Sep 16, 2018

ತೆಲಂಗಾಣ: ಕೆ. ಚಂದ್ರಶೇಖರ್ ರಾವ್ ಅವರ ರಾಜಕೀಯ ಜೂಜಾಟ!

ಕು.ಸ.ಮಧುಸೂದನ ರಂಗೇನಹಳ್ಳಿ
ವರ್ತಮಾನದ ರಾಜಕಾರಣದಲ್ಲಿ ಇದ್ದಕ್ಕಿದ್ದಂತೆ ಯೂಟರ್ನ್ ಹೊಡೆದು ತನ್ನ ಅಧಿಕಾರದಾಹವನ್ನು ಪ್ರದರ್ಶಿಸಿ, ಅದಕ್ಕೆ ಪೂರಕವಾಗಿ ಸಂವಿದಾನದತ್ತವಾಗಿ ಜನತೆ ನೀಡಿದ ಐದು ವರ್ಷದ ಅಧಿಕಾರಾವಧಿಯನ್ನು ತಿರಸ್ಕರಿಸಿ, ವಿದಾನಸಭೆಯನ್ನು ವಿಸರ್ಜಿಸಿದ ತೆಲಂಗಾಣದ ಮಾಜಿ ಮುಖ್ಯಮಂತ್ರಿ ಶ್ರೀ ಕೆ.ಚಂದ್ರಶೇಖರ್ ರಾವ್ ತಮ್ಮ ರಾಜ್ಯದ ಜನತೆಗೆ ಮಾತ್ರವಲ್ಲದೆ ಸಂವಿದಾನಕ್ಕೂ ದ್ರೋಹ ಬಗೆದಿದ್ದಾರೆ. ಈ ಹಿಂದೆಯೂ ಇಂಡಿಯಾದ ರಾಜಕಾರಣದಲ್ಲಿ ಹಲವಾರು ಮುಖ್ಯಮಂತ್ರಿಗಳು ಅವಧಿಗು ಮುನ್ನವೇ ವಿದಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಿದ್ದಿದೆ. ಆದರೆ ಅವರೆಲ್ಲರಿಗೂ ಹೇಳಿಕೊಳ್ಳಲು ಒಂದೊಂದು ಕಾರಣಗಳಿರುತ್ತಿದ್ದವು. ಸ್ಪಷ್ಟ ಬಹುಮತ ಇಲ್ಲದಿರುವುದು, ಸರಕಾರದ ಒಳಗೆ ಹಲವು ರೀತಿಯ ಭಿನ್ನಮತೀಯ ಚಟುವಟಿಕೆಗಳಿರುವುದು, ಸರಕಾರವೇ ದೊಡ್ಡ ಹಗರಣಗಳ ಸುಳಿಗೆ ಸಿಲುಕುವುದು ಹೀಗೇ ವಿದಾನಸಭೆ ವಿಸರ್ಜನೆ ಸಮರ್ಥಿಸಿಕೊಳ್ಳಲು ಅವರುಗಳಿಗೆ ಗಟ್ಟಿ ಕಾರಣಗಳಿರುತ್ತಿದ್ದವು. 

