Apr 20, 2018

ಅತೃಪ್ತ ಆತ್ಮಗಳ ಸ್ಥಳಾಂತರ ಪ್ರಕ್ರಿಯೆಗಳು!!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
(ಇದೀಗ ಕರ್ನಾಟಕದ ಉದ್ದಗಲಕ್ಕೂ ಅತೃಪ್ತ ಆತ್ಮಗಳು ಅಡ್ಡಾಡುತ್ತಿದ್ದು ಸ್ವಪಕ್ಷೀಯರಿಂದ ಅತೃಪ್ತಿ ಶಮನವಾಗದಿದ್ದ ಆತ್ಮಗಳು ಪರಪಕ್ಷಗಳ ಸೆರಗಿನ ಚುಂಗು ಹಿಡಿದು ತಮ್ಮ ಅತೃಪ್ತಿಯನ್ನು ತಣಿಸಿಕೊಳ್ಳಲು ಪ್ರಯತ್ನಿಸುತ್ತಿವೆ, ಹಾಗೆಯೇ ಇಂತಹ ಆತ್ಮಗಳನ್ನು ಹಿಡಿದು ತಂದು ಅವಕ್ಕೊಂದು ಭದ್ರನೆಲೆ ಕಲ್ಪಿಸುವಲ್ಲಿ ನಮ್ಮ ರಾಜಕೀಯ ಪಕ್ಷಗಳು ಅಪಾರವಾಗಿ ಶ್ರಮಿಸುತ್ತಿವೆ. ಆ ಬಗ್ಗೆ ಒಂದು ಟಿಪ್ಪಣಿ)

ಅವೇ ಕ್ಷೇತ್ರಗಳು, ಅವೇ ಹೆಸರುಗಳು, ಅವೇ ಮುಖಗಳು, ಆದರೆ-ಪಕ್ಷದ ಬಾವುಟ ಮತ್ತು ಚಿಹ್ನೆ ಬೇರೆ. ಮೇ ಹನ್ನೆರಡನೆ ತಾರೀಖಿನಂದು ನಡೆಯಲಿರುವ ಕರ್ನಾಟಕ ವಿದಾನಸಭೆಯ ಚುನಾವಣೆಗಳಿಗೆ ಸ್ಪರ್ದಿಸಿರುವ ಸಾಕಷ್ಟು ಕ್ಷೇತ್ರಗಳಲ್ಲಿ ಈ ಮಾತು ನಿಜವಾಗುತ್ತಿದೆ. 2013ರ ಚುನಾವಣೆಯನ್ನು, ಆಗ ಯಾವ್ಯಾವ ಪಕ್ಷದಿಂದ ಯಾರ್ಯಾರು ಸ್ಪರ್ದಿಸಿದ್ದರೆಂಬುದನ್ನು ನಿಖರವಾಗಿ ನೆನಪಿಟ್ಟುಕೊಂಡವರಿಗೆ ನನ್ನ ಮಾತುಗಳು ಸ್ಪಷ್ಟವಾಗಿ ಅರ್ಥವಾಗುತ್ತವೆ.
ಹೇಗೆ ಒಂದು ಚುನಾವಣೆಯಿಂದ ಇನ್ನೊಂದು ಚುನಾವಣೆಯ ಹೊತ್ತಿಗೆ ರಾಜಕೀಯ ನಾಯಕರುಗಳ ಆದ್ಯತೆಗಳು-ಸರಿ ಹೇಳಬೇಕು ಎಂದರೆ ಮುಖವಾಡಗಳು- ಹೇಗೆ ಬದಲಾಗುತ್ತವೆ ಎನ್ನುವುದನ್ನು ನೋಡಿದರೆ ನಮಗೇ ನಾಚಿಕೆಯೆನಿಸುತ್ತದೆ. ಚುನಾವಣೆಯ ಸಮಯದಲ್ಲಿ ಪಕ್ಷ ಬದಲಾಯಿಸುವುದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದ ರೂಢಿಯೇನೊ ನಿಜ. ಪಕ್ಷಾಂತರ ಎನ್ನುವುದು ಇಂಡಿಯಾದ ಸಂಸದೀಯ ಪ್ರಜಾಪ್ರಭುತ್ವದ ಒಂದು ಅವಿಭಾಜ್ಯ ಅಂಗವೇ ಆಗಿ ಹೋಗಿದೆ. ಆದರೆ ಹಿಂದೆಲ್ಲ ತಮ್ಮ ಪಕ್ಷಾಂತರಗಳಿಗೆ ಒಂದು ಸೈದ್ದಾಂತಿಕ ಕಾರಣವನ್ನಾದರೂ ನೀಡುವಷ್ಟರ ಮಟ್ಟಿಗೆ ನಮ್ಮ ರಾಜಕಾರಣಿಗಳಿಗೆ ಸೌಜನ್ಯ ಮತ್ತು ಲಜ್ಜೆ ಇರುತ್ತಿತ್ತು. ಆದರೆ ಇದೀಗ ಅಂತಹ ಸಾಂಪ್ರದಾಯಿಕ ಮಾತುಗಳು ಹಿನ್ನೆಲೆಗೆ ಸರಿದು, ಈಗೇನು? ನಾನು ಪಕ್ಷಾಂತರ ಮಾಡುತ್ತಿದ್ದೇನೆ, ಅದಕ್ಯಾಕೆ ಸಮರ್ಥನೆ ನೀಡಬೇಕೆಂದು ಕೇಳುವ ಮಟ್ಟಿಗಿನ ಭಂಡತನವನ್ನು ನಮ್ಮ ರಾಜಕಾರಣಿಗಳು ರೂಢಿಸಿಕೊಂಡಿದ್ದಾರೆ.

