Jul 14, 2018

ಮೈತ್ರಿಯ ಲಾಭ ನಷ್ಟಗಳು! ಯಾರ್ಯಾರಿಗೆ ಎಷ್ಟೆಷ್ಟು?

ಕು.ಸ.ಮಧುಸೂದನರಂಗೇನಹಳ್ಳಿ
ಮತೀಯವಾದಿ ಬಾಜಪವನ್ನು ಅಧಿಕಾರದಿಂದ ದೂರ ಇಡುವ ಏಕೈಕ ಕಾರಣದಿಂದ ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳಗಳು ಚುನಾವಣೋತ್ತರ ಮೈತ್ರಿ ಮಾಡಿಕೊಂಡು ಸರಕಾರ ರಚಿಸಿ ಮೊದಲ ಬಜೆಟ್ಟನ್ನೂ ಮಂಡಿಸಿಯಾಗಿದೆ.104 ಸ್ಥಾನಗಳನ್ನು ಗೆದ್ದೂ ಅದಿಕಾರ ಹಿಡಿಯಲಾಗದ ಹತಾಶೆಯಲ್ಲಿರುವ ಬಾಜಪ ಈ ಮೈತ್ರಿಯನ್ನು ಅಪವಿತ್ರ ಮೈತ್ರಿ ಎಂದು ಕರೆಯುತ್ತಿದೆ. ಹಾಗೆ ನೋಡಿದರೆ ಚುನಾವಣೋತ್ತರ ಮೈತ್ರಿಗಳ ಹಿಂದಿರುವುದು ಕೇವಲ ಅಧಿಕಾರದಾಹ ಮಾತ್ರ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ!. 2006ರಲ್ಲಿ ಕಾಂಗ್ರೆಸ್ ಜೊತೆ ಸೇರಿ ಸರಕಾರ ರಚಿಸಿದ್ದ ಜನತಾದಳ ಮದ್ಯರಾತ್ರಿಯ ರಕ್ತರಹಿತ ಕ್ರಾಂತಿಯಲ್ಲಿ(ಅವತ್ತಿನ ಮಟ್ಟಿಗೆ ಕುಮಾರಸ್ವಾಮಿ ಮತ್ತು ಅವರ ಗೆಳೆಯರ ದೃಷ್ಠಿಯಲ್ಲಿ ಅದು ಕ್ರಾಂತಿಯೇ ಆಗಿತ್ತೆನ್ನಬಹುದು) ಬಾಜಪದ ಜೊತೆ ಸೇರಿ ಅಧಿಕಾರ ಹಿಡಿದಿದ್ದು ಸಹ ಅಪವಿತ್ರ ಮೈತ್ರಿಯ ಫಲವೇ ಆಗಿತ್ತೆಂಬುದನ್ನು ಬಾಜಪದ ನಾಯಕರುಗಳು ಮರೆತಂತಿದೆ. ಶಕ್ತಿ ರಾಜಕಾರಣವೇ ವಿಜೃಂಭಿಸುತ್ತಿರುವ ಇವತ್ತಿನೀ ಕಾಲಘಟ್ಟದಲ್ಲಿ ಪವಿತ್ರ ಎನ್ನುವ ಶಬ್ದ ತನ್ನ ನಿಜಾರ್ಥ ಕಳೆದುಕೊಂಡಾಗಿದೆ. ಕಳೆದ ವರ್ಷ ಗೋವಾದಲ್ಲಿ ಮತ್ತು ಕೆಲವು ಈಶಾನ್ಯ ರಾಜ್ಯಗಳಲ್ಲಿ ಸ್ವತ: ಬಾಜಪವೇ ಇಂತಹ ಹಲವು ಅಪವಿತ್ರ ಮೈತ್ರಿಗಳ ರೂವಾರಿಯಾಗಿದ್ದನ್ನು ಬಾಜಪದ ನಾಯಕರಿಗೆ ನಾವೇನು ನೆನಪು ಮಾಡಿಕೊಡುವ ಅಗತ್ಯವಿಲ್ಲ.

ಇರಲಿ, ಈ ಮೈತ್ರಿ ಇಲ್ಲಿಗೆ ಮುಗಿಯುವುದಿಲ್ಲ, ಬದಲಿಗೆ ಮುಂದಿನ 2019ರ ಲೋಕಸಭಾ ಚುನಾವಣೆಗಳಿಗೂ ಮುಂದುವರೆಯಲಿದೆ ಎಂದು ಹೇಳಲಾಗುತ್ತಿದೆ. ಆದರೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನದಿಂದಲೇ ಸರಕಾರದಲ್ಲಿ ಆಂತರಿಕವಾಗಿ ಮತ್ತು ಬಹಿರಂಗವಾಗಿ ಭಿನ್ನಮತೀಯ ಚಟುವಟಿಕೆಗಳು ನಡೆಯ ತೊಡಗಿದ್ದು ಸರಕಾರದ ಸ್ಥಿರತೆಯ ಬಗ್ಗೆಯೇ ಅನುಮಾನ ಹುಟ್ಟಿದೆ. ಸಚಿವ ಸ್ಥಾನ ಹಂಚಿಕೆ, ಖಾತಿಗಳ ಹಂಚಿಕೆ, ನಿಗಮ ಮಂಡಳಿಗಳಿಗೆ ಮಾಡಬೇಕಿರುವ ನೇಮಕಾತಿಗಳು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿವೆ. ಬಹುಶ: ಮುಂದಿನ ದಿನಗಳಲ್ಲಿ ರಾಜ್ಯದ ಅಭಿವೃದ್ದಿಗೆ ಕಂಟಕವಾಗಬಹುದಾದಷ್ಟು ಭಿನ್ನಮತೀಯ ಚಟುವಟಿಕೆಗಳು ತಲೆ ಎತ್ತುವುದರಲ್ಲಿ ಸಂಶಯವಿಲ್ಲ.

ಅದರೆ ಈ ಮೈತ್ರಿಯಿಂದ ಯಾರಿಗೆ ಹೆಚ್ಚು ಲಾಭವಾಗುತ್ತದೆಯೆಂಬ ರಾಜಕೀಯ ಹಿತಾಸಕ್ತಿಯ ಪ್ರಶ್ನೆಯೊಂದು ಸದ್ಯಕ್ಕೆ ಮೂರೂಪಕ್ಷಗಳ ಕಾರ್ಯಕರ್ತರುಗಳನ್ನೂ,ನಾಯಕರುಗಳನ್ನೂ ಕಾಡುತ್ತಿರುವಂತಿದೆ. ಆ ಬಗ್ಗೆ ಒಂದಷ್ಟು ನೋಡೋಣ:

ಪೂರ್ಣ ಪಲಿತಾಂಶ ಪ್ರಕಟವಾಗುವ ಮೊದಲೇ ಕಾಂಗ್ರೇಸ್ಸಿನ ದೆಹಲಿಯ ನಾಯಕರುಗಳು ಇಂತಹದೊಂದು ಮೈತ್ರಿಯ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದು ವಿಶೇಷವಾಗಿತ್ತು. ಯಾಕೆಂದರೆ ಅವತ್ತಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ಸಿದ್ದರಾಮಯ್ಯನವರಿಗೂ ಇಂತಹದೊಂದು ಮೈತ್ರಿಯ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಯಾಕೆಂದರೆ ಚುನಾವಣೆ ಪೂರ್ವದಲ್ಲಿ ಮತ್ತು ಚುನಾವಣಾ ಪ್ರಚಾರದ ಸಮಯದಲ್ಲಿ ಸಿದ್ದರಾಮಯ್ಯನವರು ಜನತಾದಳದ ವಿರುದ್ದ ನಡೆಸಿದ ಟೀಕಾಪ್ರಹಾರವನ್ನು ನೋಡಿದವರಿಗೆ ಅವರು ಜನತಾದಳದ ಜೊತೆಗೆ ಮೈತ್ರಿಗೆ ಒಪ್ಪಲಾರರು ಎಂಬುದು ಗೊತ್ತಿತ್ತು. ಹೀಗಾಗಿ ಈ ಮೈತ್ರಿಯ ಬಗ್ಗೆ ಶ್ರೀ ದೇವೇಗೌಡರ ಸಮ್ಮತಿ ಪಡೆದ ನಂತರವೇ ಸಿದ್ದರಾಮಯ್ಯನವರಿಗೆ ವಿಷಯ ತಿಳಿಸಿ ಅವರಿಂದಲೇ ಮೈತ್ರಿಯ ಬಗ್ಗೆ ಸಾರ್ವಜನಿಕವಾಗಿ ಹೇಳಿಸಲಾಯಿತು. ಈ ಮೈತ್ರಿಯ ಹಿಂದೆ ಇದ್ದ ಏಕೈಕ ಉದ್ದೇಶ ಬಾಜಪವನ್ನು ಅಧಿಕಾರದಿಂದ ದೂರವಿಡುವುದು ಮಾತ್ರವಾಗಿತ್ತು. ಇದೀಗ ಮೈತ್ರಿಯ ಭವಿಷ್ಯದ ಪರಿಣಾಮಗಳ ಬಗ್ಗೆ ಲೆಕ್ಕಾಚಾರಗಳು ಶುರುವಾಗಿದ್ದು, ಎಲ್ಲರೂ ತಮ್ಮ ತಮ್ಮ ಹಿತಾಸಕ್ತಿಗಳಿಗನುಗುಣವಾಗಿ ವಿಶ್ಲೇಷಣೆ ಮಾಡುತ್ತಿದ್ದಾರೆ. ಹಾಗಿದ್ದರೆ ಈ ಮೈತ್ರಿಯಿಮದ ಯಾರಿಗೆ ಲಾಭ ಮತ್ತು ಯಾರಿಗೆ ನಷ್ಟ ಎಂಬುದನ್ನು ಸಂಕ್ಷಿಪ್ತವಾಗಿ ನೋಡೋಣ:

