Sep 24, 2016

ಒಕ್ಕೂಟ ವ್ಯವಸ್ಥೆಯೂ ಪ್ರಾದೇಶಿಕ ಪಕ್ಷಗಳೂ: ಒಂದು ಟಿಪ್ಪಣಿ.

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ರಾಜ್ಯವೊಂದಕ್ಕೆ ಒಕ್ಕೂಟ ವ್ಯವಸ್ಥೆಯಲ್ಲಿ ಅನ್ಯಾಯವಾಗುತ್ತಿದೆ ಎಂದೆನಿಸಿದಾಗೆಲ್ಲ ಆ ರಾಜ್ಯದ ಜನತೆ ಪ್ರಾದೇಶಿಕ ಪಕ್ಷವೊಂದು ತಮಗೆ ಇದ್ದಿದ್ದೇ ಆಗಿದ್ದರೆ ಇಂತಹದೊಂದು ಅನ್ಯಾಯ ತಮಗಾಗುತ್ತಿರಲಿಲ್ಲವೆಂದು ಕೊರಗುವುದು ಮತ್ತು ತಾತ್ಕಾಲಿಕವಾಗಿ ಅದರ ಬಗ್ಗೆ ಒಂದಿಷ್ಟು ಚರ್ಚಿಸುವುದು ಕಳೆದ ಏಳು ದಶಕಗಳಿಂದಲೂ ಇಂಡಿಯಾದ ಹಲವಾರು ರಾಜ್ಯಗಳಲ್ಲಿ ನಡೆಯುತ್ತ ಬಂದಿರುವ ವಿದ್ಯಾಮಾನ. ಇದೀಗ ಅಂತಹುದೇ ಒಂದು ಚರ್ಚೆ ನಮ್ಮ ನಾಡಿನ ಜನರಲ್ಲಿಯೂ ಪ್ರಾರಂಭವಾದಂತಿದೆ. ಆದರೆ ಇಂತಹ ಚರ್ಚೆಯಿನ್ನೂ ಒಂದು ನೆಲೆಯಲ್ಲಿ ಮಾತ್ರ ನಡೆಯುತ್ತಿದ್ದು,. ಅದರಲ್ಲೂ ಇಂತಹದೊಂದು ಚರ್ಚೆ ಹೆಚ್ಚಾಗಿ ನಡೆಯುತ್ತಿರುವುದು ಅಕ್ಷರಸ್ಥರೇ ಹೆಚ್ಚಾಗಿರುವ ಸಾಮಾಜಿಕ ತಾಲತಾಣಗಳಲ್ಲಿ ಮತ್ತು ಆಗೀಗ ಸುದ್ದಿ ವಾಹಿನಿಗಳ ಚರ್ಚೆಗಳಲ್ಲಿ ಬಂದು ತಮ್ಮ ಅನಿಸಿಕೆಗಳನ್ನು ಹೇಳುವ ಹೋರಾಟಗಾರರ ಮಟ್ಟದಲ್ಲಿ ಮಾತ್ರ. ಆದರೆ ಪರಿಸ್ಥಿತಿ ಹೀಗೇ ಮುಂದುವರೆದರೆ ಈ ಚರ್ಚೆ ಸಮಾಜದ ಎಲ್ಲ ಸ್ತರಗಳಲ್ಲಿಯೂ ನಡೆಯುವುದು ಖಚಿತವೆನಿಸುತ್ತಿದೆ.

ಬಹುಶ: ಈ ಹಿಂದೆಯೂ ಕರ್ನಾಟಕಕ್ಕೆ ಕೇಂದ್ರ ಸರಕಾರದಿಂದ ಹಲವು ರೀತಿಯ ಅನ್ಯಾಯಗಳು ಆಗಿದ್ದರೂ ಕನ್ನಡಿಗರು ಮಾತ್ರ ತಾವು ಈ ಒಕ್ಕೂಟ ವ್ಯವಸ್ಥೆಯ ಅವಿಬಾಜ್ಯ ಅಂಗವೆಂಬ ಉದಾತ್ತತೆಯನ್ನು ಕಾಪಾಡಿಕೊಂಡೇ ಬಂದಿದ್ದು, ಪ್ರತ್ಯೇಕತೆಯ ಮಾತನ್ನಾಗಲಿ, ಕೇಂದ್ರದ ವಿರುದ್ದವಾಗಲಿ ಗಟ್ಟಿಯಾಗಿ ದನಿಯೆತ್ತಿದವರೇನಲ್ಲ. ಆದರೆ ಕನ್ನಡಿಗರ ಈ ಉದಾರತೆಯನ್ನೇ ಅವರ ದೌರ್ಬಲ್ಯವೆಂದು ಬಾವಿಸಿ, ನೆರೆಹೊರೆಯ ರಾಜ್ಯಗಳು ನೆಲ ಮತ್ತು ಜಲಗಳ ವಿಷಯದಲ್ಲಿ ಅನೇಕ ರೀತಿಯ ಕಿರುಕುಳ ನೀಡುತ್ತ ಬಂದಾಗಲೂ ಆಗಾಗಿನ ಕೇಂದ್ರ ಸರಕಾರಗಳು ಕನ್ನಡಿಗರ ಆಶೋತ್ತರಗಳಿಗೆ ವಿರುದ್ದವಾಗಿಯೇ ನಡೆದುಕೊಂಡು ಬಂದಿರುವುದು ವಾಸ್ತವದ ವಿಷಯವಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ನೆರೆಯ ರಾಜ್ಯಗಳು ನದಿನೀರಿನ ಹಂಚಿಕೆಯ ವಿಷಯದಲ್ಲಿ ಮತ್ತು ಗಡಿಯ ಬಗ್ಗೆ ಸದಾ ಒಂದಿಲ್ಲೊಂದು ನೆಪದಲ್ಲಿ ನಮ್ಮ ನಿದ್ದೆಗೆಡಿಸುತ್ತಲೇ ಬಂದಿವೆ.

ಆದರೆ ಈ ಬಾರಿ ಕನ್ನಡಿಗರ ಸಹನೆಯ ಕಟ್ಟೆ ಒಡೆದಿದ್ದು ಒಕ್ಕೂಟ ವ್ಯವಸ್ಥೆಯನ್ನೇ ಪ್ರಶ್ನೆ ಮಾಡುವ ಹಂತಕ್ಕೆ ಬಂದಿದ್ದರೆ ಅದರಲ್ಲಿ ಅಚ್ಚರಿಯೇನಿಲ್ಲ. ಯಾಕೆಂದರೆ ಕಳಸಬಂಡೂರಿ ವಿಚಾರದಲ್ಲಾಗಲಿ, ಕಾವೇರಿ ನದಿನೀರಿನ ಹಂಚಿಕೆಯ ವಿಷಯದಲ್ಲಿಯಾಗಲಿ, ನಮ್ಮ ಅಕ್ಕಪಕ್ಕದ ರಾಜ್ಯಗಳು ನಮ್ಮ ಹಿತಾಸಕ್ತಿಗಳ ವಿರುದ್ದ ನಡೆದುಕೊಂಡಾಗ ಕೇಂದ್ರ ಸರಕಾರ ಮದ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಲು ನಿರಾಕರಿಸಿದೆ. ಇದೇ ರೀತಿ ಗಡಿಯ ವಿಷಯದಲ್ಲಿ ಮಹಾಜನ್ ವರದಿ ಅಂತಿಮವಾಗಿದ್ದರೂ ಬೆಳಗಾವಿಯ ವಿಚಾರದಲ್ಲಿ ಪಕ್ಕದ ಮಹಾರಾಷ್ಟ್ರ ತಗಾದೆಯನ್ನು ತೆಗೆಯುತ್ತಲೇ ಬಂದಿದೆ.

