Jul 10, 2018

ಅರವಿಂದ್ ಕೇಜ್ರೀವಾಲ್ ವರ್ಸಸ್ ನರೇಂದ್ರಮೋದಿ!

ಸಾಂಧರ್ಬಿಕ ಚಿತ್ರ. ಮೂಲ: ಡಿ.ಏನ್.ಎ ಇಂಡಿಯಾ 
ಕು.ಸ.ಮಧುಸೂದನ ರಂಗೇನಹಳ್ಳಿ 
ನ್ಯಾಯಾಲಯಗಳ ಮದ್ಯಪ್ರವೇಶಗಳ ನಂತರವೂ ದೆಹಲಿಯ ಮುಖ್ಯಮಂತ್ರಿ ಆಮ್ ಆದ್ಮಿ ಪಕ್ಷದ ಶ್ರೀ ಕೇಜ್ರೀವಾಲ್ ಮತ್ತು ಲೆಫ್ಟಿನೆಂಟ್ ಗವರ್ನರ್ (ಇವರ ಹಿಂದಿರುವುದು ಅದೇ ದೆಹಲಿಯ ಗದ್ದುಗೆ ಹಿಡಿದಿರುವ ಪ್ರದಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಕೇಂದ್ರಸರಕಾರ) ನಡುವಿನ ಜಟಾಪಟಿ ಮುಗಿಯುವಂತೆ ಕಾಣುತ್ತಿಲ್ಲ. 

2015ರಲ್ಲಿ ಬಾರೀ ಬಹುಮತದೊಂದಿಗೆ ದೆಹಲಿಯಲ್ಲಿ ಅಧಿಕಾರ ಹಿಡಿದ ಶ್ರೀ ಅರವಿಂದ್ ಕೇಜ್ರೀವಾಲರು ಒಂದು ದಿನವೂ ನೆಮ್ಮದಿಯಾಗಿ ಸರಕಾರ ನಡೆಸಲು ಅಲ್ಲಿನ ಲೆಫ್ಟಿನಂಟ್ ಗವರ್ನರ್ ಬಿಡಲೇ ಇಲ್ಲ. ಬ್ರಿಟೀಷ್ ಸಂಸದೀಯ ಪ್ರಜಾಸತ್ತೆಯಿಂದ ಎರವಲು ಪಡೆದು ನಾವು ಸ್ಥಾಪಿಸಿಕೊಂಡಿರುವ ಈ ಲೆಫ್ಟಿನೆಂಟ್ ಗವರ್ನರ್ ಹುದ್ದೆಯಲ್ಲಿರುವವರು ಸದಾ ಕೇಂದ್ರದಲ್ಲಿ ಅಧಿಕಾರ ಹೊಂದಿರುವ ಪಕ್ಷದ ಆಣತಿಯಂತೆ ನಡೆದುಕೊಳ್ಳುವವರೇ ಆಗಿರುತ್ತಾರೆ. ಶೀಲಾ ದೀಕ್ಷಿತ್ ಅಂತವರು ದೆಹಲಿಯ ಮುಖ್ಯಮಂತ್ರಿಯಾಗಿದ್ದಾಗ ಇಂತಹ ಸಮಸ್ಯೆಗಳೇನು ಎದುರಾಗಿರಲಿಲ್ಲ. ಅದಕ್ಕೆ ಕಾರಣ ಆಗ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದದ್ದು ಶ್ರೀಮತಿ ಶೀಲಾದೀಕ್ಷೀತರ ಕಾಂಗ್ರೆಸ್ ಪಕ್ಷವೇ. ಹೀಗಾಗಿ ಆಗ ದೆಹಲಿ ಮುಖ್ಯಮಂತ್ರಿಗಳ ಅಧಿಕಾರವನ್ನು ಕೇಂದ್ರಸರಕಾರ ಲೆಫ್ಟಿನೆಂಟ್ ಗವರ್ನರ್ ಮೂಲಕ ನಿಯಂತ್ರಿಸಲು ಹೋಗಿರಲಿಲ್ಲ. ಆ ನಂತರವೂ ಬಾಜಪದ ಶ್ರೀಮತಿ ಸುಷ್ಮಾ ಸ್ವರಾಜ್ ಮತ್ತು ದಿವಂಗತ ಶ್ರಿ ಮದನಲಾಲ್ ಖುರಾನರವರುಗಳು ಮುಖ್ಯಮಂತ್ರಿಗಳಾಗಿದ್ದಾಗಲೂ ಮುಖ್ಯಮಂತ್ರಿಗಳ ಅಧಿಕಾರಕ್ಕೆ ಕಡಿವಾಣ ಹಾಕುವ ಕೆಲಸವನ್ನು ಅಂದಿನ ಕಾಂಗ್ರೆಸ್ ಸರಕಾರ ಮಾಡಿರಲಿಲ್ಲ. ತನ್ಮೂಲಕ ಪ್ರಜಾಸತ್ತಾತ್ಮಕವಾಗಿ ದೆಹಲಿಯ ಜನತೆ ಆಯ್ಕೆ ಮಾಡಿದ ಸರಕಾರವೊಂದು ತನಗಿರುವ ಅದಿಕಾರಗಳ ಮಿತಿಯಲ್ಲಿಯೇ ಸುಗಮವಾಗಿ ಆಡಳಿತ ನಡೆಸಿಕೊಂಡು ಹೋಗುತ್ತಿತ್ತು.

