Aug 2, 2012

ಎಚ್ಚರ ಪತ್ರಕರ್ತ ಎಚ್ಚರ....!

ಇಷ್ಟು ದಿನ ಪತ್ರಕರ್ತರನ್ನು ಅದರಲ್ಲೂ  ದೃಶ್ಯಮಾಧ್ಯಮದ ವರದಿಗಾರರನ್ನು ದೂಷಿಸುವುದೇ ಆಗುತ್ತಿತ್ತು. ಕಾರಣ ಅಲ್ಲಿನ ಬಹುತೇಕರ ವರ್ತನೆ ದೂಷಿಸಲು ಯೋಗ್ಯವಾಗಿಯೇ ಇರುವುದು! ಮಂಗಳೂರಿನ ಪಡೀಲಿನ ಘಟನೆಯಲ್ಲಿ ವಿಚಾರಣೆಗೊಳಪಟ್ಟ ನವೀನ್ ಸೂರಿಂಜೆ ಬರೆದ ಲೇಖನದ ನಂತರ ಉಳಿದೆಡೆಗಳಿಂದಲೂ ಪತ್ರಕರ್ತರು ಅನುಭವಿಸುತ್ತಿರುವ ಪಡಿಪಾಟಲುಗಳ ವಿವರಗಳು ಬರುತ್ತಿವೆ. ನಂತರ ಪ್ರಜಾವಾಣಿಯ ಲ್ಲಿ ದಿನೇಶ್ ಅಮಿನ್ ಮಟ್ಟು ಬರೆದ ಲೇಖನ ಕೂಡ ಪತ್ರಕರ್ತರ ಪಾತ್ರದ ಬಗ್ಗೆ, ಅವರ ಮೇಲಾಗುತ್ತಿರುವ ಕೊಟ್ಟಿ ಕೇಸುಗಳ ಬಗ್ಗೆ ತಿಳಿಸಿತ್ತು. ಉತ್ತರಕರ್ನಾಟಕದ ಪತ್ರಕರ್ತ ಪರಶುರಾಮ್ ತಹಸೀಲ್ದಾರ್ ತಾನು ಅನುಭವಿಸಿದ್ದನ್ನು ಬರೆದಿದ್ದಾರೆ...

ತುಂಬಾ ದಿನಗಳಿಂದ ನಿಮ್ಮ ಜೊತೆ ಒಂದು ವಿಷಯ ಹಂಚಿಕೋಬೇಕು ಅಂದ್ಕೊಂಡಿದ್ದೆ ಆದರೆ ಸಮಯ ಕೂಡಿಬಂದಿರ್ಲಿಲ್ಲ. ಆದರೆ ಈಗ ಸೂಕ್ತ ಸಂದರ್ಭ ಒದಗಿ ಬಂದಿದೆ. ವಿಷಯವನ್ನು ಆರಂಭಿಸುವ ಮೊದಲು ನನ್ನ ಕುರಿತು ಒಂದೆರಡು ಮಾತುಗಳನ್ನು ಹೇಳಿಬಿಡುತ್ತೇನೆ. ಯಾಕಂದ್ರೆ ನಾನು ಬೆಳೆದ ಮಾರ್ಗದ ಕುರಿತು ಸ್ವಲ್ಪ ತಿಳಿದರೆ ನಾನು ಹೇಳಲು ಹೊರಟಿರುವ ವಿಷಯಕ್ಕೆ ಇನ್ನೂ ಹೆಚ್ಚಿನ ಅರ್ಥ ಬರಬಹುದು....
ಪರಶುರಾಮ್.ಜಿ.ತಹಶೀಲ್ದಾರ್....
ದಾರವಾಡ ಜಿಲ್ಲೆಯ ಕಲಘಟಗಿಯವನಾದ ನನ್ನದು ತೀರ ಬಡಕುಟುಂಬ. ತಂದೆ ಹಮಾಲಿ ಮಾಡುತ್ತಿದ್ದರು. ನಾನೂ ಅವರ ಜೊತೆ ಹಮಾಲಿ ಕೆಲಸ ಮಾಡುತ್ತಾ ಸಿಮೆಂಟ್, ಚಪ್ಪಲಿ ಮತ್ತು ಗೋಣಿಚೀಲಗಳನ್ನು ಹೆಗಲ ಮೇಲೆ ಹೊತ್ತು ಬೆಳೆದೆ. ಕೆಲಸ ಮಾಡುತ್ತಲೇ ಓದಿದೆ. ಹೈಸ್ಕೂಲ್ಗೆ ಪ್ರಥಮ ಬಂದೆ. ಮುಂದೆ ಓದಬೇಕನ್ನಿಸ್ತು ಹೇಗೋ ಕೂಲಿನಾಲಿ ಮಾಡುತ್ತಾ ಡಿಗ್ರಿ ಮುಗಿಸಿದೆ. ಪತ್ರಿಕೋದ್ಯಮದ ಬಗ್ಗೆ ಇದ್ದ ಆಸಕ್ತಿ ಸ್ನಾತಕೋತ್ತರ ಪದವಿ ಪಡೆಯುವಂತೆ ಮಾಡಿತು. ತಂದೆಯ ಮರಣ, ತಾಯಿಯ ಅನಾರೋಗ್ಯದ ನಡುವೆ ವಿಚಲಿತನಾಗದೆ ಶಿಕ್ಷಣ ಪೂರೈಸಿ ಪತ್ರಿಕೋದ್ಯಮಕ್ಕೆ ಪ್ರವೇಶಿಸಿದೆ. ಈ ನಡುವೆ ಬಡತನ ಮತ್ತು ಹಸಿವು ಕಲಿಸಿದ ಪಾಠ ಯಾವ ಯುನಿವರ್ಸಿಟಿಯೂ ಕಲಿಸಲಾರದು ಅನಿಸಿದ್ದು ಮಾತ್ರ ಸತ್ಯ....
ಈಗ ವಿಷಯಕ್ಕೆ ಬರೋಣ....
ಇತ್ತೀಚೆಗೆ ಮಂಗಳೂರು ಹೋಂಸ್ಟೇಮೇಲೆ ನಡೆದ ದಾಳಿ ನಿಮಗೆಲ್ಲರಿಗೂ ಗೊತ್ತಿದೆ. ಘಟನೆಗೆ ಸಂಬಂಧಿಸಿದಂತೆ ಪತ್ರಕರ್ತರೊಬ್ಬರ ಮೇಲೆ ಪ್ರಕರಣ ದಾಖಲಾಗಿದೆ. ಕೆಲಸ ನಿರ್ವಹಿಸಿದ ಪತ್ರಕರ್ತನ ಮೇಲೆ ಪ್ರಚೋದನೆ ಮತ್ತು ರಾಜದ್ರೋಹದ ಆರೋಪ ಹೊರಿಸಿ ತೇಜೋವಧೆ ಮಾಡಲಾಗುತ್ತಿದೆ.