ಅದೂ ನದಿ ನೀರಿನ ಹಂಚಿಕೆಯ ವಿಷಯ ಬಂದಾಗ ಎಲ್ಲ ಕೇಂದ್ರ ಸರಕಾರಗಳೂ ಆಂದ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಪ್ರಾದೇಶಿಕ ಪಕ್ಷಗಳ ಒತ್ತಡಕ್ಕೆ ಮಣಿದು ಕನ್ನಡನಾಡಿಗೆ ಅನ್ಯಾಯ ಎಸಗುತ್ತಲೇ ಬಂದಿವೆ. ಯಾಕೆಂದರೆ ಕೇಂದ್ರದಲ್ಲಿ ಯಾವಾಗೆಲ್ಲ ಸಮ್ಮಿಶ್ರ ಸರಕಾರಗಳು ಬಂದಿವೆಯೊ ಆಗೆಲ್ಲ ಆ ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಆ ಸರಕಾರಗಳ ಒಂದು ಭಾಗವಾಗಿಯೊ ಇಲ್ಲ ಹೊರಗಿನಿಂದ ಬೆಂಬಲ ಕೊಡುತ್ತಲೆಯೋ ಕೇಂದ್ರದ ಮೇಲೆ ಹಿಡಿತ ಬಿಗಿಗೊಳಿಸುತ್ತ ತಮಗೆ ಅನುಕೂಲಕಾರಿ ನಿರ್ದಾರಗಳು ಬರುವಂತೆ ನೋಡಿಕೊಳ್ಳುತ್ತಿವೆ.ಆಂದ್ರಪ್ರದೇಶದಲ್ಲಿ ತೆಲುಗುದೇಶಂ ಪಕ್ಷ, ತಮಿಳುನಾಡಲ್ಲಿ ಡಿ.ಎಂ.ಕೆ. ಮತ್ತು ಎ.ಐ.ಎ.ಡಿ.ಎಂ.ಕೆ ಪಕ್ಷಗಳು ಕೇಂದ್ರ ಸರಕಾರಗಳನ್ನು ತಮ್ಮ ಸಂಸತ್ ಸದಸ್ಯರ ಸಂಖ್ಯೆಗನುಗುಣವಾಗಿ ಬ್ಲಾಕ್ ಮೆಯಿಲ್ ಮಾಡುತ್ತ ತಮ್ಮ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳುತ್ತಾ ಬಂದಿವೆ. ಇನ್ನು ರಾಷ್ಟ್ರದಾದ್ಯಂತ ಬೇರು ಬಿಟ್ಟಿರುವ ನಮ್ಮ ಎರಡೂ ರಾಜಕೀಯ ಪಕ್ಷಗಳಾದ ಕಾಂಗ್ರೇಸ್ ಮತ್ತು ಬಾಜಪಗಳು ತಾವು ಅಧಿಕಾರದಲ್ಲಿ ಉಳಿಯುವ ಏಕೈಕ ದೃಷ್ಠಿಯಿಂದ ನಾನು ಮೇಲೆ ಹೇಳಿದ ಪ್ರಾದೇಶಿಕ ಪಕ್ಷಗಳ ಮರ್ಜಿಗನುಗುಣವಾಗಿ ಆಡಳಿತ ನಡೆಸುತ್ತ ಕರ್ನಾಟಕದ ಕೂಗನ್ನು ಕೇಳಿಸಿಕೊಳ್ಳದ ಜಾಣಕಿವುಡನ್ನು ಪ್ರದರ್ಶಿಸುತ್ತಿವೆ. ಕೇವಲ ನೆಲಜಲ ಮಾತ್ರವಲ್ಲ ಕೇಂದ್ರ ಸರಕಾರಗಳ ಹಲವಾರು ಯೋಜನೆಗಳ ವಿಷಯದಲ್ಲಿ, ಹಾಗು ರೈಲ್ವೇ ಇಲಾಖೆಯ ಆಗು ಹೋಗುಗಳಲ್ಲಿಯೂ ಕರ್ನಾಟಕದವರಿಗೆ ಅನ್ಯಾಯವೆಸುಗುತ್ತಲೇ ಬಂದಿವೆ. ಇದು ಒಂದೆರಡು ದಿನಗಳ ಮಾತಲ್ಲ. ಸ್ವಾತಂತ್ರಾ ನಂತರದ ಏಳು ದಶಕಗಳಿಂದಲೂ ರಾಜ್ಯಕ್ಕೆ ಇಂತಹ ಸಾಕಷ್ಟು ಅನ್ಯಾಯಗಳು ಆಗುತ್ತಲೇ ಬಂದಿವೆ. ಇದನ್ನು ಇದೀಗ ಗಂಬೀರವಾಗಿ ತೆಗೆದುಕೊಂಡಿರುವ ಕರ್ನಾಟಕದ ಜನತೆ ಇದೀಗ ಒಕ್ಕೂಟ ವ್ಯವಸ್ಥೆಯ ಔಚಿತ್ಯವನ್ನೇ ಪ್ರಶ್ನೆ ಮಾಡುವ ಹಂತಕ್ಕೆ ಬಂದು ನಿಂತಿದ್ದಾರೆ. ಒಂದು ಪ್ರಾದೇಶಿಕ ಪಕ್ಷ ಕೇಂದ್ರ ಸರಕಾರದ ವಿರುದ್ದ ಸೆಟೆದು ನಿಂತು ತನಗಾಗುತ್ತಿರುವ ಅನ್ಯಾಯಗಳನ್ನು ಧಿಕ್ಕರಿಸಿ ಗೆಲ್ಲಲು ಸಾದ್ಯವೇ ಎಂಬ ಪ್ರಶ್ನೆಯೂ ಹಲವರನ್ನು ಕಾಡುತ್ತಿರುವುದುಂಟು.

