Mar 29, 2020

ಒಂದು ಬೊಗಸೆ ಪ್ರೀತಿ - 58

ಬಹಳ ದಿನಗಳ ನಂತರ ಆಸ್ಪತ್ರೆಯಲ್ಲಿ "ಭಾನುವಾರ ರಜೆ ತಕೋ ಹೋಗಮ್ಮ" ಅಂದಿದ್ರು. ಅಮ್ಮನ ಮನೆಯಲ್ಲಿದ್ದು ಕೂಡ ತುಂಬಾ ದಿನವಾಗಿತ್ತಲ್ಲ ಎಂದು ಶನಿವಾರವೇ ಅಮ್ಮನ ಮನೆಗೆ ಹಾಜರಾಗಿಬಿಟ್ಟೆ. ಏನೇ ಅಮ್ಮನ ಮನೆ ಅಂದ್ರೂ ಅಪರೂಪಕ್ಕೆ ಹೋದಾಗ ಸಿಗೋ ಮರ್ಯಾದೆಯೇ ಬೇರೆ! ರಾಜೀವನಿಗೂ ʼಬನ್ರೀ ಹೋಗುವʼ ಎಂದಿದ್ದೆ. "ಇಲ್ಲ, ನನಗೆ ಕೆಲಸವಿದೆ. ನೀ ಹೋಗಿರು" ಎಂದು ಸಾಗ ಹಾಕಿದ್ದರು. ಇನ್ನೇನು ಕೆಲಸ? ಗೆಳೆಯರೊಟ್ಟಿಗೆ ಸೇರಿ ಕುಡಿಯೋದು ಅಷ್ಟೇ! ಬಹಳ ದಿನಗಳ ನಂತರ ಮಗಳು ಮನೆಯಲ್ಲುಳಿಯುತ್ತಿದ್ದಾಳೆಂದು ಅಪ್ಪ ಒಂದೆರಡು ಕೆಜಿ ಚಿಕನ್‌ ತಂದಿದ್ದರು. ಹೆಚ್ಚು ಕಡಿಮೆ ನಾ ಹೋಗುವಷ್ಟೊತ್ತಿಗೆ ಸೋನಿಯಾ ಅಮ್ಮ ಸೇರಿಕೊಂಡು ಒಂದು ಕೆಜಿಯಷ್ಟು ಚಿಕನ್ನನ್ನು ಚಾಪ್ಸ್‌ ಮಾಡಿದ್ದರು. ಇನ್ನುಳಿದ ಒಂದು ಕೆಜಿ ಚಿಕನ್‌ ನನ್ನ ಬರುವಿಕೆಗಾಗಿ ಕಾಯುತ್ತಿತ್ತು. ಬಿರಿಯಾನಿಯಾಗಲು ಬಿರಿಯಾನಿ ಸ್ಪೆಷಲಿಸ್ಟ್‌ಗೆ ಕಾಯುತ್ತಿತ್ತು. "ಫ್ರೈ ಏನಾದ್ರೂ ಮಾಡಿ. ಬಿರಿಯಾನಿ ಮಾತ್ರ ನನ್ನ ಮಗಳೇ ಬಂದು ಮಾಡಬೇಕು" ಎಂದು ತಾಕೀತು ಮಾಡಿದ್ದರಂತೆ. ʼಏನೋ ಅಪ್ರೂಪಕ್ಕೆ ಅಮ್ಮನ ಮನೆಗೆ ಬಂದರೆ ನನ್ನ ಬಿರಿಯಾನಿ ಮಾಡೋಳನ್ನಾಗಿ ಮಾಡ್ಬಿಟ್ರಲ್ಲʼ ಎಂದು ನಗಾಡುತ್ತಾ ಮಗಳನ್ನೆತ್ತಿ ಮುತ್ತಿಟ್ಟು ಅಪ್ಪನ ಬಳಿ ಬಿಟ್ಟು ಅಡುಗೆ ಮನೆಗೆ ಹೋದೆ. ಅಮ್ಮ ಅವರ ದೂರದ ನೆಂಟರ ವಿಷಯಗಳೇನನ್ನೋ ಹೇಳುತ್ತಿದ್ದರು. ಅವರಲ್ಲರ್ಧ ಜನ ಯಾರ್ಯಾರು ಅಂತ ನನಗೆ ಗೊತ್ತೇ ಇರಲಿಲ್ಲ. ಆದರೂ ಎಲ್ಲಾ ಗೊತ್ತಾದವಳಂತೆ ಹೂ ಹೂ ಎಂದು ತಲೆದೂಗುತ್ತಿದ್ದೆ. ನನಗೇ ಅರ್ಥವಾಗದ ಮೇಲೆ ಇನ್ನು ಸೋನಿಯಾಗೇನು ಅರ್ಥವಾಗಬೇಕು! ಸುಮ್ನೆ ತಲೆತಗ್ಗಿಸಿಕೊಂಡು ಮೊಸರುಬಜ್ಜಿಗೆ ಈರುಳ್ಳಿ ಟೊಮೋಟೊ ಕತ್ತರಿಸುತ್ತಿದ್ದಳು. "ಈ ಅತ್ತೆ ಏನ್‌ ಹಿಂಗ್‌ ತಲೆ ತಿಂತಾರೆ" ಅಂತ ಮನಸ್ಸಲ್ಲೇ ಅಂದುಕೊಳ್ಳುತ್ತಿದ್ದಳೋ ಏನೋ. ಅತ್ತೆಯಷ್ಟೇ ಯಾಕೆ? ನಮ್ಮ ಮನೆಯಲ್ಲಿ ನಾನು, ಅಮ್ಮ, ಅಪ್ಪ ಎಲ್ಲಾ ಮಾತೋ ಮಾತು. ಶಶೀನೇ ಮುಂಚಿಂದಾನೂ ಗೂಬೆ ತರ, ಮಾತಿರಲ್ಲ, ಕತೆ ಇರಲ್ಲ ಅವನದು. ಹೂ, ಸರಿ, ಇಲ್ಲ, ಆಯ್ತುಗಳಲ್ಲೇ ದಿನ ದೂಡಿಬಿಡ್ತಾನೆ! ಕುಕ್ಕರ್‌ ಮುಚ್ಚಳ ಮುಚ್ಚಿ ವಿಷಲ್‌ ಮೇಲಿಟ್ಟು ʼಏನ್‌ ಇವತ್ತು ಇಷ್ಟೊತ್ತಾದರೂ ಆಸ್ಪತ್ರೆಯಿಂದ ಯಾರೂ ಯಾವುದಕ್ಕೂ ಫೋನೇ ಮಾಡಲಿಲ್ಲವಲ್ಲʼ ಎಂದುಕೊಳ್ಳುತ್ತಾ ವ್ಯಾನಿಟಿ ಬ್ಯಾಗ್‌ ತೆರೆದು ನೋಡಿದರೆ ಎಲ್ಲಿದೆ ಫೋನು? ಎಲ್ಲೋ ಬಿಟ್ಟು ಬಂದುಬಿಟ್ಟಿದ್ದೀನಿ. ಎಲ್ಲಿ? ಆಸ್ಪತ್ರೆಯಿಂದ ಬರುವಾಗ ತಂದಿದ್ದೆ. ಮನೆಗೆ ತಲುಪಿ ಹತ್ತು ನಿಮಿಷದಲ್ಲಿ ಆಸ್ಪತ್ರೆಯಿಂದ ಫೋನು ಬಂದಿತ್ತು. ಫೋನು ರಿಸೀವ್‌ ಮಾಡಿದ ಮೇಲೆ ಬ್ಯಾಟರಿ ಕಡಿಮೆಯಾಗಿದೆ ಎನ್ನುವುದರಿವಾಗಿ ಚಾರ್ಜಿಗೆ ಇಟ್ಟೆ. ಚಾರ್ಜಿಗೆ ಇಟ್ಟವಳು ಅಲ್ಲೇ ಬಿಟ್ಟು ಬಂದೆ! ಶಶಿ ಫೋನ್‌ ತೆಗೆದುಕೊಂಡು ರಾಜೀವನಿಗೆ ಫೋನ್‌ ಮಾಡಿದೆ, ಒಂದು ಸಲ, ಎರಡು ಸಲ, ಮೂರು ಸಲ. ಫೋನ್‌ ರಿಸೀವೇ ಮಾಡಲಿಲ್ಲ. ಎಲ್ಲೋ ಹೊರಗೆ ಗಾಡಿ ಓಡಿಸ್ತಿದ್ದಾರೋ ಏನೋ. 