ಮೊದಲಿಗೆ ಎರಡು ವರ್ಷಗಳ ಹಿಂದೆಯೇ ಜನತಾದಳದಿಂದ ಬಂಡಾಯವೆದ್ದು ರಾಜ್ಯಸಭೆಯ ಚುನಾವಣೆಯಲ್ಲಿ ಕಾಂಗ್ರೇಸ್ಸಿಗೆ ಅಡ್ಡಮತದಾನ ಮಾಡಿದ ಏಳುಜನ ಶಾಸಕರುಗಳನ್ನೇ ತೆಗೆದುಕೊಳ್ಳಿ. ಪಕ್ಷಕ್ಕೆ ರಾಜಿನಾಮೆಯನ್ನು ನೀಡದೆಯೇ ಕಾಂಗ್ರೇಸ್ಸಿನ ಸದಸ್ಯರಂತೆ ವರ್ತಿಸಿದ ಅವರುಗಳು ಈ ಬಾರಿಯ ಚುನಾವಣೆಗಳು ಘೋಷಣೆಯಾದ ತಕ್ಷಣ ಪಕ್ಷಕ್ಕೆ ರಾಜಿನಾಮೆ ನೀಡಿ ಅಧಿಕೃತವಾಗಿ ಕಾಂಗ್ರೆಸ್ಸನ್ನು ಸೇರಿಕೊಂಡಿದ್ದಾರೆ. 2013ರಲ್ಲಿ ಜನತಾದಳದ ಬಾವುಟ ಹಿಡಿದು ಅದರ ಚಿಹ್ನೆಯ ಅಡಿಯಲ್ಲಿ ಸ್ಪರ್ದಿಸಿದ ಚಲುವರಾಯಸ್ವಾಮಿ (ನಾಗಮಂಗಲ), ಬಾಲಕೃಷ್ಣ (ಮಾಗಡಿ), ಜಮೀರ್ ಅಹಮದ್ ಖಾನ್ (ಚಾಮರಾಜಮೇಟೆ), ರಮೇಶಬಂಡಿಸಿದ್ದೇಗೌಡ(ಶ್ರೀರಂಗಪಟ್ಟಣ),ಇಕ್ಬಾಲ್ಅನ್ಸಾರಿ(ಗಂಗಾವತಿ),ಬೀಮಾನಾಯಕ್(ಹಗರಿಬೊಮ್ಮನಹಳ್ಳಿ),ಅಖಂಡಶ್ರೀನಿವಾಸಮೂರ್ತಿ(ಪುಲಿಕೇಶಿನಗರ) ಇವರುಗಳೀಗ ತಮ್ಮದೇ ಸ್ವಕ್ಷೇತ್ರಗಳಲ್ಲಿ ಮತ್ತೆ ಚುನಾವಣೆ ಎದುರಿಸುತ್ತಿದ್ದು, ಈ ಬಾರಿ ಕಾಂಗ್ರೇಸ್ಸಿನ ಬಾವುಟ ಹಿಡಿದು ಅದರ ಚಿಹ್ನೆಯ ಅಡಿಯಲ್ಲಿ ಸ್ಪರ್ದಿಸುತ್ತಿದ್ದಾರೆ. ಅಲ್ಲಿಗೆ ಕ್ಷೇತ್ರ, ಅಭ್ಯರ್ಥಿ ಅವರೇ, ಪಕ್ಷಮಾತ್ರ ಬೇರೆ. ಇನ್ನು ಇವರುಗಳಿಗೆ ಎದುರಾಳಿಯಾಗಿ ಸ್ಪರ್ದಿಸಲಿರುವವರು ಈ ಹಿಂದೆ ಕಾಂಗ್ರೇಸ್ ಪಕ್ಷದೊಳಗಿದ್ದು ಇದೀಗ ಪಕ್ಷಾಂತರ ಮಾಡಿದವರೇ ಎನ್ನುವುದೇ ವಿಶೇಷ!

