Dec 22, 2019

ಒಂದು ಬೊಗಸೆ ಪ್ರೀತಿ - 45

ಕನ್ನಡ ಕಾದಂಬರಿ
ಡಾ. ಅಶೋಕ್.‌ ಕೆ. ಆರ್.‌
ಸಾಗರ ಬಂದಿದ್ದಾಗ ರಾಜೀವ ಮನೆಯಲ್ಲಿರಲಿಲ್ಲ. ಅಪ್ಪನೂ ಹೊರಹೋಗಿದ್ದರು. ತಮ್ಮ ಸೋನಿಯಾಳೊಡನೆ ಹೊರಗೋಗಿದ್ದ. ಇದ್ದಿದ್ದು ನಾನು ಅಮ್ಮ ರಾಧ. ಸಾಗರ ಒಳಬಂದಾಗ ಮಗಳು ಮಲಗಿದ್ದಳು. ಸಾಗರನ ಜೊತೆ ಅಮ್ಮ ಎರಡು ನಿಮಿಷಗಳ ಕಾಲ ಕುಶಲೋಪರಿ ಮಾತನಾಡಿ ಕಾಫಿ ಮಾಡಲು ಒಳಗೋದರು. ʼಇರು ಮಗಳನ್ನ ಎತ್ಕೊಂಡ್‌ ಬರ್ತೀನಿʼ ಎಂದಿದ್ದಕ್ಕೆ "ಇರಲಿ ಬಿಡೆ. ಮಲಗಿರಲಿ. ಸುಮ್ನ್ಯಾಕೆ ಏಳಿಸ್ತಿ. ಎದ್ದಾಗ ನೋಡಿದರಾಯಿತಲ್ಲ” ಎಂದ. 

ʼಮತ್ತೆ…ಇನ್ನೇನ್‌ ಸಮಾಚಾರʼ ಎಂದು ಕೇಳಿದ್ದಕ್ಕೆ “ವಿಶೇಷವೇನಿಲ್ಲ” ಎಂದು ತಲೆಯಾಡಿಸಿದ. 

ʼಹುಡುಗಿ ಏನಾದ್ರೂ ನೋಡಿದ್ಯಾʼ 

“ಮ್.‌ ಒಂದೆರಡ್‌ ಫೋಟೋ ತೋರಿಸಿದ್ರು. ಇನ್ನೂ ಹೋಗಿಲ್ಲ ನೋಡೋದಿಕ್ಕೆ. ಹೋಗ್ಬೇಕು” 

ʼಮ್.‌ ಏನ್‌ ಮಾಡ್ಕೊಂಡಿದ್ದಾರೆ ಆ ಹುಡ್ಗೀರುʼ 

“ಏನೋ ಗೊತ್ತಿಲ್ವೇ. ನಾ ಕೇಳೋಕ್‌ ಹೋಗಿಲ್ಲ" 

ʼಅಯ್ಯೋ ನಿನ್ನ…. ವಿಚಾರಿಸಬೇಕಲ್ವೇ…..ʼ ಮಾತು ಮುಗಿಯುವುದಕ್ಕೆ ಮುನ್ನ ನನ್ನೆಡೆಗೆ ತೂರಿ ಬಂದ ಅವನ ತೀಕ್ಷ್ಣ ನೋಟ ಈ ವಿಷಯ ಬಿಟ್ಟು ಬೇರೆ ಮಾತನಾಡು ಎನ್ನುವಂತಿತ್ತು. 

ʼಹೋಗ್ಲಿ ಬಿಡು. ಮತ್ತೆ ಬೇರೆ ಫ್ರೆಂಡ್ಸ್ಯಾರಾದ್ರೂ ಸಿಕ್ಕಿದ್ರಾ ಮೈಸೂರಲ್ಲಿʼ 

“ಇಲ್ವೇ. ಯಾರೂ ಸಿಕ್ಕಿಲ್ಲ. ಎಲ್ರೂ ಬ್ಯುಸಿಯಲ್ವ ಈಗ. ಯಾರೂ ಸಿಗೋದಿಲ್ಲ” 

ಅದೇನು ಅವನ ಗೆಳೆಯರ ಕುರಿತಾಗಿ ಹೇಳಿದನೋ, ನನ್ನ ಬಗ್ಗೆ ಹೇಳಿದನೋ ಗೊತ್ತಾಗಲಿಲ್ಲ. ಅಷ್ಟರಲ್ಲಿ ಅಮ್ಮ ಕಾಫಿ ತಂದರು. ಜೊತೆಗೊಂದು ಪ್ಲೇಟಿನಲ್ಲಿ ಮಾರಿ ಬಿಸ್ಕೆಟ್ಟು. ಎರಡು ಬಿಸ್ಕೆಟ್ಟು ತಿಂದು ಕಾಫಿ ಕುಡಿದ. ಅವನು ಕಾಫಿ ಕಪ್ಪು ಮೇಜಿನ ಮೇಲಿಟ್ಟಾಗ ಮಗಳನ್ನು ತರಲು ಮೇಲೆದ್ದೆ. 

“ಮಲಗಿದ್ರೆ ಬಿಡೆ. ಇನ್ನೊಂದ್ಸಲ ಬರ್ತೀನಿ. ಸುಮ್ನೆ ಯಾಕೆ ಎಬ್ಬಿಸ್ತಿ”

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
ನೋಡೋಕೆ. ಇಲ್ದಿರೋ ಕೊಬ್ಬಿನ ಮಾತುಗಳ್ಯಾಕೋ ಎಂದು ಮನಸಲ್ಲೇ ಗೊಣಗಿಕೊಳ್ಳುತ್ತಾ ʼಹಂಗೇನಿಲ್ವೋ. ಇನ್ನೇನು ಇವಳು ಏಳೋ ಹೊತ್ತು. ಏಳದಿದ್ದರೂ ಎಬ್ಬಿಸಬೇಕು, ಇಲ್ಲದಿದ್ದರೆ ರಾತ್ರಿ ಎಲ್ಲಾ ಜಾಗರಣೆ ಆಗಿಬಿಡ್ತದೆʼ ಎಂದು ಹೇಳಿ ನಕ್ಕು ರೂಮಿನ ಕಡೆಗೆ ಹೊರಟೆ. ಅವನ ಮುಖದಲ್ಲೂ ತೆಳುವಾದ ನಗುವಿನ ಅಲೆಯೊಂದಿತ್ತಾ? 