ʼಕುಕ್ಕರ್‌ ಎರಡು ವಿಷಿಲ್ಲಿಗೆ ಆಫ್‌ ಮಾಡಿಬಿಡಿ. ಮನೆಗೋಗಿ ಫೋನ್‌ ತೆಗೆದುಕೊಂಡು ಬರ್ತೀನಿʼ ಎಂದ್ಹೇಳಿ ಹೊರಟೆ. 

"ರಾಜೀವನಿಗೂ ಒಂದಷ್ಟು ಚಾಪ್ಸೂ ಬಿರಿಯಾನಿ ತಕ್ಕೊಂಡೋಗುವಂತೆ ಇರು" ಎಂದರು ಅಮ್ಮ. 

ʼಇಲ್ಲಮ್ಮ. ಅವರೆಲ್ಲೋ ಹೊರಗೆ ಹೋಗ್ತೀನಿ ಅಂತಿದ್ರು. ತಕೊಂಡೋಗಿ ಫ್ರಿಜ್ಜಿಗೆ ಇಟ್ಟರೆ ಮತ್ತೆ ನಾನೇ ತಿನ್ನಬೇಕು ನಾಡಿದ್ದುʼ. 

ಮನೆ ತಲುಪಿದರೆ ಮನೆಯೊಳಗೆ ಲೈಟು ಉರಿಯುತ್ತಲೇ ಇತ್ತು. ಅರೆ, ಇಲ್ಲೇ ಇದ್ದಾರಲ್ಲ, ಫೋನು ರಿಸೀವು ಮಾಡದಷ್ಟು ಕೆಲಸವೇನು ಮಾಡ್ತಿದ್ದಾರಿವರು? ಮನೆಯ ಹೊರಗಡೆ ಹೊಸಬರ ಎರಡು ಜೊತೆ ಚಪ್ಪಲಿಯಿತ್ತು. ಮನೆಯೊಳಗಿಂದ ಜೋರು ದನಿಯಲ್ಲಿ ಹಾಡು ಕೇಳುತ್ತಿತ್ತು. ಮನೆಯಲ್ಲೇ ಪಾರ್ಟಿ ಶುರು ಹಚ್ಕೊಂಡ್ರಾ ಎಂದುಕೊಳ್ಳುತ್ತಾ ಬಾಗಿಲು ಬಡಿದೆ. ನಾಲ್ಕನೇ ಸಲ ಬಾಗಿಲು ಬಡಿದಾಗಷ್ಟೇ ಒಳಗಿದ್ದವರಿಗೆ ಜ್ಞಾನೋದಯವಾಗಿ ಬಾಗಿಲಿನ ಹತ್ತಿರ ಬಂದು ಬಾಗಿಲು ತೆರೆದದ್ದು. ತೆರೆದ ಬಾಗಿಲಿಂದೆ ನಿಂತ ವ್ಯಕ್ತಿಯನ್ನು ಕಂಡು ನನಗೆ ಅಚ್ಚರಿ! ನನ್ನನ್ನು ನೋಡಿ ರಾಮ್‌ಪ್ರಸಾದ್‌ಗೂ ಆಘಾತವಾಗಿದ್ದು ಹೌದೆಂದು ಅವರ ಮುಖಭಾವವೇ ಹೇಳುತ್ತಿತ್ತು. "ಯಾರು ರಾಮ್‌ ಬಂದಿದ್ದು" ಅಂತ ಅಡುಗೆ ಮನೆಯೊಳಗಿಂದ ಹೊರ ಬಂದ ರಾಜೀವ ಥೂ ಇವಳ್ಯಾಕ್‌ ಬಂದ್ಲಪ್ಪ ಅನ್ನೋ ಭಾವವನ್ನು ಮುಖದ ಮೇಲೆಲ್ಲ ತುಂಬಿಕೊಂಡರು! ಇನ್ನೊಬ್ಬ ಆಸಾಮಿ ಯಾರು ಎಂದು ನೋಡಿದರೆ ಅದೂ ಕೂಡ ನಮ್ಮ ಆಸ್ಪತ್ರೆಯ ಹೆಚ್.ಆರ್‌ ಡಿಪಾರ್ಟ್‌ಮೆಂಟಿನವರೇ. ಇತ್ತೀಚೆಗಷ್ಟೇ ಕೆಲಸಕ್ಕೆ ಸೇರಿದ್ದ ಆ ವ್ಯಕ್ತಿಯ ಹೆಸರೂ ನನಗೆ ತಿಳಿಯದು. ಹೆಸರೇ ಗೊತ್ತಿಲ್ಲದ ಆ ಆಸಾಮಿ ನನ್ನದೇ ಮನೆಯಲ್ಲಿ ನನ್ನ ಗಂಡನೊಟ್ಟಿಗೆ ಕುಳಿತು ಕುಡಿಯುತ್ತಿದ್ದಾನೆ! ನನ್ನ ಕಂಡೊಡನೆ ರಿಮೋಟ್‌ ಕೈಗೆತ್ತಿಕೊಂಡು ಹಾಡನ್ನು ಮ್ಯೂಟ್‌ ಮಾಡಿದರು ರಾಜೀವ್.‌ ಬಾಗಿಲಿನಿಂದ ಬದಿಗೆ ಸರಿದರು ರಾಮ್‌ಪ್ರಸಾದ್.‌ ತಲೆ ತಗ್ಗಿಸಿಕೊಂಡೇ ಮೊಬೈಲ್‌ ಚಾರ್ಜಿಗಿಟ್ಟಿದ್ದ ರೂಮಿನೊಳಗೆ ಹೋದೆ. ಹಿಂದೆಯೇ ಬಂದ ರಾಜೀವ್‌ ರೂಮಿನ ಬಾಗಿಲನ್ನು ಕೊಂಚ ಮುಂದೂಡಿದ. 

"ಇದೇನ್‌ ಬಂದುಬಿಟ್ಟೆ?" ದನಿಯನ್ನು ಸಾಧ್ಯವಾದಷ್ಟು ಸಹಜವಾಗಿಟ್ಟುಕೊಂಡು ಕೇಳಿದರು. 

ʼಯಾಕೆ ಬರಬಾರದಿತ್ತಾ?ʼ ವ್ಯಂಗ್ಯ ತುಂಬದೇ ಇಂತ ಸನ್ನಿವೇಶದಲ್ಲಿ ಮಾತನಾಡುವುದಾದರೂ ಹೇಗೆ! 

"ಛೇ ಛೇ ಹಂಗಲ್ಲ. ಅಮ್ಮನ ಮನೆಯಲ್ಲೇ ಇರ್ತೀನಿ ಎಂದಿದ್ದೆ" 

ʼಮೊಬೈಲ್‌ ಬಿಟ್ಟಿದ್ದೆ. ಅದಿಕ್ಕೇ ಬಂದೆ. ತಗಂಡ್‌ ಹೋಗ್ತೀನಿ. ಯು ಪೀಪಲ್‌ ಕ್ಯಾರಿ ಆನ್‌ʼ 

"ಹೌದಾ!" ಒಂದು ನಿಟ್ಟುಸಿರು ಬಿಟ್ಟು "ಫೋನ್‌ ಮಾಡಿದ್ರೆ ನಾನೇ ತಂದ್‌ ಕೊಡ್ತಿದ್ನಲ್ಲ" ಎಂದರು. 

ಅವರ ಫೋನ್‌ ಅಲ್ಲೇ ಹಾಸಿಗೆ ಮೇಲಿತ್ತು. ಕೈಗೆತ್ತಿಕೊಂಡು ಮೂರು ಮಿಸ್ಡ್‌ ಕಾಲ್‌ ತೋರಿಸಿ ರೂಮಿನಿಂದೊರಬಂದೆ. ಹೆಚ್.ಆರ್ ಡಿಪಾರ್ಟ್‌ಮೆಂಟಿನ ಹೊಸ ಆಸಾಮಿ ಮ್ಯೂಟ್‌ ಆಗಿದ್ದ ಟಿವಿಯೊಳಗೇ ಕಣ್ಣು ನೆಟ್ಟು ಕೂತಿತ್ತು. ರಾಮ್‌ಪ್ರಸಾದ್‌ ಇರಲಿಲ್ಲ. ಹೊರಗೆ ನಿಂತಿದ್ದರು. ನನ್ನನ್ನು ಕಂಡವರೇ ಒಂದು ಕಳ್ಳ ನಗೆ ನಕ್ಕು "ಸಾರಿ. ನಾ ಹೇಳ್ದೆ. ಹೊರಗೆಲ್ಲಾದ್ರೂ ಹೋಗುವ, ಮನೆಯಲ್ಯಾಕೆ ಅಂತ..... ಆದ್ರೆ ರಾಜೀವವ್ರು....." 