ಮೈತ್ರಿಯ ಲಾಭ ಪಡೆಯಲಿರುವವರು:

ಜಾತ್ಯಾತೀತ ಜನತಾದಳ.

ಕೇವಲ 38 ಸ್ಥಾನಗಳನ್ನು ಪಡೆದು ಮೂರನೇ ಸ್ಥಾನಕ್ಕೆ ದೂಡಲ್ಪಟ್ಟಿದ್ದ ಜನತಾದಳಕ್ಕೆ ಮುಖ್ಯಮಂತ್ರಿ ಪಟ್ಟ ಒಲಿದು ಬಂದಿದ್ದೇ ಮೊದಲ ಬಂಪರ್ ಲಾಟರಿ ಎನ್ನಬಹುದು. ಇದರ ಜೊತೆಗೆ ಬಾಜಪವನ್ನು ಅದಿಕಾರದಿಂದ ದೂರವಿಟ್ಟು, 2006ರಲ್ಲಿ ಶ್ರೀ ಕುಮಾರಸ್ವಾಮಿಯವರು ಬಾಜಪದೊಂದಿಗೆ ಹೋಗಿದ್ದ ತಪ್ಪನ್ನು ಈಗ ಸರಿಪಡಿಸಿಕೊಂಡಿದ್ದೇವೆಂದು ಹೇಳಿ ಅಲ್ಪಸಂಖ್ಯಾತರ ದೃಷ್ಠಿಯಲ್ಲಿ ತಾವು ನಿಜಕ್ಕೂ ಜಾತ್ಯಾತೀತ ಎನ್ನುವ ಸಂದೇಶವನ್ನು ರಾಜ್ಯದ ಜನತೆಗೆ ನೀಡುವ ಅವಕಾಶ ದೊರೆತಿದ್ದು ಜನತಾದಳಕ್ಕೆ ಸಿಕ್ಕ ಎರಡನೇ ಲಾಭ. ಮೂರನೇ ಲಾಭವೆಂದರೆ ಕುಮಾರಸ್ವಾಮಿಯವರ ಪದಗ್ರಹಣಕ್ಕೆ ದೇಶದ ಹಲವು ಪಕ್ಷಗಳ ನಾಯಕರುಗಳನ್ನು ಕರೆಸಿ, ಬಾಜಪದ ವಿರುದ್ದ ರಾಜಕೀಯರಂಗವೊಂದನ್ನು ಕಟ್ಟಲು ತಾವು ಶಕ್ತರಿದ್ದೇವೆಂದು ತೋರಿಸುತ್ತಲೇ ಸಮಯ ಬಂದರೆ ಅಂತಹದೊಂದು ರಂಗದ ನೇತೃತ್ವ ವಹಿಸಲು ಸಹ ತಾವು(ಅಂದರೆ ಶ್ರೀ ದೇವೇಗೌಡರು) ಸಮರ್ಥರಿದ್ದೇವೆಂದು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೇಸ್ ಮತ್ತು ಬಾಜಪಗಳಿಗೆ ಸಂದೇಶವೊಂದನ್ನು ರವಾನಿಸಿದ್ದು ಜನತಾದಳಕ್ಕೆ ಆದ ಮತ್ತೊಂದು ಲಾಭ.

