು ವಿಪರ್ಯಾಸವೇ ಸರಿ. ಹೀಗೆಂದ ಮಾತ್ರಕ್ಕೆ ಪತ್ರಿಕೋದ್ಯಮ ಮುಂಚಿನ ದಿನಗಳಲ್ಲಿ ಸಂಪೂರ್ಣ ಪರಿಶುದ್ಧವಾಗಿತ್ತಾ? ಇದ್ದಿರಲಾರದು. ಆದರೆ ಪತ್ರಕರ್ತರ ಭ್ರಷ್ಟಾಚಾರ, ತಮ್ಮ ತಮ್ಮ ವೈಯಕ್ತಿಕ ಹಿತಾಸಕ್ತಿಗನುಗುಣವಾಗಿ ವರದಿಗಳನ್ನೇ ತಿರುಚಿಬಿಡುವ ದಾರ್ಷ್ಟ್ಯತನ ಹೆಚ್ಚುತ್ತಿರುವುದು ಒಟ್ಟಾರೆಯಾಗಿ ಸಮಾಜದಲ್ಲಿ ಕುಸಿಯುತ್ತಿರುವ ಮೌಲ್ಯಗಳಿಗನುಗುಣವಾಗಿಯೇ ಇದೆ. ಸುದ್ದಿಯ ಸತ್ಯಾಸತ್ಯತೆ, ಆ ಸುದ್ದಿಯಿಂದ ಸಮಾಜದ ಮನಸ್ಸಿನ ಮೇಲುಂಟಾಗುವ ಪರಿಣಾಮಗಳಿಗಿಂತ ಹೆಚ್ಚಾಗಿ ಆ ಸುದ್ದಿ ಎಷ್ಟರ ಮಟ್ಟಿಗೆ ಬಿಕರಿಯಾಗಬಹುದು? ಎಷ್ಟರ ಮಟ್ಟಿಗೆ ನಮ್ಮ ಆದಾಯ ಹೆಚ್ಚಿಸಬಲ್ಲದು? ಎಂಬ ಪ್ರಶ್ನೆಗಳೇ ಮುಖ್ಯವಾಗಿ ಹೋಗಿದೆ. ಪತ್ರಕರ್ತ ಗೆಳೆಯನೊಬ್ಬ ಹೇಳಿದಂತೆ ಇಂದಿನ ಮಾಧ್ಯಮಗಳು entertainment ಮತ್ತು informationನಿಂದ ಉದ್ಭವವಾದ infotainment! ಪತ್ರಿಕೋದ್ಯಮದ ಬಗ್ಗೆ ಇಷ್ಟೆಲ್ಲ ಸಿನಿಕತೆಗಳಿದ್ದಾಗ್ಯೂ ಇಂದಿಗೂ ಪತ್ರಿಕೆಯ ಸುದ್ದಿ ವಿಶ್ಲೇಷಣೆಯನ್ನು ಗೌರವದಿಂದ ನೋಡುವಂತೆ ಮಾಡುವಲ್ಲಿ ದಿನೇಶ್ ಅಮೀನ್ ಮಟ್ಟುರಂಥ ಪತ್ರಕರ್ತರು ಕಾರಣಕರ್ತರೆಂದರೆ ತಪ್ಪಲ್ಲ.

