Jan 20, 2017

ಮಣಿಪುರ ವಿದಾನಸಭಾ ಚುನಾವಣೆ: ಜನಾಂಗೀಯ ಸಂಘರ್ಷವೇ ಪ್ರಮುಖವಾಗಿ, ಮಿಕ್ಕೆಲ್ಲ ಅಭಿವೃದ್ದಿಯ ವಿಚಾರಗಳು ನಗಣ್ಯವಾಗಿರುವ ದುರಂತ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಇದೀಗ ಚುನಾವಣೆ ಘೋಷಣೆಯಾಗಿರುವ ಐದು ರಾಜ್ಯಗಳ ಪೈಕಿ ಮಣಿಪುರ ರಾಜ್ಯ ವಿದಾನಸಭಾ ಚುನಾವಣೆಗಳು ಯಾವುದೇ ಮಾನದಂಡದಿಂದ ನೋಡಿದರು ರಾಷ್ಟ್ರದ ಸಾಮಾನ್ಯಜನರ ಗಮನ ಸೆಳೆಯುವಲ್ಲಿ ವಿಫಲವಾಗಿವೆ ಎನ್ನಬಹುದು. ಯಾಕೆಂದರೆ ಇಂಡಿಯಾದ ಉಳಿದ ಭಾಗಗಳ ಜನರಿಗೆ ಈಶಾನ್ಯರಾಜ್ಯಗಳ ಬಗ್ಗೆ ಅಷ್ಟೇನು ಅರಿವು, ಕಾಳಜಿ ಇದ್ದಂತಿಲ್ಲ. ಸ್ವಾತಂತ್ರ ಬಂದ ದಿನದಿಂದಲೂ ಅವು ತೀರಾ ನಿರ್ಲಕ್ಷಿತ ಪ್ರದೇಶಗಳಾಗಿಯೇ ಉಳಿದಿವೆ. ಇದಕ್ಕೆ ಇರಬಹುದಾದ ಕೆಲವು ಕಾರಣಗಳೆಂದರೆ, ಈಶಾನ್ಯದಲ್ಲಿರುವ ರಾಜ್ಯಗಳು ಬೌಗೋಳಿಕವಾಗಿ ಮತ್ತು ಜನಸಂಖ್ಯೆಯ ದೃಷ್ಠಿಯಿಂದ ಬಹಳ ಸಣ್ಣವಾಗಿದ್ದು, ಅಲ್ಲಿಯ ಜನರ ಚಹರೆ ವೇಷಭೂಷಣಗಳು ಭಿನ್ನವಾಗಿರುವುದು. ಜೊತೆಗೆ ಮೊದಲಿನಿಂದಲೂ ಅಲ್ಲಿ ಜನಾಂಗೀಯ ಮತ್ತು ಸ್ವಾತಂತ್ರದ ಸಂಘರ್ಷಗಳು ನಡೆಯುತ್ತಲೇ ಇರುವುದು.
ಮುಂದಿನ ತಿಂಗಳು ಚುನಾವಣೆ ನಡೆಯಲಿರುವ ಮಣಿಪುರ ರಾಜ್ಯವು ಸಹ ಅಂತಹುದೇ ಒಂದು ಪುಟ್ಟ ರಾಜ್ಯ. ಆ ರಾಜ್ಯದ ಮಟ್ಟಿಗೆ ಅಭಿವೃದ್ದಿ, ನೋಟುಬ್ಯಾನ್, ಸರ್ಜಿಕಲ್ ಸ್ಟ್ರೈಕ್ ಮುಂತಾದ ವಿಷಯಗಳೆಲ್ಲ ನಗಣ್ಯವೇ ಎನ್ನಬಹುದು. ಏಕೆಂದರೆ ಆ ರಾಜ್ಯದ ಮಟ್ಟಿಗೆ ಪ್ರಗತಿಯ ವಿಚಾರಕ್ಕಿಂತ ಹೆಚ್ಚಾಗಿ ಜನಾಂಗೀಯ ದ್ವೇಷ, ಸಂಘರ್ಷಗಳೆ ಪ್ರಮುಖ ವಿಷಯಗಳು. ಪ್ರತಿಸಾರಿ ಚುನಾವಣೆಗಳು ನಡೆಯುವ ಸಮಯದಲ್ಲಿಯೂ ಜನಾಂಗೀಯ ದ್ವೇಷ್ದ ದಳ್ಳುರಿ ಹತ್ತಿ ಉರಿಯುವುದು, ಆ ಉರಿಯಲ್ಲಿ ಮೈಕಾಯಿಸಿಕೊಳ್ಳುವ ರಾಜಕೀಯ ಪಕ್ಷಗಳು ತಮ್ಮ ಹಿತಾಸಕ್ತಿಗಳಿಗನಗುಣವಾಗಿ ಪ್ರಚಾರ ಮಾಡಿ ಅಧಿಕಾರ ಗಳಿಸಿಕೊಳ್ಳುವುದನ್ನೇ ಕಾಯಕ ಮಾಡಿಕೊಂಡಿವೆ.