ಇದೆಲ್ಲಕ್ಕಿಂತ ಹೆಚ್ಚಾಗಿ ಕಳೆದ ಹತ್ತು ವರ್ಷಗಳಿಂದ ಅಧಿಕಾರವಿರದೆ ಕಂಗೆಟ್ಟು ಕೂತಿದ್ದ ಪಕ್ಷದ ಕಾರ್ಯಕರ್ತರುಗಳಿಗೆ ಅಧಿಕಾರ ತಂದುಕೊಡುವ ಆತ್ಮವಿಶ್ವಾಸವನ್ನು ಮೊಳಕೆಯೊಡೆಸಿದ್ದು ಸಹ ಲಾಭವೇ! ಈ ಬಾರಿಯೂ ಜನತಾದಳಕ್ಕೆ ಅಧಿಕಾರ ದೊರೆಯದೆ ಹೋಗಿದ್ದರೆ 2019ರ ಲೋಕಸಭಾ ಚುನಾವಣೆಯ ಹೊತ್ತಿಗೆ ಜನತಾದಳದ ಬಹುತೇಕ ಕಾರ್ಯಕರ್ತರುಗಳು ಬೇರೆ ಪಕ್ಷಗಳತ್ತ ವಲಸೆ ಹೋಗುತ್ತಿದ್ದುದು ಸತ್ಯ. ಈ ಮೈತ್ರಿ ಅಂತಹ ವಲಸೆಯನ್ನು ಸದ್ಯಕ್ಕಂತು ತಡೆಗಟ್ಟಿದೆ. ಇದರ ಜೊತೆಗೆ ಆಡಳಿತ ನಡೆಸುತ್ತಿರುವುದರಿಂದ ಮತ್ತು ಮುಖ್ಯಮಂತ್ರಿ ಸ್ಥಾನ ತನಗೇ ದೊರಕಿರುವುದರಿಂದ ತಳಮಟ್ಟದಲ್ಲಿ ಪಕ್ಷವನ್ನು ಇನ್ನಷ್ಟು ಸಂಘಟಿಸಲು ಈ ಮೈತ್ರಿ ನೆರವಾಗಲಿದೆ. ಹಳೇ ಮೈಸೂರಿನಾಚೆ ತನಗೆ ನೆಲೆ ಕಂಡುಕೊಳ್ಳಲು ಜನತಾದಳ ಈ ಅವಕಾಶವನ್ನು ಬಳಸಿಕೊಳ್ಳಲು ಮುಂದಾಗುವುದರಲ್ಲಿ ಅನುಮಾನವೇನಿಲ್ಲ. ತನ್ನ ಒಕ್ಕಲಿಗ ಮತಬ್ಯಾಂಕ್ ಜೊತೆಗೆ ಕಾಂಗ್ರೇಸ್ಸಿನ ಅಹಿಂದ ಮತಬ್ಯಾಂಕಿನಲ್ಲಿ ಸ್ವಲ್ಪ ಭಾಗವನ್ನು ತನ್ನೆಡೆಗೆ ಸೆಳೆದುಕೊಳ್ಳುವತ್ತ ಜನತಾದಳ ಮನಸ್ಸು ಮಾಡಿದ್ದೇ ಆದರೆ 2023ರ ಹೊತ್ತಿಗೆ ಜನತಾದಳ ಸ್ವತಂತ್ರವಾಗಿ ಅಧಿಕಾರ ಹಿಡಿಯುವಷ್ಟರ ಮಟ್ಟಿಗೆ ಶಕ್ತಿಶಾಲಿಯಾಗಿ ಹೊರಹೊಮ್ಮುತ್ತದೆ.