ಮಗಳನ್ನು ಎತ್ತಿ ತಂದು ಅವನ ಪಕ್ಕದಲ್ಲಿದ್ದ ಸೋಫಾದ ಮೇಲೆ ಕುಳಿತೆ. ಇನ್ನೇನು ನನ್ನ ಕೈಯಿಂದ ಮಗುವನ್ನೆತ್ತಿಕೊಂಡು ಮುತ್ತಿಡುತ್ತಾನೆ ಎಂದುಕೊಂಡಿದ್ದೆ. ಕುಳಿತಲ್ಲಿಂದಲೇ ಮಗಳ ಕಡೆಗೆ ನೋಡಿ ಕೆನ್ನೆ ಸವರಿ “ಮುದ್ದಾಗಿದ್ದಾಳೆ” 

ʼಮಕ್ಕಳ್ಯಾವಾಗ್ಲೂ ಮುದ್ದಾಗೇ ಇರ್ತಾರಲ್ಲ. ತಗೊಳ್ಳೋ ಎತ್ಕೋʼ 

“ಅಯ್ಯಪ್ಪ. ಬೇಡ. ಇಷ್ಟು ಚಿಕ್ಕ ಮಗುವನ್ನು ಎತ್ಕೊಳ್ಳೋಕೆ ಭಯವಾಗ್ತದೆ ನಂಗೆ” ಅವನ ಮಾತಿಗೆ ನಾನು ಅಮ್ಮ ಇಬ್ಬರೂ ನಕ್ಕೆವು. 

ʼಅಯ್ಯ ಅದ್ರಲ್ಲೇನೋ ಭಯʼ 

“ಏನೋ ಗೊತ್ತಿಲ್ಲಪ್ಪ. ಮುಂಚಿನಿಂದಾನೂ ಭಯ ನಂಗೆ. ಒಂದಾರ್‌ ತಿಂಗಳೋ ವರ್ಷವೋ ಕಳೆದಿದ್ದರೆ ಎತ್ಕೋಬಹುದು” 

ʼಓಹೋ. ನಾಳೆ ದಿನ ನಿನ್‌ ಮಗೂನು ಎತ್ಕೊಳಲ್ವ ನೋಡ್ತೀನಿ ಬಿಡುʼ ನನಗೆ ಸಿಟ್ಟೇ ಬಂದಿತ್ತು. 

“ಆ ಕಾಲ ಬಂದಾಗ ನೋಡುವ ಬಿಡು. ನಂದೇ ಮಗೂನ ಎತ್ಕೋಳಲ್ಲ ಅಂದ್ರೆ ಹೆಂಡ್ತಿ ಬಿಡ್ತಾಳಾ….” ಅಮ್ಮ ನಕ್ಕರು. ನನಗೆ ನಗು ಬರಲಿಲ್ಲ, ಅಮ್ಮನಿಗೆ ನನ್ನ ಮನದ ಭಾವನೆ ತಿಳೀಬಾರದಲ್ಲ ಎಂದು ನಕ್ಕಂತೆ ಮಾಡಿದೆ. 

ನಮ್ಮ ನಗು ಮಗಳಿಗೆ ಅಪಥ್ಯವಾಯಿತೇನೋ ಎನ್ನುವಂತೆ ಮೆಲ್ಲನೆ ಕಣ್ಣು ತೆರೆದು ಸಾಗರನ ಕಡೆಗೊಮ್ಮೆ ನೋಡಿತು. ಮೂರ್ನಾಲ್ಕು ಬಾರಿ ಕಣ್ಣು ಮಿಟುಕಿಸಿ ನೋಡಿ ಮತ್ತೆ ಕಣ್ಣು ಮುಚ್ಚಿಕೊಂಡಿತು. 

“ಸರಿ. ನಿನ್ನ ಮಗಳಿಗ್ಯಾಕೋ ಭರ್ಜರಿ ನಿದ್ರೆ. ಸುಮ್ನೆ ಏಳಿಸೋದು ಬೇಡ. ನಾನೂ ಹೊರಡ್ತೀನಿ” ಎಂದ. ಅವನನ್ನುಳಿಸಿಕೊಂಡು ಆಡುವ ಮಾತುಗಳೂ ಯಾವುದೂ ಇದ್ದಂತೆ ನನಗೆ ತೋರಲಿಲ್ಲ. 

ʼಸರಿ ಕಣೋʼ ಎಂದೇಳುತ್ತಾ ಮಗಳನ್ನು ಅಮ್ಮನ ಕೈಗೆ ಕೊಟ್ಟೆ. 

“ಸರಿ ಅಮ್ಮ ನಾನಿನ್ನು ಹೊರಡ್ತೀನಿ” ಎಂದು ಅಮ್ಮನಿಗೆ ಹೇಳಿ ಹೊರಟ. ಗೇಟಿನವರೆಗೆ ಸಾಗರನೊಡನೆ ಹೆಜ್ಜೆ ಹಾಕಿದೆ. 

“ಸರಿ ಕಣೇ. ಬರ್ತೀನಿ. ಬಾಯ್.‌ ಟೇಕ್‌ ಕೇರ್‌” ಎಂದವನು ನನ್ನ ಪ್ರತಿಕ್ರಿಯೆಗೆ ಕಾಯದೆ ಗೇಟು ಹಿಂದಕ್ಕಾಕಿ ಹೊರಟುಹೋದ. ಒಂದು ನಿಟ್ಟುಸಿರುಬಿಟ್ಟು ಒಳಬಂದು ಮಗಳ ಹಣೆಗೊಂದು ಮುತ್ತು ಕೊಟ್ಟು ಅವಳ ಪಕ್ಕದಲ್ಲೇ ಮೈಚಾಚಿದೆ. ರಾಜೀವನ ಬೈಕ್‌ ಸದ್ದು ಮಾಡಿತು. ಹಾಲಿನಲ್ಲೇ ಟಿವಿ ಹಾಕಿ ಕುಳಿತವರು ಅಮ್ಮ ಕೊಟ್ಟ ಕಾಫಿ ಕುಡಿದು ಅರ್ಧ ತಾಸಾದರೂ ರೂಮಿನೊಳಗಡೆ ಕಾಲಿಡಲಿಲ್ಲ. ನಂತರ ಬಂದವರು “ಓ! ಮಲಗಿದ್ದೆ ಅಂದ್ಕೊಂಡಿದ್ದೆ” ಎಂದರು. ನನಗಿಷ್ಟೊತ್ತಿನಲ್ಲಿ ನಿದ್ರೆ ಬರುವುದು ಅವರಿಗೆ ತಿಳಿಯದ ಸಂಗತಿಯಾ?! 

ʼಇಲ್ಲ. ಸುಸ್ತು. ಸುಮ್ನೆ ಕಾಲು ಚಾಚಿಕೊಂಡಿದ್ದೆ. ಸಾಗರ ಬಂದಿದ್ದ ಇವತ್ತುʼ 

“ಮ್.‌ ನಾ ರಾತ್ರಿ ಊಟಕ್ಕೆ ಬರೋದಿಲ್ಲ. ಹೊರಗೆ ಕೆಲಸವಿದೆ. ನಿಮ್ಮಮ್ಮನಿಗೆ ಹೇಳಿಬಿಡು” 

ʼನೀವೇ ಹೋಗ್ತಾ ಹೇಳಿ ಹೋಗಿʼ 

“ಅಯ್ಯೋ ನಾ ಹೇಳಿದರೆ ಸುಮ್ನೆ ಎಲ್ಲಿಗೊರಟ್ರಿ. ಬಂದ್‌ ಸ್ವಲ್ಪ ತಿಂದೋಗಬಹುದಿತ್ತಲ್ಲ ಅಂತ ಹತ್ತು ಪ್ರಶ್ನೆ ಕೇಳ್ತಾರೆ. ನೀನೇ ಹೇಳಿಬಿಡು” 

ʼಸರಿʼ 

“ಸರಿ ಹಂಗಾದ್ರೆ ನಾ ಬರ್ತೀನಿ” ಎಂದ್ಹೇಳಿ ಹೊರಟುಬಿಟ್ಟರು. ಮಗಳೆಡೆಗೆ ಒಂದು ಸಲಕ್ಕಾದರೂ ನೋಡೋದು ಬೇಡವಾ? ಎತ್ತಿಕೊಳ್ಳೋದು ಬೇಡವಾ? ಈ ಸಂಪತ್ತಿಗೆಲ್ಲ ಯಾಕ್‌ ಮದ್ವೆಯಾಗ್ತಾರೋ ಜನ. ಹಂಗಂತ ಕೇಳೋ ಹಾಗೂ ಇಲ್ಲ. ನಾನೇನ್‌ ಮಗು ಬೇಕು ಅಂತ ಹೇಳಿದ್ನ, ನೀನೇ ತಾನೇ ಕುಣೀತಿದ್ದವಳು. ಅನುಭವಿಸು ಅನ್ನೋ ಮಾತುಗಳನ್ನೆಲ್ಲ ಕೇಳೋದಕ್ಕಿಂತ ಸುಮ್ಮನಿರೋದು ವಾಸಿ. 

ಈ ಹಾಳ್‌ ಸಾಗರ ನನ್ನ ಮೂಡು ಹಾಳು ಮಾಡಿದ ದಿನವೇ ರಾಜೀವನೂ ಹೀಗೆ ವರ್ತಿಸಬೇಕಾ? ಮಗಳನ್ನು ನೋಡಿ ಸಾಗರ ಹೇಗೆಲ್ಲ ಎಕ್ಸೈಟ್‌ ಆಗಬಹುದೆಂದು ನಿನ್ನೆಯಿಂದ ಕಲ್ಪಿಸಿಕೊಳ್ಳುತ್ತಿದ್ದೆ, ನನ್ನ ಕಲ್ಪನೆಯಲ್ಲಿದ್ದ ಸಾಗರನ ಉತ್ಸಾಹದಲ್ಲಿ ಐದು ಪರ್ಸೆಂಟೂ ಇವತ್ತು ಕಾಣಲಿಲ್ಲ. ಕಾಟಾಚಾರಕ್ಕೆ ಬಂದಂಗಿತ್ತು. ಇವನು ಮಾತ್ರ ನೀನು ಹಂಗೆ ಹಿಂಗೆ, ನಿನ್ ಕ್ಯಾರೆಕ್ಟರ್ರು, ನಿನ್ನ ವರ್ತನೆ ಅಂತ ಸಾವಿರ ಮಾತೇಳ್ತಾನೆ. ಇವತ್‌ ನಾನೂ ಹೇಳಿಬಿಡಬೇಕು ಎಂದುಕೊಳ್ಳುತ್ತಾ ಮೊಬೈಲೆತ್ತಿಕೊಂಡು ʼಸುಮ್ನೆ ಫಾರ್ಮಾಲಿಟೀಗೆ ಕಾಟಾಚಾರಕ್ಕೆ ಬಂದಂಗಿತ್ತುʼ ಎಂದು ಮೆಸೇಜು ಹಾಕಿದೆ. ಗಾಡಿ ಓಡಿಸ್ತಿರ್ತಾನೆ, ಈಗೆಲ್ಲಿ ರಿಪ್ಲೈ ಮಾಡ್ತಾನೆ ಎಂದುಕೊಂಡು ಮೊಬೈಲ್‌ ಬದಿಗಿಡುವುದಕ್ಕೆ ಮುಂಚೆಯೇ ಮೆಸೇಜು ಬಂದ ಸದ್ದಾಯಿತು. 

“ಮ್.‌ ನಾ ಬಂದಿದ್ದು ಫಾರ್ಮಾಲಿಟೀಗೇ ಹೌದು” 

ʼಫಾರ್ಮಲಿಟೀಗೆ ಬರದೇ ಹೋಗಿದ್ರೂ ಆಗಿರೋದು ಇನ್‌ ಫಾರ್ಮಲ್‌ ಸಾಗರ್‌ʼ 

“ಬರೋ ಮನ್ಸು ನಂಗೂ ಇರಲಿಲ್ಲ. ಏನೋ ಒಂದಷ್ಟು ದಿನಕ್ಕಾದ್ರೂ ನಿನ್ನ ಜೊತೆ ಮನಸ್ಸು ಹಂಚಿಕೊಂಡಿದ್ನಲ್ಲ ಅದಿಕ್ಕೆ ಬಂದು ಹೋಗುವ ಅನ್ನಿಸ್ತು ಅಷ್ಟೇ” 

ʼಹೋಗ್ಲಿ. ನಾನ್‌ ಸರಿ ಇಲ್ಲ. ನನ್ನ ಮೇಲೆ ಮುನಿಸು. ತಪ್ಪಿಲ್ಲ. ಮಗಳ ಮೇಲೂ ಮುನಿಸೇಕೆʼ 

“ಅವಳ ಮೇಲೆ ನನಗ್ಯಾಕೆ ಮುನಿಸು?” 

ʼಮತ್ತೆ ಅವಳನ್ನ ಎತ್ತಿಕೊಳ್ಳಲಿಲ್ಲ. ಮುದ್ದಿಸಲಿಲ್ಲ…ʼ 

“ಅಯ್ಯೋ. ನಿಜವಾಗೂ ನನಗೆ ಚಿಕ್ಕ ಮಕ್ಕಳನ್ನ ಎತ್ತಿಕೊಳ್ಳೋಕೆ ಭಯ ಕಣೇ” 

ʼಮ್.‌ ಮತ್ತೆ ನಿನ್‌ ಮಗೂನ್‌ ಎತ್ಕೋತೀನಿ ಅಂತ ಡೈಲಾಗ್‌ ಹೊಡೆದೆʼ 

“ನಿಜ ಅಲ್ವ. ನನ್‌ ಮಗೂನ ಎತ್ಕೊಳ್ಳದೇ ಇರೋಕಾಗ್ತದಾ?” 

ʼಅಂದ್ರೆ ರಾಧಾ ನಿನ್ನ ಮಗಳಲ್ಲʼ 

“ನನ್ನ ಮಗಳೇ ಅಂತ ನೀನು ವಿ ಆರ್‌ ಬ್ಲೆಸ್ಡ್‌ ವಿತ್‌ ಎ ಬೇಬಿ ಗರ್ಲ್‌ - ಧರಣಿ ರಾಜೀವ್‌ ಅಂತ ಕಳಿಸೋವರೆಗೂ ಅಂದುಕೊಂಡಿದ್ದೆ. ಆ ಮೆಸೇಜ್‌ ನೋಡಿದ ಮೇಲೆ ರಾಧ ಯಾರ ಮಗಳು ಅಂತ ಗೊತ್ತಾಯ್ತಲ್ಲ" 

ʼಅವತ್‌ ನಂಗೆ ಬೇರೆ ಮೆಸೇಜು ಟೈಪ್‌ ಮಾಡಿ ಕಳಿಸುವಷ್ಟು ತ್ರಾಣವಿರಲಿಲ್ಲʼ 

“ನೀ ನನಗೆ ವಾರವಲ್ಲ ಹತ್ತು ದಿನದ ಮೇಲೆ ಮೆಸೇಜು ಮಾಡಿ ಕಳಿಸಿದ್ದರೂ ನನಗೇನೂ ಬೇಸರವಿರಲಿಲ್ಲ. ಡೆಲಿವರಿ ಯಾವತ್ತಾಗುತ್ತೆ ಅಂತ ನನಗೆ ಗೊತ್ತೇ ಇತ್ತಲ್ಲ, ನನ್ನ ಪಾಡಿಗೆ ನಾ ಬರ್ತಿದ್ದೆ ಆಸ್ಪತ್ರೆಗೆ. ಎಲ್ರಿಗೂ ಕಳಿಸೋ ಮೆಸೇಜನ್ನ ನನಗೂ ಕಳಿಸಿಬಿಡಬೇಡ ಅಂತ ಬಾಯಿಬಿಟ್ಟು ಬೇರೆ ಹೇಳಿದ್ದೆ ನಿನಗೆ…..ಹೋಗ್ಲಿ ಬಿಡು. ನಿನ್ನ ಜೀವನದಲ್ಲಿ ನನ್ನ ಸ್ಥಾನ ಏನು ಅಂತ ತಿಳಿಸಿಕೊಟ್ಟಿದ್ದಿ. ಥ್ಯಾಂಕ್ಸ್”‌ 

ʼನನ್ನ ಪರಿಸ್ಥಿತಿ ನಿನಗೆ ಅರ್ಥವಾಗದಿದ್ದರೆ ನಾನಾದ್ರೂ ಇನ್ನೇನೋ ಹೇಳಲಿʼ 

“ನಿನ್ನ ಪರಿಸ್ಥಿತಿಯನ್ನು ಮಾತ್ರ ಎಲ್ಲರೂ ಅರ್ಥ ಮಾಡ್ಕೋಬೇಕು…ನೀ ಮಾತ್ರ ಯಾರ ಮನಸ್ಥಿತಿಯನ್ನೂ ಅರ್ಥ ಮಾಡ್ಕೊಳ್ಳೋ ಪ್ರಯತ್ನ ಕೂಡ ಮಾಡದೆ ಇದ್ದುಬಿಡು” 