ಈ ಹಿಂದೆ ಇದೇ ರೀತಿಯ ಪ್ರಕರಣದ ಬಲಿಪಶು ನಾನಾಗಿದ್ದೆ ಅನ್ನೋದು ಬಹಳಷ್ಟು ಜನರಿಗೆ ಗೊತ್ತಿಲ್ಲ. ನಿಮಗೆಲ್ಲ ನೆನಪಿರಬಹುದು ಸುಮಾರು ಎರಡು ವರ್ಷಗಳಷ್ಟು ಹಳೆಯ ಪ್ರಕರಣ. ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ್ ಮುಖಕ್ಕೆ ಮಸಿ ಬಳಿದ ಪ್ರಕರಣವದು. ಕೆಲ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಬೆಲ್ಲದ್ ಮುಖಕ್ಕೆ ಕಪ್ಪುಆಯಿಲ್ ಬಳಿದಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ನನ್ನಮೇಲೂ ಪ್ರಚೋದನೆ, ರಾಜದ್ರೋಹದ ಆರೋಪ ಹೊರಿಸಿ ಜೈಲಿಗೆ ಕಳಿಸಲಾಗಿತ್ತು. ಆಗ ನಾನು ಪತ್ರಕರ್ತನಾಗಿ ಕೆಲಸ ಮಾಡಿದ್ದೇನೆ ಎನ್ನುವ ನನ್ನ ಹೇಳಿಕೆ ಅರಣ್ಯ ರೋಧನವಾಗಿಯೇ ಉಳಿದಿತ್ತು. ಯಾರದೋ ಕುತಂತ್ರಕ್ಕೆ ನಾನು ಬಲಿಪಶುವಾಗಬೇಕಾಗಿತ್ತು....
ದುಷ್ಟರ ತಂತ್ರಗಾರಿಕೆಯ ನಡುವೆ ದೃಶ್ಯಮಾದ್ಯಮದ ಪ್ರತಿನಿಧಿಗಳು ಹೇಗೆ ಒತ್ತಡದ ವೃತ್ತಿಜೀವನ ನಡೆಸುತ್ತಿದ್ದಾರೆ ಎನ್ನುವುದರ ಆತ್ಮಾವಲೋಕನದ ಕಾಲವಿದು. ಕೆಲವು ಭ್ರಷ್ಟ ಪೊಲೀಸರು, ಅಧಿಕಾರಿಗಳು, ರಾಜಕಾರಣಿಗಳು ಮತ್ತು ಪ್ರಭಾವಿಗಳ ಕಪಿಮುಷ್ಠಿಗೆ ಸಿಲುಕಿ ನಮ್ಮ ಜೀವನ ಹೇಗೆ ಅತಂತ್ರವಾಗಿದೆ ಎನ್ನುವುದನ್ನು ನೆನೆಸಿಕೊಂಡಾಗ ಒಂದು ಕ್ಷಣ ಎದೆ ಝಲ್ಲೆನ್ನುತ್ತದೆ.
ನನ್ನದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೆರಡು ಘಟನೆಗಳನ್ನು ಇಲ್ಲಿ ಹೇಳಲೇ ಬೇಕು....
ನಾನು ಬೀದರ್ನಲ್ಲಿ ಈಟಿವಿ ವರದಿಗಾರನಾಗಿ ಸುಮಾರು ಐದು ವರ್ಷ ಕೆಲಸ ಮಾಡಿದ್ದೇನೆ, ಈ ಸಂದರ್ಭದಲ್ಲಿ ಹಲವರ ವಿರೋಧವನ್ನು ಕಟ್ಟಿಕೊಳ್ಳಬೇಕಾಗಿತ್ತು. ಅದರಲ್ಲಿ ಕೆಲವು ಉದಾಹರಣೆಗಳನ್ನು ನಿಮ್ಮ ಮುಂದೆ ಇಡ ಬಯಸುತ್ತೇನೆ....
ಅಮಾನವೀಯತೆ.....
ಸುಮಾರು ನಾಲ್ಕು ವರ್ಷ ಹಳೆಯ ಮಾತು.. ಖಾಸಗಿ ಆಸ್ಪತ್ರೆಯೊಂದರಲ್ಲಿ ಅವಧಿಗೂ ಮುನ್ನ ಜನಿಸಿದ್ದ ಹೆಣ್ಣು ಮಗುವೊಂದನ್ನು ಚಿಕಿತ್ಸೆಗೆ ಸೇರಿಸಲಾಗಿತ್ತು. 15 ದಿನಕ್ಕೆ ಆಸ್ಪತ್ರೆಯ ಬಿಲ್ 3ಲಕ್ಷವಾಗಿತ್ತು. ಮಗುವಿನ ತಂದೆ-ತಾಯಿ ಕಲ್ಲು ಒಡೆದು ಬದುಕುವ ವಡ್ಡರು. ಹಣವಿಲ್ಲದೆ ಪರದಾಡುತ್ತಿದ್ದ ಅವರು ಒಂದು ಲಕ್ಷ ಪಾವತಿಸಿ ಮಿಕ್ಕಿದ ಹಣವನ್ನು ಕಂತಿನಲ್ಲಿ ಕೊಡುವುದಾಗಿ ಹೇಳಿದ್ದರು. ಆದರೆ ಒಪ್ಪದ ಆಸ್ಪತ್ರೆ ಹಣಪಾವತಿಸಿಯೇ ಮಗುವನ್ನು ಕರೆದೊಯ್ಯುವಂತೆ ಸೂಚಿಸಿತ್ತು. ಹೆತ್ತತಾಯಿಗೆ ಮಗುವಿನ ಮುಖವನ್ನೇ ತೋರಿಸಿರಲಿಲ್ಲ. ಎದೆ ಹಾಲುಣಿಸಲು ಬಿಟ್ಟಿರಲಿಲ್ಲ. ನನ್ನ ಗಮನಕ್ಕೆ ಬಂದಾಗ ಈ ಕುರಿತು ವರದಿ ಮಾಡಿದೆ. ಜಿಲ್ಲಾಧಿಕಾರಿಗಳು ಡಿಎಚ್ಓ ತನಿಖೆಗೆ ಆದೇಶಿಸಿದ್ರು. ಪರಿಶೀಲನೆಯಯ ನಂತರ ಒಂದು ರೂಪಾಯಿ ಹಣವನ್ನು ಪಡೆಯದೇ ಮಗುವನ್ನು ಪಾಲಕರ ವಶಕ್ಕೆ ಒಪ್ಪಿಸುವಂತೆ ಆದೇಶಿಸಲಾಯಿತು. ಈ ಘಟನೆಯ ನಂತರ ಪ್ರಭಾವಿ ವೈದ್ಯರ ಗುಂಪೊಂದು ನನ್ನನ್ನು ಶತ್ರುವಂತೆ ನೋಡಲು ಆರಂಭಿಸಿತ್ತು.....
ದೌರ್ಜನ್ಯ....