ಆದರೆ ಶ್ರೀ ಅರವಿಂದ್ ಕೇಜ್ರೀವಾಲರು ಮುಖ್ಯಮಂತ್ರಿಯಾಗಿ ಬಂದನಂತರ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಈಗಿನ ಬಾಜಪ ಸರಕಾರ ಒಂದೇ ಒಂದು ದಿನಕ್ಕೂ ಕೇಜ್ರೀವಾಲರು ನೆಮ್ಮದಿಯಾಗಿ ಆಡಳಿತ ನಡೆಸಲು ಬಿಟ್ಟಿಲ್ಲ. ಜೊತೆಗೆ ಕೇಜ್ರೀವಾಲರು ಅನುಷ್ಠಾನಗೊಳಿಸಲು ಯತ್ನಿಸಿದ ಪ್ರತಿಯೊಂದು ಯೋಜನೆಗೂ ಇಲ್ಲಸಲ್ಲದ ಕಾನೂನುಗಳ ನೆಪ ಹೇಳಿ ಲೆಫ್ಟಿನೆಂಟ್ ಗವರ್ನರ್ ಅವರು ತಡೆಯೊಡ್ಡುವ ಸತತ ಪ್ರಯತ್ನವನ್ನು ಮಾಡುತ್ತಲೇ ಬಂದರು. ತನ್ನ ಹಿಡಿತದಲ್ಲಿರುವ ಸಿ.ಬಿ.ಐ. ಮತ್ತು ಇತರೆ ಸಂಸ್ಥೆಗಳನ್ನು ಬಳಸಿಕೊಂಡ ಕೇಂದ್ರ ಸರಕಾರ ಆಮ್ ಆದ್ಮಿ ಪಕ್ಷದ ಹಲವು ಶಾಸಕರು ಮತ್ತು ಮಂತ್ರಿಗಳಿಗೆ ಕಿರುಕುಳ ನೀಡುತ್ತಲೆ ಬಂದಿದೆ. ಕೇಂದ್ರ ಸರಕಾರದ ಮರ್ಜಿಗನುಗುಣವಾಗಿಯೇ ನಡೆದುಕೊಂಡ ಚುನಾವಣಾ ಆಯೋಗ ಸಹ ಲಾಭದಾಯಕ ಹುದ್ದೆಯ ನೆಪದಲ್ಲಿ 20 ಜನ ಶಾಸಕರನ್ನು ಅನರ್ಹಗೊಳಿಸಿ ಆಮ್ ಆದ್ಮಿ ಪಕ್ಷದ ಜಂಘಾಬಲ ಉಡುಗಿಸುವ ಕೆಲಸ ಮಾಡಿತು. ಆದರೆ ತದನಂತರದಲ್ಲಿ ಹೈಕೋರ್ಟಿನ ತೀರ್ಪು ಆ ಶಾಸಕರುಗಳ ಪರ ಬಂದು, ಪಕ್ಷ ನಿರಾಳವಾಗಿ ಉಸಿರಾಡುವಂತೆ ಮಾಡಿತು.ಇದೀಗ ಕೇಂದ್ರ ಸರಕಾರ ದೆಹಲಿ ಸರಕಾರದ ಅಧಿಕಾರಿಗಳ ನಿಯುಕ್ತಿಯ ಅಧಿಕಾರವನ್ನೂ ಕೇಜ್ರೀವಾಲರಿಂದ ಕಿತ್ತುಕೊಂಡಿದ್ದು, ಈ ಪ್ರಕರಣವೀಗ ನ್ಯಾಯಾಲಯದಲ್ಲಿದೆ. ನೇರವಾಗಿ ಅಲ್ಲದಿದ್ದರೂ ತಾನು ನೇಮಿಸಿದ ಲೆಫ್ಟಿನೆಂಟ್ ಗವರ್ನರ್ ಮೂಲಕ ಕೇಂದ್ರ ಸರಕಾರ ದೆಹಲಿಯ ಆಮ್ ಆದ್ಮಿ ಸರಕಾರದ ವಿರುದ್ದ ಕಳೆದ ಮೂರು ವರ್ಷಗಳಿದ ಸಮರ ಸಾರಿ ನಿಂತಿದೆ. ಯಾಕೆ ಮೋದಿಯವರು ಮತ್ತು ಅವರ ಸರಕಾರ ಕೇಡಜ್ರೀವಾಲರ ವಿರುದ್ದ ಇಷ್ಟೊಂದು ಅಸದಹನೆ ತೋರಿಸುತ್ತಿದೆಯೆಂದು ನೋಡಲು ನಾವು ಸ್ವಲ್ಪ ಹಿಂದಕ್ಕೆ ಹೋಗಬೇಕಾಗುತ್ತದೆ. 

