Sep 12, 2016

ನವಜೋತ್ ಸಿಂಗ್ ಸಿದ್ದು: ಬಾಜಪದ ಪಾಲಿನ ಮತ್ತೊಬ್ಬ ಯಡಿಯೂರಪ್ಪಆಗಲಿದ್ದಾರೆಯೇ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
12/09/2016
ನವಜೋತ್ ಸಿಂಗ್ ಸಿದ್ದು ಪಂಜಾಬಿನ ಬಾಜಪದ ಪಾಲಿಗೆ ಮತ್ತೊಬ್ಬ ಯಡಿಯೂರಪ್ಪ ಆಗಲಿದ್ದಾರೆಯೇ?

ಈಗೊಂದು ಸಂಶಯ, ಪಂಜಾಬ್ ರಾಜ್ಯದ ರಾಜಕೀಯ ವಲಯಗಳಲ್ಲಿ, ಬಿರುಸಿನ ಚರ್ಚೆಗಳಲ್ಲಿ ವ್ಯಕ್ತವಾಗುತ್ತಿದೆ. 2013ರ ಕರ್ನಾಟಕದ ವಿದಾನಸಭಾ ಚುನಾವಣೆಗಳಿಗೆ ಮುಂಚೆ ಯಡಿಯೂರಪ್ಪನವರು ಬಾಜಪ ತೊರೆದು ಕೆಜೆಪಿ ಕಟ್ಟಿ ಚುನಾವಣೆಗಳಲ್ಲಿ ಬಾಗವಹಿಸಿದ ಕಾರಣ ಬಾಜಪದ ಸಾಂಪ್ರದಾಯಿಕ ಮತಗಳು ಚದುರಿ ಕಾಂಗ್ರೆಸ್ ಅಧಿಕಾರಕ್ಕೆ ಏರುವಂತಾಗಿದ್ದು ನಿಮಗೆ ನೆನಪಿರಬಹುದು. ಸದ್ಯಕ್ಕೆ ಪಂಜಾಬ್‍ನಲ್ಲಿಯೂ ಅಂತಹುದೇ ಒಂದು ಸನ್ನಿವೇಶ ನಿರ್ಮಾಣವಾಗುತ್ತಿರುವಂತಿದೆ. ಕೆಲ ತಿಂಗಳ ಹಿಂದೆ ತನ್ನ ರಾಜ್ಯಸಭಾ ಸ್ಥಾನಕ್ಕೆ ರಾಜಿನಾಮೆ ನೀಡಿ ಹೊರಬಂದ ಸಿದ್ದುರವರು ಪಂಜಾಬ್ ಮಟ್ಟಿಗೆ ಬಾಜಪದ ತಾರಾ ಮೆರುಗು ಹೊಂದಿದ ನಾಯಕರಾಗಿದ್ದರು. ಸತತವಾಗಿ ಅಮೃತಸರದಿಂದ ಲೋಕಸಭೆಗೆ ಆಯ್ಕೆಯಾಗುತ್ತ ಬಂದಿದ್ದ ಅವರನ್ನು 2014ರಲ್ಲಿ ಕಡೆಗಣಿಸಿ ಅರುಣ್ ಜೇಟ್ಲಿಯವರಿಗೆ ಟಿಕೇಟು ನೀಡಿದ್ದರ ಪರಿಣಾಮವಾಗಿ ಸಿದ್ದು ಚುನಾವಣಾ ಪ್ರಚಾರದಿಂದ ದೂರ ಉಳಿದು ಜೇಟ್ಲಿಯವರ ಸೋಲಿಗೆ ಪರೋಕ್ಷವಾಗಿ ಕಾರಣರಾಗಿದ್ದರು. ತದನಂತರ ಸಿದ್ದುರವರನ್ನು ಸಮಾದಾನ ಪಡಿಸಲು ಅವರನ್ನು ರಾಜ್ಯಸಭೆಗೆ ಆರಿಸಲಾಯಿತಾದರು, ಪ್ರಂಜಾಬಿನ ರಾಜ್ಯ ರಾಜಕೀಯದಲ್ಲಿ ಅಕಾಲಿದಳಕ್ಕೆ ಕಿರಿಯ ಪಾಲುದಾರ ಪಕ್ಷವಾಗಿರುವ ಬಾಜಪ ಸಿದ್ದುರವರಿಗೆ ಕೊಡಬೇಕಾದಷ್ಟು