Sep 17, 2018

"ಹೆಣ್ಣೊಪ್ಪಿಸಿ ಕೊಡೋದು" ಎಂಥೊಂದು ಶಾಸ್ತ್ರದ ಬೆನ್ನೇರಿ.....

ಪದ್ಮಜಾ ಜೋಯಿಸ್
"ಮದುವೆ" ಒಂದು ಮಹತ್ವದ ಸಂಪ್ರದಾಯ, ದೇವಾನುದೇವತೆಗಳ ವಿವರಗಳನ್ನು ಅನುಸರಿಸಿ ಬಂದ ಉಲ್ಲೇಖಗಳು ನಮ್ಮ ಮುಂದೆ ಸಾಕಷ್ಟು ಇವೆ, ಅಂತೆಯೇ ಅನಾದಿ ಕಾಲದಿಂದಲೂ ಇದೊಂದು ಪ್ರಮುಖ ಆಚರಣೆಯಾಗಿ ಶಾಸ್ತ್ರಬದ್ಧವಾಗಿ ನೆಡೆಯುವ ಕಾರ್ಯ, ಇದು ಸಂಸಾರ ಬ಼ಂಧನವನ್ನು ಸಾರುವ ಪತಿಪತ್ನಿಯರ ಸಮಾಗಮಕ್ಕೆ ಅನುವು ಮಾಡಿಕೊಡಲು ಹಿರಿಯರಿಂದ ಪರಂಪರಾನುಗತವಾಗಿ ಬಂದ ಒಂದು ಹಾದಿ... ಮೊದಮೊದಲು 7 ನಂತರ 5 ನಂತರ 3 ನಂತರ 2 ಈಗ 1ಒಂದೇ ದಿನಕ್ಕಾಗಿದೆ, ಇದರಲ್ಲಿ ತಥ್ಯವೂ ಇದೆ.. ಈಗಿನ ರಾಕೆಟ್ ಯುಗದಲ್ಲಿ ಅದಕ್ಕೆಲ್ಲಿ ಸಮಯ ??

ಜೀರಿಗೆ ಬೆಲ್ಲದಿಂದಿಡಿದು ಮಾಂಗಲ್ಯಧಾರಣೆವರೆಗೆ ಹಂತಹಂತವಾಗಿ ಪರಿಪೂರ್ಣಗೊಂಡನಂತರದ ಈ ಘಳಿಗೆ ಹೆಣ್ಣೊಪ್ಪಿಸಿ ಕೊಡುವ/ ಮನೆತುಂಬಿಸಿಕೊಡುವ ಶಾಸ್ತ್ರ , ಈ ಕಾರ್ಯ ಮಾತ್ರ ಹೆತ್ತೊಡಲಿನೊಂದಿಗೆ ನೆರೆದವರೆಲ್ಲರ ಮನಕಲಕಿ ಕರುಳು ಮೀಟುವಂತಹುದು, ಇಲ್ಲಿ ಹೆಣ್ಣೊಪ್ಪಿಸಿಕೊಡುವವರು ಮಾತ್ರವಲ್ಲ ಒಪ್ಪಿಸಿಕೊಂಡವರೂ ಕಣ್ಣೊರೆಸಿಕೊಳ್ಳುವುದು, ಇದಕ್ಕೊಂದಷ್ಟು ಹೆಂಗೆಳೆಯರ ಜಾನಪದ ಭಾವಗೀತೆ ಸಂಪ್ರದಾಯಗೀತೆಗಳ ಹಿಮ್ಮೇಳ ಬೇರೆ ದುಃಖದ ಬಿಕ್ಕುಗಳೊಂದಿಗೆ..... ನಂಬಿಕೆ ಭರವಸೆಗಳು ಸುಂದರ ಸಮರಸ ಬಾಳಿನ ಬುನಾದಿಯೇ ಆಗಿದೆ.....