ಇಷ್ಟು ಮಾತ್ರವಲ್ಲದೆ ಪಕ್ಷಗಳ ಟಿಕೇಟಿನ ಘೋಷಣೆಯಾಗುವ ಕೆಲ ದಿನಗಳ ಮುಂಚೆ ಮತ್ತು ಘೋಷಣೆಯಾದ ತಕ್ಷಣವೇ ಕೆಲವರು ಪಕ್ಷಗಳನ್ನು ಬದಲಿಸಿ ಅಭ್ಯರ್ಥಿಗಳಾಗುತ್ತಿದ್ದಾರೆ. ನೋಡಿ, ಅಫಜಲ್ಪುರದ ಕಾಂಗ್ರೇಸ್ ಶಾಸಕರಾದ ಮಾಲಿಕಯ್ಯ ಗುತ್ತೇದಾರ್ ಬಾಜಪ ಸೇರಿ ಅದರ ಚಿಹ್ನೆಯಲ್ಲಿ ಸ್ಪರ್ದಿಸಲು ತೀರ್ಮಾನಿಸುತ್ತಿದ್ದಂತೆ ಕಳೆದ ಚುನಾವಣೆಯಲ್ಲಿ ಬಾಜಪದಿಂದ ಸ್ಪರ್ದಿಸಿ ಗುತ್ತೇದಾರರನ್ನು ವಿರೋಧಿಸುತ್ತಿದ್ದ ಎಂ. ವೈ. ಪಾಟೀಲ್ ತಕ್ಷಣ ಕಾಂಗ್ರೇಸ್ ಸೇರಿದ್ದಾರೆ. ಇದು ಮತ್ತೆ 2013ರ ಚುನಾವಣೆಯ ಪುನರಾವರ್ತನೆಯೇ ಸರಿ, ಒಂದು ಬದಲಾವಣೆ ಅಂದರೆ ಅಭ್ಯರ್ಥಿಗಳು ಚಿಹ್ನೆ ಬದಲಾಯಿಸಿದ್ದು ಮಾತ್ರ!. ಅಫಜಲ್ ಪುರದ ಮತದಾರನಿಗೆ ಆಯ್ಕೆಯ ಪ್ರಶ್ನೆಯೇ ಇಲ್ಲ. ಕಳೆದ ಬಾರಿ ಬಾಜಪದಿಂದ ಗೆದ್ದಿದ್ದ ವಿಜಯನಗರದ ಆನಂದ್ ಸಿಂಗ್ ಈಗ ಅದೇ ಕ್ಷೇತ್ರದಿಂದ ಕಾಂಗ್ರೇಸ್ ಚಿಹ್ನೆಯ ಮೇಲೆ ಸ್ಪರ್ದಿಸುತ್ತಿದ್ದಾರೆ. ಇನ್ನು ಆರು ಬಾರಿ ಕಾಂಗ್ರೇಸ್ ಶಾಸಕರಾಗಿದ್ದ ಎನ್.ವೈ.ಗೋಪಾಲಕೃಷ್ಣ ಇದೀಗ ಬಾಜಪ ಟಿಕೇಟನ್ನು ಪಡೆದು ಸ್ಪರ್ದಿಸುತ್ತಿದ್ದಾರೆ. ಕಾರವಾರದಲ್ಲಿ ಆನಂದ್ ಆಸನೋಟಿಕರ್ ಎಂಬ ಆತ್ಮವೊಂದು ಇದೀಗ ಜನತಾದಳದ ಚಿಹ್ನೆಯ ಅಡಿ ಅದೃಷ್ಠ ಪರೀಕ್ಷೆಗೆ ಇಳಿದಿದೆ. ಇಲ್ಲೆಲ್ಲಿಯೂ ಈ ರಾಜಕಾರಣಿಗಳಿಗೆ ತತ್ವ ಸಿದ್ದಾಂತಗಳು ಮುಖ್ಯವೆನಿಸಿಲ್ಲ. ಬದಲಿಗೆ ತಮ್ಮ ಗೆಲುವಿಗೆ ಬೆಂಬಲವಾಗಬಲ್ಲ ಯಾವುದೊ ಒಂದು ಪಕ್ಷದ ಚಿಹ್ನೆ ಸಿಕ್ಕಿದರೆ ಸಾಕು ಎನ್ನುವ ಹಂಬಲವಷ್ಟೇ ಎದ್ದು ಕಾಣುತ್ತದೆ.