ʼಅವ್ರೇನೋ ಕರೀತಾರಪ್ಪ. ಹಂಗಂದ್ಬುಟ್ಟು ಕಂಡೋರ್‌ ಮನೇಗ್‌ ಬಂದು ಹಿಂಗ್‌ ಕುಡೀತಾ ಗಲಾಟೆ ಮಾಡೋದ್‌ ಸರಿಯಾʼ ಅಂತ ಮನಸ್ಸಲ್ಲಂದುಕೊಳ್ಳುತ್ತಾ ʼಇಟ್ಸ್‌ ಓಕೆ. ರಾಜೀವ್‌ ಫ್ರೆಂಡಲ್ಲ ನೀವು. ಅದರಲ್ಲೇನಿದೆ. ಯು ಪೀಪಲ್‌ ಕ್ಯಾರಿ ಆನ್.‌ ಸುಮ್ನೆ ನನ್ನಿಂದ ತೊಂದರೆ ಆಯ್ತು ಪಾಪʼ ಎನ್ನುತ್ತಾ ಕಳ್ಳ ನಗೆಗೊಂದು ಸುಳ್ಳು ನಗೆಯನ್ನು ಬಿಸುಟಿ ಸ್ಕೂಟರ್‌ ಸ್ಟಾರ್ಟ್‌ ಮಾಡಿದೆ. 