ಶಾಸ್ತ್ರ ಸಂಪ್ರದಾಯ ಮೂಢನಂಬಿಕೆ ಎಂದು ಹೀಗೆಳೆವ ಮುನ್ನ ವೈಜ್ಞಾನಿಕ ಕಾರಣಗನ್ನೂ ವಿಶ್ಷ್ಲೇಷಿಸಿ ವಿವೇಚನೆಯಿಂದ ವಿವೇಕಯುತವಾಗಿ ಅರಿತು ನೆಡೆದಲ್ಲಿ ಎಲ್ಲವೂ ಸೊಗಸಾಗಿ ಹಿತವಾಗಿಯೇ ಇರುತ್ತವೆ,
"ಎಮ್ಮ ಮನೆ ಅಂಗಳದಿ ಬೆಳದೊಂದು ಹೂವನ್ನು 
ನಿಮ್ಮ ಮಡಿಲೊಳಗಿಡಲು ತಂದಿರುವೆವು,
ಕೊಳ್ಳಿರೀ ಮಗುವನ್ನು ಎಮ್ಮ ಮನೆ ಬೆಳಕನ್ನು,
ನಿಮ್ಮ ಮಡಿಲನು ತುಂಬಿಸಲು ಒಪ್ಪಿಸುವೆವೂ.,"

ಎಂಬಲ್ಲಿಗೆ ಸಮಸ್ತರ ಹೃದಯ ದ್ರವಿಸಿ ಆದ್ರವಾಗಿ ಕಂಬನಿಯ ಹನಿ ಮಡುಗಟ್ಟಿರುತ್ತದೆ.... ಅವರವರ ಹೆಣ್ಮಕ್ಕಳ ನೆನಪಾಗಿ....

ಇಲ್ಲಿ ಈಗಲೂ ನೆನಪಾಗುವುದು ನನ್ತಂದೆ ಮತ್ತು ನನ್ನ ಒಬ್ರು ದೊಡ್ಡಪ್ಪಾ.. ಇಬ್ರಿಗೂ ಹೆಣ್ಮಕ್ಕಳನ್ನ ಕಳಿಸಿಕೊಡುವಾಗ ಮಾತ್ರವಲ್ಲ ಸೊಸೆಯರನ್ನ ಮನೆ ತುಂಬಿಸಿಕೊಳ್ಳುವಾಗಲೂ ಕಣ್ಣು ಹನಿಯುತ್ತಿತ್ತು, ( ನನ್ನ ತವರೇ ಹಾಗೇ ಎಲ್ಲರೂ ಭಾವುಕರೇ).....

ಹೆತ್ತವರ ಮನೆಗಿನ್ನು ಹೊರ ತಾನೇ ನೀ ಮಗಳೇ

ತಾಯ್ತಂದೆಯರೇ ಕೊಳ್ಳಿರಿ ಇವಳಾ .....

ಎಂದು ಸಾಗುವ ಈ ಹಾಡು ನಂಗೆ ಹುಲಿಯ ಬಾಯಿಯ ಹೋಗುವ ಗೋಮಾತೆಯೆಂತೆನಿಸುತ್ತಿದ್ದುದೂ ಹೌದು.... ಸೃಷ್ಟಿಗೆ ಸಕಲವೂ ಆದ ಹೆಣ್ಣು ಎಲ್ಲರಿಗೂ ಪರಕೀಯಳಾಗಿಬಿಡುವ ಈ ಸನ್ನಿವೇಶ ನಂಗೆ ವಿಪರ್ಯಾಸವಾಗಿಯೇ ಕಾಡಿದ್ದಿದೆ....

ನಂತರದ ಹೆಣ್ಣಿನ ಪ್ರತಿ ಹೆಜ್ಜೆಯೂ ಕತ್ತಿಯಲಗಿನ ಮೇಲೆ ನಿಂತಂತಿರುವುದು... ಆ ನಂತರ ಪ್ರತಿ ಸಂಬಂಧಗಳನ್ನೂ ಅವಳು ಪರಸ್ಪರ ಕುಟುಂಬಗಳ ದೌರ್ಬಲ್ಯಗಳನ್ನೂ ಒಡಲಲ್ಲಡಗಿಸಿಕೊಂಡು ಸಮತೂಗಿಸಿ ಗೌರವಾಭಿಮಾನ ಕಾಪಾಡಿಕೊಳ್ಳಬೇಕಾದ ಮಹತ್ತರ ಕೆಲಸ, ಸ್ವಲ್ಪ ಎಚ್ಚರಪ್ಪಿದರೂ ಎರಡೂ ಕಡೆಯೂ ಅವಳ ಅಸ್ತಿತ್ವಕ್ಕೇ ಧಕ್ಕೇ... ಈ ಪರಿಸ್ಥಿತಿಗೆ ಇಂದಿನ ಪೀಳಿಗೆಯೂ ತುಂಬಾ ಹೊರತೇನಲ್ಲ ಅನಿಸತ್ತೆ....