ಕಳೆದ ಮೂರು ಅವಧಿಯಿಂದಲೂ ಆಡಳಿತ ನಡೆಸುತ್ತಿರುವ ಕಾಂಗ್ರೇಸ್ಸಿಗೆ ಮಾಮೂಲಿನಂತೆ ಬಾಜಪ ಎದುರಾಳಿಯಾಗಿದ್ದರೂ ಈ ಬಾರಿ ಚತುಷ್ಕೋನ ಸ್ಪರ್ದೆ ಏರ್ಪಡಲಿದೆ.ಎಡಪಕ್ಷಗಳು-ಎನ್.ಸಿ.ಪಿ,-ಎ.ಎ.ಪಿ.,-ಜೆ.ಡಿ.ಯು.-ಮಣಿಪುರನ್ಯಾಷನಲ್ ಡೆಮೋಕ್ರಾಟಿಕ್ ಫ್ರಂಟ್, ಮುಂತಾದ ಪಕ್ಷಗಳು ಸೇರಿಕೊಂಡು ಲೆಫ್ಟ್ ಡೆಮೋಕ್ರಾಟಿಕ್ ಫ್ರಂಟ್ ಎಂಬ ಮೈತ್ರಿಕೂಟವನ್ನು ರಚಿಸಿಕೊಂಡು ಈ ಬಾರಿಯ ಚುನಾವಣೆ ಎದುರಿಸಲು ಸಜ್ಜಾಗಿ ನಿಂತಿವೆ. ಎಂದಿನಂತೆ ಈ ಬಾರಿಯೂ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ಜನಾಂಗೀಯ ಸಂಘರ್ಷ ತೀವ್ರಗೊಂಡಿದ್ದು ರಸ್ತೆ ತಡೆಗಳಂತ ಚಳುವಳಿಗಳು ಬಿರುಸಿನಿಂದ ನಡೆಯುತ್ತಿವೆ. ಮಣಿಪುರದಲ್ಲಿರುವ ಬಹಸಂಖ್ಯಾತ ಹಿಂದೂ ಮೈತ್ರೇಯಿ ಜನಾಂಗದವರನ್ನು ಸಂತುಷ್ಟಗೊಳಿಸುವ ಸಲುವಾಗಿ ಮಣಿಪುರದ ಕಾಂಗ್ರೇಸ್ಸಿನ ಮುಖ್ಯಮಂತ್ರಿಗಳಾದ ಶ್ರೀ ಒಕ್ರೋಮ್ ಇಬೋಬಿ ಸಿಂಗ್ ಅವರು ಮೈತ್ರೇಯಿಗಳಜನಸಂಖ್ಯೆ ಹೆಚ್ಚಿರುವಂತಹ ಏಳು ಹೊಸ ಜಿಲ್ಲೆಗಳ ರಚನೆಯನ್ನು ಘೋಷಿಸಿದ್ದಾರೆ. ಆ ಸಂಭವನೀಯ ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತರಾಗಿಬಿಡುವ ಆತಂಕಕ್ಕೆ ತುತ್ತಾದ ನಾಗಾ ಜನಾಂಗದವರು ಪ್ರತಿಭಟನೆ ಶುರು ಮಾಡಿ ತಿಂಗಳುಗಳೇ ಕಳೆದಿವೆ. ಬಹುಸಂಖ್ಯಾತರ ಪ್ರಾಬಲ್ಯವನ್ನು ಎತ್ತಿ ಹಿಡಿಯುವ ಜಿಲ್ಲೆಗಳನ್ನು ರಚಿಸುವ ಮೂಲಕ ತಮ್ಮ ನ್ಯಾಯಯುತ ಹಕ್ಕುಗಳನ್ನು ಮೊಟಕಿಸಲಾಗುತ್ತಿದೆಯೆಂದು ಆರೋಪಿಸುವ ನಾಗಾ ಜನತೆ ಯುನೈಟೆಡ್ ನಾಗಾ ಕೌನ್ಸಿಲ್ ಮುಂದಾಳತ್ವದಲ್ಲಿ ಹೋರಾಟ ನಡೆಸಿದ್ದಾರೆ. ಇದರ ಒಂದು ಭಾಗವಾಗಿ ಹೆದ್ದಾರಿ ತಡೆ, ಸರಕು ಸಾಗಾಣಿಕೆಗಳನ್ನು ಸ್ಥಗಿತ ಮಾಡಿದ್ದಾರೆ. ಇದರಿಂದ ಮಣಿಪುರದ ಜನತೆ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳಲಾಗದ ಅತಂತ್ರ ಸ್ಥಿತಿ ತಲುಪಿದ್ದಾರೆ. ಸರಿ ಸುಮಾರು ಮೂರು ತಿಂಗಳಿಂದ ನಡೆಯುತ್ತಿರುವ ಈ ಚಳುವಳಿಯ ಕಾವು ದಿನೇದಿನೇ ಹೆಚ್ಚಾಗುತ್ತಿದೆ. ಈ ಚಳುವಳಿಯಿಂದಾಗಿ ಎರಡೂ ಜನಾಂಗಗಳ ನಡುವೆ ಹಿಂಸಾಚಾರ ಪ್ರಾರಂಭವಾಗಿದ್ದು ಇದನ್ನು ತಹಬಂದಿಗೆ ತರಲು ಕೇಂದ್ರ ಸರಕಾರ ತನ್ನ ಸಶಸ್ತ್ರ ಪಡೆಗಳನ್ನು ಸಹ ಕಳಿಸಿದೆ.

ಪ್ರತಿಬಾರಿ ಚುನಾವಣೆಗಳು ಘೋಷಣೆ ಆಗುವ ದಿನಾಂಕ ಸಮೀಪಿಸುತ್ತಿದ್ದಂತೆ ಉಲ್ಭಣಗೊಳ್ಳುವ ಜನಾಂಗೀಯ ಸಂಘರ್ಷದ ಹಿಂದೆ ಎಲ್ಲ ರಾಜಕೀಯ ಪಕ್ಷಗಳ ಸ್ವಹಿತಾಶಕ್ತಿಗಳು ಕೆಲಸ ಮಾಡುತ್ತಿರುವುದು ಸತ್ಯವಾಗಿದೆ. ಈಶಾನ್ಯರಾಜ್ಯಗಳಲ್ಲಿ ತನ್ನ ಬೇರುಗಳನ್ನು ಬಿಡಲು ಆರಂಬಿಸಿರುವ ಬಾಜಪ ಬಹುಸಂಖ್ಯಾತ ಹಿಂದೂ ಮೈತ್ರೇಯಿ ಜನಾಂಗವನ್ನು ನಂಬಿಕೊಂಡು ರಾಜಕಾರಣ ಮಾಡುತ್ತಿದೆ. ಆದರೆ ಮೈತ್ರೇಯಿ ಜನಾಂಗದ ಬಹುಮುಖ್ಯ ಪ್ರಬಾವಿ ನಾಯಕರಾದ ಶ್ರೀ ಖುಮುಕ್ಕಾಮ್ ಜೈಕಿಶನ್ ಇದುವರೆಗು ಬಾಜಪದ ನಾಯಕರಾಗಿದ್ದವರು. ಇದೀಗ ಕೇಂದ್ರ ಸರಕಾರ ನಾಗಾಜನಾಂಗದ ಪರವಾದ ತಾರತಮ್ಯದ ರಾಜಕೀಯ ಮಾಡುತ್ತಿದೆಯೆಂದು ಆರೋಪಿಸಿ ಬಾಜಪ ತೊರೆದು ಕಾಂಗ್ರೇಸ್ಸಿಗೆ ಸೇರಿಕೊಂಡಿದ್ದಾರೆ. ಹಿಂದೂ ಮೈತ್ರೇಯಿ ಜನಾಂಗವನ್ನು ತನ್ನ ಮತಬ್ಯಾಂಕನ್ನಾಗಿ ಮಾಡಿಕೊಳ್ಳಲು ಪ್ರಯತ್ನಿಸಿದ್ದ ಬಾಜಪಕ್ಕೆ ಇದರಿಂದ ಬಾರಿ ಹಿನ್ನಡೆ ಉಂಟಾಗಿದೆ. ಅದೂ ಅಲ್ಲದೆ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಬಾಜಪ ನಾಗಾ ಬಂಡುಕೋರರ ಜೊತೆ ಮಾಡಿಕೊಂಡ ನಾಗಾ ಒಪ್ಪಂದ ಮಣಿಪುರದ ಮೂಲನಿವಾಸಿಗಳಲ್ಲಿ ತೀವ್ರ ಅಸಮಾದಾನಕ್ಕೆ ಕಾರಣವಾಗಿದೆ. ಇದರ ಜೊತೆಗೆ ನಾಗಾ ವಿದ್ಯಾರ್ಥಿಗಳ ಮೇಲೆ ಕೇಂದ್ರ ಮೀಸಲು ಪಡೆ ನಡೆಸಿದ ಬಲಪ್ರಯೋಗಗಳಿಂದ ನಾಗಾ ಜನಾಂಗವೂ ಬಾಜಪದ ಬಗ್ಗೆ ಭ್ರಮನಿರಸನ ಅನುಭವಿಸಿದೆ. ಹೀಗಾಗಿ ಬಾಜಪ ಅತ್ತ ಮೈತ್ರೇಯಿ ಇತ್ತ ನಾಗಾ ಜನಾಂಗಗಳ ಅಸಮಾದಾನವನ್ನು ಏಢಕಕಾಲಕ್ಕೆ ಎದುರಿಸಬೇಕಾದ ಸನ್ನಿವೇಶವೊಂದು ನಿರ್ಮಾಣವಾಗಿದೆ. ಆದರೂ ಅದು ಹದಿನೈದು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಕಾಂಗ್ರಸ್ ಪಕ್ಷದ ವಿರುದ್ದದ ಆಡಳಿತ ವಿರೋಧಿ ಅಲೆಯನ್ನು ನಂಬಿಕೊಂಡ ಬಾಜಪ ತನ್ನ ಚುನಾವಣೆಯ ತಂತ್ರಗಳನ್ನು ಹೆಣೆಯುತ್ತಿದೆ. 

ತನ್ನ ಪ್ರಚಾರದ ಬಲವನ್ನು ಹೆಚ್ಚು ಮಾಡಿಕೊಳ್ಳಲು ಬಾಜಪ ಒಲಂಪಿಕ್ ಪದಕ ವಿಜೇತೆ ಮೇರಿ ಕೋಮ್ ಅವರನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ. ಆದರೆ ಇದುವರೆಗು ಮೇರಿಕೋಮ್ ಅವರು ಈ ಬಗ್ಗೆ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ನೀಡಿಲ್ಲ. ಇಷ್ಟೆಲ್ಲ ಗೊಂದಲಗಳ ನಡುವೆ ಸಶಸ್ತ್ರ ಪಡೆಗಳ ವಿಶೇಷಾಧಿಕಾರದ ಕಾನೂನುನ್ನು ರದ್ದುಪಡಿಸುವ ಹೋರಾಟದ ಹಿನ್ನೆಲೆಯಲ್ಲಿ ಕಳೆದ ಹದಿನಾರು ವರ್ಷಗಳಿಂದಲೂ ಉಪವಾಸ ನಿರತರಾಗಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ಇರೋಮ್ ಶರ್ಮಿಳಾ ಇದೀಗ ಪಿ.ಆರ್.ಜೆ.ಎ.( ಪೀಪಲ್ಸ್ ರಿಸರ್ಜೆನ್ಸ್ ಅಂಡ್ ಜಸ್ಟೀಸ್ ಅಲೆಯನ್ಸ್ ) ಎಂಬ ರಾಜಕೀಯ ವೇದಿಕೆ ಒಂದನ್ನು ರಚಿಸಿಕೊಂಡಿದ್ದು ಇಪ್ಪತ್ತೈದು ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಹಾಕುವುದಾಗಿ ಹೇಳಿಕೊಂಡಿದ್ದಾರೆ. ತಮ್ಮ ನಿರಂತರ ಉಪವಾಸದಿಂದ ಮನೆಮಾತಾಗಿರುವ ಶರ್ಮಿಳಾರವರು ತಮ್ಮ ಬಗೆಗಿನ ಜನರ ಸಹಾನುಭೂತಿಯನ್ನು ಮತಗಳನ್ನಾಗಿ ಎಷ್ಟರಮಟ್ಟಿಗೆ ಪರಿವರ್ತಿಸಿಕೊಳ್ಳಲಿದ್ದಾರೆಂಬುದನ್ನು ಕಾದು ನೋಡಬೇಕಿದೆ.

