Mar 29, 2017

ಮಾಧ್ಯಮಗಳನ್ನು ನಿಯಂತ್ರಿಸುವುದು ಸರಿಯೇ?

ಡಾ. ಅಶೋಕ್. ಕೆ. ಆರ್.
ಇತ್ತೀಚೆಗೆ ಕರ್ನಾಟಕದ ಉಭಯ ಸದನಗಳಲ್ಲಿ ಮಾಧ್ಯಮದ, ಅದರಲ್ಲೂ ದೃಶ್ಯ ಮಾಧ್ಯಮದವರ ಅತಿಗಳ ಬಗ್ಗೆ ನಾಲ್ಕು ಘಂಟೆಗಳಷ್ಟು ಸುದೀರ್ಘ ಅವಧಿಯವರೆಗೆ ಚರ್ಚೆಗಳಾಗಿತ್ತು. ವೈಯಕ್ತಿಕ ಅವಹೇಳನ, ವ್ಯಕ್ತಿಗತ ಟೀಕೆಗಳ ಬಗ್ಗೆ ಬಹಳಷ್ಟು ಸದಸ್ಯರು ಬೇಸರ, ಕೋಪ ವ್ಯಕ್ತಪಡಿಸಿದ್ದರು. ಮಾಧ್ಯಮಗಳನ್ನು ನಿಯಂತ್ರಿಸಬೇಕು, ವೈಯಕ್ತಿಕ ತೇಜೋವಧೆಗಳನ್ನು ತಡೆಯಬೇಕು ಎಂದು ಆಗ್ರಹಿಸಿದ್ದರು. ವರದಿ ಮಾಡಲು ಸದನ ಸಮಿತಿ ರಚಿಸಲಾಗುತ್ತದೆ ಎಂದು ಸ್ಪೀಕರ್ ಕೋಳಿವಾಡರು ತಿಳಿಸಿದ್ದರು. ಅಂದು ಮಾಧ್ಯಮದ ವಿರುದ್ಧ ನಡೆದ ಚರ್ಚೆಯಲ್ಲಿ ಭಾಗವಹಿಸದವರೂ ಸಹಿತ ಮೌನದಿಂದಿದ್ದು ಒಪ್ಪಿಗೆ ಸೂಚಿಸಿದ್ದರು. ಸರಕಾರದ ಮಟ್ಟದಲ್ಲಿ ಕೆಲಸ ನಡೆಯುವ ವೇಗ ನಮಗೆ ಗೊತ್ತೇ ಇದೆ. ಈ ವಿಷಯದಲ್ಲಿ ಆ ರೀತಿಯಾಗದೆ ಅತಿ ಶೀಘ್ರವಾಗಿ ಸದನ ಸಮಿತಿಯನ್ನು ರಚಿಸಲಾಗಿದೆ. ಆರೋಗ್ಯ ಸಚಿವರಾದ ಕೆ.ಆರ್. ರಮೇಶ್ ಕುಮಾರ್ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಬಿಜೆಪಿಯ ಕೆ.ಎಸ್. ಈಶ್ವರಪ್ಪನವರು ಸಮಿತಿ ರಚನೆಯನ್ನು ವಿರೋಧಿಸಿದ್ದಾರೆ, ಸಮಿತಿ ರಚನೆ ಯಾಕೆ ತಪ್ಪು – ಮಾಧ್ಯಮಗಳನ್ನು ನಿಯಂತ್ರಿಸುವುದು ಯಾಕೆ ಸರಿಯಲ್ಲ ಎಂದು ಕಾಂಗ್ರೆಸ್ಸಿನ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಪತ್ರ ಬರೆದಿದ್ದಾರೆ. ಮಾಧ್ಯಮಗಳನ್ನು ನಿಯಂತ್ರಿಸಬೇಕೆ?
ಸದನದಲ್ಲಿ ಮಾತನಾಡಿದ ಬಹುತೇಕರ ದೂರು ಹೆಚ್ಚಾಗಿ ದೃಶ್ಯ ಮಾಧ್ಯಮಗಳ ವಿರುದ್ಧವಿತ್ತು. ದೃಶ್ಯ ಮಾಧ್ಯಮಗಳನ್ನು ದಿನನಿತ್ಯ ನೋಡುವವರು ಹಾಗೂ ಅಪರೂಪಕ್ಕೆ ನೋಡುವವರಿಗೂ ಅವುಗಳಲ್ಲಿನ ಅತಿಗಳು ಎದ್ದು ಕಾಣುತ್ತವೆ. ದೃಶ್ಯ ಮಾಧ್ಯಮಗಳ ವಿರುದ್ಧ ದೂರುಗಳ ದೊಡ್ಡ ಪಟ್ಟಿಯನ್ನೇ ಮಾಡಬಹುದು. ಅಗತ್ಯವಿಲ್ಲದ ಸುದ್ದಿಗಳನ್ನು ವೈಭವೀಕರಿಸುವುದು, ಒಂದೇ ವಿಷಯವನ್ನು ಹಿಡಿದು ಎಳೆದಾಡುವುದು, ಸುದ್ದಿ ತಿಳಿಸಬೇಕಾದ ಪತ್ರಕರ್ತರು ನ್ಯಾಯಾಧೀಶರ ಅವತಾರವೆತ್ತವರಂತೆ ತೀರ್ಪು ನೀಡಿಬಿಡುವುದು…… ಪಟ್ಟಿ ಇನ್ನೂ ದೊಡ್ಡದಿದೆ ಬಿಡಿ. ಈ ಕಾರಣಗಳನ್ನು ನೆಪವಾಗಿಟ್ಟುಕೊಂಡು ಮಾಧ್ಯಮಗಳನ್ನು ನಿಯಂತ್ರಿಸುವುದು ಪ್ರಜಾಪ್ರಭುತ್ವದಲ್ಲಿ ತಪ್ಪು ನಿರ್ಧಾರವೆನ್ನುವುದರಲ್ಲಿ ಯಾವುದೇ ಅನುಮಾನ ಬೇಡ. ಸ್ವಯಂ ನಿಯಂತ್ರಣವನ್ನು ಮಾಧ್ಯಮಗಳೇ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಮಾಧ್ಯಮ ಮಂದಿಗೆ ಸೂಕ್ತ ತರಬೇತಿ ನೀಡುವ ಕೆಲಸವಾಗಬೇಕೇ ಹೊರತು ಮಾಧ್ಯಮಗಳು ತಪ್ಪು ಮಾಡುತ್ತಿವೆ, ಅವುಗಳ ಕೈಕಟ್ಟಿ ಹಾಕಿಬಿಡೋಣ ಎನ್ನುವುದು ಸರ್ವಾಧಿಕಾರಿ ಧೋರಣೆಯೇ ಹೊರತು ಮತ್ತೇನಲ್ಲ. ನಮ್ಮ ದೇಶದಲ್ಲಿ ಅಧಿಕೃತವಾಗಿ ಮಾಧ್ಯಮಗಳ ಕತ್ತು ಹಿಸುಕಿದ್ದು ಇಂದಿರಾ ಗಾಂಧಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ಮಾತ್ರ ಎನ್ನುವುದನ್ನು ನೆನಪಿಡಬೇಕು. ದೃಶ್ಯ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರುವ ನೆಪದಲ್ಲಿ ಪತ್ರಿಕೆಗಳ ಮೇಲೆ, ಅಂತರ್ಜಾಲದ ಮೇಲೆ ನಿಯಂತ್ರಣ ಹೇರುವ ಹುನ್ನಾರವನ್ನು ರಾಜಕಾರಣಿಗಳು ನಡೆಸಿದರೆ ಅಚ್ಚರಿಯೇನಿಲ್ಲ. ದೃಶ್ಯ ಮಾಧ್ಯಮಗಳು ಸರಿಯಿಲ್ಲ ಎಂದಂದುಕೊಂಡಿರುವ ರಾಜಕೀಯ ಪಕ್ಷಗಳು ಅವುಗಳ ಮೇಲಿನ ಕೋಪ ತೀರಿಸಿಕೊಳ್ಳಲೇಬೇಕೆಂದಿದ್ದರೆ ತಮ್ಮ ಪಕ್ಷದ ವಕ್ತಾರರನ್ನು ಯಾವುದೇ ವಾಹಿನಿಗೂ ಕಳುಹಿಸದ ನಿರ್ಧಾರವನ್ನು ತೆಗೆದುಕೊಂಡರೆ ಆಯಿತಲ್ಲ! 