ಪ್ರಾಧಾನ್ಯತೆ ಕೊಡದೆ ಅವರನ್ನು ನಿರ್ಲಕ್ಷಿಸತೊಡಗಿತ್ತು. ಬಾಜಪದ ರಾಜ್ಯಘಟಕದ ಯಾವೊಂದು ಚಟುವಟಿಕೆಗಳಿಗೂ ಅವರನ್ನು ಬಳಸಿಕೊಳ್ಳದೆ ಅವರನ್ನು ಕೇವಲ ತಾರಾ ಪ್ರಚಾರಕರನ್ನಾಗಿ ಬಳಸಿಕೊಳ್ಳುವ ಬಾಜಪದ ನಡೆಯಿಂದ ಬೇಸರಗೊಂಡ ಸಿದ್ದು ಪಕ್ಷ ತ್ಯಜಿಸಿದಾಗ, ಅವರು ಅರವಿಂದ್ ಕೇಜ್ರೀವಾಲಾರ ಆಮ್ ಆದ್ಮಿ ಪಕ್ಷವನ್ನು ಸೇರುತ್ತಾರೆಂದು ಬಾವಿಸಲಾಗಿತ್ತು. ಅದಕ್ಕೆ ಪೂರಕವಾಗಿ ಸ್ವತ: ಕೇಜ್ರೀವಾಲರೇ ಸಿದ್ದುರವರನ್ನು ಹೊಗಳುತ್ತ ತಮ್ಮ ಪಕ್ಷಕ್ಕೆ ಅವರನ್ನು ಸ್ವಾಗತಿಸುವುದಾಗಿ ಹೇಳಿಕೊಂಡಿದ್ದರು. ಆದರೆ ಈ ಬಗ್ಗೆ ಸಾರ್ವಜನಿಕವಾಗಿ ಯಾವ ಪ್ರತಿಕ್ರಿಯೆಗಳನ್ನೂ ನೀಡದ ಸಿದ್ದುರವರು ಮೌನಕ್ಕೆ ಶರಣಾಗಿಬಿಟ್ಟಿದ್ದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಪಂಜಾಬಿನ ನಾಲ್ಕು ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಆಮ್‍ ಆದ್ಮಿಗೆ ಸಿದ್ದು ತಮ್ಮ ಪಕ್ಷ ಸೇರಿದರೆ ಆಗಬಹುದಾದ ಲಾಭದ ಬಗ್ಗೆ ಅರಿವಿದ್ದರೂ ಕೇಜ್ರೀವಾಲಾರ ಜಿಗುಟುತನ ಮತ್ತು ಸರ್ವಾಧಿಕಾರಿ ಪ್ರವೃತ್ತಿಯಿಂದಾಗಿ ಅವರ ಮತ್ತು ಸಿದ್ದು ನಡುವಿನ ಮಾತುಕತೆ ಫಲಪ್ರದವಾಗಲಿಲ್ಲ. ಈ ನಡುವೆ ಸಿದ್ದು ಮಾತಾಡುತ್ತ, ಕೇಜ್ರೀವಾಲರು ಸರ್ವಾಧಿಕಾರಿಯಂತೆ ವರ್ತಿಸುತ್ತಾರೆ, ಅವರಿಗೆ ಹೌದಪ್ಪಗಳು ಮಾತ್ರ ಬೇಕೇ ಹೊರತು, ಸ್ವತಂತ್ರವಾಗಿ ಚಿಂತಿಸುವವರಲ್ಲ. ಎಂಬರ್ಥದ ಹೇಳಿಕೆ ನೀಡಿ, ಈ ಹಿಂದಿನಂತೆ ಯಾರೂ ನನ್ನನ್ನು ಪಕ್ಷವೊಂದರ ತಾರಾ ವರ್ಚಸ್ಸು ವೃದ್ದಿಸಲು ಮಾತ್ರ ಬಳಸಿಕೊಂಡಂತೆ ಬಳಸಿಕೊಳ್ಳಲಾಗುವುದಿಲ್ಲವೆಂದು ಹೇಳಿದರು. ಜೊತೆಗೆ ತನ್ನ ಬದಲಿಗೆ ತನ್ನ ಪತ್ನಿಯನ್ನು ಚುನಾವಣೆಯಲ್ಲಿ ಸ್ಪರ್ದಿಸಲೆಂದು ಆಮ್‍ ಆದ್ಮಿ ಬಯಸುತ್ತಿದೆಯೆಂದೂ ಹೇಳಿದರು. ಅಲ್ಲಿಗೆ ಸಿದ್ದು ಆಮ್‍ ಆದ್ಮಿ ಸೇರುವ ಮಾತು ಕೊನೆಗೊಂಡಿತು. ಈ ನಡುವೆ ಮರಳಿ ಸಿದ್ದು ಬಾಜಪಕ್ಕೆ ಹೋಗಬಹುದೆಂಬ ಗುಲ್ಲುಗಳೆದ್ದರೂ ಬಾಜಪ ಆ ಬಗ್ಗೆ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಇದೆಲ್ಲದರ ಪರಿಣಾಮವಾಗಿ ನವಜೋತ್ ಸಿಂಗ್ ಸಿದ್ದು ಹೊಸ ಪಕ್ಷವೊಂದನ್ನು ಸ್ಥಾಪಿಸಿದ್ದಾರೆ. ಆದರವರು ಅದನ್ನು ಒಂದು ವೇದಿಕೆಯೆಂದು ಕರೆದು ಆವಾಜ್-ಎ- ಪಂಜಾಬ್ (ಪಂಜಾಬಿನ ದ್ವನಿ) ಎಂದು ಹೆಸರಿಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ನೋಡಿದರೆ ಚುನಾವಣೆಗಳಲ್ಲಿ ಸ್ಪರ್ದಿಸಿದರೆ ಸಿದ್ದುರವರ ಹೊಸಪಕ್ಷ ಬಾಜಪದ ಮತಗಳನ್ನೇ ಕಸಿದುಕೊಳ್ಳುವುದು ಗ್ಯಾರಂಟಿ. ಯಾಕೆಂದರೆ ಕಳೆದ ಬಾರಿ  ಕಾಂಗ್ರೆಸ್ ಮತ್ತು ಬಾಜಪ-ಅಕಾಲಿದಳದ ಮೈತ್ರಿಕೂಟಗಳೆರಡೂ ಶೇಕಡಾ 41ರಷ್ಟು ಮತ ಪಡೆದಿದ್ದು ಕೂದಲೆಳೆಯ ಅಂತರದಲ್ಲಿ ಕಾಂಗ್ರೆಸ್ ಸೋಲನ್ನಪ್ಪಿತ್ತು. ಹಾಗಾಗಿ ಕಳೆದ ಬಾರಿ ಬಾಜಪ ಪಡೆದ ಶೇಕಡಾ 7 ರಷ್ಟು ಮತಗಳಲ್ಲಿ ಸಿದ್ದುರವರು ಶೇಕಡಾ 1 ರಷ್ಟನ್ನು ಪಡೆದರೂ ಅದು ಕಾಂಗ್ರೆಸ್ ಗೆ ಲಾಭವಾಗಬಹುದೆಂದು ಊಹಿಸಲಾಗಿದೆ. ಇಂತಹದೇನಾದರು ನಡೆದುಬಿಟ್ಟರೆ ಪಂಜಾಬಿನ ಬಾಜಪದ ಪಾಲಿಗೆ ಸಿದ್ದುರವರು ಮತ್ತೊಬ್ಬ ಯಡಿಯೂರಪ್ಪನವರಾಗಿಬಿಡುವುದರಲ್ಲಿ ಸಂದೇಹವಿಲ್ಲ. ಜಾತಿ ಹಾಗು ಹೋರಾಟಗಳ ವಿಚಾರದಲ್ಲಿ ಸಿದ್ದುರವರು ಯಡಿಯೂರಪ್ಪನವರ ಎತ್ತರಕ್ಕೆ ಏರಲಾರರಾದರು ಬಾಜಪದ ಮತಗಳಿಕೆಗೆ ಕಿಂಚಿತ್ತಾದರು ತಡೆಯೊಡ್ಡುವ ಸಾದ್ಯತೆಯನ್ನಂತು ತಳ್ಳಿ ಹಾಕಲಾಗದು. 