ಇರಲಿ, ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುವ ಮುಂಚೆ ಇಂಡಿಯಾದಲ್ಲಿ ಪ್ರಾದೇಶಿಕ ಪಕ್ಷಗಳ ರಚನೆ ಮತ್ತು ಅವುಗಳ ಕಾರ್ಯವೈಖರಿಯ ಇತಿಹಾಸವನ್ನೊಮ್ಮೆ ಸೂಕ್ಷ್ಮವಾಗಿ ಅವಲೋಕಿಸಿ ನೋಡುವುದು ಅತ್ಯಗತ್ಯವಾಗಿದೆ. ನಂತರ ಬೇಕಿದ್ದಲ್ಲಿ ಪ್ರಾದೇಶಿಕ ಪಕ್ಷಗಳ ಇಚ್ಚಾಶಕ್ತಿ ಮತ್ತದರಿಂದಾಗುವ ಲಾಭಗಳ ಬಗ್ಗೆ ನೋಡೋಣ:

ಇಂಡಿಯಾದ ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳ ಪರ್ವ ಶುರುವಾಗಿದ್ದೇ ಎಂಭತ್ತರ ದಶಕದಲ್ಲಿ. ಹಿಂದೆಯೂ ಕೆಲವು ಪ್ರಾದೇಶಿಕ ಪಕ್ಷಗಳಿದ್ದರೂ ಅವು ಯಾವುದೇ ವ್ಯಕ್ತಿಯೊಬ್ಬನನ್ನು ಅಥವಾ ಒಂದು ಕುಟುಂಬವನ್ನು ಸಂಪ್ರೀತಗೊಳಿಸಲು ಮಾತ್ರವೇ ಜನಿಸಿದಂತವಾಗಿರಲಿಲ್ಲ. ಬದಲಿಗೆ ಅವುಗಳಿಗೆ ತಮ್ಮದೇ ಆದ ಜನಪರ ಸಿದ್ದಾಂತಗಳು, ಕಾಳಜಿಗಳು ಇದ್ದವು. ಉದಾಹರಣೆಗೆ ಶ್ರೀರಾಮಮನೋಹರ ಲೋಹಿಯಾರವರ ಪ್ರಜಾ ಸೋಷಿಯಲಿಸ್ಟ್ ಪಾರ್ಟಿ. ಆದರೆ ಎಪ್ಪತ್ತರ ದಶಕದ ಮದ್ಯಭಾಗದಲ್ಲಿ ಕಾಂಗ್ರೆಸ್ಸಿನ ದುರಾಡಳಿತವನ್ನು ಮತ್ತು ಆಗಿನ ಪ್ರದಾನಮಂತ್ರಿಗಳಾದ ದಿವಂಗತ ಶ್ರೀಮತಿ ಇಂದಿರಾ ಗಾಂಧಿಯವರು ರಾಷ್ಟ್ರದ ಮೇಲೆ ಹೇರಿದ ತುರ್ತುಪರಿಸ್ಥಿತಿಯನ್ನು ಎದುರಿಸುವ ಸಲುವಾಗಿ ಒಂದಾದ ಅನೇಕ ಪ್ರಾದೇಶಿಕ ಪಕ್ಷಗಳು ಮತ್ತು ಗುಂಪುಗಳು ಜನತಾಪಕ್ಷವನ್ನು ಸ್ಥಾಪಿಸಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾದವು. ಆದರೆ ಯಾವತ್ತಿಗೂ ಅಧಿಕಾರದ ಕನಸು ಕಂಡಿರದ ಅವುಗಳಿಗೆ ಸಿಕ್ಕ ಅಧಿಕಾರವನ್ನು ಉಳಿಸಿಕೊಳ್ಳುವ ಮತ್ತು ಜನರ ಒಳಿತಿಗೆ ಅದನ್ನು ಬಳಸಿಕೊಳ್ಳುವ ಯಾವುದೇ ಇಚ್ಛಾಶಕ್ತಿಯಾಗಲಿ, ಇಷ್ಟವಾಗಲಿ ಇದ್ದಂತೆ ಕಾಣಲಿಲ್ಲ. ಜನಪರ ಆಡಳಿತ ನೀಡುವುದಕ್ಕಿಂತ ಹೆಚ್ಚಾಗಿ ತಮ್ಮ ವೈಯುಕ್ತಿಕ ಪ್ರತಿಷ್ಠೆ ಅಹಂಕಾರಗಳೇ ಹೆಚ್ಚಾಗಿ ಒಳಜಗಳಗಳಲ್ಲಿ ಮುಳುಗಿ ಹೋದರು. ತಾವು ಎಲ್ಲೇ ಇದ್ದರೂ ತಮ್ಮ ಬಲಪಂಥೀಯ ಸಿದ್ದಾಂತವನ್ನು ಪ್ರತಿಪಾದಿಸಿ ಜಾರಿಗೆ ತರಲು ಯತ್ನಿಸುವ ಅವತ್ತಿನ ಜನಸಂಘದ (ಆರ್.ಎಸ್.ಎಸ್.ನ ದ್ವಿಸದಸ್ಯತ್ವ) ನೀತಿ ಜನತಾಪಕ್ಷದೊಳಗಿದ್ದ ಸಮಾಜವಾದಿಗಳ ಸಿಟ್ಟಿಗೆ ಕಾರಣವಾಯಿತು. ರಾಷ್ಟ್ರದ ಹಿತಕ್ಕಿಂತ ತನ್ನ ಬಲಪಂಥೀಯ ನಿಲುವೇ ಶ್ರೇಷ್ಠವೆಂದು ಅದಕ್ಕೆ ಅಂಟಿಕೊಂಡ ಜನಸಂಘದ ಜಿಗುಟುತನ ಅಂತಿಮವಾಗಿ ಜನತಾಪಕ್ಷ ಛಿದ್ರವಾಗಿ ಹೋಗಲು ಕಾರಣೀಭೂತವಾಯಿತು. ಹೀಗೆ ೧೯೮೦ರಲ್ಲಿ ಒಡೆದ ಜನತಾ ಪಕ್ಷ ತರುವಾಯ ನಡೆದ ಲೋಕಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಇಂದಿರಾಗಾಂದಿಯವರ ಕಾಂಗ್ರೇಸ್ಸಿನ ಮುಂದೆ ಸೋತು ಹೋಯಿತು.

ನಂತರದಲ್ಲಿ ಜನಸಂಘ ತನ್ನ ಪ್ರತ್ಯೇಕ ಅಸ್ಥಿತ್ವವನ್ನು ಕಾಪಾಡಿಕೊಳ್ಳುವ ಸಲುವಾಗಿ ಬಾರತೀಯ ಜನತಾಪಕ್ಷವೆಂದು ಹೆಸರು ಬದಲಾಯಿಸಿಕೊಂಡು ಯಾರ ಅಂಕೆಯೂ ಇರದ ಬಲಪಂಥೀಯ ರಾಜಕೀಯ ಶಕ್ತಿಯಾಗಿ ಬೆಳೆಯುತ್ತ ಹೋಯಿತು. ಹೀಗೆ ಒಂದು ಕಡೆ ಕಾಂಗ್ರೆಸ್ ಸರ್ವಮಾನ್ಯ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದರೆ ಮತ್ತೊಂದಡೆ ದೇಶದಾದ್ಯಂತ ತನ್ನ ಸಂಘಪರಿವಾರದ ಬೇರುಗಳನ್ನು ಹರಡಿದ್ದ ಬಾಜಪ ಸಹ ಒಂದು ರಾಷ್ಟ್ರೀಯ ಪಕ್ಷವಾಗಿ ಗುರುತಿಸಿಕೊಳ್ಳುತ್ತಾ ಹೋಯಿತು. ಆದರೆ ಜನತಾಪಕ್ಷದಲ್ಲಿದ್ದ ಇತರೇ ಪುಡಿಪಕ್ಷಗಳ ನೇತಾರರು ಮತ್ತು ಅನೇಕ ಸಮಾಜವಾದಿ ಹಿನ್ನೆಲೆಯ ನಾಯಕರುಗಳಿಗೆ ಒಂದು ರೀತಿಯ ಶೂನ್ಯತೆ ಆವರಿಸಿತು. ಒಡೆದು ಹೋದ ಜನತಾಪಕ್ಷದಲ್ಲುಳಿದ ನಾಯಕರುಗಳೇ ಆ ಪಕ್ಷವನ್ನು ಮುನ್ನಡೆಸಬೇಕಾದ ಅನಿವಾರ್ಯತೆಗೆ ಸಿಲುಕಿದರು. ಇಂತಹ ಸಮಯದಲ್ಲಿ ಆ ಪಕ್ಷವನ್ನು ಮುನ್ನಡೆಸಲು ಬೇಕಾದ ನಾಯಕತ್ವದ ಗುಣ ಮತ್ತು ಹಣ ಕ್ರೋಢೀಕರಿಸಲು ಶಕ್ತಿಯಿದ್ದವರೇ ಅದರ ಮುಂದಾಳತ್ವ ವಹಿಸ ಬೇಕಾಯಿತು.

