May 25, 2017

ಭಗ್ನಗೊಂಡ ಕೋಟ್ಯಾಂತರ ಜನರ ಪರ್ಯಾಯ ರಾಜಕಾರಣದ ಕನಸು!

ಕು.ಸ,ಮಧುಸೂದನನಾಯರ್ ರಂಗೇನಹಳ್ಳಿ
ಇಂಡಿಯಾದ ಕೋಟ್ಯಾಂತರ ಜನರ ಕನಸುಗಳು ಒಂದೇ ದಿನದಲ್ಲಿ ಛಿದ್ರಗೊಂಡಿವೆ!

ಹೌದು,ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲರ ಮೇಲೆ ಎರಡು ಕೋಟಿ ರೂಪಾಯಿ ಲಂಚ ಪಡೆದ ಆರೋಪ ಮತ್ತು ಸುಳ್ಳು ಕಂಪನಿಗಳ ಮೂಲಕ ಹವಾಲ ಹಣಕಾಸು ವ್ಯವಹಾರ ನಡೆಸಿದ ಆರೋಪ ಹೊರಬೀಳುತ್ತಲೇ ಜನತೆಯಲ್ಲಿ ಭ್ರಮನಿರಸನದ ನಿಟ್ಟುಸಿರು ಕೇಳಿ ಬರುತ್ತಿದೆ. ಯಾಕೆಂದರೆ ಭಾರತೀಯರ ಮಟ್ಟಿಗೆ, ಅದರಲ್ಲೂ ಇಂದಿನ ಅಕ್ಷರಸ್ಥ ಯುವಪೀಳಿಗೆಯ ಪಾಲಿಗೆ ಆಮ್ ಆದ್ಮಿ ಪಕ್ಷ ಕೇವಲ ಒಂದು ರಾಜಕೀಯ ಪಕ್ಷ ಮಾತ್ರವಾಗಿರಲಿಲ್ಲ. ಈ ನಾಡಿನಲ್ಲಿ ಕಳೆದ ಎಪ್ಪತ್ತು ವರ್ಷಗಳಿಂದ ರಾಜಕಾರಣ ಮಾಡುತ್ತ ಬರುತ್ತಿದ್ದ ಸಾಂಪ್ರದಾಯಿಕ ರಾಜಕೀಯ ಪಕ್ಷಗಳಿಗೆ ಸೆಡ್ಡು ಹೊಡೆದು ನಿಂತ ಪರ್ಯಾಯ ರಾಜಕಾರಣದ ಒಂದು ಆಯುಧವಾಗಿತ್ತು.
ಹಾಗೆ ನೋಡಿದರೆ ಆಮ್ ಆದ್ಮಿ ಪಕ್ಷ ಉದಯವಾಗಿದ್ದೇ ಒಂದು ಆದರ್ಶಮಯ ಕನಸಿನಿಂದ. 2011ರಲ್ಲಿ ಸಾಮಾಜಿಕ ಕಾರ್ಯಕರ್ತ ಶ್ರೀ ಅಣ್ಣಾ ಹಜಾರೆಯವರು ದೆಹಲಿಯಲ್ಲಿ ಆರಂಭಿಸಿದ ಭ್ರಷ್ಟಾಚಾರ ವಿರೋಧಿ ಚಳುವಳಿಯ ಹಿನ್ನೆಲೆಯಲ್ಲಿ ಹುಟ್ಟಿದ ಆಮ್ ಆದ್ಮಿ ಪಕ್ಷ ಎರಡು ಕಾರಣಗಳಿಗಾಗಿ ಜನತೆಯ ಗಮನ ಸೆಳೆದಿತ್ತು. ಮೊದಲಿಗೆ ಅದರ ಸ್ಥಾಪಕ ಅರವಿಂದ್ ಕೇಜ್ರೀವಾಲರ ಪ್ರಾಮಾಣಿಕತೆಯ ಇಮೇಜ್ ಹಾಗು ಅವರು ಮತ್ತು ಅವರ ತಂಡ ಭಾರತೀಯರಿಗೆ ಕಟ್ಟಿಕೊಟ್ಟ ಹೊಸರೀತಿಯ ಪಾರದರ್ಶಕ ರಾಜಕಾಣದ ಕನಸು.

