Apr 12, 2020

ಒಂದು ಬೊಗಸೆ ಪ್ರೀತಿ - 60

ಡಾ. ಅಶೋಕ್.‌ ಕೆ. ಆರ್.‌
ರಾಜೀವ ಮೊದಲು ನಾನ್ಯಾಕೆ ಮದುವೆಗೆ? ನೀ ಬೆಳಿಗ್ಗೆ ಹೋಗಿ ಬಂದುಬಿಡು ಸಂಜೆಯಷ್ಟೊತ್ತಿಗೆ ಎಂದು ರಾಗ ಎಳೆದನಾದರೂ ʼನಡೀರಿ. ಹಂಗೆ ಒಂದೆರಡ್‌ ದಿನ ಸುತ್ತಾಡ್ಕಂಡ್‌ ಬರೋಣ. ಅದೇ ಕೆಲಸ ಅದೇ ಮನೆ ಅದದೇ ಜಗಳಗಳು ಬೋರಾಗೋಗಿದೆʼ ಅಂದಿದ್ದಕ್ಕೆ ನಕ್ಕು "ಬೆಂಗಳೂರಿನವರೇ ಇತ್ಲಾಕಡೆಗೆ ಬರ್ತಾರೆ ಸುತ್ತೋಕೆ. ನಾವಿನ್ನೆಲ್ಲಿ ಅಲ್ಲಿ ಸುತ್ತೋದು?" ಎಂದರು. 

ʼಬೆಂಗಳೂರಿಂದ ಇನ್ನೂರ್‌ ಇನ್ನೂರೈವತ್ ಕಿಲೋಮೀಟ್ರು ದೂರದಲ್ಲಿ ಯರ್ಕಾಡ್‌ ಅಂತ ಯಾವ್ದೋ ಜಾಗ ಇದ್ಯಂತೆ. ಚೆನ್ನಾಗಿದೆ ಅಂತಿದ್ರು. ಮದುವೆ ಮುಗ್ಸಿ ಮಧ್ಯಾಹ್ನ ಹೊರಟರೆ ರಾತ್ರಿ ತಲುಪಬಹುದು. ರಾತ್ರಿ ಇದ್ದು ಮಾರನೇ ದಿನ ಅಲ್ಲೇನೇನಿದ್ಯೋ ನೋಡಿಕೊಂಡು ಸಂಜೆಯಂಗೊರಡೋಣ. ಆದ್ರೆ ಅವತ್ತೇ ಮೈಸೂರು ತಲುಪೋಣ. ಇಲ್ಲ ಬೆಂಗಳೂರಲ್ಲಿ ನನ್‌ ಕಸಿನ್‌ ಮನೇಲಿದ್ದು ಮಾರನೇ ದಿನ ಹೊರಟರಾಯಿತುʼ 

"ಅಷ್ಟೆಲ್ಲ ರಜ ಸಿಗುತ್ತಾ ನಿನಗೆ" 

ʼಎಲ್ರೀ! ರಜಾನೇ ಹಾಕಿಲ್ಲ ನಾನು. ಅಕಸ್ಮಾತ್‌ ರಾಧ ಹುಷಾರು ತಪ್ಪಿದರೆ ಅಂತ ಇರೋ ಚೂರುಪಾರು ರಜೆಗಳನ್ನೆಲ್ಲ ಹಂಗೇ ಇಟ್ಟುಕೊಂಡಿದ್ದೀನಿ. ನಿಮಗೆ ಸಿಗುತ್ತಾ?ʼ 

"ನಂದೇನ್‌ ಲಾರ್ಡ್‌ ಲಬಕ್‌ ದಾಸ್‌ ಕೆಲಸ ನೋಡು. ರಜ ಸಿಗದೇ ಹೋದ್ರೆ ರಾಜೀನಾಮೆ ಬಿಸಾಕ್‌ ಬರೋದಪ್ಪ" 

