Oct 2, 2019

ಬಲಾಡ್ಯ ರಾಜಕೀಯ ಶಕ್ತಿಯಾಗಬೇಕಿರುವ ಕನ್ನಡ ಭಾಷಿಕ ಸಮುದಾಯ

ಕು.ಸ.ಮಧುಸೂದನ ರಂಗೇನಹಳ್ಳಿ 
ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಮೇಯರ್ ಸ್ಥಾನ ಕನ್ನಡೇತರರ ಪಾಲಾಗಿರುವ ಹಿನ್ನೆಲೆಯಲ್ಲಿ ‘ಕನ್ನಡಿಗ’ರೆಂದರೆ ಯಾರು? ಕನ್ನಡಿಗ ಎಂದು ಹೇಳಲು ಇರುವ ಮಾನದಂಡವೇನು ಎಂಬುದರ ಬಗ್ಗೆ ಬಿಸಿಬಿಸಿ ಚರ್ಚೆಗಳು ನಡೆಯುತ್ತಿರುವ ಈ ಸನ್ನಿವೇಶದಲ್ಲಿಯೇ ಕನ್ನಡ ಭಾಷಿಕ ಜನಾಂಗ ತನ್ನನ್ನು ತಾನು ಆಳಿಕೊಳ್ಳಲು ಸಶಕ್ತವಾಗಿದೆಯೇ ಮತ್ತು ಅದಕ್ಕೆ ಬೇಕಾಗಿರುವುದು ಏನು ಎಂಬುದರ ಬಗ್ಗೆ ಒಂದಿಷ್ಟು ಚಿಂತನೆ ಮಾಡಬೇಕಾದ ಅನಿವಾರ್ಯತೆ ಬಂದೊದಗಿದೆ 

ನಿಜವಾದ ಅರ್ಥದಲ್ಲಿ ಇವತ್ತು ಕನ್ನಡ ಚಳುವಳಿಗಳು ಸಂಪೂರ್ಣವಾಗಿ ಸ್ಥಗಿತಗೊಂಡಂತೆ ಕಾಣುತ್ತಿವೆ. ಇಂತಹ ಚಳುವಳಿಗಳ ಆತ್ಮವಾಗಿರಬೇಕಾಗಿದ್ದ ಅಕ್ಷರಸ್ಥ ಮದ್ಯಮವರ್ಗ ಸ್ವತ: ಜಡಗೊಂಡಿರುವ ಈ ಸನ್ನಿವೇಶದಲ್ಲಿ ನಮ್ಮ ಕನ್ನಡ ಚಳುವಳಿ ಸಹ ನಿಸ್ತೇಜಗೊಂಡಂತೆ ನಮಗೆ ಭಾಸವಾಗುತ್ತಿದ್ದರೆ ಅಚ್ಚರಿಯೇನಲ್ಲ. ಇಂತಹ ನಿರಾಶಾದಾಯಕ ಸನ್ನಿವೇಶದಲ್ಲಿಯೂ ಕನ್ನಡ ಚಳುವಳಿಯ ಕುರಿತು ಒಂದಿಷ್ಟು ಆಶಾಬಾವನೆ ಒಡಮೂಡಿದ್ದು ಕೆಲವರ್ಷಗಳ ಹಿಂದೆ ನಡೆದ ಕಳಸಾ ಬಂಡೂರಿ ಮತ್ತು ಕಾವೇರಿ ನದಿ ನೀರಿನ ಹಂಚಿಕೆಯ ವಿವಾದಗಳ ಬಗ್ಗೆ ನಡೆದ ಹೋರಾಟದ ಕ್ಷಣದಲ್ಲಿ ಮಾತ್ರ. 

ಹಾಗೆ ನೋಡಿದರೆ ನಾವು ಕನ್ನಡ ಚಳುವಳಿಯ ಒಟ್ಟು ಅರ್ಥವನ್ನೇ ಸಂಕುಚಿತಗೊಳಿಸಿ ನೋಡುವ ವಿಷಯದಲ್ಲಿಯೇ ಎಡವಿದ್ದೇವೆ. ಯಾಕೆಂದರೆ ಕನ್ನಡ ಚಳುವಳಿ ಎಂದರೆ ಅದು ಕೇವಲ ಕನ್ನಡ ಬಾಷೆಗೆ ಸೀಮಿತವಲ್ಲ. ಬದಲಿಗೆ ಕರ್ನಾಟಕದ ನೆಲ, ಜಲ, ಬಾಷೆ, ನೈಸರ್ಗಿಕ ಸಂಪನ್ಮೂಲಗಳೂ ಸೇರಿದಂತೆ ಒಟ್ಟು ಕನ್ನಡ ನಾಡಿನ ಚಳುವಳಿಯೇ ನಿಜವಾದ ಕನ್ನಡ ಚಳುವಳಿ! ಆದರೆ ಇದುವರೆಗು ನಡೆದ ಕನ್ನಡ ಚಳುವಳಿಗಳು ಕೇವಲ ಬಾಷಿಕ ಚಳುವಳಿಗಳಾಗಿ: ಆಡಳಿತ ಬಾಷೆ ಕನ್ನಡವಾಗಬೇಕು, ಕನ್ನಡ ಮಾದ್ಯಮದಲ್ಲಿ ಶಿಕ್ಷಣ ನೀಡಬೇಕು, ನಾಮಫಲಕಗಳು ಕನ್ನಡದಲ್ಲಿ ಇರಬೇಕೆಂಬ ಬೇಡಿಕೆಗಳಿಗೆ ಮಾತ್ರ ಸೀಮಿತವಾಗಿ ನಡೆಯುತ್ತ ಬಂದಿವೆ. ಇಂತಹ ಏಕಮುಖ ಚಳುವಳಿಯ ಅಪಾಯವೆಂದರೆ ಕನ್ನಡ ಚಳುವಳಿ ಏಕಾಕಿಯಾಗಿ ಉಳಿದುಬಿಡುವುದು ಮತ್ತು ಕನ್ನಡದ ನೆಲ, ಜಲ, ಸಂಪನ್ಮೂಲಗಳ ವಿಷಯ ತನಗೆ ಸಂಬಂದಿಸಿದ್ದಲ್ಲವೆಂಬ ಅಭಿಪ್ರಾಯ ಬೆಳೆಸಿಕೊಂಡು ಬಿಡುವುದಾಗಿದೆ. ಹೀಗಾದಾಗ ಇಡಿ ಕನ್ನಡ ಚಳುವಳಿ ಕೇವಲ ಭಾಷಾ ದುರಭಿಮಾನದ ಸಂಕೇತವಾಗಿ ಮಾತ್ರ ಉಳಿದು ಬಿಡುವ ಅಪಾಯವಿದೆ. 