ನಿಜ ಹೇಳಬೇಕೆಂದರೆ, ಎಪ್ಪತ್ತರ ದಶಕದಲ್ಲಿನ ತುರ್ತುಪರಿಸ್ಥಿತಿಯ ನಂತರ, 1977ರಲ್ಲಿ ಉದಯವಾಗಿದ್ದ ಜನತಾ ಪಕ್ಷ ಸಹ ದೇಶದ ಜನತೆಯಲ್ಲಿ ಇದೇ ಮಟ್ಟದ ಕನಸೊಂದನ್ನು, ಪರ್ಯಾಯ ರಾಜಕಾರಣದ ಸಾದ್ಯತೆಯೊಂದನ್ನು ಜನತೆಯಲ್ಲಿ ಹುಟ್ಟಿ ಹಾಕಿತ್ತು. ಆದರೆ ಜನತಾ ಪಕ್ಷದ ನಾಯಕರುಗಳು ಕೇವಲ ಎರಡೇ ವರ್ಷಗಳಲ್ಲಿ ಕೋಟ್ಯಾಂತರ ಜನರ ಆ ಕನಸುಗಳನ್ನು ಕರಕಲಾಗಿಸಿದ್ದರು. ಆದಾದ ಸರಿಸುಮಾರು ಮುವತ್ತೈದು ವರ್ಷಗಳ ನಂತರ ಅರವಿಂದ್ ಕೇಜ್ರೀವಾಲರ ಆಮ್ ಆದ್ಮಿ ಪಕ್ಷ ಅಂತಹುದೇ ಹೊಸ ಭರವಸೆಯೊಂದನ್ನು ಹುಟ್ಟು ಹಾಕಿತ್ತು. ಕಾಂಗ್ರೇಸ್ಸಿನ ಬ್ರಹ್ಮಾಂಡ ಭ್ರಷ್ಟಾಚಾರ, ಬಾಜಪದ ಮತಾಂಧ ರಾಜಕಾರಣ ಮತ್ತು ಪ್ರಾದೇಶಿಕ ಪಕ್ಷಗಳ ವ್ಯಕ್ತಿಗತ ಅಹಂಕಾರಗಳ ರಾಜಕಾರಣವನ್ನು ಅನುಭವಿಸಿದ ಜನರಿಗೆ ಆಮ್ ಆದ್ಮಿ (ಸಾಮಾನ್ಯ ಮನುಷ್ಯ) ಎಂಬ ಹೆಸರೇ ಆಕರ್ಷಣೀಯವಾಗಿ ಆದರ್ಶಮಯವಾಗಿ ಕಂಡಿದ್ದರಲ್ಲಿ ಅಚ್ಚರಿಯೇನೂ ಇರಲಿಲ್ಲ.

ಜನರ ಇಂತಹ ಕನಸುಗಳ ಮತ್ತು ಅತಿಯಾದ ನಿರೀಕ್ಷೆಯ ಪರಿಣಾವಾಗಿಯೇ 2015ರ ದೆಹಲಿಯ ವಿದಾನಸಭಾ ಚುನಾವಣೆಗಳಲ್ಲಿ ಆಮ್ಆದ್ಮಿ ಪಕ್ಷ ಕಾಂಗ್ರೆಸ್ ಮತ್ತು ಬಾಜಪಗಳೆಂಬ ಎರಡು ದೈತ್ಯ ರಾಷ್ಟ್ರೀಯ ಪಕ್ಷಗಳನ್ನು ಹೀನಾಯಕರವಾಗಿ ಸೋಲಿಸಿ ಅಧಿಕಾರ ಹಿಡಿದಿತ್ತು. ಬಹುಶ: ಅವತ್ತು ಆ ಪಲಿತಾಂಶ ಹೊರಬಿದ್ದ ದಿನ ದೆಹಲಿ ಜನತೆ ಮಾತ್ರವಲ್ಲದೆ ಇಡೀದೇಶದ ಜನತೆ ಹೊಸ ಹುಮ್ಮಸ್ಸಿನಿಂದ ಸಂಭ್ರಮಿಸಿತ್ತು. ಕರ್ನಾಟಕದ ಮಲೆನಾಡಿನ ಸೆರಗಿನಂಚಿನಲ್ಲಿರುವ ನನ್ನ ಹಳ್ಳಿಯ ಜನ ಸಹ ಇಂತಹದೊಂದು ಗೆಲುವನ್ನು ಅಚ್ಚರಿಯ ಕಣ್ಣಲ್ಲಿ ನೋಡಿ ಖುಶಿ ಪಟ್ಟಿದ್ದರು. ದೆಹಲಿಯಲ್ಲಾದ ಈ ಮತಕ್ರಾಂತಿ ನಾಳೆ ನಮ್ಮ ಊರಲ್ಲಿ, ನಮ್ಮ ತಾಲ್ಲೂಕಿನಲ್ಲಿ, ನಮ್ಮ ಜಿಲ್ಲೆ, ನಮ್ಮ ರಾಜ್ಯದಲ್ಲೂ ನಡೆಯುತ್ತದೆಯೆಂದು ನಂಬಿಕೊಂಡಿದ್ದರು.

