May 1, 2019

ಇಂಡಿಯಾದ ಚುನಾವಣೆಗಳು: ಡಿಸ್ಕೌಂಟ್ ಸೇಲಿನ ಬಿಗ್ ಬಜಾರುಗಳು

ಕು.ಸ.ಮಧುಸೂದನ ರಂಗೇನಹಳ್ಳಿ
ಇವತ್ತು ಇಂಡಿಯಾದಲ್ಲಿನ ಸಾರ್ವತ್ರಿಕ ಚುನಾವಣೆಗಳು ತಮ್ಮ ಸಾಂಪ್ರದಾಯಿಕ ಮೌಲ್ಯ ಮತ್ತು ಮಹತ್ವವನ್ನು ಕಳೆದು ಕೊಳ್ಳುತ್ತಿವೆಯೆಂದರೆ ತಪ್ಪಾಗಲಾರದು. ಹಾಗೆಂದು ಕಳೆದ ಏಳು ದಶಕಗಳಲ್ಲಿ ನಡೆದ ಎಲ್ಲ ಚುನಾವಣೆಗಳ ಬಗ್ಗೆಯೂ ಈ ಮಾತು ಹೇಳಲಾಗದು. 

ಆದರೆ ತೊಂಭತ್ತರ ದಶಕದ ನಂತರದಲ್ಲಿ ನಡೆದ ಬಹುತೇಕ ಚುನಾವಣೆಗಳು ತಮ್ಮ ಮೂಲ ಸ್ವರೂಪವನ್ನು ಕಳೆದುಕೊಂಡು ಒಂದು ಬೃಹತ್ ಸಂತೆಯ ಸ್ವರೂಪ ಪಡೆದುಕೊಂಡಿವೆ. ಬದಲಾದ ಆರ್ಥಿಕ ನೀತಿಯ ಫಲವಾಗಿ ಪ್ರವರ್ದಮಾನಕ್ಕೆ ಬಂದ ಎಲೆಕ್ಟ್ರಾನಿಕ್ ಮಾಧ್ಯಮಗಳು ಒಂದು ದೊಡ್ಡ ಉದ್ದಿಮೆಯಾಗಿ ಬೆಳೆದು ನಿಂತಿತು. ಆಗ ನಾಯಿಕೊಡೆಗಳಂತೆ ಹುಟ್ಟಿಕೊಂಡ ಇಂಗ್ಲೀಷ್ ಮತ್ತು ಪ್ರಾದೇಶಿಕ ಭಾಷೆಗಳ ದೃಶ್ಯ ಮಾಧ್ಯಮಗಳು ನಮ್ಮ ಇಡೀ ಚುನಾವಣೆಯ ಪ್ರಕ್ರಿಯೆಯನ್ನು ಹೈಜಾಕ್ ಮಾಡಿಬಿಟ್ಟಿವೆ.

ಇನ್ನೂ ಸ್ಪಷ್ಟವಾಗಿ ಹೇಳುವುದಾದಲ್ಲಿ, ನಮ್ಮ ಸಮೂಹ ಮಾದ್ಯಮಗಳು (ಮುಖ್ಯವಾಗಿ ಎಲೆಕ್ಟ್ರಾನಿಕ್ ಮಾದ್ಯಮಗಳು) ಇಡೀ ದೇಶವನ್ನು ಒಂದು ಮಾರುಕಟ್ಟೆಯನ್ನಾಗಿಸಿ (ನಗರದ ಬಾಷೆಯಲ್ಲಿ ಹೇಳುವುದಾದರೆ ಮಾಲ್ ಅನ್ನಾಗಿಸಿ) ಮತದಾರರನ್ನು ಗ್ರಾಹಕರನ್ನಾಗಿಸಿ, ರಾಜಕೀಯ ಪಕ್ಷಗಳು, ಮತ್ತವುಗಳ ನಾಯಕರುಗಳನ್ನು ಮಾರಾಟದ ಸರಕುಗಳನ್ನಾಗಿಸಿ ಬಿಟ್ಟಿವೆ. ಇದಕ್ಕೆ ಕಾರಣವೂ ಸ್ಪಷ್ಟ: ಮುಕ್ತ ಆರ್ಥಿಕ ನೀತಿಯ ನಂತರ ಪ್ರಾರಂಭವಾದ ಬಹುತೇಕ ಸುದ್ದಿವಾಹಿನಿಗಳು ಒಂದಲ್ಲಾ ಒಂದು ಕಾರ್ಪೋರೇಟ್-ಬಂಡವಾಳಶಾಹಿಗಳ ಒಡೆತನದಲ್ಲಿವೆ. ಅಂತಹ ಬಲಾಢ್ಯ ಶಕ್ತಿಗಳು ತಮ್ಮ ಹಿತಾಸಕ್ತಿಯನ್ನು ಕಾಪಾಡುವ ರಾಜಕೀಯ ಪಕ್ಷಗಳ ಮತ್ತು ಅವುಗಳ ನಾಯಕರುಗಳನ್ನು ತಮ್ಮ ಮಾಧ್ಯಮಗಳ ಮೂಲಕ ಪ್ರಮೋಟ್ ಮಾಡುತ್ತ, ಚುನಾವಣೆಗಳನ್ನು, ಮತ್ತದರ ಪಲಿತಾಂಶಗಳನ್ನು ತಮಗೆ ಬೇಕಾದ ರೀತಿಯಲ್ಲಿ ಬರುವಂತೆ ನೋಡಿಕೊಳ್ಳುವ ಪ್ರಯತ್ನದಲ್ಲಿವೆ. ತಮಗೆ ಬೇಕಾದ ಪಕ್ಷಗಳು,ನಾಯಕರುಗಳನ್ನು ಬಣ್ಣಬಣ್ಣದ ಜಾಹಿರಾತುಗಳ ಮೂಲಕ ಪರಿಣಾಮಕಾರಿಯಾಗಿ ಬಿಂಬಿಸುತ್ತ ಮತದಾರರಿಗೆ ಮಾರುತ್ತಿದ್ದಾರೆ. ಇದರ ಕಾರ್ಯವೈಖರಿ ಹೀಗಿದೆ:

ಚುನಾವಣೆಗಳಿನ್ನು ಆರು ತಿಂಗಳಿರುವಾಗಲೇ ಹಲವು ನಾಟಕೀಯ ಸಮೀಕ್ಷೆಗಳನ್ನು ನಡೆಸುತ್ತಾ, ತಮಗೆ ಬೇಕಾದ ರೀತಿಯಲ್ಲಿ ಜನಾಭಿಪ್ರಾಯ ರೂಪಿಸುವ ಕಾರ್ಯದಲ್ಲಿ ತೊಡಗುತ್ತವೆ. ಈ ಸಂದರ್ಭದಲ್ಲಿ ಅವು ಅನುಕೂಲಕರ ಪಕ್ಷಗಳ ಬಗ್ಗೆ, ವ್ಯಕ್ತಿಗಳ ಬಗ್ಗೆ ಪ್ರಾಯೋಜಿತ ಸುದ್ದಿಗಳನ್ನು ತೋರಿಸುತ್ತ ಇಡೀ ಸಮುದಾಯದ ಮೇಲೆ ಪರೋಕ್ಷವಾಗಿ ಪ್ರಬಾವ ಬೀರಲು ಪ್ರಯತ್ನಿಸುತ್ತವೆ.

ಹಿಂದೆಲ್ಲ ಚುನಾವಣೆಯ ಸಮಯದಲ್ಲಿ ರಾಜಕೀಯ ಪಕ್ಷಗಳು ಪ್ರತಿ ಊರಲ್ಲಿಯೂ ನಡೆಸುತ್ತಿದ್ದ ಬೀದಿ ಬದಿಯ ಸಭೆಗಳಾಗಲಿ, ಪಾದಯಾತ್ರೆಗಳಾಗಲಿ, ವೈಯುಕ್ತಿಕ ಮನೆಬೇಟಿಗಳಾಗಲಿ ಇವತ್ತಿನ ಚುನಾವಣೆಗಳಲ್ಲಿ ಕಾಣುತ್ತಿಲ್ಲ. ಇಡೀ ಚುನಾವಣೆಯ ಪ್ರಚಾರ ಸುದ್ದಿವಾಹಿನಿಗಳ ಮೂಲಕವೇ ನಡೆಯುತ್ತಿದೆ. ಇದರ ಜೊತೆಗೆ ಸಂವಾದ ಇನ್ನಿತರೆ ಹೆಸರುಗಳ ಟಾಕ್ ಶೋಗಳಲ್ಲಿ ತಮಗೆ ಬೇಕಾದದ್ದನ್ನು ಹೇಳುವ ರಾಜಕೀಯ ವಿಶ್ಲೇಷಣಾಕಾರರನ್ನು ಕೂರಿಸಿಕೊಂಡು ಜನತೆಗೆ ತಮ್ಮ ಸಂದೇಶ ತಲುಪಿಸುತ್ತಿವೆ.