ಅಣ್ಣಾ ಹಜಾರೆಯವರು ಜನಲೋಕಪಾಲ್ ಮಸೂದೆಗೆ ಒತ್ತಾಯಿಸಿ ನಡೆಸಿದ ಚಳುವಳಿಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದ ಅರವಿಂದ್ ಕೇಜ್ರೀವಾಲರು ಆ ದಿನಗಳಲ್ಲಿ ಇಡೀ ದೇಶದ ಗಮನ ಸೆಳೆದಿದ್ದರು. ಬಾಜಪ ಸಹ ಈ ಚಳುವಳಿಯನ್ನು ಪರೋಕ್ಷವಾಗಿ ಬೆಂಬಲಿಸುತ್ತ ಅಂದಿನ ಆಡಳಿತ ಪಕ್ಷವಾದ ಕಾಂಗ್ರೆಸ್ ವಿರುದ್ದದ ರಾಜಕೀಯ ಲಾಭ ಪಡೆಯಲು ಪ್ರಯತ್ನ ನಡೆಸಿತ್ತು. ಆ ದಿನಗಳಲ್ಲಿ ಕೇಜ್ರೀವಾಲರು ರಾಜಕಾರಣಕ್ಕೆ ದುಮುಕುತ್ತಾರೆಂದು ಯಾರೂ ಭಾವಿಸಿರಲಿಲ್ಲ. ಆದರೆ ನಂತರದಲ್ಲಿ ಹಜಾರೆಯವರನ್ನೂ ಧಿಕ್ಕರಿಸಿ ಕೇಜ್ರೀವಾಲರು ಆಮ್ ಆದ್ಮಿ ಪಕ್ಷವನ್ನು ಸ್ಥಾಪಿಸಿದಾಗ ಬಾಜಪವಾಗಲಿ ಕಾಂಗ್ರೆಸ್ ಆಗಿ ಕೇಜ್ರೀವಾಲರನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಮೊದಲ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಬಹುಮತ ಬಾರದೆ ಮೈತ್ರಿ ಸರಕಾರ ರಚಿಸಿ ನಂತರ ರಾಜಿನಾಮೆ ನೀಡಿ ಹೊರಬಂದ ಕೇಜ್ರೀವಾಲರ ಜನಪ್ರಿಯತೆಯನ್ನು ಹಗುರವಾಗಿ ಪರಿಗಣಿಸಿದ ಬಾಜಪ ಕಾಂಗ್ರೆಸ್ ಎರಡೂ ಪಕ್ಷಗಳು 2015ರ ದೆಹಲಿ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆಯನ್ನು ಎದುರಿಸಬೇಕಾಯಿತು. ಕೇಜ್ರೀವಾಲರ ಪಕ್ಷವನ್ನು ಮಣಿಸಲು ಬಾಜಪ ಚಳುವಳಿಯಲ್ಲಿ ಸಕ್ರಿಯವಾಗಿದ್ದ ಶ್ರೀಮತಿ ಕಿರಣ್ ಬೇಡಿಯವರನ್ನು ತಮ್ಮ ಪಕ್ಷಕ್ಕೆ ಕರೆದುಕೊಂಡು ಬಂದು ಮುಖ್ಯಮಂತ್ರಿ ಅಭ್ಯರ್ಥಿಯೆಂದು ಘೋಷಿಸಿತು. ಆದರೆ ಸ್ವತ: ಕೇಜ್ರೀವಾಲರೇ ಅಚ್ಚರಿಗೊಳ್ಳುವಂತೆ ಆಮ್ ಆದ್ಮಿ ಎಪ್ಪತ್ತು