Sep 7, 2016

ರಿಲಾಯನ್ಸ್ ಜಿಯೋ - ಹುಸಿಯಾದ ನಿರೀಕ್ಷೆ

ಆನಂದ ಪ್ರಸಾದ್

07/09/2016

ಕಳೆದ ಕೆಲವು ತಿಂಗಳುಗಳಿಂದ ಭಾರೀ ನಿರೀಕ್ಷೆ ಮೂಡಿಸಿದ್ದ ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಜಿಯೋ ಕೊನೆಗೂ ತನ್ನ ವಾಣಿಜ್ಯ ಸೇವೆಯನ್ನು ಸೆಪ್ಟೆಂಬರ್ 5ರಿಂದ ಆರಂಭಿಸಿದೆ. ರಿಲಾಯನ್ಸ್ ಜಿಯೋ ತನ್ನ ವೆಬ್ಸೈಟಿನಲ್ಲಿ ಕೊಟ್ಟಿರುವ ಪ್ಲಾನ್, ಡಾಟಾ ದರಗಳನ್ನು ಪರಿಶೀಲಿಸಿದಾಗ ನರೇಂದ್ರ ಮೋದಿಯವರ 'ಡಿಜಿಟಲ್ ಇಂಡಿಯಾ' ಘೋಷಣೆ ಸಾಕಾರವಾಗುವ ಸಂಭವ ಕಡಿಮೆ. ಏಕೆಂದರೆ ಡಾಟಾ ದರಗಳು ಸಾಮಾನ್ಯ ಗ್ರಾಹಕನಿಗೆ ಅನುಕೂಲಕರವಾಗಿ ಇಲ್ಲ. 149 ರೂಪಾಯಿಗಳಿಗೆ 28 ದಿನಗಳ ಅವಧಿಗೆ 300 ಎಂಬಿ ಡಾಟಾ ಹಾಗೂ ಉಚಿತ ದೇಶೀಯ ಕರೆ ರೋಮಿಂಗ್ ವೆಚ್ಚವಿಲ್ಲದೆ ಹಾಗೂ ದಿನಕ್ಕೆ 100 ಎಸ್ಸೆಮ್ಮೆಸ್ ಕೊಡುಗೆ ನೀಡಿದೆ. ಉಚಿತ ಕರೆ ಮಾಡಬೇಕಿದ್ದರೆ ಗ್ರಾಹಕ 4ಜಿ ಮೊಬೈಲ್ ಹೊಂದಿರಬೇಕು. ಹೀಗಾಗಿ 2ಜಿ ಅಥವಾ 3ಜಿ ಮೊಬೈಲ್ ಹೊಂದಿರುವ ಸಾಮಾನ್ಯ ಗ್ರಾಹಕ ರಿಲಾಯನ್ಸ್ ಜಿಯೋ 4ಜಿಗೆ ಬದಲಾಗಲು ಕನಿಷ್ಠ 3000 ರೂಪಾಯಿಗಳನ್ನು ವ್ಯಯಿಸಬೇಕು. ಇದು 4ಜಿ ಸೌಲಭ್ಯವುಳ್ಳ ರಿಲಾಯನ್ಸ್ ಫ್ಲೇಮ್ ಬ್ರಾಂಡಿನ ಅತಿ ಕಡಿಮೆ ದರದ ಮೊಬೈಲ್ ಆಗಿದೆ. ಇನ್ನೂ ಹೆಚ್ಚಿನ ಸೌಲಭ್ಯವುಳ್ಳ 4ಜಿ ಮೊಬೈಲ್ ಬೇಕಿದ್ದರೆ 7,000ದಿಂದ 10,000 ರೂಪಾಯಿ ತೆರಬೇಕು. ಇಷ್ಟು ಹಣ ಖರ್ಚು ಮಾಡಿ ರಿಲಾಯನ್ಸ್ ಜಿಯೋ 4ಜಿ ನೆಟ್ವರ್ಕಿಗೆ ಬದಲಾಯಿಸಿಕೊಳ್ಳಲು ಸಾಮಾನ್ಯ ಭಾರತೀಯ ಗ್ರಾಹಕರು ಹಿಂದೇಟು ಹಾಕುತ್ತಾರೆ. ಏಕೆಂದರೆ ಭಾರತೀಯರು ಈಗಾಗಲೇ ಉತ್ತಮ ಸ್ಥಿತಿಯಲ್ಲಿರುವ 2ಜಿ/3ಜಿ ಮೊಬೈಲ್ ಫೋನ್ ಅನ್ನು ತ್ಯಜಿಸಿ ಹೊಸದನ್ನು ಕೊಳ್ಳುವ ಪ್ರವೃತ್ತಿಯನ್ನು ಹೊಂದಿಲ್ಲ. ತಮ್ಮ 2ಜಿ/3ಜಿ ಮೊಬೈಲ್ ಫೋನ್ ಹಾಳಾದ ನಂತರವೇ ಸಾಮಾನ್ಯ ಜನರು ಹೊಸ ಮೊಬೈಲ್ ಕೊಳ್ಳುವ ಬಗ್ಗೆ ಯೋಚಿಸುತ್ತಾರೆ. ಏಕೆಂದರೆ ಜನಸಾಮಾನ್ಯರ ಆದಾಯ ಮಟ್ಟವು ಕಡಿಮೆ ಇರುತ್ತದೆ. ಇದರಿಂದಾಗಿ ರಿಲಾಯನ್ಸ್ ಜಿಯೋ ಉಚಿತ ಕರೆ ರೋಮಿಂಗ್ ಸಹಿತ, ಉಚಿತ ಎಸ್ಸೆಮ್ಮೆಸ್ ದಿನಕ್ಕೆ 100 ಕೊಡುಗೆ ನೀಡಿದರೂ ಇದಕ್ಕೆ ಬದಲಾಗಲು ಸಾಕಷ್ಟು ಸಮಯ ಹಿಡಿಯಬಹುದು.

