Feb 18, 2017

ಬರಪರಿಸ್ಥಿತಿಯ ವೀಕ್ಷಣೆ ಎಂಬ ಕಪಟ ನಾಟಕವೂ ಬಡಪಾಯಿ ರೈತರೂ!

ಕು.ಸ.ಮಧುಸೂದನ ರಂಗೇನಹಳ್ಳಿ
ಅಂತೂ ಕೇಂದ್ರ ಸರಕಾರ ಬರಪರಿಹಾರಕ್ಕೆಂದು ಕರ್ನಾಟಕಕ್ಕೆ ನಾಲ್ಕು ನೂರಾ ಐವತ್ತು ಕೋಟಿ ರೂಪಾಯಿಗಳ ಮೊದಲ ಕಂತನ್ನು ಆರ್ಥಿಕ ಇಲಾಖೆಯ ವತಿಯಿಂದ ಬಿಡುಗಡೆ ಮಾಡಿದೆ. ಕೇಂದ್ರ ಕಳುಹಿಸಿದ್ದ ಬರ ಅಧ್ಯಯನ ತಂಡ ಒಂದೆರಡು ದಿನ ಬರಪೀಡಿತ ಪ್ರದೇಶಗಳಲ್ಲಿ ಅಡ್ಡಾಡಿ ಸಲ್ಲಿಸಿದ ವರದಿಯ ಪರಿಣಾಮವಾಗಿ ಕೇಂದ್ರ ಸುಮಾರು ಒಂದು ಸಾವಿರದ ಏಳುನೂರು ಕೋಟಿ ರೂಪಾಯಿಗಳ ಪರಿಹಾರವನ್ನು ಘೋಷಣೆ ಮಾಡಿದ್ದು, ಈಗದರ ಮೊದಲ ಕಂತು ಬಿಡುಗಡೆಯಾಗಿದೆ. ವಿಪರ್ಯಾಸ ಎಂದರೆ ತನ್ನ ರಾಜ್ಯದ ಬರಪರಿಹಾರ ಕಾರ್ಯಗಳಿಗೆ ನಮ್ಮ ರಾಜ್ಯ ಕೇಂದ್ರವನ್ನು ಕೇಳಿದ್ದು ಸರಿ ಸುಮಾರು ನಾಲ್ಕು ಸಾವಿರ ಕೋಟಿರೂಪಾಯಿಗಳನ್ನು! ಇರಲಿ, ಬಿಡುಗಡೆಯಾದ ಪರಿಹಾರ ಮೊತ್ತದ ಬಗ್ಗೆ ನಾನಿಲ್ಲ ಮಾತನಾಡಲು ಇಚ್ಚಿಸುವುದಿಲ್ಲ. ನನ್ನ ತಕರಾರು ಇರುವುದು ಬರದ ಅಧ್ಯಯನಕ್ಕೆಂದು ರಾಜ್ಯಗಳಗೆ ಬೇಟಿ ನೀಡುವ ಕೇಂದ್ರದ ತಂಡಗಳು ಬರಪ್ರದೇಶಗಳ ವೀಕ್ಷಣೆ ಮಾಡುವ ರೀತಿಯ ಬಗ್ಗೆ.
