Aug 24, 2012

ಆದರ್ಶವೇ ಬೆನ್ನು ಹತ್ತಿ . . . ಭಾಗ 4ಆದರ್ಶವೇ ಬೆನ್ನು ಹತ್ತಿ . . . ಭಾಗ 3

“ಹೋಟೆಲ್ಲಿನಲ್ಲಿ ನಡೆದಿದ್ದರ ಬಗ್ಗೆ ಚಿಂತಿಸುತ್ತಿದ್ದೀರ. ಆ ವಿಷಯವನ್ನು ನಾನು ಯಾರಿಗೂ ಹೇಳೋದಿಲ್ಲ. ಚಿಂತೆ ಬೇಡ”
“ನಿಮಗೇನಾದರೂ ಫೇಸ್ ರೀಡಿಂಗ್ ಬರುತ್ತಾ?”
‘ಇದೇ ಪ್ರಶ್ನೆ ಸ್ವಲ್ಪ ಸಮಯದ ಮೊದಲು ನನ್ನ ಮನಸ್ಸಿಗೂ ಬಂದಿತ್ತಲ್ಲ’ ಎಂದು ಅಚ್ಚರಿಗೊಳ್ಳುತ್ತ “ಇಲ್ಲ” ಎಂದ. ಅಷ್ಟರಲ್ಲಿ ಸಯ್ಯದ್ ಒಳಬಂದ. “ಏನ್ ಇನ್ನೂ ಏನು ಆರ್ಡರ್ರೇ ಮಾಡಿಲ್ಲ” ಎಂದ್ಹೇಳಿ ಮಾಣಿಯನ್ನು ಕರೆದು ತಿಂಡಿ ಹೇಳಿದ. ತಿಂಡಿ ತಿಂದಾದ ಮೇಲೆ “ಸರಿ ಲೋಕಿ. ಒಂದಷ್ಟು ಕೆಲಸವಿದೆ. ನಾಳೆ ಭೇಟಿಯಾಗೋಣ” ಎಂದ್ಹೇಳಿ ಸಯ್ಯದ್ ಮೇಲೆದ್ದ. “ಬರ್ತೀನಿ ಲೋಕೇಶ್” ರೂಪಾ ಕೂಡ ಹೊರಡಲನುವಾದಳು. ‘ದಯಮಾಡಿ ಹೇಳಬೇಡ’ ಅನ್ನೋ ಬೇಡಿಕೆಯಿತ್ತಾ?! ಛೇ! ನಿಜಕ್ಕೂ ನನಗೆ ಫೇಸ್ ರೀಡಿಂಗ್ ಬರುವಂತಿದ್ದರೆ. .
* * *
ಈ ಸಿಗರೇಟನ್ನೋ ಮಾಯಾವಿ ಕೈಯಿಂದ ತಪ್ಪಿಸಿಕೊಳ್ಳೋಕೆ ಲೋಕಿಯಿಂದ ಸಾಧ್ಯವಾಗಲಿಲ್ಲ. ಪಿ ಯು ಸಿಯಲ್ಲಿ ಸೇದಲು ಧೈರ್ಯ ಸಾಲದ ಕಾರಣ ಬಿ ಎಗೆ ಸೇರಿದ ನಂತರ ಶುರು ಮಾಡಿದ. ಮನೆಯಲ್ಯಾರೂ ಸೇದುತ್ತಿರಲಿಲ್ಲ. ನೋಡಿದ ಚಿತ್ರಗಳ ಪ್ರಭಾವದಿಂದಲೋ, ಕನ್ನಡ ಸಾಹಿತ್ಯ ಲೋಕದ ಕೆಲವರು ತಮ್ಮ ಧೂಮಪಾನವನ್ನು ಹೆಮ್ಮೆಯಿಂದ ಬರೆದುಕೊಳ್ಳುತ್ತಿದುದನ್ನು ಓದಿದ ಸ್ಫೂರ್ತಿಯಿಂದಲೋ ಒಟ್ಟು ಲೋಕಿ ಸಿಗರೇಟು ಸೇದಲಾರಂಭಿಸಿದ್ದ. ಸಿಗರೇಟು ಸೇದಿದರೆ ಮುಂದೆ ನಾನು ಕೂಡ ಅವರಂತೆ ದೊಡ್ಡ ಸಾಹಿತಿಯಾಗ್ತೀನಿ ಅನ್ನೋ ಭ್ರಮೆಯಿತ್ತಾ? ಒಂದು ಭಾನುವಾರ ಲೋಕಿ ಕೇಶಮುಂಡನದ ಸಲುವಾಗಿ ಹೊರಬಂದಿದ್ದ. ಸೆಲೂನಿನ ಒಳಗೆ ಬಹಳ ಮಂದಿಯಿದ್ದರು. ಹೇಗಿದ್ದರೂ ತಡವಾಗುತ್ತೆ. ಈ ಭಾನುವಾರವಾದರೂ ಒಂದು ಸಿಗರೇಟು ಸೇದೋಣ ಎಂದುಕೊಂಡು ಪಕ್ಕದಲ್ಲೇ ಇದ್ದ ಅಂಗಡಿಯಲ್ಲಿ ಒಂದು ಸಿಗರೇಟು ಕೊಂಡು ಹೊತ್ತಿಸಿದ. ಹೊಗೆಯ ಮತ್ತಿನ ಗಮ್ಮತ್ತಿನಲ್ಲಿ ಮುಳುಗಿದ್ದವನಿಗೆ ತನ್ನ ತಂಗಿ ಸ್ನೇಹಳ ಗೆಳತಿ ಸಿಂಧು ತಾನು ಹೊಗೆ ಬಿಡುವ ಶೈಲಿಯನ್ನೇ ಗಮನಿಸುತ್ತಾ ರಸ್ತೆಯಲ್ಲಿ ಹೋದದ್ದು ತಿಳಿಯಲಿಲ್ಲ.
“ಹಲೋ. ಸ್ನೇಹ ಇದ್ದಾಳಾ?”
“ಯಾರು ಮಾತನಾಡೋದು?”
“ನಾನು ಅವಳ ಫ್ರೆಂಡ್ ಸಿಂಧೂ ಅಂತ ಹೇಳಿ”
“ಓ. ಸಿಂಧು ಅಕ್ಕಾನ. ನಾನು ವಿಜಿ ಮಾತನಾಡ್ತಿರೋದು. ಅಕ್ಕ ಸ್ನಾನಕ್ಕೆ ಹೋಗಿದ್ದಾಳೆ. ಏನಾದರೂ ಹೇಳಬೇಕಿತ್ತಾ?”
“ಊ್ಞ. . .ಅದು . . .ಅದು . . .ಸರಿ . . .ನಿನಗೇ ಹೇಳ್ತೀನಿ. ನಿನ್ನ ತಂದೆಗೆ ತಿಳಿಸಿಬಿಡು”
“ಏನು ಹೇಳಕ್ಕ”
“ಈಗಷ್ಟೇ ದಾರೀಲಿ ಬರ್ತಾ ಇದ್ದಾಗ. . .”
“ಹ್ಞೂ”
“ದಾರೀಲಿ ಬರಬೇಕಾದರೆ ಒಂದು ಅಂಗಡಿ ಮುಂದೆ ನಿಮ್ಮಣ್ಣ ಸಿಗರೇಟು ಸೇದ್ತಾ ಇರೋದನ್ನ ನೋಡಿದೆ”
“ಲೋಕಿ ಅಣ್ಣಾನಾ?!!”
“ಹ್ಞು”
“ಸರಿ ಅಕ್ಕ. ಅಪ್ಪನಿಗೆ ಹೇಳ್ತೀನಿ”.
