Nov 21, 2012

ಶಮೀನಅನ್ಸಿಲಾ ಫಿಲಿಪ್ ವಾಸ್

ಛೇ! ನಾನೇನ್ಮಾಡ್ಲಿ? ಶಮೀನಾಗಿಂತ ತಾನು ಚೆನ್ನಾಗಿರುವುದು ನನ್ನ ತಪ್ಪೇ? ತನಗೆ ಹೇರಳವಾಗಿ ದೊರೆತ ಸೌಂದರ್ಯದ ಕುರಿತು ಚಿಂತಿಸುತ್ತಾಳೆ ಸೀಮ.

ಸೀಮ, ಶಮೀನರ ಮನೆಯ ಇಬ್ಬರು ಅಣ್ಣಂದಿರು ಸೌದಿಯಲ್ಲಿರುವುದರಿಂದ ಆಧುನಿಕ ಸಾಮಗ್ರಿಗಳನ್ನೊಳಗೊಂಡು ಸುಂದರವಾಗೇ ಇದ್ದಿತು ಶಮೀನಾಳಿಗಿಂತ ಸೀಮ ಚೆನ್ನಾಗಿದ್ದಾಳೆ ಎಂದು ಎಲ್ಲರೂ ಹೇಳುವಾಗ ಸೀಮಳಿಗೇಕೋ ವೇದನೆಯಾಗುತ್ತಿತ್ತು. “ಶಮೀನಾ ತನ್ನ ಅಕ್ಕ ಅವಳು ಚೆನ್ನಾಗಿ ಕಾಣಬೇಕು” ಇದು ಸೀಮಳ ಯೋಚನೆ.

ಒಮ್ಮೊಮ್ಮೆ ಕಣ್ರಪ್ಪೆ ಬಡಿಯದೆ ಎವೆಯಿಕ್ಕದೆ ಶಮೀನ ತನ್ನನ್ನೆ ದೃಷ್ಟಿಸುವಾಗ ಸೀಮ ತಳಮಳಗೊಳ್ಳುತ್ತಾಳೆ, ತಪ್ಪಿತಸ್ಥಳಂತೆ ತಲೆಬಾಗಿಸುತ್ತಾಳೆ. ಇಪ್ಪತ್ತರ ಹರೆಯದಲ್ಲಿ ಲಂಗ ದಾವಣಿಯೊಡನೆ ಉಯ್ಯಾಲೆಯಾಡುತ್ತಿರುವ ಸೀಮಳಿಗೂ ಆಸೆಗಳಿವೆ; ಎಲ್ಲರಂತೆ ಹೈ ಹೀಲ್ಡ್ ಧರಿಸಿ ಪೋನಿ ಟೈಲ್ ಹಾರಿಸಿ ಗುಲಾಬಿಯಂತೆ ಅರಳಿ ನಗುವ ಬಯಕೆಯಿದೆ. ಆದರೆ ಹಾಗೆ ಹೈಹೀಲ್ಡ್ ಹಾಕಿ ಜುಟ್ಟು ಹಾರಿಸಿ ನಡೆಯುವಾಗ ಅವಳಿಗೆ ಮುಕ್ತವಾಗಿ ನಗಲು ಸಾಧ್ಯವಾಗುವುದಿಲ್ಲ, ತಾನು ಶಮೀನಾಳಿಗಿಂತ ಚೆಂದ ಕಾಣಿಸುತ್ತಿದ್ದೇನೆಯೇ? ಎಂದು ಭೀತಳಾಗುತ್ತಾಳೆ. ಆದರೂ ಹಾಗೆ ಜುಟ್ಟು ಹಾರಿಸಿ ನಗುವ ದೂರದ ಆಸೆ ಅವಳಿಗಿದೆ. ಎಲ್ಲರಂತೆ ಲಿಪ್ ಸ್ಟಿಕ್ ಹಾಕಿ ಕಾಡಿಗೆ ಕಂಗಳನ್ನರಸಿ ಮುಗುಳ್ನಗುವ ಹಕ್ಕು ಅವಳಿಗೂ ಇದೆಯಲ್ಲವೇ?