ʼಮ್.‌ ನಾನೇ ಸರಿ ಇಲ್ವೇನೋ ಅಷ್ಟೇ ಬಿಡುʼ 

“ಸರಿ ತಪ್ಪಿನ ಪ್ರಶ್ನೆ ಅಲ್ವೆ…..ಹೋಗ್ಲಿ ಬಿಡು. ಮಗು ನೋಡ್ಕಂಡು ನೀನು ಸುಸ್ತಾಗಿರ್ತಿ. 
* * *
ನೋಡ್ತಾ ನೋಡ್ತಾ ಮೂರು ತಿಂಗಳು ಕಳೆದುಹೋಗಿದ್ದೇ ತಿಳಿಯಲಿಲ್ಲ. ಮಗಳ ದೇಕರೇಖಿ ನೋಡಿಕೊಳ್ಳುವಾಗ, ಅವಳ ಮೊದಲ ನಗು ಕಾಣ್ವಾಗ, ನನ್ನ ದನಿಯನ್ನು ನನ್ನಿರುವಿಕೆಯನ್ನು ಗುರುತಿಸಿ ಅವಳ ಮುಖಭಾವದಲ್ಲಾಗುವ ಬದಲಾವಣೆಗಳನ್ನು ಕಂಡು ಪುಳಕಗೊಳ್ಳುವಾಗ ಸಮಯದ ಲೆಕ್ಕವಿಡಲು ಸಾಧ್ಯವೇ? ಸಾಧುವೇ? ಎರಡು ತಿಂಗಳು ಕಳೆದ ಮೇಲೆ ರಾಧಳ ನಿದ್ರೆಯ ದಿನಚರಿಯಲ್ಲಿ ನನಗನುಕೂಲವಾಗುವಂತ ಬದಲಾವಣೆಗಳಾಗಿದ್ದವು, ನಿಧಾನಕ್ಕೆ. ಬೆಳಗಿನ ನಿದ್ರೆ ಕಡಿತವಾಗಿ ರಾತ್ರಿ ಸಮಯದಲ್ಲಿ ಮುಂಚಿಗಿಂತ ಹೆಚ್ಚು ಮಲಗುತ್ತಿದ್ದಳು. ಮೊದಲೆರಡು ತಿಂಗಳಿದ್ದ ಜಡತ್ವ, ಸುಸ್ತೆಲ್ಲ ಕಡಿಮೆಯಾಗಿ ಮುಂಚಿನ ಲವಲವಿಕೆ ನನ್ನಲ್ಲಿ ಮನೆಮಾಡಿತು. ಮೂರು ತಿಂಗಳು ಮುಗಿದದ್ದೇ ನೆಪವೆಂಬಂತೆ ಆಸ್ಪತ್ರೆಯಿಂದ ಫೋನು ಬಂದಿತ್ತು. ಕಾರ್ಪೋರೇಟ್‌ ಆಸ್ಪತ್ರೆಯಲ್ಲವೇ, ಮಾತೆಲ್ಲ ಬೆಣ್ಣೆಯಿಂದ ಕೂದಲು ತೆಗೆಯುವಷ್ಟು ನಯವಾಗಿರ್ತವೆ. ಆ ಕೂದಲೆಳೆಯೇ ಕುಯ್ದಾಕುವಷ್ಟು ಹರಿತವಾಗಿರ್ತದೆ. “ಆರ್‌ ತಿಂಗಳು ಕೂಡ ನೀವು ಬರದೇ ಉಳೀಬೋದಿತ್ತು, ಇಲ್ಲಿ ಸ್ಥಾಫ್‌ ಆಗಿದ್ದರೆ. ಆದರೆ ನೀವೀಗ ಡಿ.ಎನ್.ಬಿ ಸ್ಟೂಡೆಂಟ್‌ ಅಲ್ವ. ಅಂದ್ರೂ ಮೂರು ತಿಂಗಳಿಗೇ ವಾಪಸ್ಸಾಗಿಬಿಡಿ ಅಂತೆಲ್ಲ ಹೇಳೋದು ಸರಿಯಲ್ಲ ಅಂತ ನಮಗೂ ಗೊತ್ತು. ಬಟ್ ಸ್ಟಿಲ್‌ ನಿಮ್ಮ ಒಳ್ಳೆಯದಕ್ಕೇ ಹೇಳ್ತಿರೋದಲ್ವ. ಈಗ ನೀವು ವಾಪಸ್ಸಾದ್ರೆ ಮುಂದೆ ಸರೀ ಸಮಯಕ್ಕೆ ಪರೀಕ್ಷೆ ಬರೆಯಬಹುದು. You will not lose an academic year. Of course ಇನ್‌ ಮುಂದೆ ನೀವು ರಜೆಗಳನ್ನಾಕಬಾರದು ಅಷ್ಟೇ, ಅಪರೂಪಕ್ಕೊಂದೊಂದು ಪರ್ಮಿಷನ್‌ ಅಥವಾ ಸಿಕ್‌ ಲೀವ್‌ ಬಿಟ್ಟರೆ. ನೋಡಿ ಯೋಚ್ನೆ ಮಾಡಿ. ಮತ್ತೆ ಮಗು ಚೆನ್ನಾಗಿದೆಯಾ?” ಎಂದು ಕೇಳಿ ಎರಡು ದಿನದಲ್ಲಿ ಡ್ಯೂಟಿಗೆ ರಿಪೋರ್ಟ್‌ ಆಗುವಂತೆ ತಿಳಿಸಿದ್ದರು. ಅವರು ಹೇಳಿದ್ದರಲ್ಲೇನೋ ಸತ್ಯವೇ ಇತ್ತು. ಇನ್ನು ಮೂರು ತಿಂಗಳು ರಜೆ ಹಾಕಿದರೆ ಸುಖಾಸುಮ್ಮನೆ ಒಂದು ವರ್ಷ ದಂಡವಾಗ್ತದೆ. ನನ್ನ ಮೇಲಿನ ಕಾಳಜಿಯಿಂದೇನೂ ಅವರು ಫೋನ್‌ ಮಾಡಿರಲಿಲ್ಲ ಎನ್ನುವುದೂ ಸತ್ಯವೇ! ಡಿ.ಎನ್.ಬಿ ಸ್ಟೂಡೆಂಟ್ಸು ಕಡಿಮೆ ಸ್ಟೈಪೆಂಡಿಗೆ ಜಾಸ್ತಿ ಕೆಲಸ ಮಾಡ್ತಾರೆ. ನಾವ್‌ ಕಡಿಮೆ ಇದ್ರೆ ಇನ್ನೂ ಹೆಚ್ಚು ಹಣ ತೆತ್ತು ವೈದ್ಯರನ್ನು ನೇಮಿಸಿಕೊಳ್ಳಬೇಕು. ಅವರತ್ರ ನಮ್ಮ ಬಳಿ ತೆಗೆಸಿಕೊಂಡಷ್ಟು ಕೆಲಸ ಮಾಡಿಸಿಕೊಳ್ಳುವುದಕ್ಕಾಗುವುದಿಲ್ಲವಲ್ಲ! ಹಂಗಾಗಿ ಫೋನು ಮಾಡಿ ನನ್ನ ಬಗ್ಗೆ ಅಪಾರ ಕಾಳಜಿ ಇರುವವರಂತೆ ತುಪ್ಪ ಸುರಿಸಿದ್ದು. 

ನನ್ನ ಕೆರಿಯರ್‌ನಲ್ಲಿ ಒಂದು ವರ್ಷ ಉಳಿಸುವ ಸಲುವಾಗಿ ಮೂರು ತಿಂಗಳ ಎಳೆಕೂಸನ್ನು ಮನೆಯಲ್ಲಿ ಬಿಟ್ಟು ಹೋಗುವುದು ನನಗ್ಯಾಕೋ ಸರಿ ಕಾಣಲಿಲ್ಲ. ಆರು ತಿಂಗಳು ಕಳೆದರೆ ಮೇಲೂಟ ಕೊಡುವುದು ಶುರುವಾಗಿರುತ್ತದೆ. ಈಗಲೇ ಬಿಟ್ಟು ಹೊರಟರೆ ಎದೆಹಾಲನ್ನು ತೆಗೆದಿಟ್ಟು ಹೋಗಬೇಕು. ಅದಾದರೂ ಮಗಳಿಗೆ ಸಾಲ್ತದೋ ಇಲ್ಲವೋ? ಕಷ್ಟಪಟ್ಟು ಹುಟ್ಟಿದ ಮಗು. ಮಗುವಿಗೆ ಕೊರತೆಯಾಗುವುದು ಬೇಡ, ಒಂದ್‌ ವರ್ಷ ತಡವಾಗಿ ಡಿ.ಎನ್.ಬಿ ಮುಗಿಸಿದರೆ ಮುಳುಗಿಹೋಗುವುದೇನೂ ಇಲ್ಲವಲ್ಲ ಎಂದು ನಿರ್ಧರಿಸಿದೆ. ಅಪ್ಪ ಅಮ್ಮನೂ ನನ್ನ ಮಾತಿಗೆ ಸಹಮತ ವ್ಯಕ್ತಪಡಿಸಿದರು. ಅಡ್ಡಬಾಯಿ ಹಾಕಿದ್ದು ರಾತ್ರಿ ಊಟಕ್ಕೆಂದು ಬಂದ ರಾಜೀವ. ಹಿಂಗಿಗಾಯ್ತು, ಒಂದ್‌ ವರ್ಷ ಹೋದರೆ ಹೋಗಲಿ ಅಂತ ಅಂದ್ಕೊಂಡಿದ್ದೀನಿ ಎಂದಿದ್ದಕ್ಕೆ ಮುಖ ಸಣ್ಣದು ಮಾಡಿಕೊಂಡರು. ನನ್ನ ನಿರ್ಧಾರ ಅವರಿಗೆ ಮೆಚ್ಚಿಗೆಯಾಗಿಲ್ಲ ಎಂದರಿವಾಯಿತು. ನನ್ನ ಯಾವ ನಿರ್ಧಾರ ತಾನೇ ಅವರಿಗೆ ಮೆಚ್ಚುಗೆಯಾಗಿದೆ? ನಾನು ಫಸ್ಟ್‌ ಹೆಲ್ತ್‌ ಆಸ್ಪತ್ರೆಯಲ್ಲಿರೋದು, ನಾನು ಡಿ.ಎನ್.ಬಿ ತೆಗೆದುಕೊಂಡಿದ್ದು, ಮಗುವಿಗಾಗಿ ಟ್ರೀಟ್ಮೆಂಟ್‌ ತೆಗೆದುಕೊಂಡಿದ್ದು, ಅಮ್ಮನ ಮನೆಗೆ ಹತ್ತಿರದಲ್ಲಿ ಮನೆ ಮಾಡಿದ್ಯಾವುದೂ ಅವರಿಗೆ ಇಷ್ಟವಾಗಿಲ್ಲ. ಇನ್ನು ಈ ನಿರ್ಧಾರ ಅವರಿಗೆ ಇಷ್ಟವಾಗ್ತದೆ ಅಂತ ನಿರೀಕ್ಷೆ ಮಾಡಿದ್ದು ನನ್ನದೇ ತಪ್ಪು. ಊಟವಾದ ಮೇಲೆ ರೂಮಿಗೆ ಬಂದರು. ಮಗುವಿಗೆ ಹಾಲುಣಿಸುತ್ತಿದ್ದೆ. “ನಂಗೇನೋ ನೀ ಈಗ್ಲೇ ಹೋಗೋದೆ ಸರಿ ಅನ್ನಿಸ್ತದೆ” 