ಇದರ ಪರಿಣಾಮವಾಗಿ ಅಲ್ಲಿಯವರೆಗೂ ತೆರೆಮರೆಯಲಿದ್ದ ಅನೇಕ ಪ್ರಾದೇಶಿಕ ನಾಯಕರುಗಳು ರಾಷ್ಟ್ರೀಯ ಮಹತ್ವ ಗಳಿಸಲು ಸಾದ್ಯವಾಯಿತು. ಅಲ್ಲಿಂದಲೇ ಇಂಡಿಯಾದ ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳು ತಲೆಯೆತ್ತಲಾರಂಬಿಸಿದವು. ತದನಂತರದಲ್ಲಿ ಸರಿ ಸುಮಾರು ೧೯೯೦ರಿಂದ ೨೦೦೪ ರವರೆಗಿನ ಅವದಿಯಲ್ಲಿ ಅನೇಕ ರಾಜ್ಯಗಳಲ್ಲಿ ಸ್ಥಳೀಯ ಬಲಾಢ್ಯ ನಾಯಕರುಗಳ ನೇತೃತ್ವದಲ್ಲಿ ಅನೇಕ ಪ್ರಾದೇಶಿಕ ಪಕ್ಷಗಳು ಜನ್ಮ ತಾಳುತ್ತಾ ಹೋದವು. ಹೀಗೆ ಹುಟ್ಟಿದ ಒಂದೊಂದು ಪಕ್ಷಗಳ ಹಿಂದಿನ ಕಥೆಯನ್ನು ವಿಶದವಾಗಿ ಹೇಳಬಹುದಾದರು ಸ್ಥಳಾಬಾವದ ಕಾರಣದಿಂದ ಅದರ ಅವಶ್ಯಕತೆಯಿಲ್ಲವೆಂದು ನನ್ನ ಬಾವನೆ.

ಹಾಗೆ ಜನ್ಮ ತಾಳಿದ ಪಕ್ಷಗಳ ಒಂದು ಪಟ್ಟಿಯನ್ನು ನೋಡಿ:

ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವರ ಸಮಾಜವಾದಿ ಪಕ್ಷ, ಬಿಹಾರದಲ್ಲಿ ಲಾಲು ಪ್ರಸಾದ್ ಯಾದವರ ರಾಷ್ಟ್ರೀಯ ಜನತಾದಳ, ಶರದ್ ಯಾದವ್ ನೇತ್ರತ್ವದ ಜನತಾದಳು (ಯು), ಒರಿಸ್ಸಾದಲ್ಲಿ ಬಿಜು ಪಟ್ನಾಯಕರ ಬಿಜು ಜನತಾದಳ, ಅಜಿತ್ ಸಿಂಗ್ ರವರ ರಾಷ್ಟ್ರೀಯ ಲೋಕದಳ್, ರಾಂ ವಿಲಾಸ್ ಪಾಸ್ವಾನರ ಜನತಾಪಕ್ಷ ಪ್ರಮುಖವಾದವುಗಳು. ಕರ್ನಾಟಕದಲ್ಲಿ ದೇವೇಗೌಡರ ನೇತೃತ್ವದ ಜನತಾದಳ(ಎಸ್), ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ನೇತ್ರತ್ವದ ತೃಣಮೂಲ ಕಾಂಗ್ರೆಸ್, ಹೀಗೆ ಸಾಲು ಸಾಲು ಪ್ರಾದೇಶಿಕ ಪಕ್ಷಗಳು ಜನ್ಮತಾಳಿ ಇಂಡಿಯಾದ ಒಟ್ಟು ರಾಜಕೀಯ ಚಿತ್ರಣವನ್ನೇ ಬದಲಾಯಿಸಿ ಬಿಟ್ಟವು.

ಇವುಗಳಿಗಿಂತ ಮೊದಲೂ ಕೆಲವು ಪ್ರಾದೇಶಿಕ ಪಕ್ಷಗಳು ಕೆಲಸ ಮಾಡುತ್ತಿದ್ದು ಅವುಗಳ ಕಥೆಯೇನು ಇವುಗಳಿಗಿಂತ ಭಿನ್ನವಾಗೇನು ಇಲ್ಲ. ಅವುಗಳಲ್ಲಿ ಮುಖ್ಯವಾದವುಗಳು ತಮಿಳುನಾಡಿನ ದ್ರಾವಿಡ ಪಕ್ಷಗಳಾದ ಡಿ.ಎಂ.ಕೆ.ಮತ್ತು ಅಣ್ಣಾ ಡಿ.ಎಂ.ಕೆ. ಮುಖ್ಯವಾದವುಗಳು. ಎಂಭತ್ತರ ದಶಕದಲ್ಲಿ ತೆಲುಗು ಜನತೆಯ ಸ್ವಾಭಿಮಾನದ ಹೆಸರಲ್ಲಿ ಹಿರಿಯ ನಟ ದಿವಂಗತ ಎನ್.ಟಿ.ರಾಮಾರಾವ್ ಸಹ ತೆಲುಗು ದೇಶಂ ಪಕ್ಷವನ್ನು ಹುಟ್ಟು ಹಾಕಿದ್ದರು. ಇದೇ ಸಮಯದಲ್ಲಿ ಮಹಾರಾಷ್ಟ್ರದಲ್ಲಿ ಅಂಬೇಡ್ಕರ್‌ರವರ ವಾರಸುದಾರರೆನಿಸಿಕೊಂಡವರು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾವನ್ನು ಸ್ಥಾಪಿಸಿದ್ದರು. ಮಹಾರಾಷ್ಟ್ರದಲ್ಲಿ ಮರಾಠಿಗರ ಸ್ವಾಭಿಮಾನದ ಹೆಸರಲ್ಲಿ ಬಾಳಾಠಾಕ್ರೆಯವರು ಶಿವಸೇನೆಯನ್ನು ಸ್ಥಾಪಿಸಿದ್ದರು. ಒಂದು ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸಲು ಅವತ್ತಿಗೆ ಬೇಕಾಗಿದ್ದುದು ಒಂದಷ್ಟು ಜನಪ್ರಿಯತೆ, ಜಾತಿಯ ಬಲ, ಮತ್ತು ಹಣ. ಈ ಲೆಕ್ಕಾಚಾರವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದು ತಮಿಳುನಾಡಿನ ನಾಯಕರುಗಳು. ಅಲ್ಲೀಗ ವಿಜಯಕಾಂತ್ ಮುಂತಾದ ಸಿನಿಮಾ ನಟರ ಪಕ್ಷಗಳು ಜನ್ಮತಾಳಿವೆ. ಜೊತೆಗಲ್ಲಿ ಜಾತಿಗೊಂದು ಪಕ್ಷಗಳು ತಲೆಯೆತ್ತಿ ನಿಂತಿವೆ.

