ನವೆಂ 4, 2025

ಪಕ್ಷಿ ವೀಕ್ಷಣೆಯ ಫೀಲ್ಡ್‌ ಡೈರಿ ಭಾಗ 10: ಮೋದೂರು ಕೆರೆ

ಮೀನಿನ ಬೇಟೆಯಲ್ಲಿ ಬೆಳ್ಳಕ್ಕಿ

ಡಾ. ಅಶೋಕ್.‌ ಕೆ. ಆರ್
ಕುಣಿಗಲ್ಲಿನ ಆಸುಪಾಸಿನಲ್ಲಿರುವ ಕೆರೆಗಳಲ್ಲಿ ನಾನು ಅತಿ ಹೆಚ್ಚು ಭೇಟಿ ಕೊಟ್ಟಿರುವ ಕೆರೆಯಿದು. ಸಂತೆಮಾವತ್ತೂರಿನಿಂದ ಅಮೃತ್ತೂರಿಗೆ ಹೋಗುವ ದಾರಿಯಲ್ಲಿ ಆಕಸ್ಮಿಕವಾಗಿ ಈ ಕೆರೆಯನ್ನು ಕಂಡಿದ್ದೆ. ಪುಟ್ಟ ಕೆರೆ. ಕೆರೆಯ ಎದುರಿಗೆ ಶಂಕರೇಶ್ವರ ಬೆಟ್ಟ. ಬೆಟ್ಟದಿಂದ ಹರಿದು ಬರುವ ಮಳೆ ನೀರೇ ಇದರ ಮುಖ್ಯ ಮೂಲ. ಸದ್ಯಕ್ಕೆ ಯಾವ ನದಿಯ, ಕಾಲುವೆಯ ನೀರೂ ಇಲ್ಲಿಗೆ ಹರಿಸಲಾಗಿಲ್ಲ. ಹಾಗಾಗಿ ಮಳೆಗಾಲದಲ್ಲಿ ನೀರು ಹೆಚ್ಚಿರುತ್ತದೆ, ಮಳೆಯ ಪ್ರಮಾಣಕ್ಕೆ ತಕ್ಕಂತೆ; ಬೇಸಿಗೆಯಲ್ಲಿ ಕೆಲವೊಮ್ಮೆ ಹನಿ ನೀರೂ ಇರುವುದಿಲ್ಲ. ೨೦೨೩ರ ಬರಗಾಲದಲ್ಲಿ ನೀರು ಪೂರ್ಣ ಖಾಲಿಯಾಗಿತ್ತು. ಸುತ್ತಮುತ್ತಲಿನವರು ತಮ್ಮ ಜಮೀನಿಗೆ ಮಣ್ಣು ಹೊಡೆದುಕೊಂಡಿದ್ದರು. ಕೆರೆಯ ಮಧ್ಯಭಾಗದಲ್ಲಿ ಬಂಡೆಯೊಂದಿದೆ. 
ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ
ಈ ಬಂಡೆಯ ಮೇಲೆ ಕನಿಷ್ಠ ಒಂದು ಜೋಡಿ ನದಿ ರೀವವಾದರೂ ಇದ್ದೇ ಇರುತ್ತದೆ. ಸಾಮಾನ್ಯ ಮಿಂಚುಳ್ಳಿಗಳು ನಾಲ್ಕಿವೆ, ಗದ್ದೆ ಮಿಂಚುಳ್ಳಿ ಕೆಲವೊಮ್ಮೆ ಕಾಣಿಸಿಕೊಂಡರೆ ಕಪ್ಪು ಬಿಳಿ ಮಿಂಚುಳ್ಳಿ ಅಪರೂಪ. ತಿಂಗಳಿಂದೆ ನಾಮದ ಬಾತು (ಯುರೇಷಿಯನ್ ವಿಜಿಯನ್) ಎರಡು ಜೋಡಿ ಮತ್ತು ಆರು ಕಾಟನ್ ಪಿಗ್ಮಿ ಗೂಸ್ ಗಳಿದ್ದವು. ಇಂದು ಇರಲಿಲ್ಲ. ಗುಳುಮುಳುಕ, ನಾಮದ ಕೋಳಿ, ನೇರಳೆ ಜಂಬುಕೋಳಿ, ಜಂಬುಕೋಳಿ, ಬೆಳ್ಳಕ್ಕಿ, ಗೋವಕ್ಕಿ, ಗದ್ದೆ ಗೊರವ, ಬೂದು ಬಕ, ಕೆನ್ನೀಲಿ ಬಕ, ಕೊಳದ ಬಕ, ನೀರ್ಕಾಗೆ ಇದ್ದೇ ಇರುತ್ತವೆ. ಅಪರೂಪಕ್ಕೆ ಹಾವಕ್ಕಿ.