May 21, 2019

ಹಳೆ ಕುದುರೆ -ಹೊಸ ದೊರೆ

ಕು.ಸ.ಮಧುಸೂದನ ರಂಗೇನಹಳ್ಳಿ

ಉರಿಯುವ ಹಗಲು
ಗಡಿಯಾರಗಳ ಮುಳ್ಳುಗಳು ತೆವಳುತಿವೆ
ಎಷ್ಟು ಕತ್ತಿಗಳ ತಿವಿತ
ರಕ್ತ ಸ್ರಾವವಿರದೆ ಕೊಲ್ಲುವ ಹೊಸ ಮಾರ್ಗ
ಅನ್ವೇಷಿಸಿದ ಕೀರ್ತಿ ಪತಾಕೆ ಹೊತ್ತ
ಹಳೇ ಕುದುರೆಗಳ ಮೇಲಿನ ಹೊಸ ದೊರೆ
ಊರ ತುಂಬಾ ಭಯದ ಕಂಪನಗಳು
ನಿಟ್ಟುಸಿರನ್ನೂ ಬಿಗಿ ಹಿಡಿದು
ಬಿಲ ಸೇರಿಕೊಂಡ ಹುಳುಗಳು
ಬಿಸಿಲ ಧಗೆಯ ನಡುವೆಯೆದ್ದ ಬಿಸಿ ಗಾಳಿಗೆದ್ದು ದೂಳಿನಬ್ಬರಕೆ
ಮೊಳಗಿಸಿದ ರಣಘೋಷಗಳು ದಿಕ್ಕುಗಳಿಗೆ ಹಬ್ಬಿ
ಸೇನಾಧಿಪತಿಗಳ ಆವೇಶ ಆಕ್ರೋಶಗಳನ್ನೆಲ್ಲ ಮೈಮೇಲೆ ಆವಾಹಿಸಿಕೊಂಡ ಕಾಲಾಳುಗಳು ಸ್ವತ: ರಕ್ಕಸರಂತೆ
ಪರಾಕ್ರಮ ಮೆರೆಯ ತೊಡಗಿದರು
ಹಾಗೆ ಧಗಧಗಿಸಿ ಉರಿದೊಂದು ಸಂಜೆ
ಬರಬಹುದಾದ ಬಿರು ಮಳೆಗೆ ಕಾದ
ಜನ ಊರಾಚೆಯ ದಿಬ್ಬದ ಮೇಲೆ ನೆರೆದು ಹಾಡತೊಡಗಿದರು
ಹುಯ್ಯೋ ಹುಯ್ಯೋ ಮಳೆರಾಯ!

ಕು.ಸ.ಮಧುಸೂದನ ರಂಗೇನಹಳ್ಳಿಯವರ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

No comments:

Post a Comment