ನೀವು ಕೇಳಿನೋಡಿ ಈ ಎಲ್ಲ ಪಕ್ಷಗಳು ಹೇಳುವುದೊಂದೇ ಮಾತು: ಅದು ನಾವು ಕೇಂದ್ರ ಸರಕಾರದ ಮಲತಾಯಿ ದೋರಣೆಯ ವಿರುದ್ದ ಮತ್ತು ಸ್ಥಳೀಯ ಜನತೆಯ ಆಶೋತ್ತರಗಳನ್ನು ಈಡೇರಿಸಲು ಮಾತ್ರವೇ ರಾಜಕಾರಣದಲ್ಲಿದ್ದೇವೆ ಎನ್ನುವುದು. ಬಾಗಶ: ಇದು ಸತ್ಯವೆಂದು ನಂಬಬಹುದಾದರು ಇಂತಹ ಪಕ್ಷಗಳು ಹುಟ್ಟಿಹಾಕಿರುವ ಸಮಸ್ಯೆಗಳು ತೀರಾ ಗಂಬೀರ ಸ್ವರೂಪದಂತವು. ಯಾಕೆಂದರೆ ಸದರಿ ಪಕ್ಷಗಳೆಲ್ಲ ಏಕವ್ಯಕ್ತಿಯ ಹಿಡಿತದಲ್ಲಿದ್ದು ಆತನ ನಂತರ ಏನು ಎನ್ನುವ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. 

ಉದಾಹರಣೆಗೆ ಒರಿಸ್ಸಾದಲ್ಲಿ ಬಿಜು ಜನತಾದಳ ಕಟ್ಟಿದ ದಿವಂಗತ ಬಿಜು ಪಟ್ನಾಯಕ್ ನಿದನಾನಂತರ ಅವರ ಸ್ಥಾನ ತುಂಬಲು ಆ ಪಕ್ಷದಲ್ಲಿ ಎರಡನೇ ಶ್ರೇಣಿಯ ನಾಯಕರುಗಳೇ ಇರಲಿಲ್ಲ. ಅಂತಹ ಸಂದರ್ಭದಲ್ಲಿ ವಿದೇಶದಲ್ಲಿದ್ದ ಮತ್ತು ಇವತ್ತಿಗೂ ಒಡಿಸ್ಸಾ ಬಾಷೆ ಮಾತಾಡಲು ಬಾರದ ಅವರ ಮಗ ನವೀನ್ ಪಟ್ನಾಯಕ್ ಬಂದು ಮುಖ್ಯಮಂತ್ರಿ ಪದವಿ ಅಲಂಕರಿಸಬೇಕಾಯಿತು. ಪ್ರಜಾಪ್ರಭುತ್ವದಲ್ಲಿ ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇರಿಲ್ಲ. ಇನ್ನು ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದಲ್ಲಿ ಮುಲಾಯಂ ಸಿಂಗ್ ಯಾದವರ ನಂತರ ಒಬ್ಬನೇ ಒಬ್ಬ ಸಮರ್ಥ ನಾಯಕನೂ ಇಲ್ಲ. ಅಮರ್ ಸಿಂಗ್ ಅಂತಹ ಉದ್ಯಮಿ ಮತ್ತು ಅಜಂಖಾನರಂತಹ ಮೂರ್ಖರ ಹೊರತಾಗಿ ಅಲ್ಲಿ ಯಾವ ನಾಯಕನೂ ಬೆಳೆಯಲಿಲ್ಲ. ಅಥವಾ ಬೆಳೆಸಲಿಲ್ಲ. ಹಾಗಾಗಿ ಕಳೆದ ಬಾರಿಯ ಚುನಾವಣೆಯಾದ ನಂತರ ವಿದಿಯಿಲ್ಲದೆ ಮುಲಾಯಂರವರ ಮಗ ಅಖಿಲೇಶ್ ಯಾದವ್ ಮುಖ್ಯಮಂತ್ರಿಯಾಗಬೇಕಾಯಿತು ಅಥವಾ ಅಂತಹದೊಂದು ಸನ್ನಿವೇಶವನ್ನು ಸೃಷ್ಠಿಸಿಡಲಾಗಿತ್ತು.

ಇದಕ್ಕಿಂತ ದುರಂತದ ಸಂಗತಿಯೆಂದರೆ ಬಿಹಾರದ ಮುಖ್ಯಮಂತ್ರಿಯಾಗಿದ್ದ ಲಾಲೂ ಪ್ರಸಾದರ ಮೇಲೆ ಮೇವು ಹಗರಣದ ಆರೋಪ ಬಂದಾಗ ಆತ ಕುರ್ಚಿಯಿಂದ ಇಳಿಯಬೇಕಾಯಿತು. ಆಗ ಆತ ಮಾಡಿದ್ದು ತನ್ನ ಪತ್ನಿ ರಾಬ್ಡಿ ದೇವಿಯನ್ನು ಮುಖ್ಯಮಂತ್ರಿಯ ಗಾದಿಯಲ್ಲಿ ಕೂರಿಸಿದ್ದು. ಲಾಲೂರವರ ಆರ್.ಜೆ.ಡಿ.ಯಲ್ಲಿ ಲಾಲೂರವರ ಕುಟುಂಬದ ಸದಸ್ಯರ ಹೊರತಾಗಿ ಬೇರ‍್ಯಾರು ನಾಯಕರು ಆ ಸ್ಥಾನವನ್ನಲಂಕರಿಸುವ ಮಟ್ಟಿಗೆ ಬೆಳೆದಿರಲಿಲ್ಲ. ಇನ್ನು ಆಂದ್ರದಲ್ಲಿ ತೆಲುಗುದೇಶಂನ ಚುಕ್ಕಾಣಿಯನ್ನು ಹಿಡಿದಿರುವುದು ಎನ್.ಟಿ.ಆರ್. ಅವರ ಅಳಿಯ ಚಂದ್ರಬಾಬು ನಾಯ್ಡು. ಅಲ್ಲಿ ರಾಮಾರಾವ್ ಕುಟುಂಬದ ಹೊರತಾಗಿ ಬೇರಿನ್ನಾವ ನಾಯಕರೂ ಎರಡನೇ ಹಂತದ ನಾಯಕರಾಗಿ ಕಾಣಿಸಿಕೊಳ್ಳಲಾಗಿಲ್ಲ. ಇನ್ನು ಕರ್ನಾಟಕಕ್ಕೆ ಬಂದರೆ, ದೇವೇಗೌಡರ ಜನತಾದಳದಲ್ಲಿ ಅವರ ಮಕ್ಕಳಾದ ಕುಮಾರಸ್ವಾಮಿ ಮತ್ತು ರೇವಣ್ಣ ಅವರೇ ನಾಯಕರು. ಇವರುಗಳನ್ನು ಮೀರಿ ಬೇರಿನ್ನಾರು ನಾಯಕರಾಗಿ ಹೊರಹೊಮ್ಮದಂತೆ ನೋಡಿಕೊಳ್ಳಲಾಗುತ್ತಿದೆ. ಇನ್ನು ಮಹಾರಾಷ್ಟ್ರದಲ್ಲಿ ಶಿವಸೇನೆಯ ಬಾಳಾಠಾಕ್ರೆಯ ನಂತರ ಪಕ್ಷವನ್ನು ಎರಡು ಹೋಳು ಮಾಡಿ ಒಂದು ಭಾಗವನ್ನು ಅವರ ಮಗ ಉದವ್ ಠಾಕ್ರಯೂ, ಇನ್ನೊಂದು ಭಾಗವನ್ನು ಅವರ ಅಣ್ಣನ ಮಗ ರಾಜ್ ಠಾಕ್ರೆಯೂ ಹಂಚಿಕೊಂಡಿದ್ದಾರೆ. ಇನ್ನು ಅಲ್ಲೇ ಎನ್.ಸಿ.ಪಿ.ಯಲ್ಲಿ ಶರದ್‌ಪವಾರ್ ಒಬ್ಬರೇ ಇವತ್ತಿಗೂ ಪ್ರಶ್ನಾತೀತ ನಾಯಕರು. ಸದ್ಯಕ್ಕೆ ಅವರ ಜಾಗವನ್ನು ತುಂಬಲು ಅಜಿತ್ ಪವಾರ್ ಮತ್ತು ಸುಪ್ರಿಯಾ ಸುಳೆಯವರನ್ನು ನಾಯಕರುಗಳನ್ನಾಗಿ ಬಿಂಬಿಸಲಾಗುತ್ತಿದೆ.

