May 2, 2017

ಮೃತ್ಯು ಕೂಪಗಳಾಗುತ್ತಿರುವ ತೆರೆದ ಕೊಳವೆಬಾವಿಗಳಿಗೊಂದು ಕಠಿಣ ಕಾಯ್ದೆಯ ಅಗತ್ಯ

ಸಾಂದರ್ಭಕ ಚಿತ್ರ 
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಆಗಾಗ ತೆರದ ಕೊಳವೆಬಾವಿಗಳಲ್ಲಿ ಪುಟ್ಟ ಮಕ್ಕಳು ಬೀಳುವುದು, ಅವರನ್ನು ಹೊರತೆಗೆಯಲು ಸರಕಾರಗಳು ಸತತ ಕಾರ್ಯಾಚರಣೆ ನಡೆಸುವುದು, ಅವು ವಿಫಲವಾಗಿ ಮಕ್ಕಳು ಅಸುನೀಗುವುದು ನಡೆಯುತ್ತಲೇ ಇವೆ. ಇಂತಹ ಪ್ರತಿ ಘಟನೆ ನಡೆದಾಗಲೂ ಜನ ಸರಕಾರಗಳ ವಿರುದ್ದ ಪ್ರತಿಭಟಿಸುವುದು, ಸರಕಾರಗಳು ಕೊಳವೆಬಾವಿಗಳಿಗೆ ಸಂಬಂದಿಸಿದಂತೆ ಒಂದಷ್ಟು ನೀತಿಗಳನ್ನು ರೂಪಿಸುವುದಾಗಿ ಹೇಳುವುದು ನಡೆದೆ ಇದೆ. 

ಆದರೆ ಸರಕಾರ ರೂಪಿಸಿರುವ ಯಾವ ನೀತಿಗಳೂ ಕಾರ್ಯರೂಪಕ್ಕೆ ಬಂದಂತೆ ಕಾಣುತ್ತಿಲ್ಲ ಹೀಗಾಗಿಯೇ ಪದೇಪದೇ ಇಂತಹ ಅವಘಡಗಳು ನಡೆಯುತ್ತಲೇ ಇವೆ. ಯಾವುದೇ ಇಚ್ಚಾಶಕ್ತಿ ಇರದೆ ರೂಪಿಸಿದ ನೀತಿನಿಯಮಗಳಿಂದ, ಕಾನೂನುಗಳಿಂದ ಇಂತಹ ಅಪಘಾತಗಳನ್ನು ತಡೆಯಲು ಸಾದ್ಯವಿಲ್ಲ. ಹಾಗಾಗಿ ಕೆಲವಾದರು ಕಠಿಣ ಕಾನೂನುಗಳನ್ನು ಜಾರಿಗೊಳಿಸುವುದರಿಂದ ಭವಿಷ್ಯದಲ್ಲಿಯಾದರು ಇಂತಹ ಅನಾಹುತಗಳನ್ನು ನಿಯಂತ್ರಿಸ ಬಹುದಾಗಿದೆ. 
ರಾಜ್ಯದಲ್ಲಿ ಕೊಳವೆಬಾವಿ ಕೊರೆಯುವ ಎಲ್ಲ ಸಂಸ್ಥೆಗಳನ್ನು ಕಡ್ಡಾಯವಾಗಿ ನೊಂದಣಿ ಮಾಡುವುದು. ಆಯಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆ ಜಿಲ್ಲೆಯ ಎಲ್ಲ ಕೊಳವೆಬಾವಿ ಕೊರೆಯುವ ಸಂಸ್ಥೆಗಳು ನಿಗದಿತ ಶುಲ್ಕ ನೀಡಿ ನೊಂದಾಯಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಬೇಕು. ರೈತರಾಗಲಿ, ಇನ್ಯಾರೆ ಆಗಲಿ ಇಂತಹ ನೊಂದಾಯಿತ ಸಂಸ್ಥೆಗಳಿಂದಲೇ ಕೊಳವೆಬಾವಿ ಕೊರೆಯಿಸಬೇಕೆಂಬುದನ್ನು ಕಡ್ಡಾಯಗೊಳಿಸುವುದು. 