ಸ್ಥಾನಗಳ ಪೈಕಿ ಅರವತ್ತೇಳು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಹಿಡಿಯಿತು. ದೆಹಲಿಯ ಮದ್ಯಮವರ್ಗ ಮತ್ತು ಮತ್ತು ತಳ ಸಮುದಾಯ ಸಂಪೂರ್ಣವಾಗಿ ಕೇಜ್ರೀವಾಲರ ಪರ ನಿಂತಿತ್ತು. 2014ರ ವೆಳೆಗೆ ದೇಶದ ಬಲಿಷ್ಠ ನಾಯಕರಾಗಿ ಬೆಳೆದಿದ್ದ ನರೇಂದ್ರ ಮೋದಿಯವರಿಗೆ ಕೇಜ್ರೀವಾಲರ ಈ ಜನಪ್ರಿಯತೆ ಆತಂಕವನ್ನುಂಟು ಮಾಡಿದ್ದು ಸುಳ್ಳೇನಲ್ಲ. ಯಾಕೆಂದರೆ ದಿನದಿನಕ್ಕೆ ಕೇಜ್ರೀವಾಲರ ಜನಪ್ರಿಯತೆ ದೆಹಲಿಯ ಆಚೆಗೂ ಹಬ್ಬುತ್ತಾ ಹೋಗುತ್ತಿತ್ತು. ಆ ಸಂದರ್ಭದಲ್ಲಿ ಉತ್ತರ ಭಾರತದ ಹಲವು ರಾಜ್ಯಗಳ ವಿದಾನಸಭಾ ಚುನಾವಣೆಗಳು ನಡೆಯಬೇಕಿದ್ದು ಎಲ್ಲಿ ಆಮ್ ಆದ್ಮಿ ಪಕ್ಷ ಆ ಚುನಾವಣೆಗಳಲ್ಲಿ ಬಾಗವಹಿಸಿ ತನ್ನ ಮತಬ್ಯಾಂಕಿಗೆ ಕೈ ಹಾಕುತ್ತದೆಯೋ ಎಂಬ ಅತಂಕದಲ್ಲಿ ಬಾಜಪ ವಿದಿಯಿರದೆ ದೆಹಲಿ ಸರಕಾರದ ಆಡಳಿತಕ್ಕೆ ಹಲವು ರೀತಿಯ ಅಡೆತಡೆಗಳನ್ನು ಒಡ್ಡುತ್ತಾ ಕೇಜ್ರೀವಾಲರು ದೆಹಲಿಯ ಆಚೆಗೆ ಯೋಚಿಸುವುದಕ್ಕೆ ಕಡಿವಾಣ ಹಾಕಲು ಸ್ವಲ್ಪ ಮಟ್ಟಿಗೆ ಯಶಸ್ವಿಯಾಯಿತು. ಆ ಸಮಯದಲ್ಲಿ ಎಲ್ಲಿ ಮೋದಿಯವರಿಗೆ ಸಮಾನಾಂತರ ನಾಯಕನಾಗಿ ಕೇಜ್ರೀವಾಲರು ಬೆಳೆದು ಬಿಡುತ್ತಾರೊ ಎನ್ನುವ ಭಯ ಮೋದಿಯವರನ್ನೂ ಸೇರಿದಂತೆ ಬಾಜಪದ ನಾಯಕರುಗಳನ್ನು ಕಾಡಿದ್ದು ಸತ್ಯ. ಆ ಬೀತಿಯಿಂದಲೇ ಕೇಜ್ರೀವಾಲರನ್ನು ದೆಹಲಿಗೆ ಸೀಮಿತಗೊಳಿಸುವ ಹುನ್ನಾರದ ಭಾಗವಾಗಿ ದೆಹಲಿ ಸರಕಾರದ ದೈನಂದಿನ ಆಡಳಿತದಲ್ಲಿ ತನ್ನ ಪ್ರತಿನಿಧಿಲೆಫ್ಟಿನೆಂಟ್ ಗವರ್ನರ್ ಮೂಲಕ ಮೂಗು ತೂರಿಸಲು ಪ್ರಾರಂಭಿಸಿತು. ಅದಕ್ಕೆ ತಕ್ಕಂತೆ ಕೇಜ್ರೀವಾಲರು ಸಹ ಹಿಂದೆ ಮುಂದೆ ನೋಡದೆ ತೆಗೆದುಕೊಂಡ ಹಲವು ನಿರ್ಧಾರಗಳು ಮತ್ತು ನಡೆದುಕೊಂಡ ರೀತಿ ಮಾಧ್ಯಮಗಳು ಅವರನ್ನು ಸರ್ವಾಧಿಕಾರಿಯೆಂಬಂತೆ ಬಿಂಬಿಸಲು ಸಹಕಾರಿಯಾಯಿತು. ತನಗೆ ಸರಿಸಾಟಿಯಾಗಿ ಬೆಳೆಯಬಲ್ಲ ತನ್ನ ಪಕ್ಷದ ನಾಯಕರುಗಳನ್ನೆಲ್ಲ ಮೂಲೆಗುಂಪು ಮಾಡಿ ಬೀಗುತ್ತಿದ್ದ ಮೋದಿಯವರಿಗೆ ವಿರೋಧಪಕ್ಷಗಳಲ್ಲಿಯೂ ಅಂತಹ ಬಲಿಷ್ಠ ನಾಯಕರುಗಳಿರಲಿಲ್ಲ. ಆದರೆ ತನ್ನ ಶಕ್ತಿಕೇಂದ್ರವಾದ ದೆಹಲಿಯಲ್ಲಿಯೇ ನಿಂತು ತನಗೆ ಪ್ರಶ್ನೆ ಕೇಳಬಲ್ಲ ದಿಟ್ಟತನ ತೋರಿಸುತ್ತಿದ್ದ ಕೇಜ್ರೀವಾಲರನ್ನು ಮೋದಿಯವರು ಸಹಿಸುವುದು ಸಾದ್ಯವಿರಲಿಲ್ಲ. ಕೇಜ್ರೀವಾಲರು ಜನಸಮುದಾಯದ ಚಳುವಳಿಗಳ ಮೂಲಕ ರಾಜಕಾರಣಕ್ಕೆ ಬಂದವರಾಗಿದ್ದು ಇಂಡಿಯಾದ ಶಕ್ತಿ ರಾಜಕಾರಣದ ಆಟಗಳನ್ನು ಆಳವಾಗಿ ಅರ್ಥಮಾಡಿಕೊಂಡವರೇನಲ್ಲ. ಆದರೆಮೋದಿಯವರು ಒಂದು ರಾಜಕೀಯ ಪಕ್ಷದ ಕಾರ್ಯಕರ್ತನಾಗಿ ಸಕ್ರಿಯ ರಾಜಕಾರಣದ ಎಲ್ಲ ಪಟ್ಟುಗಳನ್ನು ಕಲಿಯುತ್ತಲೇ ಪ್ರದಾನಿ ಪಟ್ಟದವರೆಗು ನಡೆದುಕೊಂಡು ಬಂದವರು. ಹಾಗಾಗಿ ಮೋದಿಯವರು ಲೆಫ್ಟಿನೆಂಟ್ ಗವರ್ನರ್ ಮೂಲಕ ನೀಡಿದ ಕಿರುಕುಳವನ್ನು ರಾಜಕೀಯವಾಗಿ ಎದುರಿಸುವ ಚಾಣಾಕ್ಷತೆ ಕೇಜ್ರೀವಾಲರಿಗೆ ಇಲ್ಲದೇ ಹೋಯಿತು. ಹೀಗಾಗಿಯೇ ಹಲವು ವಿಷಯಗಳಲ್ಲಿ ಅವರು ತೆಗೆದುಕೊಂಡ ನಿರ್ದಾರಗಳು ಮತ್ತು ಇಟ್ಟ ಹೆಜ್ಜೆಗಳು ಬಾಜಪಕ್ಕೆ ಸಹಾಯಕಾರಿಯಾಗುತ್ತ ಹೋದವು.