Feb 25, 2019

ಒಂದು ಬೊಗಸೆ ಪ್ರೀತಿ - 7

ondu bogase preeti
ಡಾ. ಅಶೋಕ್. ಕೆ. ಆರ್ ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ಕೆಲವೊಮ್ಮೆ ಮದುವೆಯಾಗಿದ್ದಾದರೂ ಯಾವ ಸಂಭ್ರಮಕ್ಕೆ ಎನ್ನಿಸಿಬಿಡುತ್ತೆ. ಒಂದಿಷ್ಟು ಪ್ರೀತಿಯೂ ರಾಜೀವನಿಗೆ ನನ್ನ ಮೇಲೆ ಇಲ್ಲವೇನೋ ಎನ್ನುವ ಅನುಮಾನ ಬರುವುದು ಅಪರೂಪವಾದರೂ ಬರುತ್ತದೆಯೆನ್ನುವುದು ಯಾಕೋ ಎಲ್ಲವೂ ಸರಿ ಹೋಗ್ತಿಲ್ಲದಿರುವುದರ ಸೂಚನೆಯಾ? ನಮ್ಮ ಮನೆಯ ಪಕ್ಕವೇ ಅವರ ಮನೆಯಿದ್ದಿದ್ದು. ನಾನು ಎಂಟನೇ ತರಗತಿ ಓದುತ್ತಿರುವಾಗಲೇ ಅವರಿಗೆ ನನ್ನ ಮೇಲೆ ಮನಸ್ಸಿತ್ತಂತೆ. ಆಗವರು ಹತ್ತನೇ ಕ್ಲಾಸು. ‘ಏನ್ರೀ ನಾನು ದೊಡ್ಡೋಳಾಗ್ತಿದ್ದ ವಿಷಯ ಗೊತ್ತಾಗ್ತಿದ್ದಂತೆ ಲೈನ್ ಹೊಡೆಯೋಕೆ ಶುರು ಮಾಡಿದ್ರಾ’ ಎಂದು ರೇಗಿಸುತ್ತಿರುತ್ತೇನೆ. ಮೂಡ್ ಚೆನ್ನಾಗಿದ್ರೆ ನಕ್ಕು ಒಂದು ಮುತ್ತು ಕೊಡುತ್ತಾರೆ, ಎರಡೂ ಕೆನ್ನೆಗೊಂದೊಂದು. ನನಗೇನೋ ಮುತ್ತು ಎಂದರೆ ತುಟಿಗೆ ತುಟಿಗೆ ಒತ್ತಿ ಕಳೆದುಹೋಗೋದೇ ಚೆಂದ ಅನ್ನಿಸುತ್ತೆ. ಅವರಿಗದು ಅಷ್ಟು ಇಷ್ಟವಾಗಲ್ಲ, ಎಂಜಲಾಗುತ್ತೆ ಅಂತಾರೆ! ಮೂಡ್ಸರಿ ಇರಲಿಲ್ಲವಾ ಅದೇ ನಾನು ಜೀವನದಲ್ಲಿ ಮಾಡಿದ ಮೊದಲ ಮತ್ತು ಕೊನೆಯ ತಪ್ಪು. ನಿನ್ನ ಕಟ್ಕೊಳ್ಳದೇ ಹೋಗಿದ್ರೆ ಜೀವನ ಚೆನ್ನಾಗಿರ್ತಿತ್ತು ಅಂತ ಮುಖದ ಮೇಲೆ ಹೊಡೆದಂಗೆ ಹೇಳಿಬಿಡೋರು. ಇವತ್ತು ಸಂಜೆ ಅವರ ಮೂಡು ಸ್ವಲ್ಪವೂ ಸರಿಯಿರಲಿಲ್ಲ ಎನ್ನಿಸುತ್ತೆ. ಬಾಗಿಲು ತೆಗೆಯುತ್ತಿದ್ದಂತೆ ‘ವೆಲಕಮ್ ರಾಜಿ ಡಾರ್ಲಿಂಗ್’ ಎಂದ್ಹೇಳಿ ತಬ್ಬಿಕೊಳ್ಳಲು ಕೈಚಾಚಿದೆ. ಎಷ್ಟೇ ಕೋಪವಿದ್ದರೂ ಒಮ್ಮೆ ತಬ್ಬಿ ದೂರ ತಳ್ಳುತ್ತಿದ್ದರು. ಇವತ್ಯಾಕೋ ಪೂರ್ತಿ ಅನ್ಯಮನಸ್ಕರಾಗಿಬಿಟ್ಟಿದ್ದಾರೆ. ನೆಪಕ್ಕೂ ತಬ್ಬಿಕೊಳ್ಳದೆ “ಬರೀ ಪ್ರೀತಿ ಪ್ರೇಮದಿಂದ ಹೊಟ್ಟೆ ತುಂಬಲ್ಲ ಧರಣಿ. ಮೂರೊತ್ತು ತಬ್ಕೊಂಡು ಮಲಗಿಕೊಂಡ್ರೆ ಇಂತ ಚಿಕ್ಕ ಚಿಕ್ಕ ಬಾಡಿಗೆ ಮನೆಯಲ್ಲೇ ಸತ್ತು ಹೋಗಬೇಕಾಗುತ್ತೆ” ಎಂದ್ಹೇಳಿ ನನ್ನನ್ನು ಬದಿಗೆ ಸರಿಸಿ ಚಪ್ಪಲಿಯನ್ನು ಕಳಚಿ ಸೀದಾ ರೂಮಿಗೋಗಿ ಮಲಗಿಕೊಂಡರು. ಮಧ್ಯಾಹ್ನದ ಅಡುಗೆ ಮಾಡಿ ಸ್ವಲ್ಪೇ ಸ್ವಲ್ಪ ಊಟ ಮಾಡಿದ್ದೆ. ಎರಡು ಘಂಟೆ ಮಲಗಿ ಎದ್ದಾಗ ಬೆಚ್ಚಗಿನ ನೀರಲ್ಲಿ ಸ್ನಾನ ಮಾಡಬೇಕೆನ್ನಿಸಿತ್ತು. ಗೀಸರ್ ಆನ್ ಮಾಡಿ ಇಪ್ಪತ್ತು ನಿಮಿಷ ಪತ್ರಿಕೆ ಓದಿ ಸ್ನಾನಕ್ಕೆ ಹೋಗಿ ಬೆತ್ತಲಾದೆ. ನೀರು ಸುಡುವಷ್ಟು ಬಿಸಿಯಿತ್ತು. ತಣ್ಣೀರು ಬೆರೆಸಿಕೊಳ್ಳಬೇಕು ಎನ್ನಿಸಲಿಲ್ಲ. ಬಿಸಿ ಬಿಸಿ ನೀರನ್ನು ಸುರಿದುಕೊಳ್ಳುತ್ತಾ ದೇಹದ ಮೇಲೆಲ್ಲಾ ಸೋಪು ಸರಿಸುತ್ತಿರಬೇಕಾದರೆ ಕಾಮನೆಗಳು ಅರಳಿದವು. ನಾನೂ ರಾಜಿ ಸೇರಿ ಹತ್ತು ದಿನದ ಮೇಲಾಗಿತ್ತು. ಇವತ್ತವರು ಆರೂವರೆಗೆಲ್ಲ ಬಂದರೆ ಸಂಜೆಯೇ ಒಮ್ಮೆ ಸೇರಿ ತಬ್ಬಿಕೊಂಡು ಮಲಗಿ ಎದ್ದು ಊಟ ಮಾಡಿ ಮತ್ತೆ ರಾತ್ರಿ ಸುಸ್ತಾಗುವವರೆಗೆ ಸೇರಿಬಿಡಬೇಕು ಎಂದುಕೊಂಡಿದ್ದೆ. ಅದೇ ಮನಸ್ಸಿನಲ್ಲಿ ಅವರನ್ನು ತಬ್ಬಿಕೊಳ್ಳಲು ಬಾಗಿಲು ತೆರೆದರೆ ಈ ರೀತಿಯ ಮಾತುಗಳು. ರೂಮಿಗೆ ಹೋಗಿ ಏನಾಯ್ತುರೀ ಎಂದು ಕೇಳಲೂ ಮನಸ್ಸಾಗಲಿಲ್ಲ. ಹಾಲಿನಲ್ಲೇ ಟಿವಿ ನೋಡುತ್ತಾ ಕುಳಿತೆ.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಉದಯ ಕಾಮಿಡಿ ಹಾಕಿಕೊಂಡು ನಗುತ್ತಿದ್ದೆ. “ನಾನಿಲ್ಲಿ ಸಾಯ್ತಾ ಬಿದ್ದಿದ್ರೂ ಇವಳಿಗೆ ಟಿವಿ ನೋಡ್ಕೊಂಡು ನಗೋ ಸಡಗರ. ಥೂತ್ತೇರಿಕೆ” ಎಂದು ಗೊಣಗಿಕೊಂಡರು.

