Jan 28, 2013

ಜಾಹ್ನವಿಅನ್ಸಿಲಾ ಫಿಲಿಪ್ ವಾಸ್.
“ಜಾಹ್ನವಿ ಮತ್ತು ಸತೀಶರನ್ನು ಬೇರೆ ಬೇರೆ ಮಾಡ್ಬೇಡಿ ಪ್ಲೀಸ್” ರಾಧಿಕಾ ಬೇಡಿಕೊಳ್ಳುವವಳಂತೆ ಕೇಳಿದಾಗ
“ಆದರೆ ....ಶಿಲ್ಪಳ ಸಂತೃಪ್ತ ಜೀವನಕ್ಕಾಗಿ ಜಾಹ್ನವಿ...” ನಿತಿನ್ ತನ್ನ ಮಾತುಗಳನ್ನು ಮುಗಿಸುವ ಮುನ್ನವೇ ತಡೆದ ರಾಧಿಕಾ ರೋಷದಿಂದ ಕೇಳಿದಳು
“ಜಾಹ್ನವಿ... ಸಾಯಬೇಕೇನು?”
“ಅದೂ ಸಹ ಆಗುತ್ತದೆ” ಶಾಂತತೆಗೆ ಉದಾಸೀನದ ಲೇಪನ ಮಾಡಿ ನುಡಿದಿದ್ದ ಆತ.
“but why? ಜಾಹ್ನವಿಗಾಗಿ, ಶಿಲ್ಪ ಯಾಕೆ ಸಾಯಬಾರ್ದು?”
“ಆದರೆ ಶಿಲ್ಪ ಸತೀಶನ ಧರ್ಮಪತ್ನಿ” ನಿತಿನ್ ಶಾಂತನಾಗಿ ನುಡಿದಾಗ ಕೆರಳಿದಳು ರಾಧಿಕಾ.
“ಆದರೇನಂತೆ? ಜಾಹ್ನವಿಯೂ ಸತೀಶನನ್ನು ಪ್ರೀತಿಸಿರುವಳಲ್ಲವೆ?” ಎಂದು ಕೇಳಿದಾಗ
“ಸತೀಶ ಶಿಲ್ಪಳ ಸ್ವತ್ತು. ಅವಳ ಪ್ರೀತಿ ಎಂದೆಂದಿಗೂ ಆತನಿಗೆ ಮೀಸಲು. ಅವರಿಬ್ಬರ ನಡುವೆ ಅಡ್ಡಗೋಡೆಯಾಗಿರುವವಳು ಈ ಜಾಹ್ನವಿ”
“ಹೌದು ಜಾಹ್ನವಿ ಸಾಯಬೇಕೆಂದಿರಿ. ಏಕೆ? ಅವಳು ಸತೀಶನನ್ನು ಪ್ರೀತಿಸಿದ ತಪ್ಪಿಗೋ? ಅಥವಾ ತ್ಯಾಗ ಮಾಡಿದ್ದಕ್ಕೋ?” ಮೊನಚಾಗಿ ಕೇಳಿದಳು.
“ಇಲ್ಲಿ ತ್ಯಾಗದ ಮಾತೆಲ್ಲಿಯದು ರಾಧಿಕಾ? ಜಾಹ್ನವಿ ಇನ್ನೂ ಸತೀಶನನ್ನು ಮರೆತಿಲ್ಲ. ಅವನನ್ನು ಹೇಗಾದರೂ ಪಡೆಯಲೇಬೇಕೆಂಬ ಕೆಟ್ಟ ಹಠ ಅವಳಲ್ಲಿದೆ”
“ಇದ್ದರೆ? ಅದು ಅವಳ ತಪ್ಪೇನು?” ಒಡನೆ ಪ್ರಶ್ನಿಸಿದಳು ರಾಧಿಕಾ.
