May 14, 2019

ಒಂದು ಬೊಗಸೆ ಪ್ರೀತಿ - 16

ಡಾ. ಅಶೋಕ್.‌ ಕೆ. ಆರ್.‌


ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.

‘ಅಯ್ಯೋ ಹಂಗೆಲ್ಲ ಏನಿಲ್ಲಪ್ಪ. ರಜೆಯಲ್ಲಿ ಅಜ್ಜಿ ಮನೆಗೆ ಹೋಗಿಬಿಟ್ಟಿದ್ದೆ. ಅಲ್ಲಿ ಕಸಿನ್ಸ್ ಜೊತೆಯೆಲ್ಲ ಆಟ ಸುತ್ತಾಟ. ಸಮಯ ಕಳೆದಿದ್ದೇ ಗೊತ್ತಾಗಲಿಲ್ಲ. ನನ್ನಲ್ಲಿನ್ನೂ ಪುರುಷೋತ್ತಮನ ಬಗ್ಗೆ ಪ್ರೀತಿ ಪ್ರೇಮದ ಭಾವನೆಗಳು ಹುಟ್ಟಿರಲಿಲ್ಲವಲ್ಲ ಹಾಗಾಗಿ ಹೆಚ್ಚೇನು ಅವನ ನೆನಪಾಗಲಿಲ್ಲ. ಅವನು ಹೇಳಿದ್ದು ನೆನಪಾದಾಗಲೆಲ್ಲ ನನಗೆ ಅಶ್ವಿನಿಯನ್ನು ಹೇಗೆ ಎದುರಿಸುವುದು ಅವಳಿಗೆ ಹೇಗೆ ಹೇಳುವುದು ಎನ್ನುವುದೇ ಹೆಚ್ಚು ಕಾಡುತ್ತಿತ್ತು. ಅವಳಿಗೆ ಊಹಿಸಲು ಸಾಧ್ಯವಾಗಿದ್ದು ನನಗಾಗಲಿಲ್ಲವಲ್ಲ ಎಂದು ಬೇಸರವಾಗುತ್ತಿತ್ತು. ರಜೆಯ ಮಜದ ನಡುವೆ ಅದನ್ನೆಲ್ಲ ಜಾಸ್ತಿ ಯೋಚಿಸಲೂ ಇಲ್ಲ ಬಿಡು. ರಜೆ ಮುಗಿಸಿ ಬಂದ ಮೇಲೆ ಮನೆಯ ಬಳಿಯೇ ಅಶ್ವಿನಿ ಸಿಕ್ಕಿದಳು. ಅವಳ ಮನೆಗೇ ಹರಟಲು ಹೋದೆವು. ಮನೆಯಲ್ಯಾರೂ ಇರಲಿಲ್ಲ. ಹಾಲಿನಲ್ಲಿ ಟಿವಿ ಹಾಕಿ ಕುಳಿತೆವು. ಅದೂ ಇದೂ ಮಾತನಾಡಲು ಪ್ರಾರಂಭಿಸಿದೆವು. ನಾನು ಮುಖಕ್ಕೆ ಮುಖ ಕೊಟ್ಟು ಮಾತನಾಡದೆ ಇದ್ದುದು ಅವಳ ಗಮನಕ್ಕೆ ಬಂತು. ಜನರ ಜೊತೆ ಹೆಚ್ಚು ಬೆರೆಯದೆ ಮೂರೊತ್ತೂ ಓದ್ತಾನೇ ಕೂರ್ತಿದ್ದ ಅವಳಿಗೆ ಬೇರೆಯವರ ನಡವಳಿಕೆಯಿಂದಾನೇ ಅರ್ಧ ವಿಷಯ ಗೊತ್ತಾಗಿಬಿಡುವುದಾದರೂ ಹೇಗೆ ಎಂದು ಕೆಲವೊಮ್ಮೆ ಅಚ್ಚರಿಯಾಗುತ್ತದೆ. “ಏನಾಯ್ತೆ?” ಎಂದು ಕೇಳಿದಳು.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
‘ಏನಿಲ್ಲಪ್ಪ ಯಾಕೆ?’

