Jan 23, 2017

ಧೋಬಿಘಾಟ್’ನಲ್ಲಿ ಚಕ್ರವರ್ತಿ ಚಂದ್ರಚೂಡ್ ಅವರ ‘ಮೈಲುತುತ್ತ’ ಪದ್ಯಸಂಕಲನ ಬಿಡುಗಡೆ

ಜ.20ರಂದು ಬೆಂಗಳೂರಿನಲ್ಲಿ ಪತ್ರಕರ್ತ, ಸಿನೆಮಾ ನಿರ್ದೇಶಕರೂ ಆಗಿರುವ ಚಕ್ರವರ್ತಿ ಚಂದ್ರಚೂಡ್ ಅವರ “ಮೈಲುತುತ್ತ’ ಪದ್ಯಸಂಕಲನ ವಿಭಿನ್ನ ರೀತಿಯಲ್ಲಿ ಲೋಕಾರ್ಪಣೆಗೊಂಡಿತು. ಮಲ್ಲೇಶ್ವರದ ಧೋಬಿಘಾಟ್’ನಲ್ಲಿ ‘ಪದ್ಯಗಳಿಗೆ ಬಿಡುಗಡೆ’ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದ ಚಕ್ರವರ್ತಿಯವರ ದರ್ವೇಶ್ ಚೌಕಿ ತಂಡ ಈವರೆಗಿನ ಸಾಹಿತ್ಯಲೋಕದ ಶಿಷ್ಟಾಚಾರಗಳನ್ನು ಮೀರಿ ಕಾರ್ಯಕರ್ಮ ರೂಪಿಸಿತ್ತು. 
ಸಾಹಿತ್ಯವನ್ನು ನಿರ್ದಿಷ್ಟವಾಗಿ ಒಂದು ಬಣದ ಅಧಿಪತ್ಯಕ್ಕೆ ಒಳಪಡಿಸುವ ರೂಢಿಯನ್ನು ಪ್ರತಿಭಟಿಸಿ, ಹಾಗೂ ಸಾಹಿತ್ಯಕೃತಿ ಜನಸಾಮಾನ್ಯರ ನಡುವೆ, ಜನಸಾಮಾನ್ಯರಿಗಾಗಿ ಇರಬೇಕು ಅನ್ನುವುದನ್ನು ಸಂಕೇತಿಸಿ ಧೋಬಿಘಾಟ್’ನಲ್ಲಿ ಪದ್ಯಬಿಡುಗಡೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಚರಖಾ ಹಿಡಿದ ಚಿತ್ರ ಬಹುತೇಕ ಭಾರತೀಯರನ್ನು ಮುಜುಗರಕ್ಕೊಳಪಡಿಸಿದ ಹಿನ್ನೆಲೆಯಲ್ಲಿ ‘My PM Embarrasses me’ ಚೀಲವನ್ನೂ ಬಿಡುಗಡೆ ಮಾಡಲಾಯಿತು. ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ರೋಹಿತ್ ವೇಮುಲ ನೆನಪಿನ ಸ್ಮರಣಿಕೆಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಬೊಳುವಾರು ಮಹಮ್ಮದ್ ಕುಂಞಿ ಅವರನ್ನು ಅಭಿನಂದಿಸುವ ಕಾರ್ಯಕ್ರಮವೂ ನಡೆಯಿತು. 

ಚಕ್ರವರ್ತಿ ಚಂದ್ರಚೂಡ್ ಅವರ 75 ಪದ್ಯಗಳನ್ನೊಳಗೊಂಡ ‘ಮೈಲುತುತ್ತ’ವನ್ನು ಚಿತ್ರನಟ ಧನಂಜಯ ಬಿಡುಗಡೆ ಮಾಡಿದರು. ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್, ಸಂವೇದನಾಶೀಲ ಕವಿ ಮತ್ತು ನಟ ಎಂ.ಎಸ್.ಜಹಾಂಗೀರ್ ಹಾಗೂ ರಂಗಭೂಮಿ ನಟ - ಬರಹಗಾರ ಆರ್.ಕೆ.ಮಠ ಕೃತಿಯ ಕುರಿತು ಮಾತನಾಡಿದರು. ಬೊಳುವಾರು ಅವರನ್ನು ಸನ್ಮಾನಿಸಿ ನಟ, ನಿರ್ದೇಶಕ ಹಾಗೂ ಬರಹಗಾರರಾದ ಬಿ.ಸುರೇಶ ಮಾತನಾಡಿದರು. 

‘ಮೈಲುತುತ್ತ’ವನ್ನು ಪ್ರಕಟಿಸಿರುವ ಸುಯೋಧನ ಪ್ರಕಾಶನದ ಸುಧಾ ಚಿದಾನಂದ ಗೌಡ, ನಾಗೇಂದ್ರ ಪ್ರಸಾದ್, ಎಲ್.ಎನ್.ಶಾಸ್ತ್ರಿ, ವೀರಕಪುತ್ರ ಶ್ರೀನಿವಾಸ, ಆಂಜನೇಯರೆಡ್ಡಿ ನೀರಾವರಿ, ಜಿ.ಎನ್.ಮೋಹನ್ ಮೊದಲಾದವರು ಉಪಸ್ಥಿತರಿದ್ದರು. 

ಕಾರ್ಯಕ್ರಮದ ಅಂಗವಾಗಿ ಜಂಬೆ ಬಾಲು ಅವರ ತಂಡದಿಂದ ಜಂಬೆ ವಾದನ, ಭೂಮ್ತಾಯಿ ಬಳಗದಿಂದ ಗಾಯನ ಮತ್ತು ಜಾನ್ ದೇವರಾಜ್ ಅವರಿಂದ ವಿಶಿಷ್ಟ ವಾದನ ಪ್ರಸ್ತುತಿ ನಡೆಯಿತು. ಚರಖಾ ಹಿನ್ನೆಲೆಯನ್ನು ಇಟ್ಟುಕೊಂಡು ವಿಶಿಷ್ಟವಾಗಿ ರೂಪಿಸಲಾಗಿದ್ದ ವೇದಿಕೆಯಲ್ಲಿ ವಿನೂತನ ರೀತಿಯಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಸಾಹಿತ್ಯ – ಸಿನೆಮಾ ಕ್ಷೇತ್ರದವರೂ ಸೇರಿದಂತೆ ನೂರಾರು ಕಾವ್ಯಾಸಕ್ತರು ಸಾಕ್ಷಿಯಾದರು.

No comments:

Post a Comment