ವಾಪಸ್‌ ಮನೆಗೋಗುವಷ್ಟರಲ್ಲಿ ಬಿರಿಯಾನಿ ತಿನ್ನುವ ಮನಸ್ಸೇ ಹೊರಟುಹೋಗಿತ್ತು. ತಿನ್ನದೇ ಹೋದರೆ ಅಪ್ಪ ಅಮ್ಮನ ಪ್ರಶ್ನೆ ಸಾವಿರದ ಲೆಕ್ಕದಲ್ಲಿ ಎದುರಾಗ್ತವೆ. ಕಾಟಾಚಾರಕ್ಕೊಂದಷ್ಟು ತಿಂದು ಮುಗಿಸುವಷ್ಟರಲ್ಲಿ ರಾಧಳನ್ನು ಅಮ್ಮ ಮಲಗಿಸಿದ್ದರು. ಹೋಗಿ ಅವಳ ಪಕ್ಕದಲ್ಲಿ ಬಿದ್ದುಕೊಂಡೆ. ಏನಾಗಿದೆ ಈ ರಾಜೀವನಿಗೆ. ಕುಡೀಬೇಕಾ ಕುಡೀಲಿ, ನಮ್ಮ ಮನೆಯಲ್ಲೇ ಅವರ ಸ್ನೇಹಿತರೊಟ್ಟಿಗೆ ಕುಡಿಯುವುದು ಮೊದಲಿನಿಂದಲೂ ಇತ್ತಲ್ಲ. ನಾನೇ ಎಷ್ಟೋ ಸಲ ಕಬಾಬು ಚಿಪ್ಸು ಅಂತ ಮಾಡಿಕೊಟ್ಟಿದ್ದೀನಿ. ಯಾರ ಮನೆಯಲ್ಲಿ ಹೆಂಡತಿ ಇಷ್ಟು ಸಲೀಸಾಗಿ ಕುಡ್ಕೊಂಡ್‌ ಕೂತ್ಕೊಳ್ಳಿ ಪರವಾಗಿಲ್ಲ ಅಂತ ಸುಮ್ನಿರ್ತಾಳೆ? ಅವರ ಗೆಳೆಯರ ಬಳಗದವರು ಮದುವೆಯಾದ ಮೇಲೆ ಒಬ್ಬೊಬ್ಬರಾಗಿ ಪಾರ್ಟಿ ಗೀರ್ಟಿ ಎಲ್ಲ ಬಿಡಲಾರಂಭಿಸಿದರು. ಇವರಿಗೆ ಕುಡಿಯಲು ಕಂಪನಿಯೇ ಇಲ್ಲದಂತಾಯಿತು. ಯಾರೂ ಇಲ್ಲದೇ ಇದ್ದರೆ ಏನಂತೆ. ಇಲ್ಲಿಗೇ ತಗಂಡುಬನ್ನಿ, ನಾ ಕಂಪನಿ ಕೊಡ್ತೀನಿ ನೀವು ಒಬ್ರೇ ಕುಡೀರಿ, ಇಲ್ಲ ಅಪ್ಪನ ಜೊತೇನೇ ವಾರಕ್ಕೊಂದು ದಿನ ಕುಡಿಯುವವರಂತೆ ಅಂತ ಕೂಡ ಹೇಳಿದ್ದಿದೆ. ಅಯ್ಯಪ್ಪ, ನಿಮ್ಮಪ್ಪನ ಜೊತೇಲಾ! ಅವರ ಮಾತುಗಳನ್ನು ಕೇಳೋ ಟಾರ್ಚರ್‌ ನನಗ್ಯಾಕೆ ಬಿಡು. ಇನ್ನು ಒಬ್ಬನೇ ಕುಡಿಯೋದೆಲ್ಲ ನನಗೆ ಅಭ್ಯಾಸವಿಲ್ಲವಪ್ಪ. ಅಷ್ಟೊಂದೆಲ್ಲ ದೊಡ್ಡ ಕುಡುಕನೇನಲ್ಲ ನಾನು. ಒಂದ್‌ ರೀತಿ ಕಂಪನಿ ಸಿಗದೇ ಇರುವುದು ಒಳ್ಳೆಯದೇ ಆಯಿತು ಬಿಡು. ಅಷ್ಟರಮಟ್ಟಿಗೆ ಕುಡಿಯೋದಾದರೂ ಕಡಿಮೆಯಾಯಿತಲ್ಲ ಎಂದು ನಗೋರು. ಹೊಕ್ಕೊಳ್ಳಿ ಬಿಡು, ಅವರು ಹೇಳೋದೂ ಸರೀನೆ, ಕುಡಿದು ಉದ್ಧಾರ ಮಾಡೋದಾದರೂ ಏನನ್ನ ಎಂದುಕೊಂಡಿದ್ದೆ. ಸುಮಾಳ ಮದುವೆಗೆ ಹೋಗಿದ್ದೆ ನೆಪವಾಯಿತಿವರಿಗೆ. ಅಲ್ಲಿ ಕುಡಿದು ತೇಲಾಡಿ ಕುಣಿದಾಡಿ ಮುಜುಗರ ಮೂಡಿಸಿದ್ದಲ್ಲದ್ದೇ ರಾಮ್‌ಪ್ರಸಾದ್‌ ಜೊತೆ ಕುಳಿತು ಕುಡಿದು ಮತ್ತಷ್ಟು ಮುಜುಗರಕ್ಕೆ ದೂಡಿದ್ದರು. ಅವಾಗಲೇ ಹೇಳಿದ್ದೆ, ನಮ್‌ ಆಸ್ಪತ್ರೆ ಸ್ಟಾಫ್‌ ಅವರು. ಅವರ ಜೊತೇಲೆಲ್ಲ ಹಂಗ್‌ ಕುಡೀಬಾರ್ದಿತ್ತು. ನನ್ನ ಪರಿಸ್ಥಿತಿ ಕೂಡ ಅರ್ಥ ಮಾಡ್ಕೋಬೇಕಲ್ವ ನೀವು, ಆಸ್ಪತ್ರೆಯಲ್ಲಿ ತಲೆಗೊಂದು ಮಾತನಾಡುವುದಿಲ್ಲವಾ ನಿಮ್ಮ ಬಗ್ಗೆ ಎಂದೇಳಿದಕ್ಕೆ, ಹೌದೌದು ಎಂದು ತಲೆಯಾಡಿಸಿದ್ದರು. ಮಗಳ ನಾಮಕರಣಕ್ಕೆ ರಾಜೀವ ಪಟ್ಟಿ ಮಾಡಿದ್ದ ಹೆಸರುಗಳಲ್ಲಿ ರಾಮ್‌ಪ್ರಸಾದ್‌ ಹೆಸರು ಕಂಡು ಇವರ ಕುಡಿದಾಟ ಮೈಸೂರಿನಲ್ಲೂ ಮುಂದುವರಿದಿರುವ ಸ್ಪಷ್ಟ ಚಿತ್ರಣ ಸಿಕ್ಕಿತ್ತು. ಏನೋ ಇವರಿಗೂ ಗೆಳೆಯರ ಸಂಖೈ ಕಡಿಮೆ, ಜೊತೆಗೆ ಸರಿಯಾದ ಕೆಲಸ ಸಿಗಲಿಲ್ಲವೆಂದು ದುಃಖದಲ್ಲಿರ್ತಾರೆ, ಹಿಂಗಾದ್ರೂ ಒಬ್ಬ ಗೆಳೆಯ ಅವರಿಗೆ ಸಿಗುವಂತಾದರೆ ನಾನ್ಯಾಕೆ ಅಡ್ಡಿಯಾಗಲಿ ಎಂದೆನ್ನಿಸಿತ್ತು. ರಾಮ್‌ಪ್ರಸಾದ್‌ ಮುಂಚಿನಿಂದಾನೂ ಅವರ ಗೆಳೆಯರೇ ಆಗಿದ್ದರೆ ನನಗೇನೂ ಮುಜುಗರವಾಗುತ್ತಿರಲಿಲ್ಲವಲ್ಲ. ಈಗ್ಯಾಕೆ ಮುಜುಗರಪಟ್ಟುಕೊಳ್ಳಲಿ ಎಂದು ಸುಳ್ಳು ಸುಳ್ಳೆ ಅಂದುಕೊಂಡೆನಾದರೂ ಅದರಿಂದ ಸಮಾಧಾನವಾಗಲಿಲ್ಲ. ಹೊರಗಡೆ ಎಲ್ಲೋ ಕುಡೀತಾರೆ ಅಂದ್ರೂ ಪರವಾಗಿಲ್ಲ, ತೀರ ನಮ್ಮ ಮನೆಯಲ್ಲೇ ಕರೆಸಿ ಕೂರಿಸಿ ಕುಡಿಸುವ ಅನಿವಾರ್ಯತೆ ಏನಿದೆ? ಅದರಲ್ಲೂ ಈಗಷ್ಟೇ ಆಸ್ಪತ್ರೆಗೆ ಸೇರಿರುವ ಆ ಹೊಸ ಆಸಾಮಿ ಬೇರೆ. ಆತನ ಹೆಸರು ನನಗೇ ಗೊತ್ತಿಲ್ಲ, ಇನ್ನು ಹೊಸಬನಾದ ಅವನ ಜೊತೆ ರಾಮ್‌ಪ್ರಸಾದ್‌ಗಾದರೂ ಗೆಳೆತನ ಬೆಳೆದಿದೆಯೋ ಇಲ್ಲವೋ... ಅವನನ್ನೂ ಸೇರಿಸಿಕೊಂಡು ಕುಡಿಯುವ ಅನಿವಾರ್ಯತೆ ಏನಿದೆಯೋ. ಕುಡಿದಾಗ ಈ ರಾಜೀವ ಅದೇನೇನು ಮಾತಾಡ್ತಾರೋ... ನನ್ನ ಬಗ್ಗೆ ಅದೇನೇನು ಹೇಳ್ತಾರೋ... ಕುಡಿದಾಗ ಮೊದಲೇ ಇವರ ಬಾಯಿ ಸುಮ್ಮನಿರುವುದಿಲ್ಲ ಬೇರೆ. ಇವರು ನನ್ನ ಬಗ್ಗೆ ಏನೇನೋ ಹೇಳಿಬಿಟ್ಟರೆ ನಾಳೆ ದಿನ ನಾ ಆಸ್ಪತ್ರೆಯಲ್ಲಿ ಮುಖ ಕೊಟ್ಟುಕೊಂಡು ಓಡಾಡುವುದಾದರೂ ಹೇಗೆ? ಥೂ... ಈ ಮನುಷ್ಯನ ತಲೇಲಿ ಅದೇನು ತುಂಬಿಕೊಂಡಿದೆಯೋ ಕರ್ಮ. 