ಶಿವಶಂಕರ್ ಆಗಷ್ಟೇ ಸ್ನಾನ ಮುಗಿಸಿ ದೇವರ ಮನೆಯಲ್ಲಿ ಪೂಜೆಗೆ ಅಣಿಮಾಡಿಕೊಳ್ಳುತ್ತಿದ್ದರು. ಪತ್ನಿ ಗಾಯತ್ರಿ ಸತ್ತ ಮೇಲೆ ಬೇರೆಲ್ಲ ಕೆಲಸಗಳ ಜೊತೆಗೆ ಪೂಜೆಯನ್ನೂ ಅವರೇ ಮಾಡುತ್ತಿದ್ದರು. ಉಳಿದೆಲ್ಲರಿಗೂ ದೇವರ ಮೇಲೆ ಅಗಾಧ ನಂಬುಗೆ. ಮುಂಚೆ ತಂದೆಯ ಬಲವಂತಕ್ಕೆ ಲೋಕಿ ದೇವರ ಮನೆಯೊಳಗಡಿಯಿಡುತ್ತಿದ್ದ. ಏನು ಮಾಡಿದರೂ ಈತನಿಗೆ ದೇವರಲ್ಲಿ ನಂಬಿಕೆ ಬರುವುದಿಲ್ಲ ಎಂದರಿತ ನಂತರ ಶಿವಶಂಕರ್ ಕೂಡ ಲೋಕಿಯನ್ನು ಕರೆಯುವುದನ್ನು ನಿಲ್ಲಿಸಿಬಿಟ್ಟಿದ್ದರು. ತಂದೆಯ ಪೂಜೆ ಮುಗಿದ ನಂತರ ಈ ವಿಷಯವನ್ನು ಹೇಳಿದರಾಯಿತೆಂದು ನಿರ್ಧರಿಸಿ ಟೀಪಾಯಿಯ ಮೇಲಿದ್ದ ದಿನಪತ್ರಿಕೆಯನ್ನು ಓದಲು ತೊಡಗಿದ. ಸ್ನೇಹ ಸ್ನಾನ ಮುಗಿಸಿ ಹೊರಬಂದಳು. ‘ಸ್ನೇಹಕ್ಕನಿಗೆ ಈ ವಿಷಯಾ ತಿಳಿಸಲಾ ಬೇಡವಾ?’ ಬೇಡ ತಂದೆಗೆ ಹೇಳಬೇಡ ಎಂದು ನನ್ನನ್ನವಳು ತಡೆದುಬಿಡಬಹುದು.
ತಂದೆ ಪೂಜೆ ಮುಗಿಸಿ ಬಂದು ವಿಜಿ ಓದುತ್ತಿದ್ದ ದಿನಪತ್ರಿಕೆಯ ಮುಖಪುಟವನ್ನು ತೆಗೆದುಕೊಂಡರು. ನೆಪಮಾತ್ರಕ್ಕೆ ಪತ್ರಿಕೆಯನ್ನು ಓದುತ್ತದ್ದ ಹಾಗೆ ಕುಳಿತಿದ್ದ ವಿಜಿ. ವಿಷಯವನ್ನು ಹೇಗೆ ಪ್ರಾರಂಭಿಸಬೇಕು? ಯಾವ ರೀತಿ ಹೇಳಿದರೆ ಲೋಕಿ ಅಣ್ಣನಿಗೆ ಹೆಚ್ಚು ಬೈಗುಳ ಬೀಳಬಹುದು ಎಂದು ಯೋಚಿಸುತ್ತ ಪತ್ರಿಕೆಯನ್ನು ಕೆಳಗಿಳಿಸಿದ.
“ಅಪ್ಪ. ಅಕ್ಕನ ಫ್ರೆಂಡು ಸಿಂಧು ಅಕ್ಕ ಫೋನ್ ಮಾಡಿದ್ದಳು”
“ಸಿಂಧು ಫೋನ್ ಮಾಡಿದ್ಲಾ?! ನನಗೆ ಹೇಳಲೇ ಇಲ್ಲವಲ್ಲೋ ವಿಜಿ” ದೇವರಿಗೆ ಕೈಮುಗಿದು ಹೊರಬರುತ್ತಿದ್ದ ಸ್ನೇಹ ಕೇಳಿದಳು. ಆಕೆಯ ಮಾತಿಗೆ ಗಮನವೀಯದೆ ವಿಜಿ ತಂದೆಯೊಡನೆ “ಅವಳೊಂದು ಮುಖ್ಯ ವಿಷಯ ಹೇಳಿದಳಪ್ಪ. .”