ಟಿವಿ ಆಫ್ ಮಾಡಿ ರೂಮಿಗೆ ಹೋದೆ. ಹಣೆಯ ಮೇಲಿದ್ದ ಅವರ ಎಡಗೈಯನ್ನು ಬಲವಂತದಿಂದ ಹಾಸಿಗೆಯ ಮೇಲಿಟ್ಟು ಅದರ ಮೇಲೆ ತಲೆಯಿಟ್ಟು ಮಲಗಿದೆ. ‘ಏನಾಯ್ತು ಹೇಳಿ’

“ಅದನ್ನೆಲ್ಲಾ ಹೇಳ್ಕೊಂಡ್ರೆ ಏನುಪಯೋಗ? ಎಲ್ಲಾ ನನ್ನ ಕರ್ಮ”

‘ಎಲ್ಲರದೂ ಅವರವರ ಕರ್ಮವೇ ಬಿಡಿ. ಉಪಯೋಗವಾಗುತ್ತೋ ಬಿಡುತ್ತೋ ಏನಾಯ್ತು ಅಂತ ಹೇಳಿ. ಮನಸ್ಸು ಸ್ವಲ್ಪ ಹಗುರವಾಗುತ್ತೆ’

“ಮನಸ್ಸಾಗುತ್ತೋ ಇಲ್ವೋ ಜೇಬಂತೂ ಹಗುರವಾಗೇ ಇದೆ”

‘ದುಡ್ಡಿನ ವಿಷಯಕ್ಕೆ ಅಷ್ಟೊಂದು ತಲೆಕೆಡಿಸಿಕೋಬೇಡಿ ಅಂತ ಎಷ್ಟು ಸಲ ಹೇಳ್ಬೇಕು’

“ಬರೀ ದುಡ್ಡಿನ ವಿಷಯವಲ್ಲ ಇದು”

‘ಮತ್ತೆ’

“ಏನೂ ಗೊತ್ತಿಲ್ದೆ ಇರೋ ಹಾಗೆ ಕೇಳ್ತಾಳೆ. ಓದಿದ್ದು ಎಂ.ಫಾರ್ಮ. ಮಾಡ್ತಿರೋದು ಯಾವುದೋ ಥರ್ಡ್ ಕ್ಲಾಸ್ ಕಂಪನೀಲಿ ಡಾಟಾ ಎಂಟ್ರಿ”

‘ನೀವೇ ಅಲ್ವೇ ಹೋದ ತಿಂಗಳು ಫಾರ್ಮಸಿ ಕಂಪನೀಲಿ ಕೆಲಸ ಬಿಟ್ಟು ಇದಕ್ಕೆ ಸೇರಿದ್ದು’

“ಆಡ್ಕೋ ಆಡ್ಕೋ. ಏನ್ಮಾಡ್ತೀಯ. ಎಂಬಿಬಿಎಸ್ ಓದಿದ್ದು ನೆತ್ತಿಗೇರಿದೆ ನಿನಗೆ”

