Apr 19, 2018

ಪ್ರದಾನಿಗಳೆ ಘೋಷಣೆಯನ್ನು ಬದಲಾಯಿಸಿ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಮಹಿಳೆಯರ ಮೇಲಿನ ಅತ್ಯಾಚಾರಗಳು ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಹೆಣ್ಣಿನ ಬಗ್ಗೆ ನಮಗಿರುವ ಪೂರ್ವಾಗ್ರಹ ಮನಸ್ಥಿತಿಯನ್ನು ಒಮ್ಮೆ ವಿಮರ್ಶೆಗೆ ಒಳಪಡಿಸಿಕೊಳ್ಳಬೇಕಿದೆ. ಆಳಿಸಿಕೊಳ್ಳುವವರಿರಲಿ, ಆಳುವವರು ಸಹ ಹೆಣ್ಣನ್ನು ಒಬ್ಬ ಸ್ವತಂತ್ರಜೀವಿಯಾಗಿ ತನ್ನನ್ನು ತಾನು ರಕ್ಷಿಸಿಕೊಳ್ಳಲಾರದ ಒಂದು ಜೀವಿಯಂತೆ ಪರಿಗಣಿಸುತ್ತಿರುವುದನ್ನು ನಾವು ನೋಡಬಹುದು.ಇದಕ್ಕೆ ತತ್‌ಕ್ಷಣದ ಉದಾಹರಣೆಯೆಂದರೆ ೨೦೧೪ರಲ್ಲಿ ಅಧಿಕಾರಕ್ಕೆ ಬಂದ ಪ್ರದಾನಮಂತ್ರಿಯವರಾದ ನರೇಂದ್ರಮೋದಿಯವರು ಹೆಣ್ಣುಮಕ್ಕಳ ಬಗ್ಗೆ ಒಂದು ಘೋಷಣೆಯನ್ನು ಹರಿಯಬಿಟ್ಟರು. ಮಾಧ್ಯಮಗಳು ಸಹ ಆ ಘೋಷಣೆಯ ಹಿಂದಿರುವ ಮನಸ್ಥಿತಿಯನ್ನು ವಿಶ್ಲೇಷಣೆ ಮಾಡಲು ಹೋಗದೆ ಪ್ರದಾನಿಯವರನ್ನು ಕೊಂಡಾಡಿದ್ದೇ ಕೊಂಡಾಡಿದ್ದು!  
“ಬೇಟಿ ಬಚಾವ್-ಬೇಟಿ ಪಡಾವ್” 
“ಮಗಳನ್ನು ರಕ್ಷಿಸಿ- ಮಗಳನ್ನು ಓದಿಸಿ” 
ಎನ್ನುವುದೇ ಆ ಜನಪ್ರಿಯ ಘೋಷಣೆಯಾಗಿತ್ತು. 
ಆ ಘೋಷಣೆಯ ಮೊದಲಭಾಗವನ್ನೇ ನೋಡಿ: ಮಗಳನ್ನು ರಕ್ಷಿಸಿ! ಇಲ್ಲಿ ನನ್ನ ಪ್ರಶ್ನೆ ಇರುವುದು ಮಗಳನ್ನು ಯಾರಿಂದ ರಕ್ಷಿಸಬೇಕು? ಮತ್ತು ಹೇಗೆ ರಕ್ಷಿಸಬೆಕು? ಮಗಳಾಗಿ ಹುಟ್ಟುವ ಒಂದು ಹೆಣ್ಣು ತನ್ನನ್ನು ರಕ್ಷಿಸಿಕೊಳ್ಳಲಾರದಷ್ಟು ದುರ್ಬಲಳೇ? ಮಗಳನ್ನು ರಕ್ಷಿಸಿ ಎನ್ನುವುದರ ಹಿಂದೆ ನಾವು ಅವಳನ್ನು ರಕ್ಷಿಸುತ್ತಿಲ್ಲ ಎನ್ನುವ ಅರ್ಥವೇ ಹೊಳೆಯುತ್ತದೆ. ಜೊತೆಗೆ ಹೆಣ್ಣನ್ನು ರಕ್ಷಿಸುವುದು ಗಂಡಸಿನ ಕರ್ತವ್ಯವೆಂದು ಮತ್ತದನ್ನು ಅವನು ಅವಳಿಗೆ ಮಾಡುವ ಉಪಕಾರವೆಂಬಂತೆಯೂ ಬಾಸವಾಗುತ್ತದೆ. ಇದರ ಹಿಂದಿರುವುದು ಹೆಣ್ಣನ್ನು ರಕ್ಷಿಸುವ ತನ್ನ ಹಕ್ಕನ್ನು ಪುರುಷಪ್ರದಾನ ಸಮಾಜವೊಂದು ತನಗೆ ತಾನೇ ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವಂತೆ ತೋರಿಸುತ್ತದೆ. 

