Aug 9, 2012

ಆದರ್ಶವೇ ಬೆನ್ನು ಹತ್ತಿ....ಭಾಗ 2


 “ಹಬ್ಬದ ದಿನ ಏನೇನೋ ಹೇಳಿ ನಿನ್ನ ಮನಸ್ಸಿಗೆ ಬೇಸರ ಉಂಟುಮಾಡುವ ಇಚ್ಛೆ ನನಗಿಲ್ಲ. ಮತ್ತೊಮ್ಮೆ ಹೇಳ್ತೀನಿ” ನಗುತ್ತಾ ಉತ್ತರಿಸಿ ಹೊರಟುಹೋದ.

ಗಣೇಶ ಚತುರ್ಥಿಯಾಗಿ ಒಂದು ವಾರ ಕಳೆದ ನಂತರ ಲೋಕಿಯ ಹುಟ್ಟುಹಬ್ಬ. ಪಿ.ಯು.ಸಿಗೆ ಬಂದ ನಂತರ ಸ್ನೇಹಿತರಿಗೆ ಪಾರ್ಟಿ ಕೊಡಿಸುವ ನೆಪದಲ್ಲಿ ಮನೆಯಲ್ಲಿ ಹಣ ಪಡೆದುಕೊಂಡು ನೂರು ರುಪಾಯಿಗೆ ಒಂದು ಪುಸ್ತಕ, ಸಾಮಾನ್ಯವಾಗಿ ಸ್ವಾತಂತ್ರ್ಯ ಹೋರಾಟಗಾರರ ಬಗೆಗಿನ ಪುಸ್ತಕವನ್ನು ಖರೀದಿಸುತ್ತಿದ್ದ. ಮಿಕ್ಕ ದುಡ್ಡನ್ನು ಭಿಕ್ಷುಕರಿಗೆ ಕೊಟ್ಟುಬಿಡುತ್ತಿದ್ದ. ಇಂದ್ಯಾಕೋ ಹಣ ಕೊಡುವುದು ಬೇಡ, ಹೋಟೆಲ್ಲಿಗೆ ಕರೆದೊಯ್ದು ಊಟ ಕೊಡಿಸೋಣ ಎಂದೆನಿಸಿತು. ಇದೇ ಯೋಚನೆಯಲ್ಲಿ ಸಯ್ಯಾಜಿರಾವ್ ರಸ್ತೆಯಲ್ಲಿ ನಡೆಯುತ್ತಿದ್ದವನಿಗೆ ಇಂದ್ರ ಭವನ್ ಹೋಟೆಲ್ ಎದುರಿಗೆ ಒಬ್ಬ ವ್ಯಕ್ತಿ ಭಿಕ್ಷೆ ಬೇಡುತ್ತಿರುವುದು ಕಂಡಿತು. ಆತನಿಗೆ ಎರಡೂ ಕಾಲುಗಳಿರಲಿಲ್ಲ. ಎಡಗೈ ಇರಲಿಲ್ಲ. ಅವನ ಹತ್ತಿರ ಹೋಗಿ “ಏನಾದರೂ ತಿಂತೀರಾ?” ಅಂದ. “ದುಡ್ಡೇ ಇಲ್ಲ ಸಾಮಿ” ಅವನ ಮಾತು ಕೇಳಿ ಲೋಕಿಗೆ ‘ಸಮಾನತೆ ಅನ್ನೋದು ಕೈಗೆಟುಕದ ನಕ್ಷತ್ರದಂತೆಯೇ ಉಳಿದುಹೋಗುತ್ತದಾ?’ ಎಂಬ ಯೋಚನೆ ಬಂತು. ಯೋಚನೆಗಳನ್ನು ಹತ್ತಿಕ್ಕುತ್ತಾ “ನಾನು ಕೊಡಿಸ್ತೀನಿ ನಡೀರಿ” ಎಂದ್ಹೇಳಿ ಆತನ ಮಾತಿಗೂ ಕಾಯದೆ ಅವನನ್ನು ಅನಾಮತ್ ಮೇಲೆತ್ತಿಕೊಂಡು ಇಂದ್ರ ಭವನದ ಒಳಗೆ ಹೋದ. ಸುತ್ತಲಿನವರ ಗಮನ ಲೋಕಿಯ ಮೇಲಿತ್ತು.