“ತಪ್ಪೆಂದು ನಾನು ಹೇಳಲಿಲ್ಲ. ಆದರೆ ... ಹೆಣ್ಣಾಗಿ ಮತ್ತೊಬ್ಬ ಹೆಣ್ಣಿನ ಜೀವನ ಹಾಳು ಮಾಡ ಹೊರಟಿರುವುದು ಸರಿಯಲ್ಲ ಎಂದಷ್ಟೇ ಹೇಳುತ್ತೇನೆ” ತೀಕ್ಷವಾಗಿ ಅವಳನ್ನೇ ನೋಡುತ್ತ ಹೇಳಿದ.
“ಆದರೆ . . . ಆದರೆ ಜಾಹ್ನವಿಗೂ ಸತೀಶನ ಮೇಲೆ. . “ಎನ್ನುತ್ತಿದ್ದ ಅವಳ ಮಾತುಗಳನ್ನು ನಡುವೆಯೇ ತುಂಡರಿಸುತ್ತಾ “ಪ್ರೇಮವಿದೆ ಎನ್ನುವುದಕ್ಕಿಂತ ಹುಚ್ಚು ಆವೇಶವಿದೆ ಎನ್ನುವುದು ಸೂಕ್ತವಾದುದು. ಒಮ್ಮೆ ತ್ಯಾಗದ ಮಾತನಾಡಿ ಹಿಂದುಳಿದ ಜಾಹ್ನವಿ ಮುಂದೆ ಸ್ವಾರ್ಥಿಯಾಗುತ್ತಾಳೆ. ಇದು ತ್ಯಾಗದ ಹೆಸರಿನಲ್ಲಿ ಒಣ ಜಂಭವಷ್ಟೇ” ವಾಸ್ತವಿಕತೆಯನ್ನು ಪರಿಚಯ ಮಾಡಲೆಂಬಂತೆ ಹೇಳಿದ ನಿತಿನ್.
“ಜಾಹ್ನವಿಯ ತುಂಬು ತ್ಯಾಗಕ್ಕೆ ಜಂಭದ ಲೇಪನ ಬೇಡ” ನೋವಿನಿಂದ ಹೇಳಿದಳು.
* * *
ನಿತಿನ್ ರಾಧಿಕಾ ಇಬ್ಬರೂ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಗಳು. ಊಟ ಮಾಡುವಾಗ, ಸಂಜೆ ಕಾಫಿ ಕುಡಿಯುವ ಸಂದರ್ಭದಲ್ಲಿ ಸಲಿಗೆಯಿಂದ ಮಾತನಾಡುತ್ತಿದ್ದರು. ನಿತಿನ್ ಒಬ್ಬ ಬರಹಗಾರ, ರಾಧಿಕಾಳ ಜೀವನದ ಪುಟಪುಟವೂ ಆತನಿಗೆ ಚಿರಪರಿಚಿತ. ರಾಧಿಕಾ ವಿಕಾಸನನ್ನು ಪ್ರೇಮಿಸಿದ್ದು; ಸ್ನೇಹಿತೆ ಶಿಲ್ಪಳಿಗಾಗಿ ಅವನನ್ನು ತ್ಯಾಗಮಾಡಲು ಮುಂದಾಗಿದ್ದಳು, ವಿಕಾಸ್ ಪ್ರತಿಭಟಿಸಿದಾಗ ಆದರ್ಶದ ಮಾತುಗಳನ್ನಾಡಿದ್ದಳು.
“ವಿಕಾಸ್ ಪ್ರೀತಿ ತ್ಯಾಗದಲ್ಲಿ ಜೀವಂತವಾಗಿರುತ್ತೆ ಅಂತ ಹೇಳ್ತಾರೆ. ನೀನು ನನ್ನನ್ನು ನಿಜವಾಗ್ಲೂ ಪ್ರೀತಿಸಿದ್ದೇ ಆದರೆ ನನ್ನನ್ನು ಮರೆತು ಶಿಲ್ಪಳನ್ನು ಮದುವೆಯಾಗು. ನಿನಗಾಗಿ ಹುಚ್ಚಿಯಾಗಿದ್ದಾಳೆ ಆಕೆ” ಎಂದು ಕೇಳಿಕೊಂಡಾಗ ಅಪ್ರಭೀತನಾದ ವಿಕಾಸ್.