ರಿಲಾಯನ್ಸ್ ಜಿಯೋ 50 ರೂಪಾಯಿಗೆ 1 ಜಿಬಿ ಡೇಟಾ ಎಂದು ಪ್ರಚಾರ ಮಾಡಿದರೂ 50 ರೂಪಾಯಿಗೆ 1 ಜಿಬಿ ದರ ಅದರ ವೆಬ್ಸೈಟಿನಲ್ಲಿ ಎಲ್ಲಿಯೂ ಕಾಣಿಸುವುದಿಲ್ಲ. 4999 ರೂಪಾಯಿ ಡಾಟಾ ಪ್ಲಾನ್ 28 ದಿನಗಳ ಅವಧಿಗೆ ರಿಚಾರ್ಜ್ ಮಾಡಿದರೆ 75 ಜಿಬಿ ಡಾಟಾ ಸಿಗುತ್ತದೆ. ಇದು ಕೂಡಾ 1 ಜಿಬಿಗೆ 67 ರೂಪಾಯಿ ಆಗುತ್ತದೆ. ಒಬ್ಬ ಜನಸಾಮಾನ್ಯನಿಗೆ ತಿಂಗಳಿಗೆ 75 ಜಿಬಿ ಡಾಟಾ ಅಗತ್ಯವೇ ಇಲ್ಲ. ಅಲ್ಲದೆ ಒಬ್ಬ ಜನಸಾಮಾನ್ಯ ತನ್ನ ಸೀಮಿತ ಆದಾಯದಲ್ಲಿ ಡಾಟಾಕ್ಕೆಂದೇ ತಿಂಗಳಿಗೆ 4999 ರೂಪಾಯಿ ವ್ಯಯಿಸುವ ಪರಿಸ್ಥಿತಿ ಈ ದೇಶದಲ್ಲಿ ಇಲ್ಲ. ಹೀಗಾಗಿ 50 ರೂಪಾಯಿಗೆ 1 ಜಿಬಿ ಡಾಟಾ ಎಂಬುದು ಕೇವಲ ಪ್ರಚಾರವೇ ಹೊರತು ವಾಸ್ತವವಲ್ಲ. ಇಕನಾಮಿಕ್ ಟೈಮ್ಸ್ ಪತ್ರಿಕೆಯ ವರದಿಯ ಪ್ರಕಾರ ಪಾಶ್ಚ್ಯಾತ್ಯ ದೇಶಗಳ ಜನರ ಸರಾಸರಿ ಆದಾಯ ಹಾಗೂ ಅಲ್ಲಿ ಲಭ್ಯವಾಗುವ ಮೊಬೈಲ್ ಇಂಟರ್ನೆಟ್ ದರದ ಅನುಪಾತದ ಪ್ರಕಾರ ಭಾರತದ ಜನರಿಗೆ 57 ರೂಪಾಯಿಯಲ್ಲಿ 1 ಜಿಬಿ ಡಾಟಾ ಲಭ್ಯವಾಗಬೇಕು. ಆದರೆ ಇಲ್ಲಿ 1 ಜಿಬಿ ಡಾಟಾದ ಸರಾಸರಿ ದರ ದರ 228 ರೂಪಾಯಿ ಇದೆ. ಜನಸಾಮಾನ್ಯರ ಮಟ್ಟಿಗೆ ಇದು ಅತ್ಯಂತ ದುಬಾರಿ ದರವಾಗಿದೆ. ಹೀಗಾಗಿಯೇ ನಮ್ಮ ದೇಶದ ಗ್ರಾಮೀಣ ಭಾಗಗಳಲ್ಲಿ ಮೊಬೈಲ್ ಇಂಟರ್ನೆಟ್ ಬಳಕೆಯಲ್ಲಿ ಪ್ರಗತಿ ಕಾಣುತ್ತಿಲ್ಲ. ಗ್ರಾಮೀಣ ಭಾಗಗಳಲ್ಲಿ ಮೊಬೈಲ್ ಇಂಟರ್ನೆಟ್ ಬಳಕೆಯು ಹೆಚ್ಚಾಗಿಲ್ಲದ ಕಾರಣ ವೇಗದ ಮೊಬೈಲ್ ಇಂಟರ್ನೆಟ್ ಸೌಲಭ್ಯವನ್ನು ಗ್ರಾಮೀಣ ಭಾಗಗಳಿಗೆ ವಿಸ್ತರಿಸುವಲ್ಲಿ ಖಾಸಗಿ ಮೊಬೈಲ್ ಕಂಪನಿಗಳು ಹಿಂದೇಟು ಹಾಕುತ್ತಿವೆ. ಹೀಗಾಗಿ ಡಿಜಿಟಲ್ ಇಂಡಿಯಾ ಎಂಬುದು ಕೇವಲ ನಗರಗಳಿಗೆ ಮಾತ್ರ ಸೀಮಿತವಾಗಿದೆ.