ಈಗೀಗ ಅಲ್ಪ ಸ್ವಲ್ಪ ಬದಲಾವಣೆ ಆಗಿದೆಯೆಂದುಕೊಂಡರೂ

ಯಾವುದೇ ಶಾಸ್ತ್ರದ ಅರ್ಥ ಹಿನ್ನೆಲೆ ಮುನ್ನೆಲೆ ವೈಜ್ಞಾನಿಕ ತಾರ್ಕಿಕ ಕಾರಣಗಳೂ ಯಾವುದನ್ನೂ ವಿಶ್ಲೇಷಿಸದೇ ಎಲ್ಲ ಶಾಸ್ತ್ರಗಳನ್ನೂ ಭಟ್ಟಿ ಇಳಿಸಿ ಇನ್ಸ್ಟಂಟ್ ಶಾಸ್ತ್ರವಾಗಿಸಿಬಿಡುತ್ತಾರೆ, ಯಾಕೆ ಮಾಡಬೇಕೆಂಬುದು ಮುಂದಿನ ಪೀಳಿಗೆಗೆ ಅರಿವಾಗುವುದೇ ಇಲ್ಲ , ಸಹಜವಾಗಿಯೇ ಅವರಿಗಿದೆಲ್ಲ ಅನಗತ್ಯ ಸಮಯ ಹಾಳಿನ ಕಾರ್ಯ ಅನ್ನಿಸಿಬಿಡುವುದು...

ಈ ಎಲ್ಲಾ ಸಂಪ್ರದಾಯಬದ್ಧ ಮದುವೆಗಳಲ್ಲಿ ಪರಸ್ಪರ ಅಪರಿಚಿತವಾದ ಎರಡು ಕುಟುಂಬಗಳ ನಡುವೆ ಸ್ನೇಹ ಬೆಳೆದು ಸೌಹಾರ್ದತೆ ಹೆಚ್ಚಿ ಸಂಬಂಧಗಳು ಅನುಬಂಧಗಳಾಗಿ ನೂರ್ಕಾಲ ನಳನಳಿಸಲು ಸಹಕರಿಸುವುದಂತೂ ಸತ್ಯವೇ....

ಒಗಟುಗಳ ಮೂಲಕ , ಅಣಕು ಉಡುಗೊರೆಗಳ ಮೂಲಕ ಹಾಸ್ಯಮಯ ಸನ್ನಿವೇಶದೊಂದಿಗೆ ಹೆಣ್ಣೊಪ್ಪಿಸಿಕೊಡುವ ಶಾಸ್ತ್ರ ಸೇರಕ್ಕಿ ಚಿಮ್ಮಿ ಬಲಗಾಲಿಟ್ಟು ಹೊಸಿಲು ದಾಟುವುದರೊಂದಿಗೆ ಮುಂದುವರೆಯುತ್ತದೆ......

ಒಗಟಿನ ಸೊಗಸು ನೋಡಿ, 

ಹೇಳೇ ಸಿಂಗಾರದ ಸಿರಿಗೊಂಬೆ ಸಿಹಿ ರ಼ಂಬೆ ಒಗಟ್ಹೇಳಿ
ನಿನ್ನ ಪತಿರಾಯರ ಹೆಸರೇಳು ಪುತ್ಥಳಿಗೊಂಬೆ,

ವಧು:- ಮನೆಕಟ್ಟಲು ಬೇಕು ಮರಳು 
ಶ್ರೀನಿವಾಸರಾಯರೇ ನನ್ನ ಮಾಂಗಲ್ಯದ ಹರಳು!!!!

ಬಿಡಿಸು ವರಮಹಾಶಯನೇ ಸುಂದರ ಸುಕುಮಾರನೇ
ಸಾಲಂಕೃತ ಅಲಂಕಾರದಿ ಮೆರೆದಿಹ ಮದುಮಗನೇ...