“ರಾಧಿಕಾ ನಿನ್ನ ತಲೆ ಮೇಲೆ ತ್ಯಾಗ ಅನ್ನೋ ಪಿಶಾಚಿ ಹೊಕ್ಕಿದೆ. ಅದರಿಂದ ನೀನು ಏನ್ಮಾಡ್ತಿದ್ದಿಯಾಂತ ನಿಂಗೇ ತಿಳೀತಿಲ್ಲ, ಸ್ವಲ್ಪ ಯೋಚ್ನೆ ಮಾಡು. ಕಾರಣವಿಲ್ಲದೆ ತ್ಯಾಗ ಮಾಡೋದು ವಿಕೃತಿಯ ಲಕ್ಷಣ” ಕಠಿಣವಾಗಿ ಹೇಳಿದ.
ವಿರಕ್ತಿ ಹೊಂದಿದವಳಂತೆ ನಕ್ಕಳು ರಾಧಿಕಾ. ಅವಳ ನಗುವಿಗೆ ಕೆರಳಿದ ಆತ ರಾಧಿಕಾಳನ್ನು ಪರಿಪರಿಯಾಗಿ ಕೇಳಿಕೊಂಡ, ನಂತರ “ನಗಬೇಡ, ತ್ಯಾಗದ ಅಭಿಮಾನವೂ ಒಂದು ವಿಷ, ನೆನಪಿರಲಿ” ಎಂದು ಎಚ್ಚರಿಸಿ ಹೊರಟುಬಿಟ್ಟಿದ್ದ.
ಆದರೆ.... ರಾಧಿಕಾ ತನ್ನ ದೃಷ್ಟಿಯಲ್ಲಿ ತಾನೇ ಎತ್ತರವಾಗಿ ಬೆಳೆದು ಬಿಟ್ಟಿದ್ದಳು. ಸ್ನೇಹಿತೆಗಾಗಿ ತನ್ನೆಲ್ಲವನ್ನೂ ನೀಡಲು ಸಿದ್ಧವಾಗಿದ್ದಳು.
ವಿಕಾಸ್ ಆಕೆಯಿಂದ ದೂರವಾದ ನಂತರ ಅವಳಿಗೆ ಆತನ ಮೌಲ್ಯದ ಅರಿವಾಯಿತು. ಶಿಲ್ಪಳ ಜೀವನವನ್ನೇ ಹಾಳುಗೆಡವಿ ವಿಕಾಸನನ್ನು ಮತ್ತೆ ಪಡೆಯಬೇಕೆನ್ನುವ ಕೆಟ್ಟ ಅಸಹಾಯಕ ಪ್ರೇಮ ಅವಳದಾಗಿತ್ತು. ತಾನು ಸುಖವಾಗಿರದಿದ್ದರೂ ಚಿಂತಿಲ್ಲ ಶಿಲ್ಪಳು ಸುಖವಾಗಿರಬಾರದು ಎಂಬುದು ಅವಳ ಈಗಿನ ಅಭಿಲಾಷೆ. ಶಿಲ್ಪ ವಿಕಾಸ್ ಅವರ ಮಗು ಅವರ ಸುಖಿ ಸಂಸಾರ ಅವಳಿಗೆ ಅಸೂಯೆ ಮೂಡಿಸಿತ್ತು. ತಾನೆಂದೋ ಮಾಡಿದ ತಪ್ಪಿಗಾಗಿ ವಿಕಾಸನನ್ನು ಕಳೆದುಕೊಂಡೆ ಇನ್ನಾದರೂ ಆ ತಪ್ಪನ್ನು ಸರಿಪಡಿಸಿಕೊಳ್ಳಬೇಕೆಂಬ ವಿಚಿತ್ರ ಹಂಬಲ ಅವಳದಾಗಿತ್ತು.