ಅದರಲ್ಲು ಇವತ್ತಿನ ಜಾಗತೀಕರಣ ನಮ್ಮ ಸ್ಥಳೀಯ ಸಂಪನ್ಮೂಲಗಳನ್ನು ರಾಕ್ಷಸ ರೀತಿಯಲ್ಲಿ ನುಂಗುತ್ತ, ನಮ್ಮೊಳಗೆ ಕೊಳ್ಳುಬಾಕತನವನ್ನು ಸೃಷ್ಠಿಸಿ, ನಮ್ಮ ಪ್ರಾದೇಶಿಕ ಬಾಷೆ, ಸಂಸ್ಕೃತಿ, ಜನಪದ ಪರಂಪರೆಗಳನ್ನೆಲ್ಲ ನಾಶ ಮಾಡುತ್ತ ಹೋಗುತ್ತಿರುವ ಈ ದಿನಗಳಲ್ಲಿ ಕನ್ನಡ ಚಳುವಳಿ ತನ್ನ ಮಿತಿಯನ್ನು ಮೀರಿ ಬೆಳೆಯಬೇಕಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಖಾಸಗಿ ಬಂಡವಾಳಶಾಹಿ ಶಕ್ತಿಗಳು ದೈತ್ಯಾಕಾರವಾಗಿ ಬೆಳೆಯುತ್ತ ನಮ್ಮ ಬಹುಮುಖಿ ಸಂಸ್ಕೃತಿಯನ್ನು ಏಕರೂಪಿ ಸಂಸ್ಕೃತಿಯಾಗಿ ಬದಲಾಯಿಸ ಹೊರಟಿರುವ ಸಂಕೀರ್ಣ ಸನ್ನಿವೇಶದಲ್ಲಿ ಕನ್ನಡ ಚಳುವಳಿ ಎನ್ನುವುದು ಏಕಾಂಗಿಯಾಗಿ ನಿಲ್ಲದೆ ಉಳಿದೆಲ್ಲ ಚಳುವಳಿಗಳ ಜೊತೆ ಬೆರೆತು ಹೋರಾಡಿದರೆ ಮಾತ್ರ ಕನ್ನಡ ಚಳುವಳಿ ಕನ್ನಡ ಬಾಷಿಕ ಸಮುದಾಯದ ಚಳುವಳಿಯಾಗಿ ಗುರುತಿಸಿ ಕೊಳ್ಳಬಹುದು. ಅದು ನಮ್ಮ ನೆಲಜಲಗಳನ್ನು ಸಂರಕ್ಷಿಸಿಕೊಳ್ಳುವ ವಿಚಾರವಿರಲಿ, ರೈತರ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವುದಿರಲಿ, ದಲಿತ ಮತ್ತಿತರ ಹಿಂದುಳಿದ ಜಾತಿಗಳ ಹಕ್ಕುಗಳನ್ನು ಕಾಪಾಡುವುದಿರಲಿ, ಶಿಕ್ಷಣದಲ್ಲಿ ಕನ್ನಡವೇ ಪ್ರಧಾನ ಭಾಷೆಯಾಗುವ ವಿಚಾರವಿರಲಿ, ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ನೀಡುವ ವಿಚಾರವೇ ಆಗಿರಲಿ, ಇವೆಲ್ಲವೂ ಕನ್ನಡದ ಚಳುವಳಿ ಎಂಬ ಬಾವನೆ ಮೂಡಿದಾಗ ಮಾತ್ರ ಅಂತಹ ಚಳುವಳಿಗೆ ನಿಜವಾದ ಬಲ ಬರುತ್ತದೆ. ಕರ್ನಾಟಕದ ಮಟ್ಟಿಗೆ ಕನ್ನಡವೆಂದರೆ ಕೇವಲ ಬಾಷೆ ಮಾತ್ರವಲ್ಲ ಎಂಬುದನ್ನು ನಾವುಗಳು ಅರ್ಥಮಾಡಿಕೊಳ್ಳಬೇಕಿದೆ. 

ಕರ್ನಾಟಕದ ಎಲ್ಲ ಸಮಸ್ಯೆಗಳು ಕನ್ನಡದ ಸಮಸ್ಯೆಗಳೇ ಎಂಬ ಆರೋಗ್ಯಕಾರಿ ಮನೋಭಾವ ರೂಪುಗೊಂಡಾಗ ಮಾತ್ರ ನಾವು ಒಳಗಿನ ಮತ್ತು ಹೊರಗಿನ ಅನ್ಯ ಸಂಸ್ಕೃತಿಗಳ ಎದುರು ಹೋರಾಡಬಲ್ಲಂತಹ ಕಸುವು ಪಡೆಯಬಹುದಾಗಿದೆ. ಇಂತಹದೊಂದು ಚಳುವಳಿಯನ್ನು ರೂಪಿಸಲು ನಮಗೆ ಸಾದ್ಯವಾದಾಗ ಮಾತ್ರ ಕರ್ನಾಟಕ ತನ್ನ ಹಕ್ಕುಗಳಿಗಾಗಿ ಇನ್ನೊಬ್ಬರ ಮುಂದೆ ಕೈಚಾಚಿ ನಿಲ್ಲ ಬೇಕಾದ ಪರಿಸ್ಥಿತಿ ಬರುವುದಿಲ್ಲ. ಇಂತಹ ಕನ್ನಡ ಚಳುವಳಿಯಿಂದ ಮಾತ್ರ ಕನ್ನಡ ಬಾಷಿಕ ಸಮುದಾಯ ಸಶಕ್ತವಾಗಬಹುದು. ಕನ್ನಡ ಬಾಷಿಕ ಸಮುದಾಯ ಸಶಕ್ತವಾಗುವುದು ಎಂದರೆ ನಾವು ರಾಜಕೀಯವಾಗಿ ಬಲಿಷ್ಠವಾಗುವುದು ಎಂದರ್ಥ! 

