May 22, 2018

ಬಹುಮತ! ಒಂದು ಒಳನೋಟ

ಕು.ಸ. ಮಧುಸೂದನ ರಂಗೇನಹಳ್ಳಿ
ನಾವೆಷ್ಟೇ ಮಾತಾಡಿದರೂ ಕೆಲವೊಮ್ಮೆ ನಮ್ಮ ಸಂವಿದಾನದ ಆಶಯಗಳನ್ನು ನಾವು ಈಡೇರಿಸಲೇ ಆಗದಂತಹ ಪರಿಸ್ಥಿತಿ ಬಂದೊದಗಿಬಿಡುತ್ತದೆ. ಪ್ರಜಾಪ್ರಭುತ್ವದ ಅಡಿಗಲ್ಲುಗಳೆಂದು ನಾವು ಕೊಂಡಾಡುವ ಚುನಾವಣೆಗಳು ಮತ್ತು ಅದರಲ್ಲಿ ಬಹುಮತ ಪಡೆಯುವ ಪಕ್ಷಗಳು ಅಧಿಕಾರ ಪಡೆಯಬೇಕೆನ್ನುವ ನಮ್ಮ ಆಶಯಗಳು ಕೆಲವೊಮ್ಮೆ ತಲೆಕೆಳಗಾಗಿ ಬಿಡುತ್ತವೆ. ಮತ್ತೆ ಕಾನೂನಿನ ತಾಂತ್ರಿಕ ಅಂಶಗಳನ್ನು ಪರಿಗಣಿಸಿ ಕೆಲವೊಂದು ಹೆಜ್ಜೆಗಳನ್ನಿಟ್ಟು ಪ್ರಜಾಸತ್ತೆಯನ್ನು ಉಳಿಸಿಕೊಳ್ಳಬೇಕಾಗುತ್ತದೆ. ಇದನ್ನು ನಾನು ನಮ್ಮ ಅಸಹಾಯಕತೆಯೆಂದೇ ಬಾವಿಸುತ್ತೇನೆಯೇ ಹೊರತು ಇದು ಸರಿಯೊ-ತಪ್ಪೊ ಎಂದು ತೀರ್ಪು ನೀಡಲು ಹೋಗುವುದಿಲ್ಲ. ಇದನ್ನು ಅರ್ಥ ಮಾಡಿಕೊಳ್ಳಬೇಕಾದರೆ ಮೊನ್ನೆ ಹೊರಬಿದ್ದ ಕರ್ನಾಟಕ ರಾಜ್ಯದ ವಿದಾನಸಭಾ ಚುನಾವಣೆಗಳ ಪಲಿತಾಂಶಗಳನ್ನು ನಂತರ ನಡೆದ ಸರಕಾರ ರಚನೆಯ ಸರ್ಕಸ್ಸುಗಳನ್ನು ಸೂಕ್ಷ್ಮವಾಗಿ ಅದ್ಯಯನ ಮಾಡಬೇಕಾಗುತ್ತದೆ: 

ಪಲಿತಾಂಶ ಹೀಗಿತ್ತು: ಒಟ್ಟು 224 ಕ್ಷೇತ್ರಗಳ ಪೈಕಿ ಚುನಾವಣೆ ನಡೆದು ಪಲಿತಾಂಶ ಹೊರಬಿದ್ದಿದ್ದು 222 ಕ್ಷೇತ್ರಗಳಲ್ಲಿ ಮಾತ್ರ. ಇದರಲ್ಲಿ ಪಕ್ಷಗಳು ಪಡೆದ ಸ್ಥಾನಗಳು ಹೀಗಿವೆ. ಬಾಜಪ-104, ಕಾಂಗ್ರೇಸ್-78, ಜನತಾದಳ-37, ಬಹುಜನ ಪಕ್ಷ-01, ಪಕ್ಷೇತರ-02. ಸರಕಾರ ರಚಿಸಲು ಬೇಕಿದ್ದ ಸಂಖ್ಯೆ- 112. 