ವಿಕಾಸ್, ನಿತಿನ್ ಬರೆದ ಕಥೆಯ ಸತೀಶನಾಗಿದ್ದ, ರಾಧಿಕಾ ಜಾಹ್ನವಿಯಾಗಿದ್ದಳು, ಶಿಲ್ಪ ಶಿಲ್ಪಳಾಗೇ ಉಳಿದಿದ್ದಳು. ಇವರೆಲ್ಲರ ನಡುವೆ ನಿತಿನ್ ವೀಕ್ಷಕನಾಗಿದ್ದ.
ಸಹೋದ್ಯೋಗಿ ರಾಧಿಕಾಳ ನಿರಂತರ ಮೌನ, ಏನಾದರೂ ಮಾತನಾಡುತ್ತಿದ್ದಾಗ ಪಕ್ಕನೆ ಅವಳನ್ನು ಕವಿಯುವ ಅನ್ಯಮನಸ್ಕತೆ, ಒಮ್ಮೊಮ್ಮೆ ಶೂನ್ಯವನ್ನಪ್ಪಿದಂತೆ ಕುಳಿತು ಬಿಡುವ ಅವಳ ರೀತಿ ಸೋಜಿಗವೆನ್ನಿಸುತ್ತಿತ್ತು. ಇಪ್ಪತ್ನಾಲ್ಕರ ಚೆಲುವಾದ ಈ ಹುಡುಗಿಯ ಸಮಸ್ಯೆಯಾದರೂ ಏನು? ಎಂದು ಚಿಂತಿಸಲಾರಂಭಿಸಿದಾಗ ಅವನ ಮೌನದ ಶಬ್ದಭಂಡಾರದಲ್ಲಿ ರಾಧಿಕಾ ಪ್ರಶ್ನಾರ್ಥಕ ಶಬ್ದವಾಗೇ ಉಳಿದಳು, ಬರಹಗಾರನಿಗೆ ಪ್ರೇರಕ ಕಥಾವಸ್ತುವಾದಳು.
ಅವಳ ಮೌನಭಾಷೆಗೆ ಹೊಂದಿಕೊಂಡಿದ್ದ ಆತ ಹೇಗೋ ರಾಧಿಕಾಳಿಗೆ ಹತ್ತಿರವಾಗಿಬಿಟ್ಟಿದ್ದ. ಬಿಡಿಸಿದಷ್ಟೂ ಆಳಕ್ಕಿಳಿಯುವ, ತಿಳಿದಷ್ಟೂ ವಿಶಾಲವಾಗುವ ರಾಧಿಕಾಳ ಸಮಸ್ಯೆ ಸಮಸ್ಯೆಯಾಗೇ ಉಳಿಯುತ್ತಿತ್ತು. ರಾಧಿಕಾ ಅವನ ಪಾಲಿಗೆ ಸವಾಲಾಗೇ ಉಳಿದಿದ್ದಳು. ತಿಳಿಯಲೇಬೇಕೆಂಬ ಪಣ ತೊಟ್ಟಾಗ ರಾಧಿಕಾಳ ಚಲನವಲನಗಳ ಗೂಢಚರ್ಯೆಗೆ ತೊಡಗಿದ. ಚಕ್ರವ್ಯೂಹದ ಒಂದೊಂದು ವ್ಯೂಹಗಳು ಸರಳವಾಗತೊಡಗಿದಂತೆ ರಾಧಿಕಾ ಅವನ ದೃಷ್ಟಿಯಲ್ಲಿ ಅಸಹಾಯಕಳಾಗತೊಡಗಿದಳೂ. ಆಕೆ ವಿಕಾಸನಿಗೆ ಹಾತೊರೆದಷ್ಟೂ ಆತ ಅವಳಿಗಾಗಿ ಅನುಕಂಪಪಡಲಾರಂಭಿಸಿದ್ದ.