ಮಾಧ್ಯಮಗಳ ಪಕ್ಷಪಾತತನದ ಬಗ್ಗೆ, ಅವುಗಳ ಅತಿರಂಜಿತ ವರದಿಗಳ ಬಗ್ಗೆ, ಸತ್ಯಾಸತ್ಯತೆಯನ್ನು ಮನಗಾಣದೆ ಸುದ್ದಿಯನ್ನು ಪ್ರಸಾರ ಮಾಡುವ ಬಗ್ಗೆ, ಮೌಡ್ಯತೆಯನ್ನು ಅವರು ಹರಡುವ ಬಗ್ಗೆ, ಬ್ರಾಮಣ್ಯದ ವಕ್ತಾರರಂತೆ ಅವರು ವರ್ತಿಸುವ ಬಗ್ಗೆ ನಮಗೇನೇ ತಕರಾರುಗಳಿರಬಹುದು. ಆದರೆ ಇವುಗಳನ್ನೇ ನೆಪವಾಗಿಸಿಕೊಂಡು ಮಾಧ್ಯಮಗಳ ಕತ್ತು ಹಿಸುಕಲೆತ್ನಿಸುವ ಸರಕಾರದ ಪ್ರಯತ್ನಗಳನ್ನು ಯಾವುದೇ ಮುಲಾಜಿಲ್ಲದೆ ವಿರೋಧಿಸಬೇಕು. 