ಶಮೀನಾ ಸೀಮಳ ಸ್ವಾತಂತ್ರ್ಯಕ್ಕೆಂದೂ ಅಡ್ಡಿ ಮಾಡಿರಲಿಲ್ಲ, ಅದು ಹಾಕಬೇಡ, ಇದು ಬೇಡ, ಸೀರೆ ಉಡಬೇಡ ಹೀಗೆಲ್ಲ ಹೇಳುತ್ತಲೇ ಇರಲಿಲ್ಲ. ಬದಲಾಗಿ ಈ ಬಣ್ಣ ನಿನಗೆ ಚೆನ್ನಾಗಿ ಒಪ್ಪುತ್ತೆ ಇನ್ನು ಸ್ವಲ್ಪ ಜಾಸ್ತಿ ಬಳೆ ಹಾಕು, ನನ್ನ ಸರವನ್ನೂ ಹಾಕಿಕೊಂಡು ಹೋಗು. ಹೀಗೆಲ್ಲ ಹೇಳುತ್ತಲೇ ಇರುತ್ತಿದ್ದಳು. ಅಕ್ಕನ ಈ ಉದಾರತೆ ಅವಳನ್ನೂ ಮತ್ತೂ ಕುಗ್ಗಿಸಿಬಿಟ್ಟಿದೆ.

ಶಮೀನಾ polytechnic ಓದಿದ್ದಾಳೆ, ಕಂಪ್ಯೂಟರ್ ಗೊತ್ತಿದೆ. ಸೀಮಳಿಗಿಂತ ಎತ್ತರದಲ್ಲಿ ಕೊಂಚ ಕಮ್ಮಿಯಾದರೂ ಹಾಲ್ಬಣ್ಣ, ಕನಸು ಕಂಗಳು ಸದಾ ಗೆಲುವಿನ ಮುಗುಳ್ನಗೆಯ ಮುಖ ಅವಳದು. ಸುಂದರಿಯಾದ ಶಮೀನಾಳನ್ನು ಸೀಮಳೊಡನೆ ಹೋಲಿಸುವಾಗ ನೋಡುಗರಿಗೆ ವ್ಯತ್ಯಾಸ ತಿಳಿಯುತ್ತಿತ್ತು. ಅದೇಕೋ ಮತ್ತೆ ಸೀಮಾಳೇ ಚೆಂದ ಕಾಣಿಸುತ್ತಿದ್ದಳು. ತನ್ನನ್ನು ನೋಡಲು ಬಂದ ಹುಡುಗ ಸಲೀಂ ತನ್ನ ತಂಗಿ ಸೀಮಳನ್ನು ಮೆಚ್ಚಿದಾಗ ಅಲ್ಲಿ ಸೀಮಾಳ ಅಸಹಾಯಕತೆಗೆ ಶಮೀನಾ ನಿರ್ಲಿಪ್ತೆ. ಈ ಹುಡುಗಿಯ ಮನಸ್ಸಿನಲ್ಲಿರುವುದಾದರೂ ಏನು?

ಸೀಮಾಳ ನಿಶ್ಚಿತಾರ್ಥಕ್ಕೆ ತನ್ನದೇನೂ ಅಭ್ಯಂತರವಿಲ್ಲ ಎಂದು ಶಮೀನಾ ದೃಡಪಡಿಸಿದಾಗ ಮನೆಯವರಿಗೂ ಸಮಾಧಾನವೆನಿಸಿತ್ತು. ಸಲೀಂ ಉನ್ನತ ಮನೆತನಕ್ಕೆ ಸೇರಿದ ಉನ್ನತ ಅಧಿಕಾರಿ ಹುದ್ದೆಯಲ್ಲಿದ್ದುದರಿಂದ ಶಮೀನಾಳಿಗೆ ನಿಖಾ ಆಗಿಲ್ಲ ಎಂಬ ಕಾರಣದಿಂದ ಸೀಮಳಿಗಾಗಿ ತೇಲಿ ಬಂದ ಬಂಧನವನ್ನು ಬೇಡವೆನ್ನಲು ಶಮೀನಾಳ ತಂದೆ ತಾಯಿಗಳಿಗೂ ಸಾಧ್ಯವಾಗಿರಲಿಲ್ಲವಾದ್ದರಿಂದ, ಶಮಿನಾಳ ಒಪ್ಪಿಗೆ ಕೇಳಿದಾಗ ಆಕೆ ತನ್ನ ಎಂದಿನ ಲವಲವಿಕೆಯಿಂದ ನಗುತ್ತಲೇ ತನ್ನ ಅಭ್ಯಂತರವೇನಿಲ್ಲ ಎಂದು ಸೂಚಿಸಿದ್ದಳು.