ಹೋಟೆಲಿನೊಳಗಿದ್ದ ಜನ ‘ಇವನ್ಯಾರಪ್ಪ ಹುಚ್ಚ’ ಎಂಬಂತೆ ನೋಡುತ್ತಿದ್ದರು. ಒಂದು ಹುಡುಗಿಯ ಎದುರಿಗಿನ ಜಾಗ ಖಾಲಿಯಿತ್ತು. ಲೋಕಿ ಮತ್ತು ಭಿಕ್ಷುಕ ಅತ್ತಕಡೆಯೇ ಬರುತ್ತಿದುದನ್ನು ನೋಡಿ ‘ಎಲ್ಲಿ ಇವರು ನನ್ನ ಎದುರಿಗೆ ಕುಳಿತು ಬಿಡುತ್ತಾರೋ’ ಎಂದು ಭಯಪಡುತ್ತಾ ತನ್ನ ವ್ಯಾನಿಟಿ ಬ್ಯಾಗನ್ನು ಎದುರಿಗಿನ ಸೀಟಿನ ಮೇಲಿಟ್ಟು ’ನಿಮ್ಮಂಥವರಿಗೆಲ್ಲ ಇಲ್ಲಿ ಕೂರೋ ಯೋಗ್ಯತೆಯಿಲ್ಲ’ ಎಂಬಂತೆ ಲೋಕಿಯ ಕಡೆ ನೋಡಿದಳು. ‘ನಮ್ಮಂಥವರನ್ನು ಎದುರಿಗೆ ಕೂರಿಸಿಕೊಳ್ಳೋ ಯೋಗ್ಯತೆ ನಿಮಗೂ ಇಲ್ಲ’ ಎಂದಾಕೆಗೆ ಕಣ್ಣಿನಲ್ಲೇ ಉತ್ತರಿಸಿ ಆಕೆಯ ಹಿಂಬದಿಯಲ್ಲಿದ್ದ ವಾಶ್ ಬೇಸನ್ನಿನಲ್ಲಿ ಭಿಕ್ಷುಕನ ಕೈ ತೊಳೆಸಿ, ಆ ಹುಡುಗಿಯಿಂದ ಸ್ವಲ್ಪ ದೂರದಲ್ಲಿದ್ದ ಮೇಜಿನ ಬಳಿ ಬಂದು ಕುಳಿತನು.

ಹೋಟೆಲಿನ ಮಾಣಿಗಳಿಗೆಲ್ಲ ಆಶ್ಚರ್ಯ. ಹೋಟೆಲಿನಿಂದ ಹೊರಹೋಗುವವರು ಅರವಿಂದನಿಗೆ ಭಿಕ್ಷೆ ಹಾಕುವುದನ್ನು ಅವರು ನೋಡಿದ್ದರು. ಆದರೆ ಯಾರೂ ಲೋಕಿಯ ಹಾಗೆ ಅವನನ್ನು ಒಳಗೆ ಕರೆತಂದು ಕೂರಿಸಿರಲಿಲ್ಲ. ಒಬ್ಬ ಮಾಣಿ ಅವರ ಬಳಿ ಬಂದು “ಏನು ಕೊಡ್ಲಿ ಸರ್?” ಎಂದ.

“ಏನು ತಿಂತೀರಾ? ಅಂದ ಹಾಗೆ ನಿಮ್ಮ ಹೆಸರು?”

“ಅರವಿಂದ” ಕನಸೋ ನನಸೋ ಎಂದು ಇನ್ನೂ ಗೊಂದಲದಲ್ಲಿದ್ದವನ ಕಣ್ಣಂಚಿನಲ್ಲಿ ನೀರಿತ್ತು. 