ಮದುಮಗ;- ನನ್ನರಸಿ ಪ್ರೇಮದರಸಿ ಶೃಂಗಾರದಿ ಮೆರೆದಿಹ
ಮುದ್ದಿನರಸಿ ಪದ್ಮಾವತಿ ಆಗಿಹಳು ನನ್ನ ಪಟ್ಟದರಸೀ...
ಎಂದೆಲ್ಲಾ ಸಾಗಿಯೂ ಕೊನೆಗೆ ಬರುವುದು ಬೀಳ್ಕೊಡುಗೆಯ ಕಣ್ಣೀರಿನ ಕ್ಲೈಮ್ಯಾಕ್ಸ್ ಗೆ...
ಹಲವಾರು ಹಿತವಚನ ಭರವಸೆ ಧೈರ್ಯ ತುಂಬುವ ಮಾತುಗಳೊಂದಿಗೆ....

ಆಲಕ್ಕೆ ಹೂವಿಲ್ಲ ಸಾಲಕ್ಕೇ ಕೊನೆಯಿಲ್ಲ
ಜಾಲಿಯ ಮರವೂ ನೆರಳಲ್ಲ ಮಗಳೇ
ತಾಯಿಯ ಮನೆಯೂ ಸ್ಥಿರವಲ್ಲ...
ಎಂಬೆಚ್ಚರಿಕೆಯೊಂದಿಗೆ ಒಂದಷ್ಟು ಆಶಾವಾದದ ನುಡಿಗಟ್ಟುಗಳೂ...
ಅರಮನೆ ಸಿರಿದೇವಿ ನೀನಾಗು ಮಗಳೇ
ಮನೆಯೊಳಗೆ ಭೇಧ ಬಗೀಬೇಡಾ ಮಗಳೇ
ತುಂಬಿದ ಮನೆಯಾ ಒಡೀಬೇಡಾ....

ಹೀಗೆ ಮಗಳೆಂಬ ಪಟ್ಟದಿಂದ ಸೊಸೆಯೆಂಬ ಬಡ್ತಿಯೊಂದಿಗೆ ಬೀಳ್ಕೊಳ್ಳಲಾಗುತ್ತದೆ....

ಪ್ರಸ್ತುತ ರಾಕೆಟ್ ಯುಗದಲ್ಲಿ ಇದೆಲ್ಲವೂ ಅಸಮಂಜಸ ಸಮಯ ಹಾಳು ದುಡ್ಡು ಹಾಳು ಮೂಢನಂಬಿಕೆ ಏನೇನೆಲ್ಲಾ ಎನಿಸಿದರೂ... ಅಂದಿನ ಕಾಲಮಾನಕ್ಕೆ ಇದು ಅತ್ಯಂತ ಸಮಂಜಸವೇ ... ಎರಡು ಅಪರಿಚಿತ ಜೀವಗಳ ಜೀವಮಾನದ ಬೆಸುಗೆ ಆ ಎರಡೂ ಕುಟುಂಬಗಳ ಸೌಹಾರ್ದ ಸಂಬಂಧಗಳೊಂದಿಗೇ ಬೆಸೆದಿರುತ್ತದೆ.. ಮೂರರಿಂದ ಐದು ದಿನಗಳ ಕಾಲ ಎಲ್ಲ ಸ್ನೇಹಿತರು ಸಂಬಂಧಿಗಳ ಜೊತೆಜೊತೆಯಲ್ಲಿ ಸಾಗುವ ಶಾಸ್ತ್ರಗಳು ಹೃದಯ ಮನಸ್ಸನ್ನ ಭಯ ಸಂಕೋಚ ನಾಚಿಕೆ ಮುಜುಗರಗಳ ಸಂಕೋಲೆಗಳಿಂದ ಬಿಡಿಸಿ ಮುಕ್ತವಾಗಿ ಬೆರೆಯಲು ದಾರಿಯಾಗುತ್ತದೆ , ಅಲ್ಲದೇ ಹಿಂದಿನವರು ನೆಡೆಸಿಕೊಂಡು ಬಂದ ಈ ಎಲ್ಲ ವಿಧಿ ವಿಧಾನಗಳು ಸಂಪ್ರದಾಯಗಳಿಗೆ ಅದರದೇ ಆದ ಅರ್ಥವಿದೆ, ಧಾರ್ಮಿಕ ವೈಧಿಕ ಪದ್ಧತಿಯಂತೆ ನೆಡೆದ ವಿವಾಹಗಳು ಬಹುತೇಕ ಶಾಶ್ವತವಾಗಿ ನಿಲ್ಲುತ್ತವೆ ಎಂದು ನಂಬಿದ್ದರು, ಅದು ಎಲ್ಲ ಕಾಲಕ್ಕೂ ಪ್ರಸ್ತುತವೂ ಹೌದು, ವೈದಿಕ ಪದ್ಧತಿಯ ಆಚಾರಗಳು ಮೂಲಭೂತ ಅಂಶಗಳನ್ನು ಸಮೀಕರಿಸುತ್ತವೆ, ಆದ್ದರಿಂದ ಹಿಂದೂ ಧರ್ಮದ ಆಚರಣೆಗಳಲ್ಲಿ ಪ್ರತಿಯೊಂದು ವಿಷಯವನ್ನೂ ಸಮಷ್ಟಿಕಾರ್ಯದ ಮಹತ್ವವನ್ನು ಅರಿತುಕೊಂಡೇ ಹೇಳಲಾಗಿದೆ...

