Aug 7, 2012

ಸಾಮಾನ್ಯರ ಭ್ರಷ್ಟತೆ ನಿರ್ಲ್ಯಕ್ಷಿಸಿ ಜನರ ಬಳಿಗೆ ಹೊರಟವರ ಕಥೆ...


anna hazare
Team anna
 
-       ಡಾ. ಅಶೋಕ್. ಕೆ. ಆರ್
ನನ್ನ ಮತ್ತು ನನ್ನಂಥವರ ನಿರೀಕ್ಷೆಯಂತೆ ಅಣ್ಣಾ ತಂಡದ ‘ಭ್ರಷ್ಟಾಚಾರ ವಿರೋಧಿ ಆಂದೋಲನ’ ಮಗ್ಗಲು ಬದಲಿಸಿ ಸುಮ್ಮನಾಗಿದೆ. ನಮ್ಮ ನಿರೀಕ್ಷೆ ಹುಸಿಗೊಳ್ಳದೆ ಅಣ್ಣಾ ತಂಡ ವಿಫಲಗೊಂಡಿದ್ದಕ್ಕೆ ಸಂತಸ ಪಡಬೇಕಾ? ಖಂಡಿತ ಇಲ್ಲ. ಅಣ್ಣಾ ತಂಡದ ಸರ್ವಾಧಿಕಾರಿ ಧೋರಣೆಯನ್ನು ಪ್ರಶ್ನಿಸಿದವರಿಗೆ ‘ಸಿನಿಕರು’ ‘ದೇಶದ್ರೋಹಿಗಳು’ ‘ಭ್ರಷ್ಟರು’ ಎಂದು ನಾನಾ ಬಿರುದಾವಳಿಗಳನ್ನು ಕೊಟ್ಟವರು ಮಳೆಗಾಳಿಗೆ ಬೆಚ್ಚನೆ ಹೊದ್ದಿ ಮಲಗಿಬಿಟ್ಟಿದ್ದಾರೇನೋ?!

ಟೀಂ ವರ್ಕಿನ ತಂಡವೇ ಸರಿಯಿರಲಿಲ್ಲ! –

          ರಿಲೇ ಓಟದಲ್ಲಿ ಓಡುವ ನಾಲ್ವರ ಪಾತ್ರವೂ ಹಿರಿದು. ಒಬ್ಬನ ಓಟ ಕೊಂಚ ನಿಧಾನವಿರಬಹುದು, ಮತ್ತೊಬ್ಬ ಉಳಿದೆಲ್ಲರಿಗಿಂತ ವೇಗಿಯಿರಬಹುದು; ಕೊನೆಗೆ ಎಲ್ಲರೂ ಓಡಿದರೆ ಮಾತ್ರ ತಂಡ ಗೆಲುವು ಸಾಧಿಸಲು ಸಾಧ್ಯ. ಈ ಮೂಲಭೂತ ಅಂಶವೇ ಅಣ್ಣಾ ಹಜಾರೆ ಆರಂಭಿಸಿದ ಚಳುವಳಿಯಲ್ಲಿ ಇಲ್ಲವಾಗಿತ್ತು. ಅಣ್ಣಾ ಹಜಾರೆ, ಅರವಿಂದ್ ಕೇಜ್ರಿವಾಲಾ, ಕಿರಣ್ ಬೇಡಿಯವರ ಉದ್ದೇಶ ಸರಿಯಾಗಿತ್ತೇನೋ ಆದರೆ ನಡೆದ ಹಾದಿಯಲ್ಲಿ ಜೊತೆ ಮಾಡಿಕೊಂಡ ತಂಡ? ಎಡವಿ ಬಿದ್ದವರನ್ನು ಮೇಲೆತ್ತುವ ಗೋಜಿಗೆ ಹೋಗದೆ ನಗುತ್ತಾ ಮುಂದೆ ಸಾಗುವವರ ತಂಡ ಕಟ್ಟಿಕೊಂಡು ಚಳುವಳಿಯನ್ನು ಬೆಳೆಸಿ ಗೆಲ್ಲಲಾದೀತೇ? ಮೇಧಾವಿಗಳೆನ್ನಿಸಿಕೊಂಡವರು, ಹಲವು ಹೋರಾಟಗಳಲ್ಲಿ ಪಾಲ್ಗೊಂಡ ಜನರೇ ಇದ್ದ ಅಣ್ಣಾ ತಂಡದಲ್ಲಿ ಭ್ರಷ್ಟಾಚಾರವನ್ನು ಅರ್ಥೈಸುವ ದೃಷ್ಟಿಕೋನವೇ ಸರಿಯಿರಲಿಲ್ಲ. ರಾಜಕಾರಣಿಗಳು ಮತ್ತು ಅಧಿಕಾರವರ್ಗವಷ್ಟೇ ಭ್ರಷ್ಟರ ಕೂಟ ಎಂಬ ತೀರ್ಮಾನಕ್ಕೆ ಬಂದ ಚಳುವಳಿಯಿಂದ ಮತ್ತೇನನ್ನು ನಿರೀಕ್ಷಿಸಲು ಸಾಧ್ಯ? ಸಾಮಾನ್ಯ ಜನರೂ ಭ್ರಷ್ಟಾಚಾರದ ಬಹುಮುಖ್ಯ ಭಾಗ. ಅವರು ಬದಲಾಗದೆ – ಅವರನ್ನು ಬದಲಿಸಲಾಗದೆ – ಚಳುವಳಿ ಗೆಲ್ಲಲಾಗದು ಎಂದಿವರಿಗೆ ತಿಳಿಯಲಿಲ್ಲ.

          ಇಂದು ಅವನತಿಯ ಹಾದಿಯಲ್ಲಿದ್ದರೂ ದಶಕಗಳ ಕಾಲ ಶಕ್ತ ಹೋರಾಟ ನಡೆಸಿದ ಕರ್ನಾಟಕದ ರೈತ ಚಳುವಳಿ ಮತ್ತು ದಲಿತ ಚಳುವಳಿಗೆ ಹೋಲಿಸಿದಾಗ ಅಣ್ಣಾ ತಂಡದ ಹೋರಾಟ ಒಂದೇ ವರುಷಕ್ಕೆ ಮಸುಕಾಗಿ ಬಿಟ್ಟಿರುವುದಕ್ಕೆ ಕಾರಣ ಹೊಳೆಯುತ್ತದೆ. ರೈತ ಚಳುವಳಿ, ದಲಿತ ಚಳುವಳಿ ಸಮಾಜದ ಕೆಳಸ್ತರದ ಜನರ ಪಾಲ್ಗೊಳ್ಳುವಿಕೆಯಿಂದ ಸಶಕ್ತವಾಗಿತ್ತು. ಅಣ್ಣ ತಂಡದ ಬೆಂಬಲಕ್ಕೆ ಈ ವರ್ಗಗಳಾವುವೂ ಇರಲಿಲ್ಲ. ಇದ್ದಿದ್ದು ಜಾಗತೀಕರಣದ ಫಲವಾಗಿ ಹುಟ್ಟಿದ, ಬಹುರಾಷ್ಟ್ರೀಯ ಕಂಪನಿಗಳಿಗೆ ದುಡಿಯುವ ನವ ಮಧ್ಯಮವರ್ಗ. ಈ ಕಾರಣದಿಂದಾಗಿಯೇ ಅಣ್ಣಾ ತಂಡ ವ್ಯಾಪಕವಾಗಿರುವ ಖಾಸಗಿ ಉದ್ದಿಮೆದಾರರ ಭ್ರಷ್ಟಾಚಾರದ ವಿರುದ್ಧ ಸೊಲ್ಲೆತ್ತಲಿಲ್ಲ. ಪಬ್ಬು ಕ್ಲಬ್ಬುಗಳಲ್ಲಿ, ಭೋಗ ವಸ್ತುಗಳ ಖರೀದಿಯಲ್ಲಿ ಮುಳುಗಿ ದೇಶ – ವಿಚಾರ – ಚಿಂತನೆಗಳನ್ನು ಮರೆತೇ ಹೋಗಿದ್ದ ಮಧ್ಯಮವರ್ಗದ ಯುವಜನರನ್ನು ಬೀದಿಗಿಳಿಯುವಂತೆ ಮಾಡಿದ್ದು ನಿಜಕ್ಕೂ ಅಣ್ಣಾ ತಂಡದ ಸಾಧನೆ; ಅದನ್ನು ಮೆಚ್ಚಲೂಬೇಕು. ಅದೇ ಸಮಯದಲ್ಲಿ ಈ ಚಳುವಳಿಯಲ್ಲಿ ಬೀದಿಗಿಳಿದವರು ವಾರಾಂತ್ಯದಲ್ಲಿ for a change ಪ್ರಕೃತಿಗೆ ಪ್ರವಾಸ ಹೊರಡುವ, ಮಲ್ಟಿಪ್ಲೆಕ್ಸುಗಳಲ್ಲಿ ಸಿನಿಮಾ ನೋಡುವುದರ ಬದಲಾಗಿ ಗಾಂಧಿ ಟೊಪ್ಪಿಗೆ ಧರಿಸಿ ಸತ್ಯಾಗ್ರಹ ನಡೆಯುವ ಸ್ಥಳಕ್ಕೆ ಗೆಳೆಯರೊಡನೆ ಹೋಗಿ ಒಂದು ಫೋಟೋ ಕ್ಲಿಕ್ಕಿಸಿಕೊಂಡು ಫೇಸ್ ಬುಕ್ಕಿಗೆ ಅಪ್ ಲೋಡ್ ಮಾಡಲು ಉತ್ಸುಕರಾದವರೇ ಹೆಚ್ಚು ಎಂಬ ಕಟುಸತ್ಯವನ್ನೂ ಮರೆಯಬಾರದು. ಭ್ರಷ್ಟತೆಯ ಉಸಿರಿರುವುದೇ ಈ ಮಧ್ಯಮವರ್ಗದಲ್ಲಿ! ವಾಹನ – ಜಾಗ ನೋಂದಾವಣಿಗೆ ಎರಡು ಮೂರು ದಿನ ಅಲೆಯುವ ಬದಲಾಗಿ ಇನ್ನೂರು ರುಪಾಯಿ ‘ಬಿಸಾಕಿದರೆ’ ತಪ್ಪೇನು ಎಂದು ಕೇಳುವವರೇ ಈ ಮಧ್ಯಮವರ್ಗದವರು. ನಾವು, ಮಧ್ಯಮವರ್ಗದವರು ಆರೋಗ್ಯ ಕೈಕೊಟ್ಟಾಗ ಲಂಚಾಧಾರಿತ ಸರಕಾರಿ ಆಸ್ಪತ್ರೆಗೆ ಭೇಟಿ ಕೊಡುವುದಿಲ್ಲ; ಖಾಸಗಿ ನರ್ಸಿಂಗ್ ಹೋಮಿಗೆ ಹೋಗಿ ಏನೊಂದೂ ಪ್ರಶ್ನೆ ಕೇಳದೆ ಅವರು ಕೇಳಿದಷ್ಟು ಹಣ ತೆತ್ತು ಚಿಕಿತ್ಸೆ ಪಡೆಯುವವರು. ಭ್ರಷ್ಟಾಚಾರದ ಕರಾಳ ರೂಪದ ದರ್ಶನವಾಗುವುದು ಇನ್ನೂರು ರುಪಾಯಿ ಲಂಚ ಕೊಡಲಾಗದೆ ಮಗುವನ್ನು ಕಳೆದುಕೊಂಡ ಬಡತಾಯಿಗೇ ಹೊರತು ಚಾಲನಾ ಪರವಾನಗಿ ಪಡೆಯಲು ‘ಏಜೆಂಟ್’ ಮೂಲಕ ಹೋಗುವ ನಮಗಲ್ಲ. ಭ್ರಷ್ಟಾಚಾರದಿಂದ ಅತಿಹೆಚ್ಚು ತೊಂದರೆಗೊಳಗಾದ ಜನತೆಯನ್ನು ಒಳಗೊಳ್ಳದ ಚಳುವಳಿ ವಿಫಲಗೊಂಡಿದ್ದರಲ್ಲಿ ಅಚ್ಚರಿಯಿಲ್ಲ.