ಈ ಹಿನ್ನೆಲೆಯಲ್ಲಿ ನೋಡಿದರೆ ಚಂದ್ರಶೇಖರ್ರಾವ್ ಅವರಿಗೆ ಇಂತಹ ಯಾವುದೇ ಕಾರಣಗಳೂ ಇರಲಿಲ್ಲ ಮತ್ತು ಅವರ ಸರಕಾರದ ಭದ್ರತೆಗೆ ಯಾವುದೇ ಆಂತರೀಕ ಮತ್ತು ಬಾಹ್ಯ ಬೆದರಿಕೆಯೂ ಇರಲಿಲ್ಲ. ನೂರಾ ಹತ್ತೊಂಭತ್ತು ಸಂಖ್ಯಾಬಲದ ವಿದಾನಸಭೆಯಲ್ಲಿ ಅವರ ಟಿ.ಆರ್.ಎಸ್.ಪಕ್ಷಕ್ಕೆ ತೊಂಭತ್ತು ಸ್ಥಾನಗಳ ರಾಕ್ಷಸ ಬಹುಮತ ಲಭ್ಯವಿತ್ತು. ಜೊತೆಗೆ ಅಂತಹ ಯಾವುದೇ ಭಿನ್ನಮತೀಯ ಚಟುವಟಿಕೆಯಾಗಲಿ, ಹಗರಣಗಳ ಆರೋಪವಾಶಗಲಿ ಇರಲಿಲ್ಲ. ಇಷ್ಟೆಲ್ಲ ಇದ್ದಾಗ್ಯೂ ಚಂದ್ರಶೇಖರ್ ರಾವ್ ಮುಂದಿನ ವರ್ಷದ ಮೇ-ಜೂನ್ ತಿಂಗಳಲ್ಲಿ ಅಂತ್ಯಗೊಳ್ಳಬೇಕಿದ್ದ ವಿದಾನಸಭೆಯನ್ನು ಹೆಚ್ಚೂಕಡಿಮೆ ಹತ್ತು ತಿಂಗಳಿಗೂ ಮುನ್ನವೇ ವಿಸರ್ಜನೆ ಮಾಡಿ ತಮ್ಮ ರಾಜ್ಯವನ್ನು ಚುನಾವಣೆಗೆ ನೂಕಿದ್ದಾರೆ. 
ಇದರ ಹಿಂದಿರುವುದು ರಾಜ್ಯದ ಜನತೆಯ ಅಭಿವೃದ್ದಿಯಾಗಲಿ ಅಥವಾ ಜನತೆಯ ಆಶೋತ್ತರಗಳಾಗಲಿ ಅಲ್ಲ. ಬದಲಿಗೆ ಅವರ ಶುದ್ದ ಅಧಿಕಾರದಾಹ ಮಾತ್ರ. ಯಾಕೆಂದರೆ ಕಳೆದ ಬಾರಿ ಅಂದರೆ 2014ರಲ್ಲಿ ಲೋಕಸಭಾ ಚುನಾವಣೆಯ ಜೊತೆಗೇನೆ ತೆಲಂಗಾಣ ವಿದಾನಸಭೆಗೂ ಚುನಾವಣೆ ನಡೆದಿತ್ತು. ರಾಷ್ಟ್ರದಾದ್ಯಂತ ಬಿರುಗಾಳಿಯಂತೆ ಎದ್ದಿದ್ದ, ಬಾಜಪದ ಪ್ರದಾನಿ ಅಭ್ಯರ್ಥಿಯಾಗಿದ್ದ ಶ್ರೀ ನರೇಂದ್ರಮೋದಿಯವರ ಅಲೆಯ ನಡುವೆಯೂ ಟಿ.ಆರ್.