Sep 24, 2019

ಬಂಡವಾಳ ಹೂಡಿಕೆದಾರರ ಸಮಾವೇಶ ಎಂಬ ಬೃಹತ್ ಪ್ರಹಸನ!

ಕು.ಸ.ಮಧುಸೂದನ ರಂಗೇನಹಳ್ಳಿ
ದೇಶ ಮತ್ತು ರಾಜ್ಯವನ್ನು ತೀವ್ರವಾಗಿ ಕಾಡುತ್ತಿರುವ ತೀವ್ರ ಆರ್ಥಿಕ ಹಿಂಜರಿಕೆ ಮತ್ತು ನಿರುದ್ಯೋಗ ಸಮಸ್ಯೆಗಳ ನಡುವೆಯೇ ರಾಜ್ಯದ ಕೈಗಾರಿಕಾ ಸಚಿವರಾದ ಶ್ರೀ ಜಗದೀಶ್ ಶೆಟ್ಟರ್ ಅವರು ಮತ್ತೊಂದು ಸುತ್ತಿನ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸುವುದಾಗಿ ಘೋಷಿಸಿದ್ದಾರೆ. 

2013ರಿಂದ 2018ರವರೆಗು ಅಂದಿನ ಕಾಂಗ್ರೆಸ್ ಸರಕಾರ ನಡೆಸಿದ್ದ ಬಂಡವಾಳ ಹೂಡಿಕೆಯ ಸಮಾವೇಶಗಳು ಪಡದುಕೊಂಡಿದ್ದ ಪ್ರಚಾರವನ್ನು, ತಂದುಕೊಟ್ಟ ಪಲಿತಾಂಶವನ್ನು ವಿಶ್ಲೇಷಿಸಿದರೆ ಈ ಸಮಾವೇಶಗಳ ನಿಜಬಣ್ಣ ಬಯಲಾಗುತ್ತ ಹೋಗುತ್ತದೆ. ಈ ಹಿಂದಿನ ಕೈಗಾರಿಕಾ ಮಂತ್ರಿಗಳು ರಾಜ್ಯದಲ್ಲಿ ಸಮಾವೇಶಗಳನ್ನು ನಡೆಸುವುದರ ಜೊತೆಜೊತೆಗೆ ವಿದೇಶಗಳಲ್ಲಿಯೂ ರೋಡ್ ಶೋಗಳನ್ನು ನಡೆಸಿ ತಮ್ಮ ಪ್ರಯತ್ನ ಶೇಕಡಾ ನೂರರಷ್ಟು ಫಲಪ್ರದವಾಗಿದೆಯೆಂದು ಬಡಾಯಿ ಕೊಚ್ಚಿಕೊಂಡಿದ್ದರು. ಆದರೆ ವಸ್ತು ಸ್ಥಿತಿ ಬೇರೆಯದೆ ಇದೆ! 

ಕಳೆದ ಐದು ವರ್ಷಗಳಲ್ಲಿ ಸರಿ ಸುಮಾರು ಎಪ್ಪತ್ತು ಸಾವಿರ ಕೋಟಿ ಮೊತ್ತದ ಒಂದು ಸಾವಿರದ ನೂರೈವತ್ತು ಯೋಜನೆಗಳಿಗೆ ಸರಕಾರದ ಉನ್ನತಾಧಿಕಾರದ ಸಮಿತಿ ಮಂಜೂರಾತಿ ನೀಡಿತ್ತು. ಆದರೆ ಈವರೆಗು ಕೇವಲ ನೂರಾ ನಲವತ್ತೆರಡು ಯೋಜನೆಗಳು ಮಾತ್ರ ಅನುಷ್ಠಾನಗೊಂಡಿದ್ದು, ಹೂಡಿಕೆಯಾದ ಬಂಡವಾಳ ಕೇವಲ ಒಂಭತ್ತು ಸಾವಿರ ಕೋಟಿಯಷ್ಟು ಮಾತ್ರ..ಇನ್ನುಳಿದ ಹಣ ಹೂಡಿಕೆಯಾಗುವ ಭರವಸೆಯಂತು ಸದ್ಯಕ್ಕೆ ಯಾರಿಗೂ ಇಲ್ಲ. ಯಾಕೆಂದರೆ ಕುಸಿಯುತ್ತಿರುವ ಆರ್ಥಿಕ ವ್ಯವಸ್ಥೆಯಲ್ಲಿ ನಿರಾಶಾದಾಯಕ ಮಾರುಕಟ್ಟೆಯ ವ್ಯವಸ್ಥೆಯಲ್ಲಿ ಬಂಡವಾಳ ಹೂಡಲು ಯಾರೂ ಮುಂದೆಬರುವುದಿಲ್ಲವೆಂಬುದು ಸತ್ಯ. 
ಆದರೆ ಆಳುವ ಎಲ್ಲ ಸರಕಾರಗಳೂ ಕಾಗದದ ಮೇಲಿನ ಹೂಡಿಕೆಯನ್ನು ಮತ್ತು ಆಗಿದೆ ಎನ್ನಲಾಗುವ ಉದ್ಯೋಗ ಸೃಷ್ಠಿಗಳ ಭ್ರಮಾತ್ಮಕ ಅಂಕಿಸಂಖ್ಯೆಗಳನ್ನು ಜನರ ಮುಂದಿಡುತ್ತಾ ಬಂದಿವೆ. 