“ಮ್. ಯಾಕೋ ನೀನು ರಜಕ್ಕೆ ಮುಂಚೆ ಇದ್ದಂಗೆ ಇಲ್ಲ ಅನ್ನಿಸ್ತಿದೆ”

‘ಹಂಗೆಲ್ಲ ಏನಿಲ್ಲ. ರಜಾ ಮುಗಿದು ಹೋಗ್ತಿದೆಯಲ್ಲ ಅದಕ್ಕೆ ಬೇಜಾರು ಸ್ವಲ್ಪ’

“ಮ್. ಸರಿ ಬಿಡು”

‘ಅಶ್ವಿನಿ’

“ಹೇಳೇ”

‘ನಿನ್ನತ್ರ ಒಂದು ವಿಷಯ ಹೇಳ್ಬೇಕಿತ್ತು’

“ಏನ್ ವಿಷಯ”

‘ನೀನು ಬಯ್ಯಬಾರದು’

“ನಮ್ ಧರುಗೆ ನಾನು ಬಯ್ತೀನಾ? ನೀನೇ ತಪ್ಪು ಮಾಡಿದ್ರೂ ನಾನು ಬಯ್ಯಲ್ಲ ಕಣೇ”

‘ಅದೂ ಅದೂ’

“ಏನೇ ಅದೂ ಅದೂ … ಓ! ಗೊತ್ತಾಯ್ತು ಬಿಡು”

‘ಏನ್ ಗೊತ್ತಾಯ್ತು’

“ನೀನೇನನ್ನು ಹೇಳಲು ಹೊರಟಿದ್ದೆಯೋ ಅದು ಗೊತ್ತಾಯ್ತು ಬಿಡು”

‘ಏನ್ ಹೇಳು?’

“ನಿನ್ನ ಬಾಯಲ್ಲೇ ಕೇಳೋಣ ಹೇಳು”

‘ಹೇಳೋದಿಕ್ಕೆ ಕಷ್ಟ ಆಗ್ತಿದೆ’

“ಪುರುಷೋತ್ತಮ ನಿನಗೆ ಪ್ರಪೋಸ್ ಮಾಡ್ದ ಅಂತ ಹೇಳೋದು ಅಷ್ಟೊಂದು ಕಷ್ಟದ ಕೆಲಸಾನಾ?”

‘ಅದೆಂಗೆ ಅಷ್ಟು ಕರೆಕ್ಟಾಗಿ ಗೆಸ್ ಮಾಡ್ದೆ?’

“ನಿನ್ ಫ್ರೆಂಡಮ್ಮ ನಾನು. ಅಷ್ಟೂ ಗೊತ್ತಾಗಲ್ವ. ಮೇಲಾಗಿ ಅವತ್ತೇ ನಿನಗೆ ಹೇಳಿರಲಿಲ್ವಾ? ಅವನು ನಿನ್ನನ್ನು ಲವ್ ಮಾಡ್ತಿದ್ದಾನೆ ಕಣೇ ಅಂತ. ಇಷ್ಟು ದಿನ ಅವನು ಹೇಳದೇ ಉಳಿದಿದ್ದೇ ಆಶ್ಚರ್ಯ”

‘ಮ್. ನಾನೂ ಪುರುಷೋತ್ತಮನ ಫ್ರೆಂಡೇ. ಅವನ ಮನಸ್ಸಲ್ಲಿದ್ದಿದ್ದು ನನಗೇ ಗೊತ್ತಾಗಲಿಲ್ಲ’

“ಹೋಗ್ಲಿ ಬಿಡು”

‘ಸರಿ ಈಗ ನಾನು ಏನು ಮಾಡಲಿ’

“ಅಂದ್ರೆ”

‘ನಾಳೆ ಅವನು ಕಾಲೇಜಲ್ಲಿ ಸಿಗ್ತಾನಲ್ಲ ಏನು ಹೇಳಲಿ ಅಂತ’

“ಏನ್ ಹೇಳಲಿ ಅಂದ್ರೆ? ಅವತ್ತು ನೀನೇ ನನ್ನತ್ರ ಹೇಳಿದ್ಯಲ್ಲ. ಅವನು ನನ್ನ ಫ್ರೆಂಡ್ ಮಾತ್ರ. ಲವ್ ಗಿವ್ ಎಲ್ಲ ಇಲ್ಲ ಅಂತ. ಅದನ್ನೇ ಹೇಳ್ಬಿಡು”

‘ಹಂಗೇ ಹೇಳ್ಬಿಡ್ಲ. ಅವನು ಬೇಜಾರು ಮಾಡಿಕೊಂಡುಬಿಟ್ರೆ’

“ಬೇಜಾರು? ನಿನಗೂ ಏನಾದ್ರೂ ಲವ್ ಆಗಿಬಿಟ್ಟಿದೆಯೇನೇ ಅವನ ಮೇಲೆ”

‘ಛೀ. ಹಂಗೇನಿಲ್ಲಪ್ಪ. ಒಳ್ಳೆ ಫ್ರೆಂಡಿಗೆ ಬೇಜಾರು ಮಾಡಿಬಿಡ್ತೀನೇನೋ ಅಂತ’

“ಅವನಿಗೆ ಬೇಜಾರಾಗುತ್ತೆ ಅಂತ ಲವ್ ಮಾಡೋಕಾಗುತ್ತ?”