ಬಾಜಪ

ಹಾವುಮುಂಗುಸಿಗಳಂತೆ ಕಿತ್ತಾಡುತ್ತಿದ್ದ ಕಾಂಗ್ರೆಸ್ ಮತ್ತು ಜನತಾದಳಗಳು ಮೈತ್ರಿ ಮಾಡಿಕೊಂಡು ಸರಕಾರ ರಚಿಸಿದ್ದು, ಬಾಜಪಕ್ಕೆ ತಾತ್ಕಾಲಿಕ ಹಿನ್ನಡೆ ಅನಿಸಿದರೂ ದೀರ್ಘಕಾಲದಲ್ಲಿ ಅದಕ್ಕೆ ಲಾಭವಾಗುವ ಸಾದ್ಯತೆ ಇದೆ. ತನ್ನ ಒಳಜಗಳಗಳಿಂದ ಈ ಸರಕಾರ ಬಿದ್ದು ಹೋದರೆ ಮತ್ತೆ ಚುನಾವಣೆ ನಡೆಯುವ ಸಂಭವವಿದೆ. ಹಾಗೇನಾದರು ಆದರೆ ಬಾಜಪ ಅನಾಯಾಸವಾಗಿ ಅಧಿಕಾರಕ್ಕೆ ಬರಲು ಬಾಗಿಲುಗಳು ತೆರೆದುಕೊಳ್ಳುತ್ತವೆ. 104 ಸ್ಥಾನಗಳನ್ನು ಗಳಿಸಿಯೂ ಅಧಿಕಾರ ದೊರೆಯಲಿಲ್ಲವೆಂಬ ವಿಷಯದಲ್ಲಿ ಬಾಜಪದ ಬಗ್ಗೆ ಜನರಲ್ಲಿ ಸಹಾನುಭೂತಿಯನ್ನು ಸೃಷ್ಠಿಸುತ್ತದೆ. ಅಕಸ್ಮಾತ್ ಚುನಾವಣೆಗಳು ನಡೆದರೂ ಆ ಚುನಾವಣೆಯಲ್ಲಿ ಕಾಂಗ್ರೆಸ್ ಜನತಾದಳ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುವುದು ಕಷ್ಟಸಾದ್ಯ. ಅಷ್ಟು ಸುಲಭವಾಗಿ ಸೀಟು ಹಂಚಿಕೆಯ ಪ್ರಕ್ರಿಯೆ ನಡೆಯುವುದು ಸಾದ್ಯವಿಲ್ಲ. ಹೀಗಾಗಿ ಚುನಾವಣೆಗಳ ಸಮಯದಲ್ಲಿ ಆ ಎರಡೂ ಪಕ್ಷಗಳ ಒಳಗೆ ಭಿನ್ನಮತ ಭುಗಿಲೇಳುವ ಸಾದ್ಯತೆ ಇರುತ್ತದೆ. ಇದರ ಲಾಭ ಬಾಜಪಕ್ಕೆ ಆಗುವುದರಲ್ಲಿ ಅನುಮಾನವಿಲ್ಲ. ಅದರಲ್ಲೂ ಲೋಕಸಭಾ ಚುನಾವಣೆಗಳ ಜೊತೆಯಲ್ಲಿಯೇನಾದರು ಚುನಾವಣೆಗಳು ನಡೆದರೆ ಮೋದಿಯವರ ಜನಪ್ರಿಯತೆ ಬಾಜಪದ ಪಾಲಿಗೆ ಪ್ಲಸ್ ಪಾಯಿಂಟ್ ಆಗುತ್ತದೆ. ಹೀಗಾಗಿಯೇ ಮೈತ್ರಿ ಸರಕಾರವನ್ನು ಉರುಳಿಸುವ ಕೆಲಸಕ್ಕೆ ಬಾಜಪದ ನಾಯಕರುಗಳು ಕೈ ಹಾಕಬಾರದೆಂಬ ಸಂದೇಶ ಬಾಜಪದ ಹೈ ಕಮ್ಯಾಂಡಿನಿಂದ ಬಂದಿರುವುದು. ಇಲ್ಲಿನ ಸರಕಾರವನ್ನು ಉರುಳಿಸಿ ಅದರ ಅಪವಾದವನ್ನು ಹೊತ್ತುಕೊಳ್ಳಲು ಬಾಜಪ ಸಿದ್ದವಿಲ್ಲ. ಹೀಗೆ ಈ ಸರಕಾರ ತಾನಾಗಿಯೇ ಉರುಳಿದರೆ ಅದರಲಾಭ ತನಗಾಗುತ್ತದೆಯೆಂಬ ಬಾಜಪದ ನಂಬಿಕೆಯಲ್ಲಿ ತಪ್ಪೇನು ಇಲ್ಲ. 