ಸೀಮಳದು ರಾಗರಂಜಿತ ಕೆನ್ನೆಗಳು; ಅವಳ ಅರಳು ಕಂಗಳಲ್ಲದೇನೋ ತಿಳಿಯಲಾರದ ಸೆಳೆತ ಒಂದು ಆಕರ್ಷಣೆ. ಹುಡುಗಿ ಎಂದರೆ ಸೀಮಳಂತಿರಬೇಕು! ಅವಳ ಅಲೆಅಲೆಯಾದ ಕೇಶರಾಶಿಯನ್ನು ಬಂಧಿಸಲು ಹೇರ್ ಬ್ಯಾಂಡ್ ಕೂಡ ಶ್ರಮಪಡುತ್ತಿತ್ತು.

ಸೀಮಳ ನಿಶ್ಚಿತಾರ್ಥ ಮುಗಿದಿದ್ದರೂ, ಶಮೀನಾಳ ಮದುವೆಯ ನಂತರವೇ ಸೀಮಳ ಮದುವೆ ಮಾಡುವುದೆಂದು ನಿರ್ಧರಿಸಲಾಯಿತು. ಸೀಮಳ ನಿಶ್ಚಿತಾರ್ಥದ ಸಂಭ್ರಮದ ವಾತಾವರಣದಲ್ಲಿ ನಸುನಗುತ್ತ ಓಡಾಡುತ್ತಿದ್ದ ಶಮೀನಾಳ ಏಕಾಂಗಿತನಕ್ಕೆ ಯಾರು ಹೊಣೆ? ಶಮೀನಾಳಿಗೆ ವರಾನ್ವೇಷಣೆಯಲ್ಲಿ ತೊಡಗಿದ್ದರು. ಆಕೆಯಾದರೋ ನಗುತ್ತಲೇ ಓಡಾಡುತ್ತಿದ್ದಳು. ಆದ್ದರಿಂದ ಅವಳಿಗೂ ಸಮಸ್ಯೆ ಇದೆ ಎಂದು ಯಾರಿಗೂ ತಿಳಿಯುತ್ತಿರಲಿಲ್ಲ.

ಇದ್ದಕ್ಕಿದ್ದಂತೆ ಶಮೀನಾ ತನ್ನ ಮಾವ ರಫೀಯನ್ನು ಮದುವೆಯಾಗಲು ಒಪ್ಪಿಬಿಟ್ಟಲು. ಸೀಮಾಳ ನಿಶ್ಚಿತಾರ್ಥವಾಗಿ ವರ್ಷವೇ ಕಳೆದಿದೆ. ತನಗೆ ಸರಿಯಾದ ವರ ಬಂದಿಲ್ಲ ಎಂಬ ಕಾರಣದಿಂದ ಅವಳ ಮದುವೆಯೂ ನಿಧಾನವಾಗುತ್ತಿದೆ. ಅಪ್ಪ ಅಮ್ಮನ ಮುಖದಲ್ಲಿ ನೋವಿನ ನೆರಿಗೆಗಳು ಮೂಡುತ್ತಿವೆ – ತಿಳಿಯಾರದಷ್ಟು ಮುಗ್ದೆಯಲ್ಲ ಶಮೀನ!

ಏನೇನೂ ಇಲ್ಲದ ನೋಡಲು ಚೆನ್ನಾಗಿಲ್ಲದ ರಫಿ ಮಾವನನ್ನು ಅಕ್ಕ ಮದುವೆಯಾಗುತ್ತಿರುವುದಾದರೂ ಯಾಕೆ? ಸೀಮ ತನ್ನ ಕಲಿತ ಬುದ್ಧಿಯನ್ನೆಲ್ಲ ಖರ್ಚು ಮಾಡುತ್ತಾಳೆ ; ತಿಳಿಯಲೊಲ್ಲದು.