ಹೌದು ಇವತ್ತು ಎರಡು ಕಡೆಯಿಂದ ನಾವು ದುರ್ಬಲರಾಗುತ್ತ ಹೋಗುತ್ತಿದ್ದೇವೆ. ಮೊದಲನೆಯದಾಗಿ ಕಳೆದ ಏಳು ದಶಕಗಳಿಂದ ಸರದಿಯಂತೆ ನಮ್ಮನ್ನು ಆಳುತ್ತ ಬರುತ್ತಿರುವ ರಾಷ್ಟ್ರೀಯ ಪಕ್ಷಗಳು ಭಾಷೆ, ನೆಲ, ಜಲಗಳ ವಿಷಯಗಳಲ್ಲಿ ನಮ್ಮ ಹಿತಾಸಕ್ತಿಯನ್ನು ಕಡೆಗಣಿಸುತ್ತ ರಾಜಕೀಯವಾಗಿ ಬಲಿಷ್ಠವಾಗಿರುವ ಇತರೇ ರಾಜ್ಯಗಳ ಹಿತಾಸಕ್ತಿಯನ್ನು ಕಾಯುತ್ತ ಬರುತ್ತಿವೆ. ಇನ್ನು ಎರಡನೆಯದಾಗಿ,ತೊಂಭತ್ತರ ದಶಕದ ನಂತರ ನಾವು ಒಪ್ಪಿಕೊಂಡ ಮುಕ್ತ ಆರ್ಥಿಕ ನೀತಿ ವಿಶ್ವದ ಎಲ್ಲ ಬಗೆಯ ಬಂಡವಾಳಶಾಹಿ ಕಂಪನಿಗಳನ್ನು ತಂದು ನಮ್ಮ ನೆಲದಲ್ಲಿ ಬೀಡು ಬಿಡಿಸಿದೆ. ಆ ಬಂಡವಾಳಶಾಹಿ ಶಕ್ತಿಗಳಿಗೆ ಪ್ರಾದೇಶಿಕ ಬಾಷೆ ಸಂಸ್ಕೃತಿಯನ್ನು ಕಾಪಾಡಬೇಕೆನ್ನುವ ಯಾವ ಜರೂರತ್ತೂ ಇರುವುದಿಲ್ಲ. ಜೊತೆಗೆ ಯಾವ ಹಿಂಜರಿಕೆಯೂ ಇಲ್ಲದೆ ನಮ್ಮ ನೆಲ ಜಲವನ್ನು ಅವ್ಯಾಹತವಾಗಿ ಬಳಸಿಕೊಳ್ಳುತ್ತ ಹೋಗುತ್ತವೆ. ಇನ್ನು ಶಿಕ್ಷಣ ಮಾಧ್ಯಮದಲ್ಲಿ ಮಾತೃಭಾಷೆ, ಸ್ಥಳೀಯರಿಗೆ ಉದ್ಯೋಗವೆಂಬುದೆಲ್ಲ ಅವುಗಳ ಪದಕೋಶದಲ್ಲಿ ಇರದ ಶಬ್ದಗಳು. ಹೀಗೆ ಎರಡೂ ಕಡೆಯಿಂದಲೂ ನಾವು ಶೋಷಿತರಾಗುತ್ತ ಹೋಗುತ್ತೇವೆ. 