‘ಅದೂ ಸರಿ ಬಿಡು. ಇರೋದನ್ನ ಹೇಳಿಬಿಡ್ತೀನಿ’

‘ಅಶ್ವಿನಿ…. ಸುಮ್ನೆ ಕೇಳ್ತೀನಿ. ಪುರುಷೋತ್ತಮನನ್ನು ಲವ್ ಮಾಡ್ಬಹುದಲ್ವಾ?’

ಐದು ನಿಮಿಷ ಅಶ್ವಿನಿ ನನ್ನನ್ನೇ ದಿಟ್ಟಿಸಿ ನೋಡಿದಳು. ಅವಳ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತ ಅವಳನ್ನೇ ದಿಟ್ಟಿಸಿದೆ.

“ಅದಕ್ಕೆ ಉತ್ತರ ಇವಾಗ ಬೇಡ ಬಿಡೇ” ಎಂದವಳು ನಾನು ಪುನಃ ಮಾತನಾಡುವುದನ್ನು ತಡೆಯುವುದಕ್ಕೋ ಏನೋ “ಬಾ ಊರಿಂದ ಚಕ್ಕಲಿ ನಿಪ್ಪಿಟ್ಟು ತಂದಿದ್ದೀನಿ. ತಿನ್ನೋಣ” ಎಂದು ಅಡುಗೆಮನೆಗೆ ಹೋದಳು.

ಆ ಪ್ರಶ್ನೆ ಕೇಳಿಬಿಟ್ಟ ಮೇಲೆ ನನ್ನ ಮೇಲೆ ನನಗೇ ಅನುಮಾನ ಬಂದುಬಿಟ್ಟಿತು. ಅಂತಹ ಪ್ರಶ್ನೆ ಮೂಡಿದೆ ಎಂದ ಮೇಲೆ ನನಗೂ ಅವನನ್ನು ಲವ್ ಮಾಡಬೇಕು ಅನ್ನಿಸುತ್ತಿದೆಯಾ? ಎಂಬ ಅನುಮಾನವದು. ಆ ವಯಸ್ಸು ಗೊತ್ತಲ್ಲೋ ಯಾವ ಭಾವನೇನೂ ತುಂಬ ಹೊತ್ತಿನ ತನಕ ತುಂಬಾ ಗಟ್ಟಿಯಾಗಿ ಉಳಿಯುವುದಿಲ್ಲ. ಅಶ್ವಿನಿ ಚಕ್ಕುಲಿ ತಕ್ಕೊಂಡು ಬಂದಳು. ಅದೂ ಇದೂ ಮಾತನಾಡುತ್ತ ಸಮಯ ಕಳೆದು ಹೋಯಿತು.

ಮಾರನೇ ದಿನ ಟ್ಯೂಷನ್ನಿತ್ತು. ಅಶ್ವಿನಿ ಜೊತೆಗೆ ಹೊರಟೆ. ಟ್ಯೂಷನ್ ಮೇಸ್ಟ್ರು ಇನ್ನೂ ಬಂದಿರಲಿಲ್ಲ. ಪುರುಷೋತ್ತಮ ಬಂದಿದ್ದ. ಅವನನ್ನು ನೋಡುತ್ತಿದ್ದಂತೆ ಉತ್ತರ ಕೊಡಬೇಕಾಗಿರುವ ಅನಿವಾರ್ಯತೆಯ ನೆನಪಾಯಿತು. ಅನಿವಾರ್ಯತೆ ಮೂಡಿಸಿದ ಗೊಂದಲದ ಭಾವನೆಗಳನ್ನು ಮರೆಮಾಚಿ ಗಾಡಿ ನಿಲ್ಲಿಸಿ ಅವನೆಡೆಗೆ ಕೈ ಬೀಸಿದೆ. ಅವನೂ ಕೈಬೀಸಿ ನನ್ನ ಕಡೆಯೇ ಬರಲಾರಂಭಿಸಿದ. ಆ ಸನ್ನಿವೇಶದಲ್ಲಿ ಇರಬಾರದು ಎನ್ನಿಸಿತೋ ಏನೋ ಅಶ್ವಿನಿ ಟ್ಯೂಷನ್ನಿನ ಒಳಗೆ ಹೊರಟುಹೋದಳು. ಇಲ್ಲೇ ಇರೇ ಎಂದು ನಾನು ಹೇಳುತ್ತಿದ್ದದ್ದು ಅವಳ ಕಿವಿಗೆ ಬೀಳಲಿಲ್ಲವೋ ಬಿದ್ದರೂ ಹೊರಟು ಹೋದಳೋ ಗೊತ್ತಿಲ್ಲ. ಪುರುಷೋತ್ತಮ ಹತ್ತಿರ ಬಂದು “ಹೇಗಿದ್ದೀಯೇ?” ಎಂದು ಎಂದಿನ ಸ್ನೇಹದಿಂದ ಕೇಳಿದಾಗ ಒಂದಷ್ಟು ಮನಸ್ಸಿಗೆ ನಿರಾಳವೆನ್ನಿಸಿತು. ಇವನು ನನ್ನ ಸ್ನೇಹಿತ ಪುರುಷೋತ್ತಮನೇ ಬಹುಶಃ ಅವತ್ತು ಸುಮ್ನೆ ನನ್ನ ಕಾಲೆಳೆಯುವುದಕ್ಕೆ ಹಾಗೆಲ್ಲ ಹೇಳಿರಬೇಕು ಎಂದುಕೊಂಡೆ. ‘ನಾನು ಚೆನ್ನಾಗಿದ್ದೀನಿ ಕಣೋ. ನೀನು’