“ಏನ್ ತಗೋತೀರಾ ಹೇಳಿ ಅರವಿಂದ್”

“ನೀವೇನು ಹೇಳ್ತೀರೋ ಅದೇ ಸರ್”

“ಸರಿ. ಫ್ರೆಶ್ ಆಗಿರೋದು ಎರಡು ಸ್ವೀಟ್ ತಗೊಂಡು ಬನ್ನಿ. ಜೊತೆಗೆ ಎರಡು ವಡೆ ಸಾಂಬಾರ್. ಮಿಕ್ಕಿದ್ದು ನಂತರ ಹೇಳ್ತೀನಿ”

“ಸರಿ ಸರ್” ಎಂದ್ಹೇಳಿ ಹೊರಡುತ್ತಿದ್ದ ಮಾಣಿ ಮತ್ತೆ ಲೋಕಿಯ ಕಡೆ ತಿರುಗಿ “ಸರ್. ಒಂದು ಪ್ರಶ್ನೆ ಇತ್ತು. ನೀವು ತಪ್ಪು ತಿಳ್ಕೋಬಾರದು”. ಇದೇ ಸಮಯದಲ್ಲಿ ಸಯ್ಯದ್ ಹೋಟೆಲಿನೊಳಕ್ಕೆ ಬಂದು ಕುಳಿತಿದ್ದನ್ನು ಲೋಕಿ ಗಮನಿಸಲಿಲ್ಲ. ಆತನಿಗೂ ತನ್ನ ಕಾಲೇಜಿನವನೊಬ್ಬ ಭಿಕ್ಷುಕನ ಬಳಿ ಕುಳಿತಿರುವುದು ಅಚ್ಚರಿ ಮೂಡಿಸಿತ್ತು. “ಏನು ಕೇಳಿ?” ಎಂದ.

“ಈ ನಮ್ಮ ಅರವಿಂದನಿಗೆ ಭಿಕ್ಷೆ ಹಾಕ್ಬಿಟ್ಟು ಹೋಗಿರೋರನ್ನ ಬಹಳಷ್ಟು ಮಂದೀನ ನೋಡಿದ್ದೀನಿ. ಆದರೆ ಯಾರೂ ಆತನನ್ನು ಒಳಗೆ ಕರೆತಂದು ತಿಂಡಿ ಕೊಡಿಸಿದ್ದನ್ನು ಕಂಡಿಲ್ಲ. ಯಾಕೆ ಅಂತ ಕುತೂಹಲ ಅಷ್ಟೆ.”

“ಇವತ್ತು ನನ್ನ ಹುಟ್ಟುಹಬ್ಬ. ಮುಂಚೆ ಯಾರಾದರೂ ಇಬ್ಬರಿಗೆ ಒಂದಷ್ಟು ದುಡ್ಡು ಕೊಟ್ಟು ಹುಟ್ಟಿದ ಹಬ್ಬ ಆಚರಿಸುತ್ತಿದ್ದೆ. ಇವತ್ಯಾಕೋ ಊಟ ಕೊಡಿಸೋಣ ಅನ್ನಿಸ್ತು ಅಷ್ಟೆ”. ಮಾಣಿಯ ಮುಖದಲ್ಲಿ ಅಚ್ಚರಿ. “ಹುಟ್ಟುಹಬ್ಬ ಅಂದರೆ ಬಹುತೇಕರು ಮನೇಲೋ ಸ್ನೇಹಿತರೊಟ್ಟಿಗೋ ಪಾರ್ಟಿ ಮಾಡ್ತಾರೆ. ಇಲ್ಲ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡ್ಸಿ ಕಾಣಿಕೆ ಕೊಟ್ಟು ಬರ್ತಾರೆ. ಅಂಥದ್ರಲ್ಲಿ ನೀವು ಈ ರೀತಿಯಾಗಿ ಆಚರಿಸೋದು ನಿಜಕ್ಕೂ ಗ್ರೇಟ್ ಸರ್”