ಹೀಗಾಗಿ ಇವತ್ತು ಸಿದ್ದುರವರ ಹೊಸಪಕ್ಷದ ಮುಂದಿನ ನಡೆಗಳನ್ನು ರಾಜಕೀಯ ಪಕ್ಷಗಳು ಮತ್ತು ರಾಜಕೀಯ ವಿಶ್ಲೇಷಕರು ಕುತೂಹಲದಿಂದ ನೋಡುತ್ತಿದ್ದಾರೆ. ಯಾಕೆಂದರೆ ಹೊಸ ಪಕ್ಷವೊಂದನ್ನು ಕಟ್ಟಿರುವ ಸಿದ್ದುರವರ ಮುಂದೆ ಹಲವು ಆಯ್ಕೆಗಳಿವೆ. ಮೊದಲನೆಯದು ಸ್ವತಂತ್ರವಾಗಿ ಚುನಾವಣೆಗಳನ್ನು ಎದುರಿಸುವುದು, ಎರಡನೆಯದು, ಯಾವುದಾದರು ಪಕ್ಷದೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವುದು. ಬೇರೆಲ್ಲ ವಿಚಾರಗಳ ಬಗ್ಗೆ ಸುಲಲಿತವಾಗಿ ಗಂಟೆಗಟ್ಟಲೆ ಮಾತಾಡುವ ಸಿದ್ದು ತನ್ನ ಮತ್ತು ತನ್ನ ನೂತನ ಪಕ್ಷದ ರಾಜಕೀಯ ನಡೆಗಳ ಬಗ್ಗೆ ಮಾತ್ರ ಕಡಿಮೆ ಮಾತಾಡುವುದು ಅಚ್ಚರಿಯ ವಿಷಯವಾಗಿದೆ. ಬಹುಶ: ಅದೂ ಕೂಡ ಅವರ ರಾಜಕೀಯ ತಂತ್ರಗಾರಿಕೆಯ ಒಂದು ಭಾಗವಾಗಿರಬಹುದೆನಿಸುತ್ತದೆ.

ಶ್ರೀ ನವಜೋತ್ ಸಿಂಗ್ ಸಿದ್ದು ಹೊಸ ಪಕ್ಷವನ್ನು ಕಟ್ಟಿರುವುದು ಬಾಜಪ ಅಕಾಲಿದಳ,  ಕಾಂಗ್ರೆಸ್ ಮತ್ತು ಆಮ್ ಆದ್ಮಿ ಈ ಮೂರೂ ಪಕ್ಷಗಳಿಗೂ ಮೂರು ರೀತಿಯ ಪರಿಣಾಮಗಳನ್ನು ಬೀರಬಲ್ಲುದಾಗಿದೆ.