ಮಾರನೇ ದಿನ ಪೂರ್ತಿ ಅಮ್ಮನ ಮನೆಯಲ್ಲೇ ಸೋಂಬೇರಿಯಾಗಿ ಬಿದ್ದುಕೊಂಡಿರುವ ಯೋಚನೆಗಳನ್ನೆಲ್ಲ ಬದಿಗಿಟ್ಟು ಬೆಳಿಗ್ಗೆ ತಿಂಡಿ ತಿಂದವಳೇ ಹತ್ತು ಘಂಟೆಗೆಲ್ಲ, ಒಂದಷ್ಟು ಕೆಲಸವಿದೆ ಅಂತೇಳಿ ಮಗಳನ್ನೂ ಕರೆದುಕೊಂಡು ಮನೆಗೆ ಬಂದೆ. ಇವರೊಡನೆ ಜೋರು ಜಗಳ ಮಾಡುವ ಉದ್ದೇಶ ತಲೆಯಲ್ಲಿತ್ತು. ನಿರೀಕ್ಷೆಯಂತೆ ಇವರಿನ್ನೂ ಎದ್ದಿರಲಿಲ್ಲ. ಎಣ್ಣೆಗಣ್ಣಲ್ಲಿ ಬಂದು ಬಾಗಿಲು ತೆರೆದರು. ಮನೆಯೊಳಗೋದರೆ ಎಣ್ಣೆ ವಾಸನೆಯಿನ್ನೂ ಅಲ್ಲೇ ಗಿರಕಿ ಹೊಡೆಯುತ್ತಿತ್ತು. ಆತುರಾತುರದಲ್ಲಿ ಬಾಟಲಿಗಳನ್ನು, ಪಾರ್ಸಲ್‌ ತಂದಿದ್ದ ಊಟದ ಕವರುಗಳನ್ನು ಗುಡ್ಡೆಹಾಕಿ ಕಸಕ್ಕೆ ಹಾಕಿರುವುದರ ಕುರುಹೆಂಬಂತೆ ಟೇಬಲ್ಲಿನ ಮೇಲೆ, ಟೇಬಲ್ಲಿನ ಹತ್ತಿರ ನೆಲದ ಮೇಲೆ ಅಲ್ಲಲ್ಲಿ ಅನ್ನದ ತುಣುಕು, ಮೂಳೆ ಚೂರು ಬಿದ್ದಿತ್ತು. ಬಾಗಿಲು ತೆರೆದವರಿಗೆ ನನ್ನನ್ನೆದುರಿಸುವ ಧೈರ್ಯವಿರಲಿಲ್ಲವಲ್ಲ, ಸೀದಾ ಹೋಗಿ ಬಚ್ಚಲುಮನೆ ಸೇರಿಕೊಂಡರು. ಇನ್ನವರು ಸ್ನಾನವೆಲ್ಲ ಮುಗಿಸಿ ಬರುವುದಕ್ಕೆ ಬರೋಬ್ಬರಿ ಒಂದು ಘಂಟೆಯಾಗದೇ ಇರದು. ರಾಧಳಿಗೆ ಆಡಲೊಂದಷ್ಟು ಬೊಂಬೆ ಕೊಟ್ಟು ಸೋಫಾದ ಮೇಲೆ ಕೂರಿಸಿ ‌ʼಇನ್ನತ್ತು ನಿಮಿಷ ಇಲ್ಲೇ ಕೂತಿರಬೇಕು ಪುಟ್ಟ. ಅಮ್ಮ ಅಷ್ಟೊತ್ತಿಗೆ ಎಲ್ಲಾ ಕ್ಲೀನ್‌ ಮಾಡಿಬಿಡ್ತಾಳೆ. ಆಮೇಲ್‌ ಜೊತೇಲಿ ಆಟವಾಡುವʼ ಎಂದಿದ್ದಕ್ಕೆ ತಲೆಯಾಡಿಸಿದಳು. ಇದ್ಯಾಕಿವಳಿಗಿನ್ನು ಮಾತೇ ಬರಲಿಲ್ಲವಲ್ಲ ಎನ್ನುವ ಚಿಂತೆ ಮಧ್ಯೆ ಮಧ್ಯೆ. ವರುಷ ತುಂಬದ ಮಕ್ಕಳೆಲ್ಲ ಪಟ ಪಟ ಅಂತ ಮಾತನಾಡುವುದನ್ನು ನೋಡಿದಾಗ ಚಿಂತೆ ಇನ್ನಷ್ಟು ಹೆಚ್ಚು. ನಾನೇ ಮಕ್ಕಳ ಡಾಕ್ಟರಾಗಲು ಓದ್ತಿದ್ದೀನಲ್ಲ, ಎಷ್ಟೊ ಮಕ್ಕಳು ಮೂರರವರೆಗೂ ಮಾತನಾಡುವುದಿಲ್ಲ. ಆದರೂ ಇವಳು ಚೂರುಚೂರಾದರೂ ಮಾತನಾಡಬಾರದಿತ್ತಾ ಎಂದು ಟೆನ್ಶನ್ನು. ಟೇಬಲ್ಲು ನೆಲವನ್ನೆಲ್ಲ ಗುಡಿಸಿ ಒರೆಸಲು ಅರ್ಧ ಘಂಟೆ ಹಿಡಿಯಿತು. ಮಗಳು ಯಾಕೋ ಇವತ್ತು ಏನೊಂದೂ ಗಲಾಟೆ ಮಾಡದೆ ಗೊಂಬೆಗಳೊಡನೆಯೇ ಆಡಿಕೊಂಡಿದ್ದಳು. ಎತ್ತಿಕೊಳ್ಳಲು ಬಲವಂತಿಸಲಿಲ್ಲ, ಜೊತೆಗೆ ಆಡುವಂತೆ ಪೀಡಿಸಲಿಲ್ಲ, ಅತ್ತು ರಚ್ಚೆ ಹಿಡಿಯಲಿಲ್ಲ. ಅಮ್ಮನ ಮೂಡು ಸರಿಯಿಲ್ಲ ಅಂತ ಅದಕ್ಕೂ ಗೊತ್ತಾಗಿಬಿಟ್ಟಿತ್ತೋ ಏನೋ. 