ಇವತ್ತಿಗೂ ಹೆಣ್ಣಮಗು ಹುಟ್ಟಿದರೆ ದು:ಖಭರಿತವಾಗುವ ಜನ ಈ ದೇಶದಲ್ಲಿದ್ದಾರೆ ಎನ್ನುವುದೇ ಶೋಚನೀಯ. ಹಾಗೆ ಹೆಣ್ಣನ್ನು ಹೀಗಳೆಯುವವರ ಯೋಚನಾಲಹರಿಯ ಹಿಂದಿದ್ದುದು, ಆಕೆ ಪ್ರಾಪ್ತವಯಸ್ಕಳಾದ ತಕ್ಷಣ ಅವಳಿಗೊಂದು ಮದುವೆ ಮಾಡಬೇಕು ಮತ್ತು ಅದಕ್ಕಾಗಿ ಅಪಾರ ಹಣ (ಅದು ವರದಕ್ಷಿಣೆಯಾಗಿರಬಹುದು, ಉಡುಗೊರೆಗಳಾಗಿರಬಹುದು ಇಲ್ಲ ಮದುವೆಯ ವೆಚ್ಚವಾಗಿರಬಹುದು,) ವ್ಯಯಿಸಬೇಕೆಂಬುದಾಗಿತ್ತು. ಹೀಗಾಗಿಯೇ ಭ್ರೂಣಪತ್ತೆ ಹಂಚುವ ಕೇಂದ್ರಗಳಿಗೆ ಹೆಚ್ಚು ಬೇಡಿಕೆಯಿದ್ದು ದಿನಕ್ಕೆ ಸಾವಿರಾರು ಹೆಣ್ಣು ಭ್ರೂಣಹತ್ಯೆಗಳನ್ನು ಮಾಡುತ್ತ ಬರಲಾಯಿತು. ಒಂದು ಸನ್ನಿವೇಶದಲ್ಲಿ ಇದರ ಅಪಾಯವನ್ನು ಮನಗಂಡ ಸರಕಾರ ಭ್ರೂಣ ಪತ್ತೆ ಕೇಂದ್ರಗಳ ಮೇಲೆ ನಿರ್ಭಂದ ವಿದಿಸಿದರೂ ಸಣ್ಣ ಊರುಗಳಲ್ಲಿ ಈ ಪತ್ತೆ ಮತ್ತು ಹತ್ಯೆಯ ಕ್ರಿಯೆಗಳು ಅಡಚಣೆಯಿರದೆ ನಡೆಯುತ್ತಲೇ ಇವೆ ಎನ್ನುವುದೇ ವಿಷಾದದ ಸಂಗತಿ. 

ಇನ್ನು ಘೋಷಣೆಯ ಎರಡನೇ ಭಾಗದ ಮಗಳನ್ನು ಓದಿಸಿ ಎನ್ನುವುದರ ಹಿಂದೆ ನಾವಿದುವರೆಗು ಹೆಣ್ಣಿನ ಶಿಕ್ಷಣಕ್ಕೆ ಮುಕ್ತವಾದ ವಾತಾವರಣ ನಿರ್ಮಿಸಿರಲಿಲ್ಲ ಮತ್ತು ಅವಳನ್ನು ಶಾಲೆಗೆ ಕಳಿಸುವಲ್ಲಿ ತಾರತಮ್ಯ ಮಾಡುತ್ತಿದ್ದೆವು ಎಂಬುದನ್ನು ಒಪ್ಪಿಕೊಂಡಂತಾಗುತ್ತದೆ. ಸ್ವಾತಂತ್ರ ಬಂದ ಏಳು ದಶಕಗಳ ನಂತರವೂ ಈ ದೇಶದ ಶಾಲೆಗಳಲ್ಲಿ ಕಲಿಯುವ ಹೆಣ್ಣುಮಕ್ಕಳ ಸಂಖ್ಯೆ ಗಂಡುಮಕ್ಕಳ ಸಂಖ್ಯೆಗಿಂತ ಕಡಿಮೆ ಇದೆ ಎನ್ನುವುದೇ ದುರಂತ. ಇವತ್ತು ಮಗಳನ್ನು ಓದಿಸಿ ಎಂದು ಕರೆ ನೀಡುವ ಸರಕಾರಗಳು ಹಾಗೆ ಓದುವ ಮಗಳಿಗಾಗಿ ಏನೆಲ್ಲ ವಿಶೇಷ ಸೌಕರ್ಯ ಕಲ್ಪಿಸಿವೆ ಎಂಬುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಇವತ್ತಿಗೂ ಸಾವಿರಾರು ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯಗಳಿಲ್ಲ. ಇನ್ನು ಪ್ರೌಢಾವಸ್ಥೆಯ ಹೆಣ್ಣುಮಕ್ಕಳ ಋತುಸ್ರಾವದ ಸಮಯದಲ್ಲಿ ಆಕೆಗೆ ಬೇಕಾಗುವ ಯಾವ ಸೌಲಭ್ಯಗಳೂ ನಮ್ಮ ವಿಶ್ವವಿದ್ಯಾನಿಲಯದ ಕಾಲೇಜುಗಳಲ್ಲಿರಲಿ, ಹೆಣ್ಣುಮಕ್ಕಳು ಕೆಲಸ ಮಾಡುವ ಸ್ಥಳಗಳಲ್ಲಿಯೂ ಇವತ್ತಿಗೂ ಇಲ್ಲ. 