1950ರಲ್ಲಿ ಪತ್ರಿಕಾ ಸಮಾವೇಶವೊಂದರಲ್ಲಿ ಅಂದಿನ ಪ್ರಧಾನಿ ನೆಹರೂ ಹೇಳಿದ ಮಾತುಗಳನ್ನೊಮ್ಮೆ ನೆನಪಿಸಿಕೊಳ್ಳಬೇಕು: “ನನ್ನ ಪ್ರಕಾರ ಪತ್ರಿಕಾ ಸ್ವಾತಂತ್ರ್ಯವೆಂಬುದು ಕೇವಲ ಘೋಷಣೆಯಲ್ಲ, ಪ್ರಜಾಪ್ರಭುತ್ವ ಪ್ರಕ್ರಿಯೆಗೆ ಅತ್ಯಗತ್ಯವಾಗಿ ಬೇಕಾದ ಸ್ವಾತಂತ್ರ್ಯವದು. ಮಾಧ್ಯಮದ ಸ್ವಾತಂತ್ರ್ಯವು ಸರಕಾರಕ್ಕೆ ಇಷ್ಟವಾಗದೇ ಇರಬಹುದು, ಮಾಧ್ಯಮಗಳನ್ನು ಸರಕಾರಗಳು ಅಪಾಯಕಾರಿ ಎಂದೇ ಪರಿಗಣಿಸಿರಬಹುದು, ಆದರೂ ಪತ್ರಿಕಾ ಸ್ವಾತಂತ್ರ್ಯದಲ್ಲಿ ಸರಕಾರ ಮೂಗು ತೂರಿಸುವುದು ತಪ್ಪು ಎನ್ನುವುದೇ ನನ್ನ ಸ್ಪಷ್ಟ ಅಭಿಪ್ರಾಯ. ನಿಯಂತ್ರಣ ಹೇರುವುದರ ಮೂಲಕ ನೀವು ಏನನ್ನೂ ಬದಲಾಯಿಸುವುದಿಲ್ಲ; ಕೆಲವು ಸಂಗತಿಗಳು ಚರ್ಚೆಯಾಗದಂತೆ ಅವುಗಳ ಕತ್ತು ಹಿಸುಕಬಲ್ಲಿರಷ್ಟೇ, ಆ ಸಂಗತಿಯ ಹಿಂದಿನ ಯೋಚನೆ ಮತ್ತು ಚಿಂತನೆ ಮತ್ತಷ್ಟು ಹರಡುತ್ತದೆ. ಹೀಗಾಗಿ, ಮಾಧ್ಯಮ ಸ್ವಾತಂತ್ರ್ಯ ಸಂಪೂರ್ಣವಾಗಿರಬೇಕು, ಮುಕ್ತವಾಗಿರಬೇಕು, ಆ ಸ್ವಾತಂತ್ರ್ಯವನ್ನು ತಪ್ಪಾಗಿ ಉಪಯೋಗಿಸಿದಾಗ ಅನಾಹುತಗಳು ಆದರೂ ಸಹ ನಿಯಂತ್ರಿತ ಮಾಧ್ಯಮಕ್ಕಿಂತ ಉತ್ತಮ”.

No comments:

Post a Comment