“ಇದ್ರಲ್ಲಿ ಗ್ರೇಟ್ ನೆಸ್ ಏನು ಬಂತು? ದೇವಸ್ಥಾನಕ್ಕೆ ಹೋಗೋದರಲ್ಲಿ ನನಗೆ ನಂಬಿಕೆಯಿಲ್ಲ. ಇವತ್ತಿನವರೆಗೆ ನಾಸ್ತಿಕ ನಾನು. ಹೊಟ್ಟೆ ತುಂಬಿರೋ ಜನಕ್ಕೆ ಮೃಷ್ಠಾನ್ನ ಬಡಿಸೋದಿಕ್ಕಿಂತ ಹಸಿದಿರುವವನಿಗೆ ಒಂದು ತುತ್ತು ಹಾಕೋದು ಮೇಲು ಅಂತ ನನ್ನ ಅಭಿಪ್ರಾಯ. ಎಲ್ಲಕ್ಕಿಂತ ಹೆಚ್ಚಾಗಿ ನನಗೆ ಇದರಲ್ಲಿ ನೆಮ್ಮದಿಯಿದೆ, ಬಹುಶಃ ಬೇರೆಯವರಿಗೆ ಅವರ ಆಚರಣೆಯಲ್ಲಿ ನೆಮ್ಮದಿ ಇದೆಯೋ ಏನೋ? ಹೀಗೆ ಮಾತಾಡ್ತ ಇರ್ತೀರೋ ಅಥವಾ ಸಪ್ಲೈ ಮಾಡ್ತೀರೋ?” 

“ಈಗ ತಂದೆ ಸರ್” ಎಂದ್ಹೇಳಿ ಕಣ್ಣೊರೆಸಿಕೊಂಡು ಮಾಣಿ ಹೋದ. ಅರವಿಂದ ತನ್ನ ಒಂದೇ ಕೈಯನ್ನು ಎದೆಯ ಮೇಲಿಟ್ಟುಕೊಂಡು ಲೋಕಿಗೆ ನಮಸ್ಕರಿಸಿದ. ಕಣ್ಣಂಚಿನ ನೀರು ಕೆನ್ನೆಯನ್ನು ತೇವಗೊಳಿಸುತ್ತಿತ್ತು. “ಅಳಬೇಡಿ ಅರವಿಂದ್. ಅಳೋ ಜನರನ್ನು ಕಂಡರೆ ನನಗಾಗಲ್ಲ” ಎಂದ್ಹೇಳುತ್ತಿರುವಾಗ ಆತನ ಬಲಗೈಯಲ್ಲೂ ಕೊನೆಯ ಎರಡು ಬೆರಳುಗಳಿಲ್ಲದಿರುವುದು ಅರಿವಿಗೆ ಬಂದು ಅಳು ಬಂದಂತಾಯಿತು. “ಒಂದ್ನಿಮಿಷ ಟಾಯ್ಲೆಟ್ಟಿಗೆ ಹೋಗಿ ಬರ್ತೀನಿ” ಎಂದು ಹೇಳಿ ಟಾಯ್ಲೆಟ್ಟಿನ ಬಳಿ ಹೋಗಿ ಕೈಚೌಕದಿಂದ ಕಣ್ಣೊರೆಸಿಕೊಂಡು ಬಂದನು. ಮಂಜಾಗಿದ್ದ ಕಣ್ಣುಗಳ ಕಾರಣದಿಂದ ಸಯ್ಯದನನ್ನು ಗಮನಿಸಲಿಲ್ಲ.