ಬೀದರ್ನಿಂದ ಸುಮಾರು 22 ಕಿ.ಮೀ. ದೂರದಲ್ಲಿ ನೆಲವಾಡ ಗ್ರಾಮವಿದೆ. ಇದು ಕಾರಂಜಾ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿರುವ ಗ್ರಾಮ. ಅಲ್ಲಿರುವವರೆಲ್ಲ ಕಡುಬಡವರು, ದಿನಗೂಲಿ ಕೃಷಿ ಕಾರ್ಮಿಕರು. ಊರಿನಲ್ಲಿ ಪುಂಡರ ಗುಂಪೊಂದು ಯುವತಿಯರನ್ನು ಅತ್ಯಾಚಾರಾವೆಸಗುವ ಹಾವಳಿ ಶುರುವಿಟ್ಟುಕೊಂಡಿತ್ತು. ಹುಡುಗಿ ವಯಸ್ಸಿಗೆ ಬಂದರೆ ಸಾಕು ಹೊಂಚುಹಾಕಿ ಎಳೆದೊಯ್ದು ಅತ್ಯಾಚಾರವೆಸಗುತ್ತಿತ್ತು. ಇದು ಬಡಪಾಯಿ ಗ್ರಾಮಸ್ಥರ ನಿದ್ದೆಗೆಡಿಸಿತ್ತು. ಪೊಲೀಸರ ಗಮನಕ್ಕೆ ತಂದರೂ ಪ್ರಯೋಜನವಾಗಿರಲಿಲ್ಲ. ಅತ್ಯಾಚಾರಿಗಳು ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿ ಒಂದೇ ಕೋಮಿನವರಾಗಿದ್ದು ರಕ್ಷಣೆ ಮಾಡುತ್ತಿದ್ದಾರೆ ಎನ್ನುವ ಆರೋಪವಿತ್ತು. ಈ ನಡುವೆ ಅಲ್ಪಸಂಖ್ಯಾತ ಕೋಮಿಗೆ ಸೇರಿದ ಬಾಲಕಿಯನ್ನು ಎಳೆದೊಯ್ದ ದುಷ್ಕರ್ಮಿಗಳು ಮೂರುದಿನ ನಿರಂತರ ಅತ್ಯಾಚಾರವೆಸಗಿ ಪ್ರಜ್ಞಾಹೀನಳಾದ ಅವಳನ್ನು ಬಿಟ್ಟು ಪರಾರಿಯಾಗಿದ್ದರು. ಲಾರಿ ಚಾಲಕರಾಗಿದ್ದ ಅತ್ಯಾಚಾರಿಗಳು ಊರಿಗೆ ಯಾವಾಗ ಬರುತ್ತಾರೆ ಯಾರನ್ನು ಟಾರ್ಗೆಟ್ ಮಾಡುತ್ತಾರೆ ಗೊತ್ತಾಗುತ್ತಿರಲಿಲ್ಲ. ಈ ನಡುವೆ ನಾನು ಗ್ರಾಮಕ್ಕೆ ತೆರಳಿ ವರದಿ ಮಾಡಿದೆ. ವರದಿಯ ನಂತರ ಪ್ರಕರಣ ಗಂಭೀರತೆ ಪಡೆದು ಅತ್ಯಾಚಾರಿಗಳ ಬಂಧನವಾಯಿತು.. ನಿರ್ಲಕ್ಷ ವಹಿಸಿದ ಕೆಲ ಪೊಲೀಸರು ಅಮಾನತಾದರು. ಆ ಸಂದರ್ಭದಲ್ಲಿ ಕೆಲ ಅಧಿಕಾರಿಗಳಿಂದ ನಾನು ಬೆದರಿಕೆ ಎದುರಿಸಬೇಕಾಯಿತು....
ಬೇಜವಾಬ್ದಾರಿ....
ಇನ್ನೊಂದು ಘಟನೆಯಲ್ಲಿ... ಸೇತುವೆಯ ಎತ್ತರ ಹೆಚ್ಚಿಸದ ಕಾರಣ ಪ್ರವಾಹದ ತೀವ್ರತೆಗೆ ಬ್ರಾಹ್ಮಣ ಯುವಕನೊಬ್ಬ ಪೂಜಾಕಾರ್ಯಕ್ಕೆ ತೆರಳುತ್ತಿದ್ದಾಗ ನೀರಿನಲ್ಲಿ ಕೊಚ್ಚಿಹೋಗಿದ್ದ. ಸರ್ಕಾರ ಮತ್ತು ಅಧಿಕಾರಿಗಳ ನಿರ್ಲಕ್ಷಕ್ಕೆ ಮನೆಗೆ ಆಸರೆಯಾಗಿದ್ದ ಯುವಕ ಬಲಿಯಾಗಿದ್ದ. ಭಾನುವಾರ ದಿನವಾದ ಅಂದು ಘಟನಾ ಸ್ಥಳಕ್ಕೆ ತೆರಳಿದ ನಾನು ಈ ಕುರಿತು ವಿಸ್ತೃತ ವರದಿ ಮಾಡಿದ್ದೆ. ಸ್ಥಳಕ್ಕೆ ಬಂದ ತಹಶೀಲ್ದಾರ್ ಪ್ರತಿಭಟನಾ ನಿರತ ಸ್ಥಳೀಯರ ಮೇಲೆ ಕಿಡಿಕಾರಿದ್ರು. ಭಾನುವಾರವೂ ನಿಮ್ಮ ಗೋಳು ಮುಗಿಯಲ್ಲ ಅನ್ನೋದು ಅವರ ಸಿಟ್ಟಿಗೆ ಕಾರಣವಾಗಿತ್ತು. ಪ್ರವಾಹವೇನು ಮುಹೂರ್ತನೋಡಿ ಬರುತ್ತದೆಯೆ..? ಎನ್ನುವ ಪ್ರಶ್ನೆಗೆ ನನ್ನ ಮೇಲೂ ಹರಿಹಾಯ್ದಿದ್ದರು ಅಧಿಕಾರಿ. ವಿಷಯವನ್ನು ಸಂಸದರು ಮತ್ತು ಶಾಸಕರ ಗಮನಕ್ಕೆ ತಂದಾಗ ಮಾಜಿ ಸಿಎಮ್ ಧರ್ಮಸಿಂಗ್ ಸ್ವತಹ ಸ್ಥಳಕ್ಕೆ ಭೇಟಿನೀಡಿ ಸೇತುವೆ ನಿರ್ಮಾಣಕ್ಕೆ ಸರ್ಕಾರಕ್ಕೆ ಸೂಚಿಸಿದ್ದರು, ಮೃತನ ಕುಟುಂಬಕ್ಕೂ ಪರಿಹಾರದ ಭರವಸೆ ನೀಡಿದ್ದರು. ಉದ್ಧಟತನ ಪ್ರದರ್ಶಿಸಿದ್ದ ತಹಶೀಲ್ದಾರ್ ಕೈಮುಗಿದು ಸಾರ್ವಜನಿಕರ ಕ್ಷಮೆ ಕೇಳಬೇಕಾಯಿತು. ನಂತರ ತಹಶೀಲ್ದಾರ್ ಬೆಂಬಲಿಗರ ಕೆಂಗಣ್ಣಿಗೆ ನಾನು ಗುರಿಯಾದೆ. ವಿವಿದ ಕಿರುಕುಳಗಳನ್ನು ಅನುಭವಿಸಿದೆ....