“ಮ್. ಇದ್ದೀನಿ ಅಷ್ಟೇ”

‘ಅಂದ್ರೆ’

“ನಿನ್ನ ಉತ್ತರಕ್ಕೆ ಕಾಯ್ಕೊಂಡು ಇದ್ದೀನಿ ಅಷ್ಟೇ”

‘ಇನ್ನೂ ಅದು ನಿನ್ನ ತಲೆಯಿಂದ ಹೋಗಿಲ್ಲವೇನೋ. ನಾನೆಲ್ಲೋ ತಮಾಷೆಗೆ ಹಂಗೆಲ್ಲ ಹೇಳಿದ್ದೆ ಅಂದುಕೊಂಡಿದ್ದೆ’

“ತಮಾಷೆಗ್ಯಾಕೆ ಹೇಳಲಿ? ನಿನ್ನನ್ನು ಲವ್ ಮಾಡ್ತಿರೋದಕ್ಕೇ ಹೇಳಿದ್ದು”

‘ಲವ್ ಎಲ್ಲಾ ಏನೂ ಇಲ್ಲಪ್ಪ ನನ್ನತ್ರ. ನಾವಿಬ್ರೂ ಫ್ರೆಂಡ್ಸ್ ತರ ಇದ್ದೋ. ಫ್ರೆಂಡ್ಸ್ ತರ ಇರೋಣ ಅಷ್ಟೇ. ಲವ್ ಗಿವ್ವೆಲ್ಲ ಬೇಡ’

“ಮ್” ಒಂದು ನಿಮಿಷ ನನ್ನನ್ನೇ ದಿಟ್ಟಿಸುತ್ತಿದ್ದ. ತಲೆ ತಗ್ಗಿಸಿ ನಿಂತಿದ್ದರೂ ನನಗವನ ದೃಷ್ಟಿಯ ಅರಿವಾಗುತ್ತಿತ್ತು.

