Apr 5, 2018

ಪ್ರಜಾಪ್ರಭುತ್ವದ ಜಯದ ಹಿಂದೆ ಪ್ರಜೆಯ ಸೋಲು!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಪ್ರಜಾಪ್ರಭುತ್ವ ಜಯಸಾದಿಸಿದೆ!

ಪ್ರತಿ ಚುನಾವಣೆಗಳ ಪಲಿತಾಂಶಗಳು ಹೊರಬಿದ್ದಾಗಲು ನಮ್ಮ ಮಾಧ್ಯಮಗಳ ಮೊದಲಪುಟದ ತಲೆಬರಹವೇ ಇದಾಗಿರುವುದನ್ನು ನಾವು ನೋಡುತ್ತಾ ಬಂದಿದ್ದೇವೆ. ಮತ್ತು ನಮ್ಮ ಖಾಸಗಿ ಮಾತುಗಳ ನಡುವೆಯೂ ಇಂಡಿಯಾದ ಪ್ರಜಾಪ್ರಭುತ್ವದ ನಿಜವಾದ ಗೆಲುವಿರುವುದೇ ಶಾಂತಿಯುತ ಚುನಾವಣಾ ಪ್ರಕ್ರಿಯೆಯಲ್ಲಿ ಎಂದು ಬಡಾಯಿ ಕೊಚ್ಚಿಕೊಳ್ಳುವುದು ಸರ್ವೇಸಾಮಾನ್ಯವಾಗಿದೆ,

ಹಾಗಿದ್ದರೆ ನಿಜಕ್ಕೂ ನಮ್ಮ ಪ್ರಜಾಪ್ರಭುತ್ವ ಗೆಲ್ಲುತ್ತಿದೆಯಾ? ಶಾಂತಿಯುತ ಮತದಾನದ ಮಾನದಂಡವೊಂದರಿಂದಲೇ ನಮ್ಮ ಪ್ರಜಾಪ್ರಭುತ್ವದ ಯಶಸ್ಸನ್ನುಅಲೆಯಬಹುದಾ? ಚುನಾವಣಾ ಪ್ರಕ್ರಿಯೆಯ ಉಳಿದ ಯಾವ ವಿಷಯಗಳಿಗು ಇಲ್ಲಿ ಮಹತ್ವವೇ ಇಲ್ಲವಾ? ಇದು ನನ್ನನ್ನು ಕಾಡುತ್ತಿರುವ ಪ್ರಶ್ನೆ. ಇದಕ್ಕೆ ಉತ್ತರ ಕಂಡುಕೊಳ್ಳಲು ಈ ಬಾರಿಯ ಚುನಾವಣಾ ಪ್ರಕ್ರಿಯೆಗಳು ಆರಂಭವಾದ ಹಂತದಿಂದಲೇ ನೋಡೋಣ:

ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗಗಳು ಚುನಾವಣೆಗಳನ್ನು ನಡೆಸುವ ಹೊಣೆ ಹೊತ್ತಿದ್ದು, ಕೇಂದ್ರ ಸರಕಾರದ ಅಧೀನದಲ್ಲಿದ್ದರೂ ಯಾವರಾಜಕೀಯ ಹಸ್ತಕ್ಷೇಪವೂಇಲ್ಲದೆ ಚುನಾವಣೆ ನಡೆಸುತ್ತ ಬಂದಿವೆಯೆಂದು ಹೇಳಲಾಗುತ್ತಿದೆ. ಚುನಾವಣೆ ನಡೆಸುವ ಸಂಸ್ಥೆಯ ನಿಷ್ಪಕ್ಷಪಾತ ವರ್ತನೆಯೇ ಚುನಾವಣಾ ಯಶಸ್ಸಿನ ಮೊದಲ ಹಂತವೆನ್ನಬಹುದು. ಮಾಮೂಲಿಯಾಗಿ ಒಂದು ರಾಜ್ಯದ ವಿದಾನಸಬೆಯ ಚುನಾವಣೆಗಳನ್ನು ಮುವತ್ತು ದಿನಗಳ ಮೊದಲು ಘೋಷಿಸಿ ಚುನಾವಣೆ ನಡೆಸುವುದು ವಾಡಿಕೆ. ಈ ನಿಯಮದ ಅನುಸಾರವಾಗಿ ಮೇ ಹನ್ನೆರಡನೆ ತಾರೀಖಿನಂದು ನಮ್ಮ ರಾಜ್ಯದ ಚುನಾವಣೆ ನಿಗದಿಯಾಗಿದ್ದು ಏಪ್ರಿಲ್ ಹನ್ನೆರಡಕ್ಕೆ ಅಧಿಸೂಚನೆ ಹೊರಬೀಳಬೇಕಿತ್ತು. ಎಲ್ಲರೂ ನಿರೀಕ್ಷಿಸಿದ್ದು ಸಹ ಇದನ್ನೇ. ಇತ್ತೀಚೆಗೆ ನಡೆದ ಹಿಮಾಚಲ ಪ್ರದೇಶದ ಚುನಾವಣೆಯನ್ನು ಇಪ್ಪತ್ತೊಂಭತ್ತು ದಿನಗಳ ಮೊದಲು ಘೋಷಿಸಲಾಗಿದ್ದರೆ ಗುಜರಾತ್ ಚುನಾವಣೆಯನ್ನು ಸರಿಯಾಗಿ ಮೂವತ್ತು ದಿನಗಳ ಮುಂಚೆ ಘೋಷಿಸಲಾಗಿತ್ತು. ಇವೆರಡು ರಾಜ್ಯಗಳಗೆ ಹೋಲಿಸಿದರೆ ನಮ್ಮ ರಾಜ್ಯದ ಚುನಾವಣೆಗಳನ್ನು ನಲವತ್ತೇಳು ದಿನಗಳ ಮೊದಲು ಘೋಷಿಸಿ ನೀತಿಸಂಹಿತೆ ಹೇರಲಾಗಿದೆ. ಯಾಕೀ ತಾರತಮ್ಯ? ಇದರಲ್ಲಿ ಕೇಂದ್ರ ಸರಕಾರದ ಹಸ್ತಕ್ಷೇಪ ಇಲ್ಲವೇ ಇಲ್ಲವೆಂದು ಹೇಳಲಾದೀತೆ? ಎಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರ ಚುನಾವಣೆಗು ಮೊದಲು ಮತ್ತಷ್ಟು ಜನಪ್ರಿಯ ಕಾರ್ಯಕ್ರಮಗಳನ್ನು ಘೋಷಿಸಿ ಜನರನ್ನು ಒಲಿಸಿಕೊಳ್ಳುತ್ತದೆಯೊ ಎನ್ನುವ ಕೇಂದ್ರದ ಭಯವೇ ಈ ಕ್ರಮಕ್ಕೆ ಕಾರಣವೆಂಬುದನ್ನು ಬಾಜಪ ಒಪ್ಪಿಕೊಳ್ಳುತ್ತದೆಯೇ? ಇದಕ್ಕೂ ಮುಂಚೆ ಹಿಮಾಚಲ ಪ್ರದೇಶದ ಜೊತೆಯೇ ನಡೆಯಬೇಕಿದ್ದ ಗುಜರಾತಿನ ಚುನಾವಣೆಯ ದಿನಾಂಕಗಳನ್ನು ಎರಡು ವಾರಗಳ ಕಾಲ ಆಯೋಗ ಮುಂದಕ್ಕೆ ಹಾಕಿದ್ದಕ್ಕೆ ಅದು ನೀಡಿದ ಕಾರಣ, ಗುಜರಾತಲ್ಲಿ ನಡೆಯುತ್ತಿರುವ ಅಭಿವೃದ್ದಿ ಕಾರ್ಯಗಳಿಗೆ ಅಡ್ಡಿಯಾಗಬಾರದೆಂಬುದಾಗಿತ್ತು. ಯಶಸ್ವಿ ಚುನಾವಣೆಯೊಂದನ್ನು ನಡೆಸಬೇಕಾದ ಆಯೋಗವೊಂದು ಹೀಗೆ ತಾರತಮ್ಯದ ನೀತಿ ಅನುಸರಿಸುತ್ತ ಹೋದರೆ ಚುನಾವಣೆ ಯಶಸ್ವಿಯಾಗಿವೆ ಎಂದು ಹೇಳಲಾಗುತ್ತದೆಯೇ?