ತನ್ನ ಸರಿಸಮಾನಾದ ಒಬ್ಬನೇ ಒಬ್ಬ ನಾಯಕನೂ ಇರದ ರಾಜಕೀಯ ಪಕ್ಷಗಳ ನಡುವೆ ತಮ್ಮಪಕ್ಷದ ಸಾಂಪ್ರದಾಯಿಕ ನಡೆಗಳನ್ನು ಧಿಕ್ಕರಿಸಿ ನಿಲ್ಲುವ ಛಾತಿ ತೋರಿದ ಕೇಜ್ರೀವಾಲರು ಯಾವತ್ತಿಗಾದರೂ ತಮಗೆ ಅಪಾಯಕಾರಿಯೆಂದು ಬಾವಿಸಿದ ಬಾಜಪ ಕೇಜ್ರೀವಾಲರನ್ನು ಗುರಿಯಾಗಿಸಿಟ್ಟುಕೊಂಡೇ ದೆಹಲಿಯಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಆಮ್ ಆದ್ಮಿಗಿಂತ ಹೆಚ್ಚು ಸ್ಥಾನಗಳನ್ನು ಬಾಜಪ ಗೆದ್ದರೂ, 2020ರಲ್ಲಿ ನಡೆಯುವ ದೆಹಲಿಯ ವಿದಾನಸಭಾ ಚುನಾವಣೆಯಲ್ಲಿ ಕೇಜ್ರೀವಲರನ್ನು ಸೋಲಿಸುವುದು ಅಷ್ಟು ಸುಲಭವಲ್ಲವೆಂಬುದನ್ನು ಮನಗಂಡಿರುವ ಬಾಜಪ ತನಗೆ ಗೊತ್ತಿರುವ ಎಲ್ಲಪಟ್ಟುಗಳನ್ನೂ ಬಳಸಿಕೊಂಡು ಕೇಜ್ರೀವಾಲರಬ್ಬು ಹಣಿಯಲು ಹೊರಟಿದೆ. ಯಾಕೆಂದರೆ ದೆಹಲಿಯ ಶೇಕಡಾ ಅರವತ್ತಿರುವಷ್ಟಿರುವ ಕೆಳ ಮತ್ತು ಮಧ್ಯಮ ವರ್ಗದ ಮತದಾರರುಗಳಿಗೆ ಇವತ್ತಿಗೂ ಕೇಜ್ರೀವಾಲರ ಮೆಲಿನ ಅಭಿಮಾನ ಕಡಿಮೆಯಾಗಿಲ್ಲ. ಕೇಂದ್ರಕ್ಕೆ ಮೋದಿ-ರಾಜ್ಯಕ್ಕೆ ಕೇಜ್ರೀ ಎಂಬುದು ಅವರ ನೀತಿಯಾಗಿದೆ. ಬಾಜಪ ವಿರೋಧಿ ಮೈತ್ರಿಕೂಟದ ಬಗ್ಗೆ ಮಾತಾಡುವ ಕಾಂಗ್ರೇಸ್ ಕೂಡಾ ಕೇಜ್ರೀವಾಲರನ್ನು ದೂರವಿಟ್ಟು ರಾಜಕಾರಣ ಮಾಡುತ್ತಿದೆ. ಕೇಜ್ರೀವಾಲರ ಜನಪ್ರಿಯತೆ ಬಗ್ಗೆ ಕಾಂಗ್ರೆಸ್ ನಾಯಕರಿಗೂ ಬಾಜಪದಷ್ಟೆ ಭಯವಿದೆ, ಹೀಗಾಗಿಯೇ ಆಮ್ ಆದ್ಮಿ ಪಕ್ಷದ ಸಂಕಷ್ಟಗಳ ಸಂದರ್ಭಗಳಲ್ಲಿ ಕಾಂಗ್ರೆಸ್ ಬಾಜಪದ ಪ್ರಜಾಪ್ರಭುತ್ವ ವಿರೋಧಿ ನಡವಳಿಕೆಗಳನ್ನು ಖಂಡಿಸದೆ ಮೂಕಪ್ರೇಕ್ಷಕನಾಗಿ ಕೂತಿರುತ್ತದೆ. 

ಕೇಜ್ರೀವಾಲ್ ಮತ್ತು ಕೇಂದ್ರ ಸರಕಾರಗಳ ನಡುವಿನ ಈ ಜಟಾಪಟಿಯಲ್ಲಿ ಪದೆಪದೇ ನ್ಯಾಯಾಲಯ ಮದ್ಯಪ್ರವೇಶ ಮಾಡುವಂತಾಗಿರುವುದು ಆರೋಗ್ಯಕಾರಿ ಪ್ರಜಾಪ್ರಭುತ್ವಕ್ಕೆ ಮಾರಕವಾದದ್ದು ಎಂಬುದಂತು ಸತ್ಯ. 

No comments:

Post a Comment