ಈ ಅಕ್ಕನ ಮನಸ್ಸಿನಲ್ಲೇನಿದೆ? ಇವಳಿಗೇನೂ ಅನ್ನಿಸೋಲ್ವೆ? ಏಕೆ ಹೀಗೆ? ಈ ಎಲ್ಲ ಪ್ರಶ್ನೆಗಳಿಗೆ ಒಂದು ದಿನ ಸೀಮಳಿಗೆ ಉತ್ತರ ಲಭಿಸಿತ್ತು. ಆಗ ಕಣ್ಣಿಂದ ಕಂಬನಿ ಧಾರೆಯಾಗಿ ಹರಿದಿತ್ತು. ತನ್ನಿಂದ ಅಕ್ಕ ಬಲಿಪಶುವಾದಳೆ? ಪ್ರಶ್ನೆ ದೀರ್ಘವಾದಾಗ ನಿಟ್ಟುಸಿರು ಹೊರಬಂತು. ಹೀಗೆ ಎಷ್ಟೋ ಕುಟುಂಬಗಳಲ್ಲಿ ನಡೆದಿರಬಹುದು. ಒಂದು ಕುಟುಂಬದಲ್ಲಿ ಹೆಣ್ಣು ಮಕ್ಕಳು ಹೆಚ್ಚಿದ್ದಾಗ ಅವರುಗಳಲ್ಲಿನ ವಯಸ್ಸಿನ ಅಂತರ ಕಡಿಮೆಯಾಗಿದ್ದಾಗ ಈ ರೀತಿಯ ಸಮಸ್ಯೆಗಳು ತಲೆದೋರಿರಬಹುದು. ತಿಳಿದೋ ತಿಳಿಯದೆಯೋ ತಂದೆ ತಾಯಿಗಳು ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಆತುರ ತೋರಿ ಎಡವುತ್ತಾರೆ. ತಮ್ಮ ಕರ್ತವ್ಯ, ಮಕ್ಕಳು ವಯಸ್ಸಿಗೆ ಬಂದ ನಂತರ ಒಬ್ಬ ಹುಡುಗನಿಗೆ ಮದುವೆ ಮಾಡಿದಾಗ ಎಂದು ಅವರು ಅಂದುಕೊಂಡಿರಬಹುದು. ಆದರೆ ಯೋಗ್ಯ ವರನನ್ನು ಆರಿಸದೇ ಇದ್ದ ಪಕ್ಷದಲ್ಲಿ ಅವರ ಮಕ್ಕಳ ಮುಂದಿನ ಭವಿಷ್ಯ ಭಯಾನಕ! ಇದನ್ನು ಹೆಚ್ಚು ಮಕ್ಕಳಿದ್ದಾಗ ಯೋಚಿಸುವ ಪರಿಸ್ಥಿತಿಯಲ್ಲಿರುವುದಿಲ್ಲ. ಅದು ಸಾಧ್ಯವಾಗುವುದೂ ಇಲ್ಲ.

“ರಫಿ ನಿನಗೆಂಥಾ ಜೋಡೀನೇ? ಓದಿಲ್ಲ, ರೂಪ ಇಲ್ಲ. ಮಾವ ಅಂತ ಒಪ್ಕೊಂಡ್ಬಿಟ್ಯಾ? ನಿಂಗೇನೇ ಕಮ್ಮಿಯಾಗಿದೆ?” ರೇಗಿ ಕೇಳಿದಳು ಮಾನಸ.

ಶಮೀನಾ ತನ್ನ ಅಂತರಂಗದ ಗೆಳತಿ ಮಾನಸಳೊಡನೆ ಹೇಳುತ್ತಿದ್ದಾಳೆ. ಅದು ಸ್ಫಟಿಕದಷ್ಟೇ ಸ್ಪಷ್ಟವಾಗಿ ಸೀಮಳಿಗೆ ಕೇಳಿಸುತ್ತಲಿದೆ.

“ಏನ್ಮಾಡ್ಲಿ ಮಾನಸ ನಮ್ಮ ಜಾತಿಯಲ್ಲಿ ಹುಡುಗಿಯರಿಗೆ ಬೇಗ ಮದ್ವೆ ಮಾಡ್ತಾರೆ, ನನ್ನ ವಯಸ್ಸಿನವಳೇ ಆದ ಶಬಾನಾಗೆ ಮದ್ವೆಯಾಗಿ ಒಂದು ಮಗು ಇದೆ ಅಂತ ಜನ ನನ್ನ ಬಳಿ ಒತ್ತಿ ಒತ್ತಿ ಹೇಳೋವಾಗ ಎಲ್ಲಾದ್ರೂ ಎಲ್ಲಾರಿಂದ ದೂರ ಹೊರಟ್ಬಿಡೋಣ ಅನ್ನಿಸುತ್ತೆ. ನಾನು ಹೆಚ್ಚು ಓದಿದ್ದೇ ತಪ್ಪಾಯ್ತು. ಹುಡುಗಿ ಕಾಲೇಜು ಓದಿದ್ದಾಳೆ ಅಂತ ಹಳೇ ತಲೆಮಾರಿನವರಿಗೆ ಆತಂಕ! ಇಂಥ ಸಮಯದಲ್ಲಿ ರಫಿ ನನ್ನ ಇಷ್ಟಪಟ್ಟ. ಸೌದಿಯಲ್ಲಿದ್ದಾನೆ ಅನ್ನೋದು ಒಂದೇ ಸಮಾಧಾನ. ಇನ್ನೆಷ್ಟು ದಿನ ಅಂತ ಅಪ್ಪ ಅಮ್ಮನಿಗೆ ಕಷ್ಟ ಕೊಡ್ಲಿ? ಅಥವಾ ನನಗೋಸ್ಕರ ಯಾವ ಸುಂದರ ಹುಡುಗ ಹುಡುಕಿ ಬರ್ತಾನೆ ಅಂತ ಕಾಯ್ತಾ ಕೂರಲಿ? ಹೋಗಲಿ ಬಿಡು. ಅದೆಲ್ಲಾ ಯಾಕೆ? ನನ್ನ ಹಣೆಬರಹ ಇದ್ದ ಹಾಗೆ ನಡೆಯುತ್ತೆ” ಎಂದು ಒಂದೇ ಸಮನೆ ನುಡಿದವಳು ಮತ್ತೆ ಅದೇ ನಗುಮುಖ ತಂದುಕೊಂಡಳು.

ಅಕ್ಕ ಇರುವುದೇ ಹಾಗೆ. ಯಾವಾಗಲೂ ಅವಳು ಹಸನ್ಮುಖಿ. ಎಲ್ಲರೊಡನೆ ಹೊಂದಿಕೊಂಡು ನಡೆಯುತ್ತಾಳೆ. ನಗು ನಗುತ್ತಾ ಮಾತನಾಡುತ್ತಾಳೆ. ಹೃದಯವಂತರಿಗೆ ಶಮೀನ ಅತ್ಯಂತ ಸುಂದರಿಯಾಗಿ ಕಾಣುತ್ತಾಳೆನ್ನುವುದು ಸತ್ಯ.

ತನಗಿಂತ ಮೊದಲೇ ತಂಗಿಗೆ ನಿಶ್ಚಿತಾರ್ಥವಾಗಿದೆ, ನಾನು ಬಲಿಪಶುವಾದೆ ಹೀಗೆಲ್ಲ ಹೇಳಿಕೊಂಡು ಗೋಳಾಡದ ಅಕ್ಕ ಅಪರೂಪವಾಗಿ ಕಾಣುತ್ತಾಳೆ. ಬಹಳ ಎತ್ತರಕ್ಕೆ ಬೆಳೆದಂತೆ ಅನ್ನಿಸುತ್ತದೆ. ಅಕ್ಕನ ಭವಿಷ್ಯದಲ್ಲಿ ನನ್ನ ಪಾತ್ರವೇನು? ತನ್ನ ತಪ್ಪಾದರೂ ಏನು ಯೋಚಿಸುತ್ತಾ ಕೂರುತ್ತಾಳೆ ಸೀಮ!