ʼಮಗು ಇನ್ನೂ ಚಿಕ್ಕದಲ್ವಾ?ʼ 

“ಒಳ್ಳೇ ಕತೆ ನಿಂದು. ಅನಾಥ ಮಕ್ಕಳೇನೂ ಬೆಳೆಯೋದೆ ಇಲ್ವಾ? ಹೆಂಗೋ ಬೆಳ್ಕೋತಾಳೆ ಬಿಡು. ನಿಮ್ಮಪ್ಪ ಅಮ್ಮ ಇದಾರಲ್ಲ ನೋಡ್ಕೋಳೋಕೆ” 

ನೋವಾಯಿತು ಅವರ ಮಾತುಗಳನ್ನ ಕೇಳಿ. ʼಮೊದಲನೆಯಾದಾಗಿ ರಾಧ ಅನಾಥೆಯಲ್ಲ. ಇವಳು ನಮ್ಮ ಮಗಳೇ ಹೊರತು ನಮ್ಮಪ್ಪ ಅಮ್ಮನ ಮಗಳಲ್ಲʼ 

“ಅವರಿಗೂ ಮೊಮ್ಮಗಳೇ ತಾನೇ. ನೋಡ್ಕೊಳ್ಳೋದು ಅವರ ಕರ್ತವ್ಯವೂ ಹೌದಲ್ಲ” 

ʼಅವರ ಕರ್ತವ್ಯ ಅವರು ಸರಿಯಾಗೇ ನಿರ್ವಹಿಸ್ತಿದ್ದಾರೆ. ನೀವೇ ಅಪ್ಪನ ಕರ್ತವ್ಯವನ್ನು ನಿಭಾಯಿಸದೇ ಬೇಜವಾಬ್ದಾರಿಯಾಗಿರೋದುʼ 

“ತಗ್ದು ಬಾರಿಸಿಬಿಟ್ತೀನಿ. ನಾನೇಳಿದ್ನ ಮಗು ಬೇಕು ಅಂತ. ಮಗು ಮಗು ಅಂತ ಕುಣಿದೋಳು ನೀನು, ನಾನಲ್ಲ. ಆ ಪಾಪಿ ಪಿಂಡ ನಿನ್ದು ನನ್ನದಲ್ಲ” 

ʼಥೂ ಥೂ ಅಸಹ್ಯ ಮಾತಾಡ್ತೀರಲ್ರೀʼ ಎಂದ್ಹೇಳುವಷ್ಟರಲ್ಲಿ ಕಣ್ಣೀರು ಧಾರೆಯಾಗಿಳಿಯುತ್ತಿತ್ತು. ಅವರಿಗೂ ಕರುಳು ಚುರುಕ್ಕೆಂದಿರಬೇಕು. 

“ಸಾರಿ” ಎಂದೇಳುತ್ತಾ ಮಗಳನ್ನೆತ್ತಿಕೊಂಡರು. “ನಿನ್ನ ಮೇಲಿನ ಕೋಪಕ್ಕೆ ಮಗಳನ್ನು ಬಯ್ದುಬಿಟ್ಟೆ. ಸಾರಿ ಮಗಳೇ” ಎನ್ನುತ್ತಾ ಅವಳ ಹಣೆಗೊಂದು ಮುತ್ತು ಕೊಟ್ಟರು. ಮಗಳನ್ನೆತ್ತಿಕೊಂಡು ಎಷ್ಟು ವಾರಗಳಾಗಿತ್ತು ಎಂದು ಲೆಕ್ಕ ಹಾಕಿದೆ. ಲೆಕ್ಕ ಹಾಕಲಾಗದಷ್ಟು ನೆನಪಿಗೆ ಬರದಷ್ಟು ದೂರದ ಮಾತದು. 

“ಸಾರಿ ಧರು. ಏನೋ ಕೆಲಸದ ಟೆನ್ಶನ್ನು. ಒಳ್ಳೆ ಕೆಲಸ ಸಿಗಲಿಲ್ಲ ಅನ್ನೋ ಟೆನ್ಶನ್ನು. ಮಾವನ ಮನೆಯಲ್ಲಿ ಬಿಟ್ಟಿ ಊಟ ಮಾಡ್ತೀನಲ್ಲ ಅನ್ನೋ ಬೇಸರ. ನೀನು ಡಿ.ಎನ್.ಬಿಗೆ ಸೇರಿ ನಿನ್ನ ಸಂಬಳವೂ ಕಡಿಮೆಯಾಗಿ ಹೋಯಿತಲ್ಲ ಅನ್ನೋ ಸಿಟ್ಟು. ನನ್ನ ಕಲ್ಪನೆಯಂತೆ ಬದುಕಲಾಗುತ್ತಿಲ್ಲವಲ್ಲ ಅನ್ನೋ ಕಳವಳ. ಇದರ ಮಧ್ಯೆ ನೀನು ಡಿ.ಎನ್.ಬಿ ತಡವಾಗಿ ಮುಗಿಸ್ತೀನಿ ಅಂದ್ಯಲ್ಲ ಅಲ್ಲಿಯವರೆಗೂ ಕಡಿಮೆ ಹಣದಲ್ಲಿ ಜೀವಿಸಬೇಕಲ್ಲಾ ಅನ್ನುವುದನ್ನು ನೆನಪಿಸಿಕೊಂಡು ಸಿಟ್ಟಾದೆ. ಸಾರಿ” 

ʼಹೋಗ್ಲಿ ಬಿಡಿ. ಅದೆಷ್ಟು ಸಲ ಸಾರಿ ಕೇಳ್ತೀರ. ನಂಗೇನು ಒಂದು ವರ್ಷ ಕಳ್ಕೋಳ್ಳೋಕೆ ಆಸೆಯಾ? ಇಲ್ಲ. ಆದರೂ ಮಗಳ ಆರೋಗ್ಯ ಮುಖ್ಯವಲ್ಲವಾ ಅಂತ ಅಂದ್ಕಂಡಿದ್ದೆ. ನೋಡುವಾ. ನಾಳೆ ನಮ್ಮ ಡಿಪಾರ್ಟ್‌ಮೆಂಟ್‌ ಹೆಡ್‌ ಜೊತೆ ಮಾತಾಡ್ತೀನಿ. ಏನ್‌ ಹೇಳ್ತಾರೋ ನೋಡೋಣʼ ಎಂದ ಮೇಲಷ್ಟೇ ರಾಜೀವನ ಮುಖದಲ್ಲೊಂದಷ್ಟು ನಗು ಮೂಡಿದ್ದು. ನಾನು ದುಡ್ಡಿರೋ ಎಟಿಎಂ ಮಿಷೀನ್‌ ಥರ ಕಾಣ್ತೀನಲ್ವಾ ಇವರಿಗೆ ಎಂಬ್ಯೋಚನೆ ಮೂಡಿ ನಾನೂ ನಕ್ಕೆ. 