ʼಈ ಅದದೇ ಮಾತುಗಳು ಮರೆಯಾಗ್ಲಿ ಅಂತಲೇ ಈ ಚಿಕ್ಕ ಟ್ರಿಪ್ಪು. ಅಪ್ಪಿ ತಪ್ಪಿ ರಾಜೀನಾಮೆ ಕೊಟ್ಬಿಟ್ಟೀರಾ ಮತ್ತೆ ಈಗ. ನನ್‌ ಪಿಜಿ ಮುಗಿಯೋವರ್ಗಾದ್ರೂ ಕಾಯಿರಿʼ 

"ಅದಕ್ಕೇ ಕಾಯ್ತಿರೋದು ನಾನು" ಅಂತ ಕಣ್ಣು ಹೊಡೆದರು. 

ಬೇರೆ ದಿನ ಜಗಳವಾಗಬಹುದಾಗಿದ್ದ ಮಾತುಗಳೆಲ್ಲ ಇವತ್ತು ಮುಗುಳ್ನಗೆಯಲ್ಲಿ ಕೊನೆಯಾದವು. ಚಿಕ್ಕ ಟ್ರಿಪ್ಪಿನ ಎಫೆಕ್ಟು. 

ನಾವು ಮೂರು ದಿನ ಹೊರಟಿದ್ದು ಕೇಳಿ ಅಮ್ಮನಿಗೂ ಖುಷಿ. ಅವರಿಗೂ ರಾಧಳನ್ನು ನೋಡಿಕೊಳ್ಳುವ ʼಕೆಲಸʼದಿಂದ ರಜ ಸಿಕ್ಕಿದಂತಲ್ವ! "ನೀನಿನ್ನೊಂದಿನ ರಜ ಕೇಳ್ಕೋಳ್ಳೋಕಾಗುತ್ತಾ? ಶಶಿ ಮದುವೆಯಾದ ಮೇಲೆ ಮನೆ ದೇವ್ರಿಗೆ ಹೋಗಬೇಕು ಅಂತಂದುಕೊಂಡು ಆಗೇ ಇಲ್ಲ. ಮನೆ ದೇವ್ರಿಗೆ ಪೂಜೆ ಮಾಡಿಸಿಕೊಂಡು ಸಿಗಂದೂರಿಗೂ ಹೋಗಿ ಬರ್ತೀವಿ" ಎಂದರು ಅಮ್ಮ. 

ʼಅದೇನು ಸಿಗಂದೂರು?ʼ 

"ಹರಸಿಕೊಂಡಿದ್ದೆ. ಶಶಿ ಸೋನಿಯಾ ಮದುವೆ ಯಾವುದೇ ವಿಘ್ನಗಳಿಲ್ಲದೇ ನಡೆದರೆ ಸಿಗಂದೂರಿಗೆ ಕಾಣ್ಕೆ ಕೊಡ್ತೀನಿ ಅಂತ" 

ನನ್ನ ಪರಶು ಗಲಾಟೆ ನಡೆಯುವಾಗಲೂ ಹಿಂಗೇ ಹರಸಿಕೊಂಡಿದ್ಯ ಅಂತ ಬಾಯಿ ತುದಿಗೆ ಬಂದ ಮಾತನ್ನು ಬದಿಗೆ ಸರಿಸುತ್ತಾ ʼಸರಿ. ಸಿಗುತ್ತೆ ಇನ್ನೊಂದಿನ ರಜ. ತೊಂದರೆ ಇಲ್ಲʼ ಎಂದ್ಹೇಳಿದೆ. 