ಮೊದಲಿಗೆ ನೋಡುವುದಾದರೆ ಬಾಜಪ, ಅಕಾಲಿದಳದ ಮೈತ್ರಿಕೂಟಕ್ಕೆ ಇದೊಂದು ರೀತಿಯಲ್ಲಿ ಅನುಕೂಲಕರವೂ ಆಗಬಹುದು. ಯಾಕೆಂದರೆ ಈಗಾಗಲೇ ತೀವ್ರವಾದ ಆಢಳಿತ ವಿರೋಧಿ ಅಲೆಯನ್ನು ಎದುರಿಸುತ್ತಿರುವ ಈ ಮೈತ್ರಿಕೂಟದ ವಿರೋಧಿ ಮತಗಳು ಉಳಿದ ಮೂರೂ ಪಕ್ಷಗಳಲ್ಲಿ ಹರಿದು ಹಂಚಿಹೋಗುವುದರಿಂದ ತನ್ನ ಅಧಿಕಾರದ ಉಳಿವಿಗೆ ನೆರವಾಗಬಲ್ಲದು. ಇದಕ್ಕೆ ಉದಾಹರಣೆ ನೀಡುವುದಾದರೆ 2012ರ ಚುನಾವಣೆಯಲ್ಲಿಯೂ ಮೈತ್ರಿಕೂಟಕ್ಕೆ ಆಡಳಿತ ವಿರೋಧಿ ಅಲೆಯಿದ್ದು ಕಾಂಗ್ರೇಸ್ ಸುಲಭವಾಗಿ ಗೆಲ್ಲಬಲ್ಲ ವಾತಾವರಣವಿತ್ತು. ಆದರೆ ಮನಪ್ರೀತ್ ಬಾದಲ್ ಅವರ ಸಾಂಜಾ ಮೋರ್ಚಾ ಚುನಾವಣೆಗಳಲ್ಲಿ ಬಾಗವಹಿಸಿದ್ದು ಶೇಕಡಾ 4ರಷ್ಟು ಮತಗಳನ್ನು ಪಡೆದು ಶೂನ್ಯ ಸಂಪಾದನೆ ಮಾಡಿತ್ತು. ಆದರೆ ರಾಜಕೀಯ ವಿಶ್ಲೇಷಕರ ಪ್ರಕಾರ ಅದು ಪಡೆದ ಶೇಕಡಾ 4 ರಷ್ಟು ಮತಗಳು ಆಡಳಿತ ವಿರೋಧಿ ಮತಗಳಾಗಿದ್ದು ಕಾಂಗ್ರೇಸ್ ಸೋಲನ್ನಪ್ಪಬೇಕಾಯಿತು.. ಹೀಗಾಗಿ ಕಾಂಗ್ರೇಸ್ ಮತ್ತು ಆಮ್ ಆದ್ಮಿ ಪಕ್ಷಗಳು ಪಡೆಯುವ ಆಡಳಿತ ವಿರೋಧಿ ಮತಗಳಲ್ಲಿ ಒಂದಷ್ಟನ್ನು ಸಿದ್ದುರವರ ಪಕ್ಷ ಪಡೆದರೂ ಅದು ಕಾಂಗ್ರೇಸ್ಸಿಗೆ ಆಗುವ ನಷ್ಟವಾಗಿದ್ದು, ಮೈತ್ರಿಕೂಟಕ್ಕೆ ಅಧಿಕಾರ ಉಳಿಸಿಕೊಳ್ಳುವಲ್ಲಿ ಲಾಭವಾಗಬಹುದಾಗಿದೆ. ಆದ್ದರಿಂದ ಸಿದ್ದುರವರು ಪಡೆಯತುವ ಅಷ್ಟೂ ಮತಗಳು ಬಾಜಪಕ್ಕೆ ಅನುಕೂಲವನ್ನುಂಟುಮಾಡಬಹುದಾಗಿದೆ.