ಅಂದುಕೊಂಡಂತೆ ಬರೋಬ್ಬರಿ ಒಂದು ಘಂಟೆ ಸಮಯ ತೆಗೆದುಕೊಂಡು ಸಾವಾಕಾಶವಾಗಿ ಸ್ನಾನ ಮಾಡಿಕೊಂಡು ಹನ್ನೊಂದಕ್ಕೆ ಬಚ್ಚಲುಮನೆಯ ಬಾಗಿಲು ತೆರೆದರು ರಾಜೀವ. ರೂಮಿಗೋಗಿ ತಲೆ ಬಾಚಿಕೊಳ್ಳುವವರೆಗೂ ಕಾದು ಕುಳಿತು ʼಬನ್ನಿ ನಿಮ್ಮ ಜೊತೆಗೆ ಮಾತನಾಡಬೇಕುʼ ಎಂದೆ. ಅವರಿಗೂ ಗೊತ್ತೇ ಇತ್ತಲ್ಲ ನಾ ಮಾತನಾಡುವ ವಿಷಯ. "ಸ್ವಲ್ಪ ಎಲ್ಲೋ ಹೊರಗೆ ಹೋಗಬೇಕಿತ್ತಲ್ಲ ಈಗ. ಚೂರು ಕೆಲಸವಿತ್ತು" ಎಂದು ನೆಪ ಹೇಳಿದರು. 

ʼನಾ ಬರದೇ ಹೋಗಿದ್ದರೆ ನೀವು ಮಧ್ಯಾಹ್ನ ಒಂದು ಘಂಟೆಯಾದರೂ ಹಾಸಿಗೆ ಬಿಟ್ಟೇಳುತ್ತಿರಲಿಲ್ಲ. ಈಗೇನೋ ಕೆಲಸದ ನೆಪ ಹೇಳಬೇಡಿ. ಬನ್ನಿ ಇಲ್ಲಿʼ 

ಯಾವ ನೆಪವೂ ಇವತ್ತು ನಡೆಯುವುದಿಲ್ಲ ಎಂದರಿವಾಗಿ ಬಂದು ಸೋಫಾದ ಆ ತುದಿಯಲ್ಲಿ ಕುಳಿತರು. ಕೊನೇ ಪಕ್ಷ ಮಗಳ ಪಕ್ಕ ಕುಳಿತು ಅವಳನ್ನೆತ್ತಿಕೊಂಡಿದ್ದರೂ ನನ್ನ ಕೋಪ ಅರ್ಧ ಶಮನವಾಗಿಬಿಡುತ್ತಿತ್ತು. ನನ್ನ ನಿರೀಕ್ಷೆ ಅತಿಯಾಯಿತು. 

ʼನಿಮಗೆ ಅವತ್ತೇ ಹೇಳಿದ್ದೆನಲ್ಲ. ನನ್ನ ಆಸ್ಪತ್ರೆಯ ಸ್ಟಾಫ್‌ ಜೊತೆ ಅಷ್ಟೆಲ್ಲ ಕ್ಲೋಸ್‌ ಆಗ್ಬೇಡಿ, ಅದೂ ಕುಡ್ಕೊಂಡು ಕುಡ್ಕೊಂಡು ಕ್ಲೋಸ್‌ ಆಗ್ಬೇಡಿ ಅಂತ. ಕ್ಲೋಸ್‌ ಆಗೋದಷ್ಟೇ ಅಲ್ಲದೇ ಮನೇಗೂ ಕರೆಸಿಕೊಂಡು ಕುಡೀತೀರಲ್ಲ? ಏನ್‌ ಹೇಳ್ಲಿ ಇದಕ್ಕೆ?ʼ 

"ಅದರಲ್ಲೇನಿದೆ? ನಾ ಮುಂಚೇನೂ ಗೆಳೆಯರೊಟ್ಟಿಗೆ ಕುಡಿದಿದ್ದುಂಟಲ್ಲ ಮನೆಯಲ್ಲಿ" 

ʼಅದು ಗೆಳೆಯರೊಟ್ಟಿಗೆ. ನನ್ನ ಕೊಲೀಗ್ಸ್‌ ಜೊತೆಗಲ್ಲʼ 

"ರಾಮ್‌ಪ್ರಸಾದ್‌ ನನ್ನ ಗೆಳೆಯ ಅಂತ ಅವತ್ತೇ ಹೇಳಿದ್ದೆನಲ್ಲ ನಿನಗೆ" 

ʼಕುಡಿಯೋದಿಕ್ಕೆ ಬಿಟ್ಟು ಬೇರೆ ಯಾವುದಕ್ಕಾದರೂ ಇಬ್ಬರು ಜೊತೆ ಸೇರಿದ್ದುಂಟಾ?ʼ 

ತಲೆ ತಗ್ಗಿಸಿದರಷ್ಟೇ. 

ʼಹೋಗ್ಲಿ ರಾಮ್‌ಪ್ರಸಾದ್‌ ಜೊತೆ ಬಂದಿದ್ರಲ್ಲ. ಅವರ್ಯಾರು?ʼ 

"ಹೇ ಅದ್‌ ನಿಮ್‌ ಆಫೀಸ್‌ ಸ್ಟಾಫೇ" 

ʼನಮ್‌ ಹಾಸ್ಪಿಟಲ್‌ ಸ್ಟಾಫೇ ಅಂತ ನನಗೂ ಗೊತ್ತು. ಅವರ್ಯಾರು ಅಂತ ಕೇಳಿದ್ದುʼ ಬೇಡ ಬೇಡ, ಮಗಳ ಮುಂದೆ ಬೇಡ ಅಂದುಕೊಂಡರೂ ದನಿ ಜೋರಾಗಿತ್ತು. ಬೊಂಬೆಯ ಕಡೆಗಿದ್ದ ಅವಳ ಗಮನ ಈಗ ನನ್ನೆಡೆಗೆ ತಿರುಗಿತ್ತು. 