ಸಾಮಾನ್ಯವಾಗಿ ಹೈವೇಗಳಲ್ಲಿ ಹೋಗುವಾಗ ಅರ್ಧ ದಾರಿ ರಾಜಿ ಓಡಿಸಿದರೆ ಇನ್ನರ್ಧ ನಾನು ಓಡಿಸುತ್ತೇನೆ. ಮೈಸೂರಿನಿಂದ ಹೊರಟು ಮದ್ದೂರಿನ ಬಳಿ ತಿಂಡಿಗೆ ನಿಲ್ಲಿಸಿದಾಗ ರಾಜಿ ಓಡ್ಸೋದಾದ್ರೆ ಓಡ್ಸು ಅಂದರು. ಮಗಳು ತೊಡೆಗೊರಗಿ ಕುಳಿತಿದ್ದಳಲ್ಲ. ʼಬೇಡ ಬಿಡಿ ನೀವೇ ಓಡ್ಸಿʼ ಎಂದೆ. ಮಗಳು ಒರಗಿ ಕುಳಿತಿದ್ದು ಒಂದು ನೆಪವಷ್ಟೇ. ಹೋಗ್ತಿರೋದು ಸಾಗರನ ಮದುವೆಗೆ. ಮನಸಲ್ಲಿ ಬೇಡ ಬೇಡ ಅಂದರೂ ಭಾವನೆಗಳ ಮಹಾಪೂರ. ಎಂಬಿಬಿಎಸ್‌ ಸಮಯದಲ್ಲಿ ಅವನೆಡೆಗೆ ಒಂದು ಆಸಕ್ತಿ ಬೆಳೆದಿದ್ದರಿಂದ ಹಿಡಿದು ಫೇಸ್‌ಬುಕ್ಕಿನ ಮೂಲಕ ಪರಿಚಯವಾಗಿ ಆ ಪರಿಚಯ ಸ್ನೇಹಕ್ಕೆ ತಿರುಗಿ ಸ್ನೇಹ ಪ್ರೀತಿಯಾಗಿ ಪ್ರೀತಿ ಪ್ರೇಮವಾಗಿ ಪ್ರೇಮ ಕಾಮವಾಗಿ ..... ಒಂದು ಸಂಬಂಧದ ಎಲ್ಲಾ ಹಂತಗಳನ್ನೂ ಕಡಿಮೆ ಸಮಯದಲ್ಲಿ ಅನುಭವಿಸಿಬಿಟ್ಟೆವಲ್ಲ! ಆತುರಾತುರವಾಗಿ ಬೆಳೆದ ಸಂಬಂಧ ಅಷ್ಟೇ ಆತುರಾತುರವಾಗಿ ಮುಗಿದೂ ಹೋಯಿತು. ನಾನೇ ಕಾರಣವಲ್ಲವೇ, ʼಇಲ್ಲಮ್ಮ ನಾನು ಕಾರಣʼ ಮಗಳು ತೊದಲಿದಂತಾಯಿತು. ಅದೂ ಸತ್ಯವೇ! ಇವಳು ಹುಟ್ಟದೇ ಹೋಗಿದ್ದರೆ ಸಾಗರನೊಡನೆ ಸಂಬಂಧವನ್ನು ಕಡಿದುಕೊಳ್ಳುವ ಯೋಚನೆ ಕೂಡ ನನ್ನಲ್ಲಿ ಬರುತ್ತಿರಲಿಲ್ಲ. ಈಗಲೂ ಸಂಬಂಧ, ಸ್ನೇಹ ಪೂರ್ತಿ ಕಡಿದುಹೋಗಿಲ್ಲ ಅನ್ನುವುದೇನೋ ದಿಟ. ಆದರೆ ಮೊದಲಿನಂತಿಲ್ಲವಲ್ಲ. ಹಳೇ ಸಂಬಂಧದ ಅಸ್ಥಿಪಂಜರವಷ್ಟೇ ಬಾಕಿ ಉಳಿದಿದೆ. ಇಲ್ಲೊಂದು ಸಂಬಂಧವಿತ್ತು ಅನ್ನುವುದರ ಕುರುಹಾಗಿ. ಏನೇ ಸಂಬಂಧ ಕಳೆದುಕೊಂಡರೂ ಅವನ ಮದುವೆಯನ್ನು ಕಣ್ಣಾರೆ ನೋಡುವುದು ಮನಸ್ಸಲ್ಲಿ ಮಿಶ್ರಭಾವ ಮೂಡಿಸುವುದು ಸುಳ್ಳಲ್ಲ. ಒಂದ್‌ ಕಡೆ ಖುಷಿಯಿದೆ, ಸಾಗರ ಮದುವೆಯಾಗುತ್ತಿರುವುದಕ್ಕೆ, ಮದುವೆಯಾದ ನಂತರ ನನ್ನ ಮೇಲೆ ವಿನಾಕಾರಣ ಕೂಗಾಡುವುದನ್ನು ಬಿಡುತ್ತಾನೆ ಅನ್ನುವ ಕಾರಣಕ್ಕೂ ಖುಷಿಯಿದೆ. ಎಲ್ಲೋ ಒಂದ್‌ ಕಡೆ ಬೇಸರವೂ ಇದೆ. ಸಾಗರ ಇವತ್ತಿನಿಂದ ಪೂರ್ಣವಾಗಿ ನನ್ನಿಂದ ದೂರಾಗಿಬಿಡುತ್ತಾನೆ ಅಂತ. ಅದೂ ಒಳ್ಳೆಯದಕ್ಕೇ ಇರಬಹುದು. ಅಬ್ಬಬ್ಬಾ ಅಂದರೆ ನಮ್ಮದು ಒಂದು ವರುಷದ ಸಂಬಂಧವಷ್ಟೇ. ಅದೂ ಇಬ್ಬರಿಗೂ ಈ ಸಂಬಂಧ ಯಾವತ್ತೋ ಒಂದು ದಿನ ಪೂರ್ಣವಾಗಿ ಇಲ್ಲವಾಗ್ತದೆ ಅಂತ ಗೊತ್ತಿದ್ದ ಸಂಬಂಧವೇ ಹೌದು. ಇನ್ನು ನನ್ನ ಮದುವೆಯ ಸಂದರ್ಭದಲ್ಲಿ ಪರಶುವಿಗೆ ಏನೆಲ್ಲ ಭಾವನೆಗಳು ಕಾಡಿರಬಹುದು. ಆರು ವರ್ಷದ ಸಂಬಂಧ, ಮದುವೆಯಾಗೋದು ಖಂಡಿತಾ ಅಂದುಕೊಂಡಿದ್ದ ಸಂಬಂಧ, ಸಾಯೋವರೆಗೂ ಜೊತೆಯಾಗಿಯೇ ಇರ್ತೀವಿ ಅನ್ನೋ ನಂಬಿಕೆ ಮೂಡಿಸಿದ್ದ ಸಂಬಂಧ...... ಅವನಾಡಿದ ರೀತಿ ಸರಿಯೇ ಇತ್ತೇನೋ. ಮದುವೆ ಮನೆಗೆ ಬಂದು ಗಲಾಟೆ ಮಾಡೇ ಮಾಡ್ತಾನೆ ಅಂತಂದುಕೊಂಡಿದ್ದೆ. ಕೊನೆ ಕ್ಷಣದಲ್ಲಿ "ಸರಿ ನೀ ಹೋಗ್‌ ಬಾ. ಒಳ್ಳೇದಾಗ್ಲಿ" ಅಂತಂದು ಬಿಟ್ಟು ಹೋದ. ಮದುವೆಯಾದ ಮೇಲೆ ಮತ್ತೆ ಸಂಪರ್ಕಕ್ಕೆ ಬರ್ತಾನೇನೋ, ಮೈಸೂರಿನ್ನೇನು ಮಹಾ ದೂರದ ಊರಾ ಅಂತಂದುಕೊಂಡಿದ್ದೆ. ಬಂದರೆ ಹೇಗೆ ವರ್ತಿಸಬೇಕು ಅಂತೆಲ್ಲ ಗೊಂದಲದಲ್ಲಿರುತ್ತಿದ್ದೆ. ಅವನೆಷ್ಟೇ ಪುಸಲಾಯಿಸಿದರೂ ʼನನಗೆ ಮದುವೆಯಾಗಿದೆ. ಮತ್ತೆ ನಿನ್ನನ್ನು ಪ್ರೀತಿಸಲೆಲ್ಲ ನನಗಾಗುವುದಿಲ್ಲʼ ಅಂತ ಹೇಳಬೇಕಾದ ಸಾಲುಗಳನ್ನೆಲ್ಲ ಮನಸಲ್ಲೇ ಸಿದ್ಧಪಡಿಸಿಕೊಂಡಿದ್ದೆ. ಇದುವರೆಗೂ ಒಮ್ಮೆಯೂ ಆತ ನನ್ನನ್ನು ಸಂಪರ್ಕಿಸಲು ಪ್ರಯತ್ನಿಸಲಿಲ್ಲ. ಇಷ್ಟು ವರ್ಷದಲ್ಲಿ ಒಮ್ಮೆಯೂ ಕಣ್ಣಿಗೆ ಬಿದ್ದಿಲ್ಲ. ಅವನ ಸಿಗರೇಟಿನ ಅಡ್ಡಗಳ ಮುಂದೆ ಹೋಗುವಾಗೆಲ್ಲ ಕಣ್ಣತ್ತ ಸರಿಯುತ್ತದೆ, ಅವನಿದ್ದಾನೋ ಅಂತ ಹುಡುಕುತ್ತವೆ. ಅಲ್ಲೂ ಕಂಡಿಲ್ಲ. ಮೈಸೂರೇ ಬಿಟ್ಟು ಹೋದನೋ ಏನೋ...... ಯೋಚನೆಗಳ ಪ್ರವಾಹ ಮುಗಿಯುವಷ್ಟರಲ್ಲಿ ರಾಜೀವ ಛತ್ರದ ಬಳಿ ಪಾರ್ಕಿಂಗ್‌ ಮಾಡುತ್ತಿದ್ದರು. 