ಇನ್ನು ಕಾಂಗ್ರೆಸ್ಸಿಗೂ ಅಷ್ಟೆ. ಮೈತ್ರಿಕೂಟದ ವಿರೋಧಿ ಮತಗಳು ಚದುರಿಹೋಗದಂತೆ ನೋಡಿಕೊಳ್ಳುವ ಅನಿವಾರ್ಯತೆಯಿದ್ದು, ಈಗಾಗಲೇ ಆಮ್‍ಆದ್ಮಿ ಪಕ್ಷ ತನ್ನ ಮತಗಳ ಬುಟ್ಟಿಗೆ ಕೈಹಾಕಿದ್ದು, ಸಿದ್ದುರವರನ್ನು ಸಹ ಅದು ತಡೆಯಬೇಕಾದ ಕಷ್ಟಕ್ಕೆ ಸಿಲುಕಿದೆ. ಆಡಳಿತ ವಿರೋಧಿ ಮತಗಳು ಹಂಚಿಹೋಗದಂತೆ ನೋಡಿಕೊಳ್ಳಲು ಕಾಂಗ್ರೆಸ್ ಈಗ ಹೊಸ ತಂತ್ರವೊಂದನ್ನು ರೂಪಿಸಲೇ ಬೇಕಾದ ಅನಿವಾರ್ಯತೆಯಿದೆ. 

ಇನ್ನು ಸಿದ್ದುರವರ ಹೊಸ ಪಕ್ಷದಿಂದ ಆಮ್‍ಆದ್ಮಿ ಸಹ ಸಾಕಷ್ಟು ನಷ್ಟ ಅನುಭವಿಸಬೇಕಾಗಿದೆ. ಯಾಕೆಂದರೆ ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ಪಂಜಾಬಿನಾದ್ಯಂತ ರಾಜ್ಯ ಹಾಗು ಕೇಂದ್ರ ಸರಕಾರಗಳ ವಿರುದ್ದದ ಆಡಳಿತ ವಿರೋಧಿ ಅಲೆಯಿದ್ದು ಆಮ್‍ಆದ್ಮಿ ಅದರ ಲಾಭ ಪಡೆದು ನಾಲ್ಕು ಸ್ಥಾನಗಳನ್ನು ಗೆದ್ದು ಕೊಂಡಿತ್ತು. ನಂತರದಲ್ಲಿ ಅದು ಪಕ್ಷವನ್ನು ಪಂಜಾಬಿನಲ್ಲಿ ಬಲಪಡಿಸುತ್ತ ಬಂದಿತ್ತು. ಶ್ರೀ ಚೋಟೇಪುರ್ ಅವರು ಆಮ್ ಆದ್ಮಿಯ ರಾಜ್ಯಸಂಚಾಲಕರಾಗಿ ತಳಮಟ್ಟದಿಂದ ಪಕ್ಷದ ಸಂಘಟನೆಗೆ ಒತ್ತು ಕೊಟ್ಟು ಯಶಸ್ವಿಯಾಗಿದ್ದರು. ಆದರೆ ಇತ್ತೀಚೆಗೆ ನಡೆದ ಕುಟುಕು ಕಾರ್ಯಾಚರಣೆಯಲ್ಲಿ ಭ್ರಷ್ಟಾಚಾರ ಆಪಾದನೆಗೆ ಸಿಲುಕಿದ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಇನ್ನು ಕಳೆದ ಬಾರಿ ಪಕ್ಷದ ವತಿಯಿಂದ ಆಯ್ಕೆಯಾಗಿದ್ದ ನಾಲ್ಕು ಜನ ಸಂಸದರಲ್ಲಿ ಇಬ್ಬರನ್ನು ವಿವಿದ ಕಾರಣಗಳಿಂದಾಗಿ ಪಕ್ಷದಿಂದ ಉಚ್ಚಾಟಿಸಲಾಗಿದೆ. ಹೀಗಾಗಿ ಪಂಜಾಬಿನ ಮಟ್ಟಿಗೆ ಆಮ್‍ ಆದ್ಮಿ ಪಕ್ಷಕ್ಕೆ ಸಮರ್ಥ ನಾಯಕರೇ ಇಲ್ಲದಂತಾಗಿದೆ. ಪಂಜಾಬಿನ ಮಟ್ಟಿಗೆ ಪಕ್ಷವನ್ನು ಮುನ್ನಡೆಸಬಲ್ಲ ಜನ ನಾಯಕನೊಬ್ಬನ ಕೊರತೆಯಿದ್ದು, ಸಿದ್ದುರವರು ಪಕ್ಷಕ್ಕೆ ಬಂದಿದ್ದರೆ ಖಂಡಿತಾ ಆಮ್ ಆದ್ಮಿಯ ಪ್ರಭಾವವೇ ಬೇರೆ ರೀತಿ ಇರುತ್ತಿತ್ತು. ಸಮರ್ಥ ಕಾರ್ಯಕರ್ತರ ಪಡೆಗೆ ಸಿದ್ದುರಂತವರು ದಂಡನಾಯಕರಾಗಿದ್ದಿದ್ದರೆ ಆ ಪಕ್ಷವನ್ನು ತಡೆಯುವುದು ಉಳಿದ ಪಕ್ಷಗಳಿಗೆ ಕಷ್ಟವಾಗುತ್ತಿತ್ತು. ಆದರೆ ತಮ್ಮ ಸರ್ವಾಧಿಕಾರಿ ವರ್ತನೆಯಿಂದ ಹಾಗು ಅನಿಶ್ಚಿತ ನಿರ್ದಾರಗಳಿಂದಾಗಿ ಕೇಜ್ರೀವಾಲರು ಅಂತಹದೊಂದು ಅವಕಾಶವನ್ನು ಹಾಳು ಮಾಡಿಕೊಂಡಿದ್ದಾರೆ. ಹೀಗಾಗಿ ಆಮ್‍ ಆದ್ಮಿ ಪಕ್ಷವೂ ಕೂಡ ಆಡಳಿತವಿರೋಧಿ ಅಲೆಯ ಒಂದಷ್ಟು ಮತಗಳನ್ನು ಪಡೆದು ಮೈತ್ರಿಕೂಟಕ್ಕೆ ಅನುಕೂಲಮಾಡಿಕೊಡಬಹುದೆಂಬ ಅನುಮಾನ ಕಾಡುತ್ತಿದೆ.

ಸತತವಾಗಿ ಎರಡು ಅವಧಿಯಲ್ಲಿ ಅಧಿಕಾರ ನಡೆಸುತ್ತ ಬಂದಿರುವ ಬಾಜಪ ಮತ್ತು ಅಕಾಲಿದಳಕ್ಕೆ ವಿರೋಧಪಕ್ಷಗಳ ಇಂತಹ ಹೆಜ್ಜೆಗಳು ಅನುಕೂಲಕರವಾಗಿ ಪರಿಣಮಿಸುತ್ತಿದ್ದು, ಕಾಂಗ್ರೇಸ್ ಇಂತಹ ಸನ್ನಿವೇಶದಲ್ಲಿ ಚುನಾವಣೆಯನ್ನು ಯಾವ ತಂತ್ರಗಾರಿಕೆಗಳಿಮದ ಎದುರಿಸುತ್ತದೆಯೆಂಬುದನ್ನು ಕಾದು ನೋಡಬೇಕಿದೆ.

ಒಟ್ಟಿನಲ್ಲಿ ಕ್ರಿಕೇಟ್ ಪಂದ್ಯಗಳಲ್ಲಿ ಆಡುವಾಗ ಕ್ಲಿಷ್ಟ ಪರಿಸ್ಥಿತಿಯಲ್ಲಿ ಸಿಕ್ಸರ್ ಸಿಡಿಸಿ ಪಂದ್ಯದ ಗತಿಯನ್ನೆ ಬದಲಾಯಿಸುತ್ತಿದ್ದ ಸಿದ್ದುರವರೀಗ ತಮ್ಮ ಆವಾಜ್-ಎ- ಪಂಜಾಬ್ ಮೂಲಕ ಸಿಕ್ಸರ್ ಎತ್ತುತ್ತಾರೋ ಇಲ್ಲ ಶೂನ್ಯಕ್ಕೆ ಔಟಾಗುತ್ತಾರೋ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

No comments:

Post a Comment