“ನೋಡು ಧರು. ನಾನು ನಿನ್ನ ಲವ್ ಮಾಡ್ತಿದ್ದೀನಿ. ಇನ್ನು ಮುಂದೆ ಜೊತೆಯಲ್ಲಿರಬೇಕು ಅಂದ್ರೆ ಲವರ್ ಆಗಿ ಇರೋದಿಕ್ಕಷ್ಟೇ ನನಗೆ ಆಗೋದು. ಫ್ರೆಂಡ್ ತರ ಇರೋಕೆ ಇನ್ಮುಂದೆ ನನ್ ಕೈಲಿ ಆಗಲ್ಲ” ಎಂದು ಹೇಳಿದವನೇ ಟ್ಯೂಷನ್ನಿನ ಕಡೆಗೆ ಹೊರಟುಬಿಟ್ಟ. ‘ಪುರುಷೋತ್ತಮ’ ‘ಲೋ ಲೋ’ ಎಂದು ನಾನೆಷ್ಟು ಕೂಗಿದರೂ ತಿರುಗಿ ನೋಡಲಿಲ್ಲ. ಎಷ್ಟು ಕೊಬ್ಬು ಇವನಿಗೆ. ಲವರ್ ಆಗೇ ಇರ್ತಾನಂತೆ ಫ್ರೆಂಡ್ ಆಗೋಕೆ ಆಗಲ್ವಂತೆ. ಹೋಕ್ಕೋಳ್ಲಿ ಬಿಡು. ಅವನ ಫ್ರೆಂಡ್ ಶಿಪ್ ಹೋದ್ರೆ ಕತ್ತೆ ಬಾಲ ಕುದುರೆ ಜುಟ್ಟು ಎಂದು ಬಯ್ದುಕೊಂಡರೂ ಕಣ್ಣಂಚಿನಲ್ಲಿ ನೀರು ಮೂಡಿದ್ದು ಸುಳ್ಳಲ್ಲ’ ಆ ಘಟನೆಗಳನ್ನೆಲ್ಲಾ ಈಗ ಸಾಗರನ ಬಳಿ ಹೇಳಿಕೊಳ್ಳುವಾಗಲೂ ಕಣ್ಣಂಚಿನಲ್ಲಿ ನೀರು ಮೂಡಿದೆ. ಯಾಕೋ ಮುಂದಕ್ಕೆ ಮಾತನಾಡುವುದು ಕಷ್ಟವಾಯಿತು. ‘ಸಾಗರ್ ಒಂದೆರಡು ನಿಮಿಷ. ಬಾತ್ ರೂಮಿಗೆ ಹೋಗಿ ಬರ್ತೀನಿ’ ಎಂದೊಂದು ಸುಳ್ಳು ಹೇಳಿ ಫೋನ್ ಕಟ್ ಮಾಡಿದೆ. ಫೋನ್ ಬಿಸಿಯಾಗಿತ್ತು. ಬಾತ್ ರೂಮಿಗೆ ಹೋಗಿ ಮುಖ ತೊಳೆದುಕೊಂಡು ಬಂದು ಎರಡು ನಿಮಿಷ ಸುಮ್ಮನೆ ಕುಳಿತೆ. ಎಲ್ಲಿಯ ಪುರುಷೋತ್ತಮ, ಎಲ್ಲಿಯ ರಾಜೀವ; ಜೀವನ ಎಷ್ಟೆಲ್ಲ ತಿರುವು ಪಡೆದುಕೊಂಡುಬಿಡುತ್ತಲ್ಲ. ತಿರುವಿನ ಅರಿವೇ ನಮಗಿರುವುದಿಲ್ಲ. ಜೀವನ ಪರ್ಯಂತ ಜೊತೆಯಲ್ಲೇ ಇರುತ್ತೇವೆಂದು ನಂಬಿಕೊಂಡವರೂ ತಿರುವೊಂದರಲ್ಲಿ ತಿರುಗಿಯೂ ನೋಡದೆ ಬೇರೆ ಬೇರೆ ಹಾದಿ ಹಿಡಿದು ಹೊರಟುಬಿಡುತ್ತೇವೆ. ಮತ್ತೊಮ್ಮೆ ಯಾವುದೋ ತಿರುವಿನಲ್ಲಿ ಸಂಧಿಸಿದರೂ ಪರಿಚಯದ ನಗು ಕೂಡ ಮುಖದಲ್ಲಿ ಮೂಡುವುದಿಲ್ಲ. “ಸುಸ್ತಾಗಿದ್ದರೆ ಮಲಗಿಕೊಳ್ಳೇ. ಜಾಸ್ತಿ ಅಳ್ಬೇಡ. ಗುಡ್ ನೈಟ್” ಎಂದು ಸಾಗರ್ ಮೆಸೇಜು ಕಳುಹಿಸಿದ. ನಾನಳೋದು ಇವನಿಗೇಗೆ ಗೊತ್ತಾಗಿಬಿಡ್ತು. ದುಃಖದಲ್ಲೂ ನಗು ಬಂತು. ನಗುವಿನ ಹಿಂದೆ ಸಾಗರನನ್ನು ನಾನು ಕೇವಲ ಸ್ನೇಹಿತನಾಗಿ ಇಷ್ಟಪಡುತ್ತಿದ್ದೀನಾ ಅಥವಾ ಸಾಗರನ ಮೇಲೆ ಪ್ರೇಮದ ಭಾವನೆ ಮೂಡುತ್ತಿದೆಯಾ ಎನ್ನುವ ಅನುಮಾನವೂ ಬಂತು. ಸಾಗರನ ಮೇಲೆ ಪ್ರೀತಿ ಮೂಡಿದರದು ತಪ್ಪೇ? ತಪ್ಪೆಂದು ಅನ್ನಿಸಲಿಲ್ಲ. ಒಂದು ಲೋಟ ನೀರು ಕುಡಿದು ಬಂದು ಮತ್ತೆ ಸಾಗರನಿಗೆ ಫೋನಾಯಿಸಿದೆ.

“ಅತ್ತು ಮುಗೀತ”

‘ನಾನೇನು ಅಳ್ತಿರಲಿಲ್ಲ’

“ಸುಳ್ಳು”

‘ನಿಜ’

“ನನ್ನುಡುಗಿ ವಿಷಯ ನನಗೆ ಗೊತ್ತಾಗಲ್ವ”

‘ಥ್ಯಾಂಕ್ಸ್’

“ಯಾಕೆ?”