‘ಇದರಲ್ಲಿ ಆಡ್ಕೊಂಡಿದ್ದೇನು? ಕೆಲಸ ಬಿಟ್ಟಿದ್ದು ನಿಜ ತಾನೇ’

“ಬಿಡದೇ ಇನ್ನೇನ್ ಮಾಡ್ಲಿ. ಕಷ್ಟಪಟ್ಟು ಎಂ.ಫಾರ್ಮ ಮಾಡಿ ಪುಟಗೋಸಿ ಐದು ಸಾವಿರ ಸಂಬಳಕ್ಕೆ ಕೆಲಸ ಮಾಡಬೇಕಿತ್ತಾ?”

‘ಇಲ್ಲಿ ಹತ್ತರಿಂದ ಹನ್ನೆರಡು ಸಾವಿರ ಸಿಗುತ್ತೆ ಅಂತ ನೀವೇ ತಾನೇ ಆ ಕೆಲಸ ಬಿಟ್ಟು ಬಂದಿದ್ದು. ನಾನಾಗ್ಲೂ ಹೇಳ್ದೆ. ಸಂಬಳ ಕಡಿಮೆಯಾದರೂ ಪರವಾಗಿಲ್ಲ ಕೊನೇಪಕ್ಷ ನಿಮ್ಮ ಫೀಲ್ಡಿನೊಳಗೆ ಹೊರಗೆ ತಿಳಿಯುತ್ತೆ. ಮುಂದಕ್ಕೆ ಉಪಯೋಗವಾಗುತ್ತೆ. ಅಲ್ಲೇ ಇರಿ ಅಂತ’

“ಹೌದಮ್ಮ ನೀವೇ ಬುದ್ಧಿವಂತರು. ನಿನ್ನಂತ ಬುದ್ಧಿವಂತೆಯನ್ನು ಕಟ್ಟಿಕೊಂಡು ನಾನು ಪೆದ್ದು ಕೆಲಸ ಮಾಡಿದೆ”

ನನ್ನ ತಾಳ್ಮೆಯೂ ಕಡಿಮೆಯಾಗುತ್ತಿತ್ತು. ‘ರೀ ಏನೇನೋ ಮಾತನಾಡಬೇಡಿ. ಸರಿಯಾಗಿ ಏನ್ ಆಯ್ತೂಂತ ಹೇಳಿ’

“ತರೋ ಪುಟಗೋಸಿ ನಲವತ್ತು ಸಾವಿರಕ್ಕೆ ಬಾಯಿಗೆ ಬಂದಂತೆ ಮಾತಾಡ್ತೀಯೇನೆ” ಕೈ ತೆಗೆದುಕೊಂಡರು.

‘ಐದ್ಸಾವಿರಾನೂ ಪುಟಗೋಸಿ ಹತ್ಸಾವಿರಾನೂ ಪುಟಗೋಸಿ ನಲವತ್ತೂ ಪುಟಗೋಸಿ’ ಎದ್ದು ಹೋಗಿಬಿಡೋಣ ಎನ್ನಿಸಿತು. ಆದರೆ ರಾಜಿ ಯಾಕೋ ಇವತ್ತು ತುಂಬಾ ವಿಚಲಿತರಾಗಿದ್ದಾರೆ. ನಾನೂ ಮಾತನಾಡಿಸದಿದ್ದರೆ ಒಳಗೊಳಗೇ ಕೊರಗಿಬಿಡುತ್ತಾರೆ. ಮೊದಲೇ ಅವರಿಗೆ ಆತ್ಮವಿಶ್ವಾಸ ಕಡಿಮೆ. ನಾನು ದೂರ ಮಾಡಿದರೆ ಮತ್ತಷ್ಟು ಕಡಿಮೆಯಾಗಿಬಿಡುತ್ತೆ. ಆತ್ಮವಿಶ್ವಾಸ ಕಡಿಮೆಯಾದಷ್ಟೂ ನನ್ನ ಮೇಲೆ ತೋರಿಸುವ ದರ್ಪ ಹೆಚ್ಚಾಗುತ್ತೆ. ಎರಡೂ ನನಗೆ ಇಷ್ಟವಿಲ್ಲ. ಮತ್ತೆ ಅವರ ಕೈ ಎಳೆದುಕೊಂಡೆ.

‘ಏನಾಯ್ತು ಹೇಳ್ರೀ’ ಗೋಗರೆದೆ.

ಒಂದಷ್ಟು ಸಮಾಧಾನವಾಗಿದ್ದರೆನ್ನಿಸುತ್ತೆ.

“ಇನ್ನೇನ್ ಧರಣಿ. ಈ ಡಾಟಾ ಎಂಟ್ರಿ ಆಫೀಸಲ್ಲಿ ನನ್ನ ಜೊತೆ ಕೆಲಸ ಮಾಡುವವರೆಲ್ಲ ಪಿಯುಸಿ ಮುಗ್ಸಿರೋರು. ಕೆಲವರು ಡಿಗ್ರಿ ಮಾಡಿರೋರು. ನಾನು ಒಂದಲ್ಲ ಅಂತ ಎರಡು ಡಿಗ್ರಿ ಮಾಡಿದ್ದೀನಿ. ಅವರ ಜೊತೆ ಕೆಲಸ ಮಾಡಬೇಕು ಅಂದ್ರೆ ಬೇಸರವಾಗಲ್ಲವಾ?”

‘ಅದಕ್ಯಾಕ್ರೀ ಬೇಸರ. ನೀವು ಹೋಗ್ತಿರೋದು ಫಾರ್ಮಸಿ ಕಂಪನಿಗಿಂತ ಒಂದಷ್ಟು ಹೆಚ್ಚು ಸಂಬಳ ಸಿಗುತ್ತೆ ಅನ್ನೋ ಏಕೈಕ ಕಾರಣಕ್ಕೆ. ಇಲ್ಲಿಗಿಂತ ಹೆಚ್ಚಿಗೆ ಸಂಬಳ ಸಿಗುವ ಕೆಲಸ ಸಿಕ್ಕಾಗ ಬಿಟ್ಟರಾಯಿತು’

“ಎರಡು ವರ್ಷದಿಂದ ಹಿಂಗೇ ಅದೂ ಇದೂ ನೆಪ ಹೇಳ್ಕೊಂಡು ಕಾಲ ತಳ್ತಿದ್ದೀವಿ”

‘ಬೇರೆ ಆಯ್ಕೆ ಏನಿದೆ? ಬೆಂಗಳೂರಿಗೆ ಹೋಗೋಣ ನಿಮಗೆ ಒಳ್ಳೆ ಕೆಲಸ ಸಿಗಬಹುದು ಅನ್ನೋ ಮಾತು ಬಹಳ ಸಲ ಚರ್ಚಿಸಿದ್ದೀವಿ. ನನಗಂತೂ ಇಲ್ಲಿ ಬರುತ್ತಿರುವಷ್ಟೇ ಸಂಬಳ ಸಿಗೋದು ಅಲ್ಲೂನು. ಕಡಿಮೆ ಸಿಕ್ಕರೂ ಆಶ್ಚರ್ಯವಿಲ್ಲ. ಇನ್ನು ನಿಮಗೆ ಮೊದಮೊದಲು ಹನ್ನೆರಡು ಹದಿಮೂರು ಸಿಕ್ಕರೆ ಹೆಚ್ಚು ಅಂತ ನೀವೇ ಹೇಳ್ತಿರ್ತೀರ. ಇಷ್ಟವಿಲ್ಲದಿದ್ದರೂ ಸರಿ ಹೋಗೋಣ ಅಂತ ನಾನೇ ಅಂದ್ರೂ ನೀವೇ ಮನಸ್ಸು ಮಾಡಲ್ಲ’

“ಆ ಬೆಂಗ್ಳೂರಲ್ಲಿ ಬಾಡಿಗೆಗೇ ನನ್ನ ಸಂಬಳ ಮುಗಿದುಹೋಗುತ್ತೆ. ಇನ್ನು ಕಾರು ಲೋನು ಮನೆ ಖರ್ಚೆಲ್ಲ?”