ಒಂದು ಪಕ್ಷದ ಒಬ್ಬ ಅತೃಪ್ತ ನಾಯಕನನ್ನು ತೃಪ್ತಿ ಪಡಿಸಲು ಇನ್ನೊಂದು ಪಕ್ಷ ಸಿದ್ದವಾಗಿ ನಿಂತಿರುತ್ತದೆ. ಮೂರೂ ಪಕ್ಷಗಳೂ ಇಂತಹ ಅತೃಪ್ತ ಆತ್ಮಗಳನ್ನು ತೃಪ್ತಿ ಪಡಿಸುವ ಕಾಯಕದಲ್ಲಿ ನುರಿತಿದ್ದು ಯಶಸ್ವಿಯಾಗಿ ಈ ಕೆಲಸ ಮಾಡುತ್ತಿವೆ. ಇನ್ನೂ ನಾಮಪತ್ರ ಸಲ್ಲಿಕೆಯ ಕಡೆಯ ದಿನದವರೆಗು ಈ ಅತೃಪ್ತ ಆತ್ಮಗಳ ಸ್ಥಳಾಂತರ ಸ್ಥಿತ್ಯಂತರಗಳು ಸತತವಾಗಿ ನಡೆಯಲಿದ್ದು, ಈ ತಿಂಗಳ 24ನೇ ತಾರೀಖು ನಮಗೆ ಒಟ್ಟಾರೆ ಅತೃಪ್ತಆತ್ಮಗಳು ಮತ್ತವು ನೆಲೆ ಕಂಡುಕೊಂಡ ತಾಣಗಳ ಸ್ಪಷ್ಟ ಚಿತ್ರಣ ಸಿಗಲಿದೆ.

ಅಲ್ಲಿಯವರೆಗೂ ನಮ್ಮ ರಾಜ್ಯದಲ್ಲಿ ಅತೃಪ್ತ ಆತ್ಮಗಳದೇ ಸುದ್ದಿ!

No comments:

Post a Comment