ಆದರೆ ಸರಳತೆ, ಪ್ರಾಮಾಣಿಕತೆಗಳಷ್ಟೇ ಅಧಿಕಾರ ರಾಜಕಾರಣಕ್ಕೆ ಸಾಕಾಗುವುದಿಲ್ಲವೆಂಬುದನ್ನು ಅರ್ಥ ಮಾಡಿಕೊಳ್ಳುವಲ್ಲಿ ಕೇಜ್ರೀವಾಲರ ತಂಡ ವಿಫಲವಾಗಿತ್ತು. ರಾಜಕೀಯ ಪಕ್ಷವೊಂದಕ್ಕೆ ಇರಬೇಕಾದ ತಳಮಟ್ಟದ ಕಾರ್ಯಕರ್ತರುಗಳ ಪಡೆಯನ್ನು ರೂಪಿಸಿಕೊಳ್ಳುವತ್ತ ಅದು ಗಮನ ಕೊಡಲಿಲ್ಲ. ಜೊತೆಗೆ ಪಕ್ಷವೊಂದಕ್ಕೆ ಅಗತ್ಯವಾಗಿದ್ದ ಖಚಿತ ಸಿದ್ದಾಂತಗಳ ನೀಲ ನಕ್ಷೆಯೊಂದನ್ನು ಸಹ ಅದು ನಿರ್ಲಕ್ಷಿಸಿತ್ತು. ಉದಾಹರಣೆಗೆ ಇವತ್ತಿಗೂ ಕೋಮುವಾದದ ಬಗ್ಗೆಯಾಗಲಿ, ಮೀಸಲಾತಿಯ ಬಗ್ಗೆಯಾಗಲಿ, ಮುಕ್ತ ಆರ್ಥಿಕನೀತಿಯ ಬಗ್ಗೆಯಾಗಲಿ ಎಲ್ಲಿಯೂ ಆಮ್ ಆದ್ಮಿ ಪಕ್ಷ ತನ್ನ ಖಚಿತ ನಿಲುವನ್ನು ಸ್ಪಷ್ಟಪಡಿಸಿಯೇ ಇಲ್ಲ. ಭ್ರಷ್ಟಾಚಾರ ವಿರೋಧಿ ನಿಲುವೊಂದರಿಂದಲೇ ರಾಜಕೀಯ ಮಾಡಬಹುದೆಂಬ ಭ್ರಮಾಲೋಕದಲ್ಲಿಯೇ ಕೇಜ್ರೀವಾಲರು ವಿಹರಿಸುತ್ತ ಹೋದರು.

2015 ರ ದೆಹಲಿಯ ಚುನಾವಣೆಗಳಲ್ಲಿ ಸ್ಪರ್ದಿಸಿ ಗೆಲ್ಲುವ ಉತ್ಸುಕತೆಯಲ್ಲಿದ್ದ ಪಕ್ಷ ತನ್ನ ಟಿಕೇಟುಗಳನ್ನು ನೀಡುವಾಗ ವಹಿಸಬೇಕಾದಷ್ಟು ಎಚ್ಚರಿಕೆಯನ್ನು ವಹಿಸದೇ ಎಡವಟ್ಟು ಮಾಡಿಕೊಂಡಿತು.ಸುಳ್ಳು ಪದವಿ ಪ್ರಮಾಣಪತ್ರಗಳನ್ನು ಪಡೆದವರು, ಪತ್ನಿಗೆ ಕಿರುಕುಳ ನೀಡಿದವರು, ಅತ್ಯಾಚಾರ ಪ್ರಕರಣಗಳಲ್ಲಿ ಬಾಗಿಯಾದವರು, ಹಣಕಾಸು ವಂಚನೆಗಳಲ್ಲಿ ಮುಳುಗಿದವರು, ಲೈಂಗಿಕ ಹಗರಣಗಳಲ್ಲಿ ಆರೋಪಿಗಳಾಗಿ ಕಟಕಟೆಯಲ್ಲಿ ನಿಲ್ಲಬೇಕಾದಂತವರು ಪಕ್ಷದ ಟಿಕೇಟುಗಳನ್ನು ಪಡೆದು, ಗೆದ್ದು ಶಾಸಕರಾಗಿ ಸಚಿವರಾಗಿ ಅಧಿಕಾರ ಸ್ವೀಕರಿಸಿಬಿಟ್ಟರು. ಇದು ಆಮ್ ಆದ್ಮಿ ಪಕ್ಷದ ವರ್ಚಸ್ಸಿಗೆ ಸಾಕಷ್ಟು ಧಕ್ಕೆ ಉಂಟು ಮಾಡಿತು. ಇನ್ನು ಸ್ವತ: ಮುಖ್ಯಮಂತ್ರಿಗಳೇ ಮಾನಹಾನಿ ಪ್ರಕರಣದಲ್ಲಿ ಆರೋಪಿಯಾಗಿ ನಿಲ್ಲಬೇಕಾಯಿತು.

ಇವೆಲ್ಲದರ ಮುಂದುವರೆದ ಭಾಗವಾಗಿ ಈ ವರ್ಷ ನಡೆದ ಪಂಜಾಬ್ ಗೋವಾ ವಿದಾನಸಭಾ ಚುನಾವಣೆಗಳಲ್ಲಿ, ದೆಹಲಿಯ ಉಪಚುನಾವಣೆಯೊಂದರಲ್ಲಿ, ತೀರಾ ಇತ್ತೀಚೆಗಿನ ದೆಹಲಿಯ ನಗರ ಪಾಲಿಕೆ ಚುನಾವಣೆಗಳಲ್ಲಿ ಆಮ್ ಆದ್ಮಿ ಪಕ್ಷ ಸೋಲುಣ್ಣಬೇಕಾಯಿತು.

ಇದೀಗ ಆಮ್ ಆದ್ಮಿ ಸರಕಾರದ ಮಾಜಿ ಸಚಿವ ಕಪಿಲ್ ಮಿಶ್ರಾ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲರ ಮೇಲೆ ಲಂಚ ಸ್ವೀಕಾರ ಮತ್ತು ಹವಾಲಾ ವ್ಯವಹಾರಗಳಲ್ಲಿ ಬಾಗಿಯಾಗಿರುವ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಆರೋಪಗಳೆಲ್ಲ ಸತ್ಯವೆಂದು ಒಪ್ಪಿಕೊಳ್ಳಲಾಗದಿದ್ದರೂ ಆಮ್ ಆದ್ಮಿ ಪಕ್ಷ ಸಹ ಮತ್ತೊಂದು ಕಾಂಗ್ರೇಸ್ ಅಥವಾ ಮತ್ತೊಂದು ಬಾಜಪದಂತೆಯೇ ಮಾಮೂಲಿ ರಾಜಕೀಯ ಪಕ್ಷವೆಂಬ ಬಾವನೆ ಜನರಲ್ಲಿ ಮೂಡುತ್ತಿದೆ. ಕೇಜ್ರೀವಾಲರು ಸಹ ಇನ್ನೊಬ್ಬ ಸರಾಸರಿ ರಾಜಕಾರಣಿಯೇ ಹೊರತು ಆದರ್ಶಮಯ ನಾಯಕನಲ್ಲವೆಂದು ಜನ ಅರ್ಥಮಾಡಿ ಕೊಳ್ಳತೊಡಗಿದ್ದಾರೆ.

ಹೀಗೆ ಪರ್ಯಾಯ ರಾಜಕಾರಣದ ಕನಸುಕಂಡ ಸಾಮಾನ್ಯ ಮನುಷ್ಯನನ್ನು ಆಮ್ ಆದ್ಮಿ ಪಕ್ಷದ ನಡವಳಿಕೆ ಮತ್ತೆ ಕತ್ತಲಿನತ್ತ ದೂಡಿದೆ. ನಾನು ಮೊದಲೇ ಹೇಳಿದಂತೆ ಸಾಂಪ್ರದಾಯಿಕ ರಾಜಕಾರಣದ ಬದಲಿಗೆ ಹೊಸ ರೀತಿಯ ಹೊಸ ನುಡಿಗಟ್ಟಿನ ರಾಜಕಾರಣವೊಂದನ್ನು ಬಯಸಿದ ಭಾರತೀಯರ ಆಶಯಕ್ಕೆ ಬಾರೀ ಹೊಡೆತ ಬಿದ್ದಿದೆ.

ಹೀಗಾಗಿ ಆಮ್ ಆದ್ಮಿ ಪಕ್ಷದ ವಿಫಲತೆ, ಕೇವಲ ಆ ಪಕ್ಷದ ವಿಫಲತೆ ಮಾತ್ರವಲ್ಲ! 

ಬದಲಿಗೆ ಈ ನೆಲದ ಕೋಟ್ಯಾಂತರ ಜನದ ಪರ್ಯಾಯ ರಾಜಕಾರಣದ ನಿರೀಕ್ಷೆಯ ಸೋಲು ಎನ್ನಬಹುದಾಗಿದೆ

No comments:

Post a Comment