‘ಕಾರೇನು ಅನಿವಾರ್ಯವೇ? ತೆಗೆದುಕೊಳ್ಳಬೇಕಾದರೇ ನಾನು ಹೇಳ್ದೆ ಯಾಕ್ರೀ ಇದೆಲ್ಲ ಅಂತ. ನೀವೇ ಬಲವಂತ ಮಾಡಿ ತೆಗೆಸಿದ್ರಿ. ಈಗ್ಲೂ ಏನಂತೆ. ಕಾರು ಮಾರಿಬಿಡೋಣ. ಬೆಂಗಳೂರಲ್ಲಿ ಒಂದು ಪುಟ್ಟ ಮನೆ ಮಾಡಿಕೊಳ್ಳೋಣ. ನೆಮ್ಮದಿಯಾಗಿರೋದಲ್ವ ಮುಖ್ಯ’

“ಆ ಬೆಂಗಳೂರು ಟ್ರಾಫಿಕ್ಕಲ್ಲಿ ನೆಮ್ಮದಿ ಸಿಗೋದು ಅಷ್ಟರಲ್ಲೇ ಇದೆ. ಮೈಸೂರಲ್ಲೇ ಇದ್ದು ಏನಾದ್ರೂ ಮಾಡೋಣ ಅಂತ”

‘ಏನು ಮಾಡೋಣ ಅಂತ?’

“ಏನಾದ್ರೂ ಬ್ಯುಸಿನೆಸ್ಸು”

‘ಏನ್ ಬ್ಯುಸಿನೆಸ್ಸು’

“ಇನ್ನೂ ಯೋಚಿಸ್ತಿದ್ದೀನಿ. ಪಕ್ಕಾ ಅನ್ನಿಸಿದಾಗ ನಾನೇ ಹೇಳ್ತೀನಿ”

‘ಸರಿ. ಚೆನ್ನಾಗಿ ಯೋಜನೆ ಮಾಡಿ ಯೋಚನೆ ಮಾಡಿ. ದುಡ್ಡಿಗೆ ಬೇಕಾದರೆ ಕಾರು ಮಾರಿದರಾಯಿತು’

“ಕಾರು ಮಾರೋ ಯೋಚನೆಯೆಲ್ಲ ಬಿಡು. ಕಾರಿರೋದೇ ಒಂದು ಸ್ಟೇಟಸ್. ಅದನ್ನ ಮಾರಿ ಸ್ಟೇಟಸ್ ಕಡಿಮೆ ಮಾಡ್ಕೊಳ್ಳೋದಕ್ಕೆಲ್ಲಾ ನಾನು ಒಪ್ಪಲ್ಲ”

ಕಾರೆಲ್ಲ ಯಾವ ಸ್ಟೇಟಸ್ ಸುಮ್ನಿರ್ರಿ ಎನ್ನುವ ಮಾತನ್ನು ಹೇಳಲಿಲ್ಲ.

‘ಇಷ್ಟಕ್ಕೆ ಅಷ್ಟೆಲ್ಲ ತಲೆ ಕೆಡಿಸ್ಕೊಳ್ಳೋದು ಏನಿದೆ ಹೇಳಿ. ನಮಗೇನ್ ಅರವತ್ತು ಎಪ್ಪತ್ತು ವರುಷವಾಗಿಬಿಟ್ಟಿಲ್ಲವಲ್ಲ. ಯೋಚನೆ ಮಾಡಿ. ಸರಿ ಅನ್ನಿಸಿದರೆ ಖಂಡಿತ ಮಾಡೋಣ’

“ಸರಿ ಡಾರ್ಲಿಂಗ್. ನೀನು ಹೇಳಿದಂಗೆ ಆಗಲಿ”