ಮರುದಿನ ಬೆಳಿಗ್ಗೆಯೇ ಪಿಡೀಯಾಟ್ರಿಕ್ಸ್‌ ಹೆಡ್‌ ಡಾಕ್ಟರ್‌ ನವೀನ್‌ ಸರ್‌ಗೆ ಫೋನು ಮಾಡಿದೆ. ಹಿಂಗಿಂಗೆ ಸರ್‌ ಆಸ್ಪತ್ರೆಯವರು ಫೋನ್‌ ಮಾಡಿದ್ದರು ಏನ್‌ ಮಾಡೋದು ಗೊತ್ತಾಗ್ತಿಲ್ಲ, ಮಗು ಬೇರೆ ಚಿಕ್ಕದು ಎಂದೆ. 

“ಸುಮ್ನೆ ಯಾಕಮ್ಮ ಒಂದ್ವರ್ಷ ಕಳ್ಕೋತಿ? ಬಂದ್‌ ಬಿಡು. ಮೈಸೂರಲ್ಲೇನು ಒಂದ್‌ ಮೂಲೆಯಿಂದ ಇನ್ನೊಂದು ಮೂಲೆಗೆ ಕಾಲು ಘಂಟೇಲಿ ಹೋಗಿಬಿಡಬಹುದು. ಮಧ್ಯದಲ್ಲಿ ಒಂದ್‌ ಸಲಾನೋ ಬೇಕು ಅಂದ್ರೆ ಎರಡು ಸಲಾನೋ ಹೋಗಿ ಫೀಡ್‌ ಮಾಡಿ ಬರುವಂತೆ. ಆದ್ರೆ ಒಂದ್‌ ವಿಷಯ. ನೈಟ್‌ ಡ್ಯೂಟೀನಾ ಮಾತ್ರ ರೋಸ್ಟರ್‌ ಪ್ರಕಾರಾನೇ ಹಾಕಬೇಕಾಗುತ್ತದೆ. ನಿನ್ನ ಕೊಲೀಗ್ಸ್‌ ಜೊತೆ ಮಾತಾಡ್ಕಂಡು ಡ್ಯೂಟಿ ಬದಲಿಸಿಕೊಳ್ಳೋದು ನಿನ್ನ ಜವಾಬ್ದಾರಿ. ಇನ್ನೊಂದೆರಡು ತಿಂಗಳು ನಿನ್ನ ನೈಟ್‌ ಡ್ಯೂಟಿ ಅವರು ಮಾಡಿಕೊಡುವಂತೆ ಕೇಳ್ಕೊ. ನಂತರ ಅವರ ಡ್ಯೂಟಿ ನೀ ಮಾಡಿಕೊಟ್ಟರಾಯಿತು. ನಮ್ಮಲ್ಲೇನು ಎಲ್ಲಾ ಒಳ್ಳೇ ಸ್ಟೂಡೆಂಟ್ಸೇ ಇದ್ದೀರಿ. ಎಲ್ರೂ ಒಪ್ಕೋತಾರೆ ಅಂದ್ಕೋತೀನಿ” ಸರ್‌ ಮಾತು ಕೇಳಿದ ಮೇಲೆ ಹೌದಲ್ಲ, ಸೇರಿಬಿಡೋದೆ ಒಳ್ಳೇದು ಅನ್ನಿಸ್ತು. ಸುಖಾಸುಮ್ಮನೆ ಯಾಕೆ ಒಂದ್‌ ವರ್ಷ ಕಳ್ಕೊಳ್ಳೋದು. ಅಪ್ಪ ಡ್ಯೂಟಿಗೆ ಹೋಗಿದ್ದರು. ಅಮ್ಮನಿಗೆ ವಿಷಯ ತಿಳಿಸಿದೆ. “ಏನೋ ನೋಡಮ್ಮ. ತಿಳಿದೋರು ನೀವು. ನಿನ್ನನುಕೂಲದಂತೆ ಮಾಡು. ಇದ್ದೀನಲ್ಲ ನಾನು ನೋಡಿಕೊಳ್ಳೋಕೆ. ನೋಡ್ಕೋತೀನಿ. ನಾಳೆ ಮಗು ವೀಕ್‌ ಆಯ್ತು ಹುಷಾರ್‌ ತಪ್ಪಿತು ಅಂದ್ರೆ ನನ್ನನ್ನು ದೂರಬೇಡ ಅಷ್ಟೇ" ಎಂದು ಹೇಳಿದವರ ದನಿಯಲ್ಲಿ ಸಿಡಿಮಿಡಿಯಿತ್ತು. ಬೆಳಿಗ್ಗೆಯಿಂದ ಸಂಜೆಯವರೆಗೂ ನಾನೊಬ್ಳೇ ಮಗುವನ್ನು ನೋಡಿಕೊಂಡು ತ್ರಾಸು ಪಡಬೇಕಲ್ಲ ಅನ್ನೋ ಕಾರಣಕ್ಕೆ ಮೂಡಿದ ಸಿಡಿಮಿಡಿಯದು.

ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ. 
ಮುಂದುವರೆಯುವುದು...

No comments:

Post a Comment