ಸರಕಾರಗಳು ನೀಡಿರುವ ಅಂಕಿಅಂಶಗಳನ್ನು ನಿಜವೆಂದೆ ಭಾವಿಸಿ ನೋಡಿದರೆ ಕಳೆದ ಒಂದು ದಶಕದಲ್ಲಿ ನಮ್ಮ ರಾಜ್ಯದಲ್ಲಿ ಒಂದು ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗಬೇಕಿತ್ತು. ಕನಿಷ್ಠ ನಲವತ್ತರಿಂದ ಐವತ್ತು ಲಕ್ಷ ಉದ್ಯೋಗಗಳು ಸೃಷ್ಠಿಯಾಗಿ ನಮ್ಮ ರಾಜ್ಯದ ನಿರುದ್ಯೋಗ ಪ್ರಮಾಣಶೇಕಡಾ ಎರಡಕ್ಕೆ ಇಳಿಯಬೇಕಿತ್ತು. ಆದರೆ ವಾಸ್ತವ ಹಾಗಿಲ್ಲ. 

ಇದಕ್ಕೆ ಹಲವು ಕಾರಣಗಳಿವೆ. ಮೊದಲನೆಯದಾಗಿ ಸರಕಾರ ಏನೇ ಏಕಗವಾಕ್ಷಿ ಪದ್ದತಿ ಜಾರಿಗೆ ತಂದರೂ ನಮ್ಮ ಅಧಿಕಾರಶಾಹಿಯ ಕೆಂಪು ಪಟ್ಟಿಯ ಹಿಡಿತ ಸಡಿಲವಾಗಿಲ್ಲ. ನಮ್ಮಲ್ಲಿರುವುದು ಜನಸ್ನೇಹಿ, ಉದ್ಯಮಸ್ನೇಹಿ ಸರಕಾರಗಳಲ್ಲ! ಬದಲಿಗೆ ನಮ್ಮಲ್ಲಿರುವುದು ಅಧಿಕಾರಿ-ರಾಜಕಾರಣಿ ಸ್ನೇಹಿ ಸರಕಾರಿ ವ್ಯವಸ್ಥೆ. ಇದು ಬದಲಾಗುವ ತನಕವು ಬಂಡವಾಳ ಹೂಡಿಕೆಗಳು ಮರೀಚಿಕೆಯಾಗಿಯೇ ಉಳಿಯುವುದು ನಿಶ್ಚಿತ. 

ಇದೇ ರೀತಿ ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಮುಂದಾಗುವವರಿಗೆ ಕೈಗಾರಿಕೆ ಸ್ಥಾಪನೆಗಿಂತ ಸರಕಾರ ನೀಡುವ ರಿಯಾಯಿತಿ ದರದ ಭೂಮಿಯ ಮೇಲಷ್ಟೆ ಕಣ್ಣಿರುತ್ತದೆ. ಹೀಗೆ ಸಿಕ್ಕ ಭೂಮಿಯಲ್ಲಿ ಕೈಗಾರಿಕೆಯ ಹೆಸರಲ್ಲಿ ಒಂದು ಕಟ್ಟಡ ಎಬ್ಬಿಸಿ ಬ್ಯಾಂಕುಗಳಿಂದ ಸಾಲ ಪಡೆದು ತದನಂತರದಲ್ಲಿ ನಷ್ಟವೆಂದು ಕೈಗಾರಿಕೆ ಮುಚ್ಚಿದ್ದೇವೆಂದು ಹೇಳಿ,ಪಡೆದ ಭೂಮಿಯನ್ನು ರಿಯಲ್ ಎಸ್ಟೇಟ್ ಉದ್ದೇಶಕ್ಕೆ ಬಳಸುವುದು ಉದ್ಯಮಿಗಳ ದುರುದ್ದೇಶವಾಗಿರುತ್ತದೆ. ನಮ್ಮ ವ್ಯವಸ್ಥೆಯೂ ಇಂತಹ ಅಕ್ರಮಕ್ಕೆ ಪೂರಕವಾಗಿಯೇ ಕೆಲಸ ಮಾಡುತ್ತಿದ್ದು ಬಂಡವಾಳ ಹೂಡಿಕೆಯೆಂಬುದನ್ನು ಒಂದು ಭ್ರಮೆಯನ್ನಾಗಿಸಲಾಗಿದೆ. 

ಈ ಹಿನ್ನೆಲೆಯಲ್ಲಿ ಈ ಸರಕಾರ ಮತ್ತೆ ಬಂಡವಾಳ ಹೂಡಿಕೆಯ ಸಮಾವೇಶ ನಡೆಸುವ ಮುಂಚೆ ಕಳೆದೊಂದು ದಶಕದಲ್ಲಿ ನಡೆಸಲಾದ ಸಮಾವೇಶಗಳ ಮೂಲಕ ಹರಿದುಬಂದ ಬಂಡವಾಳ, ಸ್ಥಾಪನೆಯಾದ ಉದ್ಯಮಗಳ ಸಂಖ್ಯೆ, ಸೃಷ್ಠಿಯಾದ ಉದ್ಯೋಗಗಳ ಸಂಖ್ಯೆಗಳ ಬಗ್ಗೆ ಒಂದು ಶ್ವೇತ ಪತ್ರವನ್ನುಹೊರಡಿಸಿ ಸಾರ್ವಜನಿಕರ ಗಮನಕ್ಕೆ ವಾಸ್ತವಾಂಶಗಳನ್ನು ತಿಳಿಸುವ ಕೆಲಸ ಮಾಡಬೇಕಿದೆ. 

ಇಲ್ಲದೇ ಹೋದಲ್ಲಿ ಈಗ ನಡೆಸಬೇಕೆಂದಿರುವ ಬಂಡವಾಳಹೂಡಿಕೆಯ ಸಮಾವೇಶ ಆರ್ಥಿಕಹಿಂಜರಿಕೆಯ ಗಾಯದ ಮೇಲೆ ಉಪ್ಪು ಸುರಿದಂತಾಗುತ್ತದೆ. 
ಮಧುಸೂದನ್ ರವರ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.

No comments:

Post a Comment