ಇನ್ನೂ ಕೆಲ ಭ್ರಷ್ಟ ಆರ್ಟಿಓಗಳು, ಟ್ರಾಫಿಕ್ ಪೊಲೀಸರ ವಿರುದ್ಧ ವರದಿಗಳನ್ನು ಮಾಡಿ ಪೊಲೀಸ್ ವರಿಷ್ಠರಿಂದ 'ನಕ್ಸಲ್ ವಿಚಾರವಾದಿ' ಅನ್ನಿಸಿಕೊಂಡದ್ದು ಆಯ್ತು....
ಈ ರೀತಿಯ ಅನೇಕ ಘಟನೆಗಳನ್ನು ವೃತ್ತಿ ಜೀವನದುದ್ದಕ್ಕೂ ಎದುರಿಸಿದ್ದೇನೆ....
ಇದು ನನ್ನೊಬ್ಬನ ಸಮಸ್ಯೆಯಲ್ಲ ದಿಟ್ಟತನದಿಂದ ವರದಿ ಮಾಡಿದ ಪ್ರತಿಯೊಬ್ಬ ವರದಿಗಾರ ಎದುರಿಸುತ್ತಿರುವ ಭಯಾನಕತೆ....
ಮತ್ತೆ ಮಸಿ ಪ್ರಕರಣಕ್ಕೆ ಬರೋಣ....
ಘಟನೆಯ ವಿವರ....
ಅಂದು ಭಾನುವಾರ ಕೆಲ ಕನ್ನಡಪರ ಸಂಘಟನೆಯ ಕಾರ್ಯಕರ್ತರು ನನಗೆ ಕರೆ ಮಾಡಿದ್ರು. ಚಂದ್ರಕಾಂತ ಬೆಲ್ಲದ್ ಬೀದರ್ಗೆ ಆಗಮಿಸುತ್ತಿದ್ದು, ಗಡಿ ಪ್ರದೇಶದ ಅಭಿವೃದ್ಧಿಯ ಕುರಿತು ಮನವಿ ಸಲ್ಲಿಸುವುದಾಗಿ ತಿಳಿಸಿದ್ರು. ಘೇರಾವ್, ಮುತ್ತಿಗೆ, ಪ್ರತಿಭಟನೆ ಇವೆಲ್ಲ ಪತ್ರಕರ್ತರಿಗೆ ಸಾಮಾನ್ಯ. ಹೀಗಾಗಿ ಹೆಚ್ಚು ಪೂರ್ವಾಪರ ಯೋಚಿಸದೆ, ಯಥಾರೀತಿ ಸಮಯಕ್ಕೆ ಸರಿಯಾಗಿ ನಾನು ವರದಿಗೆ ತೆರಳಿದೆ. ಅಷ್ಟರಲ್ಲೇ ಇನ್ನೊಂದು ವಾಹಿನಿಯ ಸ್ನೇಹಿತ ಕೂಡ ಅಲ್ಲಿಗೆ ಆಗಮಿಸಿದ್ರು. ಆಗ ಬೆಳಗಿನ ಜಾವ ಸುಮಾರು ಹತ್ತು ಗಂಟೆ. ಹಬ್ಸಿಕೋಟ್ ಗೆಸ್ಟ್ಹೌಸ್ನಲ್ಲಿ ಮನವಿಕೊಡುವ ನೆಪದಲ್ಲಿ ಕಾರ್ಯಕರ್ತರು ಬೆಲ್ಲದ್ ಅವರ ಮುಖಕ್ಕೆ ಕಪ್ಪುಆಯಿಲ್ ಬಳಿದರು. ಹತ್ತು ಸೆಕೆಂಡುಗಳಲ್ಲಿ ಘಟನೆ ನಡೆದುಹೋಗಿತ್ತು. ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಅರ್ಧ ಗಂಟೆಗೂ ಹೆಚ್ಚುಕಾಲ ಸ್ಥಳದಲ್ಲಿ ಧರಣಿ ನಡೆಸಿದ್ರು. ಅಲ್ಲಿಯವರೆಗೆ ಒಬ್ಬ ಪೊಲೀಸ್ ಪೇದೆಯೂ ಸ್ಥಳಕ್ಕೆ ಬಂದಿರಲಿಲ್ಲ. ನಾನು ಪೋಲೀಸರ ಗಮನಕ್ಕೆ ತಂದಾಗಲೇ ಎಚ್ಚೆತ್ತುಕೊಂಡು ಸ್ಥಳಕ್ಕೆ ಬಂದರು.
ಘಟನೆ ನಡೆದ ತಕ್ಷಣ ನಾನು ಬೆಲ್ಲದ್ ಅವರ ಪ್ರತಿಕ್ರಿಯೆ ಕೇಳಿದೆ. ಮುಖವನ್ನು ತೊಳೆದು ಬಟ್ಟೆ ಬದಲಾಯಿಸಿ ಬಂದ ಬೆಲ್ಲದ್ ಅವರು ಶಾಂತಚಿತ್ತರಾಗಿಯೇ ಘಟನೆಗೆ ಪ್ರತಿಕ್ರಿಯೆ ನೀಡಿದ್ರು. ಸಂಘಟನೆಯ ಪೂರ್ವಾಗ್ರಹವೇ ತಮ್ಮ ಮೇಲಿನ ದಾಳಿಗೆ ಕಾರಣ ಎಂದು ಹೇಳಿ ಸುಮ್ಮನಾದರು. ಒಬ್ಬ ಸರ್ಕಾರದ ಪ್ರತಿನಿಧಿ ಜಿಲ್ಲೆಗೆ ಬರುವಾಗ ಭದ್ರತೆ ನಿಡಬೇಕಾಗಿದ್ದ ಪೊಲೀಸರು ನಿರ್ಲಕ್ಷ ವಹಿಸಿದ್ದರು. ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದನಂತರ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಯಿತು. ದಡಬಡಾಯಿಸಿದ ಪೊಲೀಸರು ಕೆಲವರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ರು. ಕರ್ತವ್ಯ ಲೋಪವೆಸಗಿದ ಪೊಲೀಸ್ ಸಿಬ್ಬಂಧಿಗಳನ್ನು ಅಮಾನತು ಮಾಡಲಾಯಿತು. ಸುದ್ದಿಪ್ರಸಾರಮಾಡಿ ಪೊಲೀಸ್ ಇಲಾಖೆಯ ವೈಫಲ್ಯವನ್ನು ಎತ್ತಿ ತೋರಿಸಿದ ನನ್ನಮೇಲೆ ಆರೋಪ ಹೊರಿಸಲಾಗುತ್ತದೆ ಎನ್ನುವ ಸಣ್ಣ ಸೂಚನೆಯೂ ನನಗಿರಲಿಲ್ಲ.