ಈ ಅರ್ಥದಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ದೊರೆಯಲಿಲ್ಲ ಮತ್ತು ಸರಕಾರ ರಚಿಸಲು ಬೇಕಿದ್ದ ಮಾಂತ್ರಿಕ ಸಂಖ್ಯೆ ಸಿಗಲಿಲ್ಲ. ಪಲಿತಾಂಶ ಬಂದ ಕೂಡಲೆ ಕಾಂಗ್ರೇಸ್ ಜನತಾದಳಕ್ಕೆ ಬೇಷರತ್ ಬೆಂಬಲ ನೀಡುವ ಹೇಳಿಕೆ ನೀಡಿ ಸರಕಾರ ರಚಿಸುವಂತೆ ಜನತಾದಳಕ್ಕೆ ಪತ್ರ ಬರೆಯಿತು. ಆದರೆ104ಸ್ಥಾನಗಳನ್ನು ಗೆದ್ದ ಬಾಜಪ ರಾಜ್ಯಪಾಲರನ್ನು ಬೇಟಿ ಮಾಡಿ ತಾನು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು ಸರಕಾರ ರಚನೆಗೆ ತನ್ನನ್ನೇ ಕರೆಯಬೇಕೆಂದು ಬೇಡಿಕೆ ಇಟ್ಟಿತು. ನಂತರ ಕಾಂಗ್ರೇಸ್ ಮತ್ತು ಜನತಾದಳಗಳು ಸಹ ಒಟ್ಟಿಗೆ ಹೋಗಿ ರಾಜ್ಯಪಾಲರನ್ನು ಕಂಡು ತಮ್ಮ ಮೈತ್ರಿಕೂಟಕ್ಕೆ ಇಬ್ಬರು ಪಕ್ಷೇತರರ ಬೆಂಬಲವೂಸೇರಿ 118 ಸದಸ್ಯರ ಬಲವಿದೆಯಾದದ್ದರಿಂದ ತಮ್ಮನ್ನೇ ಸರಕಾರ ರಚಿಸಲು ಕರೆಯಬೇಕೆಂದು ಬೇಡಿಕೆಯನಿಟ್ಟು ಬಂದವು. ಇದು ವಾಸ್ತವದ ವಿಚಾರ ಮತ್ತು ನಮ್ಮ ಕಣ್ಣಮುಂದಿದ್ದ ಅಂಕಿಸಂಖ್ಯೆಗಳು. 

ನೀರಸವಾದ ಅಂಕಿಸಂಖ್ಯೆಗಳನ್ನು ಬದಿಗಿಟ್ಟು ನೋಡಿದರೆ ನಮಗೆ ಸುಲಭವಾಗಿ ಅರ್ಥವಾಗಬೇಕಿದ್ದುದು ಎರಡೇ ವಿಚಾರ. ಮೊದಲನೆಯದು ಇದು ಅತಂತ್ರ ಪಲಿತಾಂಶವೆಂದು. ಆಡಳಿತಾರೂಢ ಕಾಂಗ್ರೇಸ್ಸನ್ನು ಜನ ತಿರಸ್ಕರಿಸಿರುವುದು ಮೊದಲ ನೋಟಕ್ಕೇನೆ ಗೋಚರವಾಗುತ್ತಿತ್ತು. ಹಾಗೆಂದು ಬಾಜಪಕ್ಕೇನು ಆಡಳಿತ ನಡೆಸುವ ಸಂಖ್ಯೆಯನ್ನು ಅದು ನೀಡಿರಲಿಲ್ಲ. ಅದೇ ರೀತಿ ಜನತಾದಳವನ್ನೂ ಜನ ಪೂರ್ಣವಾಗಿ ಒಪ್ಪಿರಲಿಲ್ಲ. ಅಲ್ಲಿಗೆ ನಿಜವಾದ ಜನಾದೇಶ ಯಾವ ಪಕ್ಷಕ್ಕೂ ಸಿಕ್ಕಿರಲಿಲ್ಲ. ಅಂಕಿಸಂಖ್ಯೆಗಳ ಪ್ರಕಾರ ಮೂರೂ ಪಕ್ಷಗಳೂ ಸರಕಾರ ನಡೆಸುವ ಹಕ್ಕು ಪಡೆದಿರಲಿಲ್ಲ ಎಂಬುದು ಸರ್ವವಿದಿತವಾಗಿತ್ತು. ಆದರೆ ಮತ್ತೆ ತಕ್ಷಣಕ್ಕೆ ಚುನಾವಣೆ ನಡೆಸುವುದು ಕಷ್ಟವಿತ್ತು. ಯಾಕೆಂದರೆ ಆಡಳಿತ ಯಂತ್ರ ಸಂಪೂರ್ಣ ಕುಸಿಯುವ ಮತ್ತು ತೆರಿಗೆದಾರನ ಹಣ ಅನಗತ್ಯವಾಗಿ ವ್ಯರ್ಥವಾಗುವ ಸಾದ್ಯತೆ. ಹಾಗಾಗಿ ಹೇಗಾದರು ಮಾಡಿ ಒಂದು ಸರಕಾರ ರಚಿಸಲೇ ಬೇಕಾದ ಅನಿವಾರ್ಯತೆ ಇತ್ತು. 

