Apr 1, 2019

ಅಳಲು ಅಳುಕುತ್ತಾಳೆ

ಕು.ಸ.ಮಧುಸೂದನ್
ಜನಜಂಗುಳಿಯ ದಟ್ಟಾರಣ್ಯದಲ್ಲಿ
ಒತ್ತೊತ್ತಾಗಿ ಕಟ್ಟಿದ ಮನೆಗಳ ಓಣಿಯೊಳಗೀಗ
ನಾಚುತ್ತಾನೆ ಚಂದ್ರ ಹಣಕಲು
ಅಳುಕುತ್ತಾಳವಳು ಬಿಕ್ಕಲು.

ಬಡಿದ ಬಾಗಿಲುಗಳಿಂದಲೂ ತಲೆ ಒಳಹಾಕುತ್ತವೆ
ಮುಚ್ಚಿದ ಕಿಟಕಿಗಳಿಂದೆಯೂ ಕಿವಿಗಳಿರುತ್ತವೆ ಕದ್ದು ಕೇಳಲು
ಆತ್ಮಸಂಗಾತದ ಮಾತು ಉಸುರಿ
ಮೃದು ಮಾಂಸಖಂಡಗಳ ಗೆಬರಿ
ಉರಿಯುವ ಗಾಯಕ್ಕೆ ಸವರಿದಂತೆ ಉಪ್ಪು

ವಿದಾಯದ ಕೊನೆಯ ಮಾತನ್ನೂ ಆಡದೆ ಹೊರಟು ಹೋದವನ
ನೆರಳೀಗಲೂ ಹೆದರಿಸುತ್ತದೆ.
ಈ ರಾತ್ರಿ ಮುಗಿಯುವ ಮಾತಿಲ್ಲ:
ಅಳುತ್ತಿರುವ ಆಕಾಶ
ಕೊಸರುತ್ತಿರುವ ಭೂಮಿ
ಚುಕ್ಕಿಗಳು ಬಿಕ್ಕಿ
ಗೂಡೊಳಗಿನ ಹಕ್ಕಿ ನೋವ ಮುಕ್ಕಿ
ಬಿಚ್ಚಿಟ್ಟ ಹಾಸಿಗೆಯೊಳಗೆಲ್ಲಿದೆ ನಿದ್ದೆ.

ಬಚ್ಚಿಟ್ಟ ನೆನಪುಗಳೆಲ್ಲ
ಬಿಚ್ಚಿದಂತೆ ಬಟ್ಟೆಬೆತ್ತಲಾದವು
ಕಣ್ಣು ತುಂಬಿದ ಹನಿ ನಾಚವು ನಟ್ಟಿರುಳಲ್ಲಿ ಕೆನ್ನೆ ಮೇಲೆ ಜಾರಲು
ಈ ರಾತ್ರಿ ಮುಗಿಯುವ ಮಾತಿಲ್ಲ
ಹೊಸ ಹಗಲಿಗೆಂದು ಹೊಲೆದಿಟ್ಟ
ಮುಖವಾಡಗಳಿಗಿನ್ನುಕೆಲಸವಿಲ್ಲ!

ಮತ್ತೆ ಬರಬಹುದಾದ ಹೊಸ ಸೂರ್ಯನ
ಬೆಳಕಿಗೊಡ್ಡಿದರೆ ಹಳೆಯ ಗಾಯವ ಮಾಗಬಹುದೇನೊ
ಕಾಯುತ್ತಿದ್ದಾರೆ
ಗರತಿಯರು
ಸರತಿಯಲಿ!

No comments:

Post a Comment