ಆಯೋಗದ ಮಾತು ಬಿಡಿ, ಈಗ ಪಕ್ಷರಾಜಕಾರಣಕ್ಕೆ ಬರೋಣ. ಪಕ್ಷಗಳು ಹೇಗೆ ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತವೆ ಎನ್ನುವುದನ್ನು ನೋಡೋಣ: ಯಾವುದೇ ಪಕ್ಷದಲ್ಲಿಯೂ ಕಾರ್ಯಕರ್ತರ ಮಟ್ಟದಲ್ಲಿ ಚರ್ಚಿಸಿ ಅಭ್ಯರ್ಥಿಗಳನ್ನು ಆಯ್ಕೆಮಾಡುವ ಪದ್ದತಿ ಇಲ್ಲವೇ ಇಲ್ಲ. ಕೋರ್ ಕಮಿಟಿ-ಕಾರ್ಯಕಾರಿ ಸಮಿತಿ ಎಂದು ಹೆಸರು ಹೊತ್ತ ಹಿರಿಯ ನಾಯಕರುಗಳ ಗುಂಪು ಒಂದೆರಡು ಹೆಸರುಗಳನ್ನು ಚರ್ಚಿಸಿದಂತೆ ಮಾಡಿ ತಮಗೆ ಬೇಕಾದವರೊಬ್ಬರನ್ನು ಅಭ್ಯರ್ಥಿಯನ್ನಾಗಿ ಮಾಡುತ್ತವೆ. ಅಭ್ಯರ್ಥಿ ಯಾರಾಗಬೇಕೆಂಬ ಪಕ್ಷದ ನಿರ್ದಾರಗಳಲ್ಲಿ ಜನರ ಅಭಿಪ್ರಾಯಕ್ಕೆ ಬೆಲೆಯೇ ಇರುವುದಿಲ್ಲ.ಇದನ್ನು ನಾವು ಒಪ್ಪಿಕೊಂಡಿದ್ದೇವೆ.