ಇನ್ನು ಹೀಗೆ ನೊಂದಾಯಿತವಾದ ಸಂಸ್ಥೆಗಳು ಕೊಳವೆ ಬಾವಿ ಕೊರೆಯಲು ಹೋಗುವ ಮುಂಚೆ ಸಂಬಂದಿಸಿದ ಗ್ರಾಹಕನ ಜೊತೆ ಸೇರಿ ಜಂಟಿಯಾಗಿ, ಕೊಳವೆಬಾವಿ ಕೊರೆಯಲಿರುವ ಸ್ಥಳದ ವಿಳಾಸ( ಅಧಿಕೃತ ದಾಖಲೆಗಳೊಂದಿಗೆ) ಮತ್ತು ಕೊರೆಯುವ ಉದ್ದೇಶ( ಅಂದರೆ ನೀರಿನ ಬಳಕೆಯ ಉದ್ದೇಶ)ದ ಬಗ್ಗೆ ಪ್ರಮಾಣಪತ್ರವನ್ನು ಸಲ್ಲಿಸಿ ಅನುಮತಿ ಪತ್ರವನ್ನು ಪಡೆಯುವುದನ್ನು ಕಡ್ಡಾಯಗೊಳಿಸಬೇಕು.ಕೊಳವೆ ಬಾವಿ ಕೊರೆದ ನಂತರ ನೀರುಬಾರದೆ ಅದು ವಿಫಲವಾದಲ್ಲಿ ಬಾವಿ ಕೊರೆದ ಸಂಸ್ಥೆಯೇ ಇಪ್ಪತ್ತನಾಲ್ಕು ಗಂಟೆಯೊಳಗೆ ಅದನ್ನು ಮುಚ್ಚಿ ಹೋಗುವ ಕಾರ್ಯವನ್ನು ಕೈಗೊಳ್ಳುವ ಕಾನೂನನ್ನು ರಚಿಸಬೇಕು. 

ಅಕಸ್ಮಾತ್ ಹಿಂದೆ ಕೊರೆಯಿಸಿದ್ದು, ಈಗ ನೀರು ಬಾರದೆ ಬತ್ತಿಹೋದ ಕೊಳವೆಬಾವಿ ಇದ್ದಲ್ಲಿ ಅದನ್ನು ತಕ್ಷಣ ಮುಚ್ಚಲು ಸಂಬಂದಿಸಿದ ಬಾವಿಯ ಒಡೆಯನೇ ಮುಂದಾಗಬೇಕು ಮತ್ತು ಅದರಲ್ಲಿ ಆತ ವಿಫಲನಾಗಿ ಯಾವುದಾದರು ಅವಗಢ ನಡೆದರೆ ಸದರಿ ಒಡೆಯನ ಮೇಲೆ ಜಾಮೀನು ರಹಿತ ಕ್ರಿಮಿನಲ್ ಮೊಕದ್ದಮೆ ಹಾಕಿ ಉಗ್ರ ಶಿಕ್ಷೆ ನೀಡುವ ಕಾಯಿದೆ ಜಾರಿಗೊಳಿಸಬೇಕು. 

ಮೇಲೆ ಹೇಳಿದ ಎಲ್ಲ ಅಂಶಗಳನ್ನೂ ಒಂದೇ ಕಾಯ್ದೆ ಅಡಿಯಲ್ಲಿ ಬರುವಂತೆ ರಚಿಸಿ ಅನಗತ್ಯ ಗೊಂದಲಗಳು ಸೃಷ್ಠಿಯಾಗದಂತೆ ನೋಡಿಕೊಳ್ಳಬೇಕು. ಸದರಿ ಕಾಯ್ದೆಯನ್ನು ಅಂತರ್ಜಲ ಇಲಾಖೆಯ ಅಡಿ ತರುವುದಕ್ಕಿಂತ ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವಂತೆ ಮಾಡುವುದು ಉತ್ತಮ. 