ಲೋಕಿ ಹೋಟೆಲಿನಲ್ಲಿ ತಿಂದು ಮುಗಿಸಿ ಅರವಿಂದನೊಡನೆ ಹೊರಗೆ ಹೋಗುವವರೆಗೆ ಅವನನ್ನೇ ಗಮನಿಸುತ್ತಿದ್ದ ಸಯ್ಯದ್ ನಂತರ ತನ್ನ ಗೆಳತಿ ರೂಪಾಳೊಡನೆ ನಿರ್ಗಮಿಸಿದ. ತಾನು ಬರುವುದಕ್ಕೆ ಮುಂಚೆ ಲೋಕಿಯನ್ನು ತುಚ್ಛವಾಗಿ ಕಂಡಿದ್ದವಳು ರೂಪ ಎಂದು ಬಹಳ ದಿನಗಳವರೆಗೆ ಅವನಿಗೆ ತಿಳಿಯಲಿಲ್ಲ.
* * *
ಮನೆಗೆ ಹೋದ ನಂತರವೂ ಸಯ್ಯದ್ ನಿಗೆ ಲೋಕಿಯ ನೆನಪೇ ಕಾಡಹತ್ತಿತ್ತು. ಆತನಾಡಿದ ಮಾತುಗಳೇ ಪ್ರತಿಧ್ವನಿಸುತ್ತಿದ್ದವು. ‘ಇಡೀ ಕಾಲೇಜಿನಲ್ಲಿ ನನ್ನಷ್ಟು ಆದರ್ಶಗಳನ್ನು ಇಟ್ಟುಕೊಂಡು, ಮೌಲ್ಯದಿಂದ ಜೀವನ ನಡೆಸುತ್ತಿರುವವರಾರೂ ಇಲ್ಲ’ ಎಂಬ ಅವನ ಅಹಂಗೆ ಪೆಟ್ಟು ಬಿದ್ದಿತ್ತು. ಕಳೆದ ವರ್ಷದ ಶಿವರಾತ್ರಿ ಹಬ್ಬದಂದು ನಾ ಮಾಡಿದ ಭಾಷಣವನ್ನು ಕೇಳಿ ಒಬ್ಬ ಯುವಕ ಬಂದು “ನಿನಗೆ ಹಿಂದೂ ಧರ್ಮದ ಬಗ್ಗೆ ಬಹಳ ಆಸಕ್ತಿ ಇರುವ ಹಾಗಿದೆ. ನನ್ನ ಜೊತೆ ಬಂದರೆ ನೀನು ನಮ್ಮ ಧರ್ಮ ಸೇರಲು ಎಲ್ಲ ವ್ಯವಸ್ಥೆ ಮಾಡುತ್ತೇನೆ” ಎಂದು ಹೇಳಿದ್ದ. “ನೋಡೋಣ” ಎಂದು ಹೇಳಿ ತಪ್ಪಿಸಿಕೊಂಡಿದ್ದ. ಮೊನ್ನೆ ಗಣೇಶ ಚತುರ್ಥಿಯ ದಿನ ಲೋಕಿ ತನ್ನ ಬಳಿ ಬಂದು ಮಾತನಾಡಿದಾಗ ಈತನೂ ನನ್ನನ್ನು ಮತಾಂತರ ಮಾಡಿಸಬೇಕೆಂದುಕೊಂಡಿರಬೇಕೆಂಬ ಅನುಮಾನ ಬಂದಿತ್ತು. ಆದರೆ ಇವತ್ತು ನೋಡಿದ ಲೋಕಿಯೇ ಬೇರೆ. ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಒಂದು ದಿನ ಒಂದು ಘಟನೆಯಿಂದ ನಿರ್ಧರಿಸಬಾರದು. ಎಲ್ಲಕ್ಕಿಂತ ಮಿಗಿಲಾಗಿ ‘ನನಗಿದರಲ್ಲಿ ನೆಮ್ಮದಿಯಿದೆ ಅದಿಕ್ಕೆ ಮಾಡ್ತಿದ್ದೀನಿ. ಇದರಲ್ಲಿ ಗ್ರೇಟ್ ನೆಸ್ ಏನಿದೆ?’ ಎಂದ ಲೋಕಿಯ ಸರಳತೆ ಆಕರ್ಷಿಸಿತು. ಪರಿಚಯ ಮಾಡಿಕೊಳ್ಳಬೇಕೆಂದುಕೊಂಡ.
(ಮುಂದುವರೆಯುವುದು)

No comments:

Post a Comment