ಬಂಧನ.....
ಘಟನೆ ನಡೆದ ಮೂರು ದಿನಗಳ ನಂತರ ಪೊಲೀಸ್ ಅಧಿಕಾರಿಯೊಬ್ಬರು ನನಗೆ ಕರೆ ಮಾಡಿ ಕಚೇರಿಗೆ ಬರುವಂತೆ ತಿಳಿಸಿದರು. ಸುದ್ದಿನಿಮಿತ್ತ ಭಾಲ್ಕಿಗೆ ತೆರಳಿದ್ದ ನಾನು ಸಾಯಂಕಾಲ 6 ಗಂಟೆಗೆ ಪೊಲೀಸ್ ಕಚೇರಿಗೆ ತೆರಳಿದೆ. ಏನು ವಿಷಯವೆಂದು ಕೇಳಲು ಹೋದ ನನಗೆ ಶಾಕ್ ಕಾದಿತ್ತು. ಪೊಲೀಸ್ ಅಧಿಕಾರಿ ಕಣ್ಣಲ್ಲಿ ನೀರು ತುಂಬಿಕೊಂಡು ನಿಮ್ಮನ್ನು ಬಂಧಿಸಲು ಒತ್ತಡ ಬಂದಿದೆ. ಈ ಕೆಲಸ ಮಾಡಬೇಕಲ್ಲಾ ಎಂದು ನಾನು ಮನನೊಂದು ಊಟವನ್ನೆ ಮಾಡಿಲ್ಲ ಎಂದು ಗೋಗರೆದರು. ಒತ್ತಡದ ಹಿಂದೆ ಪ್ರಭಾವಿಗಳ ಕೈವಾಡವಿದೆ ಎಂದು ಹೇಳಿದ ಅವರು ಬಂಧಿಸಲೇ ಬೇಕೆಂದು ಗೋಳಾಡಿದರು. ನಿಮ್ಮ ಕರ್ತವ್ಯಕ್ಕೆ ನಾನು ಅಡ್ಡಿಪಡಿಸಲಾರೆ ಎಂದ ನಾನು ನಮ್ಮ ಸುದ್ಧಿ ಸಂಸ್ಥೆಯ ಮುಖ್ಯಸ್ಥರಿಗೆ ಮಾಹಿತಿ ನಿಡುವುದಾಗಿ ಹೇಳಿದೆ. ಆದರೆ ಈ ಕುರಿತು ಮುಖ್ಯಸ್ಥರಿಗೆ ಪೊಲೀಸ್ ವರಿಷ್ಠರೇ ಮಾತನಾಡಿದ್ದು ಬಂಧನಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಅವರೇ ಹೇಳಿದ್ರು. ಕೂಡಲೇ ನ್ಯಾಯಾಧೀಶರ ಎದುರು ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ರು. ಆಗ ಸುಮಾರು ರಾತ್ರಿ ಒಂಭತ್ತು ಗಂಟೆ. ಎಂದೂ ಜೈಲು ಮುಖ ನೋಡದ ನಾನು ಮಾಡದ ತಪ್ಪಿಗೆ ಕಂಬಿ ಹಿಂದೆ ಇದ್ದೆ. ಮಾರನೆಯ ದಿನ ಕೆಲ ಪತ್ರಿಕೆಗಳಲ್ಲಿ ನಾನೇ ಅಪರಾಧಿ ಎಂದು ಬಿಂಬಿಸುವ ವರದಿ ಪ್ರಕಟಿಸಲಾಗಿತ್ತು.
ಬೆಳಿಗ್ಗೆ ನನ್ನ ಕೈಗೆ ಕೊಳಹಾಕಿ ಕೋರ್ಟ್ ಎದುರಿಗೆ ಕರೆತರಲಾಯಿತು. ಪತ್ರಕರ್ತನೆಂದು ವಿರೋಧಿಸಿದ್ರು ಕೈಗೆ ಕೊಳಹಾಕಿ ವಿಕೃತ ಖುಷಿಪಟ್ಟರು ಪೊಲೀಸ್ ಸಿಬ್ಬಂಧಿ. ಒಬ್ಬ ಕ್ರಿಮಿನಲ್ಗಿಂತ ಕಡೆಯಾಗಿ ನನ್ನನ್ನು ನಡೆಸಿಕೊಳ್ಳಲಾಯಿತು. ಕೋರ್ಟ್ಗೆ ಬಂದಿದ್ದ ಪತ್ರಕರ್ತರಲ್ಲಿ ಕೆಲವರಿಗೆ ಕೈಕೊಳ ನೋಡಿ ಆಶ್ಚರ್ಯವಾಯಿತು. ಕೂಡಲೆ ಎಸ್ಪಿ ಗಮನಕ್ಕೆ ತರಲಾಯಿತು. ಕೈಕೊಳ ಹಾಕಿದ್ದನ್ನು ಮೊದಲು ನಿರಾಕರಿಸಿದ ಎಸ್ಪಿ ಪ್ರತ್ಯಕ್ಷದರ್ಶಿಗಳ ಹೇಳಿಕೆಯಿಂದಾಗಿ ಕ್ಷಮೆಕೇಳಿದ್ರು. ಇದೇ ಎಸ್ಪಿ ಮಂಗಳೂರಿನಲ್ಲಿದ್ದಾಗ ಹಿರಿಯ ಪತ್ರಕರ್ತರಿಗೆ ಬೇಡಿ ಹಾಕಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ನಂತರ ನನ್ನನ್ನು ಯಾರೂ ಭೇಟಿ ಮಾಡದಂತೆ ನಿರ್ಬಂಧಿಸಲಾಯಿತು. ನನ್ನ ಪರ ಮಾತನಾಡುವವರಿಗೆ ಬೆದರಿಕೆ ಹಾಕಲಾಯಿತು. ದಿಕ್ಕು ತೋಚದಾದ ನನಗೆ ಸಹಾಯಕ್ಕೆ ಬಂದಿದ್ದು ಸ್ಥಳೀಯ ವೈದ್ಯ ಡಾ. ಬಸವರಾಜ್ ರಾಬಗಾರ್. ಸ್ವತಹ ಮುತುವರ್ಜಿ ವಹಿಸಿ ಬೇಲ್ ಆಗುವವರೆಗೆ ನನಗೆ ಸಾಥ್ ನೀಡಿದ ಅವರು ಯಾರ ಬೆದರಿಕೆಗೂ ಜಗ್ಗಲಿಲ್ಲ. ಅವತ್ತು ಅವರು ನನ್ನ ಬೆನ್ನಿಗೆ ನಿಲ್ಲದಿದ್ದರೆ ನಾನು ಜೈಲಿನಲ್ಲೆ ಕೊಳೆಯಬೇಕಾಗುತ್ತಿತ್ತೋ ಏನೋ. ಯಾಕಂದ್ರೆ ಎಲ್ಲೋ ಹುಟ್ಟಿ ಬೆಳೆದ ನಾನು ವರದಿಗಾರನಾಗಿ ಮೊದಲ ಬಾರಿಗೆ ಗೊತ್ತಿಲ್ಲದ ಜಿಲ್ಲೆಗೆ ಹೋಗಿದ್ದೆ. ಏಳು ದಿನಗಳ ಕಾಲ ನಾನು ಸೆರೆವಾಸ ಅನುಭವಿಸಬೇಕಾಗುತ್ತದೆ ಎಂದು ಕನಸ್ಸು ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ.
