Jun 24, 2018

ಪಕ್ಷಿ ಪ್ರಪಂಚ: ಕೆಮ್ಮೀಸೆ ಪಿಕಳಾರ.

ಚಿತ್ರ ೧: ಲಂಟಾನದ ಕಾಯಿಯೊಂದಿಗೆ ಪಿಕಳಾರ 

ಡಾ. ಅಶೋಕ್. ಕೆ. ಆರ್. 

ಇರುವ ಹತ್ತಲವು ರೀತಿಯ ಪಿಕಳಾರಗಳಲ್ಲಿ ಹೆಚ್ಚಾಗಿ ಕಾಣಸಿಗುವ ಪಿಕಳಾರವೆಂದರೆ ಕೆಮ್ಮೀಸೆ ಪಿಕಳಾರ. ಲಂಟಾನದ ಪೊದೆಗಳೋ ಚಿಕ್ಕ ಪುಟ್ಟ ಹಣ್ಣಿನ ಗಿಡಗಳೋ ಇದ್ದುಬಿಟ್ಟರೆ ನಗರವಾಸಕ್ಕೂ ಸೈ ಎನ್ನುವಂತಹ ಪಕ್ಷಿಗಳಿವು. 


ಆಂಗ್ಲ ಹೆಸರು: Red whiskered bulbul (ರೆಡ್ ವಿಸ್ಕರ್ಡ್ ಬುಲ್ಬುಲ್) 
ವೈಜ್ಞಾನಿಕ ಹೆಸರು: Pycnonotus jocosus (ಪಿಕ್ನೋನಾಟಸ್ ಜೊಕೊಸುಸ್) 


ತಲೆಯ ಮೇಲೊಂದು ಕಪ್ಪು ಕಿರೀಟವಿದೆ, ತಲೆ ಮತ್ತು ಕೊಕ್ಕು ಕಪ್ಪು ಬಣ್ಣದ್ದು. ಕಣ್ಣಿನ ಕೆಳಗೆ ಕೆಂಪು ಪಟ್ಟಿಯಿದೆ. ಎದೆಯ ಹೆಚ್ಚಿನ ಭಾಗ ಬಿಳಿ ಬಣ್ಣದ್ದು, ಅಲ್ಲಲ್ಲಿ ತೆಳು ಕಂದು ಬಣ್ಣವನ್ನೂ ಗಮನಿಸಬಹುದು. ಎದೆಯ ಮೇಲ್ಭಾಗದಲ್ಲಿ ಬೆನ್ನಿನ ಕಂದು - ಕಪ್ಪು ಸ್ವಲ್ಪ ದೂರದವರೆಗೆ ಹರಡಿಕೊಂಡಿದೆ. ಬೆನ್ನಿನ ಮೇಲೆ ಹಾಕಿಕೊಂಡ ಟವಲ್ಲು ಎದೆಯ ಮೇಲೆ ಬಿದ್ದಂತಿದೆ ಈ ಪಟ್ಟಿ. ಬೆನ್ನು ಮತ್ತು ಬಾಲ ಕಂದು ಬಣ್ಣದ್ದು. ಹೆಣ್ಣು ಗಂಡಿನಲ್ಲಿ ವ್ಯತ್ಯಾಸಗಳಿಲ್ಲ. 

ಇನ್ನಷ್ಟು ಪಕ್ಷಿಗಳ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ಕಿಸಿ. 

ಹುಲ್ಲು, ಕಡ್ದಿ, ಗಟ್ಟಿ ಎಲೆಗಳನ್ನು ಬಳಸಿಕೊಂಡು ಗೂಡು ಕಟ್ಟಿಕೊಳ್ಳುತ್ತವೆ. ಸಾಮಾನ್ಯವಾಗಿ ನೇರಳೆ ಬಣ್ಣದ ಚುಕ್ಕೆಗಳಿರುವ ಮೂರು ಮೊಟ್ಟೆಗಳನ್ನಿಡುತ್ತವೆ. ಪೊದೆಗಳಲ್ಲಿ ಗೂಡು ಕಟ್ಟುವ ಪಿಕಳಾರಗಳು ನಗರದ ಮನೆಯ ಆವರಣದಲ್ಲಿರುವ ಬಳ್ಳಿ ಗಿಡಗಳಲ್ಲೂ ಗೂಡು ಕಟ್ಟುತ್ತವೆ, ಮನೆಯವರಿಂದ ತನ್ನಿರುವಿಕೆಗೆ ಯಾವುದೇ ಅಪಾಯವಿಲ್ಲ ಎಂದರಿವಾದ ನಂತರ. 

ಲಂಟಾನದ ಹಣ್ಣುಗಳೆಂದರೆ ಇವುಗಳಿಗೆ ಅಚ್ಚುಮೆಚ್ಚು. ಕೆರೆಯ ಬಳಿ ಕಾಡಿನಂಚಿನ ಬಳಿ ಲಂಟಾನದ ಗಿಡ ಹಣ್ಣುಬಿಟ್ಟ ಸಮಯದಲ್ಲಿ ಗುಂಪು ಗುಂಪಾಗಿ ಕಾಣಿಸಿಕೊಳ್ಳುತ್ತವೆ. ಬೇರೆ ಕಡೆ ಜೋಡಿಯಾಗಿಯೇ ಇರುತ್ತವೆ. ಎಲ್ಲಾ ರೀತಿಯ ಹಣ್ಣುಗಳ ಜೊತೆಗೆ ಹುಳು ಹುಪ್ಪಟೆಗಳನ್ನೂ ತಿನ್ನುವ ಪಿಕಳಾರಗಳು ಮಿಶ್ರಾಹಾರಿಗಳು. 