ಇದಕ್ಕೆ ತಕ್ಕ ಹಾಗೆ ನಮ್ಮ ರಾಜಕೀಯ ಪಕ್ಷಗಳು ಸಹ ವೈಯುಕ್ತಿಕವಾಗಿ ಜನರನ್ನು ಸಂಪರ್ಕಿಸುವ ಗೋಜಿಗೆ ಹೋಗದೆ, ಸಾವಿರಾರು ಕೋಟಿಗಳನ್ನು ಕೊಟ್ಟು ತಮ್ಮ ಪ್ರಚಾರದ ಕಾರ್ಯವನ್ನು ಖಾಸಗಿ ಜಾಹಿರಾತು ಸಂಸ್ಥೆಗಳ ಕೈಗೆ ಒಪ್ಪಿಸಿವೆ. ಆ ಜಾಹಿರಾತು ಸಂಸ್ಥೆಗಳು ಸೋಪು-ಪೇಸ್ಟು ಮಾರುವ ರೀತಿಯಲ್ಲಿ ಕಿರು ಜಾಹಿರಾತು ಚಿತ್ರಗಳನ್ನು ನಿಮಿಸಿ ವಾಹಿನಿಗಳಲ್ಲಿ ತೋರಿಸುತ್ತ, ಜನರನ್ನು ಮರುಳುಗೊಳಿಸುತ್ತಿವೆ.

ರಾಜಕೀಯದಲ್ಲಿ ಸಕ್ರಿಯವಾಗಿ ಆಸಕ್ತಿ ತೋರದೆ, ದಾರಾವಾಹಿಗಳನ್ನೊ, ಸಿನಿಮಾಗಳನ್ನೊ ನೋಡುವವರಿಗು, ಮದ್ಯೆ ಬರುವ ಜಾಹಿರಾತು ವಿರಾಮಗಳ ಸಮಯದಲ್ಲಿ ರಾಜಕೀಯ ಪಕ್ಷಗಳ, ನಾಯಕರುಗಳ ಸಾಧನೆಗಳ ವಾಣಿಜ್ಯ ಜಾಹಿರಾತುಗಳನ್ನು ತೋರಿಸುತ್ತ ಅವರನ್ನ ಸೆಳೆಯುತ್ತಿವೆ. ಇವತ್ತು ನೀವು ಯಾವುದೇ ವಾಹಿನಿಯನ್ನು ನೋಡಿದರು ಅಲ್ಲಿ ನರೇಂದ್ರ ಮೋದಿಯ ಪುರಾತನ ಸಂದರ್ಶನವನ್ನೋ, ಇಲ್ಲ, ರಾಹುಲ್ ಗಾಂದಿಯ ರ್ಯಾಲಿಯ ಬಾಷಣವನ್ನೋ ನೋಡಬಹುದಾಗಿದೆ.

ಇದರ ಜೊತೆಗೆ ಮಾದ್ಯಮಗಳು ಒಂದು ಭ್ರಮಾತ್ಮಕ ಅಲೆಯನ್ನು ಸೃಷ್ಠಿಸುವ ಕ್ರಿಯೆಯಲ್ಲಿ ಸದಾ ನಿರತವಾಗಿರುತ್ತವೆ. ಇದಕ್ಕೆ ಉದಾಹರಣೆಯೆಂದರೆ, 2014ರ ಹೊತ್ತಿಗೆ ಶ್ರೀ ನರೇಂದ್ರಮೋದಿಯವರನ್ನು ಇಡೀ ರಾಷ್ಟ್ರವನ್ನು ಕಾಪಾಡಲು ಬಂದ ಅವತಾರ ಪುರುಷನೆಂಬಂತೆ ಬಿಂಬಿಸಿ. ದೇಶದಾದ್ಯಂತ ಮೋದಿ ಅಲೆಯನ್ನು ಸೃಷ್ಠಿಸಿ ಇಡೀ ಚುನಾವಣೆಯನ್ನು ವ್ಯಕ್ತಿಕೇಂದ್ರಿತ ಮಾಡಿದ್ದು.

ಈ ಬಾರಿಯೂ ಕಳೆದ ಆರು ತಿಂಗಳಿಂದ ಅದರಲ್ಲೂ ಸರ್ಜಿಕಲ್ ಸ್ಟ್ರೈಕ್ ನಂತರ ಮೋದಿಯವರೊಬ್ಬರೆ ಉಗ್ರರನ್ನು ಸದೆ ಬಡಿಯಲ್ಲರೆಂಬ ಹುಸಿ ಇಮೆಜನ್ನು ಮಾಧ್ಯಮಗಳು ಸೃಷ್ಠಿಮಾಡಿ ಜನರನ್ನೂ ಈ ಸಮ್ಮೋಹಿನಿಗೆ ಒಳಗಾಗಿಸಿಬಿಟ್ಟಿವೆ. 