ಭಾರತೀಯ ಶಾಸ್ತ್ರದ ಪ್ರತಿಯೊಂದೂ ಶಾಸ್ತ್ರಗಳೂ ವಧೂವರರನ್ನು ಹತ್ತಿರಕ್ಕೆ ತರುತ್ತವೆ ಮತ್ತು ಜೀವಮಾನವಿಡೀ ಅವರು ಜೊತೆಯಾಗಿರಬೇಕೆಂದು ಪಾಠವನ್ನು ಕಲಿಸುತ್ತದೆ...

ಹಿಂದೂ ಧರ್ಮದ ಮದುವೆಯ ಶಾಸ್ತ್ರ ಕೆಲವೊಂದು ವೈಜ್ಞಾನಿಕ ಕಾರಣಗಳು....

ಮೆಹಂದಿ:- ಕೈಗಳ ವಿನ್ಯಾಸ ಮಾತ್ರವಲ್ಲದೇ ಬ್ಯಾಕ್ಟಿರಿಯಾ ವಿರೋಧಿ ಗುಣಗಳು ಮೆಹಂದಿಯಲ್ಲಿದೆ, ಇದು ವಧುವರರ ಒತ್ತಡ ನಿವಾರಿಸಿ ಮನಸ್ಸನ್ನ ಶಾಂತವಾಗಿರಿಸುತ್ತದೆ, 

ಅರಿಶಿನ ಶಾಸ್ತ್ರ- ಅರಿಶಿನದಲ್ಲೂ ಬ್ಯಾಕ್ಟಿರಿಯಾ ವಿರೋಧಿ ಅಂಶಗಳಿದ್ದು ಚರ್ಮದ ಹಿತದ ಜೊತೆ ದೇಹದ ವಿಷಕಾರಿ ಅಂಶಗಳನ್ನ ಹೊರ ಹಾಕುತ್ತದೆ..

ಕೈಬಳೆಗಳು:- ಕೈಗಳ ಮಣಿಕಟ್ಟಿನಲ್ಲಿ ಕೆಲವೊಂದು ಆಕ್ಯೂಪ್ರೆಷರ್ ಕೇಂದ್ರಗಳಿವೆ, ಬಳೆಗಳು ಈ ಕೇಂದ್ರದಲ್ಲಿ ಉಂಟುಮಾಡುವ ಒತ್ತಡವು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮಾತ್ರವಲ್ಲದೆ ಚರ್ಮ ಮತ್ತು ಬಳೆಗಳ ನಡುವಿನ ತಿಕ್ಕಾಟವು ರಕ್ತ ಪರಿಚಲನೆಯನ್ನ ಉತ್ತಮ ಪಡಿಸುವುದು..

ಕುಂಕುಮ/ ಸಿಂಧೂರ:-- ಇದು ಕೇವಲ ಮುತ್ತೈದೆತನದ ಸಂಕೇತ ಮಾತ್ರವಲ್ಲ ಕುಂಕುಮದಲ್ಲಿ ಅರಿಶಿನ ನಿಂಬೆ ಇರುತ್ತದೆ, ವಧುವಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಇದು ಮನಸ್ಸನ್ನ ಶಾಂತವಾಗಿರಿಸಿ ಆಕೆಯಲ್ಲಿ ಲೈಂಗಿಕ ಆಸಕ್ತಿ ಮೂಡಿಸುತ್ತದೆ...