ನಾನು ಪತ್ರಕರ್ತನೂ ಅಲ್ಲ, ಪತ್ರಿಕೋದ್ಯಮದ ಒಳಗಿರುವವನೂ ಅಲ್ಲ. ಒಬ್ಬ ಓದುಗನಾಗಷ್ಟೇ ನನಗೆ ದಿನೇಶ್ ರವರ ಪರಿಚಯ. ಮನೆಯಲ್ಲಿ ಮೊದಲಿನಿಂದಲೂ ಪ್ರಜಾವಾಣಿ ತರಿಸುತ್ತಿದ್ದರು. ದೆಹಲಿಯಿಂದ ಬರೆಯುತ್ತಿದ್ದ ದಿನೇಶರ ಲೇಖನಗಳು ಅದರಲ್ಲಿನ ಕರಾರುವಾಕ್ ರಾಜಕೀಯ ವಿಶ್ಲೇಷಣೆಯಿಂದ ಮೆಚ್ಚುಗೆಯಾಗುತ್ತಿದ್ದವು. ಆದರೆ ದಿನೇಶ್ ಅಮೀನ್ ಮಟ್ಟುರವರು ಸೋಮವಾರದಂದು ಬರೆಯುತ್ತಿದ್ದ ಅಂಕಣವನ್ನು ವಾರವೆಲ್ಲ ಕಾದು ತಪ್ಪದೇ ಓದಲಾರಂಭಿಸಿದ್ದು ಈಗ ಒಂದೆರಡು ಮೂರು ವರುಷಗಳಿಂದ. ಇದಕ್ಕೆ ನಮ್ಮ ಬೌದ್ಧಿಕ ಬೆಳವಣಿಗೆ ಕಾರಣವೋ ಅಥವಾ ದಿನೇಶರ ಲೇಖನಿಯೇ ಮೊನಚಾಯಿತೋ ಗೊತ್ತಿಲ್ಲ! ಯಾವುದೇ ಪೂರ್ವಾಗ್ರಹವಿಲ್ಲದೇ ಯಾವೊಂದೂ ರಾಜಕೀಯ ಪಕ್ಷದ, ರಾಜಕಾರಣಿಯ ಪರವಾಗಿಯೂ ವಿನಾಕಾರಣ ಬೆಂಬಲವಾಗಿ ನಿಲ್ಲದೆ ವಸ್ತುನಿಷ್ಟವಾಗಿ ಬರೆಯುತ್ತಿದ್ದ ದಿನೇಶ್ ಅಮೀನ್ ರನ್ನು ಮೆಚ್ಚದೆ ಇರಲು ಕಾರಣಗಳಿರಲಿಲ್ಲ. ಬಹುತೇಕ ಪತ್ರಿಕೆಗಳ ಅಂಕಣಕಾರರು ಧರ್ಮ ನಿಷ್ಠೆ, ವ್ಯಕ್ತಿ ನಿಷ್ಠೆ, ಪಕ್ಷ ನಿಷ್ಠೆ, ಧನ – ಸೈಟು ನಿಷ್ಠರಾಗಿ ಲೇಖನಗಳನ್ನು ಬರೆಯುತ್ತಿರುವ ಸಂದರ್ಭದಲ್ಲಿ ಪತ್ರಿಕೋದ್ಯಮದ ಮೂಲಭೂತ ಅಂಶಗಳಿಗೆ ನಿಷ್ಠರಾಗಿ ಬರೆದವರು ದಿನೇಶ್ ಅಮೀನ್ ಮಟ್ಟು. ತೀರ ಇತ್ತೀಚೆಗೆ ಕಾವೇರಿ ನೀರಿನ ವಿಷಯವಾಗಿ ಭಾವನಾತ್ಮಕವಾಗಿಯಷ್ಟೇ ಬರೆದ ಲೇಖಕರ ನಡುವೆ ಅಂಕಿ ಸಂಖ್ಯೆಗಳ ಆಧಾರದಿಂದ ಕರಾರುವಾಕ್ ಮಂಡನೆಯೊಂದಿಗೆ ಲೇಖನ ಬರೆದದ್ದು ದಿನೇಶ್ ಅಮೀನ್ ಮಟ್ಟು. ‘ಪೆನ್ನು ಮೂಲಭೂತವಾದಿಗಳು’ ಅತಿ ಕಡಿಮೆ ಅವಧಿಯಲ್ಲಿ ತಮ್ಮಲ್ಲಿನ ವಿಷವನ್ನು ಕಾರಿಕೊಳ್ಳುತ್ತಲೇ ಹೆಚ್ಚು ‘ಖ್ಯಾತ’(?)ರಾದರು. ಒಂದು ಧರ್ಮದ, ಪಕ್ಷದ ಬೆಂಬಲಿಗರ ಕಣ್ಮಣಿಯಾದರು. ಪತ್ರಿಕೋದ್ಯಮಕ್ಕಷ್ಟೇ ನಿಷ್ಠರಾದ ವಿಚಾರವಾದಿ ದಿನೇಶ್ ಅಮೀನ್ ನೈಜ ಖ್ಯಾತಿ ಪಡೆಯಲು ಹಲವಾರು ವರುಷಗಳೇ ಸಂದವು. ಮನಸ್ಸುಗಳನ್ನು ಒಡೆಯುವ ಪತ್ರಕರ್ತರಿಗೆ ಅತಿವೇಗದ ಪ್ರಚಾರ ಸಿಗುವುದಕ್ಕೆ ನಮ್ಮ ರೋಗಗ್ರಸ್ಥ ಮನಸ್ಥಿತಿಯ ಸಮಾಜ ಕಾರಣವಾ?