ಮುಹೂರ್ತ ಬೆಳಿಗ್ಗೆ ಆರಕ್ಕೇ ಇತ್ತು. ಮುಹೂರ್ತ ಬೇಗ ಇತ್ತೆಂದು ರಿಸೆಪ್ಶನ್ನನ್ನು ಅವತ್ತೇ ಇಟ್ಟುಕೊಂಡಿದ್ದರು. ʼಮಗಳನ್ನು ಹೊರಡಿಸಿಕೊಂಡು ಅಷ್ಟು ಬೇಗೆಲ್ಲ ಬರೋದಿಕ್ಕಾಗಲ್ಲ ಕಣೋ. ತಾಳಿ ಕಟ್ಟೋದು ನೋಡಕ್‌ ಬರಲ್ಲ. ರಿಸೆಪ್ಶನ್ನಿಗೆ ಬರ್ತೀನಿʼ ಅಂದಿದ್ದೆ. "ಮ್. ಹಿಂದಿನ ದಿನ ಬಂದ್ರೆ ರೂಮ್‌ ಮಾಡಿಸ್ತಿದ್ದೆ"‌ 

ʼಪ್ರಶ್ನೆ ರೂಮಿನದ್ದಲ್ಲ. ನನ್ನ ಡ್ಯೂಟಿ ಮುಗಿಯೋದೆ ಸಂಜೆ ಮೇಲಾಗುತ್ತೆ. ರಾಜೀವ ಬರೋದು ಲೇಟೇ. ಅಷ್ಟೊತ್ತಿಗೆ ಹೊರಟು ಬರೋದು ಕಷ್ಟ. ಜೊತೆಗೆ ಇಲ್ಲಿಗೆ ಬಂದ್ರೂ ರಾಧ ಅಷ್ಟೊತ್ತಿಗೆಲ್ಲ ಎದ್ದೇಳಲ್ಲ. ರಾತ್ರಿ ಬಂದ್ರೂ ಮುಹೂರ್ತಕ್ಕೆ ಬರೋದು ಕಷ್ಟವೇʼ 