ಎಡವಿದ್ದಕ್ಕೆ ನಾನಾ ಕಾರಣಗಳು –

          ಕಾಂಗ್ರೆಸ್ ಪಕ್ಷವೊಂದೇ ದೇಶದಲ್ಲಿನ ಭ್ರಷ್ಟಾಚಾರಕ್ಕೆ ಕಾರಣವೆಂಬ ಧೋರಣೆ ಕೂಡ ಚಳುವಳಿ ಹಿಂದುಳಿಯಲು ಕಾರಣವಾಯಿತು. ಈ ಚಳುವಳಿ ಉತ್ಕರ್ಷದಲ್ಲಿದ್ದ ಸಮಯದಲ್ಲೇ ಕರ್ನಾಟಕದ ಬಿಜೆಪಿ ಪಕ್ಷದ ಹಗರಣಗಳು ಬಯಲಾಗುತ್ತಿದ್ದವು. ಅದರ ಬಗ್ಗೆ ಚಕಾರವೆತ್ತದ ಅಣ್ಣಾ ತಂಡ ಬಿಜೆಪಿ ಮತ್ತದರ ಮಾತೃಸಂಸ್ಥೆಯಾದ ಆರೆಸ್ಸಿಸ್ಸಿನ ಜೊತೆ ವೇದಿಕೆ ಹಂಚಿಕೊಂಡಿತು. ತಂಡವೆಂದ ಮೇಲೆ ಭಿನ್ನ ಅಭಿಪ್ರಾಯಗಳಿರುವುದು ಸಹಜ. ಭಿನ್ನ ಧ್ವನಿಗಳ ಹಿಂದಿನ ಕಾಳಜಿ, ಉದ್ದೇಶಗಳನ್ನು ಅರ್ಥೈಸಿಕೊಳ್ಳುವ ಗೋಜಿಗೆ ಹೋಗದೆ ಅಂಥವರು ತಂಡದಿಂದಲೇ ನಿರ್ಗಮಿಸುವಂತೆ ಮಾಡಿ ತಂಡದ ಶಕ್ತಿ ಒಳಗಿನಿಂದಲೇ ಕುಸಿದುಹೋಗುವಂತೆ ಮಾಡಿದರು. ಮಾಧ್ಯಮಗಳ ಮೇಲಿನ ಅತಿಯಾದ ಅವಲಂಬನೆ ಕೂಡ ಚಳುವಳಿಗೆ ಮುಳುವಾಯಿತು. ಟಿ ಆರ್ ಪಿ, ಪ್ರಸಾರ ಸಂಖ್ಯೆ ಹೆಚ್ಚಿಸುವವರ ಬಗ್ಗೆ ಮಾತ್ರ ಅವರ ನೈಜ ಕಾಳಜಿ ಎಂಬುದನ್ನು ಅರಿಯುವಲ್ಲಿ ವಿಫಲವಾದ ತಂಡ ‘ಭ್ರಷ್ಟಾಚಾರ ವಿರೋಧಿ ಆಂದೋಲನ’ ಮಾಧ್ಯಮ ಸೃಷ್ಟಿಸಿದ ‘ಭ್ರಮೆ’ ಎಂಬ ಸಂದೇಶವನ್ನು ಜನರಿಗೆ ತಲುಪಿಸಿಬಿಟ್ಟಿತು.

          ರಾಜಕಾರಣಕ್ಕೆ ಧುಮುಕಲು ನಿರ್ಧರಿಸಿದೆ ಅಣ್ಣಾ ತಂಡ. ನೈತಿಕ ಮಾರ್ಗದಿಂದ ಯೋಗ್ಯರು ಅಧಿಕಾರದ ಚುಕ್ಕಾಣಿ ಹಿಡಿದರೆ ಅದು ಸಂತಸದ ಸಂಗತಿಯೇ ಹೌದು. ಅಭಿವೃದ್ಧಿಯಾಗಲೀ ಚಳುವಳಿಯಾಗಲೀ ಕೆಳಸ್ತರದ ಜನರಿಂದ ಶುರುವಾಗಿ ಮೇಲುಸ್ತರಕ್ಕೆ ತಲುಪಬೇಕು. ನಗರೀಕರಣವೇ ಅಭಿವೃದ್ಧಿ ಎಂಬ ಕುರುಡು ಭರವಸೆಯಲ್ಲಿ ಕೆಳಸ್ತರದ ಜನರನ್ನು ಮರೆತೇಬಿಡಲಾಗಿದೆ. ಅಣ್ಣಾ ತಂಡದ ವೈಫಲ್ಯಕ್ಕೂ ಚಳುವಳಿಯನ್ನು ಹಳ್ಳಿಗಳಿಂದ ಆರಂಭಿಸದೆ ಮಹಾನಗರಗಳಿಂದ ಪ್ರಾರಂಭಿಸಿದ್ದೇ ಕಾರಣ. ಇನ್ನು ಮುಂದಾದರೂ ಸರ್ವಾಧಿಕಾರ ಧೋರಣೆ ಮರೆತು ಎಲ್ಲ ಸ್ತರದ ಜನರನ್ನು ಮುನ್ನಡೆಸುತ್ತಾ ಮುನ್ನಡೆಯುತ್ತಾರಾ? ಭರವಸೆ ಕ್ಷೀಣವಾದರೂ ಕಾದು ನೋಡಬೇಕಷ್ಟೇ.


No comments:

Post a Comment