ದೇಶದ ಗ್ರಾಮೀಣ ಭಾಗಗಳಲ್ಲಿ ಮೊಬೈಲ್ ಇಂಟರ್ನೆಟ್ ಬಳಕೆ ಹೆಚ್ಚಬೇಕಾದರೆ ಅದನ್ನು ಜನಸಾಮಾನ್ಯರಿಗೆ ಎಟಕುವ ದರದಲ್ಲಿ ನೀಡಬೇಕು. ಅಂದರೆ 1 ಜಿಬಿ ಮೊಬೈಲ್ ಇಂಟರ್ನೆಟ್ ಅನ್ನು 50 ರೂಪಾಯಿಗಳಿಗೆ ಒಂದು ತಿಂಗಳ ಅವಧಿಗೆ ನೀಡಬೇಕು. ಇದನ್ನು ಯಾವುದೇ ಮೊಬೈಲ್ ಕಂಪನಿಗಳು ಕೂಡ ನೀಡುತ್ತಿಲ್ಲ. ಒಬ್ಬ ಸಾಮಾನ್ಯ ಗ್ರಾಮೀಣ ಗ್ರಾಹಕ ಮೊಬೈಲ್ ಇಂಟರ್ನೆಟ್ಟಿಗೋಸ್ಕರ 1000 ಖರ್ಚು ಮಾಡಿ 10 ಜಿಬಿ ಬಳಸುವ ಸಾಮರ್ಥ್ಯ ಪಡೆದಿಲ್ಲ. ಇದು ಗ್ರಾಮೀಣ ಗ್ರಾಹಕ ಮಾತ್ರವಲ್ಲ ನಗರಗಳ ಸಾಮಾನ್ಯ ಮೊಬೈಲ್ ಗ್ರಾಹಕರ ಪರಿಸ್ಥಿತಿಯೂ ಹೌದು. ದರವನ್ನು ಕಡಿಮೆ ಮಾಡಿದರೆ ಗ್ರಾಹಕರ ಬಳಕೆ ಪ್ರಮಾಣ ಹೆಚ್ಚುತ್ತದೆ, ತನ್ಮೂಲಕ ಹೆಚ್ಚು ಹೆಚ್ಚು ಜನ ಮೊಬೈಲ್ ಇಂಟರ್ನೆಟ್ ಬಳಸುತ್ತಾರೆ. ಮೊಬೈಲ್ ಕಂಪನಿಗಳು ಇದರ ಬದಲು ಕೆಲವೇ ಶ್ರೀಮಂತ ಹಾಗೂ ಮೇಲ್ಮಧ್ಯಮ ವರ್ಗದವರಿಗೆ ಮಾತ್ರ ಎಟಕುವ ರೀತಿಯಲ್ಲಿ 75 ಜಿಬಿ ಉಪಯೋಗಿಸಿದರೆ ಕಡಿಮೆ ದರದಲ್ಲಿ ಮೊಬೈಲ್ ಇಂಟರ್ನೆಟ್ ಒದಗಿಸುತ್ತೇವೆ ಎಂಬ ನೀತಿಯನ್ನು ಅಳವಡಿಸಿಕೊಂಡಿರುವುದು ಮೊಬೈಲ್ ಇಂಟರ್ನೆಟ್ ಕ್ಷೇತ್ರದ ಬೆಳವಣಿಗೆಗೆ ಬಹಳ ದೊಡ್ಡ ಅಡ್ಡಿಯಾಗಿದೆ. ಇದರಿಂದಾಗಿ ಜನಸಾಮಾನ್ಯರಿಗೆ ಮೊಬೈಲ್ ಇಂಟರ್ನೆಟ್ ಎಂಬುದು ಎಟುಕದ ನಕ್ಷತ್ರ ಆಗಿದೆ. ದೇಶದ ನೀತಿ ನಿರ್ಮಾಪಕರು ಹಾಗೂ ಖಾಸಗಿ ಮೊಬೈಲ್ ಕಂಪನಿಗಳ ಒಡೆಯರು ಎಲ್ಲರ ಒಳಿತಿನ ನೀತಿಯನ್ನು ಅಳವಡಿಸದೇ ಇರುವುದರಿಂದ ಹೀಗಾಗಿದೆ. 