ದಿನೇಶ್ ಅಮೀನ್ ರವರು ಸ್ವಾಮಿ ವಿವೇಕಾನಂದರ ಬಗ್ಗೆ ಬರೆದ ಲೇಖನ ಅತಿಹೆಚ್ಚು ವಿವಾದಕ್ಕೀಡಾಯಿತು. ವಿವೇಕಾನಂದ ಜಯಂತಿಯ ನೆಪದಲ್ಲಿ ಅವರನ್ನು ದೇವರನ್ನಾಗಿಸುವ ಕಾರ್ಯ ಚುರುಕು ಪಡೆದುಕೊಂಡಿದ್ದ ಕಾಲವದು. ವಿವೇಕಾನಂದರು ಹೇಳಿದ ಆಚಾರ ವಿಚಾರಗಳನ್ನು ಪಾಲಿಸುವುದು ಕಷ್ಟವಾದಾಗ ಅವರನ್ನು ದೇವರನ್ನಾಗಿಸಿ ಧರ್ಮದ ಮುಖಪುಟ ಮಾಡಿಬಿಡುವುದು ಸುಲಭದ ಕೆಲಸ. ಇಂಥ ಸಮಯದಲ್ಲಿ ವಿವೇಕಾನಂದರು ದೇವರಲ್ಲ, ನಮ್ಮ ನಿಮ್ಮಂತಯೇ ಮನುಷ್ಯರು. ನಮ್ಮಂತೆಯೇ ದುರ್ಬಲತೆಗಳಿದ್ದವು, ಚಟಗಳಿದ್ದವು. ಅವೆಲ್ಲವುಗಳ ನಡುವೆಯೂ ನಮಗೂ ಅವರಿಗಿರುವ ವ್ಯತ್ಯಾಸವೆಂದರೆ ಅವರು ಅವೆಲ್ಲವನ್ನೂ ಮೀರಿ ಜ್ಞಾನವೃದ್ಧಿ ಪಡೆದುಕೊಂಡರು ಎಂಬ ಆಶಯದ ದಿನೇಶ್ ಅಮೀನರ ಲೇಖನ ವಿವೇಕಾನಂದರಿಗೆ ಮಾಡಿದ ಅವಮಾನದಂತೆ ಮೂಲಭೂತವಾದಿಗಳಿಗೆ ಕಾಣಿಸಿ ಪ್ರಜಾವಾಣಿ ಪತ್ರಿಕಾ ಕಚೇರಿಯ ಮೇಲೆ ಹಲ್ಲೆ, ವಿವಿದೆಡೆ ಪ್ರತಿಭಟನೆ ನಡೆಯುವ ಹಂತಕ್ಕೂ ತಲುಪಿತು. ದಿನೇಶ್ ಅಮೀನ್ ಮಟ್ಟುರವರಿಗೆ ಬೆದರಿಕೆಯೂ ಹಾಕಲಾಯಿತು. ಅವಶ್ಯಕತೆಯಿಲ್ಲದಿದ್ದರೂ ಮುಂದಿನ ದಿನಗಳಲ್ಲಿ ತಮ್ಮ ಲೇಖನಕ್ಕೆ ಪತ್ರಿಕೆಯಲ್ಲಿ ಸ್ಪಷ್ಟೀಕರಣ ನೀಡಿದರು. ವಿವೇಕಾನಂದರ ಬಗೆಗಿನ ಲೇಖನದಿಂದ ಆದ ಒಂದು ಪ್ರಯೋಜನವೆಂದರೆ ವಿವೇಕಾನಂದರು ದೇವರಾಗುವ ಅಪಾಯದಿಂದ ಪಾರಾದರು! ಒಂದೇ ಧರ್ಮಕ್ಕೆ ಸೀಮಿತವಾಗುವ ಅಪಾಯದಿಂದಲೂ ಕೊಂಚ ಮಟ್ಟಿಗೆ ಪಾರಾಗುವಲ್ಲಿ ಯಶಸ್ವಿಯಾದರು! ವಿವಿಧ ಸಂಘ ಸಂಸ್ಥೆಗಳು ವಿವೇಕಾನಂದರ ಬಗ್ಗೆ ವಿಚಾರಗೋಷ್ಠಿ ನಡೆಸುವ ಪರಿಪಾಠ ಹೆಚ್ಚಿದ್ದೂ ದಿನೇಶ್ ಅಮೀನ್ ಮಟ್ಟುರವರ ಲೇಖನ ಸೃಷ್ಟಿಸಿದ ವಾದವಿವಾದಗಳಿಂದ ಎಂದರೆ ತಪ್ಪಲ್ಲ.