ಇದನ್ನು ತಪ್ಪಿಸಲು ಮತ್ತು ನಮ್ಮ ನೆಲಜಲಬಾಷೆ ಸಂಸ್ಕೃತಿಗಳನ್ನು ಉಳಿಸಿಕೊಳ್ಳಲು ನಮಗಿರುವ ಏಕೈಕ ಮಾರ್ಗ. ಕನ್ನಡ ಚಳುವಳಿ ಮತ್ತು ತನ್ಮೂಲಕ ಕನ್ನಡ ಭಾಷಿಕ ಸಮುದಾಯವನ್ನು ರಾಜಕೀಯವಾಗಿ ಬಲಿಷ್ಠವಾಗಿಸುತ್ತ ಹೋಗುವುದು. ನಮ್ಮದೇ ಬಲಾಢ್ಯ ಪ್ರಭುತ್ವ ಮಾತ್ರ ನಮ್ಮದನ್ನೆಲ್ಲ ಕಾಪಾಡಬಹುದಾಗಿದೆ. ಕನ್ನಡವನ್ನು ಒಂದು ಪ್ರಬಲ ರಾಜಕೀಯಶಕ್ತಿಯಾಗಿ ಪರಿವರ್ತಿಸಲು ಇರುವ ಏಕೈಕ ಮಾರ್ಗವೆಂದರೆ ನಮ್ಮ ಕನ್ನಡಚಳುವಳಿಯನ್ನು ಬಲಗೊಳಿಸುತ್ತ ಹೋಗುವುದು. ಈಗಿರುವ ಹಲವು ಚಳುವಳಿಗಳ( ರೈತ, ದಲಿತ, ಕಾರ್ಮಿಕ, ಇತ್ಯಾದಿ)ನ್ನು ಕನ್ನಡದ ಹೆಸರಲ್ಲಿ ಒಟ್ಟಿಗೆ ಕರೆದೊಯ್ಯಬೇಕಾದ ಅನಿವಾರ್ಯತೆ ನಮಗಿದೆ. 

ಇನ್ನು ಕನ್ನಡ ಭಾಷಿಕ ಸಮುದಾಯವೊಂದು ಬಲಾಡ್ಯ ರಾಜಕೀಯ ಶಕ್ತಿಯಾಗಲು ಈ ಚಳುವಳಿಗಳ ಒಳಗಿಂದಲೇ ಒಡಮೂಡಿಬರುವ ಒಂದು ಪ್ರಾದೇಶಿಕ ರಾಜಕೀಯ ಪಕ್ಷವೊಂದರ ಅಗತ್ಯವಿದೆ. ಇದು ನಂತರದಲ್ಲಿ ಯೋಚಿಸಬೇಕಾದ ವಿಚಾರವಾಗಿದೆ. ಸದ್ಯಕ್ಕೆ ಕನ್ನಡ ಭಾಷಿಕ ಸಮುದಾಯವನ್ನು ರಾಜಕೀಯವಾಗಿ ಬಲಾಢ್ಯಗೊಳಿಸುವವತ್ತ ಮಾತ್ರ ನೋಡಬೇಕಾಗಿದೆ. ಈ ದಿಸೆಯಲ್ಲಿ ನಮ್ಮ ಎಲ್ಲ ಚಳುವಳಿಗಳೂ ಕನ್ನಡ ಚಳುವಳಿಯ ವಿಶಾಲವೇದಿಕೆಯ ಅಡಿಯಲ್ಲಿ ಬರಬೇಕಿದೆ( ಇದು ಕಷ್ಟದ ಕೆಲಸವೆಂದು ಕನ್ನಡಿಗರಿಗೆ ಅನಿಸಿದರೆ ಅದು ನಮ್ಮ ದುರಂತವಷ್ಟೇ!) 

ಮಧುಸೂದನ್ ರವರ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.

No comments:

Post a Comment