ಇನ್ನು ಒಂದು ಪಕ್ಷದ ಅಭ್ಯರ್ಥಿಯಾಗ ಬಯಸಿದ್ದವನು ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಚುನಾವಣೆಗು ಮುಂಚೆ ಇನ್ನೊಂದು ಪಕ್ಷಕ್ಕೆ ಪಕ್ಷಾಂತರ ಮಾಡುತ್ತಾನೆ. ಆ ಪಕ್ಷ ಚುನಾವಣೆಯಲ್ಲಿ ಅವನಿಗೆ ಟಿಕೇಟು ನೀಡುವ ವಾಗ್ದಾನ ಮಾಡಿದ ಕಾರಣಕ್ಕೇನೆ ಅವನು ಪಕ್ಷಾಂತರಗೊಂಡಿರುತ್ತಾನೆ. ಆದರೆ ಅದುವರೆಗು ಆ ಪಕ್ಷದ ಅಭ್ಯರ್ಥಿಯಾಗಲು ಕಾದಿದ್ದ ಅಭ್ಯರ್ಥಿ ಇನ್ನು ತನಗೆ ಟಿಕೇಟು ಸಿಗುವುದಿಲ್ಲವೆಂಬುದು ಖಾತ್ರಿಯಾದೊಡನೆ ತನ್ನ ಪಕ್ಷಕ್ಕೆ ಬಂದು ತನಗೆಟಿಕೇಟಿಲ್ಲದಂತೆ ಮಾಡಿದವನ ಪಕ್ಷ ಸೇರಿಕೊಂಡು ಅಲ್ಲಿ ಟಿಕೇಟು ಪಡೆಯುತ್ತಾನೆ. ಅಲ್ಲಿಗೆಇಬ್ಬರು ಅಭ್ಯರ್ಥಿಗಳು ಪಕ್ಷ ಬದಲಾಯಿಸಿದಂತಾಗುತ್ತದೆ. ಇನ್ನು ಮೂರನೆಯ ಪಕ್ಷವೊಂದುಈ ಪಕ್ಷಗಳಲ್ಲಿ ಟಿಕೇಟು ಸಿಗದೆ ಬಂಡಾಯವೇಳುವ ಒಬ್ಬನನ್ನು ಹುಡುಕಿ ಟಿಕೇಟು ಕೊಡುತ್ತದೆ ಅಲ್ಲಿಗೆ ಮತದಾರರ ಮಾತಿರಲಿ ಆ ಪಕ್ಷದ ಕಾರ್ಯಕರ್ತರುಗಳು ಏನು ಮಾಡಬೇಕು. ನಿನ್ನೆಯವರೆಗು ವಿರೋಧಿಸಿದ್ದವನನ್ನೇ ಬೆಂಬಲಿಸಿ ಮತ ಕೇಳಬೇಕು. ಪರಿಸ್ಥಿತಿ ಹೀಗಿರುವಾಗ ಮತದಾರನಿಗೆ ಇರುವ ಆಯ್ಕೆ ಏನು? ಅದೇ ಮೂವರು ಅಭ್ಯಥಿಗಳಲ್ಲಿ ಒಬ್ಬರಿಗೆ ಮತಹಾಕಬೇಕು ಆದರೆ ಚಿಹ್ನೆ ಬದಲಾಯಿಸಬೇಕು, ಅಂದರೆ ಸಿದ್ದಾಂತಗಳನ್ನೇ ಬದಲಾಯಿಸಬೇಕಾಗುತ್ತದೆ. ಇನ್ನು ನೋಟಾ ಚಲಾವಣೆ ಮಾಡುವುದರಿಂದ ಏನೇನು ಬದಲಾವಣೆ ಆಗುವುದಿಲ್ಲ. ನಮ್ಮ ಆಕ್ರೋಶವನ್ನು ಆ ಮೂಲಕ ಹೊರಹಾಕಬಹುದೆ ಹೊರತು ಬೇರೇನು ಪ್ರಯೋಜನವಿಲ್ಲ. ನಿಮಗೊಂದು ಸಣ್ಣ ಉದಾಹರಣೆ ಕೊಡುತ್ತೇನೆ. ನಾಗಮಂಗಲದ ಚಲುವರಾಯ ಸ್ವಾಮಿ ಜನತಾದಳ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಅವರು ಹೀಗೆ ಮಾಡುತ್ತಾರೆಂದು ಗೊತ್ತಾದ ಕೂಡಲೆ ಕಾಂಗ್ರೆಸ್ಸಿನ ಟಿಕೇಟು ಆಕಾಂಕ್ಷಿಗಳಾಗಿದ್ದ ಶಿವರಾಮೇಗೌಡರು ಮತ್ತು ಸುರೇಶ್ ಗೌಡರು ಕಾಂಗ್ರೆಸ್ ತೊರೆದು ಜನತಾದಳ ಸೇರಿ ಟಿಕೇಟು ಖಾತ್ರಿ ಪಡಿಸಿಕೊಂಡರು. ಇದೀಗ ನಾಗಮಂಗಲದ ಜನತೆಗೆ ಅದೇ ಮೂವರು ಅಭ್ಯರ್ಥಿಗಳು ಹೊಸ ಚಿಹ್ನೆ ಹೊತ್ತು ಮುಂದೆ ಬರುತ್ತಾರೆ. ಮತದಾರ ಪಕ್ಷದ ಚಿಹ್ನೆ ನೋಡಿ ಮತಹಾಕಬೇಕೊ ಇಲ್ಲ ವ್ಯಕ್ತಿ ನೋಡಿ ಮತಹಾಕಬೇಕೊ? 