ಶಮೀನಾಳಿಗೆ ಮದುವೆಯಾದ ವರ್ಷದಲ್ಲೇ ಸೀಮಳಿಗೂ ಸಲೀಂನೊಡನೆ ನಿಖಾ ಆಗಿದೆ. ಸೀಮ ಸಲೀಂನೊಡನೆ ಒಂದು ಸಂಜೆ ಕುಳಿತು ಹರಟುತ್ತಿರುವಾಗ ಮೆಲ್ಲನೆ ಹೇಳುತ್ತಾಳೆ.

“ಸಲೀಂ, ನಮ್ಗೆ ಮೊದ್ಲು ಹೆಣ್ಣು ಮಗು ಆದ್ರೆ ಒಂದೆ ಮಗು ಸಾಕು ಪ್ಲೀಸ್” ತಾನು ಎದುರಿಸಿದ ಸಮಸ್ಯೆಗಳು ಚಿಂತೆಗಳು ಮತ್ತೆ ಮರುಕಳಿಸುವುದು ಬೇಡ ಅದೇ ತಪ್ಪನ್ನು ತಾನು ಮಾಡುವುದು ಬೇಡ ಎಂಬ ನಿರ್ಧಾರದಿಂದ ಅರ್ಥಭರಿತವಾಗಿ ಸೀಮ ಕೇಳಿಕೊಂಡಾಗ ಸಲೀಂ ನಗುತ್ತಾನೆ. ಹೃದಯಾಂತರಾಳದಿಂದ ಮುಗುಳ್ನಗುತ್ತಾನೆ. “ಹೌದು ಸೀಮ. ನಿನ್ನ ಥರ ಇರೋ ಒಂದೇ ಒಂದು ಗೊಂಬೆ ಸಾಕು. ಅವಳನ್ನು ಓದಿಸಿ ಆಮೇಲೆ ಅವಳಿಗೆ ಯೋಗ್ಯನಾದ ಅವಳು ಇಷ್ಟಪಡುವ ಹುಡುಗನನ್ನ ಹುಡುಕಿ ಮದ್ವೆ ಮಾಡಬೇಕು. ಆಮೇಲೆ ನಾನೂ ನೀನು ಅಜ್ಜ ಅಜ್ಜಿ ಆಗ್ತೀವಲ್ವಾ?” ತನ್ನ ಕಲ್ಪನಾಲೋಕದಲ್ಲಿ ತೇಲಿ ಹೋದ ಸಲೀಂ ಹೇಳುತ್ತಾ ಹೋದಾಗ, ‘ಈ ಸ್ಪರ್ಧಾತ್ಮಕ’ ಜಗತ್ತಿನಲ್ಲಿ ತನ್ನ ಮಗಳಿಗೆ ಅನೇಕ ಸ್ಪರ್ಧಾಳುಗಳು ಎದುರಾಗಬಹುದು. ಆದ್ದರಿಂದ ನನ್ನ ಮನೆಯಲ್ಲೇ ಮತ್ತೊಂದು ಸ್ಪರ್ಧಾಳು ಬರುವುದು ಬೇಡ’ ಕ್ರಿಯಾತ್ಮಕವಾಗಿ ಯೋಚಿಸುತ್ತಿದ್ದ ಸೀಮ ತನ್ನ ಮೆಹೆಂದಿ ಮಾಸಿರದ ಕೈಗಳನ್ನು ಗಲ್ಲಕ್ಕೆ ಕೊಟ್ಟು ತನ್ನ ಕಾಡಿಗೆ ಕಂಗಳನ್ನರಳಿಸಿ ಸಲೀಮನ ಮಾತುಗಳನ್ನು ಕೇಳುತ್ತಲೇ ಇರುತ್ತಾಳೆ.

ಚಿತ್ರಮೂಲ - niconica

No comments:

Post a Comment

Related Posts Plugin for WordPress, Blogger...