ಇನ್ನು ತಮಿಳುನಾಡಲ್ಲಿ ಡಿ.ಎಂ.ಕೆ.ಯ ಕರುಣಾನಿದಿಯ ನಂತರ ಯಾರು ಎಂಬ ಪ್ರಶ್ನೆಗೆ ಅದರ ಕಾರ್ಯಕರ್ತರ ಬಳಿ ಯಾವುದೇ ಉತ್ತರವಿಲ್ಲ. ಯಾಕೆಂದರೆ ಈಗಾಗಲೇ ಕರುಣಾ ನಿದಿಯವರ ಮಕ್ಕಳ ನಡುವೆ ಅದಿಕಾರಕ್ಕಾಗಿ ಕಿತ್ತಾಟ ನಡೆದು ಒಬ್ಬ ಮಗನನ್ನು ಪಕ್ಷದಿಂದ ಹೊರಹಾಕಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾಬ್ಯಾನರ್ಜಿಯವರ ನಂತರ ಯಾರು ಎಂಬ ಪ್ರಶ್ನೆಯನ್ನೇ ಕೇಳಲಾಗದಂತಹ ಪರಿಸ್ಥಿತಿ ಅವರ ತೃಣಮೂಲ ಕಾಂಗ್ರೇಸ್ಸಿನಲ್ಲಿದೆ. 

ಈ ರೀತಿ ಇಂಡಿಯಾದಲ್ಲಿ ಸದ್ಯದಲ್ಲಿ ರಾಜಕಾರಣ ಮಾಡುತ್ತಿರುವ ಯಾವುದೇ ಪ್ರಾದೇಶಿಕ ಪಕ್ಷದಲ್ಲೂ ಅದರ ನಾಯಕನ ಹೊರತಾಗಿ ಇನ್ನಾವ ನಾಯಕನೂ ಕಣ್ಣಿಗೆ ಬೀಳುತ್ತಿಲ್ಲ. ಅಕಸ್ಮಾತ್ ಆ ನಾಯಕನಿಗೆ ಏನಾದರು ಆದರೆ ಅಂತಹ ಪಕ್ಷದಲ್ಲಿ ಶೂನ್ಯತೆ ಆವರಿಸುವುದು ಖಚಿತ. ಬೇರೆ ದಾರಿಯಿರದ ಜನತೆ ಆ ನಾಯಕನ ಕುಟುಂಬದವರನ್ನೇ ನಾಯಕರೆಂದು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆಗೆ ಒಳಗಾಗುತ್ತಾರೆ. ಸಂಸದೀಯ ಪ್ರಜಾಸತ್ತೆಯ ಮೂಲ ಆಸರೆಯಾದ ರಾಜಕೀಯ ಪಕ್ಷಗಳ ಇಂತಹ ಸ್ಥಿತಿ ಯಾವುದೇ ಆರೋಗ್ಯಕರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗುವುದಂತೂ ಸತ್ಯ.

ಇಂತಹ ಸ್ಥಿತಿಗೆ ಕಾರಣಗಳನ್ನು ಹುಡುಕುವುದು ಕಷ್ಟವೇನಲ್ಲ. ಸಾಮಾಜಿಕ ನ್ಯಾಯದ ಮಾತಿನಲ್ಲಿ ಒಗ್ಗೂಡುತ್ತ ಹೋದ ಕೆಲವು ಹಿಂದುಳಿದ ಆದರೆ ಪ್ರಬಲ ಜಾತಿಗಳು ತಮ್ಮ ಉಳಿವಿಗೆ ಮತ್ತು ಅಭಿವೃದ್ದಿಗೆ ತಮ್ಮ ಜಾತಿಯ ನಾಯಕ ಮಾತ್ರ ಹೋರಾಡಬಲ್ಲಿ ಎಂಬ ಭ್ರಮೆಯಲ್ಲಿ ಜನ ಮತ ಚಲಾಯಿಸುತ್ತಿರುವುದು. ಜೊತೆಗೆ ಜಾತಿಯ ವಿಷಬೀಜಗಳನ್ನು ಬಿತ್ತುವ ಜಾತಿಯ ನಾಯಕರುಗಳು.

ತಮ್ಮ ನಂತರ ಅಧಿಕಾರ ತಮ್ಮ ಕುಟುಂಬದಲ್ಲೇ ಇರಬೇಕೆಂದು ಬಯಸುವ ನಾಯಕರುಗಳು ಎರಡನೇ ಹಂತದ ನಾಯಕರನ್ನು ಬೆಳೆಸಲು ಪ್ರಯತ್ನ ಮಾಡದೇ ಇರುವುದು. ಅದೂ ಅಲ್ಲದೇ ಸಾವಿರಾರು ವರ್ಷಗಳ ಕಾಲ ರಾಜಸತ್ತೆಗಳಿಂದ ಆಳಿಸಿಕೊಂಡ ನಮ್ಮ ಜನತೆ ಕೌಟುಂಬಿಕ ರಾಜಕಾರಣದ ಗುಲಾಮಗಿರಿಗೆ ಒಗ್ಗಿ ಹೋಗಿರುವುದು ಸಹ ಒಂದು ಮುಖ್ಯ ಕಾರಣವಾಗಿದೆ. ಇದೆಲ್ಲದರ ಜೊತೆಗೆ ಕೇಂದ್ರದಲ್ಲಿ ಏನಾದರು ಸಮ್ಮಿಶ್ರ ಸರಕಾರಗಳು ರಚನೆಯಾದಲ್ಲಿ ತಾವು ಗೆಲ್ಲುವ ಸ್ಥಾನಗಳನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ರಾಜಕಾರಣ ಮಾಡುವ ಇರಾದೆಯನ್ನೂ ಇಂತಹ ಪ್ರಾದೇಶಿಕ ಪಕ್ಷಗಳು ಹೊಂದಿರುತ್ತವೆ.

ಒಟ್ಟಿನಲ್ಲಿ ಇಂಡಿಯಾದ ರಾಜಕಾರಣದಲ್ಲಿ ಸ್ಥಳಿಯರ ಆಶೋತ್ತರಗಳನ್ನು ಈಡೇರಿಸುವ ವೇದಿಕೆಗಳಾಗಬೇಕಿದ್ದ ಪ್ರಾದೇಶಿಕ ಪಕ್ಷಗಳು ತಮ್ಮ ಕೌಟುಂಬಿಕ ಆಶೋತ್ತರಗಳನ್ನು ಈಡೇರಿಸಿಕೊಳ್ಳುವ ಸಂಸ್ಥೆಗಳಾಗಿವತ್ತು ಬೆಳೆದು ನಿಂತಿವೆ. ಎರಡೂ ರಾಷ್ಟ್ರೀಯ ಪಕ್ಷಗಳ ಏಕಸ್ವಾಮ್ಯವನ್ನು ಮುರಿದು ಜನತೆಗೆ ರಾಷ್ಟ್ರ ರಾಜಕಾರಣದಲ್ಲಿ ಮೂರನೆಯ ಅವಕಾಶವೊಂದನ್ನು ದಯಪಾಲಿಸಬಹುದಾಗಿದ್ದ ನಮ್ಮ ಪ್ರಾದೇಶಿಕ ಪಕ್ಷಗಳು ಸಂಪೂರ್ಣವಾಗಿ ವಿಫಲವಾಗಿವೆ. ಈ ಮಾತುಗಳನ್ನೆಲ್ಲ ನಾನು ಯಾಕೆ ಹೇಳಬೇಕಾಯಿತೆಂದರೆ ನಾವು ಆವೇಶಕ್ಕೆ ಬಿದ್ದು ಪ್ರಾದೇಶಿಕ ಪಕ್ಷದ ಬಗ್ಗೆ ಮಾತಾಡುವ ಮುಂಚೆ ಪ್ರಾದೇಶಿಕ ಪಕ್ಷಗಳ ರಚನೆ, ಅವುಗಳ ಕಾರ್ಯವೈಖರಿಗಳನ್ನು ಅರ್ಥಮಾಡಿಕೊಂಡಿರುವುದು ಅಗತ್ಯವೆಂಬುದು ನನ್ನ ಬಾವನೆ.

1 comment:

  1. ಕನ್ನಡಿಗರು ವೈಚಾರಿಕವಾಗಿ ಪ್ರಬುದ್ಧತೆಯನ್ನು ಪಡೆದಿಲ್ಲ. ಕನ್ನಡಿಗರು ಧಾರ್ಮಿಕ ಮನೋಭಾವವನ್ನು ಹೆಚ್ಚಾಗಿ ಬೆಳೆಸಿಕೊಂಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆ ಬೆಳೆಯಲು ವೈಚಾರಿಕ ಮನೋಭಾವ ಅತ್ಯಗತ್ಯ. ಕರ್ನಾಟಕದಲ್ಲಿ ಧಾರ್ಮಿಕ ಮನೋಭಾವದ ಜನ ಹೆಚ್ಚಿರುವುದರಿಂದ ಇಲ್ಲಿ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿಯಂಥ ರಾಷ್ಟ್ರೀಯ ಪಕ್ಷ ಸುಲಭವಾಗಿ ಬೆಳೆದು ನಿಂತಿದೆ. ಜನ ಧರ್ಮದ/ದೇವರ ಹೆಸರಿನಲ್ಲಿ ಯೋಚನೆ ಮಾಡದೆ ಬೇಗನೆ ಕೆರಳುವುದು/ಒಂದಾಗುವುದರಿಂದ ಅದು ಒಂದು ಧಾರ್ಮಿಕ ವೋಟ್ ಬ್ಯಾಂಕ್ ಆಗಲು ಮತ್ತು ಆ ಮೂಲಕ ಅಧಿಕಾರಕ್ಕೆ ಬರಲು ಸುಲಭವಾಗುತ್ತದೆ. ಧರ್ಮದ ಹೆಸರಿನಲ್ಲಿ ಹೆಚ್ಚಿನ ಶ್ರಮವಿಲ್ಲದೆ ಅಧಿಕಾರಕ್ಕೆ ಬಂದವರಿಗೆ ಜನರ ಸಮಸ್ಯೆಗಳ ಬಗ್ಗೆ ಗಮನಹರಿಸುವ ಮನೋಭಾವ ಇರುವುದಿಲ್ಲ ಏಕೆಂದರೆ ಧರ್ಮ/ದೇವರ ಹೆಸರಿನಲ್ಲಿ ಜನರನ್ನು ಕೆರಳಿಸಿ/ಒಟ್ಟುಗೂಡಿಸಿ ಅಧಿಕಾರಕ್ಕೆ ಬರುವ ಅಡ್ಡದಾರಿ ಇರುವಾಗ ನೇರವಾದ ಜನರ ಸಮಸ್ಯೆಗಳನ್ನು ಎತ್ತಿಕೊಂಡು ಜನರನ್ನು ಬಹಳ ಕಷ್ಟಪಟ್ಟು ಒಂದುಗೂಡಿಸಿ ಅಧಿಕಾರಕ್ಕೆ ಬರುವ ದಾರಿ ಅವರಿಗೆ ಬೇಕಾಗಿಲ್ಲ. ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ ಕಟ್ಟಲು ಹಲವಾರು ಪ್ರಯತ್ನಿಸಿ ವಿಫಲವಾಗಿದ್ದಾರೆ. ಕನ್ನಡ ಜನ ಯೋಚನೆ ಮಾಡದೆ ಭಾವೋದ್ವೇಗಕ್ಕೆ ಒಳಗಾಗುವ ಜನ. ಒಮ್ಮೆ ಭಾವೋದ್ವೇಗಕ್ಕೆ ಒಳಗಾಗಿ ಗಲಾಟೆ ಮಾಡಿ ಸುಮ್ಮನಾಗುವ ಜನ. ಜನರ ಭಾವೋದ್ವೇಗ ಪ್ರಾದೇಶಿಕ ಪಕ್ಷವನ್ನು ಕಟ್ಟಿ ಅಧಿಕಾರಕ್ಕೆ ತರುವ ರಚನಾತ್ಮಕ (constructive) ಕಾರ್ಯಕ್ಕೆ ಬಳಕೆಯಾಗಿಲ್ಲ, ಆಗುವ ಸೂಚನೆಗಳೂ ಇಲ್ಲ. ಕರ್ನಾಟಕದ ಮಾಧ್ಯಮಗಳೂ (ಮಾಧ್ಯಮ ಎಂದರೆ ಮುಖ್ಯವಾಗಿ ಟಿವಿ ಮಾಧ್ಯಮ ಎಂದು ಅರ್ಥ) ಕೂಡ ಜನರನ್ನು ರಚನಾತ್ಮಕ ಕೆಲಸಗಳಿಗೆ ಪ್ರೇರೇಪಿಸುತ್ತಲೂ ಇಲ್ಲ, ಕೇವಲ ಜನರನ್ನು ಮಾರಕ (destructive) ಕೆಲಸಗಳಿಗೆ ಪ್ರೇರೇಪಿಸುತ್ತವೆ ಉದಾಹರಣೆಗೆ ದೊಂಬಿ, ಗಲಭೆ ಇತ್ಯಾದಿ ನಡೆದು ರಾಜ್ಯಕ್ಕೆ ಹಾಗೂ ದೇಶಕ್ಕೆ ಅಪಾರ ನಷ್ಟ ಆಯಿತು. ರಚನಾತ್ಮಕ ಕೆಲಸಗಳು ಎಂದರೆ ಬಲವಾದ ಎರಡು ಪ್ರಾದೇಶಿಕ ಪಕ್ಷಗಳನ್ನು ರಾಜ್ಯದಲ್ಲಿ ಕಟ್ಟುವುದು ಅಥವಾ ನೀರಿಂಗಿಸುವುದು ಮೊದಲಾದ ರಚನಾತ್ಮಕ ಕೆಲಸಗಳಿಗೆ ಜನರ ಮಾರಕ ಶಕ್ತಿಯನ್ನು ತಿರುಗಿಸುವುದು. ಮಂಡ್ಯದಲ್ಲಿ ವಾರ್ಷಿಕ ೭೦೦ ಮಿಮೀ ಮಳೆ ಆಗುತ್ತದೆ. ಇದನ್ನು ಇಂಗಿಸಿದರೂ ಜನರ ಕುಡಿಯುವ ನೀರು ಹಾಗೂ ವ್ಯವಸ್ಥಿತ ಬೇಸಾಯಕ್ಕೂ ಇದು ಸಾಕು. ೪೦೦ರಿಂದ ೫೦೦ ಮಿಮೀ ಮಳೆಯಲ್ಲಿ ಉತ್ತಮ ಬೇಸಾಯ ಮಾಡುತ್ತಿರುವ ಮಹಾರಾಷ್ಟ್ರದ ಹಿವ್ರೆ ಬಜಾರ್, ರಾಲೇಗಾವ್ ಸಿದ್ಧಿ ಗ್ರಾಮಗಳು ಮಾದರಿಯಾಗಿ ದೇಶದ ಮುಂದೆ ಇವೆ. ಅತ್ಯಂತ ಕಡಿಮೆ ನೀರಿನಲ್ಲಿ ಕೃಷಿ ಮಾಡುತ್ತಿರುವ ಇಸ್ರೇಲ್ ದೇಶದ ಉದಾಹರಣೆ ಇದೆ. ಇಂಥ ರಚನಾತ್ಮಕ ಉದಾಹರಣೆಗಳು ಕೂಗುಮಾರಿ ಮಾಧ್ಯಮಗಳಿಗೆ ಬೇಡ, ಅವುಗಳಿಗೆ ಜನರನ್ನು ಉದ್ರೇಕಗೊಳಿಸುವ ತನ್ಮೂಲಕ್ ಟಿಆರ್ಪಿ ಹೆಚ್ಚಿಸುವ ಸುದ್ದಿಗಳೇ ಬೇಕು.