ಅಫ್ಜಲ್ ಪುರದ ಮಾಲಿಕಯ್ಯ ಗುತ್ತದಾರ್ ಬಿಜೆಪಿಗೆ ಬಂದರೆ, ಬಿಜೆಪಿಯ ಎಂ.ವೈ ಪಾಟೀಲ್ ಕಾಂಗ್ರೆಸ್ಸಿಗೆ ಬರುತ್ತಾರೆ. ಜಮೀರ್ ಅಹಮದ್ ಖಾನ್ ಕಾಂಗ್ರೆಸ್ಸಿಗೆ ಬಂದರೆ ಕಾಂಗ್ರೆಸ್ಸಿನ ಅಲ್ತಾಫ್ ಜನತಾದಳ ಸೇರುತ್ತಾರೆ. ಇಂತಹ ಗೊಂದಲ ಕರ್ನಾಟಕದ ಸುಮಾರು ಇಪ್ಪತ್ತರಿಂದ ಮುವತ್ತು ಕ್ಷೇತ್ರಗಳಲ್ಲಿ ಇದ್ದು ಜನತೆಗೆ ಆಯ್ಕೆಯ ಸ್ವಾತಂತ್ರ ನಿಜಕ್ಕೂ ಇದೆಯೇ ಎಂದು ನಾವು ಕೇಳಿಕೊಳ್ಳಬೇಕಿದೆ.

ಇದರ ಜೊತೆಗೆ ನಮ್ಮಲ್ಲಿ ಆಗುವ ಒಟ್ಟು ಮತದಾನದ ಶೇಕಡಾ ಪ್ರಮಾಣವೇ ಹೆಚ್ಚೆಂದರೆ 65ರಿಂದ 70 ರಷ್ಟು . ಇದರಲ್ಲಿ ಶೇಕಡಾ ಮುವತ್ತರಷ್ಟನ್ನು ಪಡೆದವನು ವಿಜಯಿಯಾಗುತ್ತಾನೆ. ಅಲ್ಲಿಗೆ ಒಟ್ಟು ಮತಾದರರ ಶೇಕಡಾ 25ರಷ್ಟು ಜನರ ಸಮ್ಮತಿ ಒಪ್ಪಿಗೆಯನ್ನೂ ಪಡೆಯದವನು ಗೆದ್ದು ಜನಪ್ರತಿನಿಧಿ ಎನಿಸಿಕೊಳ್ಳುತ್ತಾನೆ ಪ್ರಜಾಪ್ರಭುತ್ವದ ಮೂಲ ಆಶಯವಾದ ಬಹುಮತದ ತತ್ವಕ್ಕೇ ಇದು ವಿರುದ್ದವಾದುದು ಎಂದು ನಮಗನ್ನಿಸುವುದೇ ಇಲ್ಲವೆಂಬುದು ದೊಡ್ಡ ದುರಂತ. ನೂರು ಜನರಲ್ಲಿ 25 ಜನ ಅವನನ್ನು ಒಪ್ಪಿದ್ದರೆ ಇನ್ನು 75 ಜನ ಅವನ ಬಗ್ಗೆ ಏನನ್ನೂ ಹೇಳಿರುವುದಿಲ್ಲ. ಆದರೂ ಅವನು ನೂರೂ ಜನಕ್ಕೂ ಪ್ರತಿನಿಧಿಯಾಗಿ ಬಿಡುತ್ತಾನೆ