ಕಾಲುಂಗುರ:- ಈ ಬೆರಳಿನ ನರಗಳು ನೇರವಾಗಿ ಗರ್ಭಕೋಶ ಮತ್ತು ಹೃದಯಕ್ಕೆ ಸಂಪರ್ಕ ಹೊಂದಿದೆ, ಕಾಲುಂಗುರವು ಮಹಿಳೆಯರಲ್ಲಿನ ತಿಂಗಳ ಮುಟ್ಟನ್ನು ನಿಯಂತ್ರಿಸುತ್ತದೆ, ಕಾಲಲ್ಲಿನ ಉಂಗುರವು ಭೂಮಿಯ ಧ್ರುವನ್ನು ವಿಕಿರಣಗೊಳಿಸಿ ದೇಹದೊಳಗೆ ಪ್ರವೇಶಿಸುವಂತೆ ಮಾಡುವುದು...

ಅಗ್ನಿ:- ಸುತ್ತಲಿನ ಗಾಳಿಯನ್ನು ಶುದ್ಧೀಕರಿಸುತ್ತದೆ, ಇದನ್ನು ಹೊರತು ಪಡಿಸಿ ಅಗ್ನಿಕುಂಡಕ್ಕೆ ಹಾಕುವ ಸಾಮಗ್ರಿಗಳು ಸುತ್ತಲೂ ಇರುವಂತಹ ನಕಾರಾತ್ಮಕ ಅಂಶಗಳನ್ನು ದೂರ ಮಾಡುತ್ತವೆ.

ಕೊನೆಯದಾಗಿ ಕರಿಮಣಿ/ ಮಾಂಗಲ್ಯ:- ಕಪ್ಪುಮಣಿಗಳಿಗೆ ಋಣಾತ್ಮಕ ಶಕ್ತಿಕ್ಷೇತ್ರವನ್ನೆಲ್ಲಾ ಹೀರಿಕೊಳ್ಳುವ ಗುಣವಿರುತ್ತದೆ. ಕರಿಮಣಿಗಳ ವೈಶಿಷ್ಟ್ಯವೆಂದರೆ ಎದೆಯ ಭಾಗದ ಉಷ್ಣತೆಯನ್ನೆಲ್ಲ ಹೀರಿಕೊಳ್ಳುವ ಸಾಮರ್ಥ್ಯವೂ ಇದೆ, ಅತಿ ಮುಖ್ಯವಾಗಿ ತಾಯಿಯಲ್ಲಿ ಎದೆ ಹಾಲಿನ ಉಷ್ಣತೆ ಹೀರಿಕೊಂಡು ಎದೆ ಹಾಲು ಕೆಡದಂತೆ ಶಿಶುವಿಗೆ ಅನುಕೂಲವಾದ ಸಮ ಉಷ್ಣತೆ ಇಡಲು ಸಹಕರಿಸುತ್ತದೆ...

ಇವುಗಳಗಿರುವ ಮಹತ್ವ- ಅರಿತು ಸಂಪ್ರದಾಯಗಳನ್ನು ಎತ್ತಿಹಿಡಿಯುವ ಗೌರವಾರ್ಹವಾದ ಮಂಗಳಕರ ಆಭರಣ ಧರಿಸುವುದರಿಂದ ನಾರಿಯು ಪೂಜನೀಯಳಾಗಿರುವಳೆಂಬ ನಂಬಿಕೆ ತಲೆಮಾರಿನದ್ದು......

ನಂಬಿಕೆ ಭರವಸೆಗಳು ಸುಂದರ ಸಮರಸ ಬಾಳಿನ ಬುನಾದಿಯೇ ಆಗಿದೆ.....

ಶಾಸ್ತ್ರ ಸಂಪ್ರದಾಯ ಮೂಢನಂಬಿಕೆ ಎಂದು ಹೀಗೆಳೆವ ಮುನ್ನ ವೈಜ್ಞಾನಿಕ ಕಾರಣಗನ್ನೂ ವಿಶ್ಷ್ಲೇಷಿಸಿ ವಿವೇಚನೆಯಿಂದ ವಿವೇಕಯುತವಾಗಿ ಅರಿತು ನಡೆದಲ್ಲಿ ಎಲ್ಲವೂ ಸೊಗಸಾಗಿ ಹಿತವಾಗಿಯೇ ಇರುತ್ತವೆ,

No comments:

Post a Comment