ಗ್ರಾಮೀಣ ಭಾಗಗಳಿಗೆ ಖಾಸಗಿ ಮೊಬೈಲ್ ಕಂಪನಿಗಳು ಲಾಭ ಹೆಚ್ಚಿಲ್ಲದೆ ಇರುವ ಕಾರಣ 3ಜಿ ಅಥವಾ 4ಜಿ ವೇಗದ ಮೊಬೈಲ್ ಇಂಟರ್ನೆಟ್ ಒದಗಿಸಲು ಮುಂದೆ ಬರುತ್ತಿಲ್ಲ. ಹೀಗಾಗಿ ಇಂಥ ಪರಿಸ್ಥಿತಿಯಲ್ಲಿ ಸರ್ಕಾರವು ಬಿಎಸ್ಸೆನ್ನೆಲ್ ಮೂಲಕ 3ಜಿ ಅಥವಾ 4ಜಿ ಮೊಬೈಲ್ ಸೇವೆಯನ್ನು ಒದಗಿಸಲು ಮುಂದಾಗಬೇಕಿತ್ತು. ಇದು ಸರ್ಕಾರದ ಬಾಧ್ಯತೆ ಆಗಿದೆ. ಖಾಸಗಿ ಕೊರಿಯರ್ ಸಂಸ್ಥೆಗಳು ಹಳ್ಳಿಗಳಿಗೆ ಎಂದೂ ಬರುವುದಿಲ್ಲ. ಹೀಗಾಗಿಯೇ ಇಂದಿಗೂ ಸರ್ಕಾರ ಗ್ರಾಮೀಣ ಭಾಗಗಳಿಗೆ ಅಂಚೆ ಇಲಾಖೆಯ ಮೂಲಕ ಸೇವೆ ಒದಗಿಸುತ್ತಿದೆ. ಇದನ್ನು ಲಾಭದ ದೃಷ್ಟಿಕೋನದಿಂದ ನೋಡಿದರೆ ನಡೆಸಲು ಸಾಧ್ಯವೇ ಇಲ್ಲ. ಅದೇ ರೀತಿ ಆಕಾಶವಾಣಿ ಹಾಗೂ ದೂರದರ್ಶನಗಳನ್ನು ಕೂಡ ಲಾಭದ ದೃಷ್ಟಿಯಿಂದ ನೋಡಿದರೆ ನಡೆಸಲು ಸಾಧ್ಯವೇ ಇಲ್ಲ. ಇದು ಸರಕಾರದ ಬದ್ಧತೆ ಆದ ಕಾರಣ ನಡೆಸಬೇಕಾಗುತ್ತದೆ. ಅದೇ ರೀತಿ ಗ್ರಾಮೀಣ ಪ್ರದೇಶಗಳಿಗೆ ವೇಗದ ಮೊಬೈಲ್ ಇಂಟರ್ನೆಟ್ ಸೇವೆ ಒದಗಿಸುವುದು ಇಂದಿನ ದಿನಗಳಲ್ಲಿ ಅಗತ್ಯ. ಅದನ್ನು ಲಾಭದ ದೃಷ್ಟಿಕೋನದಿಂದ ನೋಡಬಾರದು. ಖಾಸಗಿ ಮೊಬೈಲ್ ಕಂಪನಿಗಳು ಗ್ರಾಮೀಣ ಭಾಗಗಳನ್ನು ಅವುಗಳಿಗೆ ಹೆಚ್ಚಿನ ಲಾಭ ಇಲ್ಲದೆ ಇರುವ ಕಾರಣ ತೀವ್ರವಾಗಿ ನಿರ್ಲಕ್ಷಿಸಿವೆ. ಉದಾಹರಣೆಗೆ ಏರ್ಟೆಲ್ ಕಂಪನಿ ಭಾರತದ ನಂಬರ್ ಒಂದು ಮೊಬೈಲ್ ಕಂಪನಿಯಾಗಿದೆ. 25 ಕೋಟಿ ಮೊಬೈಲ್ ಸಂಪರ್ಕಗಳನ್ನು ದೇಶದಲ್ಲಿ ಹೊಂದಿರುವ ಇಷ್ಟು ದೊಡ್ಡ ಕಂಪನಿಯು ಇಂದಿಗೂ ಗ್ರಾಮೀಣ ಭಾಗಗಳಿಗೆ ಕನಿಷ್ಠ 3ಜಿ ಮೊಬೈಲ್ ಸೇವೆಯನ್ನು ಒದಗಿಸುವಲ್ಲಿ ನಿರ್ಲಕ್ಷ್ಯ ವಹಿಸಿದೆ. 19 ಕೋಟಿ ಮೊಬೈಲ್ ಸಂಪರ್ಕಗಳನ್ನು ಹೊಂದಿರುವ ವೊಡಾಫೋನ್ ಇಂಡಿಯಾ ಭಾರತದ ಎರಡನೇ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಕಂಪೆನಿಯಾದರೂ ಅದು ಕೆಲವು ಗ್ರಾಮೀಣ ಭಾಗಗಳಲ್ಲಿ 2ಜಿ ಮೊಬೈಲ್ ಸೇವೆಯನ್ನು ಕೂಡ ಒದಗಿಸುವಲ್ಲಿ ವಿಫಲವಾಗಿದೆ.

ರಿಲಾಯನ್ಸ್ ಜಿಯೋ ಕಂಪನಿ ಬರುವ ವರ್ಷ ಮಾರ್ಚ್ ಒಳಗೆ ದೇಶದ 90% ಭಾಗಗಳಲ್ಲಿ ತನ್ನ 4ಜಿ ಸೇವೆಯನ್ನು ಒದಗಿಸುತ್ತೇನೆ ಎಂದು ಹೇಳಿಕೊಂಡಿದೆ. ಆದರೆ ಇದು ಬರಿಯ ಘೋಷಣೆ ಮಾತ್ರವೋ ಅಥವಾ ನಿಜವಾಗಿಯೂ ಅದನ್ನು ಸಾಧಿಸುತ್ತದೆಯೋ ಕಾಲವೇ ಹೇಳಬೇಕು. ಏಕೆಂದರೆ ಅದು 2014ರಲ್ಲಿಯೇ ತನ್ನ 4ಜಿ ಸೇವೆಯನ್ನು ಆರಂಭಿಸುತ್ತೇನೆ ಎಂದು ಹೇಳಿಕೊಂಡಿತ್ತು. ಆದರೆ ನಿಜವಾಗಿ ತನ್ನ ಸೇವೆಯನ್ನು ಆರಂಭಿಸಲು 2016 ಬರಬೇಕಾಯಿತು. ರಿಲಾಯನ್ಸ್ ಜಿಯೋ ಕಂಪನಿಯು ಹೊಂದಿರುವ ಮೊಬೈಲ್ ವೋಲ್ಟೇ (VOLTE) ತಂತ್ರಜ್ಞಾನವು ಮುಂದುವರಿದ ತಂತ್ರಜ್ಞಾನವಾಗಿದ್ದು ಇದು ಭವಿಷ್ಯದಲ್ಲಿ 2ಜಿ ಹಾಗೂ 3ಜಿ ತಂತ್ರಜ್ಞಾನದ ಧ್ವನಿ ಕರೆಗಳನ್ನು ಹಿಮ್ಮೆಟ್ಟಿಸುವ ಸಂಭವನೀಯತೆ ಇದೆ. ಹೀಗಾಗಿ ಎಲ್ಲಾ ಮೊಬೈಲ್ ಕಂಪನಿಗಳು ಇದನ್ನು ಅಳವಡಿಸಿಕೊಳ್ಳದೆ ಹೋದರೆ ಭವಿಷ್ಯದಲ್ಲಿ ಹಿಂದೆ ಬೀಳುವ ಹಾಗೂ ಅಪ್ರಸ್ತುತವಾಗುವ ಅಪಾಯ ಇದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ತಂತ್ರಜ್ಞಾನ ಅಳವಡಿಕೆಯಲ್ಲಿ ಮೊಬೈಲ್ ರಂಗದಲ್ಲಿಯೇ ಅತ್ಯಂತ ಹಿಂದುಳಿದಿರುವ ಸರ್ಕಾರೀ ಹಾಗೂ ಸಾರ್ವಜನಿಕ ವಲಯದ ಬಿಎಸ್ಸೆನ್ನೆಲ್ ಸಂಸ್ಥೆಯು ಭವಿಷ್ಯದಲ್ಲಿ ಸಾರ್ವಜನಿಕ ರಂಗದ ಹೆಚ್ಎಂಟಿ ಅಥವಾ ಮೈಸೂರು ಕಾಗದ ಕಾರ್ಖಾನೆಯಂತೆ ಬಾಗಿಲು ಮುಚ್ಚುವ ಸಂಭಾವ್ಯತೆಯನ್ನೂ ತಳ್ಳಿಹಾಕಲಾಗುವುದಿಲ್ಲ. ಅತ್ಯಂತ ಕಳಪೆ ಸೇವೆ, ಸರ್ಕಾರದ ಮಲತಾಯಿ ಧೋರಣೆ, ನಿರ್ಲಕ್ಷ್ಯ ನೋಡುವಾಗ ಇಂಥ ಸಾಧ್ಯತೆ ಇದೆ. ನೋಕಿಯಾದಂಥ ಮುಂಚೂಣಿಯಲ್ಲಿದ್ದ ಮೊಬೈಲ್ ತಯಾರಕ ಕಂಪನಿಯು ತಂತ್ರಜ್ಞಾನವನ್ನು ನಿರ್ಲಕ್ಷಿಸಿದ ಪರಿಣಾಮ ಭಾರೀ ಬೆಲೆ ತೆರಬೇಕಾಯಿತು ಹಾಗೂ ಇತರ ತಂತ್ರಜ್ಞಾನ ಮುನ್ನಡೆ ಹೊಂದಿರುವ ಕಂಪನಿಗಳ ಮುಂದೆ ಸೋತು ಹೋಯಿತು. ಈಗಿನ ಮೋದಿ ನೇತೃತ್ವದ ಸರ್ಕಾರದ ನಿರ್ಲಕ್ಷ್ಯವನ್ನು ನೋಡುವಾಗ ಸರ್ಕಾರವೇ ಬಿಎಸ್ಸೆನ್ನೆಲ್ ಸಂಸ್ಥೆಯನ್ನು ಇಂಚಿಂಚಾಗಿಯೇ ಕೊಲ್ಲುತ್ತಿದೆಯೇನೋ ಎಂಬ ಭಾವನೆ ಬರುತ್ತದೆ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಎಸ್ಸೆನ್ನೆಲ್ ಸಂಸ್ಥೆಯ ಲ್ಯಾಂಡ್ಲೈನ್ ಬ್ರಾಡ್ಬ್ಯಾಂಡ್ ಸೇವೆ ಮತ್ತಷ್ಟು ಕಳಪೆಯಾಗಿದೆ. ಇದು ಮೋದಿಯವರ ಅಂತರಂಗದ ಗೆಳೆಯ ಮುಖೇಶ್ ಅಂಬಾನಿಯವರಿಗೆ ತನ್ನ ಉದ್ಯಮವನ್ನು ಬೆಳೆಸಲು ಪರೋಕ್ಷವಾಗಿ ಮಾಡುತ್ತಿರುವ ಸಹಾಯವೇ ಎಂದು ಜನರು ಸಂಶಯಿಸುವಂತೆ ಆಗಿದೆ. ಇಂಥ ಭಾವನೆ ಏಕೆ ಬರುತ್ತದೆ ಎಂದರೆ ಮೋದಿಯವರು ಭಾರತದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಓರ್ವ ಪ್ರಧಾನಮಂತ್ರಿಯಾಗಿದ್ದುಕೊಂಡು ಒಂದು ಖಾಸಗಿ ಕಂಪನಿಯ ಮಾಡೆಲ್ ತರಹ ನಡೆದುಕೊಂಡಿರುವುದು. ಸರ್ಕಾರೀ ಸ್ವಾಮ್ಯದ ಕಂಪನಿಗಳನ್ನು ನಿರ್ಲಕ್ಷ್ಯದಿಂದ ಕೊಂದರೆ ಖಾಸಗಿ ಕಂಪನಿಗಳ ಲೂಟಿಗೆ ಹೆಬ್ಬಾಗಿಲು ತೆರೆಯಲು ಸುಲಭವಲ್ಲವೇ? ಸಾರ್ವಜನಿಕ ರಂಗದ ಕಂಪನಿಗಳು ಇಲ್ಲದೆ ಹೋದರೆ ಭವಿಷ್ಯದಲ್ಲಿ ಖಾಸಗಿ ಕಂಪನಿಗಳ ಲಾಭಕೋರತನಕ್ಕೆ ತಡೆ ಹಾಕುವವರು ಇಲ್ಲದ ವಾತಾವರಣ ನಿರ್ಮಾಣವಾದರೂ ಅಚ್ಚರಿ ಇಲ್ಲ. ಖಾಸಗಿ ಕಂಪನಿಗಳು ವ್ಯಾಪಾರೀ ರಂಗದಲ್ಲಿರುವ ದಳ್ಳಾಳಿಗಳಂತೆ ಪರಸ್ಪರ ಮಾತಾಡಿಕೊಂಡು ತಮ್ಮ ಸೇವೆಗಳಿಗೆ ಹೆಚ್ಚಿನ ಲಾಭಂಶವನ್ನು ಕಬಳಿಸುವ ಸಂಭವನೀಯತೆ ಇದೆ. ಹೀಗಾಗಿ ಸಾರ್ವಜನಿಕ ರಂಗದ ಉದ್ಯಮಗಳು ಅಗತ್ಯವಾಗಿ ಬೇಕು. 