ಕಾಂಗ್ರೆಸ್

ಈ ಮೈತ್ರಿ ಸರಕಾರದಲ್ಲಿ ಅಧಿಕಾರ ಹೊಂದಿದ್ದರೂ ದೀರ್ಘಕಾಲದಲ್ಲಿ ನಷ್ಟವನ್ನು ಅನುಭವಿಸಲಿರುವುದು ಮಾತ್ರ ಕಾಂಗ್ರೆಸ್ ಪಕ್ಷವೇ! ಪಕ್ಷದ ತಳಮಟ್ಟದ ಕಾರ್ಯಕರ್ತರುಗಳಿಗೆ ಗೊತ್ತಿರುವ ಈ ಸತ್ಯ ಪಕ್ಷದ ಹಿರಿಯ ನಾಯಕರುಗಳಿಗೆ ಅದರಲ್ಲೂ ಹೈಕಮ್ಯಾಂಡಿಗೆ ಗೊತ್ತಿಲ್ಲವೆಂದೇನೂ ಅಲ್ಲ. ಆದರೆ ರಾಷ್ಟ್ರ ಮಟ್ಟದಲ್ಲಿ ತಾವು ಬಾಜಪವನ್ನು ಅಧಿಕಾರದಿಂದ ದೂರವಿಡಲು ಏನು ಬೇಕಾದರು ಮಾಡುತ್ತೇವೆಂದು ತೋರಿಸಲು ಕರ್ನಾಟಕ ಕಾಂಗ್ರೆಸ್ ಅನ್ನು ಬಲಿ ಕೊಡಲಾಗುತ್ತಿದೆ. ಇದರ ಬಗ್ಗೆ ಒಂದಿಷ್ಟು ನೋಡೋಣ:

ಇದೀಗ 78 ಸ್ಥಾನಗಳನ್ನು ಹೊಂದಿದ್ದರೂ ಕೇವಲ 38 ಸ್ಥಾನ ಗೆದ್ದಿರುವ ಜನತಾದಳಕ್ಕೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಟ್ಟಿರುವುದು ಅದರ ಕಾರ್ಯಕರ್ತರ ಆತ್ಮವಿಶ್ವಾಸ ಮತ್ತು ಸ್ವಾಭಿಮಾನಕ್ಕೆ ತೀವ್ರ ಧಕ್ಕೆ ತಂದಿದೆ. ಅದರಲ್ಲೂ ಜನತಾದಳವೇ ತಮಗೆ ನಿಜವಾದ ಎದುರಾಳಿ ಎಂದು ನಂಬಿಕೊಂಡು ದಶಕಗಳಿಂದಲೂ ಅದರ ವಿರುದ್ದ ಹೋರಾಡುತ್ತಿರುವ ಹಳೇ ಮೈಸೂರು ಜಿಲ್ಲೆಗಳ, ಮುಖ್ಯವಾಗಿ ಮಂಡ್ಯ, ಮೈಸೂರು, ಹಾಸನ, ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ ಮುಂತಾದ ಜಿಲ್ಲೆಗಳ ಕಾರ್ಯಕರ್ತರುಗಳಿಗೆ ಈ ಮೈತ್ರಿ ನುಂಗಲಾರದ ತುತ್ತಾಗಿದೆ. ಅಧಿಕಾರದಲ್ಲಿರುವ ಜನತಾದಳ ಬೇರು ಮಟ್ಟದಲ್ಲಿ ಬಲಿಷ್ಠವಾಗಿ ಸಂಘಟಿತವಾಗುತ್ತ ಹೋದರೆ ಕಾಂಗ್ರೆಸ್ ನಾಳೆ ಸ್ಥಳೀಯ ಸಂಸ್ಥೆಗಳ ವಿಚಾರದಲ್ಲಿಯೂ ಜನತಾದಳದ ಕಿರಿಯ ಪಾಲುದಾರನಾಗಬೇಕಾದ ಸನ್ನಿವೇಶ ಸೃಷ್ಠಿಯಾಗುತ್ತದೆ. ಮುಂದಿನ ಲೋಕಸಭಾ ಚುನಾವಣೆಗಳಲ್ಲಿ ಮೈತ್ರಿ ಮಾಡಿಕೊಳ್ಳುವಾಗ ಜನತಾದಳಕ್ಕೆ ಬಿಟ್ಟುಕೊಡಬೇಕಾದ ಸಂಸತ್ ಸ್ಥಾನಗಳ ಜಿಲ್ಲೆಗಳಲ್ಲಿ ಕಾಂಗ್ರೆಸ್ ದುರ್ಬಲವಾಗುತ್ತ ಹೋಗುತ್ತದೆ. 