ಈ ಹಿನ್ನೆಲೆಯಲ್ಲಿ ನೋಡಿದಾಗ ಇಡೀ ಚುನಾವಣೆಯ ಪ್ರಕ್ರಿಯೆಗಳು ವಾಸ್ತವದಿಂದ ದೂರವುಳಿದಂತೆ ಕಾಣುತ್ತಿದೆ. ಸಾರ್ವತ್ರಿಕ ಚುನಾವಣೆಯೊಂದರಲ್ಲಿ ಚರ್ಚೆಯಾಗಬೇಕಿದ್ದ, ದೇಶವನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳಾಗಲಿ, ಸಮಕಾಲೀನ ಸಮಸ್ಯೆಗಳ ಬಗ್ಗೆಯಾಗಲಿ ಯಾವುದೇ ಚರ್ಚೆ ನಡೆಯುವಂತೆ ಕಾಣುತ್ತಿಲ್ಲ. ರಾಜಕೀಯ ಪಕ್ಷಗಳ ಸಿದ್ದಾಂತಗಳಾಗಲಿ, ನಾಯಕರುಗಳ ಸೈದ್ದಾಂತಿಕ ಬದ್ದತೆಯಾಗಲಿ ಈ ಚುನಾವಣೆಗಳಲ್ಲಿ ಅಪ್ರಸ್ತುತವಾಗಿಬಿಟ್ಟಿವೆ.

ಹೀಗಾಗಿ ಇವತ್ತು ಚುನಾವಣೆಗಳಲ್ಲಿ ಗೆಲ್ಲಲು ಪಕ್ಷಗಳ ಪ್ರಣಾಳಿಕೆಗಳಾಗಲಿ, ಅಭ್ಯರ್ಥಿಗಳ ಚಾರಿತ್ರ್ಯವಾಗಲಿ ಮುಖ್ಯವಾಗದೆ, ಪಕ್ಷಗಳ ಬಣ್ಣಬಣ್ಣಗಳ ಜಾಹಿರಾತುಗಳು ಮತ್ತು ನಾಯಕರುಗಳ ಮಾಧ್ಯಮ ಬಿಂಬಿತ ವರ್ಚಸ್ಸುಗಳೇ ಮುಖ್ಯವಾಗಿವೆ.

ಆದ್ದರಿಂದ ಪ್ರಸ್ತುತ ಚುನಾವಣೆಯಲ್ಲಿ ನಿಜಕ್ಕೂ ಚರ್ಚೆಯಾಗಬೇಕಾಗಿದ್ದ ಭ್ರಷ್ಟಾಚಾರವಾಗಲಿ, ಕೋಮುವಾದವಾಗಲಿ ಚರ್ಚೆಯಾಗುತ್ತಿಲ್ಲ. ಬದಲಿಗೆ, ಆಕ್ರಮಣಕಾರಿ ವ್ಯಕ್ತಿತ್ವದ ಮೋದಿಯ ಉಗ್ರ ಬಾಷಣಗಳು, ಪೆದ್ದುತನದಂತೆ ಕಾಣುವ ರಾಹುಲರ ನಡವಳಿಕೆಗಳೇ ಮುಖ್ಯ ಚಚೆಯ ವಿಷಯಗಳಾಗಿವೆ. ಇವತ್ತು ಉಳಿದ ವಿಷಯಗಳನ್ನೆಲ್ಲ ಕೈ ಬಿಟ್ಟು, ಇಡೀ ಚುನಾವಣೆ ಪ್ರಕ್ರಿಯೆ ಈ ಇಬ್ಬರು ವ್ಯಕ್ತಿಗಳ ಸುತ್ತಲೆ ಗಿರಕಿ ಹೊಡೆಯುತ್ತಿದೆ, ಇದಕ್ಕೆ ಕಾರಣ ಮಿತಿಮೀರಿ ಸಕ್ರಿಯವಾಗಿರುವ, ಪೂರ್ವಾಗ್ರಹ ಪೀಡಿತ ಮಾದ್ಯಮಗಳೆಂದರೆ ತಪ್ಪಾಗಲಾರದು.

ಈ ಕಾರಣದಿಂದಲೆ ನಾನು ಮೊದಲಿಗೆ ಹೇಳಿದ್ದು: ಇಡೀ ದೇಶ ಇವತ್ತು ಒಂದು ಬೃಹತ್ ಮಾರಾಟದ ಮಳಿಗೆಯಾಗಿದೆ, ಮತದಾರರು ಗ್ರಾಹಕರಾಗಿದ್ದಾರೆ, ಪಕ್ಷಗಳು ಮತ್ತು ನಾಯಕರುಗಳು ಮಾರಾಟಕ್ಕಿಟ್ಟ ವಸ್ತುಗಳಾಗಿವೆ ಎಂದು. ಅಂದರೆ ಇವತ್ತು ಚುನಾವಣೆಗಳು ಡಿಸ್ಕೌಂಟ್ ಸೇಲಿನ ಬಿಗ್ ಬಜಾರಿನಂತಾಗಿವೆ.

ಕು.ಸ.ಮಧುಸೂದನ ರಂಗೇನಹಳ್ಳಿಯವರ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

No comments:

Post a Comment