ರಿಲಾಯನ್ಸ್ ಜಿಯೋ ಆಪ್ಟಿಕಲ್ ಫೈಬರ್ ಜಾಲ ಹೊಂದಿರುವ ಖಾಸಗಿ ಕಂಪೆನಿಗಳಲ್ಲಿ ಮುಂಚೂಣಿಯಲ್ಲಿದ್ದು 2.7 ಲಕ್ಷ ರೂಟ್ ಕಿಲೋಮೀಟರ್ ಜಾಲ ಹೊಂದಿದ್ದು ಎರಡನೇ ಸ್ಥಾನದಲ್ಲಿ ಏರ್ಟೆಲ್ ಕಂಪನಿಯು ಇದ್ದು 2.1 ಲಕ್ಷ ರೂಟ್ ಕಿಲೋಮೀಟರ್ ಜಾಲ ಹೊಂದಿದೆ. ಹೀಗಾಗಿ ಭವಿಷ್ಯದ ತಂತ್ರಜ್ಞಾನದ ದೃಷ್ಟಿಯಿಂದ ರಿಲಾಯನ್ಸ್ ಜಿಯೋ ಉತ್ತಮ ಸ್ಥಾನದಲ್ಲಿದೆ. 4ಜಿ ಮೊಬೈಲ್ ತಂತ್ರಜ್ಞಾನ ಹೊಂದಬೇಕಾದರೆ ಆಪ್ಟಿಕಲ್ ಫೈಬರ್ ಜಾಲ ಅತ್ಯಗತ್ಯ. ರಿಲಾಯನ್ಸ್ ಹಳ್ಳಿಗಳಿಗೆ 4ಜಿ ಮೊಬೈಲ್ ತಂತ್ರಜ್ಞಾನ ತಂದರೆ ತಂತ್ರಜ್ಞಾನ ಅಳವಡಿಕೆಯಲ್ಲಿ ಹಿಂದಿರುವ ಅತ್ಯಂತ ದೊಡ್ಡ ಮೊಬೈಲ್ ಕಂಪನಿ ಏರ್ಟೆಲ್ ಕೂಡ ಹಿಂದೆ ಬೀಳುವ ಸಾಧ್ಯತೆ ಇಲ್ಲದಿಲ್ಲ. ಏಕೆಂದರೆ ಏರ್ಟೆಲ್ ಬಳಿ ಭವಿಷ್ಯದ ತಂತ್ರಜ್ಞಾನಕ್ಕೆ ಬೇಕಾದ ಆಪ್ಟಿಕಲ್ ಫೈಬರ್ ಜಾಲ ಕಡಿಮೆ ಇದೆ. ಏರ್ಟೆಲ್ ಕಂಪನಿ ಹಳೆಯ ತಂತ್ರಜ್ಞಾನವಾದ 2ಜಿ ಹಾಗೂ 3ಜಿ ತಂತ್ರಜ್ಞಾನದಲ್ಲಿ ಬಂಡವಾಳ ಹೂಡಿದೆ. ಇದು ಏರ್ಟೆಲ್ ಕಂಪನಿಯ ಹಿನ್ನಡೆಗೆ ಕಾರಣವಾಗುವ ಸಂಭವ ಇದೆ. ರಿಲಾಯನ್ಸ್ ಜಿಯೋ ಭವಿಷ್ಯದ ತಂತ್ರಜ್ಞಾನದಲ್ಲಿ ತನ್ನ ಹೆಚ್ಚಿನ ಬಂಡವಾಳ ಹೂಡಿರುವುದು ಅದಕ್ಕೆ ಧನಾತ್ಮಕ ಅಂಶವಾಗಿದೆ. ರಿಲಾಯನ್ಸ್ ಜಿಯೋ ಮೊಬೈಲ್ ಕಂಪನಿಯ 4ಜಿ ಸಿಗ್ನಲ್ ಈಗಾಗಲೇ ತಾಲೂಕು ಕೇಂದ್ರಗಳನ್ನು ದಾಟಿ ಸಣ್ಣ ಸಣ್ಣ ಪಟ್ಟಣಗಳಿಗೆ ಕಾಲಿಟ್ಟಿದೆ. ಏರ್ಟೆಲ್ ಹಾಗೂ ಐಡಿಯಾ 4ಜಿ ಸಿಗ್ನಲ್ ಕೇವಲ ತಾಲೂಕು ಕೇಂದ್ರದಲ್ಲಿ ಮಾತ್ರ ಲಭ್ಯವಿದೆ.