ಕುಪ್ಪಳ್ಳಿಯಲ್ಲಿ ‘ನಾವು ನಮ್ಮಲ್ಲಿ’ ತಂಡ ಏರ್ಪಡಿಸಿದ್ದ ‘ಕರ್ನಾಟಕ ಕಂಡ ಚಳುವಳಿಗಳು’ ವಿಚಾರ ಸಂಕಿರಣದಲ್ಲಿ ದಿನೇಶ್ ಅಮೀನ್ ಮಟ್ಟುರವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತ್ತು. ದಿನೇಶ್ ಅಮೀನ್ ಮಟ್ಟುರವರು ಉತ್ತಮ ವಾಗ್ಮಿಯೂ ಹೌದು ಎಂದು ತಿಳಿದಿದ್ದು ಕವಿಶೈಲದಲ್ಲಿ ಅವರೊಡನೆ ಕಳೆದ ಕೆಲವು ಹರಟೆಗಳಲ್ಲಿ. ಪ್ರಖರ ಅಂಕಣಗಳಿಗಷ್ಟೇ ಸೀಮಿತವಾಗದೆ ರಾಜ್ಯ ದೇಶದ ಹಲವು ಭಾಗಗಳನ್ನು ಸುತ್ತುತ್ತಲೇ ಇರುವ ವ್ಯಕ್ತಿ. ಚುನಾವಣಾ ಸಮೀಕ್ಷೆಗಳನ್ನು ಯಾವೊಂದು ಪೂರ್ವಾಗ್ರಹವೂ ಇಲ್ಲದೆ ಬರೆಯುತ್ತಿದ್ದ ದಿನೇಶ್ ರವರ ಲೇಖನಿಗೆ ಈಗ ಅಲ್ಪ ವಿರಾಮದ ಸಮಯ! ಕಾರಣ, ಸಿದ್ಧರಾಮಯ್ಯನವರು ತಮ್ಮ ಮಾಧ್ಯಮ ಸಲಹೆಗಾರರನ್ನಾಗಿ ದಿನೇಶ್ ಅಮೀನರ ಮಟ್ಟುರವರನ್ನು ಆಯ್ಕೆಮಾಡಿಕೊಂಡಿದ್ದಾರೆ. ವೈಚಾರಿಕ ಮನಸ್ಸಿನ ಸಿದ್ಧರಾಮಯ್ಯ ವಿಶ್ಲೇಷಕ ಮನಸ್ಥಿತಿಯ ದಿನೇಶ್ ರವರನ್ನು ನೇಮಿಸಿಕೊಂಡಿರುವುದು ಉತ್ತಮ ಹೆಜ್ಜೆ. ತಮ್ಮ ಈ ಹೊಸ ಕಾಯಕದಲ್ಲೂ ದಿನೇಶ್ ಅಮೀನ್ ಮಟ್ಟುರವರು ಸಮಾಜದ್ಹೇಳಿಗೆಗೆ ಪೂರಕವಾಗಿ ಕಾರ್ಯನಿರ್ವಹಿಸಿ ಯಶಗಳಿಸಲೆಂಬುದು ನಮ್ಮ ಆಶಯ ಹಾರೈಕೆ.

-      ಡಾ ಅಶೋಕ್. ಕೆ. ಆರ್.

No comments:

Post a Comment