ಜೈಲಿನೊಳಗೆ.....
ಅರೆಸ್ಟ್ ಆಗಿ ಮೊದಲು ಜೈಲು ಪ್ರವೇಶಿಸಿದ ನನಗೆ ಖೈದಿಗಳಿಂದ ಬಂದ ಪ್ರತಿಕ್ರಿಯೆ ನಿಜಕ್ಕೂ ಆಶ್ಚರ್ಯ ಮೂಡಿಸಿತು. ಜೈಲಿನಲ್ಲಿ ನನ್ನುನ್ನು ನೋಡಿದ ಖೈದಿಗಳು 'ಸರ್ ನಿವ್ಯಾಕೆ ಇಲ್ಲಿ..!' ಎನ್ನುತ್ತಲೆ ಸ್ವಾಗತಿಸಿದ್ರು. ತಮ್ಮ ಹಾಸಿಗೆಯನ್ನು ಕೊಟ್ಟು ಮಲಗಲು ವ್ಯವಸ್ಥೆ ಮಾಡಿದ್ರು. ಬೆಳಿಗ್ಗೆ ಸ್ನಾನಮಾಡಲು ಬಿಂದಿಗೆಯಲ್ಲಿ ನೀರು ತುಂಬಿ ತಂದುಕೊಟ್ಟರು. ನಾನು ಏನಾದರೂ ತಿನ್ನುವವರೆಗೆ ಅವರು ಊಟ ಮಾಡುತ್ತಿರಲಿಲ್ಲ. ಪತ್ರಕರ್ತರ ಕುರಿತು ಖೈದಿಗಳಿಗೆ ಇರುವ ಗೌರವ ಅಲ್ಲಿ ಎದ್ದು ಕಾಣುತ್ತಿತ್ತು. ಜೈಲಿನಲ್ಲಿದ್ದ ಟಿವಿಯಲ್ಲಿ ಸುದ್ದಿವಾಹಿನಿಗಳನ್ನು ನೋಡುತ್ತಾ ಹೊರ ಜಗತ್ತಿನ ವಿದ್ಯಮಾನಗಳ ಕುರಿತು ತಿಳಿದುಕೊಳ್ಳುತ್ತಿದ್ದೆ. ಬಂಧನವನ್ನು ಖಂಡಿಸಿ ರಾಜ್ಯದ ವಿವಿದೆಡೆ ಪತ್ರಕರ್ತರು ಸೇರಿದಂತೆ ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿದ್ದರು. ನನಗೆ ವಿದ್ಯಾದಾನ ಮಾಡಿದ ವಿದ್ಯಾಕಾಶಿ, ನನ್ನ ತವರು ಜಿಲ್ಲೆ ಧಾರವಾಡದಲ್ಲಿ ಸಾರ್ವಜನಿಕರಿಂದ ವ್ಯಕ್ತವಾದ ಬೆಂಬಲ ನನ್ನ ಕಣ್ಣಾಲೆಗಳನ್ನು ತೇವಗೊಳಿಸುತ್ತಿತ್ತು. ಅವಾಗಲೆ ನನಗನಿಸಿದ್ದು ಭ್ರಷ್ಟರ ವಿರೋಧವಿದ್ದರೇನು ಜನಸಾಮಾನ್ಯರು ನನ್ನೊಂದಿಗಿದ್ದಾರೆ ಎಂದು.
ಇದೆಲ್ಲದರ ಹಿಂದೆ ಕೆಲಸ ಮಾಡಿದ್ದು ಕಾಣದ ಕೈಗಳೇನೂ ಅಲ್ಲ. ನನ್ನಿಂದ ಸಾರ್ವಜನಿಕರೆದುರು ಬೆತ್ತಲಾಗಿದ್ದ ಭ್ರಷ್ಟರು ಅನ್ನುವುದು ಗೊತ್ತಾಗಲು ಹೆಚ್ಚುದಿನವೇನು ಬೇಕಾಗಲಿಲ್ಲ. ಅದೇ ಅಧಿಕಾರಿಗಳು, ಪೊಲೀಸರು, ಪ್ರಭಾವಿಗಳು ಮುಂದೆ ನಿಂತು ಒತ್ತಡಹೇರಿದ್ದರು. ನನಗೆ ಕರೆಮಾಡಿ ಬಂಧನದ ವಿಷಯ ತಿಳಿಸಿ ಗೋಗರೆದಿದ್ದ ಪೊಲೀಸ್ ಅಧಿಕಾರಿಯೇ ಈ ವಿಷಯ ಹೇಳಿದ್ದರು.
ಕೊಲೆಗಾರನಂತೆ ಬಿಂಬಿಸಿದ್ರು....
ನನ್ನ ಮೇಲೆ ಕೊಲೆ ಯತ್ನದ ಪ್ರಕರಣ ದಾಖಲಿಸಿ ಜೈಲಿಗೆ ಕಳಿಸಲಾಯಿತು, ಕೈಗೆ ಕೊಳಹಾಕಿ ಕೋರ್ಟ್ಗೆ ಹಾಜರು ಮಾಡಲಾಯಿತು, ಬೇಗನೆ ಬೇಲ್ ಸಿಗದಂತೆ ನೋಡಿಕೊಳ್ಳಲಾಯಿತು, ಅಂದರೆ ಅವರಿಗೆ ನನ್ನ ಮೇಲಿದ್ದ ದ್ವೇಷ ಎಂತಹುದು ಎನ್ನುವುದನ್ನು ಕಲ್ಪಿಸಿಕೊಳ್ಳಬಹುದು. Parashuram don't go against police ಎಂದು ಒಬ್ಬ ಪೊಲೀಸ್ ಅಧಿಕಾರಿ ಕಳಿಸಿರುವ ಎಸ್ಎಂಎಸ್ ಇನ್ನೂ ನನ್ನ ಮೊಬೈಲ್ನಲ್ಲಿ ಸೇವ್ ಆಗಿದ್ದು... ನಾನೆದುರಿಸಿದ ನೋವುಗಳ ಸರಮಾಲೆಯ ಕುರುಹಾಗಿ ಉಳಿದಿದೆ.... ಇಲ್ಲಿ ನಾನು ಪ್ರಸ್ತಾಪಿಸಿರುವ ವಿಷಯಗಳು ಕೇವಲ ಮಾತುಗಳಲ್ಲ ಪ್ರತಿಯೊಂದು ಘಟನೆಗೂ ನನ್ನ ಬಳಿ ಸಾಕ್ಷಾಧಾರಗಳಿವೆ.