“ಏನು ಹೇಳಿದಳು. ಈ ಸ್ನೇಹಾನೂ ಅವರಣ್ಣನ ಹಾಗೆ ಕ್ಲಾಸಿಗೆ ಬಂಕ್ ಮಾಡಿ ಪಾರ್ಕುಗೀರ್ಕಲ್ಲಿ ಕುಳಿತು ಕಥೆ ಕಾದಂಬರಿ ಓದುತ್ತಾ ಕುಳಿತಿದ್ದಾಳಂತ ಹೇಗೆ?”.
“ವಿಷಯ ಅಕ್ಕನದಲ್ಲ ಲೋಕಿಯಣ್ಣನದು”.
“ಈ ಲೋಕಿ ಹೀಗೇನಾದರೂ ಮಾಡ್ತಾನೇಂತ ಅಂದ್ಕೊಂಡಿದ್ದೆ. ಕಥೆ ಕಾದಂಬರಿ ಹುಚ್ಚು. ಆ ಹುಡುಗಿ ಸಿಂಧು ಲಕ್ಷಣವಾಗಿದ್ದಾಳೆ. ಇವನೇ ಅವಳಲ್ಲಿ ಹೋಗಿ ಪ್ರೀತಿ ಪ್ರೇಮ ಅಂತ ತಲೆ ತಿಂದಿರಬೇಕು”
“ಒಂದ್ನಿಮಿಷ ಸುಮ್ಮನಿರಣ್ಣ” ಸ್ನೇಹ ತಂದೆಗೆ ಗದರಿದಳು “ವಿಜಿ ಪೂರ್ತಿ ಹೇಳೋದರೊಳಗಾಗಿ ನೀವೇ ಏನೇನೋ ಕಲ್ಪನೆ ಮಾಡುತ್ತೀರಲ್ಲ”
“ಲೋಕಿಯ ವಿಷಯ ಬಂದರೆ ಸಾಕು ಅವನ ಪರವಾಗಿ ಕಾಲೂರಿ ಯುದ್ಧಕ್ಕೆ . .”
“ನೀವಿಬ್ಬರೇ ಮಾತನಾಡುತ್ತಿರುತ್ತೀರೋ ಅಥವಾ ನಾನೇನಾದರೂ ಹೇಳೋದಿಕ್ಕೆ ಬಿಡ್ತೀರೋ” ಅಸಹನೆಯಿಂದ ಹೇಳಿದ ವಿಜಿ. ತಮಾಷೆಯಿಂದ ಮಾತನಾಡುತ್ತಿದ್ದ ಶಿವಶಂಕರ್ ಮತ್ತು ಸ್ನೇಹ ಗಾಂಭೀರ್ಯದಿಂದ ಮೌನ ವಹಿಸಿದರು.
“ಲೋಕಿಯಣ್ಣ ಈಗ ಕಟಿಂಗಿಗೆ ಹೋಗಿದ್ದನಲ್ಲಾ ಅಲ್ಲಿ ಒಂದು ಅಂಗಡಿಯ ಮುಂದೆ ನಿಂತು ಸಿಗರೇಟು ಸೇದ್ತಾ ಇದ್ದನಂತೆ” ಗಂಭೀರ ಭಾವದ ಮುಖಗಳಲ್ಲೀಗ ಅಚ್ಚರಿ ಮಿಶ್ರಿತ ಆಘಾತ.
‘ಲೋಕಿ ಸಿಗರೇಟ್ ಸೇದೋದಾ? ಛೇ ಛೇ. ನಂಬೋ ಮಾತೇ ಅಲ್ಲ. ಸಿಂಧು ಬೇರೆ ಯಾರನ್ನೋ ನೋಡಿರಬೇಕು’ ಎಂದು ತನಗೆ ತಾನೇ ಸಮಾಧಾನ ಮಾಡಿಕೊಂಡಳು ಸ್ನೇಹ. 