ರಾಜ್ಯಪಾಲರು ರಾಜ್ಯದಲ್ಲಿ ಸಂವಿದಾನಬದ್ದ ಅಧಿಕಾರ ಉಳ್ಳವರು ಅವರೊಂದು ನಿರ್ದಾರ ತೆಗೆದುಕೊಳ್ಳಬೇಕಿತ್ತು. ನಿಯಮದ ಪ್ರಕಾರ ಅತಿ ದೊಡ್ಡ ಪಕ್ಷವನ್ನು ಸರಕಾರ ರಚಿಸಲು ಕರೆಯಬೇಕೆಂದು ಕೆಲವು ತಜ್ಞರು ಹೇಳಿದರೆ, ಇನ್ನು ಕೆಲವರು ಬಹುಮತ ಹೊಂದಿದ ದೊಡ್ಡ ಪಕ್ಷವನ್ನು ಮಾತ್ರ ಕರೆಯಬೇಕೆಂದು ಅಭಿಪ್ರಾಯ ಪಟ್ಟರು. ಆಯಾ ಸಮಯಕ್ಕೆ, ಆಯಾ ಸಂದರ್ಭಕ್ಕನುಗುಣವಾಗಿ ನ್ಯಾಯಾಲಯಗಳು ಆಯೋಗಗಳು ನೀಡಿದ ತೀರ್ಪುಗಳಲ್ಲಿ ಯಾವುದೇ ಸ್ಪಷ್ಟತೆ ಇರಲಿಲ್ಲ. ಸಮಯ ಸಂದರ್ಭಕ್ಕೆ ತಕ್ಕಂತೆ ನಿರ್ಣಯ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ರಾಜ್ಯಪಾಲರ ಮೇಲಿತ್ತು. 104 ಸ್ಥಾನಗಳನ್ನು ಹೊಂದಿದ ಬಾಜಪವನ್ನು ಅಧಿಕಾರ ಸ್ವೀಕರಿಸಲು ಕರೆದರೆ ಉಳಿದ 8 ಸ್ಥಾನಗಳನ್ನು ಅವರೆಲ್ಲಿಂದ ತರುತ್ತಾರೆಂಬುದನ್ನು ರಾಜ್ಯಪಾಲರು ನೋಡಬೇಕಿತ್ತು, ಯಾಕೆಂದರೆ ಉಳಿದ 118 ಸ್ಥಾನಗಳೂ ಕಾಂಗ್ರೇಸ್ ದಳದ ಮೈತ್ರಿಕೂಟಕ್ಕೆ ಸೇರಿದ್ದರಿಂದಾಗಿ ಬಾಜಪಕ್ಕೆ ಬೇರೆಲ್ಲಿಂದಲೂ ಸ್ಥಾನಗಳು ಬರುವ ಸಾದ್ಯತೆಯೇ ಇರಲಿಲ್ಲ. ಇದನ್ನು ರಾಜ್ಯಪಾಲರು ಬಾಜಪದ ಶಾಸಕಾಂಗ ಪಕ್ಷದ ನಾಯಕರನ್ನು ಕರೆದು “ನೀವು ಹೇಗೆ ಬಹುಮತ ಪಡೆಯಬಲ್ಲಿರಿ” ಎಂಬುದನ್ನು ವಿವರಿಸಿ ಎಂದು ಕೇಳಿ ಮುನ್ನಡೆಯಬಹುದಿತ್ತು. ಹೀಗೆ ವಿವರಣೆ ಕೇಳುವ ಯಾವ ಕಾನೂನು ಸಂವಿದಾನದಲ್ಲಿ ಇಲ್ಲವೆಂದು ರಾಜಕೀಯ ಪಕ್ಷಗಳು ವಾದಿಸಬಹುದು. ಆದರೆ ಹಾಗೆ ಕೇಳಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದಂತು ನಿಜ. ಬಾಜಪಕ್ಕೆ ಬೇಕಾದ 8 ಸ್ಥಾನಗಳನ್ನು ಅನ್ಯ ಪಕ್ಷದಿಂದ ಪಕ್ಷಾಂತರ ಮಾಡಿಸಿಯೇ ತರಬೇಕೆಂಬ ಸತ್ಯ ಎಲ್ಲರಿಗೂ ಗೊತ್ತಿತ್ತು. ಆದರೂ ರಾಜ್ಯಪಾಲರು ನಿಯಮದ ಪ್ರಕಾರವೇ ಅವರನ್ನು ಕರೆದರು. ಅವರೂ ಸಹ ಹಿಂದೆ ಮುಂದೆ ನೋಡದೆ ಪ್ರಮಾಣವಚನ ಸ್ವೀಕರಿಸಿಯೇ ಬಿಟ್ಟರು. ಇದು ರಾಜ್ಯಪಾಲರ ತಪ್ಪೆನ್ನಲಾಗುವುದಿಲ್ಲ. ನಿಯಮದಂತೆ ಅವರು ದೊಡ್ಡ ಪಕ್ಷವನ್ನು ಕರೆಡದಿದ್ದಾರೆ. ಹಾಗೆಂದು ಬಾಜಪದವರ ತಪ್ಪು ಎನ್ನೋಣವೆಂದರೆ ಅವರು ಬೇರೆ ಪಕ್ಷದವರು ತಾವಾಗಿಯೇ ನಮ್ಮ ಜೊತೆ ಬರಲು ಸಿದ್ದವಾಗಿದ್ದಾರೆ ಹಾಗಾಗಿ ನಮಗೆ ಬಹುಮತ ಸಿಗುತ್ತದೆಯೆಂದು ವಾದಿಸಿ ತಮ್ಮ ನಡೆ ಸಮರ್ಥಿಸಿಕೊಂಡರು. ಇಲ್ಲಿ ರಾಜ್ಯಪಾಲರು ಒಂದು ತಪ್ಪನ್ನು ಮಾಡಿಬಿಟ್ಟರು ಅದೆಂದರೆ ವಿಶ್ವಾಸಮತ ಯಾಚನೆಗೆ15 ದಿನಗಳ ಸುದೀರ್ಘ ಕಾಲಾವಕಾಶವನ್ನು ಬಾಜಪಕ್ಕೆ ನೀಡಿಬಿಟ್ಟರು. ಮದ್ಯರಾತ್ರಿಯಲ್ಲಿ ಸುಪ್ರೀಂ ಕೋರ್ಟಿನ ಕದ ತಟ್ಟಿದ ಕಾಂಗ್ರೆಸ್ ಮತ್ತು ದಳ ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿದವು. ರಾಜ್ಯಪಾಲರ ನಡೆಯನ್ನು ತಪ್ಪೆಂದು ಹೇಳಿ ಅದಕ್ಕೆ ತಡೆ ನೀಡಲು ನಿರಾಕರಿಸಿದ ಕೋರ್ಟ ವಿಸ್ವಾಸ ಮತಯಾಚನೆಯ ಅವಧಿಯನ್ನು ಒಂದು ದಿನಕ್ಕೆ ಇಳಿಸಿತು. ಇದು ಬೇರೆ ಪಕ್ಷದವರು ಬರುತ್ತಾರೆಂದು ಕಾದು ಕುಳಿತಿದ್ದ ಬಾಜಪಕ್ಕೆ ಉರುಳಾಯಿಯತು. ರಾಜ್ಯಪಾಲರು ಅತಿ ಉತ್ಸಾಹದಿಂದ ಬಾಜಪಕ್ಕೆ ಸಂಕಷ್ಟ ತಂದಿಕ್ಕಿದ್ದರು. ಮಾಮೂಲಿಯಾಗಿ ಅವರು ಐದು ದಿನವೊ ಏಳುದಿನವೊ ಅವಕಾಶ ನೀಡಿದ್ದರೆ ನ್ಯಾಯಾಲಯದ ಕಣ್ಣು ಇದರ ಮೇಲೆ ಬೀಳುತ್ತಿರಲಿಲ್ಲ ಮತ್ತು ಅವಧಿಯನ್ನು ಕಡಿತಗೊಳಿಸುವತ್ತ ಗಮನ ಕೊಡುತ್ತಿರಲಿಲ್ಲ. ಒಟ್ಟಿನಲ್ಲಿ ವಿಶ್ವಾಸ ಮತ ಯಾಚನೆಯಲ್ಲಿ ಬಹುಮತ ಅಸಾದ್ಯವೆಂದರಿತ ಬಾಜಪ ಅಧಿಕಾರ ತ್ಯಾಗ ಮಾಡಿ ಹೊರಬರಬೇಕಾಯಿತು. ನಂತರ ರಾಜ್ಯಪಾಲರು ಅನಿವಾರ್ಯವಾಗಿ ಕಾಂಗ್ರೇಸ್ ಜನತಾದಳದ ಮೈತ್ರಿಕೂಟವನ್ನು ಅಧಿಕಾರ ಸ್ವೀಕರಿಸಲು ಕರೆಯಬೇಕಾಗಿ ಬಂತು. ಅಲ್ಲಿಗೆ ಜನರಿಂದ ತಿರಸ್ಕರಿಸಲ್ಪಟ್ಟ ಎರಡು ಪಕ್ಷಗಳು ಒಂದಾಗಿ ಅಧಿಕಾರ ಸ್ವೀಕರಿಸುವಂತಾಯಿತು. ಇದು ಪ್ರಜಾಪ್ರಭುತ್ವದ ವಿಜಯವೆಂದು ಕೆಲವರು ಹೇಳಿದರೆ ಇನ್ನು ಕೆಲವರು ಪ್ರಜಾಸತ್ತೆಯ ಕೊಲೆ ಎನ್ನುತ್ತಿದ್ದಾರೆ. ಸತ್ಯ ಇವೆರಡರ ನಡುವೆ ಇದೆ. ಒಂದು ಸರಕಾರದ ಸ್ಥಾಪನೆ ಅನಿವಾರ್ಯವಾಗಿದ್ದು ಅದನ್ನು ರಾಜ್ಯಪಾಲರು ಸ್ಥಾಪಿಸಿದ್ದಾರೆ. ಜನಮತ ಕಡಿಮೆಯಿದ್ದರೂ ರಾಜ್ಯದ ಆಡಳಿತದ ದೃಷ್ಠಿಯಿಂದ ಈ ಕ್ರಮ ಸರಿಯಾಗಿದೆ ಎನ್ನುವವರೂ ಒಪ್ಪಬೇಕಾದ ಅಂಶವೆಂದರೆ ನಮ್ಮ ಸಂವಿದಾನವನ್ನು ಮತ್ತು ಚುನಾವಣಾ ವ್ಯವಸ್ಥೆಯನ್ನು ಮತ್ತು ಬಹುಮತ ಎನ್ನುವ ಪದದ ವ್ಯಾಖ್ಯೆಯಲ್ಲಿ ಒಂದಿಷ್ಟು ತಿದ್ದುಪಡಿಗಳು ಆಗಬೇಕಿದೆ ಎನ್ನುವುದಾಗಿದೆ. ಯಾಕೆಂದರೆ ಬಹುಮತ ಎಂದರೆ ಹೆಚ್ಚು ಸ್ಥಾನಗಳನ್ನು ಪಡೆಯುವುದೆಂದೇ ನಮ್ಮ ವ್ಯವಸ್ಥೆ ಹೇಳುತ್ತದೆ. ಆದರಿದರಲ್ಲಿ ಪಕ್ಷಗಳು ಪಡೆಯುವ ಶೇಕಡಾವಾರು ಮತಗಳು ಪರಿಗಣಿಸಲ್ಪಡುವುದಿಲ್ಲ. ಕೆಲವೊಮ್ಮೆ ಹೆಚ್ಚು ಮತ ಪಡೆದ ಪಕ್ಷಗಳು ಕಡಿಮೆ ಸ್ಥಾನಗಳನ್ನು, ಕಡಿಮೆ ಮತ ಪಡೆದ ಪಕ್ಷಗಳು ಹೆಚ್ಚು ಸ್ಥಾನಗಳನ್ನು ಪಡೆಯುವುದು ಸಾಮಾನ್ಯ ಸಂಗತಿಯಾಗಿದೆ. ನಾವೀಗ ಸ್ಥಾನಗಳ ಬಹುಮತದ ಮಾತಾಡುತ್ತೇವೆಯೇ ಹೊರತು ಶೇಕಡಾವಾರು ಮತಗಳಿಕೆಯನ್ನಲ್ಲ. ಈ ತಾರತಮ್ಯವನ್ನು ಸರಿಪಡಿಸಿದಾಗ ಮಾತ್ರ ಬಹುಮತ ಎನ್ನುವ ಪದಕ್ಕೆ ಅರ್ಥ ಬರುತ್ತದೆ ಎನ್ನ ಬಹುದು. ಅದನ್ನೂ ಒಂದಿಚಷಷ್ಟು ನೋಡೋಣ: 