"ಹು. ಅದೂ ಸರೀ ಅನ್ನು. ಜೊತೆಗೆ ನೀ ಬರ್ದೇ ಇರೋದೆ ಒಳ್ಳೇದು ಬಿಡು" 

ʼಯಾಕೋ!ʼ 

"ಆಮೇಲ್‌ ನೀನು ನಾನೂ ಒಬ್ಬರನ್ನೊಬ್ರು ನೋಡ್ಕಂಡು ಅತ್ಕಂಡು ಫಿಲಮ್ಮಲ್ಲಾಗೊ ತರ ನಾ ಮಂಟಪ ಬಿಟ್‌ ಎದ್‌ ಬಂದು ನೀ ಗಂಡ ಮಗಳನ್ನ ಬಿಟ್‌ ಓಡ್‌ ಬಂದು ನನ್ನ ತಬ್ಕಂಡು ನೋಡೋರ್ಗೆಲ್ಲ ಗಾಬ್ರಿಯಾಗಿ....." 

ʼಸಾಕು ಕಣೋ ತರ್ಲೆ. ಅಷ್ಟೆಲ್ಲ ಸೀನಿಲ್ಲ ಅಂತ ನಿಂಗೂ ಗೊತ್ತು. ನಂಗೂ ಗೊತ್ತುʼ 

"ನಿಂಗೊತ್ತಿರಬಹುದೇನೋ ನಂಗಂತೂ ಗೊತ್ತಿಲ್ಲಪ್ಪ. ಚೆಕ್‌ ಮಾಡುವಂತೆ ಬಾ ಬೇಗ" 

ʼನಿನ್ನ..... ಚೆಕ್‌ ಮಾಡೋದು ಬೇಡ ಏನೂ ಬೇಡ. ನೀ ತಾಳಿ ಕಟ್ಟಿ ಮುಗಿಸು. ಆಮೇಲೆ ಬರ್ತೀನಿʼ ಅಂದೆ. ಹುಡುಗ ಮದುವೆ ಖುಷಿಯಲ್ಲಿದ್ದಾನೆ. ನಾ ಏನು ಹೇಳಿದ್ರೂ ನಗ್‌ ನಗ್ತಾ ಕೇಳ್ತಾನೆ. ಜಗಳ ಆಡಿ ಎಷ್ಟೊಂದ್‌ ದಿನ ಆಗೋಯ್ತಲ್ಲ. 

ಛತ್ರದೊಳಗೆ ಹೋದಾಗ ಗಂಡು ಹೆಣ್ಣನ್ನು ಮುಖ್ಯಬಾಗಿಲ ಕಡೆಗೆ ಕರ್ಕೊಂಡು ಬರ್ತಿದ್ದರು. ಸಾಗರ ಸೂಟಿನಲ್ಲಿ ಮಿಂಚುತ್ತಿದ್ದ. ಪಕ್ಕದಲ್ಲಿದ್ದ ಹುಡುಗಿ ನೋಡಿ ಹೊಟ್ಟೆ ಉರಿಯದಿದ್ದೀತೆ. ಇಬ್ಬರೂ ಚೆಂದ ಕಾಣ್ತಿದ್ದರು. ರಿಸೆಪ್ಶನ್ನಿಗೆ ಮುಂಚೆ ಬಾಗಿಲಿನಿಂದ ಸ್ಟೇಜಿನವರೆಗೆ ಕರ್ಕೊಂಡು ಹೋಗ್ತಾರಲ್ಲ - ಫೋಟೋಗ್ರಾಫರ್ಸ್‌ ಸಂಪ್ರದಾಯ! ಅರ್ಧ ದಾರಿಯಲ್ಲೇ ನನ್ನ ಕಂಡ, ಮುಖದ ತುಂಬ ನಗು ತುಂಬಿಕೊಂಡ. ಅಲ್ಲಿಂದಲೇ ನನ್ನ ಕಡೆ ಕೈ ತೋರುತ್ತಾ ಹೆಂಡತಿಗೇನೋ ಹೇಳುತ್ತಿದ್ದ. ʼನನ್‌ ಸೋಲ್‌ಮೇಟು ನೋಡು ಅವ್ಳು ಅಂದ್ನʼ ಎಂದುಕೊಂಡು ನಕ್ಕೆ. ಹತ್ತಿರ ಬಂದಾಗ ಫೋಟೋಗ್ರಾಫರ್‌ "ಹಂಗೇ ಬನ್ನಿ ಹಂಗೇ ಬನ್ನಿ" ಅಂತಿದ್ದರೂ ವಿರಾಮವಾಗಿ ನಿಂತು "ಇವಳು ನನ್ನ ಎಂಬಿಬಿಎಸ್‌ ಫ್ರೆಂಡು ಧರಣಿ ಅಂತ, ಇವ್ರು ಅವಳ ಹಸ್ಬೆಂಡು ರಾಜೀವ್‌ ಅಂತ, ಇವ್ಳು ನಿಧಿ ಅಂತ ಈಗ ಒಂದಷ್ಟೊತ್ತಿಗೆ ಮುಂಚೆ ನನ್ನ ಹೆಂಡತಿ ಆದ್ಲು ಅಂತ ಒಬ್ಬರಿಗೊಬ್ಬರು ಪರಿಚಯಿಸಿದ. ಇವ್ಳು ಮಗಳು ರಾಧ. ಎಷ್ಟುದ್ದ ಆಗ್ಬಿಟ್ಟಿದ್ದಾಳೆ ಆಗ್ಲೇ" ಎನ್ನುತ್ತಾ ಮಗಳ ತಲೆಗೂದಲಲ್ಲಿ ಕೈಯಾಡಿಸಿದ. ಫೋಟೋಗ್ರಾಫರ್‌ "ಸರ್‌ ಬನ್ನಿ ಬನ್ನಿ ಟೈಮಾಗುತ್ತೆ" ಅಂತಿದ್ರು. ʼಸರಿ ಹೋಗೋ. ಕರೀತಿದ್ದಾರೆʼ ಅಂದೆ. "ಇಲ್ಲೇ ಸಿಕ್ದೋ ಅಂತ ಹೋಗಿ ಗೀಗಿ ಬಿಟ್ಟೀರ. ಸ್ಟೇಜ್‌ ಮೇಲ್‌ ಬಂದು ಒಂದ್‌ ಫ್ಯಾಮಿಲಿ ಫೋಟೋ ತೆಗಿಸ್ಕೊಂಡು ಊಟ ಮಾಡ್ಕಂಡೇ ಹೋಗ್ಬೇಕು" ಯಾಕೋ ವಿಪರೀತ ಎಕ್ಸೈಟ್‌ ಆಗಿ ಮಾತನಾಡ್ತಿದ್ದಾನಲ್ವ ಅನ್ನಿಸಿತು. ʼಹು ಕಣ್‌ ಹೋಗಪ್ಪ. ಇಲ್ಲೀವರ್ಗೂ ಬಂದು, ಇಷ್ಟೆಲ್ಲ ರೆಡಿಯಾಗಿ ಬಂದು ಫೋಟೋ ತೆಗೆಸಿಕೊಳ್ದೇ ಊಟ ಮಾಡದೆ ಹೋಗ್ತೀವ!ʼ ಎಂದು ನಕ್ಕೆ. ನಿಧಿಯೂ ನಕ್ಕಳು. ಹೊಸ ಗಂಡನ ಎಕ್ಸೈಟ್‌ಮೆಂಟ್‌ ನೋಡಿ ಅವಳಿಗೂ ಅನ್ನಿಸಿರುತ್ತೆ ಇಲ್ಲೇನೋ ಖಾಲಿ ಫ್ರೆಂಡ್‌ಶಿಪ್ಪಿಗಿಂತ ಚೂರ್‌ ಜಾಸ್ತಿ ಇತ್ತು ಅಂತ! 