‘ನಾನು ಅತ್ತಿದ್ದು ನಿಜ’

“ಅದಕ್ಕೆ ಥ್ಯಾಂಕ್ಸ್ ಯಾಕೆ”

‘ನನ್ನುಡುಗಿ ಅಂದಲ್ಲ ಅದಕ್ಕೆ’

“ಸುಮ್ನೆ ಮಾತಿನ ವರಸೆಗೆ ಹಂಗಂದೆ”

‘ಹಾಗಾದ್ರೆ ನಾನು ನಿನ್ನುಡುಗಿ ಅಲ್ವ?’

“ಮ್. ನನ್ನುಡುಗಿ ಅಲ್ಲ. ನನ್ನುಡುಗಿ ಆಗಿದ್ರೆ ಚೆನ್ನಾಗಿತ್ತು. ಬಟ್… ಹೋಗ್ಲಿ ಬಿಡು. ಆಮೇಲೇನಾಯ್ತು ಹೇಳು”

ನನಗೂ ಹಳೆಯದನ್ನೆಲ್ಲ ಹೇಳಿ ಮುಗಿಸಿ ಹಗುರಾಗಿಬಡಬೇಕು ಎನ್ನಿಸಲಾರಂಭಿಸಿತ್ತು. ನಾನು ಸಾಗರನ ಹುಡುಗೀನೋ ಅಲ್ವೋ ಅನ್ನೋದನ್ನು ಮುಂದೆ ಯಾವತ್ತಾದರೂ ನಿರ್ಧರಿಸಬಹುದು ಎಂದುಕೊಂಡು ಕಾಲೇಜಿನ ದಿನಗಳಿಗೆ ಮರಳಿದೆ.