ಒಟ್ಟಿನಲ್ಲಿ ಹಿಂದಿನ ಚುನಾವಣೆಗಳಲ್ಲಿ ನಡೆದಂತೆ ನೇರ ಸ್ಪರ್ದೆ ನಡೆಯದೆ ಈ ಬಾರಿ ಚತುಷ್ಕೋನ ಸ್ಪರ್ದೆ ನಡೆಯುವುದು ಖಚಿತವಾಗಿದೆ. ಇಂತಹ ಗೊಂದಲದ ಸನ್ನಿವೇಶದಲ್ಲಿ ಅಭಿವೃದ್ದಿ, ಭ್ರಷ್ಟಾಚಾರ, ಕುಟುಂಬ ರಾಜಕಾರಣದಂತಹ ಯಾವುದೇ ವಿಚಾರಗಳೂ ಮಣಿಪುರದ ಚುನಾವಣೆಯಲ್ಲಿ ಚರ್ಚೆಯ ವಿಷಯಗಳಾಗುವುದು ಸಾದ್ಯವಿಲ್ಲದಂತಹ ಪರಿಸ್ಥಿತಿ ತಲೆದೋರಿದೆ. ಹಾಗಾಗಿಯೇ ನಾನು ಮೊದಲೇ ಹೇಳಿದಂತೆ ಇಲ್ಲಿ ಬಾಜಪದ ಸರ್ಜಿಕಲ್ ಸ್ಟ್ರೈಕ್, ನೋಟುಬ್ಯಾನ್, ಮೋದಿಯವರ ಜನಪ್ರಿಯತೆಯ ಅಲೆ ಯಾವೊಂದು ವಿಷಯಗಳೂ ಪ್ರಸ್ತುತವಲ್ಲ. ಬದಲಿಗೆ ನಿರಂತರವಾಗಿ ನಡೆಯುತ್ತಿರುವ ಜನಾಂಗೀಯ ಘರ್ಷಣೆ ಮತ್ತು ಯಾವ ಪಕ್ಷ ಯಾವ ಜನಾಂಗದ ಪರ ಎನ್ನುವಂತೆ ವಿಚಾರಗಳೇ ಚುನಾವಣೆಯ ಪ್ರಮುಖ ವಸ್ತುಗಳಾಗಲಿವೆ. ಹೀಗಾಗಿ ಪಕ್ಷಗಳ ಪ್ರಣಾಳಿಕೆಗಳಿಗೆ ಇಲ್ಲಿ ಯಾವ ಪ್ರಾಮುಖ್ಯತೆಯೂ ಇಲ್ಲ. ಇದು ಮಣಿಪುರದ ದುರಂತ ಮಾತ್ರವಲ್ಲ ಇಂಡಿಯಾದ ಪ್ರಜಾಪ್ರಭುತ್ವದ ದುರಂತವೂ ಹೌದು!

ಈ ಎಲ್ಲ ಅಂಶಗಳ ಹೊರತಾಗಿಯೂ ಮಣಿಪುರದ ಚುನಾವಣೆಯ ಬಗ್ಗೆ ಇರುವ ಮುಖ್ಯ ಕುತೂಹಲವೆಂದರೆ ರಾಷ್ಟ್ರದ ಹಲವು ರಾಜ್ಯಗಳನ್ನು ಒಂದಾದ ಮೇಲೊಂದರಂತೆ ಕಳೆದುಕೊಳ್ಳುತ್ತಿರುವ ಕಾಂಗ್ರೇಸ್ ಈ ಪುಟ್ಟ ರಾಜ್ಯವನ್ನಾದರು ಉಳಿಸಿಕೊಳ್ಳಲು ಶಕ್ತವಾಗುತ್ತದೆಯೊ ಇಲ್ಲವೊ ಎಂಬುದಾಗಿದೆ. 

No comments:

Post a Comment