ವಿಕಾಸ್ ಗಾಗಿ ಪರಿತಪಿಸುತ್ತಿದ್ದ ರಾಧಿಕಾ ಆತನಿಗೆ ಆಗ್ಗಾಗ್ಯೆ ಫೋನ್ ಮಾಡುವುದು ಆತನ ಕುಟುಂಬವನ್ನು ಊಟಕ್ಕೆ ಆಹ್ವಾನಿಸುವುದು ಮಗುವಿಗೆ ಬೆಲೆಬಾಳುವ ಉಡುಗೊರೆಗಳನ್ನು ನೀಡುವುದು ಮಾಡುತ್ತಿದ್ದಳು. ಅವಳ ಈ ವರ್ತನೆಗಳಿಂದ ಪ್ರಭಾವಿತನಾದ ವಿಕಾಸ್ ಆಗ್ಗಾಗ್ಯೆ ರಾಧಿಕಾಳನ್ನು ಭೇಟಿ ಮಾಡುತ್ತಿದ್ದ. ಇದು ನಿತಿನ್ ಗೆ ಸರಿ ಕಾಣುತ್ತಿರಲಿಲ್ಲ. ರೇಷ್ಮೆ ಹುಳು ತಾನು ನೇಯ್ದ ಬಲೆಯಲ್ಲಿ ತಾನೇ ಸಿಲುಕುವಂತೆ ರಾಧಿಆ ಬಂಧಿಯಾಗುತ್ತಿದ್ದಾಳೆ ಬಲಿಪಶುವಾಗುತ್ತಿದ್ದಾಳೆ ಎಂದು ಅವನಿಗನ್ನಿಸಿತು.
ವಿಕಾಸನಿಗಾದರೋ ಸಂಸಾರವಿದೆ ಸಮಾಜ ಆತನನ್ನು ಬೆರೆಳೆತ್ತಿ ತೋರಿಸುವುದೂ ಇಲ್ಲ, ಪ್ರಶ್ನಿಸುವುದೂ ಇಲ್ಲ. ಆದರೆ ರಾಧಿಕಾ... ಸಮಾಜದ ಕಾಮಾಲೆ ಕಣ್ಣಿಗೆ ಹಬ್ಬವಾಗುತ್ತಾಳೆ. ರಾಧಿಕಾ ಸಮಾಜದ ಕಣ್ಣಿಗೆ ಪ್ರಶ್ನೆಯಾಗಿ ಉಳಿಯುವುದು ಅವನಿಗೆ ಬೇಕಿರಲಿಲ್ಲ. ಮೌನದ ಚಿಪ್ಪೊಳೊಗಡಗಿ ತನ್ನೊಡನೆಯೇ ಹೋರಾಡುತ್ತಿದ್ದ ರಾಧಿಕಾಳ ಜೀವನವ್ಯೂಹವನ್ನು ಭೇದಿಸಿ ಸಂಗಮವಾಗಿಸಿ ಸರಳವಾಗಿ ಕಥಾ ರೂಪದಲ್ಲಿ ಅವಳ ಮುಂದಿರಿಸಿದ. ಅವಳ ಮನವನ್ನೇ ಕಲಕುವ ಪ್ರಯತ್ನ ನಡೆಸಿದ್ದ. ಅವಳ ತಪ್ಪನ್ನು ತಪ್ಪೆಂದು ತೋರಿಸಲು ಅವನು ಆಯ್ಕೆ ಮಾಡಿಕೊಂಡ ಮಾರ್ಗ ಇದಾಗಿತ್ತು.