‘ಒಂದು ವಾರ ಕಳೆಯಿತು ಹತ್ತು ದಿನ ಕಳೆಯಿತು. ಅವನು ಎದುರಿಗೆ ಸಿಕ್ಕಾಗ ನಗುತ್ತಿದ್ದೆ. ಮಾತನಾಡಿಸಲು ಪ್ರಯತ್ನಿಸುತ್ತಿದ್ದೆ. ಅವನು ನನ್ನ ಕಡೆಗೆ ನೋಡದೆ ನನ್ನ ಜೊತೆಗೆ ಮಾತನಾಡದೆ ತಿರುಗಿ ಹೋಗಿಬಿಡುತ್ತಿದ್ದ. ಅಶ್ವಿನಿ ಜೊತೆಯಲ್ಲೇ ಇರುತ್ತಿದ್ದಳಾದ್ದರಿಂದ ಅವಳಿಗೂ ಇದರ ಅರಿವಾಯಿತು. “ಸುಮ್ನೆ ಅವನನ್ನು ಬಿಟ್ಟು ಚೆನ್ನಾಗಿ ಓದ್ಕೋ” ಎಂದು ಹೇಳುತ್ತಿದ್ದಳು. ನನಗೂ ಅವಳು ಹೇಳುವುದು ಸರಿಯೆನ್ನಿಸುತ್ತಿತ್ತು. ನನ್ನ ಪಾಡಿಗೆ ನಾನು ಓದುವುದರಲ್ಲಿ ಬ್ಯುಸಿಯಾಗಿಬಿಡಲು ಪ್ರಯತ್ನಿಸುತ್ತಿದ್ದೆ. ಓದೆಲ್ಲ ಮುಗಿದು ರಾತ್ರಿ ಹಾಸಿಗೆಗೆ ಬೆನ್ನು ಹಾಕಿದಾಗ ಅವನು ನೆನಪಾಗುತ್ತಿದ್ದ. ಊಟದ ಸಮಯದಲ್ಲಿ ಟ್ಯೂಷನ್ನಿನಲ್ಲಿ ಬಿಡುವಿದ್ದಾಗಲೆಲ್ಲ ಅವನ ಜೊತೆ ನಡೆಸಿದ ಹರಟೆ ನೆನಪಾಗಿ ಕಾಡುತ್ತಿತ್ತು. ಅವನ ಗೆಳೆತನ ನನಗೆ ಬೇಕೇ ಬೇಕು ಎಂಬ ಉತ್ಕಟ ಭಾವನೆ ಉಂಟಾಗುತ್ತಿತ್ತು. ಹತ್ತು ದಿನ ಕಳೆಯುವಷ್ಟರಲ್ಲಿ ಅಶ್ವಿನಿ ಹೇಳಿದರೂ ಸರಿ ಮತ್ಯಾರು ಹೇಳಿದರೂ ಸರಿ ನನಗೆ ಪುರುಷೋತ್ತಮನ ಗೆಳೆತನ ಬೇಕೇ ಬೇಕು ಎಂಬ ಧೃಡ ನಿರ್ಧಾರಕ್ಕೆ ಬಂದುಬಿಟ್ಟಿದ್ದೆ. ಮಾರನೇ ದಿನ ಕಾಲೇಜಿನಲ್ಲಿ ಊಟದ ಸಮಯದಲ್ಲಿ ಅವನನ್ನು ಹುಡುಕಿದೆ. ಎಲ್ಲೂ ಕಾಣಲಿಲ್ಲ. ಅಶೋಕ್ ಸಿಕ್ಕಿದ. ಊಟ ತಂದಿರಲಿಲ್ಲ ಎಂದವನು ಕ್ಯಾಂಟೀನಿಗೆ ಹೋಗಿದ್ದಾನೆ ಎಂದು ತಿಳಿಸಿದ. ಕ್ಯಾಂಟೀನಿನ ಕಡೆಗೆ ಹೊರಟೆ. ನಮ್ಮ ಕಾಲೇಜು ಕ್ಯಾಂಪಸ್ಸಿನಲ್ಲಿ ಎರಡು ಕ್ಯಾಂಟೀನಿತ್ತು. ಒಂದು ಕ್ಯಾಂಟೀನಿನಲ್ಲಿ ಎಲ್ಲಾ ತರದ ತಿಂಡಿಯೂ ಸಿಗುತ್ತಿತ್ತು. ಹುಡುಗ ಹುಡುಗಿಯರೆಲ್ಲ ಅಲ್ಲಿಗೆ ಹೋಗುತ್ತಿದ್ದೊ. ಇನ್ನೊಂದು ಚಿಕ್ಕ ರೂಮಿನಂತ ಕ್ಯಾಂಟೀನು. ಅಲ್ಲಿ ಕಾಫಿ ಟೀ ಪಕೋಡ ಬೋಂಡ ಬಜ್ಜಿ ಅಷ್ಟೇ ಸಿಗುತ್ತಿದ್ದದ್ದು. ಅಲ್ಲಿಗೆ ಸಿಗರೇಟು ಸೇದುವ ಹುಡುಗರಷ್ಟೇ ಜಾಸ್ತಿ ಹೋಗುತ್ತಿದ್ದರು. ಆಗೆಲ್ಲ ಕ್ಯಾಂಪಸ್ಸಿನಲ್ಲಿ ಸಿಗರೇಟು ಮಾರಬಾರದು ಸೇದಬಾರದು ಎಂಬ ರೂಲ್ಸುಗಳೆಲ್ಲ ಇರಲಿಲ್ಲವಲ್ಲ. ಮೊದಲು ಎಲ್ಲರೂ ಹೋಗುವ ದೊಡ್ಡ ಕ್ಯಾಂಟೀನಿಗೆ ಹೋದೆ. ಅಲ್ಲೆಲ್ಲೂ ಪುರುಷೋತ್ತಮ ಕಾಣಲಿಲ್ಲ. ಅವನು ಅಪರೂಪಕ್ಕೆ ಸಿಗರೇಟು ಸೇದುತ್ತಿದ್ದ ವಿಷಯ ನನಗೆ ಗೊತ್ತಿತ್ತು. ಬಹುಶಃ ಆ ಸಿಗರೇಟು ಕ್ಯಾಂಟೀನಿಗೆ ಹೋಗಿರುತ್ತಾನೆ ಎಂದುಕೊಂಡೆ. ಅಲ್ಲಿಗೆ ಹೋಗುವುದೋ ಬೇಡವೋ ಎಂಬ ಯೋಚನೆ ಬಂತು. ಅವನ ಗೆಳೆತನ ಮತ್ತೆ ಮರಳಿ ಸಿಗಬೇಕು ಎಂದಷ್ಟೇ ನನ್ನ ಮನಸ್ಸಲ್ಲಿದ್ದಿದ್ದರಿಂದ ಮತ್ತೆ ಆ ಯೋಚನೆ ಮಾಡದೆ ಆ ಕ್ಯಾಂಟೀನಿನ ಕಡೆಗೆ ಹೊರಟೆ. ಒಳಗೆ ಗೋಡೆಗಂಟಿಕೊಂಡಂತೆ ಬೆಂಚುಗಳನ್ನಾಕಿದ್ದರು. ಕುಳಿತ, ನಿಂತ ಹುಡುಗರ ಕೈಯಲ್ಲೆಲ್ಲ ಸಿಗರೇಟು. ಜೋರಾಗಿ ಹರಟುತ್ತಿದ್ದವರು ನಾನು ಒಳಗೆ ಕಾಲಿಡುತ್ತಿದ್ದಂತೆ ಮಾತು ನಿಲ್ಲಿಸಿ ನನ್ನ ಕಡೆಗೇ ನೋಡಲಾರಂಭಿಸಿದರು. ಬಹುಶಃ ಅಲ್ಲಿಗೆ ಕಾಲಿಟ್ಟ ಹುಡುಗಿ ನಾನೊಬ್ಬಳೇ ಏನೋ. ಮೂಲೆಯೊಂದರಲ್ಲಿ ನೆಲ ನೋಡುತ್ತ ಕುಳಿತಿದ್ದ ಪುರುಷೋತ್ತಮ. ಬಲಗೈಯಲ್ಲಿ ಸಿಗರೇಟಿತ್ತು, ಎಡಗೈಯಲ್ಲಿ ಕಾಫಿಯಿದ್ದ ಗಾಜಿನ ಲೋಟ. ಇದ್ದಕ್ಕಿದ್ದಂತೆ ಕ್ಯಾಂಟೀನು ಮೌನಕ್ಕೆ ಶರಣಾಗಿದ್ದು ಅವನಿಗೂ ಅಚ್ಚರಿ ಮೂಡಿಸಿರಬೇಕು. ಕತ್ತೆತ್ತಿ ನೋಡಿದರೆ ನಾನು! ಮುಖದ ಮೇಲೊಂದು ನಗು ಮೂಡಿದ ಮರುಕ್ಷಣವೇ ಕೋಪವೂ ಮೂಡಿತವನಲ್ಲಿ. ಲೋಟವನ್ನು ನೆಲದ ಮೇಲೆ ಬಿಸಾಕಿ ಸಿಗರೇಟನ್ನು ಎಸೆದು ನನ್ನ ಬಳಿ ಬಂದು ಎಡಗೈ ಹಿಡಿದು ದರದರನೆ ಎಳೆದುಕೊಂಡು ಹೊರಬಂದ. “ಅಲ್ಲೆಲ್ಲ ಬರಬಾರದೆಂಬ ಕಾಮನ್ ಸೆನ್ಸ್ ಇಲ್ವ” ಕೋಪವಿನ್ನೂ ಕರಗಿರಲಿಲ್ಲ.