ಕಪ್ಪು ಕಿರೀಟ ಮತ್ತು ಕಣ್ಣ ಕೆಳಗಿನ ಕೆಂಪು ಪಟ್ಟಿಯ ಮೀಸೆಯ ನೆರವಿನಿಂದ ಈ ಪಕ್ಷಿಯನ್ನು ಗುರುತಿಸುವುದು ಸುಲಭದ ಕೆಲಸ. ಸಣ್ಣ ಪುಟ್ಟ ಹಣ್ಣು ಬಿಟ್ಟಿರುವ ಪೊದೆಗಳ ಬಳಿ ನಡೆದುಹೋಗುವಾಗ ಪಕ್ಷಿಗಳ ಜೋಡಿಯೊಂದು ಗದ್ದಲವೆಬ್ಬಿಸಿ ಪುರ್ರಂತ ಹಾರಿ ಹೋಗಿದ್ದನ್ನು ನೀವು ಕಂಡಿರುವಿರಾದರೆ ಹೆಚ್ಚಿನಂಶ ಅದು ಕೆಮ್ಮೀಸೆ ಪಿಕಳಾರವೇ ಆಗಿರುತ್ತದೆ. 
ಚಿತ್ರ ೨: ಬೆಂಗಳೂರಿನ ಮನೆಯಲ್ಲಿ ಗೂಡು ಕಟ್ಟಿದ್ದ ಪಿಕಳಾರ. 


ಚಿತ್ರನೆನಪು - 


ಚಿತ್ರ ೧) ಮಂಡ್ಯದ ಸೂಳೆಕೆರೆಯ ಏರಿಯ ಬಳಿ ತೆಗೆದ ಪಟವಿದು. ಲಂಟಾನ ಗಿಡಗಳು ಪ್ರಕೃತಿಗೆ ಮಾರಕವೆಂದು ಹೇಳುವವರಿದ್ದಾರೆ. ಲಂಟಾನಾ ಗಿಡಗಳಿಗೆ ಮುತ್ತಿಕೊಳ್ಳುವ ಚಿಟ್ಟೆಗಳು - ಪಕ್ಷಿಗಳ ಸಂಖ್ಯೆಯನ್ನು ಗಮನಿಸಿದಾಗ ಹಾಗನ್ನಿಸುವುದಿಲ್ಲ! 

ಜೋಡಿ ಪಕ್ಷಿಗಳು ಇನ್ನೂ ಹಣ್ಣಾಗದ ಲಂಟಾನದ ಕಾಯಿಗಳನ್ನು ತಿನ್ನುವುದರಲ್ಲಿ ನಿರತವಾಗಿದ್ದವು. ಅದರಲ್ಲಿ ಒಂದು ಪಕ್ಷಿ ಕಾಯಿಯನ್ನು ಕೊಕ್ಕಿನಲ್ಲಿ ಕಚ್ಚಿ ಹಿಡಿದಿದ್ದು ಕ್ಯಾಮೆರಾದಲ್ಲಿ ಸೆರೆಯಾಯಿತು. 

ಚಿತ್ರ ೨) ಬೆಂಗಳೂರಿನ ನಮ್ಮ ಮನೆಯಲ್ಲಿನ ಮನಿ ಪ್ಲ್ಯಾಂಟ್ ನಲ್ಲಿ ಕೆಮ್ಮೀಸೆ ಪಿಕಳಾರವೊಂದು ಗೂಡು ಕಟ್ಟಿ ಮೊಟ್ಟೆಗಳನ್ನಿಟ್ಟಿತ್ತು. ಮೊದಲೆರಡು ದಿನ ನಾವು ಬಾಗಿಲು ತೆಗೆಯುತ್ತಿದ್ದಂತೆಯೇ ಹಾರಿ ಹೋಗುತ್ತಿತ್ತು. ಅಪಾವೇನಿಲ್ಲ ನಮ್ಮಿಂದ ಎಂದರಿವಾದ ಮೇಲೆ ನಮ್ಮ ಓಡಾಟದ ನಡುವೆಯೂ ಗೂಡಿನಲ್ಲಿ ಮೊಟ್ಟೆಗಳಿಗೆ ಕಾವು ಕೊಡುತ್ತಾ ಕೂತಿರುತ್ತಿತ್ತು. ಅದು ನಮ್ಮಿರುವಿಕೆಗೆ ಹೊಂದಿಕೊಂಡ ನಂತರ ತೆಗೆದ ಪಟವಿದು. 

ದುರದೃಷ್ಟವಶಾತ್ ಒಂದು ದಿನ ಸಂಜೆ ನಾವು ಬರುವಷ್ಟರಲ್ಲಿ ಗೂಡು ಬಿದ್ದುಹೋಗಿತ್ತು. ಗಾಳಿ ಮಳೆಗೆ ಬಿದ್ದುಹೋಯಿತಾ ಎಂಬನುಮಾನ ಬಂತಾದರೂ ಒಡೆದ ಮೊಟ್ಟೆಗಳೇನೂ ಕಾಣಸಿಗಲಿಲ್ಲ. ಮತ್ತೊಂದು ಪಕ್ಷಿಯೋ ಬೆಕ್ಕೋ ಮೊಟ್ಟೆ ತಿಂದಿತ್ತಾ? ಗೊತ್ತಿಲ್ಲ. 

No comments:

Post a Comment