    ನಮ್ಮ ದೇಶದಲ್ಲಿ ನಿಜವಾದ ಪ್ರಜಾಪ್ರಭುತ್ವ ವ್ಯವಸ್ಥೆ ಅಸ್ತಿತ್ವದಲ್ಲಿ ಇಲ್ಲ, ಇರುವುದು ಹುಸಿಪ್ರಜಾಪ್ರಭುತ್ವ (pseudodemocracy) ವ್ಯವಸ್ಥೆ ಮಾತ್ರ. ನಿಜವಾದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳು ಜನರ ಮನವಿ, ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಬರುವ ವರದಿಗಳನ್ನು ನೋಡಿಕೊಂಡು ಸೂಕ್ತ ಶಾಸನ ರಚಿಸುವ ಕೆಲಸ, ಆಡಳಿತದಲ್ಲಿ ಸುಧಾರಣೆ, ಭ್ರಷ್ಟಾಚಾರ ನಿಯಂತ್ರಿಸುವ ಕ್ರಮ ಕೈಗೊಳ್ಳುವ ಪದ್ಧತಿ ಇರುತ್ತದೆ. ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇವು ಯಾವುದು ಕೂಡ ಕೆಲಸ ಮಾಡುತ್ತಿಲ್ಲ. ಜನ ದೊಂಬಿ ಎದ್ದು, ಬೆಂಕಿ ಹಚ್ಚಿ ಗದ್ದಲ ಎಬ್ಬಿಸಿದಾಗ ಮಾತ್ರ ಆಡಳಿತ ವ್ಯವಸ್ಥೆ ಸ್ವಲ್ಪ ಗಮನ ನೀಡುತ್ತದೆ, ಇಲ್ಲದಿದ್ದರೆ ಇಲ್ಲ ಎಂಬ ಪರಿಸ್ಥಿತಿ.

    ಕರ್ನಾಟಕದಿಂದ ಬಿಜಿಪಿ ಪಕ್ಷದ ೧೭ ಸಂಸದರು ಆಯ್ಕೆ ಮಾಡಿ ಕಳುಹಿಸಿದರೂ ಪ್ರಧಾನಿ ನಮ್ಮ ಸಂಸದರನ್ನು ಕರೆದು ಏನು ನಿಮ್ಮ ಕಾವೇರಿ/ಮಹದಾಯಿ ಸಮಸ್ಯೆ ಎಂದು ಕರೆದು ಕೇಳುವ ಸೌಜನ್ಯ ಕೂಡ ತೋರಿಸಲಿಲ್ಲ. ಇದು ಬಿಜೆಪಿಯನ್ನು ಆರಿಸಿದ ಜನರಿಗೆ ಪ್ರಧಾನಿ ಕೊಟ್ಟ ಉಡುಗೊರೆ. ಜನ ವೈಚಾರಿಕವಾಗಿ ಬೆಳೆಯದೆ ಪ್ರಜಾಪ್ರಭುತ್ವ ವ್ಯವಸ್ಥೆ ಬೆಳೆಯಲಾರದು, ಅದು ಊಳಿಗಮಾನ್ಯ ವ್ಯವಸ್ಥೆಯ ಪಳೆಯುಳಿಕೆಯಂತೆಯೇ ಇರುತ್ತದೆ. ನಮ್ಮ ದೇಶದಲ್ಲಿ ನಿಜವಾದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅನುಗುಣವಾದ ರಾಜಕೀಯ ಪಕ್ಷಗಳು ಇಂದಿನವರೆಗೂ ರೂಪುಗೊಂಡಿಲ್ಲ. ಇರುವ ಎಲ್ಲ ಪಕ್ಷಗಳೂ ವಂಶಪಾರಂಪರ್ಯ/ಊಳಿಗಮಾನ್ಯ ವ್ಯವಸ್ಥೆಯ ಪೋಷಕ ಪಕ್ಷಗಳೇ ಆಗಿವೆ. ಜನ ವೈಚಾರಿಕವಾಗಿ ಬೆಳೆಯದೆ ಇದು ಬದಲಾಗುವ ಸಾಧ್ಯತೆ ಇಲ್ಲ.

    ReplyDelete