ರಿಲಯನ್ಸ್ ಜಿಯೋ 50 ರೂಪಾಯಿಗೆ 1 ಜಿಬಿ ಡಾಟಾ ಎಂದು ಪ್ರಚಾರದಲ್ಲಿ ಹೇಳಿದರೂ ಅದರ ವೆಬ್ಸೈಟಿನಲ್ಲಿ ಇರುವ ಪ್ರಕಾರ 1 ಜಿಬಿ ಡಾಟಾ ಆಡ್ ಆನ್ ಪ್ಯಾಕ್ 150 ರೂಪಾಯಿ ಬೆಲೆ ಹೊಂದಿದೆ. ಹೀಗಾಗಿ 1 ಜಿಬಿ ಇಂಟರ್ನೆಟ್ ಪ್ಯಾಕ್ 150 ರೂಪಾಯಿ ಎಂದುಕೊಳ್ಳಬಹುದು. ಇದಕ್ಕಿಂತ ಕಡಿಮೆ ಬೆಲೆಯ 1 ಜಿಬಿ ಡಾಟಾ ಅದರ ವೆಬ್ಸೈಟಿನಲ್ಲಿ ಕಾಣಿಸುವುದಿಲ್ಲ. ಜಿಯೋ ಕಂಪನಿಯ ಉಚಿತ ಧ್ವನಿ ಕರೆ, ಎಸ್ಸೆಮ್ಮೆಸ್, ರೋಮಿಂಗ್ ವೆಚ್ಚ ಇಲ್ಲದಿರುವುದು ಕೇವಲ ಗ್ರಾಹಕರನ್ನು ಸೆಳೆಯುವ ಉಪಾಯವೋ ಅಥವಾ ಭವಿಷ್ಯದಲ್ಲಿಯೂ ಸಾಕಷ್ಟು ಗ್ರಾಹಕರನ್ನು ಸೆಳೆದ ನಂತರವೂ ಮುಂದುವರಿಯುತ್ತದೆಯೋ ಕಾಲವೇ ಹೇಳಬೇಕು. ಜಿಯೋ ಬಳಿ 2ಜಿ ಹಾಗೂ 3ಜಿ ತಂತ್ರಜ್ಞಾನ ಇಲ್ಲದಿರುವ ಕಾರಣ ಈಗಾಗಲೇ ಬೇರೆ ಮೊಬೈಲ್ ಕಂಪನಿಗಳ ಗ್ರಾಹಕರಾಗಿರುವವರನ್ನು ಸೆಳೆಯಲು ಅದಕ್ಕೆ ಬೇರೆ ಮಾರ್ಗವೇ ಇಲ್ಲ. ಅದೂ ಅಲ್ಲದೆ ಅದರ ಬಳಿ 2ಜಿ, 3ಜಿ ತಂತ್ರಜ್ಞಾನ ಇಲ್ಲದಿರುವ ಕಾರಣ ಅದು ಹಳ್ಳಿಗಳಿಗೆ 4ಜಿ ತಂತ್ರಜ್ಞಾನವನ್ನು ಬೇಗನೆ ತಲುಪಿಸುವ ಅನಿವಾರ್ಯತೆಯನ್ನೂ ಹೊಂದಿದೆ. ಹೀಗಾಗಿ ಅದು ಬೇಗನೆ ಗ್ರಾಮೀಣ ಪ್ರದೇಶಗಳಿಗೆ ಬಂದರೂ ಬರಬಹುದು. ಜಿಯೋ ನೆಟ್ವರ್ಕ್ ಒಳಗೆ ಮಾತ್ರ ಉಚಿತ ಧ್ವನಿ ಕರೆ ಸಾಧ್ಯ ಎಂದು ಕಾಣುತ್ತದೆ. ಜಿಯೋ ಮೂಲಕ ಧ್ವನಿ ಕರೆ ಮಾಡುವವರು ಬೇರೆ ಕಂಪನಿಗಳ ನೆಟ್ವರ್ಕಿಗೆ ಕರೆ ಮಾಡಬೇಕಾದರೆ ಜಿಯೋ ಜಾಯ್ನ್ ಎಂಬ ಆಪ್ ಮೂಲಕ ಮಾಡಬೇಕಾಗಿರುವುದರಿಂದ ಅದು ಡಾಟಾ ಬಳಸುತ್ತದೆ. ಹೀಗಾಗಿ ಧ್ವನಿ ಕರೆ ಸಂಪೂರ್ಣ ಉಚಿತವಲ್ಲ. ಅದು ಡಾಟಾ ಪ್ಯಾಕಿನಿಂದ ಡಾಟಾ ಬಳಸಿಕೊಳ್ಳುತ್ತದೆ.

No comments:

Post a Comment