ಆದರೆ ಇಂತಹ ಕಾನೂನು ಜಾರಿಗೊಳಿಸುವ ಮೊದಲು, ಈಗ ರಾಜ್ಯದಲ್ಲಿ ಇರುವ ಕೊಳವೆಬಾವಿಗಳ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಲು ಮುಂದಾಗಬೇಕು. ಸ್ಥಳೀಯ ಗ್ರಾಮ ಪಂಚಾಯಿತಿಗಳು ಈ ಗಣತಿ ಕಾರ್ಯ ಕೈಗೊಂಡು ಅಗತ್ಯವಾದ ಅಂಕಿ ಅಂಶಗಳನ್ನು ಸಂಗ್ರಹಿಸಲು ಸೂಚಿಸಬೇಕು. ಹೀಗೆ ಮಾಹಿತಿ ಸಂಗ್ರಹಿಸುವಾಗ ಹಾಲಿ ನೀರಿರುವ ಕೊಳವೆಬಾವಿಗಳು, ವಿಫಲವಾಗಿ ಮುಚ್ಚಿರುವ ಬಾವಿಗಳು, ವಿಫಲವಾದರೂ ಮುಚ್ಚದೆ ತೆರೆದಿರುವ ಬಾವಿಗಳ ಸಂಖ್ಯೆಗಳನ್ನು ಕ್ರೋಡೀಕರಿಸಬೇಕು. ಇದಕ್ಕಾಗಿ ಕೊಳವೆ ಬಾವಿ ಹೊಂದಿರುವ ಎಲ್ಲರೂ ನಿಗದಿತ ದಿನಾಂಕಗಳ ಒಳಗೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನೊಂದಾಯಿಸಿಕೊಳ್ಳಲು ಆದೇಶಿಸ ಬೇಕು. ಇದರಲ್ಲಿ ವಿಫಲವಾದವರ ಕೊಳವೆಬಾವಿಗಳನ್ನು ಸರಕಾರ ವಶಪಡಿಸಿಕೊಳ್ಳುವ ಮತ್ತು ಅದಕ್ಕೆ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸುವಂತಹ ಕಠಿಣ ಕ್ರಮಗಳಿಗೆ ಮುಂದಾಗ ಬೇಕು. 

ಇವೆಲ್ಲವನ್ನೂ ಎರಡು ಹಂತದಲ್ಲಿ ಮಾಡಬಹುದಾಗಿದೆ: ಮೊದಲ ಹಂತದಲ್ಲಿ ಐವತ್ತು ದಿನಗಳ ಒಳಗೆ ಈಗಿರುವ ಕೊಳವೆಬಾವಿಗಳ ಮಾಹಿತಿ ಸಂಗ್ರಹ ಮತ್ತು ನೊಂದಣಿ ಕಾರ್ಯವನ್ನು ಮುಗಿಸುವುದು. ಎರಡನೇ ಹಂತದಲ್ಲಿ ಮೊದಲಿಗೆ ನಾನು ಹೇಳಿದ ರೀತಿಯಲ್ಲಿ ಮೂರು ತಿಂಗಳಲ್ಲಿ ಕಾಯ್ದೆಯೊಂದನ್ನು ರಚಿಸುವಂತೆ ಕಾನೂನು ಇಲಾಖೆಗೆ ತಿಳಿಸಿ ಮುಂದಿನ ವಿದಾನಸಭೆಯ ಅಧಿವೇಶನದಲ್ಲಿ ಸಂಬಂದಿಸಿದ ಕಾನೂನಿನ ಮಸೂದೆಯನ್ನು ಅಂಗೀಕರಿಸಿ, ಆ ಕ್ಷಣದಿಂದಲೇ ಜಾರಿಗೊಳಿಸುವುದು ಆದ್ಯತೆಯ ಕಾರ್ಯವಾಗಬೇಕು. ಇಷ್ಟಾದಲ್ಲಿ ತೆರೆದ ಕೊಳವೆ ಬಾವಿಗಳಿಂದ ಆಗುತ್ತಿರುವ ಅಪಘಾತಗಳನ್ನು ಅಮಾಯಕ ಮಕ್ಕಳ ಸಾವುಗಳನ್ನು ತಡೆಯಬಹುದಾಗಿದೆ. 

No comments:

Post a Comment