ಈ ಬಾರಿ ಕಾಂಗ್ರೇಸ್ ಶೇಕಡಾ 38 ರಷ್ಟು ಮತಗಳಿಸಿದ್ದರೂ ಕೇವಲ 78 ಸ್ಥಾನಗಳನ್ನು(13,824,005 ಜನಪ್ರಿಯ ಮತಗಳನ್ನು) ಗಳಿಸಿದೆ. ಬಾಜಪ 104 ಸ್ಥಾನಗಳನ್ನು ಪಡೆದಿದ್ದರೂ ಶೇಕಡಾ36.2 (13,185,384 ಜನಪ್ರಿಯಮತಗಳನ್ನು) (ಜನತಾದಳ 37 ಸ್ಥಾನಗಳನ್ನು ಗಳಿಸಿ ಶೇಕಡಾ18.3 (6,666,307 ಜನಪ್ರಿಯ ಮತಗಳನ್ನೂ) ಗಳಿಸಿದೆ. ಈ ಅಂಕಿಸಂಖ್ಯೆಗಳನ್ನು ನೋಡಿದರೆ ಬಾಜಪ ಹೆಚ್ಚು ಸ್ಥಾನಗಳನ್ನು ಪಡೆದಿದ್ದರೆ ಕಾಂಗ್ರೇಸ್ ಹೆಚ್ಚು ಜನಮತಗಳನ್ನು ಪಡೆದಿರುವುದು ಕಂಡು ಬರುತ್ತದೆ. ಇಲ್ಲಿ ಮತಗಳಿಕೆಗೂ ಪಡೆಯುವ ಸ್ಥಾನಗಳಿಗೂ ಬಾರೀ ವ್ಯತ್ಯಾಸವಿರುವುದು ಕಂಡು ಬರುತ್ತದೆ. ಆದ್ದರಿಂದ ನಾವೀಗ ನಮ್ಮ ಚುನಾವಣೆಯಲ್ಲಿನ ಗೆಲುವಿನ ಮಾನದಂಡಗಳನ್ನೇ ಬದಲಾಯಿಸಬೇಕಾಗುತ್ತದೆ. 