"ಅದೇ ನಿಮ್ಮ ಆಫೀಸ್‌ ಸ್ಟಾಫೇ. ಅವರೆಸ್ರು.... ಏನೋ ಹೇಳಿದ್ರು ರಾಮ್‌ಪ್ರಸಾದ್‌.... ಸುರೇಶಾ.... ಸತೀಶಾ..... ಸರಿ ನೆನಪಾಗಲ್ಲ.... ಒಟ್ನಲ್ಲಿ ಎಸ್‌ ಇಂದಾನೇ ಶುರುವಾಗ್ತದೆ ಅವರ ಹೆಸರು" 

ʼನೆಟ್ಟಗೆ ಹೆಸರೇ ಗೊತ್ತಿಲ್ಲದವರನ್ನು ಕರೆದುಕೊಂಡು ಬಂದು ಮನೇಲಿ ಕುಡೀತೀರಲ್ಲ, ನಾಚಿಕೆಯಾಗಲ್ವ ನಿಮಗೆʼ 

"ಅಯ್ಯೋ! ಅದರಲ್ಲೆಂತಾ ನಾಚಿಕೆ. ನಿಮಗೆ ಹೆಂಗಸರಿಗೆ ಗೊತ್ತಾಗಲ್ಲ ಅಷ್ಟೇ. ನಾವು ಹುಡುಗರು ಹಂಗೆ ಬೇಗ ಫ್ರೆಂಡ್ಸ್‌ ಆಗಿಹೋಗ್ತೀವಿ. ರಾಮ್‌ಪ್ರಸಾದ್‌ ಸಿಕ್ಕಿದ್ನಾ... ಅವನ ಜೊತೆಗೆ ಇವನೂ ಇದ್ದ..... ಅದೇ ಅವನೆಸರು.... ಇಬ್ರೂ ಜೊತೇಲಿದ್ದಾಗ ರಾಮ್‌ಪ್ರಸಾದ್‌ ಒಬ್ಬನನ್ನೇ ಕರೆಯುವುದಕ್ಕಾಗ್ತದಾ? ಅದು ಇನ್‌ಡೀಸೆನ್ಸಿ ಅಲ್ವ. ಅದಕ್ಕೇ ಇಬ್ಬರನ್ನೂ ಕರೆದೆ" 

ʼಅವರಿಬ್ಬರೇನೋ ಮದುವೆಯಾಗದ ಹುಡುಗರು ಒಪ್ತೀನಿ. ನೀವದ್ಯಾವ ಲೆಕ್ಕದಲ್ಲಿ ಹುಡುಗ. ಒಂದು ಮಗುವಿನ ತಂದೆ ಅನ್ನೋದು ನೆನಪಲ್ಲೇ ಇಲ್ಲವಾ?ʼ 

"ನಾನೇನ್‌ ಬಯಸಿದ್ನಾ ಈ ಪೀಡೇನಾ?" 

ʼನಾಲಗೆ ಮೇಲೆ ಹಿಡಿತ ಇರ್ಲಿ ರಾಜೀವ್.‌ ಅವಳ ಮುಂದೇನೇ ಹಿಂಗ್‌ ಮಾತಾಡ್ತೀರಲ್ಲ. ನಿಮ್ಮ ಮಾತಿಂದ ಅವಳಿಗೆಷ್ಟು ನೋವಾಗ್ಬಹುದು ಅನ್ನೋ ಯೋಚ್ನೆ ಕೂಡ ಬರಲ್ವಾ ನಿಮಗೆʼ 

"ಇನ್ನೂ ಆ...ಹೂ ಅನ್ನೋಕೇ ಬರ್ದಿರೋ ಈ ಗೂಬೆಮುಂಡೇದುಕ್‌ ಎಲ್ಲಿ ನನ್ನ ಮಾತು ಅರ್ಥವಾಗ್ಬೇಕು ಬಿಡು" 

ʼರಾಜೀವ್‌ʼ ನನ್ನ ದನಿ ಕೇಳಿ ನನಗೇ ಬೆಚ್ಚುವಂತಾಯಿತು. ʼಏನ್‌ ನಾನ್ಸೆನ್ಸ್‌ ಮಾತಾಡ್ತಿ. ಮಗಳ ಬಗ್ಗೆ ಇನ್ನೊಂದ್ಸಲ ಇಂತ ಮಾತುಗಳನ್ನಾಡಿದರೆ ನಾ ಸುಮ್ಮನಿರೋದಿಲ್ಲ ನೋಡಿʼ 

"ಇನ್ನೊಂದ್ಸಲ ಅಲ್ಲ, ಇನ್ನೂ ಹತ್ಸಲ ಮಾತಾಡ್ತೀನಿ. ಅದೇನ್‌ ಕಿತ್ಕೋತೀಯೋ ಕಿತ್ಕೊ ಚಿನಾಲಿ ತಕಂಬಂದು" ಎಂದು ಜೋರು ದನಿಯಲ್ಲಿ ಕಿರುಚಿ "ಈ ಇಬ್ರು ಮುಂಡೇರು ನನ್ನ ಜೀವನಾನೇ ಹಾಳು ಮಾಡಿಬಿಟ್ರು" ಎಂದು ಕಿರುಚಾಡುತ್ತಾ ಮನೆಯಿಂದ ಹೊರನಡೆದುಬಿಟ್ಟರು. 

ನನ್ನ ಕಣ್ಣಲ್ಲಿ ಧಾರಾಕಾರ ನೀರು. ಮಗಳಿಗೆ ಏನು ಅರ್ಥವಾಯಿತೋ ಬಿಟ್ಟಿತೋ .... ನನ್ನ ಕಣ್ಣಲ್ಲಿ ನೀರು ಕಂಡು ಅವಳೂ ಜೋರು ದನಿಯಲ್ಲಿ ಅಳಲಾರಂಭಿಸಿದಳು. ʼಸಾರಿ ಮಗಳೇʼ ಎಂದವಳ ಕ್ಷಮೆ ಕೇಳುತ್ತಾ ಎದೆಗಪ್ಪಿಕೊಂಡು ಸಮಾಧಾನಿಸಿದೆ, ಅವಳನ್ನು - ನನ್ನನ್ನೂ.

ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ. 
ಮುಂದುವರೆಯುವುದು

No comments:

Post a Comment