Jun 12, 2019

ಊರೆಂದರೆ ಹೀಗೇನೆ!

ಕು.ಸ.ಮಧುಸೂದನ ರಂಗೇನಹಳ್ಳಿ 
ಊರೆಂದರೆ ಹೀಗೆ 
ಮನೆಗಳ ಸಾಲುಗಳು 
ಅವುಗಳ ಕಾಯಲು ನಾಯಿಗಳು 
ವಾಕಿಂಗ್ ಕರೆದುಕೊಂಡು ಹೋಗುವ ಕೈಗಳು 
ಬ್ರೆಡ್ಡು ಬಿಸ್ಕೇಟು ಹಾಕುವ ತಾಯಂದಿರು 
ತಮಗು ಅದೇ ಬೇಕೆಂದು ಹಟ ಹಿಡಿಯುವ ಮಕ್ಕಳು 
ಇದನೆಲ್ಲ ಕವಿತೆಯಾಗಿಸುವ ಹೆಂಗರುಳಿನ ಕವಿಗಳು 
ಒಳ್ಳೆಯವರ ನಡುವೆಯೂ ಒಂದಿಬ್ಬರಾದರೂ ಕಳ್ಳರು 
ಹಿಡಿಯಲಷ್ಟು ಪೋಲೀಸರು 
ಸಿಕ್ಕಿಕೊಂಡವರ ಕೂಡಿ ಹಾಕಲು ಕಾರಾಗೃಹಗಳು 
ನ್ಯಾಯ ತೀರ್ಮಾನ ಮಾಡಲು ನ್ಯಾಯಾಲಯಗಳು 
ವಾದ ಮಂಡಿಸುವ ಕರಿಕೋಟಿನ ವಕೀಲರುಗಳು 
ಗಲ್ಲಗಂಬಗಳು 
ಹುರಿಗೊಳಿಸಿದ ತುಂಡಾಗಲಾರದಂತಹ 
ಹಗ್ಗಗಳ ಸಿಂಬೆಗಳು 
ಎಲ್ಲವನೂ ಮೌನದಲಿ ನೋಡುತ್ತ ನಿಲ್ಲುವ ಗೊಂಬೆ ಮನುಷ್ಯರು 
ಸತ್ಯ ಬರೆದ ಕವಿಯ ಕೊಲ್ಲುವ ಇರಾದೆಯಲಿ 
ತರಬೇತಿ ಪಡೆದು ಬಂದ ಕಟುಕರ ಪಡೆ 
ಊರೆಂದರೆ ಹೀಗೇನೆ. 
ಕು.ಸ.ಮಧುಸೂದನ ರಂಗೇನಹಳ್ಳಿಯವರ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

No comments:

Post a Comment