ಇದರಲ್ಲಿ ಮೊದಲು ಉದ್ಭವವಾಗುವ ಪ್ರಶ್ನೆ ಎಂದರೆ, ರಾಜ್ಯಕ್ಕೆ ಬರುವ ತಂಡ ಬರಗಾಲ ಎದುರಿಸುತ್ತಿರುವ ಯಾವ ಪ್ರದೇಶಗಳಿಗೆ ಬೇಟಿ ನೀಡಬೇಕೆಂಬುದನ್ನು ನಿರ್ದರಿಸುವವರು ಯಾರು ಎನ್ನುವುದಾಗಿದೆ. ಕೇಂದ್ರ ತಂಡಕ್ಕೆ ರಾಜ್ಯದ ಭೌಗೋಳಿಕ ಮಾಹಿತಿ ಇಲ್ಲದಿರುವುದರಿಂದ ರಾಜ್ಯ ಸರಕಾರಗಳ ಉನ್ನತ ಅಧಿಕಾರಿಗಳೇ ಕೇಂದ್ರ ತಂಡದ ಪ್ರವಾಸದ ರೂಪುರೇಷೆಯನ್ನು ನಿಗದಿ ಪಡಿಸುತ್ತಾರೆ. ಹೀಗೆ ಬರುವ ಕೇಂದ್ರದ ತಂಡಗಳೇನು ರಾಜ್ಯದಲ್ಲಿ ವಾರಗಟ್ಟಲೆಯೇನು ತಂಗುವುದಿಲ್ಲ ಮತ್ತು ಪ್ರವಾಸ ಕೈಗೊಳ್ಳುವುದಿಲ್ಲ. ಹೆಚ್ಚೆಂದರೆ ಅವರು ಪ್ರವಾಸ ಕೈಗೊಳ್ಳಲಿರುವ ಎರಡು ಮೂರು ದಿನಗಳಲ್ಲಿಯೇ ಬರದ ಪರಿಣಾಮಗಳನ್ನು ಅವರು ಅಧ್ಯಯನ ಮಾಡಬೇಕಾಗುತ್ತದೆ. ಹೀಗೆ ಇಷ್ಟು ಅಲ್ಪಾವಧಿಯಲ್ಲಿ ಬರದಿಂದ ಸಂಕಷ್ಟ ಎದುರಿಸುತ್ತಿರುವ ರೈತರ ಮತ್ತು ಜಾನುವಾರುಗಳ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದು ಸಾದ್ಯವೇ? ಎಂಬುದೇ ಇಲ್ಲಿರುವ ಮುಖ್ಯ ಪ್ರಶ್ನೆಯೂ ಮತ್ತು ಕುತೂಹಲವೂ ಜನರದಾಗಿದೆ. ಈ ಪ್ರಶ್ನೆ ಜನರ ಮನಸಲ್ಲಿ ಉದ್ಭವವಾಗಲು ಬಹಳ ಪ್ರಮುಖ ಕಾರಣವೆಂದರೆ ಈ ಬಾರಿ ಬರ ಅಧ್ಯಯನಕ್ಕೆಂದು ಬಂದ ಕೇಂದ್ರ ತಂಡ ಪ್ರವಾಸ ಮಾಡಿದ ರೀತಿ ಮತ್ತು ಅದರ ಸದಸ್ಯರು ತೋರಿಸಿದ ದಿವ್ಯನಿರ್ಲಕ್ಷ್ಯ!

ಇಲ್ಲಿ ನಾವು ಸ್ವಲ್ಪ ವಿವರವಾಗಿ ಈ ಬರವೀಕ್ಷಣೆಯ ಪ್ರವಾಸದ ಕಾರ್ಯಕ್ರಮಗಳ ಬಗ್ಗೆ ನೋಡೋಣ. ಕೇಂದ್ರದಿಂದ ಬರುವ ತಂಡವನ್ನು ವಿದಾನಸೌದದ ಹಿರಿಯ ಅಧಿಕಾರಿಗಳು ಸ್ವಾಗತಿಸಿ, ಆ ತಂಡ ಪ್ರವಾಸ ಮಾಡಬೇಕಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮುಂದಿನ ಜವಾಬ್ದಾರಿ ಹೆಗಲಿಗೇರಿಸುತ್ತಾರೆ. ಜಿಲ್ಲಾ ಕೇಂದ್ರದಲ್ಲಿ ತಂಡವನ್ನು ಎದುರುಗೊಳ್ಳುವ ಜಿಲ್ಲಾಧಿಕಾರಿ ತನ್ನ ಕಂದಾಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಹೇಳಿ ತಂಡ ಬೇಟಿ ನೀಡಬೇಕಾದ ಪ್ರದೇಶಗಳ ಬಗ್ಗೆ ನಿರ್ದರಿಸಲು ತಿಳಿಸಿರುತ್ತಾರೆ. ಹಾಗಾಗಿ ಆ ಅಧಿಕಾರಿಗಳು ಕೇಂದ್ರ ತಂಡ ಪ್ರವಾಸ ಮಾಡಲು ಒಂದು ರೂಟ್ ಮ್ಯಾಪನ್ನು ಸಿದ್ದಪಡಿಸಿ, ಆ ದಾರಿಯಲ್ಲಿ ತಂಡ ಹೋಗುವಾಗ ಯಾವ್ಯಾವ ಸ್ಥಳಗಳಲ್ಲಿ ರೈತರ ಭೂಮಿಯನ್ನು, ನಾಶಹೊಂದಿದ ಬೆಳೆಯನ್ನು, ನೀರಿರದೆ ಒಣಗಿರುವ ಕೆರೆಕಟ್ಟೆಗಳನ್ನು ತೋರಿಸಬೇಂಬುದನ್ನು ಮೊದಲೇ ಗುರುತು ಮಾಡಿಟ್ಟುಕೊಂಡಿರುತ್ತಾರೆ. ಜೊತೆಗೆ ಮಾರ್ಗಮದ್ಯದ ಯಾವ ಹಳ್ಳಿಗಳಲ್ಲಿ ತಂಡದ ಸದಸ್ಯರು ರೈತರ ಜೊತೆ ಮತ್ತು ಪಂಚಾಯತ್ ಮಟ್ಟದ ಅಧಿಕಾರಿಗಳ ಜೊತೆ ಮಾತಾಡಬೇಕೆಂದನ್ನೂ ಮೊದಲೇ ನಿಷ್ಕಷರ್ೆ ಮಾಡಿಬಿಟ್ಟಿರುತ್ತಾರೆ. ಇವೆಲ್ಲಕ್ಕಿಂತ ಮುಖ್ಯವಾಗಿ ಕೇಂದ್ರ ತಂಡದ ಸದಸ್ಯರಿಗೆ ಬೆಳಗಿನ ಉಪಹಾರ, ಮದ್ಯಾಹ್ನದ ಬೋಜನ, ರಾತ್ರಿಯ ಭೋಜನ, ಮತ್ತು ತಂಗುದಾಣಗಳ ಬಗ್ಗೆಯೂ ಬಹಳ ಮುತುವರ್ಜಿಯಿಂದ ವ್ಯವಸ್ಥೆ ಕಲ್ಪಿಸಿರುತ್ತಾರೆ. ಇದನ್ನು ಮಾತ್ರ ಎಷ್ಟು ಆಸಕ್ತಿಯಿಂದ ಮಾಡಿರುತ್ತಾರೆ ಎಂದರೆ ಎಲ್ಲಿ ತಂಡದ ಸದಸ್ಯರು ತಮ್ಮ ಆತಿಥ್ಯಕ್ಕೆ ತೃಪ್ತರಾಗದೆ ತಮ್ಮ ರಾಜ್ಯಕ್ಕೆ ವ್ಯತಿರಿಕ್ತವಾದ ವರದಿಯನ್ನು ನೀಡಿ ಬಿಡುತ್ತಾರೊ ಎಂಬಂ ಬೀತಿಯಿಂದಲೇ ಸರ್ವ ಸಿದ್ದತೆಗಳನ್ನು ಲೋಪವಿರದೆ ಮಾಡಿರುತ್ತಾರೆ.

ಇಷ್ಟೆಲ್ಲ ಸಿದ್ದತೆಗಳ ನಂತರ ಪ್ರವಾಸ ಮಾಡುವ ಕೇಂದ್ರದ ತಂಡಗಳು ರಾಜ್ಯದ ಕೆಳಮಟ್ಟದ ಅಧಿಕಾರಿಗಳು ತೋರಿಸುವ ಹೊಲಗದ್ದೆಗಳನ್ನು ಕೆರೆ ಕಟ್ಟೆಗಳನ್ನು ಪ್ರವಾಸಿಗರಂತೆ ನೋಡುತ್ತಾರೆ. ಹೊರದೇಶದ ಪ್ರವಾಸಿಗರಂತೆ ಪೋಟೊಗಳನ್ನು ಕ್ಕಿಕ್ಕಿಸಿಕೊಂಡು ಹೋಗುತ್ತಾರೆ. ನಮ್ಮ ಅಧಿಕಾರಿಗಳು ಎಷ್ಟು ಜವಾಬ್ದಾರಿಯಿಂದ ಈ ಪ್ರವಾಸದ ಹಾದಿಯನ್ನು ನಿಗದಿ ಮಾಡಿರುತ್ತಾರೆ ಎಂದರೆ ತಂಡದ ವಾಹನಗಳು ಕುಲುಕದಂತಹ ಮತ್ತು ರಸ್ತೆಯ ಎರಡೂ ಪಕ್ಕದಲ್ಲಿ ಹೊಲಗದ್ದೆಗಳು ಇರುವಂತಹ ಹಳ್ಳಿಗಳಿಗಷ್ಟೇ ಕರೆದುಕೊಂಡು ಹೋಗುತ್ತಾರೆ. ಕೆಲವು ಕಡೆ ವಾಹನಗಳಿಂದ ಇಳಿಯುವ ತಂಡದ ಸದಸ್ಯರು ಒಂದೆರಡು ನಿಮಿಷಗಳಲ್ಲಿ ಸ್ಥಳ ಪರಿಶೀಲನೆ ಮಾಡಿ ಪುನ: ವಾಹನಗಳನ್ನು ಏರುತ್ತಾರೆ. ಆ ಜಮೀನಿನಲ್ಲಿರುವ ರೈತರನ್ನಾಗಲಿ, ಕೃಷಿ ಕಾರ್ಮಿಕರನ್ನಾಗಲಿ ಮಾತಾಡಿಸುವ ಸಾಹಸವನ್ನು ಅವರು ಮಾಡುವುದಿಲ್ಲ. ಯಾಕೆಂದರೆ ಮೊದಲಿಗೇ ಅವರಿಗೆ ಬಾಷೆಯ ಸಮಸ್ಯೆ, ಎರಡನೆಯದಾಗಿ ಮಾತಾಡಿಸಲು ಹೋದರೆ ರೈತ ಸಮುದಾಯವೇ ಅವರನ್ನು ಮುತ್ತಿಕೊಂಡು ಸಂಜೆಯವರೆಗು ತಮ್ಮ ಅಹವಾಲುಗಳನ್ನು ಹೇಳಿಕೊಳ್ಳಲು ಎಲ್ಲಿ ಶುರು ಮಾಡುತ್ತಾರೆಯೊ ಎಂಬ ಭಯ.

ತಮಾಷೆ ಎಂದರೆ ನೀರಿರದೆ ಒಣಗಿರುವ ಕೃಷಿಭೂಮಿಯನ್ನು ನೋಡಿದಾಕ್ಷಣ ಅದರ ಒಡೆಯನ ಕಷ್ಟ ಸದಸ್ಯರಿಗೆ ಅರ್ಥವಾಗಿ ಬಿಡುತ್ತದೆ ಎಂಬ ಭ್ರಮೆ ನಮ್ಮ ಅಧಿಕಾರಶಾಹಿಗೆ ಇರುವುದಾಗಿದೆ. ವಾಸ್ತವದಲ್ಲಿ ಒಂದೊಂದು ತುಂಡು ಭೂಮಿಯ ರೈತನದೂ ಒಂದೊಂದು ರೀತಿಯ ಬವಣೆ ಇದೆಯೆನ್ನುವುದು ಯಾವ ಸದಸ್ಯರಿಗೂ ಅರ್ಥವಾಗುವಂತದ್ದಲ್ಲ. ಇನ್ನು ಬಾಷೆಯ ಸಮಸ್ಯೆ ಬಗ್ಗೆ ನೋಡೋಣ. ರೈತರು ಏನು ಹೇಳುತ್ತಾರೊ ಅದನ್ನು ಅಧಿಕಾರಿಗಳು ಇಂಗ್ಲೀಷಿಗೆ ಅನುವಾದ ಮಾಡಿ ತಂಡದ ಸದಸ್ಯರಿಗೆ ಹೇಳಬೇಕು. ಆದರೆ ನಮ್ಮ ಅಧಿಕಾರಿಗಳು ಎಷ್ಟರ ಮಟ್ಟಿಗೆ ರೈತರ ಕಷ್ಟಕಾರ್ಪಣ್ಯಗಳನ್ನು ಇಂಗ್ಲೀಷಲ್ಲಿ ಸದಸ್ಯರಿಗೆ ಹೇಳುತ್ತಾರೆಯೊ ದೇವರಿಗೇ ಗೊತ್ತು! ಇನ್ನು ರೈತರನ್ನೇ ಮಾತಾಡಿಸಲು ಸಮಯವಿರದ ತಂಡದ ಸದಸ್ಯರಿಗೆ ಅವರ ಜಾನುವಾರುಗಳ ಸಂಕಷ್ಟವನ್ನು ನೋಡಲು ಸಾದ್ಯವಾಗುವುದಾದರು ಹೇಗೆ? ಕಂಡರೂ ಜಾನುವಾರುಗಳು ಸದಸ್ಯರಿಗೆ ಹೇಗೆ ತಮ್ಮ ಹಸಿವು ಮತ್ತು ಬಾಯಾರಿಕೆಯನ್ನು ವಿವರಿಸಿಯಾವು? ಹೀಗೆ ಒಂದು ಹಳ್ಳಿಯಲ್ಲಿ ಹತ್ತು ನಿಮಿಷಕ್ಕಿಂತ ಹೆಚ್ಚು ಹೊತ್ತು ಇರದ ತಂಡದ ಸದಸ್ಯರದ್ದು ಹಾರಿಕೆಯ ಬೇಟಿಗಳಾಗಿರುತ್ತವೆ. ಮೊನ್ನೆ ಬಂದು ಹೋದ ಕೇಂದ್ರ ತಂಡದ್ದೂ ಇದೇ ಕತೆ: ಯಾಕೆಂದರೆ ಯಾವುದೇ ಒಂದು ಹಳ್ಳಯಲ್ಲು ತಂಡ ಹತ್ತು ನಿಮಿಷಕ್ಕಿಂತ ಹೆಚ್ಚು ಹೊತ್ತು ಇದ್ದು ಸಮಸ್ಯೆ ಆಲಿಸಲೇ ಇಲ್ಲ.

ಇದಕ್ಕೆ ಕಾರಣ ಹಳ್ಳಿಗಳ ಬಗ್ಗೆಯಾಗಲಿ, ರೈತಾಪಿ ಜನರ ಕಷ್ಟ ಕಾರ್ಪಣ್ಯಗಳ ಬಗ್ಗೆಯಾಗಲಿ, ಬರಗಾಲದಲ್ಲಿ ಜಾನುವಾರುಗಳು ಅನುಭವಿಸುವ ಯಾತನೆಗಳನ್ನಾಗಲಿ ಅರ್ಥಮಾಡಿಕೊಳ್ಳಲಾಗದಂತಹ ಒಂದು ಅಧಿಕಾಶಾಹಿಯನ್ನು ನಾವು ಸೃಷ್ಠಿಸಿಕೊಂಡಿರುವುದಾಗಿದೆ. ನಮ್ಮ ರಾಜ್ಯದ ಸ್ಥಳೀಯ ಅಧಿಕಾರಿಗಳಿಗೇನೆ ಈ ಬರದ ಬಗ್ಗೆ ಸೂಕ್ಷ್ಮ ಮಾಹಿತಿಯಾಗಲಿ, ಅವುಗಳಿಗೆ ಸ್ಪಂದಿಸುವ ಕಾಳಜಿಯಾಗಲಿ ಇಲ್ಲವಾಗಿದ್ದು, ಇನ್ನು ಕೇಂದ್ರದ ತಂಡದಿಂದ ಅದನ್ನು ನಿರೀಕ್ಷಿಸುವುದು ನಮ್ಮ ಮೂರ್ಖತನವಾಗುತ್ತದೆ.

ಇದೆಲ್ಲ ಹಾಳಾಗಿ ಹೋಗಲಿ ನಮ್ಮ ರಾಜ್ಯದ ಬರಗಾಲದ ವ್ಯಾಪ್ತಿ ಎಷ್ಟು? ಎಷ್ಟು ಹೆಕ್ಟೇರ್ ಭೂಮಿಯಲ್ಲಿನ ಬೆಳೆ ನೀರಿರದೆ ಒಣಗಿ ಹೋಗಿದೆ? ಅಂತಹ ಭೂಮಿಯಲ್ಲಿ ಯಾವ ಯಾವ ಬೆಳೆಗಳನ್ನು ಬೆಳೆಯಲಾಗುತ್ತಿತ್ತು? ಮತ್ತು ಆ ಬೆಳೆಗೆ ರೈತರು ಹಾಕಿರಬಹುದಾದ ಬಂಡವಾಳದ ಮೊತ್ತವೆಷ್ಟು? ಇದರಿಂದ ಸಂಕಷ್ಟಕ್ಕೀಡಾಗಿರುವ ಜನಸಂಖ್ಯೆಯಾದರೂ ಎಷ್ಟು? ಎಷ್ಟು ಸಾವಿರ ಜಾನುವಾರುಗಳು ಬರಗಾಲದ ಹೊಡೆತಕ್ಕೆ ತತ್ತರಿಸಿವೆ ಎಂಬ ಅಂಕಿಅಂಶಗಳು ರಾಜ್ಯಸರಕಾರದ ಬಳಿಯಾದರೂ ಇವೆಯೇ ಎಂದು ನೋಡಿದರೆ, ಇಲ್ಲ. ಅದರ ಬಳಿ ಇರುವುದೆಲ್ಲ ಅಂದಾಜು ಅಂಕಿಸಂಖ್ಯೆಗಳು ಮಾತ್ರ. ಒಂದು ವರ್ಷದ ಬರಗಾಲದಿಂದ ಆಗಬಹುದಾದ ಹಾನಿಯನ್ನು ಕರಾರುವಕ್ಕಾಗಿ ಲೆಕ್ಕಹಾಕಿಡುವ ಪರಿಪಾಠವೇ ನಮ್ಮ ಸರಕಾರಗಳಿಗಿಲ್ಲವಾಗಿದ್ದು ಒಂದೆರಡು ದಿನದ ಪ್ರವಾಸದದಿಂದ ಕೇಂದ್ರ ತಂಡ ಲೆಕ್ಕಹಾಕಿ ಬಿಡುತ್ತದೆ ಎಂದು ನಂಬುವುದಾದರು ಹೇಗೆ. ಯಾವುದೇ ಸರಕಾರಗಳೂ ಬರಗಾಲದ ಹೊಡೆತಕ್ಕೆ ಸಿಕ್ಕ ಒಟ್ಟು ಜನಸಂಖ್ಯೆಯ ಬಗ್ಗೆಯಾಗಲಿ, ಜಾನುವಾರುಗಳ ಬಗ್ಗೆಯಾಗಲಿ ನಿಖರವಾದ ಮಾಹಿತಿಯನ್ನು ಹೊಂದಿಲ್ಲವಾದ್ದರಿಂದ ಬರ ಪರಿಹಾರಕ್ಕೆ ಎಷ್ಟು ಹಣ ಬೇಕಾಗುತ್ತದೆ ಎಂಬುದು ಸಹ ಅಧಿಕಾರಿಗಳ ಊಹಾತ್ಮಕ ಲೆಕ್ಕಾಚಾರ ಮಾತ್ರವಾಗಿರುತ್ತದೆ.

ಇನ್ನು ಬರಪರಿಸ್ಥಿತಿಯ ಅಧ್ಯಯನ ಮಾಡಿಹೋದ ಕೇಂದ್ರದ ತಂಡ ಮಾಡುವುದಾದರು ಕಣ್ಣೊರೆಸುವ ಕೆಲಸವನ್ನೇ, ರಾಜ್ಯ ಸರಕಾರ ಕೇಂದ್ರಕ್ಕೆ ಎಷ್ಟು ಹಣದ ಮನವಿ ಸಲ್ಲಿಸಿರುತ್ತದೆಯೊ ಅದರಲ್ಲಿ ಮೂರನೆ ಒಂದು ಭಾಗವನ್ನೊ, ಎರಡು ಭಾಗವನ್ನೊ ರಾಜ್ಯಕ್ಕೆ ನೀಡಲು ಯಾಂತ್ರಿಕವಾಗಿ ಶಿಫಾರಸ್ಸು ಮಾಡುತ್ತದೆ. ಇನ್ನು ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಸರಕಾರಗಳಿದ್ದರೆ ಕೇಳಿದಷ್ಟಾದರು ಸಿಗುತ್ತದೆ. ಆದರೆ ವರ್ತಮಾನದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೂ, ಕೇಂದ್ರದಲ್ಲಿ ಬಾಜಪದ ಸರಕಾರವೂ ಇದ್ದು ಇವೆರಡರ ರಾಜಕೀಯ ಜಟಾಪಟಿಯಲ್ಲಿ ಸಹಜವಾಗಿಯೇ ಕೇಂದ್ರ ಹಣ ಬಿಡುಗಡೆಯಲ್ಲಿ ವಿಳಂಬನೀತಿ ಅನುಸರಿಸುತ್ತದೆ. ಕಾರಣ ಕೇಳಿದರೆ ಕಳೆದ ವರ್ಷ ನೀಡಿದ ಹಣದ ಖರ್ಚುವೆಚ್ಚಗಳ ವಿವರಗಳನ್ನು ನೀಡಿಲ್ಲವಾದ್ದರಿಂದ ಹಣ ಬಿಡುಗಡೆಯಾಗಿಲ್ಲವೆಂಬ ಯಾಂತ್ರಿಕ ಉತ್ತರ ಸಿಗುತ್ತದೆ. ನಂತರದಲ್ಲಿ ರಾಜಕೀಯ ಆರೋಪಗಳು-ಪ್ರತ್ಯಾರೋಪಗಳು ನಡೆದು ಕೊನೆಗೊಂದು ದಿನ ಕೇಂದ್ರತಂಡ ಶಿಫಾರಸ್ಸು ಮಾಡಿದ ಹಣದಲ್ಲಿ ಮತ್ತಷ್ಟು ಕಡಿತ ಮಾಡಿ ಕೇಂದ್ರ ಹಣ ಬಿಡುಗಡೆ ಮಾಡುತ್ತದೆ. ಹಣ ಕಡಿಮೆಯಾಗಿದ್ದಕ್ಕೆ ಆಕ್ರೋಶಗೊಳ್ಳುವ ರಾಜ್ಯ ಸರಕಾರದವರು ಕೇಂದ್ರದ ಮಲತಾಯಿ ಧೋರಣೆಯ ಬಗ್ಗೆ ಜನರ ಮುಂದೆ ಬಾಷಣ ಬಿಗಿಯ ತೊಡಗುತ್ತಾರೆ. ವಿರೋಧಪಕ್ಷಗಳು ಇದು ರಾಜ್ಯಸರಕಾರದ ವೈಫಲ್ಯವೆಂದು ಗುಡುಗ ತೊಡಗುತ್ತಾರೆ. ಇವೆಲ್ಲ ಹಾರಾಟ-ಹೋರಾಟಗಳು ಮುಗಿದು ಪರಿಸ್ಥಿತಿ ಒಂದು ಹಂತಕ್ಕೆ ಬರುವುದರ ಒಳಗಾಗಿ ಅನೇಕ ರೈತರು ಆತ್ಮಹತ್ಯೆಗೆ ಶರಣಾಗಿರುತ್ತಾರೆ.ಬರಪರಿಹಾರಕ್ಕೆ ನೀಡಬೇಕಾದ ಹಣವನ್ನು ರೈತನ ಆತ್ಮಹತ್ಯೆಗೆ ಪರಿಹಾರವಾಗಿ ಕೊಡಬೇಕಾಗುತ್ತದೆ. ಇವೆಲ್ಲವೂ ಒಂದು ಸುತ್ತು ಮುಗಿಯುವಷ್ಟರಲ್ಲಿ ಆ ವರ್ಷವೇ ಮುಗಿದು ಮತ್ತೊಂದು ಮುಂಗಾರಿಗೆ ರೈತ ಕಾಯುವ ಕಾಲ ಬಂದಿರುತ್ತದೆ. ನಮ್ಮನ್ನಾಳುವ ಸರಕಾರಿ ಯಂತ್ರವೊಂದು ಸೂಕ್ಷ್ಮತೆ ಕಳೆದುಕೊಂಡಾಗ, ಅಧಿಕಾರದ ಅಮಲು ಮನುಷ್ಯತ್ವವನ್ನು ಮರೆತಾಗ ಪ್ರತಿ ರಾಜ್ಯದಲ್ಲೂ ಈ ಪರಿಸ್ಥಿತಿ ಮರುಕಳಿಸುತ್ತಲೇ ಇರುತ್ತದೆ. ಇದು ಕೇವಲ ಬರ ಪರಿಹಾರಕ್ಕೆ ಮಾತ್ರ ಸೀಮಿತವಲ್ಲ. ಅತಿವೃಷ್ಠಿ ತಲೆದೋರಿದಾಗಲೂ ಇಂತಹುದೇ ಸರಕಾರಿ ಪ್ರಾಯೋಜಿತ ಪ್ರಹಸನಗಳು ಪುನರಾವರ್ತನೆಯಾಗುತ್ತವೆ.

ಬರಪರಿಹಾರ ಎಂಬ ಕರೆಯುವ ಹಸುವನ್ನು ಸಾಕುತ್ತಲೇ ಹೋಗುತ್ತಿರುವ ಸರಕಾರಗಳು ಮತ್ತು ಅಧಿಕಾರಶಾಹಿಗಳು ಬರಗಾಲವನ್ನು ಬೇಡ ಎನ್ನಲು ಯಾವ ಕಾರಣವೂ ಇಲ್ಲ ಎಂಬುದೇ ಈ ನಾಡಿನ ದುರಂತ!

No comments:

Post a Comment