ಮಗಳನ್ನು ರಕ್ಷಿಸಿ ಎಂದು ಕರೆಕೊಡುವ ಪ್ರದಾನಿಗಳು ಅವಳ ಮೇಲೆರಗುವ ಗಂಡುಪ್ರಾಣಿಗಳನ್ನು ಕಠಿಣವಾಗಿ ಶಿಕ್ಷಿಸಿ ಎಂದು ಕರೆ ನೀಡಿದ್ದರೆ ಅವರ ಕಾಳಜಿಗೆ ಒಂದು ಅರ್ಥ ಬರುತ್ತಿತ್ತು. ಅವರು ಕರೆ ಕೊಡುವುದಿರಲಿ ಅತ್ಯಾಚಾರ ಮಾಡಿದ ಆರೋಪಿಗಳನ್ನು ರಕ್ಷಿಸಲು ಅವರ ಹಿಂಬಾಲಕರೇ ಮುಂದಾದಾಗಲೂ ಅದನ್ನು ಖಂಡಿಸುವ ಮಾತಾಡುವುದಿಲ್ಲ. 

ಇವತ್ತು ನಾವು ಮತ್ತು ನಮ್ಮ ಸರಕಾರಗಳು ಮಾಡಬೇಕಿರುವುದು: ಮಗಳನ್ನು ರಕ್ಷಿಸಿ ಎಂದು ಕರೆಕೊಟ್ಟು ಕೈಕಟ್ಟಿ ಕೂರುವುದಲ್ಲ. ಬದಲಿಗೆ ಮಗಳ ಮೇಲೆ ಕೈ ಇಟ್ಟ ಕ್ರೂರಿಗಳನ್ನು ಶಿಕ್ಷಿಸಿ ಎಂದು ಕರೆನೀಡಬೇಕಾಗುತ್ತದೆ ಮತ್ತದರಂತೆ ನಡೆದುಕೊಳ್ಳಬೇಕಾಗುತ್ತದೆ. 

ಇಲ್ಲದಿದ್ದರೆ ಹೇಗೆ ವರದಕ್ಷಿಣೆ ಕೊಟ್ಟು ಮದುವೆ ಮಾಡಲಾಗದ ಕಾರಣದಿಂದ ಮಗಳ ಹುಟ್ಟನ್ನು ನಿರಾಕರಿಸಿ ವಿರೋಧಿಸುತ್ತಿದ್ದೆವೊ ಹಾಗೆಯೇ ನಾಳೆ ಅವಳು ಅತ್ಯಾಚಾರಕ್ಕೊಳಗಾಗುವ ಭಯದಿಂದ ನಮಗೆ ಹೆಣ್ಣು ಮಗು ಹುಟ್ಟುವುದು ಬೇಡವೆಂದು ತಂದೆ ತಾಯಿಯರು ಹೆದರುವ ಕಾಲ ಬಂದು ಬಿಡಬಹುದು. 
ಮಾನ್ಯ ಪ್ರದಾನಿಗಳೇ ಈಗಲಾದರು ನಿಮ್ಮ ಘೋಷಣೆ ಮತ್ತು ಆದ್ಯತೆಗಳನ್ನು ಬದಲಾಯಿಸಿ: 
“ಕಾಮುಕರನ್ನು ಶಿಕ್ಷಿಸಿ, ಹೆಣ್ಣಿನ ಆತ್ಮಗೌರವ ಉಳಿಸಿ”. 

No comments:

Post a Comment