‘ಹ್ಞಾ ಹ್ಞಾ. ಈಗ ಬಂದ್ರು ಡಾರ್ಲಿಂಗ್ ಅಂತ. ಬಾಗಿಲು ತೆಗೆದಾಗ ದೂರ ತಳ್ಳುವಾಗ ಡಾರ್ಲಿಂಗ್ ನೆನಪಾಗಲಿಲ್ಲವೇನೋ’

“ಹೋಗ್ಲಿ ಬಿಡು ಡಾರ್ಲಿಂಗ್. ಬಾ ಇಲ್ಲಿ ಮುತ್ತು ಕೊಡ್ತೀನಿ” ಎಂದ್ಹೇಳಿ ಕೆನ್ನೆಗೊಂದು ಗದ್ದಕ್ಕೊಂದು ಮುತ್ತು ಕೊಟ್ಟರು. ಬಟ್ಟೆ ಬದಲಿಸಲು ಮೇಲೇಳುತ್ತಿದ್ದವರನ್ನು ಹಿಡಿದೆಳೆದುಕೊಂಡೆ. ಏನು ಎಂಬಂತೆ ನೋಡಿದರು. ‘ಇವತ್ತಿಗೆ ಇದು ಸಾಲಲ್ಲ. ಬೇಜಾರು ಮಾಡಿದ್ದಕ್ಕೆ ಇನ್ನೂ ಜಾಸ್ತಿ ಬೇಕು’ ಎನ್ನುತ್ತಾ ತುಟಿ ಮುಂದೆ ಮಾಡಿದೆ. “ಈಗ ಸಿಗರೇಟು ಸೇದ್ಕೊಂಡು ಬಂದಿದ್ದೀನಿ ಕಣೇ. ಎಂಜಲಲ್ಲೆಲ್ಲ ಸಿಗರೇಟು ಅಂಶವಿರುತ್ತೆ” ಎಂದು ತಪ್ಪಿಸಿಕೊಳ್ಳಲು ನೋಡಿದರು. ‘ಏನು ಪರವಾಗಿಲ್ಲ ಬನ್ನಿ’ ಎಂದು ಅವರನ್ನು ಮೇಲೆ ಎಳೆದುಕೊಂಡೆ. ತುಟಿಗೆ ತುಟಿ ಸೇರಿಸಿದೆ. ಸಿಗರೇಟಿನ ಘಾಟು ಸಾಕೆನ್ನಿಸುವಂತೆ ಮಾಡಿತ್ತಾದರೂ ನಾನೇ ಎಳೆದುಕೊಂಡ ಕಾರಣ ವಾಸನೆ ಸಹಿಸಿ ಮುತ್ತನ್ನನುಭವಿಸಿದೆ. ಅವರ ಕೆನ್ನೆ ಹಿಡಿದಿದ್ದ ಕೈಗಳನ್ನು ಹಾಗೆಯೇ ಕೆಳಗೆ ಜಾರಿಸಿ ಅವರು ಹಾಕಿದ್ದ ಟೀ ಶರ್ಟನ್ನು ಮೇಲೆತ್ತಿದೆ. ತುಟಿ ಬಿಡಿಸಿಕೊಂಡು “ಏನ್ ಮಾಡ್ತಾ ಇದ್ದೀಯ. ವಾಸನೆ ಹೊಡೀತಿದ್ದೀನಿ ನಾನು” ಎಂದು ಹೇಳುತ್ತ ಮೇಲೆದ್ದೇ ಬಿಟ್ಟರು. ನಿಟ್ಟುಸಿರುಬಿಟ್ಟು ಹತ್ತು ನಿಮಿಷ ಮಲಗಿದಲ್ಲೇ ಮಲಗಿ ಹೊರಬಂದೆ. ಅವರಷ್ಟೊತ್ತಿಗೆ ಮುಖ ತೊಳೆದು ಬಂದು ಟಿವಿ ನೋಡುತ್ತ ಕುಳಿತಿದ್ದರು. ಕಾಫಿ ಮಾಡಲು ಅಡುಗೆ ಮನೆಗೆ ಹೋದೆ.

ಮುಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

No comments:

Post a Comment