ಪರಿಸ್ಥಿತಿ ಹೀಗಿರುವಾಗ ಇಲ್ಲಿ ನಿಜಕ್ಕೂ ಗೆದ್ದವರು ಯಾರು? ಎಂಬುದೇ ದೊಡ್ಡ ಪ್ರಶ್ನೆಯಾಗಿಬಿಟ್ಟಿದೆ. ನಮ್ಮ ಚುನಾವಣಾ ವ್ಯವಸ್ಥೆಯ ಈ ದೋಷವನ್ನು ಸರಿಪಡಿಸುವ ತನಕ ಇಂತಹ ಸಾಂವಿದಾನಿಕ ಬಿಕ್ಕಟ್ಟುಗಳು ನಿವಾರಣೆಯಾಗುವುದಿಲ್ಲ. 

ಇಷ್ಟೆಲ್ಲ ವಿಶ್ಲೇಷಿಸಿದ ನಂತರವೂ ಉಳಿದು ಹೋಗುವ ಪ್ರಶ್ನೆಗಳು: 

1. ಏಕೈಕ ದೊಡ್ಡ ಪಕ್ಷವಾಗಿ ಬಾಜಪವನ್ನು ಆಹ್ವಾನಿಸಿದ್ದು ರಾಜ್ಯಪಾಲರ ತಪ್ಪೇ? 

2. ತಪ್ಪಾಗಿದ್ದರೆ ಅದು ಕಾನೂನಾತ್ಮಕ ತಪ್ಪೊ ನೈತಿಕ ತಪ್ಪೊ?( ನೈತಿಕತೆ ಪದಕ್ಕಿಲ್ಲಿ ಅವಕಾಶವಿದೆಯೆ?) 

3. ಚುನಾವಣೆಯಲ್ಲಿ ಪರಸ್ಪರ ದೋಷಾರೋಪಣೆ ಮಾಡಿಕೊಂಡು, ಪಲಿತಾಂಶಗಳು ಬಂದನಂತರ ಹೊಂದಾಣಿಕೆ ಮಾಡಿಕೊಂಡ ಕಾಂಗ್ರೇಸ್ ದಳದ ಮೈತ್ರಿ ತಪ್ಪೇ(ತಪ್ಪೇ ಆದರೆ ಕಾನೂನಾತ್ಮಕವಾಗಿ ತಪ್ಪೊ ನೈತಿಕವಾಗಿ ತಪ್ಪೊ?) 

4. ಬಹುಮತ ಎಂದರೇನು ಹೆಚ್ಚು ಸ್ಥಾನ ಪಡೆಯುವುದೊ ಹೆಚ್ಚು ಜನರ ಮತ ಗಳಿಸುವುದೊ? 

5. ಕೊನೆಯ ಪ್ರಶ್ನೆ-ರಾಜ್ಯಪಾಲರ ವಿವೇಚನೆಯಂತೆ! ಎಂದರೆ ರಾಜ್ಯಪಾಲರ ಇಷ್ಟದಂತೆಯೊ ಇಲ್ಲ ಸಂವಿದಾನವನ್ನು ಅವರು ತಮಗೆ ಬೇಕಾದಂತೆ ವಿಶ್ಲೇಷಿಸುವುದೊ? 


ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ತನಕ ನಮ್ಮ ಪ್ರಜಾಸತ್ತೆಯಲ್ಲಿ ಇಂತಹ ಬಿಕ್ಕಟ್ಟುಗಳು ಎದುರಾಗುತ್ತಲೇ ಇರುತ್ತವೇ. ನಾವೂ ಚರ್ಚಿಸುತ್ತಲೇ ಇರುತ್ತೇವೆ. 

No comments:

Post a Comment