‘ಲೋಕಿ ಯಾವಾಗ ಸಿಗರೇಟು ಸೇದಲು ಪ್ರಾರಂಭಿಸಿದ? ಸಿಂಧು ಏನಾದ್ರೂ ಕನ್ ಫ್ಯೂಸ್ ಮಾಡಿಕೊಂಡಳಾ?. .ಹಾಗೆ ಆಗಿರಲಪ್ಪ. ಆ ರೀತಿ ಆಗಿಲ್ಲದಿದ್ದರೆ. ಏನು ಮಾಡೋದು? ಬಯ್ಯಬೇಕಾ? ಅದರಿಂದ ಉಪಯೋಗವಿಲ್ಲ. ದುಡ್ಡು ಕೊಡೋದು ನಿಲ್ಲಿಸಿಬಿಟ್ಟರೆ? ಆವಾಗಿವಾಗ ಪತ್ರಿಕೆಗಳಿಂದ ಬರುವ ದುಡ್ಡೇ ಅವನಿಗೆ ಸಾಕೇನೋ? ನನ್ನ ಸ್ನೇಹಿತರು ಹೇಳೋ ಹಾಗೆ ನಾನು ತುಂಬಾ ಒಳ್ಳೆಯವನಂತೆ. ನಿಮ್ಮ ದೊಡ್ಡ ಮಗ ನಿಮ್ಮಿಚ್ಛೆಯಂತೆ ಮೆಡಿಕಲ್ಲಿಗೆ ಸೇರದೆ ಇದ್ದರೂ ಪತ್ರಿಕೋದ್ಯಮದಲ್ಲೇ ಏನಾದ್ರೂ ಸಾಧಿಸ್ತಾನೆ. ಸ್ನೇಹಳ ಬಗ್ಗೆ ಹೇಳುವಂತೆಯೇ ಇಲ್ಲ ಚಿನ್ನದಂತ ಹುಡುಗಿ. ವಿಜಿ ಮೆಡಿಕಲ್ಲಿಗೆ ಸೇರಿ ನಿಮ್ಮ ಆಸೆ ಈಡೇರಿಸುತ್ತಾನೆ. ಇನ್ನೇನ್ ಶಿವೂ ನಿನಗೆ ಚಿಂತೆ ಅಂತಾರೆ. ಲೋಕಿ ಬರವಣಿಗೆಯಲ್ಲೇ ಏನನ್ನಾದರೂ ಸಾಧಿಸುತ್ತಾನೆ ಎಂದು ನನಗೇ ಬಹಳಷ್ಟು ಸಲ ಅನ್ನಿಸಿದ್ದಿದೆ. ಅವನ ಏಕಾಂತಪ್ರಿಯತೆ, ಎಲ್ಲದರಿಂದ ದೂರವಿರುವವನ ಹಾಗಿರುವ ಅವನ ವರ್ತನೆ ಕೆಲವೊಮ್ಮೆ ಗೊಂದಲಕ್ಕೀಡುಮಾಡಿದರೂ ಯಾವತ್ತೂ ಅವನ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಹಾದಿ ತಪ್ಪುವವನಲ್ಲ ಎಂಬ ವಿಶ್ವಾಸ. ಈಗ . . ಈ ಸಿಗರೇಟು ಮುಂದೆ ಏನೇನೋ? . . .ಈ ವಿಷಯಾನ ಅವನಲ್ಲಿ ಹೇಗೆ ಪ್ರಸ್ತಾಪಿಸೋದು? . . .ಅರೆ! ಇನ್ನೂ ಅವನಿಗೆ ಹತ್ತೊಂಬತ್ತು ವರ್ಷ. ಸಿಗರೇಟ್ ಯಾಕೋ ಸೇದ್ತೀಯ ಕತ್ತೆ ಬಡವಾ . . .’ ಶಿವಶಂಕರ್ ಮನಸ್ಸಿನಲ್ಲಿ ಇನ್ನೂ ಅನೇಕ ವಿಷಯಗಳ ಮಂಥನ ನಡೆಯುತ್ತಿತ್ತೇನೋ, ಬಾಗಿಲು ಬಡಿದ ಶಬ್ದವಾಯಿತು.