ಎಸ್. ತೊಂಭತ್ತು ಸ್ಥಾನಗಳನ್ನುಗೆದ್ದು ಸ್ವತಂತ್ರವಾಗಿ ಅಧಿಕಾರ ಹಿಡಿದಿತ್ತು. ಮೋದಿ ಪರವಾದ ಅಲೆ ತೆಲಂಗಾಣದ ಮತದಾರರ ಮೇಲೆ ಯಾವುದೇ ಪ್ರಭಾವವನ್ನೂ ಬೀರಿರಲಿಲ್ಲ. ಇದಕ್ಕೆ ಕಾರಣ ಆಂದ್ರಪ್ರದೇಶ ರಾಜ್ಯದಿಂದ ವಿಭಜಿತವಾಗಿ ಸ್ವತಂತ್ರರಾಜ್ಯ ತೆಲಂಗಾಣವನ್ನು ಪಡೆಯಲು ಚಂದ್ರಶೇಖರ್ ರಾವ್ ಅವರ ತೆಲಂಗಾಣ ರಾಷ್ಟ್ರೀಯ ಸಮಿತಿ ಮುಂಚೂಣಿಯಲ್ಲಿ ನಿಂತು ಹೋರಾಟಮಾಡಿದ್ದಾಗಿತ್ತು. ಈ ಟಿ. ಆರ್.ಎಸ್.ಎಸ್ ನ ಮುಖಂಡರಾಗಿದ್ದ ಚಂದ್ರಶೇಖರರಾವ್ ತೆಲಂಗಾಣದ ಜನತೆಯ ದೃಷ್ಠಿಯಲ್ಲಿ ಅದರಲ್ಲೂ ಅಲ್ಲಿನ ಯುವ ಮತದರರ ದೃಷ್ಠಿಯಲ್ಲಿ ಸ್ವಾತಂತ್ರ ಹೋರಾಟಗಾರನ ಉನ್ನತ ಸ್ಥಾನ ಪಡೆದಿದ್ದರು. ಹೊಸ ರಾಜ್ಯವೊಂದರ ಉದಯಕ್ಕೆ ಕಾರಣವಾಗಿದ್ದ ಟಿ.ಆರ್.ಎಸ್.ಪಕ್ಷವನ್ನು ಬೆಂಬಲಿಸುವುದು ತಮ್ಮ ಆದ್ಯ ಕರ್ತವ್ಯವೆಂದು ಬಾವಿಸಿದ ತೆಲಂಗಾಣದ ಜನತೆ ಹಿಂದೆ ಮುಂದೆ ನೋಡದೆ ಅದಕ್ಕೆ ಮತ ಚಲಾಯಿಸಿ ಅಭೂತ ಪೂರ್ವ ಗೆಲುವನ್ನು ಕರುಣಿಸಿದ್ದರು. 

ಆದರೀ ನಾಲ್ಕು ವರ್ಷಗಳಲ್ಲಿ ಗೋದಾವರಿಯಲ್ಲಿ ಸಾಕಷ್ಟು ನೀರು ಹರಿದಿದೆ. ರಾವ್ ಅವರ ಮಗ ತಾರಕ್ ರಾಮಾರಾವ್ ಸೇರಿದಂತೆ ಅವರ ಕುಟುಂಬದ ಹಲವು ಸದಸ್ಯರುಗಳು ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಮಗ ರಾಮರಾವ್ ಮಾಹಿತಿ ತಂತ್ರಜ್ಞಾನ ಇಲಾಖೆಯ ಸಚಿವರಾಗಿದ್ದಾರೆ. ಮಗಳು ಕವಿತಾ ನಿಜಾಮಾಬಾದಿನ ಸಂಸತ್ ಸದಸ್ಯೆಯಾಗಿದ್ದಾರೆ. ಸಹೋದರನ ಮಗ ಹರೀಶ್ ರಾವ್ ನೀರಾವರಿ ಸಚಿವರಾಗಿದ್ದಾರೆ. ಹೀಗೆ ರಾವ್ ಅವರ ಕುಟುಂಬದ ಬಹಳಷ್ಟು ಸದಸ್ಯರು ಒಂದಲ್ಲ ಒಂದು ರಾಜಕೀಯ ಸ್ಥಾನದಲ್ಲಿ ಆಸೀನರಾಗಿದ್ದು ಅವರ ಪಕ್ಷದ ಇತರೇ ಸದಸ್ಯರುಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅದಕ್ಕೆ ತಕ್ಕಂತೆ ಅವರ ಪುತ್ರ ತಾರಕ್ ರಾಮಾರಾವ್ ಡಿಫ್ಯಾಕ್ಟೊ ಮುಖ್ಯಮಂತ್ರಿಯಂತೆ ಅಧಿಕಾರ ಚಲಾಯಿಸುತ್ತಿದ್ದು ರಾವ್ ಅವರ ಉತ್ತರಾದಿಕಾರಿಯೆಂದು ಬಿಂಬಿಸಲ್ಪಡುತ್ತಿದ್ದಾರೆ. ಇದರ ಜೊತೆಗೆ 2014ರ ರಾವ್ ಅವರ ಜನಪ್ರಿಯತೆಯ ಗ್ರಾಫ್ ಇಳಿಯುತ್ತಿದೆ. 2014ರ ನಂತರ ದಿನೇ ದಿನೇ ದುರ್ಬಲಗೊಳ್ಳುತ್ತಿರುವ ಕಾಂಗ್ರೇಸ್ಸಿನ ಸ್ಥಾನವನ್ನು ತುಂಬಲು ಬಾಜಪ ಶಕ್ತಿ ಮೀರಿ ಪ್ರಯತ್ನಿಸುತ್ತ ತನ್ನ ಕಬಂದಬಾಹುಗಳನ್ನು ತೆಲಂಗಾಣದಾದ್ಯಂತ ಚಾಚುತ್ತಿದೆ. ಈ ಎಲ್ಲ ಕಾರಣಗಳಿಂದ ಆತಂಕಕ್ಕೀಡಾಗಿರುವ ರಾವ್ 2019ರ ಲೋಕಸಭಾ ಚುನಾವಣೆಯ ಜೊತೆಗೆ ವಿದಾನಸಭೆಯ ಚುನಾವಣೆಗಳು ನಡೆದಿದ್ದೇ ಆದಲ್ಲಿ ಮೋದಿಯವರ ಜನಪ್ರಿಯತೆ ತೆಲಂಗಾಣದಲ್ಲಿಯೂ ಪ್ರಭಾವ ಬೀರಿ ತಮಗೆ ಸೋಲಾಗಬಹುದೆಂಬ ಬೀತಿ ಅವರನ್ನು ಕಾಡುತ್ತಿದೆ. ನಿಗದಿಯಂತೆ ಚುನಾವಣೆಗಳು ನಡೆದಿದ್ದೇ ಆದಲ್ಲಿ ಬಾಜಪಕ್ಕೆ ಅನುಕೂಲವಾಗಬಹುದೆಂದು ಊಹಿಸಿರುವ ರಾವ್ ಲೋಕಸಭೆಗೂ ಮುನ್ನವೇ ಚುನಾವಣೆ ನಡೆಸಿ ತಮ್ಮ ಪಕ್ಷವನ್ನು ಗೆಲ್ಲಿಸಿಕೊಳ್ಳುವ ಇರಾದೆಯಿಂದ ಈ ಸೆಪ್ಟೆಂಬರ್ ತಿಂಗಳಲ್ಲಿಯೇ ವಿದಾನಸಭೆ ವಿಸರ್ಜಿಸಿದ್ದಾರೆ. 