ಈ ನಡುವೆ ಕೆಲ ಕುತ್ಸಿದ ಬುದ್ಧಿಯ ಜನರು ಸಂಘಟನೆಯ ಅಧ್ಯಕ್ಷ ನನ್ನ ಸಹಪಾಠಿ, ಈ ಮೊದಲೇ ನನಗೆ ವಿಷಯ ತಿಳಿದಿತ್ತು ಎನ್ನುವ ಸುಳ್ಳು ಸುದ್ದಿ ಪ್ರಸಾರಮಾಡಿ. ಅದೇ ರೀತಿಯ ವರದಿ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗುವಂತೆ ನೋಡಿಕೊಂಡಿದ್ದರು. ಸಂಜೆಯಾದರೆ ನನ್ನಿಂದ ಮಾಹಿತಿ ಕೇಳಿ ಪಡೆಯುತ್ತಿದ್ದ ಕೃತಘ್ನರು ಅದನ್ನೆಲ್ಲ ನಂಬಿದ್ದರು ಎನ್ನುವುದೇ ದುರಂತ...
ಸ್ನೇಹಿತರೇ ಪ್ರಪಂಚದಲ್ಲಿ ನನ್ನವರು ಅಂತಾ ಇರುವುದು ಈಗ ತಾಯಿಮಾತ್ರ. ಅವಳ ಮೇಲೆ ಪ್ರಮಾಣಮಾಡಿ ಹೇಳುತ್ತೇನೆ ಬೆಲ್ಲದ್ ಮಸಿ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಕೇವಲ ಪತ್ರಕರ್ತನಾಗಿ ನನ್ನ ಕೆಲಸವನ್ನು ಮಾಡಿದ್ದೆ ಅಷ್ಟೆ....
ಘಟನೆ ನಡೆದು ಎರಡು ವರ್ಷಗಳೇ ಆಗಿವೆ ಇದುವರೆಗೂ ನಾನು ಯಾರೊಬ್ಬರ ಬಳಿಯೂ ಹೋಗಿ 'ಬಿ' ರಿಪೋರ್ಟ್ ಹಾಕಿ ಎಂದು ಕೇಳಿಕೊಂಡಿಲ್ಲ. ಪೊಲೀಸರು ಚಾರ್ಜ್ಶೀಟ್ ಹಾಕಿಲ್ಲ....
ಸತ್ಯಕ್ಕೆ ಸಾವಿಲ್ಲ ಎನ್ನುವ ಮಾತು ಮತ್ತೊಮ್ಮೆ ಸಾಬೀತಾಗಿದೆ.. ನಾನು ಯಾರಿಗೂ ಕೆಟ್ಟದ್ದು ಬಯಸದಿದ್ದರೂ ಕುತಂತ್ರಿಗಳೆಲ್ಲ ನನ್ನ ಕಣ್ಣೆದುರಿಗೆ ನಾಶವಾಗುತ್ತಿದ್ದಾರೆ.... ಪ್ರಕರಣ ಸಂಭವಿಸಿದ ನಂತರ ಒಂದು ವರ್ಷಕ್ಕೂ ಹೆಚ್ಚುಕಾಲ ನಾನು ಬೀದರ್ನಲ್ಲಿಯೇ ಕೆಲಸ ಮಾಡಿದೆ.... ಅಲ್ಲಿಂದ ಹೊರಡುವಾಗ ನನಗೆ ಸಿಕ್ಕ ಬೀಳ್ಕೊಡುಗೆ ನಿಜಕ್ಕೂ ನನ್ನ ನೆನಪಿನಂಗಳದಲ್ಲಿ ಕೊನೆಯುಸಿರಿರುವವರೆಗೆ ಉಳಿಯುತ್ತದೆ.... ಜಿಲ್ಲೆಯ ಎಲ್ಲಾ ಸಂಘಟನೆಗಳ ಮುಖಂಡರು ಒಂದೇ ವೇದಿಕೆಯಡಿ ಸೇರಿ ಶಾಲುಹೊದಿಸಿ ಸನ್ಮಾನಿಸಿದ್ದು ನನ್ನ ಆತ್ಮಸ್ಥೈರ್ಯವನ್ನು ಹೆಚ್ಚಿಸಿದೆ....
ಮಂಗಳೂರು ಹೋಂಸ್ಟೇ ದಾಳಿ ನಡೆದ ಮಾರನೆಯ ದಿನ ರಾಜ್ಯದ ಪ್ರತಿಷ್ಟಿತ ಪತ್ರಿಕೆಯೊಂದರಲ್ಲಿ ಹಿರಿಯ ಸಂಪಾದಕರೊಬ್ಬರು ಲೇಖನ ಬರೆದಿದ್ದಾರೆ. ಪ್ರಸಕ್ತ ಮಾಧ್ಯಮಗಳ ವರದಿಗಾರರ ಅಚಾತುರ್ಯಗಳ ಕುರಿತ ಲೇಖನವದು. ಪತ್ರಕರ್ತನಾದವನು ವರದಿಮಾಡುವಾಗ ಇನ್ನೊಬ್ಬರ ಜೀವನದ ಬಗ್ಗೆ ಬರೆಯುತ್ತಿದ್ದೇನೆ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುವ ಸಂದೇಶವಿತ್ತು ಆ ವರದಿಯಲ್ಲಿ. ಗುವಾಹಟಿ ಘಟನೆಯನ್ನು ಹೇಳುತ್ತಾ ನನ್ನ ಪ್ರಕರಣನ್ನೂ ಪ್ರಸ್ತಾವಣೆ ಮಾಡಿರುವ ಲೇಖಕರು.... 'ಬೀದರ್ನಲ್ಲಿ ಇದೇ ರೀತಿಯ ಚಿತಾವಣೆ ನೀಡಿದ ಹುಡುಗನನ್ನು ಬಂಧಿಸಿ ಜೈಲಿಗೆ ತಳ್ಳಲಾಗಿತ್ತು' ಎಂದಿದ್ದಾರೆ. ಆ ಹಿರಿಯರಿಗೆ ನಾನೇ ಚಿತಾವಣೆ ನೀಡಿದ್ದೆ ಎಂದು ಹೇಳಿದವರಾರು ಎನ್ನುವುದೇ ವಿಶೇಷ. ಯಾಕಂದ್ರೆ ಅವರು ಲೇಖನ ಬರೆದಿರುವುದು ಯಾವುದೋ ದೇಶದ ಭಯೋತ್ಪಾದಕನದ್ದಲ್ಲ. ತನ್ನ ತಾಯ್ನಾಡಿನಲ್ಲಿರುವ ತನ್ನ ಹಾಗೆಯೇ ಕೆಲಸ ಮಾಡುತ್ತಿರುವ ಒಬ್ಬ ಪತ್ರಕರ್ತನದ್ದು. ಅವನದು ಒಂದು ಪ್ರತಿಕ್ರಿಯೇ ಕೇಳೋಣ ಎನ್ನುವ ನೆನಪು ಏಕೆ ಅವರಿಗೆ ಬರಲಿಲ್ಲ ಎನ್ನುವುದು ನನಗೆ ನೋವು ತಂದಿದೆ.