ಇದಕ್ಕಿಂತ ನಷ್ಟವಾಗಬಲ್ಲ ವಿಚಾರವೆಂದರೆ ಅದು ಶ್ರೀ ಸಿದ್ದರಾಮಯ್ಯನವರ ಮುಂದಿನ ನಡೆ ಏನೆನ್ನುವುದು. ಇವತ್ತಿಗೂ ಸಿದ್ದರಾಮಯ್ಯನವರೇನು ಪೂರ್ಣ ಮನಸ್ಸಿನಿಂದ ಈ ಮೈತ್ರಿಗೆ ಒಪ್ಪಿಗೆ ನೀಡಿಲ್ಲ. ಹಾಗಾಗಿ ತಮ್ಮ ಎಲ್ಲ ಹಿಂಬಾಲಕರಿಗೂ ಸೂಕ್ತ ಸ್ಥಾನಮಾನ ಸಿಗುವವರೆಗೂ ಅವರದು ಭಿನ್ನಸ್ವರವೇ ಇರುತ್ತದೆ. ಇನ್ನು ಸಮನ್ವಯ ಸಮಿತಿಯ ಅದ್ಯಕ್ಷರಾದ ಅವರ ಮಾತನ್ನು ಕಡೆಗಣಿಸಿದರೆ ಅವರು ಸಿಡಿದೇಳುವುದು ಗ್ಯಾರಂಟಿ. ಅಂತಹದೊಂದು ಸಂದರ್ಭ ಬಂದರೆ ಕನಿಷ್ಠ 25 ಶಾಸಕರಾದರೂ ಅವರನ್ನು ಹಿಂಬಾಲಿಸುವುದು ಖಚಿತ. ಆಗ ಒಂದೊ ಅವರು ಸರಕಾರವನ್ನು ಉರುಳಿಸುತ್ತಾರೆ ಇಲ್ಲ ಪಕ್ಷ ಬಿಡುತ್ತಾರೆ. ಇದ್ಯಾವುದು ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಕಾಂಗ್ರೆಸ್ ಹೈ ಕಮ್ಯಾಂಡ್ ಮೇಲಿದೆ. ಒಟ್ಟಿನಲ್ಲಿ ಪಕ್ಷ ಮತ್ತು ಸರಕಾರಗಳ ವಿಚಾರದಲ್ಲಿ ಕಾಂಗ್ರೆಸ್ ಹೈಕಮ್ಯಾಂಡ್ ಹಗ್ಗದ ಮೇಲೆ ನಡೆಯುವಂತಾಗಿದೆ. ಸರಕಾರ ಉರುಳಿದರೂ ಕಾಂಗ್ರೇಸ್ಸಿಗೇ ನಷ್ಟ! ಸಿದ್ದರಾಮಯ್ಯನವರು ಕಾಂಗ್ರೆಸ್ ತೊರೆದರೆ ಅದೂ ಕಾಂಗ್ರೆಸ್ಸಿಗೇ ನಷ್ಟ. 

ಹೀಗೆ ಯಾವ ದೃಷ್ಠಿಕೋನದಿಂದ ನೋಡಿದರೂ ಕಾಂಗ್ರೆಸ್ಸಿಗೆ ಈ ಮೈತ್ರಿಯಿಂದ ನಷ್ಟವೇ ಹೊರತು ಲಾಭವೇನಿಲ್ಲ. 

No comments:

Post a Comment