Mar 22, 2017

ಪದ್ಯವಾಗ ಹೊರಟ ಗದ್ಯದಂತ ಸಾಲುಗಳು….

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ರಾಜದ್ರೋಹ!
ಒಮ್ಮೊಮ್ಮೆ ಹೀಗಾಗಿ ಬಿಡುತ್ತೆ:
ಸತ್ಯ ಹೇಳೋದು
ಸುಳ್ಳನ್ನ ಧಿಕ್ಕರಿಸೋದು
ರಾಜದ್ರೋಹ ಆಗುತ್ತೆ!
ಕವಿತೆ ಬರೆಯೋದು
ಕಥೆ ಹೇಳೋದು
ರಾಜದ್ರೋಹ ಆಗುತ್ತೆ!

ಕೊಳಕನ್ನ ಕೊಳಕೆಂತಲೂ
ಕೆಡುಕನ್ನ ಕೆಡುಕೆಂತಲೂ ಹೇಳೋದು 
ರಾಜದ್ರೋಹ ಆಗುತ್ತೆ!

ಹಾಗಂತ:
ಮೌನವಾಗಿದ್ದುಬಿಡೋದು
ಸತ್ಯದ ಜಾಗದಲ್ಲಿ ಸುಳ್ಳನ್ನ ಸ್ಥಾಪಿಸೋದು
ಕೆಡುಕನ್ನ ಒಳಿತೆಂದು ಒಪ್ಪಿಕೊಳ್ಳೋದು
ಜನದ್ರೋಹ ಆಗುತ್ತೆ!

*******
ಹೇಗಾದರು ಮಾಡಿ ದೇಶಭಕ್ತ ಅನ್ನಿಸಿಕೊ!

ನೀಟಾಗಿ ಶೇವ್ ಮಾಡು
ಅಪ್ಪಿತಪ್ಪಿ ಗಡ್ಡ ಬಿಡಬೇಡ
ಸಾದ್ಯವಾದಷ್ಟು ಪಂಚೆ ಸುತ್ತಿಕೊ
ನಾಲ್ಕು ಜನ ಸೇರಿದಾಗ
ದೇಶದ ಬಗ್ಗೆ ಮಾತಾಡು
ಪಾಕಿಸ್ತಾನದ ವಿಷಯ ಬಂದಾಗ ಕಣ್ಣು ಕೆಕ್ಕರಿಸು
ಕ್ರಿಕೇಟಲ್ಲಿ ಗೆದ್ದಾಗ ಬೋಲೋ ಭಾರತ್ ಮಾತಾಕಿ ಜೈ ಅನ್ನು
ರಾಷ್ಟ್ರ ಪ್ರೇಮದ ವಿಷಯ ಬಂದಾಗ 
ಐದು ಸಾವಿರ ವರ್ಷಗಳ ಸಂಸ್ಕೃತಿಯ
ವಕ್ತಾರನಂತೆ ಫೋಸುಕೊಡು
ಹಸು ಕಂಡೊಡನೆ ಮುಟ್ಟಿ ನಮಸ್ಕಾರ ಮಾಡು
ಕಾಯಿಲೆಯವರ ಕಂಡರೆ ಗೋಮೂತ್ರದ ಮಹತ್ವ ಸಾರು
ಹೆಣ್ಣು ಮಕ್ಕಳ ಮಾತೆಯರೆ ಎಂದು ಸಂಬೋದಿಸು
ಕೆಂಬಾವುಟ ಕಂಡರೆ ಥೂ ಎಂದು ಉಗಿ
ಯಾರಾದರು ಪ್ರಶ್ನೆ ಕೇಳಿದರೆ
ಅವನನ್ನು ದೇಶದ್ರೋಹಿಯೆಂದು ಕರಿ
ಒಟ್ಟಿನಲ್ಲಿ ದೇಶಭಕ್ತ ಅನ್ನಿಸಿಕೊ
ಅದರ ಸೋಗಿನಲ್ಲಿ ಸಿಕ್ಕ ಕುರ್ಚಿಯ ಹಿಡಿದುಕೊ!

No comments:

Post a Comment