ನನ್ನ ಬಂಧನವಾದಾಗ ಹಿರಿಯ ಪತ್ರಕರ್ತ ಜಿ.ಎನ್. ಮೋಹನ್ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಮೇಲಿನ ದೌರ್ಜನ್ಯವನ್ನು ಉಲ್ಲೇಖಿಸಿ ಬರೆದಿದ್ದರು. ನಂತರ ನನ್ನ ಜೊತೆಗೆ ಮಾತನಾಡಿ ಕೆಲವು ಅನುಭವದ ಮಾತುಗಳನ್ನು ಹೇಳಿದ್ದರು. ಇತ್ತೀಚೆಗೆ ಪ್ರಜಾವಾಣಿಯಲ್ಲಿ ಪತ್ರಕರ್ತ ದಿನೇಶ್ ಅಮೀನ್ಮಟ್ಟು ರವರು ಉತ್ತಮ ಲೇಖನವನ್ನು ಬರೆದಿದ್ದಾರೆ. ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಕೆಲ ಪೊಲೀಸರು ಪತ್ರಕರ್ತರನ್ನು ಹೇಗೆ ಬಲಿಪಶು ಮಾಡುತ್ತಿದ್ದಾರೆ ಎನ್ನುವ ಕುರಿತು ಧ್ವನಿ ಎತ್ತಿದ್ದಾರೆ.
ಈ ರೀತಿಯ ಕೆಲವು ಕಳಕಳಿಯ ಲೇಖನಗಳನ್ನು ಬಿಟ್ಟರೆ ನೊಂದ ಪತ್ರಕರ್ತರಿಗೆ ಸಾಂತ್ವನ ನೀಡುವ ಯಾವುದೇ ವ್ಯವಸ್ಥೆ ನಮ್ಮಲ್ಲಿಲ್ಲ ಎನ್ನುವುದೇ ವಿಷಾಧನೀಯ. ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಬೀಗುವ ಪತ್ರಕರ್ತರಿಗೆ ಹೀಗೆ ಹೇಳಲು ಸಂವಿಧಾನಬದ್ಧ ವಿಶೇಷ ಹಕ್ಕೇನು ಇಲ್ಲ ಅನ್ನುವುದೇ ವಿಪರ್ಯಾಸ.
ದಿನಬೆಳಗಾದರೆ ಕಾಲುಕೆರೆದು ಭ್ರಷ್ಟರ ವಿರುದ್ಧ ಹೋರಾಡುವ ನಮಗೆ ರಕ್ಷಣೆಯಾದರೂ ಏನಿದೆ..? ವಿದ್ಯುನ್ಮಾನ ಮಾಧ್ಯಮದವರಾದ ನಾವು ಘಟನಾ ಸ್ಥಳಕ್ಕೆ ನೇರವಾಗಿ ತೆರಳಿ ವರದಿ ಮಾಡುತ್ತೇವೆ. ಇಂತಹ ಸಂದರ್ಭದಲ್ಲಿ ಸಾಕಷ್ಟು ವಿರೋಧಗಳನ್ನು ಎದುರಿಸುತ್ತೇವೆ. ಇತ್ತೀಚೆಗೆ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ, ಕ್ಯಾಮರಾ ಜಖಂ, ಪ್ರಕರಣ ದಾಖಲು ಸುದ್ದಿ ಕೇಳುತ್ತಿದ್ದೇವೆ. ಸುದ್ದಿ ಮಾಡುವವರೆ ಸುದ್ದಿಯಾಗುತ್ತಿದ್ದೇವೆ. ಬದಲಾಗಿರುವ ಸಾಮಾಜಿಕ ವ್ಯವಸ್ಥೆಯಲ್ಲಿ ಮಾಧ್ಯಮಗಳ ಸಂಖ್ಯಾ ಬಾಹುಳ್ಯದ ನಡುವೆ ವರದಿಗಾರರು ಎದುರಿಸುತ್ತಿರುವ ಕಷ್ಟಗಳ ಕುರಿತು ಕೇಳುವವರಾರು..? ನಮ್ಮಪರ ಧ್ವನಿ ಎತ್ತಬೇಕಾದವರು ಯಾರು..? ಸಮಾಜಕ್ಕೆ ನೀತಿಪಾಠ ಹೇಳುವ ನಮಗೆ ಅತಂತ್ರ ಸ್ಥಿತಿ ಎದುರಾಗಿದೆ....
ಯಾರಿಗೂ ನೋವನ್ನು ಹೇಳಿಕೊಳ್ಳದ ಸ್ವಭಾವದವನಾದ ನನಗೆ ದಾವಣಗೆರೆ ಟಿವಿ9 ವರದಿಗಾರ ಸಹೋದರ ಬಸವರಾಜ್ ದೊಡಮನಿ 'ತಮ್ಮಾ ನಿನ್ನ ಮ್ಯಾಲಿನ ಕೇಸ್ ಬಗ್ಗೇನು ಬರೀ, ಜನಾ ಓದ್ಲಿ, ಸ್ವಲ್ಪ ಚರ್ಚೇನಾದ್ರು ಆಗ್ಲಿ'` ಅಂದಾಗ ತಡೆಯಲಾಗದೆ ವಸ್ತುಸ್ಥಿತಿಯನ್ನ ನಿಮ್ಮ ಗಮನಕ್ಕೆ ತಂದಿದ್ದೇನೆ....
ಅಣ್ಣ, ತಮ್ಮ, ತಂದೆ ಇಲ್ಲದ ನಾನು ಸ್ನೇಹಿತರಲ್ಲಿಯೇ ಎಲ್ಲರನ್ನೂ ಕಂಡಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹವೇ ನನ್ನ ಎದೆಗುಂದದ ಹೋರಾಟಕ್ಕೆ ಸ್ಪೂರ್ತಿ. ನಿಮ್ಮ ಸಲಹೆ ಸದಾ ನನಗಿರಲಿ.. ಇದನ್ನೆಲ್ಲ ಓದಿ ಪ್ರತಿಕ್ರಿಯಿಸುತ್ತೀರಿ ಎಂದು ಭಾವಿಸುತ್ತೇನೆ.....
ಇಂತೀ ತಮ್ಮವ
ಪರಶುರಾಮ್. ಜಿ. ತಹಶೀಲ್ದಾರ್.
ಸಂಪರ್ಕ ಸಂಖ್ಯೆ- 9986759488, 7760999739.

No comments:

Post a Comment