‘ಮತ್ತೆ ನೀನು ಹೋಗ್ತೀಯ’ ನಗುತ್ತ ಕೇಳಿದೆ. ನನ್ನ ನಗು, ಧರಣಿಯ ಫೇಮಸ್ ಮಾಂತ್ರಿಕ ನಗುವಿಗೆ ಕೂಡ ಅವನ ಕೋಪವನ್ನು ಕರಗಿಸುವುದು ಸಾಧ್ಯವಾಗಲಿಲ್ಲ.

“ಹೇಳಿದ್ರೆ ಅರ್ಥ ಆಗಲ್ವ? ನೀನು ಬರ್ತಾಯಿದ್ರೆ ಎಲ್ರೂ ಹೆಂಗೆ ಜೊಲ್ಲು ಸುರಿಸಿ ನೋಡ್ತಿದ್ರು ಗೊತ್ತಾಗಲ್ವ? ಯಾರಾದ್ರೂ ನಿನ್ನ ಹಂಗೆ ನೋಡಿದ್ರೆ ನನಗೆ ಕೆಟ್ಟ ಕೋಪ ಬರುತ್ತೆ” ಅವನ ಕೋಪಕ್ಕೆ ನಾನಲ್ಲಿಗೆ ಅವನನ್ನು ನೋಡಲು ಬಂದಿದ್ದು ಕಾರಣವಲ್ಲ, ಕೆಟ್ಟ ದೃಷ್ಟಿಯ ಜನರು ಕಾರಣ ಎಂದು ಗೊತ್ತಾದಾಗ ಸುಳ್ಯಾಕೇಳಲಿ ಸಿಕ್ಕಾಪಟ್ಟೆ ಖುಷಿಯಾಯಿತು. ಇವನು ನನ್ನನ್ನು ಎಷ್ಟೊಂದು ಕೇರ್ ಮಾಡ್ತಾನಲ್ವ ಅಂತ.

‘ಹತ್ತು ದಿನದಿಂದ ನಿನ್ನ ಜೊತೆ ಮಾತಾಡದೇ ನಿನ್ನನ್ನು ನೋಡದೇ ನನಗೆ ಬೇಜಾರು ಕಣೋ. ಅದಕ್ಕೆ ಹುಡುಕಿಕೊಂಡು ಬಂದಿದ್ದು’

“ಮ್. ಹೋಗ್ಲಿ ಬಿಡು. ಏನ್ ತೀರ್ಮಾನ ಮಾಡ್ದೆ?”

‘ಲವ್ವೆಲ್ಲ ಬೇಡ. ಮೊದಲಿನ ಥರಾನೇ ಸ್ನೇಹದಿಂದಿದ್ದುಬಿಡೋಣ ಅನ್ನೋದೇ ನನ್ನ ತೀರ್ಮಾನ’

ಮುಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

No comments:

Post a Comment