ಇನ್ನು ಪ್ರಸಕ್ತ ಸನ್ನಿವೇಶದಲ್ಲಿ ರಾವ್ ಅವರ ರಾಜಕೀಯದ ದಿಕ್ಕು ಯಾವ ಕಡೆಗಿದೆಯೆಂದು ಊಹಿಸುವುದು ಕಷ್ಟದ ಕೆಲಸವಾಗಿದೆ. ತೀರಾ ಮೊನ್ನೆಮೊನ್ನೆಯವರೆಗೂ ಕಾಂಗ್ರೆಸ್ ಮತ್ತು ಬಾಜಪಗಳಿಗೆ ಪರ್ಯಾಯವಾದ ತೃತೀಯ ರಂಗವೊಂದನ್ನು ಸ್ಥಾಪಿಸುವ ಮಾತಾಡುತ್ತಿದ್ದ ರಾವ್ ತೃತೀಯ ರಂಗವೊಂದರ ರಚನೆಯ ಕುರಿತಾಗಿ ಕುಮಾರಿ ಮಮತಾ ಬ್ಯಾನರ್ಜಿ, ಮತ್ತು ಮಾಜಿ ಪ್ರದಾನಮಂತ್ರಿಗಳಾದ ಶ್ರೀ ದೇವೇಗೌಡರ ಜೊತೆಗೂ ಕೆಲವು ಸುತ್ತಿನ ಮಾತುಕತೆಗಳನ್ನು ಆಡಿದ್ದರು. ನೆರೆಯ ಆಂದ್ರಪ್ರದೇಶದ ಮುಖ್ಯಮಂತ್ರಿಯಾಗಿರುವ ತೆಲುಗುದೇಶಂನ ಶ್ರೀ ಚಂದ್ರಬಾಬು ನಾಯ್ಟುರವರು ಎನ್.ಡಿ.ಎ. ಮೈತ್ರಿಕೂಟದ ಭಾಗವಾಗಿರುವ ತನಕವೂ ತೃತೀಯ ರಂಗವೊಂದರ ಸ್ಥಾಪನೆಗೆ ಅತೀವ ಉತ್ಸಾಹದಿಂದ ಮಾತಾಡುತ್ತಿದ್ದ ರಾವ್, ಯಾವಾಗ ಚಂದ್ರಬಾಬು ನಾಯ್ಡು ಎನ್.ಡಿ.ಎ. ತೊರೆದು ಹೊರಬಂದರೋ ಆಗಿನಿಂದ ತೃತೀಯ ರಂಗದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದ್ದಾರೆ. ಮುಂದಿನ ಚುನಾವಣೆಯ ಹೊತ್ತಿಗೆ ಬಾಜಪ ಮತ್ತು ತೆಲುಗುದೇಶಂ ಪಕ್ಷಗಳ ಮೈತ್ರಿ ತಮಗೆ ತೊಡಕಾಗಬಹುದೆಂದು ನಂಬಿದ್ದ ರಾವ್ ಅವರಿಗೆ ನಾಯ್ಡುರವರ ನಡೆಯಿಂದ ಸ್ವಲ್ಪ ಆತಂಕ ಕಡಿಮೆಯಾಗಿದ್ದು, ತಾವ್ಯಾಕೆ ಬಾಜಪದ ಜೊತೆಗೇನೆ ಮೈತ್ರಿ ಮಾಡಿಕೊಂಡು ನಿರಾಳವಾಗಿ ಮುಂದಿನ ಚುನಾವಣೆ ಎದುರಿಸಬಾರದೆಂಬ ಚಿಂತನೆಯೂ ಅವರೊಳಗೆ ಮೊಳೆತಿರುವಂತಿದೆ. ವಿದಾನಸಭೆಯ ಚುನಾವಣೆಗಳಲ್ಲಿ ತನಗೆ ಬೆಂಬಲ ನೀಡಿದಲ್ಲಿ ಲೋಕಸಭಾ ಚುನಾವಣೆಯಲ್ಲಿ ತಾವು ಬಾಜಪಕ್ಕೆ ಬೆಂಬಲ ನೀಡುವುದರಲ್ಲಿ ತಪ್ಪೇನಿದೆ ಎನ್ನುವಂತಹ ಒಂದು ಕಾರ್ಯತಂತ್ರವೂ ಅವರ ಈ ದಿಡೀರ್ ವಿದಾನಸಭೆ ವಿಸರ್ಜನೆಯ ಹಿಂದೆ ಅಡಗಿರುವಂತಿದೆ. ಒಟ್ಟಿನಲ್ಲಿ ರಾವ್ ಅವರಿಗೆ ಮುಂದಿನ ವಿದಾನಸಭೆಯ ಚುನಾವಣೆಗಳನ್ನು ಗೆಲ್ಲಬೇಕಿದೆ ಮತ್ತು ತಮ್ಮ ಪುತ್ರ ಶ್ರೀ ತಾರಕ್ ರಾಮರಾವ್ ಅವರ ರಾಜಕೀಯ ಭವಿಷ್ಯವನ್ನು ಸುಗಮಗೊಳಿಸಿಕೊಡುವ ಆಲೋಚನೆಯೂ ಇದೆ. 

ಆದರಿದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆಯೆಂಬುದನ್ನೂ ನೋಡಬೇಕಾಗುತ್ತದೆ. ಯಾಕೆಂದರೆ ಕಳೆದ ಚುನಾವಣೆಯಲ್ಲಿ ಹದಿಮೂರು ಸ್ಥಾನ ಗಳಿಸಿ ಎರಡನೇ ಸ್ಥಾನದಲ್ಲಿದ್ದ ಕಾಂಗ್ರೆಸ್ಸಿಗೆ ತೆಲಂಗಾಣದಲ್ಲಿ ಬೇರು ಮಟ್ಟದ ಸಂಘಟನೆಯಿದೆ. ಎ.ಐ.ಎಂ.ಐ.ಎಂ. ಸಹ ಸದೃಢವಾಗಿದ್ದು, ಅಷ್ಟು ಸುಲಭಕ್ಕೆ ಟಿ.ಆರ್.ಎಸ್.ಗೆ. ಜಯ ಕಷ್ಟವೆಂದು ಹೇಳಬಹುದು. ಇನ್ನು ರಾವ್ ನಂಬಿಕೊಂಡಿರುವ ಬಾಜಪ ತೆಲಂಗಾಣದಲ್ಲಿ ಕೇವಲ ಮೂರು ಸ್ಥಾನಗಳನ್ನು ಹೊಂದಿದ್ದು, ಟಿ.ಆರ್.ಎಸ್.ನಿಂದ ಬಾಜಪಕ್ಕೆ ಲಾಭವಾಗಬಹುದೇ ಹೊರತು ಬಾಜಪದಿಂದ ರಾವ್ ಅವರಿಗೆ ಹೆಚ್ಚಿನ ಲಾಭವೇನು ದೊರೆಯಲಾರದು. ಅಷ್ಟಲ್ಲದೆ 2014ರಲ್ಲಿ ಪ್ರತ್ಯೇಕ ರಾಜ್ಯವಾದ ಸಂಭ್ರಮದ ದಿನಗಳು ಹಳೆಯದಾಗಿವೆ. ಜನತೆಯ ಆ ಸಂಭ್ರಮಗಳು ದಿನನಿತ್ಯದ ಸಮಸ್ಯೆಗಳಲ್ಲಿ ಬಣ್ಣ ಕಳೆದುಕೊಂಡಿದ್ದು. ಕಳೆದ ಬಾರಿಯ ಹಾಗೆ ಜನ ಕಣ್ಣು ಮುಚ್ಚಿಕೊಂಡು ಟಿ.ಆರ್.ಎಸ್.ಗೆ ಮತ ಹಾಕುವ ಸ್ಥಿತಿಯಲ್ಲಿ ಇಲ್ಲ. ಇವೆಲ್ಲವನ್ನು ಮನಗಂಡಿರುವ ರಾವ್ ರಾಜಕೀಯ ಜೂಜಾಟಕ್ಕಿಳಿದು ಅವಧಿಗೆ ಮುನ್ನವೇ ಚುನಾವಣೆಗೆ ಹೋಗುವ ಹೆಜ್ಜೆ ಇಟ್ಟಿದ್ದಾರೆ 

ಅವರ ಈ ಹೆಜ್ಜೆ ಅವರನ್ನು ಅಧಿಕಾರದತ್ತ ಕರೆದೊಯ್ಯುತ್ತದೆಯೇ ಎನ್ನುವುದನ್ನು ಕಾಲವೇ ಹೇಳಬೇಕಿದೆ. 

No comments:

Post a Comment