ಅವರು ಸ್ಟೇಜಿಗೆ ಬಂದ ಸ್ವಲ್ಪ ಹೊತ್ತಿಗೇ ನಾವೂ ಹೋಗಿ ಫೋಟೋ ತೆಗೆಸಿಕೊಂಡೆವು. ಪರಿಚಯವೆಲ್ಲ ಆಗಿತ್ತಲ್ಲ. ಹೆಚ್ಚು ಮಾತನಾಡಲೇನೂ ಉಳಿದಿರಲಿಲ್ಲ. ಅವನಿಗೆಂದು ತಂದಿದ್ದ ಗಿಫ್ಟನ್ನು ಕೊಟ್ಟೆ. "ಇದೇನೇ ಫಾರ್ಮಲ್ಲಾಗಿ ಗಿಫ್ಟೆಲ್ಲ ತಂದಿದ್ದಿ" ಎಂದು ನಕ್ಕ. ʼನಿಂಗ್‌ ಗಿಫ್ಟ್‌ ಇಷ್ಟವಾಗಲ್ಲ ಅಂತ ಗೊತ್ತು. ಆದ್ರೂ ಇಟ್ಕೋʼ ಎಂದು ಹೇಳಿ ʼಬರ್ತೀನ್‌ ಕಣೋ. ವಿಶ್‌ ಯು ಆಲ್‌ ದಿ ಬೆಸ್ಟ್.‌ ಖುಷಿಯಾಗಿರಿʼ ಎಂದೆ. ಮತ್ತೊಮ್ಮೆ ಊಟ ಮಾಡ್ಕಂಡ್‌ ಹೋಗಿ ಅಂದ. ʼಬೆಳಿಗ್ಗೆ ತಿಂಡೀನೂ ಸರಿ ತಿಂದಿಲ್ಲಪ್ಪ ನಾನು. ಊಟ ಗಡದ್ದಾಗಿ ಮಾಡ್ಕಂಡ್‌ ಹೋಗ್ತೀನಿʼ ಎಂದ್ಹೇಳಿ ನಿಧಿಯ ಕೈಕುಲುಕಿ ಹೊರಟೆ. ಆಟೋಗ್ರಾಫ್‌ ಪಿಚ್ಚರ್‌ ತರ ಹಿಂದೆ ತಿರುಗಿ ನೋಡಿದರೆ ಅವನೂ ನನ್ನ ಕಡೆ ನೋಡ್ತಿರ್ತಾನೆ, ಭಾವನೆಗಳ ಮಹಾಪೂರ ಅಂತೆಲ್ಲ ಮನಸ್ಸಲ್ಲಿ ಯೋಚನೆ ಬಂತು. ತಿರುಗಿ ನೋಡುವ ಸಾಹಸ ಮಾಡಲಿಲ್ಲ. ಊಟ ಮುಗಿಸಿ ಸ್ಟೇಜಿಗೆ ಸ್ವಲ್ಪ ದೂರದಿಂದಲೇ ಸಾಗರನಿಗೊಂದು ಬಾಯ್‌ ಮಾಡಿ ಯರ್ಕಾಡಿನ ಕಡೆಗೆ ಹೊರಟೊ.

ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ. 
ಮುಂದುವರೆಯುವುದು

No comments:

Post a Comment