ಸ್ನೇಹ ಬಾಗಿಲು ತೆರೆದಳು. ಹಾಡೊಂದನ್ನು ಗುನುಗುತ್ತ ಒಳಬಂದ ಲೋಕಿ. ಬಾಯಲ್ಲಿ ಇನ್ನೇನು ಕರಗಿ ನೀರಾಗಲಿದ್ದ ಕ್ಲೋರ್ ಮಿಂಟ್ ಇತ್ತು. ಬೆಳಿಗ್ಗೆ ಎದ್ದ ತಕ್ಷಣ ಪತ್ರಿಕೆ ಓದುವ ಅಭ್ಯಾಸ. ಕಟಿಂಗಿಗೆ ಹೋಗಿದ್ದ ಕಾರಣ ಅಂದಿನ್ನೂ ಪತ್ರಿಕೆ ಮುಟ್ಟಿರಲಿಲ್ಲ. ಓದಿಮುಗಿಸಿ ಸ್ನಾನಕ್ಕೆ ಹೋದರಾಯಿತೆಂದು ಅಲ್ಲೇ ಕುಳಿತ. “ಏನಣ್ಣ. ಕಟಿಂಗಿನಿಂದ ಬಂದು ಸ್ನಾನಕ್ಕೆ ಹೋಗೋದು ಬಿಟ್ಟು ಇಲ್ಲಿ ಕುಳಿತುಬಿಟ್ಟೆಯಲ್ಲ? ಮನೇಲೆಲ್ಲ ಕೂದರು ಬೀಳೋದಿಲ್ವ? ಮೊದಲು ಹೋಗಿ ಸ್ನಾನ ಮಾಡಿ ಬಾ” ಬೇಗ ಸ್ನಾನಕ್ಕೆ ಕಳುಹಿಸಿದರೆ ವಾಸನೆನಾದ್ರು ಹೋಗಿರುತ್ತೆ ಎಂಬ ಯೋಚನೆ ಸ್ನೇಹಳಿಗೆ. ನಾನೇನು ಮಾಡಿದ್ರು ಎದುರು ಮಾತನಾಡದವಳು ಇವತ್ತೇನು ನನಗೇ ಆದೇಶಿಸುತ್ತಿದ್ದಾಳಲ್ಲ ಎಂದುಕೊಳ್ಳುತ್ತ ಲೋಕಿ ಬಚ್ಚಲುಮನೆ ಕಡೆಗೆ ಹೊರಟ. ಅಷ್ಟರಲ್ಲಿ ವಿಜಿ ಅವನ ಬಳಿ ಬಂದು ಮೂಗನ್ನು ಲೋಕಿಯ ಬಾಯ ಬಳಿ ಹಿಡಿದು “ಉಸಿರು ಬಿಡು” ಎಂದ.
“ಯಾಕೆ?”
“ಬರೀ ಮಿಂಟ್ ವಾಸನೆ ಬರ್ತಾಯಿದೆ ಅಪ್ಪ” ತಂದೆಯ ಕಡೆ ತಿರುಗಿ ನೋಡಿ ಹೇಳಿದ. ಶಿವಶಂಕರ್ ಲೋಕಿಯ ಬಳಿ ಬಂದು ಏನೊಂದೂ ಮಾತನಾಡದೆ ಆತನ ಬಲಗೈ ಎತ್ತಿಕೊಂಡು ಮೂಸಿದರು, ಸಿಗರೇಟಿನ ವಾಸನೆ ಮೂಗಿಗೆ ಬಡಿಯಿತು. “ಹೋಗಿ ಸ್ನಾನ ಮಾಡು” ಎಂದಷ್ಟೇ ಹೇಳಿ ತಮ್ಮ ರೂಮಿಗೆ ತೆರಳಿದರು. ಅವರ ಕಣ್ಣಲ್ಲಿ ನೀರಿತ್ತಾ?

ಮುಂದುವರಿಯುವುದು....

No comments:

Post a Comment