
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಪೀಠಿಕೆ:
ಜಾತಿ ಎನ್ನುವುದು ಇಂಡಿಯಾದ ಮಟ್ಟಿಗೆ ಒಂದು ಕ್ರೂರ ವಾಸ್ತವ!ವೇದಕಾಲದ ವರ್ಣಾಶ್ರಮ ವ್ಯವಸ್ಥೆಯೇ ಇದರ ಮೂಲವಾಗಿದೆ. ಈ ವರ್ಣ ವ್ಯವಸ್ಥೆಯಲ್ಲಿ ನಾಲ್ಕು ವರ್ಣಗಳನ್ನು. ಬ್ರಾಹ್ಮಣ, ಕ್ಷತ್ರಿಯ,ವೈಶ್ಯ ಮತ್ತು ಶೂದ್ರ ಎಂದು ಗುರುತಿಸಲಾಗಿದೆ. ಹೀಗೆ ಅನಾದಿಕಾಲದಿಂದಲೂ ಭಾರತೀಯ ಸಮಾಜವನ್ನು ವರ್ಣಗಳ ಹೆಸರಲ್ಲಿ ಒಡೆದ ಮಹನೀಯರುಗಳಿಗೆ ಐದನೆಯದಾದ ದಲಿತ ಎನ್ನುವ ಸಮುದಾಯ ಸಹ ಮನುಷ್ಯರನ್ನೊಳಗೊಂಡಿದೆ ಎಂದು ಅನಿಸದೇ ಹೋದದ್ದೇ ಈ ನೆಲದ ದುರಂತ.
ಇಲ್ಲಿ ಜಾತಿಯೆನ್ನುವುದು ವ್ಯಕ್ತಿಯ ಹುಟ್ಟಿನ ಮೂಲವನ್ನು, ಅವನ ಕುಲಕಸುಬನ್ನೂ ಅವಲಂಬಿಸಿ ಗುರುತಿಸಲಾಗುತ್ತಿದೆ. ಇವತ್ತಿಗೂ ಇಂಡಿಯಾದ ಹಳ್ಳಿಗಳಲ್ಲಿ ಜಾತಿಯೆನ್ನುವುದು ಪ್ರತಿ ವ್ಯಕ್ತಿಯ ಬದುಕಲ್ಲಿಯೂ ಮಹತ್ತರ ಪಾತ್ರ ವಹಿಸುತ್ತಿದೆ. ಅಷ್ಟಲ್ಲದೆ ವ್ಯಕ್ತಿಯೊಬ್ಬನ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ಥಾನಮಾನಗಳನ್ನು ಸಹ ಜಾತಿಯ ಆಧಾರದಿಂದಲೇ ಅಳೆಯಲಾಗುತ್ತಿದೆ. ಯಾಕೆಂದರೆ ಒಂದು ಹಳ್ಳಿಯ ಮಟ್ಟಿಗೆ ವ್ಯಕ್ತಿಯೊಬ್ಬನ ಜಾತಿಯೇ ಅವನ ಕಸುಬನ್ನು, ಅವನು ಬದುಕುವ ಬಗೆಯನ್ನು ನಿರ್ದರಿಸುವ ಮಾನದಂಡವಾಗಿ ಪರಿವರ್ತನೆಯಾಗಿದೆ. ಹೀಗಾಗಿ 21ನೇ ಶತಮಾನದ ಆಧುನಿಕ ದಿನಮಾನದಲ್ಲಿಯೂ ನಮ್ಮ ಹಳ್ಳಿಗಳು ಜಾತಿ ವ್ಯವಸ್ಥೆಯನ್ನು ಪೋಷಿಸುವ ಮತ್ತು ಜಾತಿಯ ಆಧಾರದ ಮೇಲೆ ಜನಸಮುದಾಯವನ್ನು ಶೋಷಿಸುವ ಕೇಂದ್ರಗಳಾಗಿಯೇ ಉಳಿದಿದೆ.