ಇನ್ನು ಚುನಾವಣೆಗೆ ಕೋಟಿಕೋಟಿ ರೂಪಾಯಿಗಳನ್ನು ಅಭ್ಯರ್ಥಿಗಳು ಖರ್ಚುಮಾಡುತ್ತಿರುವುದು ಸಾಮಾನ್ಯ ಅನಕ್ಷರಸ್ಥನಿಗೆ ಗೊತ್ತಾದರೂ ಆಯೋಗಕ್ಕೆ ಗೊತ್ತೇ ಆಗುವುದಲ್ಲ. ಅದಕ್ಕೆ ಅಧಿಕೃತ ದೂರುಗಳು ಮತ್ತು ಸಾಕ್ಷಿಗಳು ಬೇಕಂತೆ. ಚುನಾವಣೆ ಮುಗಿದ ಮೇಲೆ ಅಭ್ಯರ್ಥಿ ಕೊಡುವ ಚುನಾವಣಾ ಖರ್ಚಿನ ಲೆಕ್ಕವನ್ನ ಅದು ಮರು ಮಾತಿರದೆ ಒಪ್ಪಿಕೊಳ್ಳುತ್ತದೆ,. ಹಾಗಿದ್ದರೆ ಈ ಚುನಾವಣೆ ನ್ಯಾಯಸಮ್ಮತವಾಗಿ ನಡೆದಿದೆಯೆ ಎನ್ನುವ ಪ್ರಶ್ನೆಗೆ ಸಾಮಾನ್ಯ ಉತ್ತರ ಇಲ್ಲವೆಂದಾದರು ಶಾಂತಿಯುತವಾಗಿ ಚುನಾವಣೆ ನಡೆದ ಒಂದೇ ಕಾರಣದಿಂದಾಗಿ ನಮ್ಮ ಪ್ರಜಾಪ್ರಭುತ್ವ ಯಶಸ್ವಿಯಾಗಿದೆ ಎಂದು ಹೇಳುವುದು ನಮಗೆ ಅಭ್ಯಾಸವಾಗಿಬಿಟ್ಟಿದೆ

ನಿಜಕ್ಕೂ ಪ್ರಜಾಪ್ರಭುತ್ವ ಯಶಸ್ವಿಯಾಗಿದೆ ಎಂದು ಒಂದೊಮ್ಮೆ ಒಪ್ಪಿಕೊಂಡರೂ ಪ್ರಜೆ ಸೋತಿದ್ದಾನೆ ಎಂದು ಹೇಳುವುದರಲ್ಲಿ ತಪ್ಪೇನಿಲ್ಲ,,,,,,,,,,???

2 comments:

  1. ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ನಿಜವಾದ ಅರ್ಥದಲ್ಲಿ ಯಶಸ್ವಿಯಾಗಿಲ್ಲ. ಶಾಸಕರನ್ನು ಆರಿಸುವುದು ಜನರಿಗೆ ಅನುಕೂಲಕರವಾದ ಕಾನೂನುಗಳನ್ನು ಮಾಡಿ ಅವುಗಳ ಅನುಷ್ಠಾನದ ಮೇಲುಸ್ತುವಾರಿ ನೋಡಿಕೊಳ್ಳಲು. ಆದರೆ ಇಂದು ಆಯ್ಕೆಯಾದ ಶಾಸಕರು ಆಯ್ಕೆಯಾದ ನಂತರ ಜನರ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ. ಅವರ ಬಳಿ ಹೆಚ್ಚು ಮಾತಾಡುವಂತೆಯೂ ಇಲ್ಲ. ಜನರ ಸಮಸ್ಯೆಗಳ ಬಗ್ಗೆ ಅವರದು ಹಾರಿಕೆಯ ಉತ್ತರ. ಜನರ ಸಮಸ್ಯೆಗಳ ಬಗ್ಗೆ ಶಾಸನ ಸಭೆಯಲ್ಲಿ ಮಾತಾಡಿ ಸೂಕ್ತ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ನಮ್ಮ ಶಾಸಕರು ಹೇಳುವುದಿಲ್ಲ. ಜನರ ಸಮಸ್ಯೆಗಳ ಬಗ್ಗೆ ಅವರು ಕುರುಡಾಗಿರುತ್ತಾರೆ. ಜನರು ಅವರ ಬಳಿ ಹೆಚ್ಚು ಚರ್ಚಿಸಲು ಹೋದರೆ ಅವರು ಸಾಕಿಕೊಂಡಿರುವ ಗೂಂಡಾಗಳು ಮೇಲೆ ಬೀಳಲು ಬರುತ್ತಾರೆ, ಬೆದರಿಸುತ್ತಾರೆ. ಇಂಥ ವ್ಯವಸ್ಥೆಯನ್ನು ಪ್ರಜಾಪ್ರಭುತ್ವ ಎಂದು ಕರೆಯಲು ಸಾಧ್ಯವೇ? ಚುನಾವಣೆ ಯಶಸ್ವಿಯಾಗಿ ನಡೆಸಿದ ಮಾತ್ರಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಯಾಗುವುದಿಲ್ಲ. ಚುನಾವಣೆ ಮುಗಿದ ನಂತರ ಮುಂದಿನ ಚುನಾವಣೆ ಬರುವವರೆಗೆ ಪ್ರಜೆಗಳ ಸಮಸ್ಯೆಗಳನ್ನು ಕೇಳುವವರು ಇಲ್ಲ. ಜನರನ್ನು ಅಧಿಕಾರಶಾಹಿ ರೂಪಿಸಿದ ಕೆಂಪು ಪಟ್ಟಿಯ ಅನವಶ್ಯಕ, ಅವೈಜ್ಞಾನಿಕ ಕಾನೂನುಗಳಿಂದ ರಕ್ಷಿಸುವ ಕೆಲಸವನ್ನು ಜನಪ್ರತಿನಿಧಿಗಳು ಮಾಡುವುದಿಲ್ಲ. ಆಡಳಿತದಲ್ಲಿ ಸ್ವಾತಂತ್ರ್ಯ ಬಂದು ೭೦ ವರ್ಷಗಳಾದರೂ ಮಹತ್ವದ ಜನಪರವಾದ ಬದಲಾವಣೆ ಆಗಿಲ್ಲ. ಪ್ರಜಾಪ್ರಭುತ್ವ ಯಶಸ್ವಿಯಾಗಿದ್ದರೆ ಇಂಥ ಬದಲಾವಣೆ ಆಗಬೇಕಾಗಿತ್ತು. ಇಂದು ಬ್ರಿಟಿಷರ ಜಾಗದಲ್ಲಿ ನಮ್ಮದೇ ಅಧಿಕಾರಶಾಹಿ ಬಂದು ಕುಳಿತುಕೊಂಡಿದೆಯೇ ಹೊರತು ಜನರನ್ನು ಪರಕೀಯರಂತೆಯೇ ಸರ್ಕಾರೀ ಕಚೇರಿಗಳಲ್ಲಿ ನೋಡುತ್ತಾರೆ. ಅನವಶ್ಯಕ ಕಾನೂನುಗಳಿಂದ ಜನರನ್ನು ಮುಕ್ತಿಗೊಳಿಸದೆ ಹೋದರೆ ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಯೆಂದು ಹೇಳಲು ಸಾಧ್ಯವಿಲ್ಲ. ಸ್ವಾತಂತ್ರ್ಯಪೂರ್ವದಲ್ಲಿ ಇದ್ದ ಊಳಿಗಮಾನ್ಯ ವ್ಯವಸ್ಥೆ ಇಂದು ಸರ್ಕಾರೀ ಅಧಿಕಾರಿಗಳ, ಶಾಸಕರ ರೂಪದಲ್ಲಿ ಮುಂದುವರಿದಿದೆ. ಇದನ್ನೆಲ್ಲಾ ಪ್ರಶ್ನಿಸುವ ಜನನಾಯಕರು ಇದುವರೆಗೂ ಬಂದಿಲ್ಲ. ಇದನ್ನೆಲ್ಲಾ ಪ್ರಶ್ನಿಸಲು ಬಲಿಷ್ಠವಾದ ಸಂಘಟನೆ ಬೇಕು. ಅಂಥ ಸಂಘಟನೆ ಇಂದಿನವರೆಗೂ ಭಾರತದಲ್ಲಿ ರೂಪುಗೊಂಡಿಲ್ಲ.

    ReplyDelete
    Replies
    1. ನಿಜ ಬಹುಶ: ಬಲಿಷ್ಠವಾದ ಮತದಾರರ ವೇದಿಕೆಯೊಂದರಿಂದ ಈ ಕೆಲಸ ಸಾದ್ಯವಾಗಬಹುದೇನೊ

      Delete