ನಿತಿನ್ ತನ್ನ ಈ ಕಥೆಗೆ “ಜಾಹ್ನವಿ...” ಎಂದು ಹೆಸರು ನೀಡಿದ್ದ. ಕಥೆಯನ್ನು ಓದಿದ ರಾಧಿಕಾ ತನ್ನ ಜೀವನವನ್ನೇ ಪ್ರತಿಬಿಂಬಿಸುವ ಜಾಹ್ನವಿಯ ಪಾತ್ರಕ್ಕೆ ವಿಸ್ಮಿತಳಾದಳು. ನಿತಿನ್ ಇದನ್ನು ತಿಳಿದಿದ್ದಾದರೂ ಹೇಗೆ? ನಿತಿನ್ ನ ಕಥೆಯಲ್ಲಿನ ಜಾಹ್ನವಿ, ಸತೀಶನ ನೆನಪಿನಲ್ಲಿ ಜೀವಂತ ಶವವಾಗಿದ್ದಳು; ಇದ್ದರೂ ಇನ್ನಿಲ್ಲದಂತೆ...ಓದಿದ ರಾಧಿಕಾ ಬಲು ನೊಂದಳು ತನಗಾಗಿ ತಾನೇ ಅನುಕಂಪಪಟ್ಟುಕೊಂಡಳು. ಈ ಬಗ್ಗೆ ನಿತಿನ್ ನೊಂದಿಗೆ ಚರ್ಚೆ ಆರಂಭಿಸಿದಳು. ಜಾಹ್ನವಿಗೆ ನ್ಯಾಯ ಬೇಕೆಂಬುದು ಅವಳ ಗುರಿಯಾಗಿತ್ತು.
* * *
“ಹಾಗಿದ್ದರೆ ... ಶಿಲ್ಪಳ ಸುಖೀ ದಾಂಪತ್ಯಕ್ಕಾಗಿ ಜಾಹ್ನವಿ ಸಾಯಬೇಕೇ? ಈ ಸಾವು ಅನಿವಾರ್ಯವೇ?” ಎಂದು ಪ್ರಶ್ನಿಸಿ ಮೇಜಿಗೆ ಮುಖ ಬಗ್ಗಿಸಿ ಮೌನವಾಗಿ ಬಿಕ್ಕಿದಾಗ ಅವಳ ಕೈಗಳನ್ನು ಅನುಕಂಪಕ್ಕೂ ಮೀರಿದ ಆತ್ಮೀಯತೆಯಿಂದ ಅದುಮಿದ ನಿತಿನ್.
“ಇಲ್ಲಾ ಇಲ್ಲಾ ... ಜಾಹ್ನವಿ ಬದುಕಬೇಕು, ಜಾಹ್ನವಿ ಬದುಕಬೇಕು. ಅವಳಿಗಾಗಿ ಅಲ್ಲವಾದರೂ, ಆಕೆಗಾಗಿ ಹುಚ್ಚನಾಗಿರುವ ಈ ನಿತಿನ್ ಗಾಗಿ” ಎಂದು ಭಾವುಕತೆಯಿಂದ ನುಡಿದಾಗ ವಿಸ್ಮಯದಿಂದ ಕಣ್ಣರಳಿಸಿದ ರಾಧಿಕಾಳ ಕಣ್ಣಿಗೆ ನಿತಿನ್ ಎತ್ತರವಾಗಿ ಬೆಳೆದಿದ್ದ.
ರಾಧಿಕಾಳ ನೋವಿನ ನೂರು ರಾಗಕ್ಕೆ ನಿತಿನ್ ತನ್ನ ಭಾವುಕತೆಯ ಶೃತಿ ಸೇರಿಸಿದಾಗ ಇಬ್ಬರ ಹೃದಯದಲ್ಲೂ ಮೌನಗೀತೆ ಮಧುರವಾಗಿ ಹಾಡುತ್ತಿತ್ತು!
“Sun shines wherever love grows”photo source - internet

No comments:

Post a Comment